ಕುತುಬ್ ಮಿನಾರ್ ಸಮುಚ್ಚಯ: ಭಾರತದ ಇತಿಹಾಸದ ಅದ್ಭುತ ಸ್ಮಾರಕ
ದಿಲ್ಲಿ: ಭಾರತದ ರಾಜಧಾನಿ ದಿಲ್ಲಿಯ ಮೆಹ್ರೋಲಿ ಪ್ರದೇಶದಲ್ಲಿ 800 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಕುತುಬ್ ಮಿನಾರ್, ಖುವ್ವತ್ ಉಲ್ ಇಸ್ಲಾಮ್ ಮಸೀದಿ, ಗುಪ್ತರ ಕಾಲದ ಲೋಹದ ಸ್ತಂಭ, ಅಪೂರ್ಣವಾಗಿರುವ ಅಲಾಯಿ ಮಿನಾರ್ ಒಂದೇ ಸಮುಚ್ಚಯದಲ್ಲಿದ್ದು, ನಮ್ಮ ದೇಶದ ಇತಿಹಾಸದ ಶೌರ್ಯ, ಕಲಾ ಮತ್ತು ವಾಸ್ತುಶಿಲ್ಪದ ಸಂಯೋಜನೆಯ ಪ್ರತೀಕವಾಗಿದೆ.
ಇತಿಹಾಸ ಮತ್ತು ನಿರ್ಮಾಣ: ಕುತುಬ್ ಮಿನಾರ್ ನಿರ್ಮಾಣವನ್ನು ಕ್ರಿ.ಶ.1192ರಲ್ಲಿ ದಿಲ್ಲಿಯ ಮೊದಲ ಮುಸ್ಲಿಮ್ ಆಡಳಿತಗಾರ ಕುತುಬುದ್ದೀನ್ ಐಬಕ್ ಪ್ರಾರಂಭಿಸಿದರು. ಆದರೆ ಅವರ ನಿಧನದ ನಂತರ ಅವರ ಉತ್ತರಾಧಿಕಾರಿ ಅಲ್ತಮಶ್ ಈ ಮಿನಾರ್ ಅನ್ನು ಪೂರ್ಣಗೊಳಿಸಿದರು. ನಂತರದ ವರ್ಷಗಳಲ್ಲಿ ಅಲ್ಲಾಉದ್ದೀನ್ ಖಿಲ್ಜಿ ಹಾಗೂ ಇತರ ಸುಲ್ತಾನರು ಇದರ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯಗಳನ್ನು ನಡೆಸಿದರು.
ವಾಸ್ತುಶಿಲ್ಪದ ವೈಶಿಷ್ಟ್ಯ: ಕುತುಬ್ ಮಿನಾರ್‌ನ ಎತ್ತರವು ಸುಮಾರು 73 ಮೀಟರ್ (240 ಅಡಿ) ಆಗಿದ್ದು, ಇದನ್ನು ಕೆಂಪು ಹಾಗೂ ಹಳದಿ ಮರಳುಗಲ್ಲುಗಳಿಂದ ನಿರ್ಮಿಸಲಾಗಿದೆ. ಮಿನಾರ್‌ನಲ್ಲಿ ಐದು ಅಂತಸ್ತುಗಳಿವೆ. ಮಿನಾರ್‌ನ ಹೊರಭಾಗದಲ್ಲಿ ಪವಿತ್ರ ಕುರ್‌ಆನ್‌ನ ಆಯತ್‌ಗಳು ಮತ್ತು ಅಲಂಕಾರಿಕ ಲಿಪಿಗಳನ್ನು ಅತ್ಯಂತ ಸುಂದರವಾಗಿ ಕೆತ್ತಲಾಗಿದೆ.
ಮಿನಾರ್ ಒಳಗಡೆ ಹಾಗೂ ಹೊರಗಿನ ಅಂದವಾದ ವಾಸ್ತುಶೈಲಿ ಪ್ರವಾಸಿಗರ ಗಮನ ಸೆಳೆಯುತ್ತದೆ. ಮೊದಲ ಮೂರು ಹಂತಗಳು ಕೆಂಪು ಮರಳುಗಲ್ಲುಗಳಿಂದ ಹಾಗೂ ನಂತರದ ಎರಡು ಹಂತಗಳು ಬಿಳಿ ಸಣ್ಣ ಕಲ್ಲಿನಿಂದ ನಿರ್ಮಿಸಲಾಗಿದೆ.
ಸಂಸ್ಕೃತಿಯ ಪ್ರಾಮುಖ್ಯತೆ: ಕುತುಬ್ ಮಿನಾರ್ ಕೇವಲ ಒಂದು ಗೋಪುರವಲ್ಲ, ಅದು ಭಾರತದ ಮುಸ್ಲಿಮ್ ರಾಜ್ಯಾಡಳಿತದ ಆರಂಭದ ಸಂಕೇತವಾಗಿದೆ. ಇದರ ಪಕ್ಕದಲ್ಲಿರುವ ಖುವ್ವತ್-ಉಲ್-ಇಸ್ಲಾಮ್ ಮಸ್ಜಿದ್ ದಿಲ್ಲಿಯಲ್ಲಿ ನಿರ್ಮಾಣವಾದ ಮೊಟ್ಟ ಮೊದಲ ಮಸೀದಿ ಎಂಬ ಹೆಗ್ಗಳಿಕೆ ಹೊಂದಿದೆ. ಕುತುಬುದ್ದೀನ್ ಐಬಕ್ ಕ್ರಿ.ಶ.1192-93 ಅವಧಿಯಲ್ಲಿ ಈ ಮಸೀದಿಯನ್ನು ನಿರ್ಮಿಸಿದರು.
ಗುಪ್ತರ ಕಾಲದ ಲೋಹದ ಸ್ತಂಭ: ಕುತುಬ್ ಮಿನಾರ್ ಸಮುಚ್ಚಯದೊಳಗೆ ನಿಂತಿರುವ ಲೋಹದ ಸ್ತಂಭವು ಭಾರತೀಯ ತಾಂತ್ರಿಕ ನೈಪುಣ್ಯವನ್ನು ಜಗತ್ತಿಗೆ ಪರಿಚಯಿಸುವ ಅಪೂರ್ವ ಸ್ಮಾರಕವಾಗಿದೆ. 1,600 ವರ್ಷಗಳಿಗಿಂತಲೂ ಹಳೆಯದಾದ ಈ ಲೋಹದ ಸ್ತಂಭವು ಇಂದಿಗೂ ವಿಜ್ಞಾನಿಗಳು, ಇತಿಹಾಸಕಾರರು ಮತ್ತು ಪ್ರವಾಸಿಗರಿಗೆ ಕುತೂಹಲದ ವಿಷಯವಾಗಿದೆ.
ಲೋಹದ ಸ್ತಂಭವು ಕ್ರಿ.ಶ.4ನೇ ಶತಮಾನದಲ್ಲಿ, ಗುಪ್ತರ ಸಾಮ್ರಾಜ್ಯದ ಸುವರ್ಣಯುಗದಲ್ಲಿ ನಿರ್ಮಿಸಲ್ಪಟ್ಟಿದೆ. ಶಾಸನಗಳು ಇದನ್ನು ಸಾಮ್ರಾಟ್ ಚಂದ್ರಗುಪ್ತ ವಿಕ್ರಮಾದಿತ್ಯರಿಗೆ ಸಮರ್ಪಿಸಲ್ಪಟ್ಟ ಸ್ಮಾರಕವೆಂದು ಸೂಚಿಸುತ್ತವೆ. ಗುಪ್ತರ ಯುಗವನ್ನು ಭಾರತೀಯ ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಲೋಹಶಿಲ್ಪದ ಶೃಂಗಾರೋಹಣದ ಕಾಲವೆಂದು ಇತಿಹಾಸ ದಾಖಲಿಸಿದೆ. ಈ ಸ್ತಂಭವು ಆ ಕಾಲದ ತಾಂತ್ರಿಕ ಶಕ್ತಿಯನ್ನು ಸಾಕ್ಷಿಯಾಗಿ ನಿಲ್ಲಿಸಿದೆ.
ಸುಮಾರು 7.2 ಮೀಟರ್ ಎತ್ತರ ಹೊಂದಿರುವ ಈ ಸ್ತಂಭದ ಮೇಲೆ ಗುಪ್ತರ ಯುಗದ ಬ್ರಾಹ್ಮಿ ಲಿಪಿಯಲ್ಲಿ ಸಂಧ್ಯಗಂಧ ಸಂಸ್ಕೃತ ಶಾಸನ ಕೆತ್ತಲ್ಪಟ್ಟಿದೆ. ಈ ಶಾಸನದಲ್ಲಿ ಚಂದ್ರಗುಪ್ತನ ಶೌರ್ಯ, ರಾಜ್ಯಭಾರ ಮತ್ತು ಯುದ್ಧ ಕೌಶಲಗಳ ಕುರಿತು ಪ್ರಶಂಸಿಸಲಾಗಿದೆ. ಕೆಲವು ಇತಿಹಾಸಕಾರರು ಈ ಸ್ತಂಭ ಮೂಲತಃ ಉದಯಗಿರಿ (ಮಧ್ಯಪ್ರದೇಶ) ಪ್ರದೇಶದಲ್ಲಿ ಇರಿಸಿದ್ದಾಗಿ, ನಂತರ ದಿಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕುತುಬುದ್ದೀನ್ ಐಬಕ್, ಖುವ್ವತ್ ಉಲ್ ಇಸ್ಲಾಮ್ ಮಸೀದಿಯನ್ನು ನಿರ್ಮಿಸಿದಾಗ ಈ ಸ್ತಂಭವನ್ನು ಮಸೀದಿಯ ಆವರಣದಲ್ಲಿ ಪ್ರತಿಷ್ಠಾಸಿದರು. ಹೀಗಾಗಿ, ಈ ಸ್ತಂಭವು ಪ್ರಾಚೀನ ಭಾರತೀಯ ಮತ್ತು ಮಧ್ಯಯುಗೀಯ ಇಸ್ಲಾಮಿಕ್ ವಾಸ್ತುಶಿಲ್ಪದ ಪರಂಪರೆಯನ್ನು ಒಂದೇ ಪರಿಚಯಿಸುತ್ತದೆ.
ದಿಲ್ಲಿ ಸಾಮಾಜ್ರ್ಯವನ್ನು ಆಳಿದ ಸುಲ್ತಾನ್ ಅಲ್ಲಾಉದ್ದೀನ್ ಖಿಲ್ಜಿ ತನ್ನ ವಿಜಯಗಳು, ಸಾಮ್ರಾಜ್ಯದ ವಿಸ್ತರಣೆ ಮತ್ತು ಆಡಳಿತದ ನೆನಪಿಗಾಗಿ ಖುತುಬ್ ಮಿನಾರ್‌ಗಿಂತ ಎತ್ತರದ ಸ್ಮಾರಕ ನಿರ್ಮಿಸಲು ಉದ್ದೇಶಿದ್ದನು. ಕ್ರಿ.ಶ.1311ರ ಸುಮಾರಿಗೆ ಖುತುಬ್ ಮಿನಾರ್ ಎದುರೇ ಅಲಾಯಿ ಮಿನಾರ್ ನಿರ್ಮಾಣ ಕಾಮಗಾರಿ ಆರಂಭಿಸಿದನಾದರೂ, ಅದು ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟನು. ಆನಂತರ, ದಿಲ್ಲಿಯನ್ನು ಆಳಿದ ಯಾವ ಸುಲ್ತಾನರು ಮಿನಾರ್ ನಿರ್ಮಾಣ ಕಾಮಗಾರಿಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಅದು ಅಪೂರ್ಣವಾಗಿದೆ. ಆದರೂ, ಅಲಾಯಿ ಮಿನಾರ್ ತನ್ನ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಷಿಸುತ್ತಿದೆ.