×
Ad

ಜಾತ್ಯತೀತ ಮತ್ತು ಸಮಾಜವಾದಿ ಕೇವಲ ಪೀಠಿಕೆಯ ಪದಗಳಷ್ಟೇ ಅಲ್ಲ...

ಭಾರತೀಯ ಜಾತ್ಯತೀತತೆ ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಗೊಳಿಸುವುದಿಲ್ಲ ಬದಲಾಗಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಸರ್ವಧರ್ಮ ಸಮಭಾವ ತತ್ವವನ್ನು ಸಾರುತ್ತದೆ. ಸಮಾಜವಾದಿ ತತ್ವ ಕ್ರಾಂತಿಗೆ ಕರೆನೀಡುವುದಿಲ್ಲ ಬದಲಾಗಿ ವ್ಯಕ್ತಿಯ ಘನತೆಯುಕ್ತ ಬದುಕನ್ನು ಖಾತ್ರಿಪಡಿಸುವುದು ರಾಜ್ಯದ ಹೊಣೆಗಾರಿಕೆ ಎಂಬ ಅಂಶವನ್ನು ಪ್ರತಿಪಾದಿಸುತ್ತದೆ ಎಂಬ ಸಂಗತಿಗಳನ್ನು ಗಮನಿಸಬಹುದಾಗಿದೆ.

Update: 2025-07-04 12:06 IST

ನಮ್ಮ ಸಂವಿಧಾನದ ಪೀಠಿಕೆಯ ಕುರಿತು ಎದ್ದಿರುವ ಪ್ರಮುಖ ಪ್ರಶ್ನೆಗಳ ಕುರಿತ ಭೌದ್ಧಿಕ ಜಿಜ್ಞಾಸೆಯೊಂದನ್ನು ಇನ್ನಷ್ಟು ವಿಸ್ತರಿಸುವ ಮತ್ತು ಸದರಿ ಚರ್ಚೆಯನ್ನು ಪರ/ವಿರೋಧ ಎಂಬ ವೈರುಧ್ಯಗಳ ಆಚೆಗೆ ಈ ಕಾಲಕ್ಕೆ ತೀರಾ ಅಗತ್ಯವಾದ ಸಾಂವಿಧಾನಿಕ ವಿವೇಕದ ಹುಡುಕಾಟವೊಂದರ ಭಾಗವಾಗಿ ಈ ಲೇಖನ ಇದೆ.

ಇತ್ತೀಚೆಗೆ ದೇಶದ ಅತಿದೊಡ್ಡ ಸಾಂಸ್ಕೃತಿಕ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರು ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಇರುವ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದಗಳು ಅಂಬೇಡ್ಕರ್ ಬರೆದ ಮೂಲ ಸಂವಿಧಾನದ ಭಾಗವಾಗಿರಲಿಲ್ಲ, ಬದಲಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ಅಧ್ಯಾಯವಾದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವ ಮೂಲಕ ಸೇರಿಸಲಾದ ಪದಗಳಾಗಿವೆ. ಆದ್ದರಿಂದ ಅವುಗಳನ್ನು ಸಂವಿಧಾನದ ಪೂರ್ವಪೀಠಿಕೆಯಿಂದ ತೆಗೆದು ಹಾಕಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಮತ್ತು ಲಿಖಿತ ಸಂವಿಧಾನ ಹೊಂದಿರುವ ಭಾರತದಲ್ಲಿ ಎಲ್ಲಾ ನಾಗರಿಕರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ನಮ್ಮ ಘನ ಸಂವಿಧಾನವೇ ನೀಡಿರುವುದರಿಂದ ಹೊಸಬಾಳೆಯವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ಅವರು ಎತ್ತಿರುವ ಪ್ರಶ್ನೆಯ ಅರ್ಥವನ್ನು ಇನ್ನಷ್ಟು ಸ್ಪಷ್ಟಪಡಿಸಿ ಎಂದು ನಾವು ಕೇಳಬೇಕಿದೆ. ಏಕೆಂದರೆ ಕಳೆದ 10 ವರ್ಷಗಳಿಂದ ರಾಜ್ಯಶಾಸ್ತ್ರ, ಅದರ ಭಾಗವಾಗಿ ಸಂವಿಧಾನವನ್ನೂ ಬೋಧಿಸುತ್ತಿರುವ ನನಗೆ ದತ್ತಾತ್ರೇಯ ಅವರು ಎತ್ತಿರುವ ಪ್ರಶ್ನೆ ಅಪೂರ್ಣವಾಗಿದೆ ಅಥವಾ ಅವರು ತಮ್ಮ ಪ್ರಶ್ನೆಯನ್ನು ಇನ್ನಷ್ಟು ಸ್ವಷ್ಟಪಡಿಸುವ ಜರೂರು ಇದೆ ಅನ್ನಿಸುತ್ತಿದೆ.

ಅಂದರೆ ಹೊಸಬಾಳೆಯವರು ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಿಂದ ಮಾತ್ರ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆಯಬೇಕು ಎಂದು ಸೂಚಿಸುತ್ತಿದ್ದಾರೆಯೋ...? ಅಥವಾ ನಮ್ಮ ಇಡೀ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳನ್ನೆ ಸಂವಿಧಾನದಿಂದ ತೆಗೆಯಬೇಕು ಎಂದು ಸೂಚಿಸುತ್ತಿದ್ದಾರೆಯೋ? ಎಂಬ ಅಂಶವನ್ನು ಅವರು ಸ್ಪಷ್ಟಪಡಿಸಬೇಕಿದೆ.

ಅವರ ಉದ್ದೇಶ ಕೇವಲ ಸಂವಿಧಾನದ ಪೂರ್ವಪೀಠಿಕೆಯಲ್ಲಿನ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆಯುವುದೇ ಆಗಿದ್ದರೆ(ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪೂರ್ವ ಪೀಠಿಕೆಯನ್ನು ಸಂವಿಧಾನದ ಮೂಲ ಲಕ್ಷಣಗಳ ಭಾಗವಾಗಿ ಗುರುತಿಸಿರುವುದರಿಂದ ಅದನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಸಾಧ್ಯವಿಲ್ಲ. ಅದು ಬೇರೆಯದೇ ಚರ್ಚೆ) ಆದ್ದರಿಂದ ‘ಸಂವಿಧಾನದ ಒಟ್ಟು ಚೈತನ್ಯಕ್ಕೆ’ ದೊಡ್ಡ ಸಮಸ್ಯೆ ಏನು ಆಗುವುದಿಲ್ಲ. ಏಕೆಂದರೆ ಈ ಎರಡು ಪರಿಭಾಷೆಗಳು ಕೇವಲ ಪದಗಳಷ್ಟೆ ಅಲ್ಲ..! ನಮ್ಮ ಸಂವಿಧಾನದ ಪೀಠಿಕೆಯಿಂದ ಅಂತ್ಯದವರೆಗೂ ಇಡೀ ಸಂವಿಧಾನವನ್ನು ಅವರಿಸಿರುವ ಮೂಲ ತತ್ವಗಳಾಗಿವೆ ಹಾಗಾಗಿ ಪಿಠಿಕೆಯಲ್ಲಿನ ಈ ಪದಗಳ ಹೊರತಾಗಿಯೂ ಭಾರತದ ಸಂವಿಧಾನ ‘ಜಾತ್ಯತೀತ ಮತ್ತು ಸಮಾಜವಾದಿಯಾಗಿಯೇ’ ಉಳಿಯಲಿದೆ. ಈ ಹಿನ್ನಲೆಯಲ್ಲಿ ನೋಡಿದರೆ ಹೊಸಬಾಳೆಯವರ ಪ್ರಶ್ನೆ ಯಾವ ತಾರ್ಕಿಕತೆಯನ್ನು ಹೊಂದಿಲ್ಲದ ಬೀಸು ರಾಜಕೀಯ ಹೇಳಿಕೆ ಅನ್ನಿಸುತ್ತದೆ.

ಅಥವಾ ಅವರು, ನನ್ನ ಪ್ರಶ್ನೆ ಕೇವಲ ಸಂವಿಧಾನದ ಪೂರ್ವ ಪೀಠಿಕೆಯಲ್ಲಿನ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ ಮತ್ತು ಸಮಾಜವಾದಿ ಮೌಲ್ಯಗಳನ್ನೇ ತೆಗೆಯಬೇಕು ಎನ್ನುವುದಾಗಿದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದರೆ ನಿಜವಾದ ಸಮಸ್ಯೆಯೊಂದು ಹುಟ್ಟಿಕೊಳ್ಳುತ್ತದೆ.

ಏಕೆಂದರೆ ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪರಿಭಾಷೆಗಳನ್ನು ಪೂರ್ವ ಪೀಠಿಕೆಯಲ್ಲಿನ ಪದಗಳಾಗಿ ನೋಡಿ ಓದುವುದಕ್ಕೂ ಅವು ನಮ್ಮ ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯವನ್ನು ನೆಲೆಗೊಳಿಸುವ ಮೂಲ ತತ್ವ ಮತ್ತು ಚೈತನ್ಯವಾಗಿ ಓದಿ ಗ್ರಹಿಸುವುದಕ್ಕೂ ಬಹಳ ಅಂತರವಿದೆ.

ಉದಾಹರಣೆಗೆ ನಮ್ಮ ಸಂವಿಧಾನದ ರಾಜ್ಯನಿರ್ದೇಶಕ ತತ್ವಗಳಲ್ಲಿನ 38ನೇ ವಿಧಿ ನಮ್ಮ ಸಮಾಜದಲ್ಲಿನ ಆರ್ಥಿಕ ಅಸಮಾನತೆಗಳನ್ನು ನಿವಾರಿಸುವುದು ರಾಜ್ಯದ ಮೂಲಭೂತ ಕರ್ತವ್ಯ ಎಂದು ಸೂಚಿಸುತ್ತದೆ, ಜೊತೆಗೆ ಅದೇ ಭಾಗದ 39ನೇ ವಿಧಿ ಜನರ ಘನತೆಯ ಬದುಕಿಗೆ ಅಗತ್ಯವಾದ ಕನಿಷ್ಠ ಸವಲತ್ತುಗಳನ್ನು ಒದಗಿಸುವುದು, ಕಾರ್ಮಿಕರ ಆಹಾರ ಮತ್ತು ಆರೋಗ್ಯದ ಹಕ್ಕುಗಳನ್ನು ಖಾತ್ರಿಪಡಿಸುವುದು, ಸಂಪನ್ಮೂಲಗಳ ಸಮಾನ ಹಂಚಿಕೆಗೆ ಪೂರಕವಾದ ನೀತಿಗಳನ್ನು ರೂಪಿಸುವುದು, ಕಾರ್ಮಿಕರ ಶೋಷಣೆಯನ್ನು ತಪ್ಪಿಸಲು ಸೂಕ್ತವಾದ ನೀತಿಗಳನ್ನು ಜಾರಿಗೆ ತರುವುದು ರಾಜ್ಯದ ಮೂಲ ಧ್ಯೇಯವಾಗಿರಬೇಕು ಎಂದು ಸೂಚಿಸುತ್ತದೆ.

39ಎ ವಿಧಿ ಎಲ್ಲಾ ನಾಗರಿಕರಿಗೂ ಮುಖ್ಯವಾಗಿ ಬಡವರಿಗೆ ಸಮಾನವಾಗಿ ನ್ಯಾಯ ದಕ್ಕಬೇಕು ಎಂಬ ಕಾರಣಕ್ಕೆ ಉಚಿತ ಕಾನೂನು ನೆರವನ್ನು ನೀಡುವಂತೆ ರಾಜ್ಯವನ್ನು ನಿರ್ದೇಶಿಸುತ್ತದೆ ಈ ಎಲ್ಲಾ ಸಂಗತಿಗಳು ಬಾಬಾ ಸಾಹೇಬರು ಬರೆದ ಸಂವಿಧಾನದ ಭಾಗವಾಗಿಯೇ ಇರುವಂತಹವು.

1980ರ ಪ್ರಖ್ಯಾತ ಮಿನರ್ವ ಮಿಲ್ ವರ್ಸಸ್ ಭಾರತೀಯ ಒಕ್ಕೂಟ ಹಾಗೂ 1983ರ ಡಿ.ಎಸ್. ನಾವಕರ ವರ್ಸಸ್ ಭಾರತೀಯ ಒಕ್ಕೂಟ ಪ್ರಕರಣಗಳಲ್ಲಿ ಸಮಾಜವಾದಿ ತತ್ವ ಎಂದರೆ ಅಸಮಾನತೆಯನ್ನು ತೊಡೆದುಹಾಕುವುದು, ವ್ಯಕ್ತಿಗೆ ಕನಿಷ್ಠ ಘನತೆಯ ಬದುಕನ್ನು ಖಾತ್ರಿಗೊಳಿಸುವುದು ಎಂಬ ಅಭಿಪ್ರಾಯವನ್ನು ಉಚ್ಚನ್ಯಾಯಾಲಯ ವ್ಯಕ್ತಪಡಿಸಿದೆ, ಹೊಸಬಾಳೆಯವರು ಈ ಎಲ್ಲಾ ಅಂಶಗಳನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಸೂಚಿಸುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ.

ಜಾತ್ಯತೀತ ಎಂಬ ತಾತ್ವಿಕತೆ ಪೀಠಿಕೆಯ ಆಚೆಗೆ ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಭಾಗವೂ ಆಗಿದೆ. ಉದಾಹರಣೆಗೆ ಸಂವಿಧಾನದ 14 ಮತ್ತು 15ನೇ ವಿಧಿಗಳು ಯಾವುದೇ ನಾಗರಿಕನನ್ನು ಜಾತಿ, ಧರ್ಮ, ಜನಾಂಗ ಮತ್ತು ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಎನ್ನುವ ಸ್ಪಷ್ಟ ಚೌಕಟ್ಟನ್ನು ಒದಗಿಸಿದೆ. 16(1) ವಿಧಿ ಧರ್ಮದ ಆಧಾರದಲ್ಲಿ ರಾಜ್ಯ ಸಾರ್ವಜನಿಕ ಹುದ್ದೆಯನ್ನು ನಿರಾಕರಿಸುವುದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಎನ್ನುತ್ತದೆ. 25,26,27ನೇ ವಿಧಿಗಳು ಪ್ರತಿಯೊಬ್ಬ ನಾಗರಿಕನಿಗೂ ನಾವು ಇಚ್ಛಿಸುವ ಧರ್ಮವನ್ನು ಪಾಲಿಸುವ, ಆರಾಧಿಸುವ ಮತ್ತು ಪ್ರತಿಪಾದಿಸುವ ಹಕ್ಕನ್ನು ಖಾತ್ರಿಪಡಿಸುತ್ತದೆ. ಜೊತೆಗೆ ಇಸ್ಲಾಮ್, ಕ್ರಿಶ್ಚಿಯನ್, ಜೈನಿಸಂ, ಬುದ್ಧಿಸಂ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತ ಧರ್ಮಗಳಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕನ್ನು ಸಂವಿಧಾನದ 29 ಮತ್ತು 30ನೇ ವಿಧಿಗಳು ಖಾತ್ರಿಪಡಿಸುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ಆಧಾರದಲ್ಲಿ ಸಮಾಜದಲ್ಲಿರುವ ಸಂಘರ್ಷ ನಿವಾರಿಸುವ ಸಲುವಾಗಿ ‘ರಾಜ್ಯ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂಬ ಸ್ಪಷ್ಟ ನಿರ್ದೇಶನವನ್ನು ನಮ್ಮ ಸಂವಿಧಾನ ರಾಜ್ಯಕ್ಕೆ ನೀಡಿದೆ’ ಸಂವಿಧಾನದಲ್ಲಿನ ಈ ಎಲ್ಲಾ ‘ಜಾತ್ಯತತೆಯ’ ತಾತ್ವಿಕತೆಯೂ ಬಾಬಾ ಸಾಹೇಬರು ಬರೆದ ಸಂವಿಧಾನದ ಭಾಗವೇ ಆಗಿದೆ.

ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯದಲ್ಲಿಯೂ ಜಾತ್ಯತೀತ ನಿಲುವನ್ನು ನಮ್ಮ ಸಂವಿಧಾನ ಎತ್ತಿಹಿಡಿದಿದೆ. ಉದಾಹರಣೆಗೆ 54(ಎ) ವಿಧಿ ನಮ್ಮ ದೇಶದ ಪರಂಪರೆ ಮತ್ತು ಬಹುಸಂಸ್ಕೃತಿಯನ್ನು ಗೌರವಿಸುವ ಸಲುವಾಗಿ ಎಲ್ಲಾ ನಾಗರಿಕರು ಧಾರ್ಮಿಕ ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಹೊಂದಿರಬೇಕು ಮತ್ತು ಸಹ ನಾಗರಿಕರಲ್ಲಿ ಆ ಅಂಶವನ್ನು ಉತ್ತೇಜಿಸುವುದು ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎನ್ನುವ ಮೂಲಕ ಧಾರ್ಮಿಕ ಸಹಿಷ್ಣುತೆ ರಾಜ್ಯದ ನೀತಿಯೊಂದಷ್ಟೇ ಅಲ್ಲ, ಬದಲಾಗಿ ಪ್ರಜೆಗಳ ಕರ್ತವ್ಯವೂ ಹೌದು ಎಂಬ ಅರಿವನ್ನು ಸಂವಿಧಾನ ನಮ್ಮ ಮುಂದಿಟ್ಟಿದೆ.

ಈ ಎಲ್ಲಾ ಸಂಗತಿಗಳನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಹೊಸಬಾಳೆಯವರ ಪ್ರಶ್ನೆ ಸೂಚಿಸುತ್ತಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಿದರೆ ಅವರು ಎತ್ತಿರುವ ಪ್ರಶ್ನೆ ಮೂಲ ಅರ್ಥ ನಿಚ್ಚಳಗೊಳ್ಳುತ್ತದೆ ಮತ್ತು ಸಂವಾದ ಮುಂದಕ್ಕೆ ಹೋಗುತ್ತದೆ. ಇಲ್ಲವಾದರೆ ಇದೊಂದು ‘ರಾಜಕೀಯ ಹೇಳಿಕೆಗೆ’ ಸೀಮಿತಗೊಂಡು ಮಾಧ್ಯಮಗಳ ಚರ್ಚೆಗಳ ನಡುವೆ ಕಳೆದು ಹೋಗುತ್ತದೆ.

ಈ ಗುಂಪಿನವರ ಇನ್ನೊಂದು ಹಳೆಯ ವಾದವೂ ಇದೆ. ಜಾತ್ಯತೀತ ಮತ್ತು ಸಮಾಜವಾದಿ ಪರಿಭಾಷೆಗಳು ಭಾರತೀಯ ಸಾಮಾಜಿಕತೆಯನ್ನು ಅಭಿವ್ಯಕ್ತಿಸುವುದಿಲ್ಲ ಅವು ಪಶ್ಚಿಮದ ಪರಿಭಾಷೆಗಳು ಅನ್ನುವುದು. ಈ ವಾದವನ್ನು ಭಾರತೀಯ ಸಂದರ್ಭದಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪರಿಭಾಷೆಗಳು ಏನನ್ನು ಧ್ವನಿಸುತ್ತವೆ ಮತ್ತು ಅವು ಹೇಗೆ ಪಶ್ಚಿಮದಲ್ಲಿನ ಅರ್ಥಕ್ಕಿಂತ ಭಿನ್ನವಾಗಿ ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂಬ ಕುರಿತು ವ್ಯಾಪಕವಾದ ವಿಶ್ಲೇಷಣೆಗಳು ನಮ್ಮ ನಡುವೆ ಇವೆ.

ಉದಾಹರಣೆಗೆ ಭಾರತೀಯ ಜಾತ್ಯತೀತತೆ ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಗೊಳಿಸುವುದಿಲ್ಲ ಬದಲಾಗಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಸರ್ವಧರ್ಮ ಸಮಭಾವ ತತ್ವವನ್ನು ಸಾರುತ್ತದೆ. ಸಮಾಜವಾದಿ ತತ್ವ ಕ್ರಾಂತಿಗೆ ಕರೆನೀಡುವುದಿಲ್ಲ ಬದಲಾಗಿ ವ್ಯಕ್ತಿಯ ಘನತೆಯುಕ್ತ ಬದುಕನ್ನು ಖಾತ್ರಿಪಡಿಸುವುದು ರಾಜ್ಯದ ಹೊಣೆಗಾರಿಕೆ ಎಂಬ ಅಂಶವನ್ನು ಪ್ರತಿಪಾದಿಸುತ್ತದೆ ಎಂಬ ಸಂಗತಿಗಳನ್ನು ಗಮನಿಸಬಹುದಾಗಿದೆ.

ಅಂತಿಮವಾಗಿ ಹೊಸಬಾಳೆಯವರು ಏನನ್ನು ಸಂವಿಧಾನದಿಂದ ತೆಗೆಯಲು ಸೂಚಿಸುತ್ತಿದ್ದಾರೆ ಮತ್ತು ಯಾವ ಕಾರಣಕ್ಕೆ ತೆಗೆಯಲು ಸೂಚಿಸುತ್ತಿದ್ದಾರೆ ಎಂಬುದನ್ನು ಅವರೇ ಇನ್ನಷ್ಟು ಸ್ಪಷ್ಟಪಡಿಸಬೇಕಿದೆ. ಆ ಮಾದರಿಯ ಪ್ರಶ್ನೆಗಳನ್ನು ಕೇಳುವುದೇ ನಮ್ಮ ಸಂವಾದ ಮುಂದುವರಿಸುವ ಒಳ್ಳೆಯ ಹಾದಿ ಅನ್ನಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕಿರಣ್ ಎಂ. ಗಾಜನೂರು

contributor

Similar News