×
Ad

ಪರಿಶಿಷ್ಟರ ಕುಡಿಯುವ ನೀರಿನ ಬಾವಿ ಮುಚ್ಚಿದ ಸವರ್ಣೀಯರು

Update: 2025-08-22 10:28 IST

ಯಾದಗಿರಿ: ಬಹುಕಾಲದಿಂದಲೂ ಸರಕಾರಿ ಬಾವಿಯ ನೀರನ್ನು ನಿತ್ಯ ಬಳಸಿಕೊಂಡು ಬದುಕು ಕಾಣುತ್ತಿರುವ ದಲಿತ ಸಮುದಾಯದ ಜನರನ್ನು ಮೇಲ್ಜಾತಿಯ ಪ್ರಭಾವಿ ವ್ಯಕ್ತಿಗಳು ಜಾಗ ನಮ್ಮದೆಂದು ದೌರ್ಜನ್ಯವೆಸಗಿ ಜೆಸಿಬಿ ಮೂಲಕ ಬಾವಿಯನ್ನು ಮುಚ್ಚಿರುವ ಘಟನೆ ವಡಿಗೇರಾ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.

ಗೋನಾಲ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೊಂಗಂಡಿ ಗ್ರಾಮದ ಸಿಮಾಂತರದಲ್ಲಿ ಬರುವ ಸರ್ವೇ ನಂ: 12/6- 03 ಗುಂಟೆ ಜಮೀನಿನಲ್ಲಿ ಸರಕಾರಿ ಬಾವಿಯು ಎಸ್‌ಸಿ ಮತ್ತು ಎಸ್‌ಟಿ ಜನಾಂಗಕ್ಕೆ ಸೇರಿದೆ. ಕುಡಿಯುವ ನೀರಿನ ಬಾವಿಯನ್ನು ಮುಚ್ಚಬೇಡಿಎಂದು ಅಂಗಲಾಚಿ ಬೇಡಿಕೊಂಡರೂ ನಮ್ಮ ಮೇಲೆ ಹಲ್ಲೆ ಮಾಡಿ ಕುಡಿಯುವ ನೀರಿಗೆ ಆಸರೆಯಾಗಿದ್ದ ಬಾವಿಯನ್ನು ಮುಚ್ಚಿದ್ದಾರೆ ಎಂದು ದಲಿತ ಸಮದಾಯದವರು ಆರೋಪಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರು ಕುಡಿಯುವ ನೀರಿಗೆ ಮತ್ತು ದನ ಕರಗಳಿಗೂ ಇದೇ ಬಾವಿಯ ನೀರನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಮೇಲ್ಜಾತಿಯ ವ್ಯಕ್ತಿಗಳು ಇದನ್ನು ಸಹಿಸಿಕೊಳ್ಳಲಾಗದೆ ಈ ರೀತಿ ಅನ್ಯಾಯ ಮಾಡಿದ್ದಾರೆ. ಇದು ನ್ಯಾಯ ಸಮ್ಮತವೇ. ನಮಗೆ ನ್ಯಾಯಯೋಚಿವಾಗಿ ಅದೇ ಬಾವಿಯನ್ನು ಮರು ನಿರ್ಮಾಣ ಮಾಡಿಕೊಡಬೇಕು ಎಂದು ದಲಿತ ಸಮುದಾಯದ ಜನರು ಮನವಿ ಮಾಡಿ ದ್ದಾರೆ.

ನಮ್ಮ ಮೇಲೆ ದೌರ್ಜನ್ಯ ಮತ್ತು ಅನ್ಯಾಯ ನಡೆದಿದೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಇಲ್ಲಿಯವರೆಗೆ ಯಾರೊಬ್ಬರೂ ಸ್ಥಳಕ್ಕೆ ಭೇಟಿ ನೀಡಿರುವುದಿಲ್ಲ. ಘಟನೆ ಬಗ್ಗೆ ಹಾಗೂ ನಮ್ಮ ಸಮಸ್ಯೆ ಕೇಳುತ್ತಿಲ್ಲ, ಕೂಡಲೇ ನಮಗೆ ಬಾವಿಯನ್ನು ನಿರ್ಮಿಸಿ ಕುಡಿಯಲು ನೀರು ವ್ಯವಸ್ಥೆ ಮಾಡಿಕೊಡಬೇಕೆಂದು ದಲಿತರು ಮನವಿ ಮಾಡಿದ್ದಾರೆ.

ಮೇಲ್ಜಾತಿಯರಿಂದ ಸರಕಾರಿ ಬಾವಿಯನ್ನು ಮುಚ್ಚಿ ನಮಗೆ ಅನ್ಯಾಯ ಮಾಡಿದ್ದಾರೆ ಮತ್ತು ಕೇಳಲು ಹೋದರೆ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ಹಿರಿಯರು ಇದೇ ಬಾವಿಯನ್ನು ಬಳಸುತ್ತಿದ್ದರು. ನಾವು ಕೂಡ ಇದೇ ಬಾವಿಯನ್ನು ನೀರನ್ನು ಬಳಸುತ್ತಿದ್ದೇವೆ. ಈಗ ಮೇಲ್ಜಾತಿಯ ವರ್ಗದವರು ಇದು ತಮ್ಮ ಜಾಗವೆಂದು ಬಾವಿ ಮುಚ್ಚಿದ್ದಾರೆ.

-ಭೀಮಾಶಂಕರ, ಗ್ರಾಮಸ್ಥ

ನಾವು ದುಡಿಯುವ ಜನರು ನಾವು ನಮ್ಮ ಜಮೀನುಗಳಿಗೆ ಹೋಗಿ ಬರುವಷ್ಟರಲ್ಲಿ ಬಾವಿ ಮುಚ್ಚಿದ್ದಾರೆ. ಇದು ಸರಕಾರಿ ಬಾವಿ ಆಗಿದೆ. ನಮ್ಮ ಅತ್ತೆ ಮಾವನವರು ಇದೇ ಬಾವಿ ನೀರು ಬಳಸುತ್ತಿದ್ದೇವೆ. ನಾವು ಅನಕ್ಷರಸ್ಥರು; ನಮಗೆ ಯಾವ ಕಾನೂನೂ ಗೊತ್ತಿಲ್ಲ. ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.

- ಬುಗ್ಗಮ್ಮ ,ಗ್ರಾಮಸ್ಥೆ

ಈ ಕುರಿತು ಸರ್ವೇ ಮಾಡಲು ಸರ್ವೇ ಇಲಾಖೆಗೆ ಪತ್ರ ಬರೆದಿದ್ದೇನೆ. ಯಾಕೆಂದರೆ ಸರಕಾರಿ ಜಾಗ 3 ಗುಂಟೆ ಇರುವುದರಿಂದ ಎಲ್ಲಿಂದ ಎಲ್ಲಿಗೆ ಇದೆ ಎಂದು ಗುರುತಿಸಿ ಸರಕಾರಿ ಜಾಗದಲ್ಲಿ ಬಾವಿ ಇದ್ದರೆ ಮುಚ್ಚಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ವಡಿಗೇರಾ ಪಿಎಸ್‌ಐ ಮತ್ತು ಇಒ ಅವರ ಗಮನಕ್ಕೆ ತಂದಿದ್ದೆನೆ.

- ಸಿ.ಬಿ ಪಾಟೀಲ್, ಪಿಡಿಒ, ಗೊನಾಲ ಗ್ರಾಮ ಪಂಚಾಯತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News