×
Ad

ಭರದಿಂದ ಸಾಗಿದ ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ

2027ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ

Update: 2025-11-03 09:04 IST

ರಾಯಚೂರು : ಜಿಲ್ಲೆಯ ಜನರ ಅನೇಕ ವರ್ಷಗಳ ಕನಸಾಗಿದ್ದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾಮಗಾರಿ ಭರದಿಂದ ಸಾಗಿದ್ದು, ದಶಕಗಳ ಕನಸು ಈಡೇರುವ ಕಾಲ ಸನಿಹವಾಗಿದೆ. ಅಂದುಕೊಂಡಂತೆ ಆದರೆ 2027ರೊಳಗೆ ವಿಮಾನಗಳ ಹಾರಾಟವಾಗಬಹುದು.

ರಾಯಚೂರು ನಗರದ ಹೊರವಲಯದ ಯರಮರಸ್ ಬಳಿಯಲ್ಲಿ ಬರೋಬ್ಬರಿ 320 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ಅನುದಾನ, ಜಾಗ, ತಾಂತ್ರಿಕ ಸಮಸ್ಯೆ ಸೇರಿ ಅನೇಕ ಅಡೆತಡೆಗಳು, ವಿಘ್ನಗಳು ಎದುರಾಗಿದ್ದವು. ಆದಾದ ನಂತರ 2024-25ನೇ ಸಾಲಿನಿಂದ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಾರಂಭಿಸಿವೆ. ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿದ ಸಚಿವ ಎನ್.ಎಸ್. ಭೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್ ಆಸಕ್ತಿ ವಹಿಸಿಸರಕಾರದ ಮಟ್ಟದಲ್ಲಿ ಪ್ರಭಾವ ಬೀರಿದ್ದರು. ಅಷ್ಟೇ ಅಲ್ಲದೇ ಜಿಲ್ಲಾಧಿಕಾರಿಯಾಗಿ ಬಂದ ಡಾ.ನಿತೀಶ್ ಕೆ ಅವರು ಪಟ್ಟುಹಿಡಿದವರಂತೆ ವಿಮಾನ ನಿಲ್ದಾಣ ಕಾಮಗಾರಿ ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಅಧಿಕಾರಿ ವರ್ಗಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕಚೇರಿ ಕಡತಗಳು ಅಚ್ಚುಕಟ್ಟಾಗಿ ಪೂರ್ಣಗೊಂಡಿದ್ದು, ಕಾಮಗಾರಿ ಹಂತದಲ್ಲೇ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ.

ಕ್ಲಿಯರೆನ್ಸ್ ಪಡೆದ ಮೊದಲ ವಿಮಾನ ನಿಲ್ದಾಣ: ಯರಮರಸ್ ಥರ್ಮಲ್ ಪವರ್ ಸ್ಟೇಷನ್( ವೈಟಿಪಿಎಸ್) ಪಕ್ಕದಲ್ಲಿಯೇ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಿದ್ದರಿಂದ ವಿಮಾನಗಳ ಹಾರಾಟಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಬಹುದು ಎಂಬ ಗೊಂದಲದ ಗೂಡಾಗಿತ್ತು. ಸಾಮಾನ್ಯವಾಗಿ ವಿವಿಧೆಡೆ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿ ಶೇ.80ರಷ್ಟು ಕಾಮಗಾರಿ ಮುಗಿದಾಗ ಕೇಂದ್ರ ಪರಿಸರ ಸಚಿವಾಲಯದಿಂದ ಎನ್ನಿರೋನ್ ಮೆಂಟಲ್ ಕ್ಲಿಯರೆನ್ಸ್ ಲಭಿಸಿದೆ. ಆದರೆ ರಾಯಚೂರು ವಿಮಾನ ನಿಲ್ದಾಣಕ್ಕೆ ಆರಂಭದಲ್ಲೇ ಎನ್ವಯರ್ನ್‌ಮೆಂಟಲ್ ಕ್ಲಿಯರೆನ್ಸ್ ಸಿಕ್ಕಿದೆ. ಇದು ರಾಜ್ಯದಲ್ಲಿ ಬಹುಬೇಗ ಎನ್ವಯರ್ನ್‌ಮೆಂಟಲ್ ಕ್ಲಿಯರೆನ್ಸ್ ಪಡೆದ ಏಕೈಕ ಜಿಲ್ಲೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೇ ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾದಿಂದ ಟೆಕ್ನಿಕಲ್ ಪ್ರಿ ಫಿಸಿಬಿಲಿಟಿ ರಿಪೋರ್ಟ್ ಸಹ ಸಿಕ್ಕಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಅವಶ್ಯ ಕಡತಗಳು ಅಚ್ಚುಕಟ್ಟಾಗಿವೆ.

ಅಂದುಕೊಂಡಂತೆ ನಡೆದಿದ್ದರೆ 2023- 2025ರ ಹೊತ್ತಿಗೆ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವು ಅಡೆತಡೆಗಳಿಂದ 2025ರಲ್ಲಿ ಅಧಿಕೃತವಾಗಿ ಕಾಮಗಾರಿ ಆರಂಭಿಸಲಾಗಿದ್ದು, 2027ಕ್ಕೆ ಅಂದರೆ ಮುಂದಿನ ಒಂದುವರೆ ವರ್ಷದಲ್ಲಿ ಕಾಮಗಾರಿ ಮುಗಿಸಿ ವಿಮಾನ ಹಾರಾಟ ನಡೆಸಲು ಜಿಲ್ಲಾಧಿಕಾರಿ ಡಾ.ನಿತೀಶ್ ಅವರು ವಿಶೇಷ ಮುತುವರ್ಜಿವಹಿಸಿದ್ದಾರೆ. ಹೀಗಾಗಿಯೇ ಅಧಿಕಾರಿಗಳ ಬೆನ್ನತ್ತಿದ ಜಿಲ್ಲಾಧಿಕಾರಿ ವಿಮಾನ ನಿಲ್ದಾಣ ವಿಚಾರಕ್ಕೆ ವಿಶೇಷ ಕಾಳಜಿವಹಿಸಿ ಮುಂದೆನಿಂತು ಕೆಲಸ ಮಾಡಿಸುತ್ತಿದ್ದಾರೆ. ತಾವೇ ಸ್ವತಃ ಅಧಿಕಾರಿಗಳಿಗೆ ಕರೆ ಮಾಡಿ ಸೈಟ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ.

219 ಕೋಟಿ ಮಂಜೂರು :

ಹೈದರಾಬಾದ್ ಮೂಲಕ ಕೆಎಂವಿ ಪ್ರಾಜೆಕ್ಟ್ ಲಿಮಿಟೆಡ್ ವಿಮಾನ ನಿಲ್ದಾಣ ಕಾಮಗಾರಿಯ ನಿರ್ಮಾಣ ಜವಾಬ್ದಾರಿ ಪಡೆದುಕೊಂಡಿದೆ. ಒಟ್ಟು 219 ಕೋಟಿ ರೂ. ಅನುದಾನ ಈವರೆಗೆ ಮಂಜೂರಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬೇಕಾದರೆ ಪ್ರಸ್ತಾವ ಸಲ್ಲಿಸುವ ಸಾಧ್ಯತೆಗಳಿವೆ. ಒಟ್ಟಾರೆ ರಾಯಚೂರು ಜಿಲ್ಲೆಯ ಜನರ ದಶಕಗಳ ಕನಸು 2027ರಲ್ಲಿ ಈಡೇರುವ ಎಲ್ಲ ಸಾಧ್ಯತೆಗಳಿದ್ದು, ಈ ದಿಶೆಯಲ್ಲಿ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಸೇರಿ ವಿವಿಧ ಇಲಾಖೆಗಳು ಶ್ರಮವಹಿಸುತ್ತಿವೆ.

ರಾಯಚೂರು ವಿಮಾನ ನಿಲ್ದಾಣಕ್ಕೆ ಜವಾಹರಲಾಲ್ ನೆಹರೂ ನಂಟು :

1951ರಲ್ಲಿ ಮೊದಲ ವಿಮಾನ ಹಾರಾಟ: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಮಾನಗಳ ತಂಗುದಾಣಕ್ಕೆಂದು ನಗರದ ಹೊರವಲಯದ ಯರಮರಸ್ ಬಳಿ ರಕ್ಷಣಾ ಇಲಾಖೆ 400 ಎಕರೆ ಜಮೀನು ಗುರುತು ಮಾಡಿತ್ತು. ಇದಾದ ಬಳಿಕ ಅಂದಿನ ಪ್ರಧಾನಿ ಜವಾಹರಲಾಲ್ ಲಾಲ್ ನೆಹರೂ ಅವರು ಕೇರಳದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮಂಗಳೂರು ವಿಮಾನ ನಿಲ್ದಾಣದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ತೆರಳುತ್ತಿದ್ದಾಗ ರಾಯಚೂರು ಬಳಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ತಕ್ಷಣವೇ ರಕ್ಷಣಾ ಇಲಾಖೆ ಹಾಗೂ ವಿಮಾನಯಾನ ಇಲಾಖೆಯವರನ್ನು ಸಂಪರ್ಕಿಸಿದಾಗ ಅವರ ಸೂಚನೆ ಮೇರೆಗೆ ಯರಮರಸ್‌ನಲ್ಲಿ ಯುದ್ಧ ವಿಮಾನಗಳ ತಂಗುದಾಣಕ್ಕೆಂದು ಮೀಸಲಿಟ್ಟ ಈ ಪ್ರದೇಶದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿ ಎಂದು ಸಲಹೆ ನೀಡಿದಾಗ ನೆಹರು ಅವರು ಇದ್ದ ವಿಮಾನ 1951 ಏಪ್ರಿಲ್ 21 ರಂದು ಇಳಿಸಲಾಗಿತ್ತು.

ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಉಸ್ತುವಾರಿ ಸಚಿವರು :

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡ.ಶರಣಪ್ರಕಾಶ ಪಾಟೀಲರು ವಿಮಾನ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದು ಕಾಮಗಾರಿಗೆ ಯಾವುದೆ ಅಡೆತಡೆಯಾಗದಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗಳು ಚುರುಕು ಪಡೆದಿವೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕಚೇರಿ ಕಡತಗಳನ್ನು ವಸ್ತುನಿಷ್ಠವಾಗಿ ಸಿದ್ಧಪಡಿಸಿ ಸಂಬಂಧಿಸಿದ ಪ್ರಾಧಿಕಾರಗಳಿಂದ ಕ್ಲಿಯರೆನ್ಸ್ ಪಡೆದುಕೊಂಡಿರುವುದು ಹೆಗ್ಗಳಿಕೆಗೆ ಪಾತ್ರ.

-ಮಹೇಶ್, ಸಹಾಯಕ ಅಭಿಯಂತರ, ಪಿಡಬ್ಲ್ಯುಡಿ ಇಲಾಖೆ, ರಾಯಚೂರು

ಸದ್ಯ ವಿಮಾನ ನಿಲ್ದಾಣ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ವೇಗ ಪಡೆದುಕೊಂಡಿದೆ. 2025 ರಿಂದ 2027ವರೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ.

-ಪ್ರವೀಣ್, ಪ್ರಾಜೆಕ್ಟ್ ಮ್ಯಾನೇಜರ್, ಕೆಎಂವಿ ಪ್ರಾಜೆಕ್ಟ್ ಲಿಮಿಟೆಡ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News