ಜಾತ್ಯತೀತ, ಸಮಾಜವಾದ ಮತ್ತು ಡಾ.ಅಂಬೇಡ್ಕರ್ ಚಿಂತನೆಗಳು
ಡಾ.ಅಂಬೇಡ್ಕರ್ ಅವರನ್ನು ಕುರಿತ ಮೂರನೇ ವ್ಯಕ್ತಿಗಳ ವಿಚಾರಗಳ ಆಕರಗಳನ್ನು ಇಟ್ಟುಕೊಂಡು ಸ್ವತಃ ಡಾ. ಅಂಬೇಡ್ಕರ್‌ರವರು ಪ್ರತಿಪಾದಿಸುವ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಪೀಠಿಕೆಯಲ್ಲಿ ಸೇರಿಸಿರಲಿಲ್ಲ ಎಂದು ವಾದಿಸುವುದು ಮೊಂಡುವಾದವಲ್ಲದೆ ಬೇರೇನಲ್ಲ. ಈ ನಿಟ್ಟಿನಲ್ಲಿ ಅಂಥವರ ಮೊಂಡುವಾದಕ್ಕೆ ಸರಕಾರಗಳೇ ಪ್ರಕಟಿಸಿರುವ ‘ಅಂಬೇಡ್ಕರ್ ಅವರ ಬರಹಗಳು, ಭಾಷಣಗಳು’ ಕೃತಿಗಳಲ್ಲಿ ಉತ್ತರವಿದೆ.
ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂವಿಧಾನ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದು ಹಾಕಬೇಕು ಎಂದಿದ್ದಾರೆ. ಹೊಸಬಾಳೆಯವರ ಈ ವಿಚಾರಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಉಪಸಭಾಪತಿ ಜಗದೀಪ್ ಧನ್ಕರ್ ಬೆಂಬಲಿಸಿ ಮಾತನಾಡಿದ್ದಾರೆ. ಇವರೆಲ್ಲರೂ ಇದಕ್ಕಾಗಿ ಆಧಾರ ತೆಗೆದುಕೊಳ್ಳುವುದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರು ಈ ಪದಗಳನ್ನು ಸಂವಿಧಾನದಲ್ಲಿ ಸೇರಿಸಿರಲಿಲ್ಲ, ಈ ಪದಗಳನ್ನು ವಿರೋಧಿಸಿದ್ದರು ಮತ್ತು ಇವುಗಳನ್ನು 1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಸೇರಿಸಿದರು ಎಂಬುದನ್ನು. ಈ ನಿಟ್ಟಿನಲ್ಲಿ ಇಲ್ಲಿ ಚರ್ಚಿಸಬೇಕಾದ ವಿಷಯವೆಂದರೆ ಡಾ. ಅಂಬೇಡ್ಕರ್ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ವಿರೋಧಿಸಿದ್ದರೆ? ಜಾತ್ಯತೀತ ಮತ್ತು ಸಮಾಜವಾದಿ ಈ ಪದಗಳ ಬಗ್ಗೆ (ವಾಸ್ತವವಾಗಿ ಅವು ಬರೀ ಪದಗಳಲ್ಲ, ಅವು ಆಡಳಿತ ತತ್ವಗಳು) ಡಾ.ಅಂಬೇಡ್ಕರ್‌ರ ನಿಲುವೇನಾಗಿತ್ತು ಎಂದು ಸತ್ಯ ತಿಳಿದುಕೊಳ್ಳುವುದು ಈಗ ಅತಿ ತುರ್ತು. ಇಲ್ಲದಿದ್ದರೆ ಸಂಘ ಪರಿವಾರದ ಅಂಬೇಡ್ಕರ್‌ರ ತಿರುಚಿದ ವಿಚಾರಗಳ ಅಪಪ್ರಚಾರವೇ ಸತ್ಯ ಎಂದಾಗಿಬಿಡುತ್ತದೆ.
ಮೊದಲಿಗೆ ಜಾತ್ಯತೀತ ಅಥವಾ ಸೆಕ್ಯುಲರ್ ಪದದ ಬಗ್ಗೆ ಚರ್ಚಿಸುವುದು ಅಗತ್ಯ. ಸೆಕ್ಯುಲರ್ ಈ ಪದವನ್ನು ಕನ್ನಡದಲ್ಲಿ ಜಾತ್ಯತೀತ ಎಂದು ಅನುವಾದಿಸಲಾಗಿದೆ. ವಾಸ್ತವವಾಗಿ ಅದನ್ನು ಧರ್ಮಾತೀತ ಎಂದು ಹೇಳಬೇಕು. ಕೇಂಬ್ರಿಜ್ ಡಿಕ್ಷನರಿ ಪ್ರಕಾರ ಸೆಕ್ಯುಲರ್ ಅಥವಾ ಜಾತ್ಯತೀತ ಎಂದರೆ ಧರ್ಮದ ಜೊತೆ ಯಾವುದೇ ಸಂಬಂಧವಿಲ್ಲದ್ದು ಎಂದು ಅರ್ಥ. ಅಂದರೆ ಭಾರತ ಸಂವಿಧಾನ ಸ್ಥಾಪಿತ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಯಾವುದೇ ಧರ್ಮದ ಜೊತೆ ಸಂಬಂಧ ಹೊಂದುವಂತಿಲ್ಲ ಅಥವಾ ಯಾವುದೇ ಧರ್ಮವನ್ನು ಸರಕಾರದ ಧರ್ಮ ಎಂದು ಘೋಷಿಸುವಂತಿಲ್ಲ. ಮೂಲತಃ ಸಂವಿಧಾನ ಪೀಠಿಕೆಯಲ್ಲಿ ಡಾ.ಅಂಬೇಡ್ಕರ್ ಅವರು ಈ ಪದಗಳನ್ನು ಸೇರಿಸಿಲ್ಲವೆಂದರೆ ಡಾ. ಅಂಬೇಡ್ಕರ್‌ರವರು ಸೆಕ್ಯುಲರ್ ಅಥವಾ ಜಾತ್ಯತೀತದ ವಿರುದ್ಧ ಇದ್ದರೇ ಎಂದು ಕೇಳಿಕೊಳ್ಳಬೇಕಾಗುತ್ತದೆ. ಆದರೆ ವಾಸ್ತವವೆಂದರೆ ಡಾ. ಅಂಬೇಡ್ಕರ್‌ರವರು ಸಂವಿಧಾನ ರಚಿಸುವ ಪೂರ್ವದಲ್ಲೇ ತಮ್ಮದೇ ಒಂದು ಪುಟ್ಟ 100 ಪುಟಗಳ ಸಂವಿಧಾನ ರಚಿಸಿರುತ್ತಾರೆ. ಅದಕ್ಕೆ ‘ಭಾರತ ಸಂಯುಕ್ತ ಸಂಸ್ಥಾನಗಳ ಸಂವಿಧಾನ’ ಎಂದು ಶೀರ್ಷಿಕೆ ಕೂಡ ಇಟ್ಟಿರುತ್ತಾರೆ. ಅದನ್ನು ಅವರು ಸ್ವಾತಂತ್ರ್ಯಾಪೂರ್ವದಲ್ಲೇ, ಅಂದರೆ 1947 ಮಾರ್ಚ್ 15ರಂದು ‘ಸ್ಟೇಟ್ಸ್ ಆಂಡ್ ಮೈನಾರಿಟಿಸ್’ ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲೂ ಪ್ರಕಟಿಸುತ್ತಾರೆ. ಆ ಪುಸ್ತಕದಲ್ಲಿ ಇರುವುದೇನು? ಆ ಪುಸ್ತಕದ ಪುಟ 17ರಲ್ಲಿ ಡಾ. ಅಂಬೇಡ್ಕರ್‌ರವರು ಹೇಳುತ್ತಾರೆ: ‘‘ರಾಜ್ಯವು (ಸರಕಾರ) ಯಾವುದೇ ಧರ್ಮವನ್ನು ತನ್ನ ಅಧಿಕೃತ ಧರ್ಮವೆಂದು ಪರಿಗಣಿಸುವಂತಿಲ್ಲ’’. ಅಂದ ಹಾಗೆ ಡಾ. ಅಂಬೇಡ್ಕರ್‌ರವರು ಹೇಳುವ ಈ ವಾಕ್ಯದ ಅರ್ಥ ಆದರೂ ಏನು? ಅದು ಸೆಕ್ಯುಲರ್ ಅಥವಾ ಜಾತ್ಯತೀತ ಎಂದು ಅರ್ಥವೋ ಅಥವಾ ಬೇರೆ ಏನಾದರೂ ಇದೆಯೋ ಎಂಬುದು. ಖಂಡಿತ, ಡಾ. ಅಂಬೇಡ್ಕರ್‌ರವರು ದಾಖಲಿಸುವ ಈ ವಿಚಾರ ಅದು ಅಕ್ಷರಶಃ ಸೆಕ್ಯುಲರ್ ಅಥವಾ ಜಾತ್ಯತೀತ. ಈ ನಿಟ್ಟಿನಲ್ಲಿ ಇದನ್ನು ತಮ್ಮ ನೇತೃತ್ವದಲ್ಲಿ ರಚಿಸಲ್ಪಟ್ಟಿರುವ ಕರಡು ಸಂವಿಧಾನದಲ್ಲಿಯೂ ಸೇರಿಸುವ ಡಾ. ಅಂಬೇಡ್ಕರ್‌ರವರು ಭಾರತದ ಸಂವಿಧಾನ ಪೀಠಿಕೆಯಲ್ಲಿಯೇ ‘‘ನಾಗರಿಕರಿಗೆ ನಂಬಿಕೆ, ಆರಾಧನೆ ಮತ್ತು ಪೂಜೆಯ ಸ್ವಾತಂತ್ರ್ಯವಿದೆ’’ ಎನ್ನುತ್ತಾರೆ. ಅರ್ಥಾತ್ ಪೀಠಿಕೆಯಲ್ಲಿ ಜಾತ್ಯತೀತ ಎಂಬ ಪದ ಇರದಿದ್ದರೂ ಜಾತ್ಯತೀತ ತತ್ವ ಅಕ್ಷರಶಃ ಎದ್ದು ಕಾಣುತ್ತದೆ. ಇದರ ಆಧಾರದ ಮೇಲೆ ಡಾ. ಅಂಬೇಡ್ಕರ್ ರವರು ಮೂಲಭೂತ ಹಕ್ಕುಗಳಡಿ ಅನುಚ್ಛೇದ 25ನ್ನು ಸೇರಿಸಿ, ಅದರಲ್ಲಿ ‘‘ಎಲ್ಲಾ ವ್ಯಕ್ತಿಗಳು ಅಂತಃಸಾಕ್ಷಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ, ಅಬಾಧಿತವಾಗಿ ಯಾವುದೇ ಧರ್ಮವನ್ನು ಅವಲಂಬಿಸುವುದಕ್ಕೆ, ಆಚರಿಸುವುದಕ್ಕೆ, ಪ್ರಚಾರ ಮಾಡುವುದಕ್ಕೆ ಹಕ್ಕುಳ್ಳವರಾಗಿರುತ್ತಾರೆ’’ ಎನ್ನುತ್ತಾರೆ. ಆದ್ದರಿಂದ ಪ್ರಶ್ನೆಯೇನೆಂದರೆ, ಅನುಚ್ಛೇದ 25 ‘‘ರಾಜ್ಯವು(ಸರಕಾರ) ಯಾವುದೇ ಧರ್ಮವನ್ನು ತನ್ನ ಅಧಿಕೃತ ಧರ್ಮವೆಂದು ಪರಿಗಣಿಸುವಂತಿಲ್ಲ’’ ಎಂಬ ಡಾ. ಅಂಬೇಡ್ಕರ್‌ರವರ ಮೂಲ ವಿಚಾರಕ್ಕೆ ಅಥವಾ ಸೆಕ್ಯುಲರ್ ತತ್ವಕ್ಕೆ ಸರಿಸಮವಾಗಿದೆಯಲ್ಲವೇ ಎಂಬುದು.
‘ಸಮಾಜವಾದ’ ಅಥವಾ ‘ಸೋಶಿಯಲಿಸ್ಟ್’ ಅಥವಾ ‘ಸೋಶಿಯಲಿಸಂ’ ಪದದ ಬಗ್ಗೆ ಹೇಳುವುದಾದರೆ, ಸಮಾಜವಾದ ಎಂದರೆ ಉತ್ಪನ್ನ ಮತ್ತು ಮಾಲಕತ್ವವನ್ನು ಖಾಸಗಿಯವರಿಗೆ ವಹಿಸುವ ಬದಲಾಗಿ ಸಾಮಾಜಿಕ ಮಾಲಕತ್ವ ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ಉತ್ಪನ್ನ (ಪ್ರಾಡಕ್ಟ್ಸ್) ಮಾಡಬೇಕು ಎಂಬುದು. ಈ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್‌ರವರು ಪ್ರತಿಪಾದಿಸುವುದು? ಅವರ ಅದೇ ಸುಪ್ರಸಿದ್ಧ ‘ಸ್ಟೇಟ್ಸ್ ಆಂಡ್ ಮೈನಾರಿಟಿಸ್’ ಕೃತಿಯಲ್ಲಿ ಕಂಡುಬರುವ ವಿಚಾರವನ್ನು ಪುನರಾವರ್ತಿಸುವುದಾದರೆ ಡಾ.ಅಂಬೇಡ್ಕರ್ ಅವರು ಹೇಳುವುದು ಸಮಾಜವಾದಕ್ಕಿಂತಲೂ ತುಸು ಕ್ರಾಂತಿಕಾರಿಯಾದ ‘ರಾಜ್ಯ ಸಮಾಜವಾದ (ಸ್ಟೇಟ್ ಸೋಶಿಯಲಿಸಂ)’ವನ್ನು. ರಾಜ್ಯ ಸಮಾಜವಾದ ಎಂದರೆ ಅದೊಂದು ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತವಾಗಿದ್ದು ಉತ್ಪನ್ನ, ಮಾಲಕತ್ವ ಮತ್ತು ನಿಯಂತ್ರಣ ಈ ಮೂರನ್ನು ಸರಕಾರವೇ ನಿಭಾಯಿಸಬೇಕು. ಖಾಸಗಿ ವ್ಯಕ್ತಿಗಳಿಗೆ ಅಲ್ಲಿ ಯಾವುದೇ ಹಕ್ಕು ಇರುವುದಿಲ್ಲ ಎಂದು. ಅಂದರೆ ಡಾ. ಅಂಬೇಡ್ಕರ್‌ರವರು ಅಕ್ಷರಶಃ ಪ್ರತಿಪಾದಿಸಿದ್ದು ಸಮಾಜವಾದ!
ಇದಕ್ಕೆ ಪೂರಕವಾಗಿ ಡಾ.ಅಂಬೇಡ್ಕರ್ ಅವರ ‘ಸ್ಟೇಟ್ಸ್ ಆಂಡ್ ಮೈನಾರಿಟಿಸ್’ ಕೃತಿಯ ಕೆಲವು ಸಾಲುಗಳನ್ನು ಇಲ್ಲಿ ದಾಖಲಿಸುವುದಾದರೆ,
1. ಪ್ರಮುಖ ಕೈಗಾರಿಕೆಗಳ ಮಾಲಕತ್ವ ಮತ್ತು ನಿರ್ವಹಣೆಯು ಸರಕಾರಕ್ಕೆ ಸೇರಿರಬೇಕು.
2. ಜೀವವಿಮೆಯು ಸಂಪೂರ್ಣವಾಗಿ ಸರಕಾರದ ಏಕಸ್ವಾಮ್ಯವಾಗಿರತಕ್ಕದ್ದು.
3. ಕೃಷಿಯು ಸರಕಾರದ ಒಂದು ಉದ್ಯಮವಾಗಿರಬೇಕು.
4. ಕೃಷಿಯು ಗುಂಪು ಕೃಷಿ ಮಾದರಿ ಸರಕಾರದ ನೀತಿ ನಿಯಮಗಳಂತೆ ನಡೆಯಬೇಕು.
5. ಕೃಷಿ ಭೂಮಿ ಸಂಪೂರ್ಣವಾಗಿ ಸರಕಾರದ ನಿಯಂತ್ರಣದಲ್ಲಿ ಬೇಕು.
ಒಟ್ಟಾರೆ ಹೇಳುವುದಾದರೆ, ಡಾ.ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದು ಅದು ಸಮಾಜವಾದಿ ಸಿದ್ಧಾಂತ ಎಂಬುದು ಅವರ ಮೇಲಿನ ಸಾಲುಗಳಿಂದ ಸ್ಪಷ್ಟವಾಗಿ ನಮಗೆ ಉತ್ತರ ಸಿಗುತ್ತದೆ.
ಹಾಗಿದ್ದರೆ ಈಗ ಸಂಘಪರಿವಾರದವರು ಪ್ರತಿಪಾದಿಸುತ್ತಿರುವುದು? ಸಂಘ ಪರಿವಾರದವರು ದತ್ತೋಪಂಥ ಠೇಂಗಡಿ ಎಂಬವರ ಕೃತಿಯ ಅಂಶಗಳನ್ನು ಉಲ್ಲೇಖಿಸಿ, ಸ್ವತಃ ಡಾ.ಅಂಬೇಡ್ಕರರೇ ಠೇಂಗಡಿಯವರಿಗೆ ಇದನ್ನು ತಿಳಿಸಿರುತ್ತಾರೆ ಎಂದು ಒತ್ತಿ ಒತ್ತಿ ಹೇಳುತ್ತಾ ಆ ಕೃತಿಯ ಪುಟಗಳನ್ನು ಉಲ್ಲೇಖಿಸುತ್ತಿದ್ದಾರೆ. ಅಂದ ಹಾಗೆ ತಿಳಿಯಲೇಬೇಕಾದ ವಾಸ್ತವವೆಂದರೆ ದತ್ತೋಪಂಥ ಠೇಂಗಡಿ ಎಂಬ ಆ ಲೇಖಕರು ಆರೆಸ್ಸೆಸ್ ಹಿನ್ನೆಲೆಯವರು! ಅವರು ಅಂಬೇಡ್ಕರ್ ಹೀಗೆಯೇ ಹೇಳಿದ್ದಾರೆ ಎಂದು ತಮ್ಮ ಕೃತಿಯಲ್ಲಿ ತಾವೇ ಬರೆದುಕೊಂಡಿದ್ದಾರೆ! ಆದರೆ ವಾಸ್ತವವು ಸ್ವತಃ ಡಾ.ಅಂಬೇಡ್ಕರ್ ಅವರೇ ಬರೆದಿರುವ ಅವರದೇ ‘ಸ್ಟೇಟ್ಸ್ ಆಂಡ್ ಮೈನಾರಿಟಿಸ್ ಕೃತಿಯಲ್ಲಿ ಇರುವಾಗ ಠೇಂಗಡಿ ಎನ್ನುವ ಮೂರನೇ ವ್ಯಕ್ತಿಯ ಆಕರಗಳನ್ನು ನಾವೇಕೆ ಅವಲಂಬಿಸಬೇಕು, ಏಕೆ ಒಪ್ಪಬೇಕು? ಈ ನಿಟ್ಟಿನಲ್ಲಿ ಇದು ಸಂಘಪರಿವಾರದ ತಂತ್ರದ ಒಂದು ಭಾಗವಲ್ಲದೆ ಬೇರೇನಲ್ಲ. ತನ್ನ ವಿಚಾರಗಳನ್ನು ಸಮರ್ಥಿಸಿಕೊಳ್ಳಲು ಡಾ. ಅಂಬೇಡ್ಕರ್‌ರವರ ಹೆಸರನ್ನು ಬಳಸಿಕೊಳ್ಳುವುದೇ ಸಂಘಪರಿವಾರದ ಎಂದಿನ ಆ ತಂತ್ರ!
ಮುಂದುವರಿದು, ಸಂವಿಧಾನ ಸಭೆಯಲ್ಲಿ ಈ ಸಂಬಂಧ ಅಂದರೆ ಜಾತ್ಯತೀತ ಮತ್ತು ಸಮಾಜವಾದ ಪದಗಳ ಸಂಬಂಧ ಚರ್ಚೆ ನಡೆದಿಲ್ಲವೆ ಎನ್ನುವುದಾದರೆ, 1948 ನವೆಂಬರ್ 15 ಸದಸ್ಯರಾದ ಪ್ರೊ.ಕೆ.ಟಿ. ಶಾ ಎಂಬವರು ಈ ಸಂಬಂಧ ಆರ್ಟಿಕಲ್ 1, ಖಂಡ (1)ಕ್ಕೆ ಜಾತ್ಯತೀತ, ಸಮಾಜವಾದ ಮತ್ತು ಒಕ್ಕೂಟ ಈ ಮೂರು ಪದಗಳನ್ನು ಸೇರಿಸಬೇಕು ಎಂದು ತಿದ್ದುಪಡಿ ಸಹ ಮಂಡಿಸುತ್ತಾರೆ. ಅದಕ್ಕೆ ಉತ್ತರಿಸುತ್ತ ಡಾ. ಅಂಬೇಡ್ಕರ್‌ರವರು ‘‘ಸಂವಿಧಾನದ ಭಾಗ 4ರ ಅನುಚ್ಛೇದ 31ರಲ್ಲಿ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸಮಾಜವಾದ ಮತ್ತು ಜಾತ್ಯತೀತ ತತ್ವಗಳು ಅಡಕವಾಗಿವೆ. ಹೀಗಿರುವಾಗ ಪುನಃ ಅವುಗಳನ್ನು ಸೇರಿಸುವ ಅಗತ್ಯವಿಲ್ಲ’’ ಎಂದು ಸ್ಪಷ್ಟನೆ ನೀಡುತ್ತಾರೆ. ಅಂದರೆ ಹಾಲಿ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಂದರೆ ಅನುಚ್ಛೇದ 36ರಿಂದ ಅನುಚ್ಛೇದ 51ರವರೆಗೆ ಡಾ. ಅಂಬೇಡ್ಕರ್‌ರವರು ‘ಸ್ಟೇಟ್ಸ್ ಆಂಡ್ ಮೈನಾರಿಟಿಸ್’ ಕೃತಿಯಲ್ಲಿ ಪ್ರತಿಪಾದಿಸಿರುವ ಸೆಕ್ಯುಲರ್ (ಜಾತ್ಯತೀತ) ಮತ್ತು ರಾಜ್ಯ ಸಮಾಜವಾದ ಯಥಾವತ್ ಈಗಲೂ ಅಡಕವಾಗಿವೆ. ಹಾಗಿದ್ದರೂ ಆ ಎರಡು ಪದಗಳನ್ನು 1975ರಲ್ಲಿ ಅಂದಿನ ಸರಕಾರ ಸಂವಿಧಾನ ಪೀಠಿಕೆಯಲ್ಲಿ ಸೇರಿಸಿರಬಹುದು. ಅಂದಹಾಗೆ ಡಾ.ಅಂಬೇಡ್ಕರ್ ಅವರು ಪ್ರತಿಪಾದಿಸಿದ ತತ್ವ ಅದು ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳೇ ಆಗಿರುವಾಗ 1975ರಲ್ಲಿ ಇಂದಿರಾಗಾಂಧಿಯವರು ಪೀಠಿಕೆಯಲ್ಲಿ ಸೇರಿಸಿರುವುದರಲ್ಲಿ ತಪ್ಪೇನೂ ಕಾಣುವುದಿಲ್ಲ. ಅದು ಸಂಘ ಪರಿವಾರದಂತಹ ಕೋಮು ಚಿಂತಕರಿಗೆ ತಪ್ಪಾಗಿ ಕಾಣುತ್ತದೆಯೇ ಹೊರತು ಅಂಬೇಡ್ಕರ್‌ವಾದಿಗಳಿಗಂತೂ ಖಂಡಿತ ಅಲ್ಲ.
ಆದ್ದರಿಂದ ಡಾ. ಅಂಬೇಡ್ಕರ್‌ರವರು ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ವಿರುದ್ಧ ಇರಲಿಲ್ಲ, ಅವುಗಳ ಪರವಾಗಿದ್ದರು ಎಂದು ಸ್ವತಃ ಅವರೇ ತಮ್ಮ ‘ಸ್ಟೇಟ್ಸ್ ಆಂಡ್ ಮೈನಾರಿಟಿಸ್’ ಕೃತಿಯಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಅಲ್ಲಿರುವ ಅನೇಕ ಅಂಶಗಳನ್ನು ಸಂವಿಧಾನದಲ್ಲಿ ಸ್ವತಃ ಅವರೇ ಅನುಚ್ಛೇದಗಳ ರೂಪದಲ್ಲಿ ಕೂಡ ಸೇರಿಸಿದ್ದಾರೆ. ಹೀಗಿರುವಾಗ ಡಾ.ಅಂಬೇಡ್ಕರ್ ಅವರನ್ನು ಕುರಿತ ಮೂರನೇ ವ್ಯಕ್ತಿಗಳ ವಿಚಾರಗಳ ಆಕರಗಳನ್ನು ಇಟ್ಟುಕೊಂಡು ಸ್ವತಃ ಡಾ. ಅಂಬೇಡ್ಕರ್‌ರವರು ಪ್ರತಿಪಾದಿಸುವ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಪೀಠಿಕೆಯಲ್ಲಿ ಸೇರಿಸಿರಲಿಲ್ಲ ಎಂದು ವಾದಿಸುವುದು ಮೊಂಡುವಾದವಲ್ಲದೆ ಬೇರೇನಲ್ಲ. ಈ ನಿಟ್ಟಿನಲ್ಲಿ ಅಂಥವರ ಮೊಂಡುವಾದಕ್ಕೆ ಸರಕಾರಗಳೇ ಪ್ರಕಟಿಸಿರುವ ‘ಅಂಬೇಡ್ಕರ್ ಅವರ ಬರಹಗಳು, ಭಾಷಣಗಳು’ ಕೃತಿಗಳಲ್ಲಿ ಉತ್ತರವಿದೆ.