×
Ad

ಸಾಯಿ ನಗರ ಬಡಾವಣೆಗಿಲ್ಲ ಸಮರ್ಪಕ ರಸ್ತೆ: ಸಾರ್ವಜನಿಕರಿಗೆ ಸಂಕಷ್ಟ

Update: 2025-07-28 14:21 IST

ಬೀದರ್, ಜು.27: ನಗರದ ನೌಬಾದ್ ಹತ್ತಿರ ಇರುವ ಸಾಯಿ ನಗರ ಬಡಾವಣೆಯಾಗಿ 20 ವರ್ಷ ಕಳೆದರೂ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಬಡಾವಣೆಯ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಸಾಯಿ ನಗರದ ಯಾವ ಓಣಿಯಲ್ಲಿ ಹೋದರೂ ಅಲ್ಲಿನ ರಸ್ತೆಗಳು ಬರೀ ಕೆಂಪು ಮಣ್ಣಿನ ಕೆಸರಿನ ಗದ್ದೆಯಂತೆ ಕಾಣುತ್ತವೆ. ಮೊಣಕಾಲುದ್ದಕ್ಕೂ ಗುಂಡಿಗಳು ಸಿಗುತ್ತವೆ. ಮಳೆ ಬಿದ್ದರಂತೂ ಈ

ಓಣಿಯಲ್ಲಿ ನಡೆದಾಡುವುದಕ್ಕೆ ತುಂಬಾ ಕಷ್ಟವಾಗುತ್ತದೆ. ರಸ್ತೆಯ ಪರಿಸ್ಥಿತಿ ನೋಡಿ ಈ ಓಣಿಯಲ್ಲಿ ಬಾಡಿಗೆ ಆಟೊಗಳು ಕೂಡ ಬರುವುದಿಲ್ಲ. ಸುಮಾರು ಅರ್ಧ ಕಿ. ಮೀ. ದೂರದ ನೌಬಾದ್‌ನಿಂದ ಈ ಓಣಿಯ ಜನ ನಡೆದುಕೊಂಡೆ ಬರಬೇಕಾಗಿದೆ.

ಇಂತಹ ಗುಂಡಿ ಬಿದ್ದ ರಸ್ತೆಯಲ್ಲಿ ಬೈಕ್ ಮತ್ತು ಶಾಲಾ ವಾಹನಗಳು ಅನಿವಾರ್ಯವಾಗಿ ಓಡಾಡಲೇಬೇಕು. ಅಂಥದರಲ್ಲಿ ಅದೆಷ್ಟೋ ಬೈಕ್ ಸವಾರರು ಜಾರಿ ಬಿದ್ದಿದ್ದಾರೆ. ಅದೆಷ್ಟೋ ಶಾಲಾ ವಾಹನಗಳು ಕೆಸರಲ್ಲಿ ಸಿಲುಕಿದೆ. ಮಳೆಗಾಲದಲ್ಲಿ ರಸ್ತೆಯ ತಗ್ಗಿನ ತುಂಬೆಲ್ಲ ನೀರು ನಿಂತು, ತಗ್ಗಿನ ಪ್ರಮಾಣ ಗೊತ್ತಾಗುತ್ತಿಲ್ಲ

ಮಳೆಯಿಂದ ಓಣಿಯ ತುಂಬೆಲ್ಲ ನೀರು ನಿಂತಿವೆ. ಇದರಿಂದಾಗಿ ಮಕ್ಕಳು, ಮಹಿಳೆಯರಿಗೆ ಹೊರಗಡೆ ಓಡಾಡುವುದಕ್ಕೆ ಕಷ್ಟವಾಗುತ್ತಿದೆ. ಯಾರಾದರು ಮೃತಪಟ್ಟರೆ ಮೃತದೇಹವನ್ನು ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ನಿಂತ ನೀರಿನ ಪರಿಣಾಮವಾಗಿ ಓಣಿಯ ತುಂಬೆಲ್ಲ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದು ಹಲವಾರು ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ.

ಸುಮಾರು ವರ್ಷಗಳಿಂದ ನಮ್ಮ ಓಣಿಯ ಜನರು ಈ ರಸ್ತೆ ಸಮಸ್ಯೆಯಿಂದ ನೊಂದು ಹೋಗಿದ್ದಾರೆ. ಆದರೆ ಯಾರು ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಅಳಲನ್ನು ತೊಡಿಕೊಂಡಿದ್ದಾರೆ.ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರ ಗಮನಕ್ಕೆ ತಂದರೂ ನಮ್ಮ ಓಣಿಯ ಸಮಸ್ಯೆ ಬಗೆಹರಿದಿಲ್ಲ. ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಆದರೆ ಇಲ್ಲಿವರೆಗೆ ಇತ್ತ ಕಡೆಗೆ ಗಮನ ಹರಿಸಿ ನೋಡಲಿಲ್ಲ. ಹೇಗಾದರೂ ಮಾಡಿ ನಮ್ಮ ಓಣಿಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಬಡಾವಣೆಯ ಜನರು ಒತ್ತಾಯಿಸುತ್ತಿದ್ದಾರೆ.

ರಸ್ತೆಯ ಮಧ್ಯದಲ್ಲಿ ಮೊಣಕಾಲಿನವರೆಗೆ ನೀರು ನಿಂತಿದೆ. ಇದರಿಂದಾಗಿ ಬೈಕ್ ಮತ್ತು ಶಾಲಾ ವಾಹನಗಳು ಓಡಾಡಲು ತುಂಬಾ ಕಷ್ಟವಾಗುತ್ತಿದೆ. ರಸ್ತೆ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

-ನಾಗರಾಜ್, ಸಾಯಿ ನಗರ ಬಡಾವಣೆಯ ನಿವಾಸಿ

ಸಾಯಿ ನಗರ ಬಡಾವಣೆಗೆ ರಸ್ತೆ ಬಗ್ಗೆ ನಗರಸಭೆ ಆಯುಕ್ತರಿಗೆ ತಿಳಿಸಲಾಗಿದೆ. ಪತ್ರ ಕೂಡ ಸಲ್ಲಿಸಲಾಗಿದೆ. ಅವರು ಓಣಿಗೆ ಬಂದು ರಸ್ತೆ ನೋಡಿಕೊಂಡು ಹೋಗಿದ್ದಾರೆ. ಆದರೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಟೆಂಡರ್ ಆಗಬೇಕಿದ್ದು, ಬಜೆಟ್ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ.

-ಮಹಾದೇವಿ, ಸಾಯಿನಗರ ನಗರಸಭೆ ಸದಸ್ಯೆ

ನಾವು ಈ ಬಡಾವಣೆಗೆ ಬಂದು 25 ವರ್ಷಗಳು ಆಯಿತು. ಈ ಬಡಾವಣೆಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ನಮ್ಮ ಮಕ್ಕಳು ಶಾಲೆಗೆ ಹೋಗಿ ಬರುವಾಗ ಕೆಸರಲ್ಲಿ ಬೀಳುತ್ತಿದ್ದಾರೆ. ಅಲ್ಲಲ್ಲಿ ಹುಲ್ಲು ಬೆಳೆದಿದ್ದು, ಹಾವುಗಳು ಓಡಾಡುತ್ತಿವೆ. ನಮ್ಮ ಓಣಿಯಲ್ಲಿ ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆ ಮಾಡಬೇಕು.

-ಸಂಪಾವತಿ, ಓಣಿಯ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News