×
Ad

ಕನ್ನಡಿಗರ ಹೊಣೆಗಾರಿಕೆ ಈಗ ಹೆಚ್ಚಿದೆ

Update: 2025-08-21 12:22 IST

ಭಾಷಾವಾರು ಪ್ರಾಂತಗಳು ರಚನೆಯಾದಾಗ ಆಯಾ ರಾಜ್ಯಗಳ ಭಾಷೆಗಳು ಆಡಳಿತ ಭಾಷೆಯಾಗುತ್ತವೆ, ಶಿಕ್ಷಣ ಮಾಧ್ಯಮವಾಗುತ್ತವೆ, ಜನರ ನಡುವಿನ ಸಂಪರ್ಕ ಭಾಷೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಅದು ನಿರೀಕ್ಷೆಯಾಗಿಯೇ ಉಳಿದಿದೆ.

ಈಗ ಶಿಕ್ಷಣ ಮಾಧ್ಯಮದ ಗೊಂದಲ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶ ಭಾಷೆ ಉಳಿಸುವಲ್ಲಿ ಕರ್ನಾಟಕ ಸರಕಾರದ ನಿಲುವು ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಕನ್ನಡಿಗರ ಹೊಣೆಗಾರಿಕೆ ಹೆಚ್ಚಿದೆ. ಕನ್ನಡಿಗರು ಒಂದು ದೀರ್ಘಕಾಲೀನ ಆಂದೋಲನಕ್ಕೆ ಸಿದ್ಧವಾಗಿ ತಾರ್ಕಿಕ ಅಂತ್ಯ ಕಾಣುವ ತನಕ ವಿಶ್ರಮಿಸಬಾರದು.

ಸಂವಿಧಾನ ತಿದ್ದುಪಡಿ ಮುಂತಾದ ಕ್ರಿಯೆಗಳು ಸಾಕಷ್ಟು ಸಮಯ ಹಿಡಿಯುವುದರಿಂದ 2010ರ ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಅಂಶವನ್ನು ಆಧರಿಸಿ ರಾಜ್ಯ ಸರಕಾರ ಕೂಡಲೇ ಭಾಷಾ ನೀತಿಯೊಂದನ್ನು ರೂಪಿಸಬೇಕು. (ಕಾಯ್ದೆಯ ಪ್ರಕರಣ 29(2)(ಎಫ್) ಅನ್ವಯ ಸಾಧ್ಯವಾದಷ್ಟು ‘ಮಾತೃಭಾಷೆ’ ಎಂಬುದನ್ನು ಕಡ್ಡಾಯವಾಗಿ ‘ಮಾತೃಭಾಷೆ ಅಥವಾ ರಾಜ್ಯ ಭಾಷೆ’ ಎಂದು ಬದಲಿಸಬೇಕು. ಇದು ವರ್ಣರಹಿತ ಮತ್ತು ವರ್ಗರಹಿತ ನವಕರ್ನಾಟಕದ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಶಿಕ್ಷಕರಿಗೆ ಉನ್ನತೀಕರಿಸಿದ ವೇತನ ಶ್ರೇಣಿ, ಉತ್ತಮ ತರಬೇತಿ, ನಿಯಮಿತ ಪುನರ್ ಮನನ ಶಿಬಿರ ಹಾಗೂ ಅವಶ್ಯಕ ಸವಲತ್ತುಗಳನ್ನು ಕಲ್ಪಿಸಬೇಕು. ಶಾಲೆಗೆ ಅವಶ್ಯಕವಾದ ಉತ್ತಮ ಕಟ್ಟಡ, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ, ವಿದ್ಯುತ್, ಕುಡಿಯುವ ನೀರು, ಪಾಠೋಪಕರಣ, ಆಟೋಪಕರಣ ಮತ್ತು ಪೀಠೋಪಕರಣ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಈಗಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ‘ಗ್ರಾಮ ಪಂಚಾಯತ್ ಸಾರ್ವಜನಿಕ ಶಾಲೆ’ ಗಳೆಂದು ಪರಿವರ್ತಿಸಬೇಕು. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಒಂದಾದರೂ ಶಾಲೆಯನ್ನು ಪ್ರಾರಂಭಿಸಬೇಕೆಂದು ಸರಕಾರವನ್ನು ಸಮಸ್ತ ಕನ್ನಡಿಗರ ಪರವಾಗಿ ಒತ್ತಾಯಿಸುತ್ತೇನೆ. ಇಂತಹ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಪರಿಣಾಮಕಾರಿಯಾಗಿ ಕಲಿಸಬೇಕು. ಇದು ನಮ್ಮ ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನೆರವಾಗುತ್ತದೆ. ಮಾತೃಭಾಷೆಯ ಪ್ರೌಢಿಮೆ ಮತ್ತು ಸಂಪರ್ಕ ಭಾಷೆಯ ಅರಿವು ಯಾವುದೇ ಮಗುವಿನ ಮೂಲಭೂತ ಅಗತ್ಯವಾಗಿದೆ.

ಕೇಂದ್ರ ಸರಕಾರವು ಕನ್ನಡಿಗರ ನಿರಂತರ ಹಕ್ಕೊತ್ತಾಯಕ್ಕೆ ಮಣಿದು 2008ರಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಅದಕ್ಕೆ ಸಿಗಬೇಕಾದ ಸವಲತ್ತುಗಳು ಇಂದಿಗೂ ಸಿಕ್ಕಿಲ್ಲ. ಕಾರಣಗಳು ಏನೇ ಇರಲಿ ಕನ್ನಡಕ್ಕೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆಯಲು ಕರ್ನಾಟಕ ಸರಕಾರವು ತಮಿಳಿನಲ್ಲಿ ಆಗಿರುವ ಕೆಲಸಗಳನ್ನು ಗಮನಿಸಿ ಅದನ್ನು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು. ಮೈಸೂರಿನ ಭಾಷಾ ಸಂಸ್ಥಾನದ ಒಂದು ಯೋಜನೆ ಆಗಿರುವ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ತಮಿಳಿನಂತೆ ಪ್ರತ್ಯೇಕಿಸಿ ಒಂದು ಸ್ವತಂತ್ರ ಕೇಂದ್ರವಾಗಿ ಕನ್ನಡ ಶಾಸ್ತ್ರೀಯ ಉನ್ನತ ಅಧ್ಯಯನ ಕೇಂದ್ರವು ಸ್ಥಾಪನೆಯಾಗಬೇಕು. ಅದಕ್ಕೆ ಅಗತ್ಯವಾದ ಸ್ಥಳವನ್ನು ರಾಜ್ಯ ಸರಕಾರವು ಒದಗಿಸುವುದಾಗಿ ಹೇಳಿದೆ. ಇದು ಸ್ವಾಗತಾರ್ಹವಾದದ್ದು. ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಕನ್ನಡವು ವಿಶ್ವಮಟ್ಟದಲ್ಲಿ ಬೆಳಗುವ ರೀತಿಯಲ್ಲಿ ಯೋಜನೆಗಳು ರೂಪಿತಗೊಳ್ಳಬೇಕು. ಭಾರತದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ವಿದೇಶಗಳ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು.

ಆಡಳಿತಾಂಗದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಇಂಗ್ಲಿಷ್ ಭಾಷೆಯ ಬಳಕೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಈ ಅಧಿಕಾರಿಗಳು ಇಂಗ್ಲಿಷ್‌ನಲ್ಲೇ ಯೋಚಿಸುತ್ತಾರೆ, ಇಂಗ್ಲಿಷ್ ನಲ್ಲೇ ಬರೆಯುತ್ತಾರೆ, ಕನ್ನಡದಲ್ಲಿ ತೊದಲು ತ್ತಾರೆ. ಇಂತಹ ಅಧಿಕಾರಿಗಳನ್ನು ಸರಕಾರ ಮೊದಲು ಬದಲಾಯಿಸಬೇಕು. ಕನ್ನಡ ಬಳಸದ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸಬೇಕು. ಕೆಲವು ಅಧಿಕಾರಿಗಳು ಕಡತ ಕನ್ನಡದಲ್ಲಿದ್ದರೂ ಅದನ್ನು ಬೇರೆಯವರಿಂದ ಓದಿಸಿ ಆ ಕಡತದಲ್ಲಿ ‘ಆಗಬಹುದು’ ಅಥವಾ ‘ಆಗುವುದಿಲ್ಲ’ ಎಂದು ಬರೆದರೆ ಅದೇ ಕನ್ನಡಿಗರ ಭಾಗ್ಯವಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿ ಕನ್ನಡ ಬಳಕೆಯಾಗದ ಹೊರತು ಕನ್ನಡಕ್ಕೆ ಉಳಿಗಾಲವಿಲ್ಲ. ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಇದರ ಪ್ರಗತಿಯಾಗಿಲ್ಲ. ಕನ್ನಡದಲ್ಲಿ ಒಂದು ತಂತ್ರಾಂಶದಿಂದ ಮತ್ತೊಂದು ತಂತ್ರಾಂಶಕ್ಕೆ ಪರಿವರ್ತನೆ ಸಾಧ್ಯವಾಗುವ ರೀತಿಯಲ್ಲಿ ತಂತ್ರಾಂಶವನ್ನು ರೂಪಿಸಬೇಕು. ಅಕ್ಷರ ಜಾಣ, ನುಡಿ ಜಾಣ, ವ್ಯಾಕರಣ ಪರೀಕ್ಷೆ, ಪದಪರೀಕ್ಷೆ ಸಾಧ್ಯವಾಗಬೇಕು.

ಕನ್ನಡ ಪುಸ್ತಕೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಗ್ರಂಥಾಲಯ ಇಲಾಖೆ ಪ್ರತೀ ವರ್ಷ ತಪ್ಪದೆ ಪುಸ್ತಕಗಳನ್ನು ಖರೀದಿಸಬೇಕು. ಪುಸ್ತಕಗಳು ಸಂಸ್ಕೃತಿಯ ಉತ್ಪನ್ನಗಳು ಮತ್ತು ಸಾರ್ವಜನಿಕರ ಆಸ್ತಿ ಎಂಬುದಾಗಿದೆ. ಕರ್ನಾಟಕ ಏಕೀಕರಣವಾದರೂ ಗಡಿಸಮಸ್ಯೆ ಮಾತ್ರ ಹಾಗೆಯೇ ಉಳಿದಿರುವುದು ವಿಷಾದಕರ. ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಉಳಿದಿರುವ ಅನೇಕ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲು ಇನ್ನೂ ಆಗಿಲ್ಲ.

ಕೇರಳದ ಕಾಸರಗೋಡು, ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ ಮತ್ತು ಆಂಧ್ರದ ಕರೂಲ್, ಮೆಹಬೂಬ್‌ನಗರ ಜಿಲ್ಲೆಗಳ ಕನ್ನಡ ಪ್ರದೇಶಗಳು ಹಾಗೂ ತಮಿಳುನಾಡಿನ ತಾಳವಾಡಿ ಕರ್ನಾಟಕಕ್ಕೆ ಸೇರಬೇಕಾಗಿದೆ. ಈ ಸ್ಥಳಗಳಲ್ಲಿ ಐಚ್ಛಿಕ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಲಯಾಳಂ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಈ ವಿದ್ಯಾರ್ಥಿಗಳಿಗೆ ಐಚ್ಛಿಕ ಪಠ್ಯಗಳನ್ನು ಕನ್ನಡದಲ್ಲಿ ತಯಾರಿಸಿ, ಮುದ್ರಿಸಿ ಕರ್ನಾಟಕ ಸರಕಾರ ಉಚಿತವಾಗಿ ವಿತರಣೆ ಮಾಡಬೇಕಾಗಿದೆ.

ಗೋವಾದ ಬೈನಾ ಕಡಲ ತೀರದಲ್ಲಿ ಹಲವು ವರ್ಷಗಳಿಂದ 350ಕ್ಕೂ ಹೆಚ್ಚು ಕನ್ನಡಿಗರ ಕುಟುಂಬಗಳು ವಾಸವಾಗಿದ್ದವು. ಸುರಕ್ಷತೆ ವಿಷಯವನ್ನು ಮುಂದಿಟ್ಟುಕೊಂಡು ಗೋವಾ ಸರಕಾರ ಈ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವುದು ಶೋಚನೀಯ.

ಶಿಕ್ಷಣದಲ್ಲಂತೂ ಕನ್ನಡ ದಿನೇ ದಿನೇ ಅವಜ್ಞೆಗೆ ಒಳಗಾಗುತ್ತಿದೆ. ಕೆಲವು ಪದವಿ ತರಗತಿಗಳಲ್ಲಿ ಎರಡು ವರ್ಷವಿದ್ದ ಕನ್ನಡ ವಿಷಯವನ್ನು ಒಂದು ವರ್ಷಕ್ಕೆ ಇಳಿಸಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇದು ಮಾಯವಾದರೂ ಆಶ್ಚರ್ಯಪಡಬೇಕಿಲ್ಲ. ಹಳೆಗನ್ನಡ ಸಾಹಿತ್ಯದ ಓದು ಮತ್ತು ಅಧ್ಯಯನವಂತೂ ಮರೆತು ಹೋದಂತೆ ಕಾಣುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ. ಸಂತೋಷ ಹಾನಗಲ್ಲ

contributor

Similar News