×
Ad

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 : ಉದ್ದೇಶ, ಸಮೀಕ್ಷೆಯ ಸ್ವರೂಪ

Update: 2025-09-21 08:03 IST

ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ನಿಖರವಾಗಿ ದಾಖಲಿಸುವ ಸಲುವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ.ಈ ಸಮೀಕ್ಷೆ ಸೆ.22ರಿಂದ ಆರಂಭವಾಗಿ ಅಕ್ಟೋಬರ್ 7ರವರೆಗೆ ನಡೆಯಲಿದೆ.

ಸಮೀಕ್ಷೆಯ ಉದ್ದೇಶ :

ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ವಾಸ್ತವಿಕ ಸ್ಥಿತಿಗತಿ ಅರಿಯುವುದು, ಜನಸಮುದಾಯಗಳ ಅಂಕಿಅಂಶ

ಗಳ ಸಂಗ್ರಹ, ಆರ್ಥಿಕ ಬೆಳವಣಿಗೆಯ ಸ್ಥಿತಿಗತಿ ಅರಿಯುವುದು, ಈ ಹಿಂದಿನ ಸರಕಾರಿ ಯೋಜನೆಗಳ ಪರಿಣಾಮ ಮತ್ತು ಫಲಿತಾಂಶಗಳ ಸಂಗ್ರಹ, ವಿವಿಧ ಜನಸಮುದಾಯಗಳ ಕುಲಕಸುಬು, ಕಸುಬು, ಕಸುಬಿನ ರೂಪಾಂತರ, ಸಾಮಾಜಿಕ ಪರಿವರ್ತನೆಗಳ ಅಧ್ಯಯನ. ಮೂಲಭೂತ ಅವಶ್ಯಕತೆಗಳಾದ ನೀರು, ವಸತಿ, ಶೌಚಾಲಯ, ಬೆಳಕು, ಇಂಧನ, ಶಿಕ್ಷಣ, ಆರೋಗ್ಯ ಇವುಗಳ ಸಂಕ್ಷಿಪ್ತ ಮಾಹಿತಿ ಸಂಗ್ರಹ.

ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳ ಫಲಾನುಭವಿಗಳು ಮತ್ತು ಅದರಿಂದಾದ ಪರಿವರ್ತನೆಯ ದಾಖಲೆ ಸಂಗ್ರಹ. ಪ್ರಗತಿ, ಪ್ರಗತಿಶೀಲ, ಅಭಿವೃದ್ದಿ ಹೊಂದಿದ ಮತ್ತು ತಳ ಸಮುದಾಯಗಳ ಚಲನಶೀಲತೆಯ ಮಾಹಿತಿ ಸಂಗ್ರಹ ಇವು ಈ ಮಹತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಧಾನ ಉದ್ದೇಶಗಳಾಗಿವೆ. ಅಲ್ಲದೆ ಈ ಸಮೀಕ್ಷೆಯು ರಾಜ್ಯದ ಆಡಳಿತ ವರ್ಗಕ್ಕೆ ಭವಿಷ್ಯದಲ್ಲಿ ರೂಪಿಸಬೇಕಾದ ಯೋಜನೆಗಳ ಬಗ್ಗೆ ಒಂದು ಸರಿಯಾದ ದಿಕ್ಕನ್ನು ತೋರಿಸಲಿದೆ. ಆಯವ್ಯಯ, ಸುಧಾರಣಾ ಕ್ರಮಗಳು, ಹಣಕಾಸಿನ ಅನುದಾನದಲ್ಲಿ ಆದ್ಯತೆಗಳನ್ನು ಪಟ್ಟಿ ಮಾಡಲು ಈ ಸಮೀಕ್ಷೆ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡಲಿದೆ.

ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಸರಕಾರ ಇಡಬೇಕಾದ ಹೆಜ್ಜೆಗಳನ್ನು ಈ ಸಮೀಕ್ಷೆ ಗುರುತಿಸಲಿದೆ. ಒಟ್ಟಿನಲ್ಲಿ ರಾಜ್ಯದ ಮುಂದಿನ ಪೀಳಿಗೆಗೆ ಅನುಕೂಲ ಕರವಾದ ಈ ಸಮೀಕ್ಷೆಯನ್ನು ಎಲ್ಲಾ ಜನರು ಸ್ವಾಗತಿಸಿ ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕಾದುದು ಎಲ್ಲರ ಜವಾಬ್ದಾರಿಯಾಗಿದೆ.

ಸಮೀಕ್ಷೆಯ ಸ್ವರೂಪ ಮತ್ತು ವೈಶಿಷ್ಟ್ಯ :

ಸಮೀಕ್ಷೆಗಾಗಿ ಸರಕಾರಿ ಶಾಲಾ ಶಿಕ್ಷಕರನ್ನು ನಿಯುಕ್ತಿಗೊಳಿಸಲಾ ಗಿದೆ. ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿ ಆ್ಯಪ್ ಮೂಲಕ ಆನ್ ಲೈನ್‌ನಲ್ಲಿ ಈ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯ ದತ್ತಾಂಶ ಸಂಗ್ರಹವು ಶೀಘ್ರವಾಗಿ ನಡೆಯಲಿದೆ. ಪ್ರತಿಮನೆಯನ್ನು ಗುರುತಿಸಲು ವಿದ್ಯುತ್ ಸಂಪರ್ಕದ ಮನೆಗಳಿಗೆ ಈಗಾಗಲೇ UHID( Unique Household Identity Number ) ಸಂಖ್ಯೆಯನ್ನು ರಾಜ್ಯಾದ್ಯಂತ ಎಸ್ಕಾಂಗಳ ಸಹಾಯದಿಂದ ನೀಡಲಾಗಿದೆ. ಇದರಿಂದಾಗಿ ಯಾವುದೇ ಮನೆಗಳು ಬಿಟ್ಟು ಹೋಗುವ ಸಾಧ್ಯತೆಗಳು ಬಲುವಿರಳ. ಓರ್ವ ಸಮೀಕ್ಷಕ ಅಂದಾಜು 150 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಿದ್ದಾರೆ.

ರಾಜ್ಯದ ಜನತೆ ಮಾಡಬೇಕಾದುದೇನು? :

ನಿಮ್ಮ ಕುಟುಂಬದ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಸಮೀಕ್ಷೆ ಸಂದರ್ಭದಲ್ಲಿ ಸುಲಭದಲ್ಲಿ ಲಭ್ಯವಾಗುವಂತೆ ಇಟ್ಟುಕೊಳ್ಳಿ. ಆಧಾರ್ ಕಾರ್ಡ್ ಇಲ್ಲದ ಪಕ್ಷದಲ್ಲಿ ಆಧಾರ್ ನೋಂದಣಿಯ ಪತ್ರವನ್ನು ಇಟ್ಟುಕೊಳ್ಳಿ. ನೋಂದಣಿಯಾಗದ ಸಂದರ್ಭದಲ್ಲಿ ಇನ್ನುಳಿದ ದಿನಗಳಲ್ಲೂ ಅಂದರೆ ಸಮೀಕ್ಷೆಗೆ ನಿಮ್ಮ ಮನೆಗೆ ಬರುವ ಮೊದಲು ನೋಂದಣಿ ಮಾಡಿಸಿಕೊಂಡು ನೋಂದಣಿ ಸಂಖ್ಯೆ (enrollment number) ನೀಡಲು ಅವಕಾಶವಿದೆ. ಆರು ವರ್ಷಗಳ ಕೆಳಗಿನ ಮಕ್ಕಳಿಗೆ ಆಧಾರ್ ಕಡ್ಡಾಯವಲ್ಲ. ಮನೆಯಲ್ಲಿ ವಿಕಲಚೇತನರಿದ್ದಲ್ಲಿ ಅವರಿಗೆ ಇಲಾಖೆ ನೀಡಿದ ವಿಶಿಷ್ಟ ಗುರುತಿನ ಚೀಟಿ UDID ಯನ್ನು ಸಮೀಕ್ಷೆ ಸಂದರ್ಭದಲ್ಲಿ ತೋರಿಸಬೇಕಿದೆ. UDID ಇಲ್ಲದ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ನೀಡಿದ ಪ್ರಮಾಣಪತ್ರವನ್ನು ತೋರಿಸಲು ಅವಕಾಶವಿದೆ. ಒಂದುವೇಳೆ ರೇಶನ್ ಕಾರ್ಡ್‌ನಲ್ಲಿ ಕುಟುಂಬದ ಸದಸ್ಯನ ಹೆಸರಿಲ್ಲದ ಪಕ್ಷದಲ್ಲಿ ಆ ವ್ಯಕ್ತಿಯ ಆಧಾರ್ ನಂಬರ್ ಮೂಲಕ ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ವಿದ್ಯುತ್ ಸಂಪರ್ಕವಿಲ್ಲದ ಹೊಸಕುಟುಂಬಗಳನ್ನು ಕೂಡಾ ಸಮೀಕ್ಷೆಗೆ ಒಳಪಡಿಸಲು ಅವಕಾಶವಿದ್ದು, ಹೊಸ UHIDಯನ್ನು ಸ್ಥಳದಲ್ಲಿ ಸೃಜಿಸಲು ಅವಕಾಶವಿದೆ.

ಸಮೀಕ್ಷೆಯು ಎರಡು ಹಂತದ ಪ್ರಶ್ನೆಗಳನ್ನು ಹೊಂದಿದ್ದು, ಮೊದಲ ಭಾಗದಲ್ಲಿ 40 ಪ್ರಶ್ನೆಗಳಿವೆ.ಇವು ಕುಟುಂಬದ ಪ್ರತಿ ಸದಸ್ಯನಿಗೆ ಕೇಳುವ ಪ್ರಶ್ನೆಗಳಾಗಿವೆ. ಅಂದರೆ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೋ ಅಷ್ಟೂ ಜನರಿಗೆ ತಲಾ 40 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡನೇ ಭಾಗದಲ್ಲಿ 20 ಪ್ರಶ್ನೆಗಳಿದ್ದು, ಇದು ಇಡೀ ಕುಟುಂಬ ಅಥವಾ ಮನೆಗೆ ಸಂಬಂಧಿಸಿವೆ. ಭಾಗ ಒಂದರ ಮೊದಲ ಮೂರು ಪ್ರಶ್ನೆಗಳು ಕುಟುಂಬದ ಮುಖ್ಯಸ್ಥನ ತಂದೆಗೆ ಸಂಬಂಧಿಸಿದ್ದಾಗಿದ್ದು, ಈ ಬಗ್ಗೆ ಮನೆಯಲ್ಲಿ ಸಮೀಕ್ಷಕರಿಗೆ ಮಾಹಿತಿ ನೀಡುವ ವ್ಯಕ್ತಿಯು ಮೊದಲೇ ಈ ಬಗ್ಗೆ ಮಾಹಿತಿಯನ್ನು ಹೊಂದಿರಬೇಕಾದುದು ಅಗತ್ಯ.

ಉದಾಹರಣೆಗೆ :

ಕುಟುಂಬದ ಮುಖ್ಯಸ್ಥನ ತಂದೆಯ ವಿದ್ಯಾರ್ಹತೆ? ಅವರು ಎಲ್ಲಿಯವರು? ಯಾವ ಕಸುಬನ್ನು ಮಾಡುತ್ತಿದ್ದರು? ಕುಟುಂಬದ ಮುಖ್ಯಸ್ಥ ಅಥವಾ ಮಾಹಿತಿದಾರರ ನೈತಿಕ ಜವಾಬ್ದಾರಿ. ಸಮೀಕ್ಷಕರು ನಿಗದಿಪಡಿಸಿದ ಪ್ರಶ್ನೆಗಳನ್ನು ಕೇಳಿ ಮಾಹಿತಿ ತುಂಬಿಸಬೇಕಾದ ಮತ್ತು ನಿಗದಿತ ಸಮಯದಲ್ಲಿ ಈ ಸಮೀಕ್ಷೆ ಮುಗಿಸಬೇಕಾದ ಅನಿವಾರ್ಯತೆ ಇರುವ ಕಾರಣ ಅಗತ್ಯ ದಾಖಲೆಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕಾದ ಅಗತ್ಯವಿದೆ.

ಸಮೀಕ್ಷಕರು ಮನೆಗೆ ಬಂದಾಗ ಅವರನ್ನು ಸ್ವಾಗತಿಸಿ ತಾಳ್ಮೆಯಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಮನೆಯ ಸಮೀಕ್ಷೆ ಮುಗಿಯದ ಹೊರತು ಮನೆಗೆ ಬೀಗ ಹಾಕಿ ತೆರಳಬೇಡಿ. ಮನೆಯಲ್ಲಿ ಮುಖ್ಯಸ್ಥರು ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿರುವ ಸದಸ್ಯರಿಗೆ ಸಮೀಕ್ಷೆಗೆ ಉತ್ತರಿಸುವ ಜವಾಬ್ದಾರಿ ನೀಡಿ. ಒಂದು ವೇಳೆ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷಕರು ನಿಮ್ಮ ಮೊಬೈಲ್‌ಗೆ ಬಂದ ಒಟಿಪಿ ಕೇಳಿದ ಸಂದರ್ಭದಲ್ಲಿ ಒಟಿಪಿ ನೀಡಿ ಸಹಕರಿಸಿ.ಯಾವುದಾದರೂ ಮನೆ ಸಮೀಕ್ಷೆಯಿಂದ ಹೊರಗುಳಿದ ಸಂದರ್ಭದಲ್ಲಿ ಆಯಾಯ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕ ಮಾಡಿ ಮಾಹಿತಿ ನೀಡಿ.ಸಮೀಕ್ಷೆಯ ಕೊನೆಯಲ್ಲಿ ಸಮೀಕ್ಷಕರು ನೀಡುವ ಘೋಷಣಾ ಪತ್ರಕ್ಕೆ ಸಹಿ ಮಾಡಿ ಹಿಂದಿರುಗಿಸಿ. ಸಮೀಕ್ಷೆಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ತುಂಬಲಾಗಿದೆ ಎಂಬುದನ್ನು ನಿಮಗೆ ಖಾತ್ರಿಪಡಿಸಿಕೊಳ್ಳಲು ಅವಕಾಶವಿದೆ. ನೆರೆಯ ಪರಿಚಿತರ ಮನೆಯಲ್ಲಿ ಅಶಕ್ತರು, ಕಾಯಿಲೆಪೀಡಿತರು ಇದ್ದಲ್ಲಿ ಸಮೀಕ್ಷೆ ಸಂದರ್ಭದಲ್ಲಿ ಪರಸ್ಪರ ನೆರವು ನೀಡಿ ಸಮೀಕ್ಷೆ ಬೇಗನೆ ಮುಗಿಯಲು ಸಹಕರಿಸಿ.

ಸಮೀಕ್ಷೆ ನಮ್ಮದು, ನಮಗಾಗಿ ನಮ್ಮ ಭವಿಷ್ಯದ ಒಳಿತಿಗಾಗಿ ಎಂಬ ಭಾವನೆಯಿಂದ ಸಮೀಕ್ಷೆಯಲ್ಲಿ ಕೈಜೋಡಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲ್ ರಝಾಕ್ ಅನಂತಾಡಿ

contributor

Similar News