ಭಾರತದಲ್ಲಿ ರೇಬಿಸ್ ಬಾಧೆ
ಬ್ರಿಜೇಶ್ ಸೋಲಂಕಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಮಾತ್ರವಲ್ಲ, ಪ್ರಾಣಿದಯೆಯ ಹೃದಯವಂತ. ಹಾಗಾಗಿಯೇ ಚರಂಡಿಯಲ್ಲಿ ಬಿದ್ದು ನರಳುತ್ತಿದ್ದ ನಾಯಿ ಮರಿಯೊಂದನ್ನು ಮೇಲೆತ್ತಿ ರಕ್ಷಿಸಲು ಹೋಗಿದ್ದು. ವಿಚಲಿತಗೊಂಡ ಆ ನಾಯಿ ಮರಿ ಬ್ರಿಜೇಶ್ ಸೋಲಂಕಿಗೆ ಕಚ್ಚಿದಾಗ ಅವರು ಅಂದುಕೊಂಡದ್ದು ಬೆದರಿದ ನಾಯಿ ಕಚ್ಚಿದ್ದಷ್ಟೇ ಎಂದು. ಹಾಗಾಗಿ ಯಾವುದೇ ಇಂಜೆಕ್ಷನ್ ತೆಗೆದುಕೊಳ್ಳಲಿಲ್ಲ. ಆ ಕರುಣಾಳುವಿನ ಉದಾರ ನಿರ್ಲಕ್ಷ್ಯ ರೇಬಿಸ್ ಸೋಂಕನ್ನು ಹೊಂದಿತ್ತು ಎಂದು ಭಾವಿಸಿರಲಿಲ್ಲ. ಉತ್ತರ ಪ್ರದೇಶದ ಇಪ್ಪತ್ತೆರಡು ವರ್ಷದ ಪ್ರತಿಭಾವಂತ ಮತ್ತು ಭರವಸೆಯ ಕ್ರೀಡಾಳುವಿಗೆ ನಾಯಿಮರಿ ಕಚ್ಚಿದ್ದೇ ಮುಳುವಾಗಿ ದಾರುಣವಾದ ಸಾವನ್ನು ಕಂಡಿದ್ದು ನಿಜಕ್ಕೂ ಆಘಾತಕಾರಿ.
ಯುವ ಕ್ರೀಡಾತಾರೆಯ ಕಬಡ್ಡಿಯ ರೋಮಾಂಚನದ ದೃಶ್ಯಗಳು ಮುದ ಕೊಟ್ಟಂತೆ, ಅವರು ಬಾಧೆಯಿಂದ ನರಳುತ್ತಾ ಸಾವನ್ನು ಕಂಡ ದೃಶ್ಯಗಳು ಆಘಾತ ಮತ್ತು ನೋವು ಕೊಡುವಂತಹದ್ದು. ಈ ಘಟನೆಯ ನೆಪದಲ್ಲಿ ಹಲವು ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಪ್ರಾಣಿಗಳಿಗಾಗಲಿ ಮತ್ತು ಮನುಷ್ಯರಿಗಾಗಲಿ ರೇಬಿಸ್ ಸೋಂಕು ಅತ್ಯಂತ ಅಪಾಯಕಾರಿ. ಒಮ್ಮೆ ಈ ಸೋಂಕು ತಗಲಿರುವುದು ದೃಢವಾದರೆ ದಾರುಣ ಮರಣ ಎಷ್ಟು ಖಚಿತವೋ, ಕಡಿತಕ್ಕೆ ಒಳಗಾದ ಕೂಡಲೇ ಚಿಕಿತ್ಸೆ ಪಡೆದರೆ ಉಪಶಮನವೂ ಅಷ್ಟೇ ಖಚಿತ. ನಾಯಿ ಕಚ್ಚಿದಾಗ ಗಾಯದ ಮೂಲಕ ಪ್ರವೇಶಿಸುವ ಎಂಜಲಿನಿಂದ ಮನುಷ್ಯನಿಗೆ ಅಥವಾ ಪ್ರಾಣಿಗೆ ರವಾನೆಯಾಗುವ ರೇಬಿಸ್ ಸೋಂಕು ನರಮಂಡಲದ ಕೇಂದ್ರದ ಮೇಲೆ ನೇರವಾಗಿ ದಾಳಿ ಮಾಡಿ ಮೆದುಳು ಮತ್ತು ಮೆದುಳು ಬಳ್ಳಿ ಘಾಸಿಗೊಳ್ಳುತ್ತದೆ. ಈ ಘಾಸಿಗೊಳ್ಳುವ ಪ್ರಕ್ರಿಯೆಯೂ ಒಮ್ಮಿಂದೊಮ್ಮೆಲೇ ತನ್ನ ಲಕ್ಷಣಗಳನ್ನು ತೋರುವುದಿಲ್ಲ. ವೈರಸ್ ನಿಧಾನವಾಗಿ ನರಗಳಲ್ಲಿ ಚಲಿಸುತ್ತದೆ. ಹತ್ತು ದಿನಗಳಿಂದ ಹಿಡಿದು, ಕೆಲವೊಮ್ಮೆ ವರ್ಷದವರೆಗೂ ತೆಗೆದುಕೊಳ್ಳಬಹುದು. ಒಮ್ಮೆ ಅದು ಮೆದುಳನ್ನು ತಲುಪಿದ ಮೇಲೆ ತನ್ನ ವಿನಾಶಕಾರಿ ಕೆಲಸಕ್ಕೆ ತೊಡಗುತ್ತದೆ.
ಮನುಷ್ಯನಿಗೆ ಅಥವಾ ಪ್ರಾಣಿಗೆ ರೇಬಿಸ್ ಸೋಂಕು ತಗಲಿದ ಮೇಲೆ ಹೆಚ್ಚೂ ಕಡಿಮೆ ಅಂತ್ಯವೆಂಬುದು ಖಚಿತ.
► ರೇಬಿಸ್ ಸೋಂಕಿನ ಲಕ್ಷಣಗಳು
ಜ್ವರ ಮತ್ತು ತಲೆನೋವಿನಿಂದ ಪ್ರಾರಂಭವಾಗಿ ವ್ಯಕ್ತಿಯಲ್ಲಿ ಆತಂಕವು ಪ್ರಾರಂಭವಾಗುತ್ತದೆ. ಜೊತೆ ಜೊತೆಗೆ ಭ್ರಮೆಗಳಿಂದ ಕೂಡಿ ಗೊಂದಲದಿಂದ ವರ್ತಿಸತೊಡಗುತ್ತಾರೆ. ಕೆಲವರು ವ್ಯಕ್ತಿಗಳನ್ನು ಗುರುತಿಸಲೂ ವಿಫಲರಾಗುತ್ತಾರೆ. ನೀರಿನ ಭಯ ಒಂದು ಸಾಮಾನ್ಯ ಲಕ್ಷಣ. ಮೈಯಲ್ಲಿ ಎಳೆತಗಳು ಉಂಟಾಗಿ ಗಂಟಲಿಗೆ ಸಮಸ್ಯೆಯಾಗುತ್ತದೆ. ಇದರಿಂದ ಏನನ್ನೂ ನುಂಗಲಾರದವರಾಗುತ್ತಾರೆ. ನರಗಳು ತೀವ್ರವಾದ ಸಂವೇದನೆಗೆ ಒಳಗಾಗಿ ಗಾಳಿಯ ಬೀಸುವಿಕೆಯೂ ಕೂಡಾ ಅವರಲ್ಲಿ ಭೀತಿಯನ್ನು ಉಂಟು ಮಾಡುತ್ತದೆ. ದೇಹದಲ್ಲಿ ಎಳೆತ, ಅದುರುವಿಕೆ, ಸೆಳೆತಗಳು ಉಂಟಾಗುತ್ತಾ ಮೂರ್ಛಾವಸ್ಥೆಯನ್ನು ತಲುಪುತ್ತಾರೆ. ಒಮ್ಮೆ ಕೋಮಾಗೆ ಹೋದ ಮೇಲೆ ನಂತರ ಕೊನೆಯ ಹಂತ ಮರಣ.
ಒಮ್ಮೆ ಸೋಂಕಿನ ಗುಣ ಲಕ್ಷಣಗಳು ಕಾಣತೊಡಗಿದರೆ ವೈದ್ಯಕೀಯವಾಗಿ ಪರಿಹಾರೋಪಾಯ ಇರುವುದಿಲ್ಲ.
► ನಾಯಿ ಕಚ್ಚಿದಾಗ ಏನು ಮಾಡಬೇಕು?
ಯಾವುದೇ ನಾಯಿ, ಅದರಲ್ಲೂ ಬೀದಿ ನಾಯಿ ಕಚ್ಚಿದರೆ ತಕ್ಷಣವೇ ಗಾಯವನ್ನು ಸೋಪು ಹಾಕಿ, ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಡೆಟಾಲ್ ಅಥವಾ ಇನ್ನಾವುದಾದರೂ ಆಂಟಿ ಸೆಪ್ಟಿಕ್ ಮುಲಾಮು ಹಚ್ಚಬೇಕು. ತಕ್ಷಣವೇ ಡಾಕ್ಟರ್ ಬಳಿಗೆ ಹೋಗಿ ಐದು ಆಂಟಿ ರೇಬಿಸ್ ವ್ಯಾಕ್ಸಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕು. ಕಚ್ಚಿದ ದಿನ, ನಂತರ ಮೂರನೇ, ಏಳನೇ, ಹದಿನಾಲ್ಕನೇ ಮತ್ತು ಇಪ್ಪತ್ತೆಂಟನೆಯ ದಿನ; ಹೀಗೆ ಐದು ಡೋಸುಗಳು.
ಒಂದು ವೇಳೆ ಕಚ್ಚಿರುವ ಗಾಯ ತೀರಾ ಆಳವಾಗಿದ್ದರೆ ರೇಬಿಸ್ ಇಮ್ಯುನೋಗ್ಲೋಬ್ಯುಲಿನ್ (ಆರ್ ಐ ಜಿ) ಮೊದಲನೆಯ ದಿನವೇ ತೆಗೆದುಕೊಳ್ಳಬೇಕಾಗುತ್ತದೆ.
► ನಾಯಿಗಳಲ್ಲಿ ರೇಬಿಸ್ ತಡೆಗಟ್ಟುವಿಕೆ
ಪ್ರತೀ ವರ್ಷವೂ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದನ್ನು ಕೊಡಿಸಬೇಕು. ಮೊದಲನೆಯ ವ್ಯಾಕ್ಸಿನ್ ಮೂರನೆಯ ತಿಂಗಳಿಗೆ ಕೊಟ್ಟು ಪ್ರತೀ ವರ್ಷವೂ ಬೂಸ್ಟರ್ ಕೊಡಬೇಕು. ಬೀದಿ ನಾಯಿಗಳ ನಿರ್ವಹಣೆ ನಗರ ಪಾಲಿಕೆಗೆ ಸಂಬಂಧಪಟ್ಟಿದ್ದು ರೇಬಿಸ್ ಚುಚ್ಚುಮದ್ದು ನಾಯಿಗಳಿಗೆ ಕೊಡುವ ವಿಷಯದಲ್ಲಿ ಎಚ್ಚರವಹಿಸಲೇ ಬೇಕು.
ಸಾಕಿರುವ ನಾಯಿಗಳಾಗಲಿ, ಬೀದಿ ನಾಯಿಗಳಾಗಲಿ ಅನಗತ್ಯವಾಗಿ ಮತ್ತು ವಿಚಿತ್ರವಾಗಿ ರೇಗಿದಂತಾಡುತ್ತಿದ್ದರೆ, ಅಥವಾ ವಿಪರೀತವಾಗಿ ಹೆದರುತ್ತಿದ್ದರೆ ರೇಬಿಸ್ ಸೋಂಕಿನ ಲಕ್ಷಣಗಳು ಇರಬಹುದಾ ಎಂದು ಗಮನಿಸಬೇಕು. ಸಿಕ್ಕಾಪಟ್ಟೆ ಜೊಲ್ಲು ಸುರಿಸುವುದು, ಜೊಲ್ಲು ನೊರೆನೊರೆಯಾಗಿರುವುದು, ಕಾರಣ ವಿಲ್ಲದೇ ರೇಗುತ್ತ ಕಚ್ಚುವುದು, ಕರೆದಾಗ ಗಮನ ಕೊಡದೇ ಇರುವುದು, ಊಟ ನೀರು ಸೇವಿಸದೇ ಇರುವುದು ಮೊದಲಾದ ಲಕ್ಷಣಗಳು ತೋರುತ್ತಾ ಕೊನೆಗೆ ಪಾರ್ಶ್ವವಾಯು ಪೀಡಿತವಾಗಿ ನಾಯಿ ಸಾವನ್ನು ಅಪ್ಪುವುದು.
► ಭಾರತಕ್ಕೆ ಮೊದಲ ಸ್ಥಾನ
ರೇಬಿಸ್ ಸೋಂಕಿನ ಬಾಧೆಯ ವಿಷಯವಾಗಿ ಇಡೀ ವಿಶ್ವದಲ್ಲಿ ಭಾರತಕ್ಕೆ ಮೊದಲ ಸ್ಥಾನ. ವಿಶ್ವದ ಶೇಕಡಾ ಮೂವತ್ತೈದರಷ್ಟು ರೇಬಿಸ್ ಸೋಂಕಿನಿಂದ ಉಂಟಾಗುವ ಸಾವು ಭಾರತದಲ್ಲೇ ಆಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ವರ್ಷಕ್ಕೆ ಸರಾಸರಿ ಇಪ್ಪತ್ತು ಸಾವಿರದಷ್ಟು ಜನರು ಭಾರತದಲ್ಲೇ ಸಾಯುವುದು ನಿಜಕ್ಕೂ ಕಳವಳಕಾರಿ. ಇದರಲ್ಲಿ ಹೆಚ್ಚಿನ ಪಾಲು ಮಕ್ಕಳು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು.
ಭಾರತದಲ್ಲೇ ಈ ರೇಬಿಸ್ ಪ್ರಕರಣಗಳು ಹೆಚ್ಚೇಕೆ ಎಂದು ನೋಡಿದರೆ ಮೊದಲು ಕಾಣುವುದು ಮಿತಿಮೀರಿದ ಬೀದಿನಾಯಿಗಳ ಸಂತಾನ. ಅರುವತ್ತು ಮಿಲಿಯನ್ ಬೀದಿನಾಯಿಗಳು ಭಾರತದ ಉದ್ದಗಲಕ್ಕೆ ಹರಡಿಕೊಂಡಿದ್ದು ಅವುಗಳಿಗೆ ಸೋಂಕು ನಿರೋಧಕ ಚುಚ್ಚುಮದ್ದು ಕೊಟ್ಟಿರುವುದಿಲ್ಲ. ರೇಬಿಸ್ ಸೋಂಕಿಗೆ ಶೇಕಡಾ 95ರಷ್ಟು ಕಾರಣವೇ ನಾಯಿ ಕಡಿತ.
ಎಷ್ಟೋ ಜನ ನಾಯಿ ಕಚ್ಚಿದ ಕೂಡಲೇ ಏನು ಮಾಡಬೇಕು ಎಂದು ತಿಳಿಯದೇ ತಮಗೆ ತಿಳಿದ ಮದ್ದನ್ನು ಮಾಡಿಕೊಂಡು ಸುಮ್ಮನಾಗಿಬಿಡುತ್ತಾರೆ. ಅರಿಶಿನ, ಉಪ್ಪು ಹಾಕುವುದೋ, ಮೆಣಸಿನ ಪುಡಿ ಹಾಕುವುದೋ ಮಾಡಿ ಸುಮ್ಮನಾಗಿಬಿಡುತ್ತಾರೆ. ಇದು ನಿಜಕ್ಕೂ ಕೆಲಸ ಮಾಡುವುದಿಲ್ಲ. ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಚುಚ್ಚುಮದ್ದುಗಳು ಸಿಗದಿರುವುದೂ ಕೂಡಾ ರೇಬಿಸ್ ಮರಣಗಳಿಗೆ ಕಾರಣವಾಗಿದೆ. ಕೆಲವರು ಉಡಾಫೆಯಿಂದ ಒಂದೋ ಎರಡೋ ಚುಚ್ಚುಮದ್ದು ತೆಗೆದುಕೊಂಡು ಪೂರ್ತಿ ಡೋಸ್ ತೆಗೆದುಕೊಳ್ಳುವುದಿಲ್ಲ.
ನಗರ ಪಾಲಿಕೆಗಳು ಪ್ರಾಣಿ ಸಂತಾನ ನಿಯಂತ್ರಣದ ಬಗ್ಗೆ ಹೆಚ್ಚಿನ ಗಮನ ಕೊಡದಿರುವುದು ವ್ಯವಸ್ಥೆಯು ಕೂಡಾ ರೇಬಿಸ್ ಸೋಂಕಿನ ಹರಡುವಿಕೆಗೆ ಕಾರಣವಾಗುತ್ತದೆ. ಇರುವ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ರೇಬಿಸ್ ನಿರೋಧಕ ಚುಚ್ಚು ಮದ್ದನ್ನು ನೀಡುವುದು ಪಾಲಿಕೆಗಳ ಜವಾಬ್ದಾರಿಯೇ ಆಗಿದೆ.
ನಾಯಿಪ್ರೇಮಿಗಳು ಕೂಡಾ ಬೇಕಾಬಿಟ್ಟಿಯಾಗಿ ಸಾಕುವುದರ ಬಗ್ಗೆ ಕಡಿವಾಣ ಹಾಕಬೇಕಾಗಿರುವುದು ಅಗತ್ಯವಾಗಿದೆ. ತಾವು ಸಾಕುವ ನಾಯಿಯ ಪರವಾನಿಗೆ ತೆಗೆದುಕೊಳ್ಳುವುದು, ಕಾಲ ಕಾಲಕ್ಕೆ ಅವಕ್ಕೆ ನೀಡಬೇಕಾದ ವ್ಯಾಕ್ಸಿನೇಶನ್‌ಗಳ ಬಗ್ಗೆ ದಾಖಲೆಗಳನ್ನು ಹೊಂದಿದ್ದು, ಅದನ್ನು ಇಲಾಖೆಗೆ ನೀಡುವುದು ಅಗತ್ಯ. ನಮ್ಮಲ್ಲಿ ಪೆಟ್ ರಿಜಿಸ್ಟ್ರೇಶನ್ ಎಂಬುದು ಪರಿಣಾಮಕಾರಿಯಾಗಿ ಜಾರಿಗೆ ಬರಲೇ ಬೇಕಿದೆ. ನಾಯಿಗಳನ್ನು ಸಾಕುವುದರ ಬಗ್ಗೆ ಗಂಭೀರವಾದ ಕಾವಲುಗಣ್ಣಿನ ಅಗತ್ಯವೂ ಇದೆ.
ನಾಯಿಗಳು ಎಷ್ಟು ಮುದ್ದೋ, ಭಾವನಾತ್ಮಕ ಸಂಗಾತಿಗಳೋ ಅಷ್ಟೇ ಅಪಾಯಕರವಾಗಬಲ್ಲವು ರೇಬಿಸ್ ಸೋಂಕಿದಾಗ. ನಿಜಕ್ಕೂ ನಾಯಿಗಳನ್ನು ಸಾಕುವವರು ಚುಚ್ಚುಮದ್ದುಗಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೆಯೇ ಪಾಲಿಕೆಗಳ ಆಡಳಿತ ವ್ಯವಸ್ಥೆಯೂ ಕೂಡಾ ಬೀಡಾಡಿ ನಾಯಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.