ಕೊಡಗಿನಲ್ಲಿ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ
ಸಾಂದರ್ಭಿಕ ಚಿತ್ರ PC: freepik
ಮಡಿಕೇರಿ : ಪ್ರಸಕ್ತ ವರ್ಷ ಮಳೆಗಾಲಕ್ಕೂ ಮುನ್ನವೇ ಕೊಡಗಿನಲ್ಲಿ ಪೂರ್ವ ಮುಂಗಾರು ಅಬ್ಬರಿಸಿರುವುದರಿಂದ ಜಿಲ್ಲೆಯಲ್ಲಿ ಜೂನ್ 6ರಿಂದ ಜುಲೈ 5ರವರೆಗೆ ಎಲ್ಲಾ ರೀತಿಯ ಮರದ ದಿಮ್ಮಿ ಸಾಗಾಟದ ವಾಹನಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜುಲೈ ಅಂತ್ಯ ಅಥವಾ ಆಗಸ್ಟ್‌ನಲ್ಲಿ ನಿರ್ಬಂಧ ಹೇರಲಾಗುತ್ತಿದ್ದ ಮರಗಳ ದಿಮ್ಮಿಗಳ ಸಾಗಾಟಕ್ಕೆ ಎರಡು ತಿಂಗಳ ಮುಂಚಿತವಾಗಿಯೇ ನಿರ್ಬಂಧ ವಿಧಿಸಿರುವುದರಿಂದ ಮರದ ವ್ಯಾಪಾರಿಗಳು ಹಾಗೂ ಕೆಲಸಗಾರರು ಸಂಕಷ್ಟ ಸಿಲುಕಿಕೊಂಡಿದ್ದಾರೆ.
ಅನಿರೀಕ್ಷಿತವಾಗಿ ಒಂದು ವಾರಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಈಗಾಗಲೇ ತೋಟದಲ್ಲಿ ಕಡಿದು ಹಾಕಿರುವ ಸಿಲ್ವರ್ ಸೇರಿ ಇನ್ನಿತರ ಮರಗಳನ್ನು ಲೋಡ್ ಮಾಡಲು ಸಾಧ್ಯವಾಗದೆ ತೋಟದಲ್ಲೇ ಬಿಟ್ಟಿದ್ದೇವೆ. ಮಳೆ ಕಡಿಮೆಯಾದ ನಂತರ ಮಾತ್ರವೇ ತೋಟದ ಮಾಲಕರು ಮರ ಲೋಡ್ ಮಾಡಲು ಅವಕಾಶ ನೀಡುತ್ತಾರೆ ಎಂದು ಮರದ ವ್ಯಾಪಾರಿಯೋರ್ವರು ಹೇಳುತ್ತಾರೆ.
ಮೇ ತಿಂಗಳ ಅಂತ್ಯದೊಳಗೆ ಮರಗಳನ್ನು ಲೋಡ್ ಮಾಡುವ ಯೋಜನೆ ಹಾಕಿದ್ದ ಮರದ ವ್ಯಾಪಾರಿಗಳಿಗೆ ಪೂರ್ವ ಮುಂಗಾರು ಆಘಾತ ಕೊಟ್ಟಿದೆ. ಮೇ ಅಂತ್ಯದೊಳಗೆ ಮರ ಕಡಿಯಲು ಮುಂಗಡ ಹಣ ಪಾವತಿಸಿದ್ದ ವ್ಯಾಪಾರಿಗಳಿಗೂ ಇದೀಗ ಸಂಕಷ್ಟ ಎದುರಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮರ ಕಡಿಯಲು ಹಾಗೂ ಮರವನ್ನು ಲೋಡ್ ಮಾಡಲು ತೋಟದ ಮಾಲಕರು ಸಮ್ಮತಿ ಸೂಚಿಸುವುದಿಲ್ಲ ಎನ್ನಲಾಗಿದೆ.
ತರಾತುರಿಯಲ್ಲಿ ಲೋಡಿಂಗ್: ಜೂ.6ರಿಂದ ಮರದ ದಿಮ್ಮಿಗಳ ಸಾಗಾಟಕ್ಕೆ ನಿಷೇಧ ಎಂಬ ಜಿಲ್ಲಾಧಿಕಾರಿ ಆದೇಶ ಹೊರ ಬರುತ್ತಿದ್ದಂತೆ, ಸಿಲ್ವರ್ ಮರಗಳನ್ನು ಮಳೆಯಲ್ಲೇ ಲೋಡ್ ಮಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ಜೂನ್‌ನಿಂದ ಸೆಪ್ಟಂಬರ್‌ವರೆಗೂ ಮರ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ಮುಂದುವರಿಸುತ್ತಾರೆ. ಇದರಿಂದಾಗಿ ಈಗಾಗಲೇ ಲೋಡ್ ಮಾಡಲು ಕಡಿದು ಹಾಕಿರುವ ಮರಗಳನ್ನು ಲೋಡಿಂಗ್ ಮಾಡಲು ಸಾಧ್ಯವಾಗದೆ ಮರಗಳನ್ನು ತೋಟ ಅಥವಾ ರಸ್ತೆಯ ಬದಿಯಲ್ಲಿ ಬಿಡಬೇಕಾಗುತ್ತದೆ. ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದ ರಸ್ತೆ ಬದಿಗಳಲ್ಲಿ ಸಿಲ್ವರ್ ಮರಗಳ ದಿಮ್ಮಿಗಳ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.
ಜಿಲ್ಲಾಧಿಕಾರಿಯವರು ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಪ್ರತೀ ವರ್ಷವೂ ಜಿಲ್ಲಾಧಿಕಾರಿ ಆದೇಶ ಕೇವಲ ಪತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧವಿದ್ದರೂ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಎಗ್ಗಿಲ್ಲದೆ ದೊಡ್ಡ ಪ್ರಭಾವಿ ಟಿಂಬರ್ ವ್ಯಾಪಾರಿಗಳು ಮರವನ್ನು ಲೋಡ್ ಮಾಡಿ ರಾತ್ರೋ ರಾತ್ರಿ ಮರದ ಲೋಡ್ ಸಾಗಿಸುತ್ತಾರೆ. ಅರಣ್ಯಾಧಿಕಾರಿಗಳು ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಸಹಕರಾದಿಂದಲೇ ಮರವನ್ನು ಎಗ್ಗಿಲ್ಲದೆ ದೊಡ್ಡ ದೊಡ್ಡ ಪ್ರಭಾವಿಗಳು ಮರವನ್ನು ಲೋಡಿಂಗ್ ಮಾಡಿ ಸಾಗಿಸುತ್ತಾರೆ. ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧವಿದ್ದರೂ ಲೋಡ್‌ವೊಂದಕ್ಕೆ ಇಂತಿಷ್ಟು ಹಣವನ್ನು ನೀಡಿ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ಸಾಗಿಸುವ ಕೆಲಸ ಸಲೀಸಾಗಿ ಜಿಲ್ಲೆಯಲ್ಲಿ ಸಾಗುತ್ತಲೇ ಇದೆ. ಇದರ ಹಿಂದೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಕೈವಾಡ ಇದೆ ಎಂಬ ಆರೋಪ ಕೇಳಿಬರುತ್ತಿದೆ.
ಇದೀಗ ಮರದ ದಿಮ್ಮಿಗಳ ಸಾಗಾಟಕ್ಕೆ ಜುಲೈ ಅಂತ್ಯದವರೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಶಾಕಸರ ಬಳಿ ನಿಯೋಗ ತೆರಳುವುದಾಗಿ ಜಿಲ್ಲೆಯ ಟಿಂಬರ್ ಮಾಲಕರು ಹಾಗೂ ವ್ಯಾಪಾರಿಗಳ ಅಸೋಸಿಯೇಷನ್ ತೀರ್ಮಾನ ಕೈಗೊಂಡಿದೆ.
ಟಿಂಬರ್ ಕೆಲಸವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಮಂದಿ ಕೊಡಗು ಜಿಲ್ಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಎರಡು ತಿಂಗಳ ಮುಂಚಿತವಾಗಿ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ಕೆಲಸಗಾರರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮರ ಕೆಲಸಗಾರರಿಗೆ 3-4 ತಿಂಗಳು ಕೆಲಸವೇ ಇರಲ್ಲ. ಇದೀಗ ಶಾಲೆಗಳೂ ಪುನರಾರಂಭಗೊಂಡಿದೆ. ಮರವನ್ನು ಕಡಿಯಲು ಎಸ್ಟೇಟ್ ಪೇಮೆಂಟ್ ಮಾಡಿದ್ದೇವೆ. ಮರ ಕಡಿದು ತೋಟದಲ್ಲಿ ಬಾಕಿ ಉಳಿದಿದೆ. ಒಂದು ವಾರಗಳ ಕಾಲ ಮಾತ್ರ ಮರದ ದಿಮ್ಮಿಗಳ ಸಾಗಾಟಕ್ಕೆ ಅವಕಾಶ ನೀಡಿರುವುದರಿಂದ ಮರವನ್ನು ಲೋಡ್ ಮಾಡಲು ಸಾಧ್ಯವಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲೋಡ್ ಮಾಡುವುದು ಕಷ್ಟಕರ ಹಾಗೂ ಹೆಚ್ಚು ಲೋಡ್ ಅನ್ನು ಲೋಡಿಂಗ್ ವಾಹನಗಳು ಹಾಕಿಕೊಳ್ಳುವುದಿಲ್ಲ. ಜಿಲ್ಲಾಡಳಿತ ತಮ್ಮ ಆದೇಶವನ್ನು ಪುನರ್ ಪರಿಶೀಲಿಸಬೇಕು.
ಪಿ.ವಿ ಅಂತೋಣಿ, ಟಿಂಬರ್ ಮರ್ಚೆಂಟ್ ಸಿದ್ದಾಪುರ
ಕೊಡಗು ಜಿಲ್ಲೆಯ ರಸ್ತೆಗಳು, ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಪ್ರಯಾಣಿಕರ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರ ಕಲಂ 33, ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟರ್ ವಾಹನಗಳ ನಿಯಮಗಳು 1989 ರ(ತಿದ್ದುಪಡಿ ನಿಯಮಾವಳಿ 1990) ನಿಯಮ 221-ಎ(5) ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಸ್ಥಳೀಯರ, ವಾಹನ ಸವಾರರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲಾದ್ಯಂತ ಜೂನ್ 6ರಿಂದ ಜುಲೈ 5ರವರೆಗೆ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವಂತೆ ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಣೆ ವಾಹನಗಳು, ವಾಹನದ ನೋಂದಣಿ ತೂಕ 18,500 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಣೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು, ಆರ್ಟಿಕ್ಯೂಲೇಟೆಡ್ ವಾಹನಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿದ್ದೇವೆ.
ವೆಂಕಟ್ ರಾಜಾ, ಜಿಲ್ಲಾಧಿಕಾರಿ ಕೊಡಗು