×
Ad

ಹಚ್ಚ ಹಸಿರು ದಟ್ಟ ಕಾನನದ ನಡುವೆ ಧುಮ್ಮಿಕ್ಕುವ ಶಂಕರ್ ಫಾಲ್ಸ್

Update: 2025-09-08 12:50 IST

ಚಿಕ್ಕಮಗಳೂರು: ಹಚ್ಚ ಹಸಿರು ಬೆಟ್ಟಗುಡ್ಡಗಳಿಂದಾವೃತವಾದ ತಾಲೂಕಿನ ಪಟ್ಟಣ ಆಲ್ದೂರು. ಇಲ್ಲಿನ ಪ್ರಕೃತಿ ಎಂಥವರನ್ನೂ ಅಯಸ್ಕಾಂತದಂತೆ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರಿನ ಹೊದಿಕೆ ಹೊದ್ದು ಮಲಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳ ಸಾಲು ಮನಸೂರೆಗೊಳ್ಳುತ್ತದೆ. ಆಲ್ದೂರು ಸಿನೆಮಾ ಶೂಟಿಂಗ್ ಸ್ಪಾಟ್ ಕೂಡ ಹೌದು. ಯಜಮಾನದಂತಹ ಸಿನೆಮಾದ ಸಂಪೂರ್ಣ ಚಿತ್ರೀಕರಣ ನಡೆದಿರುವುದು ಈ ಪಟ್ಟಣದ ಬಳಿ ಇರುವ ಗುಡ್ಡದ ಮೇಲೆಯೇ.

ಆಲ್ದೂರು ಸಮೀಪದಲ್ಲಿರುವ ಬನ್ನೂರು ಗ್ರಾಮಕ್ಕೆ ಕೂಗಳತೆ ದೂರದಲ್ಲಿರುವ ಶಂಕರ್ ಫಾಲ್ಸ್ ನ ಜಲಸಿರಿ ಮಳೆಗಾಲದಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ, ಆಲ್ದೂರು-ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ ನಡುವಿನ ಪುಟ್ಟ ಗ್ರಾಮ ಬನ್ನೂರು. ಈ ಗ್ರಾಮದಿಂದ ಸ್ಪಲ್ಪ ದೂರ ತೆರಳಿದರೆ ಹೆದ್ದಾರಿಗೆ ಅಡ್ಡಲಾಗಿ ಹರಿಯುವ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿ ಸಣ್ಣ ಕ್ಯಾಂಟಿನ್ ಸಿಗುತ್ತದೆ. ಈ ಕ್ಯಾಂಟಿನ್ ಹಿಂಬದಿಯ ಕಾಫಿ ತೋಟದಲ್ಲಿ ಸ್ವಲ್ಪ ದೂರ ಕಾಲು ದಾರಿಯಲ್ಲಿ ಸಾಗಬೇಕು, ಅಲ್ಲಿ ಹಚ್ಚ ಹಸಿರ ದಟ್ಟ ಕಾಡಿನ ಮಧ್ಯೆ ಸಣ್ಣ ಹಳ್ಳವೊಂದು ಗುಡ್ಡ ಸೀಳಿಕೊಂಡು ಸುಮಾರು 30 ಅಡಿ ಎತ್ತರದಿಂದ ಧುಮ್ಮುಕ್ಕುತ್ತಿರುವ ಸಣ್ಣ ಜಲಪಾತದ ದೃಶ್ಯ ವೈಭವದ ತಾಣವೇ ಶಂಕರ್ ಫಾಲ್ಸ್.

ಅರೇನೂರು, ಬನ್ನೂರು, ಆಲ್ದೂರು ಸುತ್ತಮುತ್ತಲಿನ ಕೆಲವೇ ಗ್ರಾಮಗಳನ್ನು ಹೊರತು ಪಡಿಸಿ ಹೊರಗಿನವರಿಂದ ಬಹುತೇಕ ದೂರ ಉಳಿದಿರುವ ಈ ಜಲಪಾತ ಮಳೆಗಾಲದ ಭೋರ್ಗರೆವ ನೀರಿನಿಂದ ಮೈದುಂಬಿ ಹರಿಯುತ್ತ ಜೀವ ಪಡೆಯುತ್ತದೆ. ನಿಸರ್ಗ ನಿರ್ಮಿತ ಬೃಹದಾಕಾರದ ಬಂಡೆಯ ಮೇಲಿಂದ ತಳಕು ಬಳುಕಿನಿಂದ ಧುಮ್ಮಿಕ್ಕುವ ಪರಿಗೆ ಬಂಡೆಯ ಮೇಲೆಲ್ಲ ಹಾಲಿನ ನೊರೆ ಚೆಲ್ಲಿದಂತೆ ಅಚ್ಚರಿಯ ಪುಳಕಕ್ಕೆ ಮೈ ಮನಸ್ಸು ತೆರೆದು ಕೊಳ್ಳುತ್ತದೆ.

ಮರಗಿಡಗಳ ಹಿನ್ನೆಲೆಯಲ್ಲಿ ಮನಮೋಹಕವಾಗಿ ಮೂಡಿಬರುವ ಜಲಪಾತದ ವಿಹಂಗಮ ದೃಶ್ಯಾವಳಿಗಳು ಯಾವುದೋ ಸಿನೆಮಾದ ದೃಶ್ಯದ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿರುವ ಕೃತಕ ಸೆಟ್‌ನಂತೆ ಕಾಣುತ್ತದೆ ಎಂದು ಈ ಜಲಪಾತದ ದೃಶ್ಯ ವೈಭವ ಕಂಡ ಬೆಂಗಳೂರಿನ ಪ್ರವಾಸಿಗ ರವಿಕುಮಾರ್ ಅಭಿಪ್ರಾಯಿಸುತ್ತಾರೆ.

ಹೆಚ್ಚು ಪ್ರಚಾರವಿಲ್ಲದ ಈ ತಾಣದಲ್ಲಿ ಜಲಪಾತದ ದೃಶ್ಯಾವಳಿ ಮೂಡಿಬರುವುದು ಮಳೆಗಾಲದಲ್ಲಿ ಮಾತ್ರ. ಈ ತಾಣ ತಲುಪಲು ಮುಖ್ಯ ರಸ್ತೆಯಿಂದ ಕಾಲು ದಾರಿ ಇದೆ. ಈ ಫಾಲ್ಸ್ ನೋಡ ಬರುವವರು ಆಲ್ದೂರು-ಬಾಳೆಹೊನ್ನೂರು ಹೆದ್ದಾರಿಯಲ್ಲಿನ ಬನ್ನೂರು ಗ್ರಾಮ ಸಮೀಪದ ಹೆದ್ದಾರಿಯಲ್ಲಿ ಸಿಗುವ ಸೇತುವೆ ಪಕ್ಕದ ಕ್ಯಾಂಟಿನ್ ಹತ್ತಿರದಿಂದ ಕಾಫಿ ತೋಟ ಹಾಯ್ದು ನಡೆಯಬೇಕು.

ಮೂಲಸೌಕರ್ಯಗಳ ಕೊರತೆ

ಮೂಲಸೌಕರ್ಯಗಳ ಕೊರತೆಯಿಂದಾಗಿ ಶಂಕರ್ ಫಾಲ್ಸ್ ಪ್ರವಾಸಿಗರು ಮತ್ತು ನಿಸರ್ಗ ಪ್ರಿಯರಿಂದ ದೂರ ಉಳಿಯುವಂತಾಗಿದೆ. ಸಂಬಂಧಿಸಿದ ಇಲಾಖೆ ಈ ತಾಣಕ್ಕೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಿದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೊಂದು ಪ್ರಮುಖ ಪ್ರವಾಸಿ ಕೇಂದ್ರವಾಗಬಹುದಾದ ಎಲ್ಲ ಲಕ್ಷಣ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್. ಶಿವು

contributor

Similar News