ಇಂದು ದೇವರಾಜ ಅರಸು ದಾಖಲೆ ಸರಿಗಟ್ಟಲಿರುವ ಸಿದ್ದರಾಮಯ್ಯ
ರಾಜ್ಯದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುವತ್ತ...
ಬೆಂಗಳೂರು : ಸ್ವಾತಂತ್ರ್ಯಾ ನಂತರ ಚುನಾಯಿತ ಸರಕಾರಗಳು ಅಸ್ತಿತ್ವಕ್ಕೆ ಬಂದ ಬಳಿಕ ಅತೀ ಹೆಚ್ಚು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಜ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಗಟ್ಟಲಿದ್ದಾರೆ. ದೇವರಾಜ ಅರಸು ಒಟ್ಟು 7 ವರ್ಷ 239 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಸಿದ್ದರಾಮಯ್ಯ ಮಂಗಳವಾರ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಜ.7ರಂದು ಮುಖ್ಯಮಂತ್ರಿಯಾಗಿ 7 ವರ್ಷ 240ನೇ ದಿನಕ್ಕೆ ಸಿದ್ದರಾಮಯ್ಯ ಅವರು ಪಾದಾರ್ಪಣೆ ಮಾಡಲಿದ್ದಾರೆ. ಅವರ ನಂತರ ಎಸ್.ನಿಜಲಿಂಗಪ್ಪ(7 ವರ್ಷ 175 ದಿನ), ರಾಮಕೃಷ್ಣ ಹೆಗಡೆ(5 ವರ್ಷ 216 ದಿನ) ಮತ್ತು ಬಿ.ಎಸ್. ಯಡಿಯೂರಪ್ಪ(5 ವರ್ಷ 82 ದಿನ) ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2013-18ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಗೊಳಿಸಿದ್ದರು. ಆಗಲೂ ದೇವರಾಜ ಅರಸು ನಂತರ ಐದು ವರ್ಷ ಪೂರ್ಣಾವಧಿಗೆ ಮುಖ್ಯಮಂತ್ರಿಯಾದ ದಾಖಲೆಯನ್ನು ಸಿದ್ದರಾಮಯ್ಯ ಬರೆದಿದ್ದರು. ಇದೀಗ, ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾದ ಮೈಲಿಗಲ್ಲು ನೆಟ್ಟಲು ಮುಂದಾಗಿದ್ದಾರೆ.
ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಇಬ್ಬರೂ ಮೈಸೂರು ಜಿಲ್ಲೆಯವರು ಎಂಬುದು ವಿಶಿಷ್ಟವಾದದ್ದು. ಸಿದ್ದರಾಮಯ್ಯನವರ ಈ ಐತಿಹಾಸಿಕ ಕ್ಷಣವನ್ನು ಅವರ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳು ಸಂಭ್ರಮಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಆನಂತರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ 14 ತಿಂಗಳ ಮೈತ್ರಿ ಸರಕಾರ ಪತನಗೊಂಡು, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿತು. ಬಳಿಕ ಯಡಿಯೂರಪ್ಪ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರು. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಭರ್ಜರಿ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದರು.
ಬಜೆಟ್ ಮಂಡನೆಯಲ್ಲೂ ದಾಖಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಬರೆಯುವುದರ ಜೊತೆಗೆ ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ದಾಖಲೆಗೂ ಪಾತ್ರರಾಗಿದ್ದಾರೆ. ಈಗಾಗಲೇ 16 ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯ, ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ 13 ಬಜೆಟ್‌ಗಳನ್ನು ಮಂಡಿಸಿರುವ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಇದ್ದಾರೆ.
ದಾಖಲೆಗಳು ಇರುವುದೇ ಮುರಿಯಲು
ದೇವರಾಜ ಅರಸು ಅವರು ಮೈಸೂರಿ ನವರು, ನಾನು ಮೈಸೂರಿನವನೇ ಆಗಿರುವುದು ಸಂತೋಷದ ಸಂಗತಿ. ತಾಲೂಕು ಬೋರ್ಡ್ ಸದಸ್ಯನಾಗಿ ಆರಂಭಿಸಿದ ನನ್ನ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿ ಆಗುತ್ತೇನೆ ಎಂಬ ನಿರೀಕ್ಷೆ ಹೊಂದಿರಲಿಲ್ಲ. ಒಮ್ಮೆ ಶಾಸಕನಾಗಬೇಕು ಎಂಬ ಬಯಕೆ ಇತ್ತು. ಒಟ್ಟು 13 ಚುನಾವಣೆಗಳಲ್ಲಿ ಎಂಟು ಬಾರಿ ಗೆದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ಇದಕ್ಕೆಲ್ಲ ಜನರ ಪ್ರೀತಿ, ಆಶೀರ್ವಾದವೇ ಕಾರಣ. ಮುಂದಿನ ದಿನಗಳಲ್ಲಿ ನನಗಿಂತ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವವರು, ಹೆಚ್ಚು ಬಾರಿ ಬಜೆಟ್ ಮಂಡಿಸುವವರು ಬರಬಹುದು. ದಾಖಲೆಗಳು ಇರುವುದೇ ಮುರಿಯಲು.
ಸಿದ್ದರಾಮಯ್ಯ, ಮುಖ್ಯಮಂತ್ರಿ
7 ವರ್ಷ 239 ದಿನಗಳು
ದೇವರಾಜ ಅರಸು 1972-77ರವರೆಗೆ ಹಾಗೂ 1978-80ರವರೆಗೆ ಸತತ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೆ, ಸಿದ್ದರಾಮಯ್ಯ ಮೊದಲ ಅವಧಿಗೆ ಬಳಿಕ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬರುವಂತಾಯಿತು.
ರಾಜ್ಯದ ಮುಖ್ಯಮಂತ್ರಿಗಳ ಅಧಿಕಾರ ಅವಧಿ
ಡಿ.ದೇವರಾಜ ಅರಸು: 7 ವರ್ಷ 239 ದಿನ
ಸಿದ್ದರಾಮಯ್ಯ: 7 ವರ್ಷ 239 ದಿನ
ಎಸ್.ನಿಜಲಿಂಗಪ್ಪ: 7 ವರ್ಷ 175 ದಿನ
ರಾಮಕೃಷ್ಣ ಹೆಗಡೆ: 5 ವರ್ಷ 216 ದಿನ
ಬಿ.ಎಸ್.ಯಡಿಯೂರಪ್ಪ: 5 ವರ್ಷ 82 ದಿನ