×
Ad

ರಾಷ್ಟ್ರೀಯ ಒಗ್ಗಟ್ಟಿನ ಮನೋಭಾವಕ್ಕೆ ಅಡಿಪಾಯ ಹಾಕಿದ ಸರ್ದಾರ್ ಪಟೇಲ್

Update: 2025-10-29 14:05 IST

Photo credit: PTI

ರಾಷ್ಟ್ರೀಯ ಏಕೀಕರಣದ ಅಚಲ ಬದ್ಧತೆಗೆ ಮತ್ತೊಂದು ಹೆಸರು ಎನಿಸಿರುವ ಸರ್ದಾರ್ ಪಟೇಲ್ ಅವರು, ಸ್ವಾತಂತ್ರ್ಯಾನಂತರ ವಿವಿಧ ರಾಜಪ್ರಭುತ್ವದ ಸಂಸ್ಥಾನಗಳನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸುವಲ್ಲಿ ದಿಟ್ಟ ನಾಯಕತ್ವ ಮೆರೆದವರು. ರಾಷ್ಟ್ರೀಯ ಒಗ್ಗಟ್ಟಿನ ಮನೋಭಾವಕ್ಕೆ ಅಡಿಪಾಯ ಹಾಕಿದವರು.

‘ಭಾರತದ ಉಕ್ಕಿನ ಮನುಷ್ಯ’ ಎಂದೇ ಹೆಸರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೆನಪಿನಲ್ಲಿ ಪ್ರತಿ ವರ್ಷ ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಅಸಾಧಾರಣ ಕೊಡುಗೆ ನೀಡಿದ, ದೇಶದ ಮೊದಲ ಉಪ ಪ್ರಧಾನಮಂತ್ರಿ ಮತ್ತು ಗೃಹ ಸಚಿವರಾಗಿ ಅನುಪಮ ಸೇವೆ ಸಲ್ಲಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುವ ಮಹತ್ವದ ದಿನ ಇದು. ಈ ಬಾರಿ ಪಟೇಲ್ ಅವರ 150ನೇ ಜನ್ಮವರ್ಷ ಆಚರಿಸುತ್ತಿರುವುದು ವಿಶೇಷ.

1875ರ ಅಕ್ಟೋಬರ್ 31ರಂದು ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ಜನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್, ವೃತ್ತಿಯಲ್ಲಿ ವಕೀಲರು. 1918ರಲ್ಲಿ ಖೇಡಾ ಸತ್ಯಾಗ್ರಹವನ್ನು ಮುನ್ನಡೆಸಲು ಪಟೇಲ್ ಅವರನ್ನು ತಮ್ಮ ಉಪ ನಾಯಕರಾಗಿ ಮಹಾತ್ಮಾ ಗಾಂಧಿ ಆಯ್ಕೆ ಮಾಡಿದಾಗ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ದೊರಕಿತು. ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಸಾರ್ವಜನಿಕ ಸೇವೆಯಲ್ಲೂ ಕೊಡುಗೆ ನೀಡಿದ ಸರ್ದಾರ್ ಪಟೇಲ್, 1924ರಲ್ಲಿ, ಅಹಮದಾಬಾದ್ ನಗರಸಭೆಯ ಅಧ್ಯಕ್ಷರಾಗಿ ಒಳಚರಂಡಿ, ನೀರು ಸರಬರಾಜು, ನೈರ್ಮಲ್ಯ ವ್ಯವಸ್ಥೆಯನ್ನು ಉತ್ತಮಪಡಿಸಿದರು.

1928ರ ಬಾರ್ದೋಲಿ ಸತ್ಯಾಗ್ರಹದ ಮೂಲಕ ಸರ್ದಾರ್ ಪಟೇಲ್ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡರು. ಈ ರೈತ ಚಳವಳಿಯಲ್ಲಿ ಪಟೇಲ್ ಅವರ ಸಂಘಟನಾ ಸಾಮರ್ಥ್ಯ ಮತ್ತು ದಣಿವರಿಯದ ಕಾರ್ಯ ದೇಶದ ಗಮನ ಸೆಳೆಯಿತು. ಇಲ್ಲಿಯೇ ಅವರು 'ಸರ್ದಾರ್' ಎಂಬ ಬಿರುದು ಪಡೆದರು.

1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದ ಸರ್ದಾರ್ ಪಟೇಲ್, ನಾಗರಿಕ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಬಲವಾಗಿ ಪ್ರತಿಪಾದಿಸಿದರು.

1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪಟೇಲ್ ಅವರು, ಅದೇ ವರ್ಷ ಆಗಸ್ಟ್ 7ರಂದು ಅಂದಿನ ಬಾಂಬೆ ಸಂಸ್ಥಾನದ ಗೊವಾಲಿಯಾ ಮೈದಾನದಲ್ಲಿ ಮಾಡಿದ ಭಾಷಣ, ಸ್ವಾತಂತ್ರ್ಯ ಹೋರಾಟಗಾರರಿಗೆ ಹೊಸ ಹುರುಪು ನೀಡಿತು. ಸ್ವಾತಂತ್ರ್ಯ ಹೋರಾಟ ಒಂದು ತಾರ್ಕಿಕ ಅಂತ್ಯಕ್ಕೆ ಸಾಗುವಲ್ಲಿ ಸರ್ದಾರ್ ಪಟೇಲ್ ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಿತು.

ದೂರದೃಷ್ಟಿ ನಾಯಕತ್ವ:

ಸ್ವಾತಂತ್ರ್ಯದ ಸಮಯದಲ್ಲಿ, ದೇಶದಲ್ಲಿ 17 ಬ್ರಿಟಿಷ್ ಭಾರತೀಯ ಪ್ರಾಂತ್ಯಗಳು ಹಾಗೂ ಹಲವು ರಾಜಪ್ರಭುತ್ವ ಸಂಸ್ಥಾನಗಳು ಇದ್ದವು. ಭಾರತ ಸ್ವಾತಂತ್ರ್ಯ ಕಾಯ್ದೆ ಅನುಸಾರ ಬ್ರಿಟಿಷ್ ಭಾರತೀಯ ಪ್ರಾಂತ್ಯಗಳ ನಿಯಂತ್ರಣ ಭಾರತ ಸರ್ಕಾರಕ್ಕೆ ಹಸ್ತಾಂತರಗೊಂಡಿತು. ಆದರೆ ರಾಜಪ್ರಭುತ್ವ ಸಂಸ್ಥಾನಗಳು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಸೇರಬೇಕೆ ಅಥವಾ ಸ್ವತಂತ್ರವಾಗಿ ಇರಬೇಕೆ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಮುಕ್ತವಾಗಿ ಇರಿಸಲಾಯಿತು. ಇಂತಹ ರಾಜಕೀಯ ಸಂದಿಗ್ಧ, ಸೂಕ್ಷ್ಮ ಸಂದರ್ಭದಲ್ಲಿ ಅಂದಿನ ಗೃಹ ಸಚಿವರಾದ ಸರ್ದಾರ್ ಪಟೇಲ್ ಅವರು, ಭಾರತದ ಒಕ್ಕೂಟದಲ್ಲಿ ರಾಜ ಸಂಸ್ಥಾನಗಳು ವಿಲೀನವಾಗುವುದನ್ನು ಖಚಿತಪಡಿಸಲು ದೂರದೃಷ್ಟಿಯ, ಅಸಾಧಾರಣ ನಾಯಕತ್ವ ಪ್ರದರ್ಶಿಸಿದರು. ಅದರಲ್ಲೂ ಜುನಾಗಢ ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರುವಲ್ಲಿ ಹಾಗೂ ಹೈದರಾಬಾದ್ ವಿಮೋಚನೆ ಕಾರ್ಯಾಚರಣೆಯಲ್ಲಿ ಪಟೇಲ್ ಅವರು ತೋರಿದ ದಿಟ್ಟತನ ಭಾರತದ ಪಾಲಿಗೆ ಸಾರ್ವಕಾಲಿಕ ಸ್ಮರಣೀಯ ಸಂಗತಿ. ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯಾದ ಸೋಮನಾಥ ದೇವಾಲಯದ ಪುನರ್ ನಿರ್ಮಾಣದಲ್ಲೂ ಸರ್ದಾರ್ ಪಟೇಲ್ ಅವರ ಕೊಡುಗೆ ಸದಾ ಸ್ಮರಣೀಯ.

ವೈವಿಧ್ಯಮಯ ಸಂಸ್ಕೃತಿ, ಭಿನ್ನ ಆಚಾರ-ವಿಚಾರ, ಅಸಂಖ್ಯಾತ ಭಾಷೆಗಳು, ವಿವಿಧ ಧರ್ಮ-ಮತಗಳನ್ನು ಹೊಂದಿರುವ ಭಾರತದಂತಹ ಉಪಖಂಡವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸುವಲ್ಲಿ, ಏಕತೆಯ ಪ್ರಜ್ಞೆ ಮೂಡಿಸುವಲ್ಲಿ ಪಟೇಲ್ ಅವರು ತೋರಿದ ಬದ್ಧತೆ ಅನುಪಮ ಮತ್ತು ಅನನ್ಯ.

ಪುನರ್ ವಸತಿ ಹಾಗೂ ಶಾಂತಿ ಸ್ಥಾಪನೆ:

1947ರಿಂದ 1950ರ ವರೆಗೆ ಕೇಂದ್ರ ಗೃಹ ಸಚಿವ ಹಾಗೂ ಉಪಪ್ರಧಾನ ಮಂತ್ರಿಯಾಗಿದ್ದ ಸರ್ದಾರ್ ಪಟೇಲ್, ದೇಶ ವಿಭಜನೆ ನಂತರ ಪಾಕಿಸ್ತಾನದಿಂದ ಬಂದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಹಾಗೂ ಶಾಂತಿ ಸ್ಥಾಪನೆಯಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದರು.

ಏಕತಾ ಪ್ರತಿಮೆ:

ಪಟೇಲ್ ಅವರ ಅಸಾಧಾರಣ ಕೊಡುಗೆ ಸ್ಮರಿಸುವ ನಿಟ್ಟಿನಲ್ಲಿ ಗುಜರಾತ್ ನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ್ ಅಣೆಕಟ್ಟು ಪ್ರದೇಶದಲ್ಲಿ, 2018ರಲ್ಲಿ ಸರ್ದಾರ್ ಪಟೇಲ್ ಅವರ ಬೃಹತ್ ಏಕತಾ ಪ್ರತಿಮೆ ನಿರ್ಮಿಸಲಾಯಿತು. 182 ಮೀಟರ್ ಎತ್ತರದ ಈ ಪ್ರತಿಮೆ ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿದ್ದು, ಪ್ರವಾಸಿಗರ ಅತ್ಯಾಕರ್ಷಕ ತಾಣವಾಗಿದೆ.

ಏಕತಾ ದಿನ:

ಪ್ರತಿ ವರ್ಷ ಅಕ್ಟೋಬರ್ 31ರ ಪಟೇಲ್ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ನಿರ್ಧರಿಸಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸಾಕಾರಗೊಳಿಸಿದ ಏಕತೆ, ಸಮಗ್ರತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆ ಮುಂತಾದ ಮೌಲ್ಯಗಳನ್ನು ರಾಷ್ಟ್ರೀಯ ಏಕತಾ ದಿನ ನೆನಪಿಸುತ್ತದೆ. ದೇಶಾದ್ಯಂತ ರಾಷ್ಟ್ರೀಯ ಭಾವೈಕ್ಯತೆ ಕುರಿತ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುವುದು ವಿಶೇಷ. ಸರ್ಕಾರಿ ಸಂಸ್ಥೆಗಳು, ಶಾಲೆಗಳು ಮತ್ತು ಕಾಲೇಜುಗಳು ಏಕತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತವೆ. ಸರ್ದಾರ್ ಪಟೇಲ್ ಅವರ ಏಕೀಕೃತ ಭಾರತೀಯ ದೃಷ್ಟಿಕೋನವನ್ನು ಗೌರವಿಸಲು ನಡೆಯುವ ರಾಷ್ಟ್ರವ್ಯಾಪಿ ಮ್ಯಾರಥಾನ್ ‘ಏಕತಾ ಓಟ’ವು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರಲಿದೆ.

ಸಾಂಸ್ಕೃತಿಕ ಉತ್ಸವ:

ಪಟೇಲ್ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಈ ಬಾರಿಯ ರಾಷ್ಟ್ರೀಯ ಏಕತಾ ದಿವಸದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳು ದೇಶಾದ್ಯಂತ ಜರುಗಲಿವೆ. ಗುಜರಾತ್ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ಪಟೇಲ್ ಅವರ ಬೃಹತ್ ಪ್ರತಿಮೆ ಬಳಿ ಭವ್ಯ ಮೆರವಣಿಗೆ, ಪಥಸಂಚಲನ ಮತ್ತು ಸಾಂಸ್ಕೃತಿಕ ಉತ್ಸವ ನಡೆಯಲಿವೆ. ಪಥಸಂಚಲನದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳು ತಮ್ಮ ಕೌಶಲ್ಯ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಲಿವೆ. ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡದ ಅದ್ಭುತ ವಾಯು ಪ್ರದರ್ಶನವು ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿಸಲಿದೆ.

ಅಲ್ಲದೆ ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ಶಸ್ತ್ರ ಸೀಮಾ ಬಲ್ ತುಕಡಿಗಳು, ವಿವಿಧ ರಾಜ್ಯಗಳ ಎನ್ ಸಿ ಸಿ ಕೆಡೆಟ್ ಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಶ್ವದಳ, ಒಂಟೆ ಮೇಲೆ ಸವಾರಿ ಮಾಡುವ ತುಕಡಿಗಳು, ಸ್ಥಳೀಯ ಶ್ವಾನ ತಳಿಗಳ ಪ್ರದರ್ಶನ, ವಿವಿಧ ಸಮರ ಕಲೆಗಳು ಮತ್ತು ಯುದ್ಧ ಕವಾಯತುಗಳು ಸಹ ಇರುತ್ತವೆ.

ಶ್ವಾನ ಪ್ರದರ್ಶನದಲ್ಲಿ ಕರ್ನಾಟಕದ ಮುಧೋಳ ತಳಿ ಪ್ರಮುಖ ಆಕರ್ಷಣೆ. ಇತ್ತೀಚೆಗೆ, ಅಖಿಲ ಭಾರತ ಪೊಲೀಸ್ ಶ್ವಾನ ಸ್ಪರ್ಧೆಯಲ್ಲಿ, ಮುಧೋಳ ತಳಿ "ರಿಯಾ" ಪ್ರಥಮ ಸ್ಥಾನ ಗಳಿಸಿತು. ಈ ವರ್ಷದ ಪಥಸಂಚಲನದಲ್ಲಿ ಶ್ವಾನ ದಳವನ್ನು ‘ರಿಯಾ’ ಮುನ್ನಡೆಸಲಿದೆ.

ಇದಲ್ಲದೆ ಸ್ಥಳೀಯ ರಾಂಪುರ ತಳಿ ಶ್ವಾನಗಳು ತಮ್ಮ ಕೌಶಲ್ಯ ಪ್ರದರ್ಶಿಸಲಿವೆ. ಬಿಎಸ್ಎಫ್ನ ಭಾರತೀಯ ದೇಸಿ ತಳಿಯ ಶ್ವಾನಗಳು, ಗುಜರಾತ್ ಪೊಲೀಸರ ಕುದುರೆ ತುಕಡಿ, ಅಸ್ಸಾಂ ಪೊಲೀಸರ ಮೋಟಾರ್ಸೈಕಲ್ ಡೇರ್ಡೆವಿಲ್ ಶೋ ಮತ್ತು ಬಿಎಸ್ಎಫ್ನ ಒಂಟೆ ತುಕಡಿ ಮತ್ತು ಒಂಟೆ ಆರೋಹಿತ ಬ್ಯಾಂಡ್ ಒಳಗೊಂಡ ತುಕಡಿಯೂ ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ.

ರಾಷ್ಟ್ರೀಯ ಕೆಡೆಟ್ ಕೋರ್ ಮತ್ತು ಶಾಲಾ ಬ್ಯಾಂಡ್ಗಳು ತಮ್ಮ ಆಕರ್ಷಕ ಪ್ರದರ್ಶನಗಳೊಂದಿಗೆ ಸಮಾರಂಭದ ವೈಭವಕ್ಕೆ ಮೆರುಗು ನೀಡಲಿವೆ. ಯುವ ಎನ್ ಸಿ ಸಿ ಕೆಡೆಟ್ ಗಳು ತಮ್ಮ ಶಿಸ್ತು ಮತ್ತು ಉತ್ಸಾಹದ ಮೂಲಕ ‘ಏಕತೆಯೇ ಶಕ್ತಿ’ ಎಂಬ ಸಂದೇಶ ನೀಡಲಿದ್ದಾರೆ.

ಮಹಿಳಾ ಶಕ್ತಿ ಪ್ರದರ್ಶನ:

ಈ ಬಾರಿಯ ಪಥಸಂಚಲನದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವಿಕೆ ವಿಶೇಷವಾಗಿದೆ. ಪ್ರಧಾನಮಂತ್ರಿಯವರಿಗೆ ನೀಡಲಾಗುವ ಗೌರವ ರಕ್ಷೆಯ ಪಥಸಂಚಲನವನ್ನು ಮಹಿಳಾ ಅಧಿಕಾರಿಯೊಬ್ಬರು ಮುನ್ನಡೆಸಲಿದ್ದಾರೆ. ಸಿಐಎಸ್ಎಫ್ ಮತ್ತು ಸಿಆರ್ಪಿಎಫ್ ನ ಮಹಿಳಾ ಸಿಬ್ಬಂದಿ ಸಮರ ಕಲೆಗಳು ಮತ್ತು ಯುದ್ಧ ಕವಾಯತುಗಳನ್ನು ಪ್ರದರ್ಶಿಸಲಿದ್ದು, ಇದು ಭಾರತದ ಮಹಿಳಾ ಶಕ್ತಿ ಮತ್ತು ಸಾಹಸದ ಸಂಕೇತವಾಗಿದೆ.

ವಿವಿಧತೆಯಲ್ಲಿ ಏಕತೆಯ ಸಂದೇಶ ತಿಳಿಸುವ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರದರ್ಶಿನಿಗಳು ಸಹ ಪಥಸಂಚಲನದ ಭಾಗವಾಗಿರುತ್ತವೆ. ಇದರ ಜೊತೆಗೆ, ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 900 ಕಲಾವಿದರು ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ, ಇದು ನಮ್ಮ ಸಂಸ್ಕೃತಿಯ ಶ್ರೀಮಂತ ವೈವಿಧ್ಯತೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಿಂಬಿಸುತ್ತದೆ.

ಭಾರತ ಪರ್ವ

ಏಕತಾ ದಿವಸ ಅಂಗವಾಗಿ, ಇದೇ ನವೆಂಬರ್ 1 ರಿಂದ 15ರ ವರೆಗೆ, ಗುಜರಾತ್ ನ ಏಕತಾ ನಗರದಲ್ಲಿ ವಿವಿಧ ರಾಜ್ಯಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಆಹಾರ ಉತ್ಸವವನ್ನು ಒಳಗೊಂಡ ಭಾರತ ಪರ್ವ ನಡೆಯಲಿದೆ. ಈ ಉತ್ಸವವು ನವೆಂಬರ್ 15ರಂದು ಬಿರ್ಸಾ ಮುಂಡಾ ಜಯಂತಿಯನ್ನು ಆಚರಿಸುವ ವಿಶೇಷ ಕಾರ್ಯಕ್ರಮದೊಂದಿಗೆ ಸಮಾರೋಪಗೊಳ್ಳಲಿದೆ, ಇದು ನಮ್ಮ ಬುಡಕಟ್ಟು ಸಮುದಾಯಗಳ ಅದ್ಭುತ ಸಂಸ್ಕೃತಿಯ ಭಾಗ ಹಾಗೂ ಸಮಗ್ರತೆಯ ಮೂಲಕ ಏಕತೆಯನ್ನು ಬಿಂಬಿಸುವುದರ ಸಂಕೇತವಾಗಿದೆ.

ಒಟ್ಟಾರೆಯಾಗಿ, ರಾಷ್ಟ್ರೀಯ ಏಕತಾ ದಿವಸದ ಆಚರಣೆಗಳು ಭಾವೈಕ್ಯತೆ, ಸಾಮರಸ್ಯ ಮತ್ತು ದೇಶಭಕ್ತಿಯ ಚೈತನ್ಯವನ್ನು ಹುರಿದುಂಬಿಸುತ್ತದೆ. ನಾಗರಿಕರು ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಎಲ್ಲಾ ನಾಗರಿಕರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಈ ಭವ್ಯ ಮತ್ತು ಶುಭ ಆಚರಣೆಯ ಭಾಗವಾಗಲು ಪ್ರೋತ್ಸಾಹಿಸಲಾಗುತ್ತದೆ.

-ವೀರನಾರಾಯಣ

ಹಿರಿಯ ಪತ್ರಕರ್ತರು ಮತ್ತು ಇತಿಹಾಸ ತಜ್ಞರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವೀರನಾರಾಯಣ

contributor

Similar News