ಹಿಟ್ಲರ್ ಹಾಗು ನಾಝಿ ನೀತಿಯನ್ನು ಹೊಗಳುತ್ತಿದ್ದ ಸಾವರ್ಕರ್
ಖ್ಯಾತ ಪತ್ರಕರ್ತ ಅರುಣ್ ಶೌರಿ ಜೊತೆ ಬಿಬಿಸಿಯ ಪ್ರತಿನಿಧಿ ನಡೆಸಿದ ಸಂದರ್ಶನದ ಮುಂದುವರಿದ ಭಾಗ-2 ಇಲ್ಲಿದೆ
ಬಿಬಿಸಿ: ಸುಭಾಸ್ ಚಂದ್ರ ಬೋಸ್ ಕೂಡ ಸಾವರ್ಕರ್ ಬಗ್ಗೆ ಒಳ್ಳೇ ಮಾತುಗಳನ್ನು ಆಡಿರಲಿಲ್ಲ. ಮುಸ್ಲಿಮ್ ಲೀಗ್ ಹಾಗೆ ಈತನ ( ಸಾವರ್ಕರ್) ಸಂಘಟನೆಯಲ್ಲೂ ಪ್ರಾಮಾಣಿಕತೆ ಇಲ್ಲ… ಎಂದಿದ್ದರೆ?
ಶೌರಿ: ಸುಭಾಸ್ ಚಂದ್ರ ಬೋಸ್ ತಮ್ಮ ʻದ ಇಂಡಿಯನ್ ಸ್ಟ್ರಗಲ್ʼ ಹೆಸರಿನ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “ಜಿನ್ನಾಗೆ ತಾನು ಪಾಕಿಸ್ತಾನವನ್ನು ಹೇಗೆ ಪಡೆಯಬೇಕು ಎಂಬ ಒಂದೇ ಕನಸು ಇತ್ತು. ಅದನ್ನು ಬದಿಗಿಟ್ಟು, ನಮ್ಮ ಸ್ವಾತಂತ್ರ್ಯದ ಹೋರಾಟಕ್ಕೆ ಬೆಂಬಲ ನೀಡುವ ಯಾವ ಆಸಕ್ತಿಯೂ ಜಿನ್ನಾಗೆ ಇರಲಿಲ್ಲ. ನಾನು ಸಾವರ್ಕರ್ ಮತ್ತವರ ಅಂಥ ಸಣ್ಣಸಣ್ಣ ಗುಂಪುಗಳೊಂದಿಗೆ ಚರ್ಚಿಸಿದೆ. ಅವರ ಹಿಂದೂ ಮಹಾಸಭಾದಲ್ಲೂ ಒಗ್ಗಟ್ಟಾಗಿ ಹೋರಾಡುವ ಮನಸ್ಥಿತಿ ಕಾಣಲಿಲ್ಲ. ಇವರ ಸಹಕಾರ ಪಡೆಯಲು ಶ್ರಮಿಸುವುದೆಂದರೆ ಸುಮ್ನೆ ಟೈಮ್ ವೇಸ್ಟ್ ಎಂದು ನಾನು ಇವೆರಡನ್ನೂ ಬಿಟ್ಟೆ…” (ಎಂದು ಸುಭಾಸ್ ಚಂದ್ರ ಬೋಸ್ ಬರೆದಿದ್ದಾರೆ)
ಬಿಬಿಸಿ: ಅಂದರೆ, ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಿಸುವ ಬಗ್ಗೆ.
ಶೌರಿ: ಹೌದು. ಅದೂ ಹಿಂದೂ-ಮುಸ್ಲಿಮರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಸಮರವನ್ನು ಮುನ್ನಡೆಸುವ ಬಗ್ಗೆ (ಹಿಂದೂ ಮಹಾಸಭಾದವರಿಗೆ) ಯಾವ ಆಸಕ್ತಿಯೂ ಇರಲಿಲ್ಲ.
ಬಿಬಿಸಿ: ಅಂಡಮಾನದ ವಿಷಯಕ್ಕೆ ಬರೋಣ. ʻಸಾವರ್ಕರ್ ಅಲ್ಲಿದ್ದಾಗ ತನ್ನವರನ್ನೆಲ್ಲ ಮುಷ್ಕರಕ್ಕೆ ಪ್ರೇರೇಪಿಸಿದರು, ಆದರೂ ಸ್ವತಃ ಮುಷ್ಕರದಲ್ಲಿ ಭಾಗಿ ಆಗಿರಲಿಲ್ಲʼ ಎಂದು ನೀವು ಬರೆದಿದ್ದೀರಿ…
ಶೌರಿ: ಬಂಗಾಳದ ಪ್ರಸಿದ್ಧ ಹೋರಾಟಗಾರ ತ್ರೈಲೋಕ್ಯನಾಥ್ ಅವರೂ ಅಲ್ಲಿದ್ದರು. ಅವರು ಬರೆದ ದಾಖಲೆಗಳು ಹೀಗಿವೆ: ಬ್ರಿಟಿಷರು ಈ ಮುಷ್ಕರಕ್ಕೆ ಹೆದರಲಿಲ್ಲ. ಏಕೆಂದರೆ ಮುಷ್ಕರದಲ್ಲಿ ಭಾಗಿಯಾದವರೆಲ್ಲ ಚಿಲ್ಲರೆ ಕೈದಿಗಳು. ಇವರೊಂದಿಗೆ (ಸಾವರ್ಕರರಂಥ) ಪ್ರಮುಖ ರಾಜಕಾರಣಿಗಳು ಕೈಜೋಡಿಸಿಲ್ಲ. ಹಾಗಾಗಿ ಇದೇನೂ ಗಂಭೀರ ಸಮಸ್ಯೆ ಅಲ್ಲ ಎಂದು ಬ್ರಿಟಿಷರು ಪರಿಗಣಿಸಿದ್ದರು. ಇದೊಂದೇ ಅಲ್ಲ, ಈ ಸಾವರ್ಕರ್ ಸಹೋದರರು ಜೈಲರ್ ಜೊತೆ ಗೆಳೆತನ ಸಾಧಿಸಿದ್ದರು. ಆ ಮೂಲಕ ಅವರು ಕೆಲವೊಂದು ಸೌಲಭ್ಯಗಳನ್ನೂ ಪಡೆಯುತ್ತಿದ್ದರು. ಮುಷ್ಕರದಲ್ಲಿ ಭಾಗಿಯಾಗಿದ್ದರೆ ಅಂಥ ಸೌಲಭ್ಯಗಳಿಂದ ಸಾವರ್ಕರ್ ವಂಚಿತ ಆಗುತ್ತಿದ್ದರು ಎಂತಲೂ ತ್ರೈಲೋಕ್ಯನಾಥ್ ಬರೆದಿದ್ದಾರೆ. ಇದನ್ನು ನಾನು (ಶೌರಿ) ಹೇಳುತ್ತಿಲ್ಲ. ತೀರಾ ಕಷ್ಟದ ಸ್ಥಿತಿಯಲ್ಲಿ ತಮ್ಮ ಜಾಣ್ಮೆಯಿಂದ ಕೆಲವು ಸೌಲಭ್ಯಗಳನ್ನು ಪಡೆಯುವುದು ತಪ್ಪೇನಲ್ಲ. ಆದರೆ ಅದನ್ನು ಮರೆಮಾಚುವುದು ಸರಿಯಲ್ಲ…
ಬಿಬಿಸಿ: ಸಾವರ್ಕರ್ ತನಗೆ ದಯೆ ತೋರಿಸಬೇಕೆಂದು ಬ್ರಿಟಿಷರಿಗೆ ಸಲ್ಲಿಸಿದ ಅರ್ಜಿಯ ಬಗ್ಗೆ ಸಾಕಷ್ಟು ವಿವಾದ ಇದೆ. (ಛತ್ರಪತಿ) ಶಿವಾಜಿ ಕೂಡ ತನ್ನನ್ನು ಬಚಾವು ಮಾಡಿಕೊಳ್ಳಲೆಂದು ಇಂಥ ದಯಾ ಕೋರಿಕೆ ಸಲ್ಲಿಸಿದ ದಾಖಲೆ ಇದೆ ಎಂದು ನಿಮ್ಮ ಪುಸ್ತಕದಲ್ಲಿ ಹೇಳಿದ್ದೀರಿ. ಸಾವರ್ಕರ್ ಅದೇ ರೀತಿ ತನ್ನನ್ನು ತಾನು ಬಚಾವ್ ಮಾಡಿಕೊಂಡ ಬಗ್ಗೆ ನೀವು ಏನನ್ನುತ್ತೀರಿ?
ಶೌರಿ: ಶಿವಾಜಿ ಇಂಥ ಸಂಕಷ್ಟ ಎದುರಾದಾಗಲೆಲ್ಲ… ಔರಂಗ್‌ಜೇಬ್ ಅಥವಾ ಆತನ ಸೈನಿಕರಿಂದ ಕಷ್ಟ ಬಂದಾಗಲೆಲ್ಲ- ಇಂಥದ್ದೊಂದು ಕಾಗದವನ್ನು ಬರೆಯುತ್ತಿದ್ದರು. ʻನಿಮ್ಮ ಜೊತೆಗಿರುತ್ತೇನೆ. ನಿಮ್ಮ ದರ್ಬಾರಿನಲ್ಲಿರುತ್ತೇನೆ. ನೀವು ದಖ್ಖನ್ ಮೇಲೆ ದಾಳಿ ಮಾಡಿದಾಗ ನಿಮಗೆ ಸಹಾಯ ಮಾಡುತ್ತೇನೆʼ ಎಂದೆಲ್ಲ ಬರೆದಿದ್ದು ಹೌದು. ಆದರೆ ಆ ಕಷ್ಟದಿಂದ ಹೊರಕ್ಕೆ ಬಂದಮೇಲೆ ಮತ್ತೆ ಔರಂಗ್‌ಜೇಬ್ ವಿರುದ್ಧ ಮಸಲತ್ತು ಮುಂದುವರೆಸುತ್ತಿದ್ದರು. ಸಾವರ್ಕರ್ ಹೊರಕ್ಕೆ ಬಂದಮೇಲೆ ಹಾಗೆಲ್ಲ ಬ್ರಿಟಿಷರ ವಿರುದ್ಧ ಸಮರತಂತ್ರ ಹೂಡಿದರೆ? ಇಲ್ಲ; ಬಿಲ್ಕುಲ್ ಇಲ್ಲ. ಬ್ರಿಟಿಷರಿಗೆ ಸಹಾಯ ಮಾಡುತ್ತಲೇ ಹೋದರು. ಶಿವಾಜಿಯ ಉಲ್ಟಾ! ಆದರೂ ಹೇಳುವಾಗ ತನ್ನದು ಶಿವಾಜಿಯ ರಣನೀತಿ ಎಂದು ಹೇಳುವುದನ್ನು ಬಿಡಲಿಲ್ಲ.
ಬಿಬಿಸಿ: ಈಗ ನಾವು 1939ಕ್ಕೆ ಬರೋಣ. ಸಾವರ್ಕರ್ ಹಿಟ್ಲರ್ ನೀತಿಯ ಪ್ರತಿಪಾದಕ ಆಗಿದ್ದರು. ಹಿಟ್ಲರ್ ಹೇಗೆ ಯಹೂದ್ಯರ ನರಮೇಧದಲ್ಲಿ ತೊಡಗಿದ್ದಾನೆ ಎಂದು ಗೊತ್ತಿದ್ದರೂ ಕೂಡ ಸಾವರ್ಕರ್ ನಮ್ಮ ಮುಸ್ಲಿಮರ ಮೇಲೂ ಅಂಥದ್ದೇ ಪ್ರಹಾರ ಆಗಬೇಕು ಎಂದಿದ್ದರಲ್ಲ?
ಶೌರಿ: ಜರ್ಮನಿ ಮತ್ತು ಇಟಲಿಯಲ್ಲಿ ನಡೆಯುತ್ತಿರುವ ನರಮೇಧ 1938ರಲ್ಲೇ ಜಗತ್ತಿಗೆಲ್ಲ ಗೊತ್ತಾಗಿತ್ತು. ಆದರೂ ಸಾವರ್ಕರ್ ಬರೆಯುತ್ತಾರೆ: ʻಈ ನೆಹರೂ ಅಂಥವರಿಗೆ ದೇಶವನ್ನು ಮುನ್ನಡೆಸುವ ತಂತ್ರವೇ ಗೊತ್ತಿಲ್ಲ. ಹಿಟ್ಲರನ ಆಳ್ವಿಕೆಯಲ್ಲಿ ಜರ್ಮನಿ ಎಷ್ಟು ಶೀಘ್ರವಾಗಿ ಏಳಿಗೆ ಸಾಧಿಸಿದೆ…ʼ ಹೀಗೆಲ್ಲ ಬರೆಯುತ್ತಿದ್ದರು. ಅಷ್ಟೇ ಅಲ್ಲ, ಮುಂಬೈಯಲ್ಲಿದ್ದ ಜರ್ಮನ್ ಏಜಂಟರಿಗೆ ತಲುಪುವಂತೆ ಇಂಥ ಬರೆಹಗಳನ್ನು ಮಿತ್ರರ ಮೂಲಕ ರವಾನಿಸುತ್ತಿದ್ದರು. ಏಕೆಂದರೆ ತಾನು ಜರ್ಮನಿಯನ್ನು ಅದೆಷ್ಟು ಹೊಗಳುತ್ತಿದ್ದೇನೆಂದು ಅಲ್ಲಿನವರಿಗೂ ಗೊತ್ತಾಗಲಿ ಎಂದು ಸಾವರ್ಕರ್ ಬಯಸಿದ್ದರು. ಇವರಿಗೆ ನೈತಿಕತೆ ಎಂಬುದೇ ಇರಲಿಲ್ಲ. ಇವರು ನಾತ್ಸಿ (ನಾಝಿ) ನೀತಿಯನ್ನು ತನ್ನೊಳಗೆ ಆವಾಹಿಸಿಕೊಂಡಿದ್ದರು ಎಂದು ನನಗೆ ಅನ್ನಿಸುತ್ತಿದೆ. ನಾತ್ಸಿಗಳ ಪ್ರಕಾರ ಸತ್ಯಗಿತ್ಯ ಅನ್ನೋದು ಏನೂ ಇಲ್ಲ. ಈಗ ನಮ್ಮ ಉದ್ದೇಶ ಸಾಧನೆಗೆ ಏನೇನು ಬೇಕಾಗಿದೆಯೊ ಅದು ಮಾತ್ರ ಸತ್ಯ ಎಂದು ಅವರು ಪರಿಗಣಿಸಿದ್ದರು.
ಬಿಬಿಸಿ: ಶೌರಿಯವರೆ, ನಿಮ್ಮ ಬಗ್ಗೆ ಕೂಡ ಒಂದು ವರ್ಗದ ಜನರು ನಾನಾ ಟೀಕಾಪ್ರಹಾರ ಮಾಡುತ್ತಾರಲ್ಲ? ನೀವೊಬ್ಬ ಸುಪಾರಿ ಕೊಲೆಗಡುಕ; ಬುದ್ಧಿಜೀವಿ ಕೊಲೆಗಡುಕ. ಕೆಲವರ ಪ್ರಕಾರ ನೀವೀಗ ಸರ್ಕಾರದ ಜೊತೆಗಿಲ್ಲ. ಬಿಜೆಪಿಯ ಜೊತೆಗೂ ಇಲ್ಲ. ಇಂಥ ಟೀಕೆಗಳಿಗೆ ನೀವೇನನ್ನುತ್ತೀರಿ?
(ಈ ಪ್ರಶ್ನೆಗೆ ಶೌರಿಯವರ ಉತ್ತರ ನಾಳೆ 3ನೇ ಕಂತಿನಲ್ಲಿ)