ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗೆ ನುಗ್ಗುತ್ತಿರುವ ಮಳೆ ನೀರು
ಬೀದರ್,: ಜಿಲ್ಲೆಯ ಹುಲಸೂರ್ ತಾಲೂಕಿನ ಗಡಿ ಗೌಂಡಗಾಂವ್ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ಸಂಪೂರ್ಣವಾಗಿ ಮನೆಗೆ ನುಗ್ಗುತ್ತಿರುವುದರಿಂದ ಅಲ್ಲಿನ ಜನರು ಕಂಗಾಲಾಗಿದ್ದಾರೆ.
ಗಡಿ ಗೌಂಡಗಾಂವ್ ಗ್ರಾಮದ ಕೆಲವು ಕಡೆಗೆ ಸಿಸಿ ರಸ್ತೆ ನಿರ್ಮಾಣ ಮಾಡಿದ್ದರೂ ಚರಂಡಿ ವ್ಯವಸ್ಥೆ ಮಾತ್ರ ಮಾಡಲಿಲ್ಲ. ಹಾಗಾಗಿ ಮಳೆಯಾದರೆ ಕೊಳಚೆಯೊಂದಿಗೆ ನೀರೆಲ್ಲ ಮನೆಗೆ ಹರಿಯುತ್ತದೆೆ. ಇದರಿಂದಾಗಿ ಅಲ್ಲಿನ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಗ್ರಾಮದಲ್ಲಿ ಸುಮಾರು 15-20 ವರ್ಷಗಳಿಂದ ಚರಂಡಿ ವ್ಯವಸ್ಥೆ ಇಲ್ಲ. ಕೆಲವು ಮನೆಗಳಂತೂ ಸಂಪೂರ್ಣವಾಗಿ ತಗ್ಗು ಪ್ರದೇಶದಲ್ಲಿದ್ದು, ಮೇಲಿನಿಂದ ಮಳೆ ನೀರು ಬಂದು ಆ ಮನೆಗಳ ಮುಂದೆ ಜಮೆಯಾಗಿ ತಿಪ್ಪೆಗುಂಡಿಯಂತೆ ನಿಂತಿರುತ್ತವೆ. ಮಕ್ಕಳು ಆಟ ಆಡುವುದಕ್ಕೂ ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪ್ರತಿ ವರ್ಷದ ಮಳೆಗಾಲದ ಸಮಸ್ಯೆಯಾಗಿದ್ದರೂ ಈ ಕಡೆಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ತಿಂಗಳ ಹಿಂದಷ್ಟೇ ಶಾಸಕರ ಅನುದಾನದಲ್ಲಿ ಈ ಓಣಿಯಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದೆ. ಆದರೆ ಚರಂಡಿಗಳು ಮಾತ್ರ ನಿರ್ಮಾಣ ಮಾಡಲಿಲ್ಲ. ಇದರಿಂದಾಗಿ ಅಲ್ಲಿನ ಬಹಳಷ್ಟು ಜನರು ಕೊಳಚೆಯಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಚ್ಚುಕಟ್ಟಾದ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಿದರೆ ಆ ಊರಿನ ಜನರು ಸ್ವಚ್ಛವಾದ ಪರಿಸರದಲ್ಲಿ, ರೋಗಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಆಶಯವಾಗಿದೆ.
ಶಾಸಕರ ಅನುದಾನದಲ್ಲಿ ಆ ಓಣಿಗೆ ರಸ್ತೆ ನಿರ್ಮಾಣ ಆಗಿದೆ. ಆದರೆ ಚರಂಡಿ ವ್ಯವಸ್ಥೆ ಆಗಲಿಲ್ಲ. ಈಗಾಗಲೇ ಈ ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಡಿಷನಲ್ ಪ್ಲಾನ್ ಮಾಡುವುದಕ್ಕೆ ಹೇಳಿದ್ದಾರೆ. ಜಿಲ್ಲಾ ಪಂಚಾಯತ್ ನಿಂದ ಅನುಮೋದನೆ ಪಡೆದ ತಕ್ಷಣವೇ ಚರಂಡಿ ಕೆಲಸ ಪ್ರಾರಂಭ ಮಾಡಲಾಗುವುದು.
-ಸುಲೋಚನಾ, ಪಿಡಿಒ,ಗಡಿ ಗೌಡಗಾಂವ್ ಗ್ರಾಪಂ
ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಚರಂಡಿ ವ್ಯವಸ್ಥೆ ಮಾಡಲಿಲ್ಲ. ಆದ್ದರಿಂದ ಮಳೆ ನೀರು ಸಂಪೂರ್ಣವಾಗಿ ನಮ್ಮ ಮನೆಗೆ ನುಗ್ಗುತ್ತಿದೆ. ಎಲ್ಲರಿಗೂ ಓಡಾಡುವುದಕ್ಕೂ ತುಂಬಾ ಸಮಸ್ಯೆಯಾಗುತ್ತಿದೆ. ಪಿಡಿಒ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.
-ರಾಜಶ್ರೀ, ಸ್ಥಳೀಯ ನಿವಾಸಿ, ಗಡಿ ಗೌಡಗಾಂವ್ ಗ್ರಾಮ
ಇಷ್ಟು ದಿನ ಇಲ್ಲಿನ ಬಡಾವಣೆಗೆ ರಸ್ತೆ ಇರಲಿಲ್ಲ. ಈಗ ರಸ್ತೆ ಮಾಡಿದ್ದಾರೆ. ಆದರೆ ಅದಕ್ಕೆ ಚರಂಡಿ ವ್ಯವಸ್ಥೆ ಮಾಡಲಿಲ್ಲ. ರಸ್ತೆಯು ತುಂಬಾ ಎತ್ತರಕ್ಕೆ ಆಗಿದ್ದು, ನಮ್ಮ ಮನೆಗಳು ತಗ್ಗು ಪ್ರದೇಶದಲ್ಲಿ ಇವೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರೆಲ್ಲ ಮನೆಗಳಿಗೆ ನುಗ್ಗುತ್ತಿವೆ. ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು.
-ಅಪ್ಪಾರಾವ್ ಸಂಗಪ್ಪ ಖ್ಯಾಡೆ, ಗಡಿ ಗೌಡಗಾಂವ್ ಗ್ರಾಮಸ್ಥ