ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಸರಕಾರದ ಅವಾಂತರದ ತೀರ್ಮಾನಗಳು
ಬರಿ ತಲೆಯನ್ನಷ್ಟೇ ಗಮನಿಸುವ ಕೆಲವು ಜಾತಿ-ವರ್ಗಗಳಿಗೆ, ಅವರ ಇಚ್ಛಾನುಸಾರ ಹೇಗಿದ್ದರೂ ಸರಕಾರ ಎರಡನೇ ಸಮೀಕ್ಷೆ ಮಾಡಲು ತೀರ್ಮಾನಿಸಿದೆ. ಆದ್ದರಿಂದ ಒಂದನೇ ಸಮೀಕ್ಷೆಯ ದತ್ತಾಂಶಗಳನ್ನು ಬಿಡುಗಡೆ ಮಾಡಲು ಸರಕಾರ ಗೊಂದಲ ಪಡಬೇಕಾಗಿಲ್ಲ. ಹಾಗೆ ಮಾಡುವುದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇದನ್ನು ಸರಕಾರ ತೀವ್ರವಾಗಿ ಗಮನಿಸಬೇಕು.
ಮಂಡಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ 1992ರಲ್ಲಿ, ಹಿಂದುಳಿದ ವರ್ಗಗಳ ಮೀಸಲಾತಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆ ವರ್ಗಗಳ ಹಿತದೃಷ್ಟಿಯಿಂದ ಅತ್ಯಂತ ಗುರುತರ ತೀರ್ಪು ಎನ್ನಲಡ್ಡಿ ಇಲ್ಲದ ತೀರ್ಪೊಂದನ್ನು ನೀಡಿರುವುದು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ.
ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿದ ಮೀಸಲಾತಿ ನೀತಿಯನ್ನು ಎತ್ತಿಹಿಡಿದುದಷ್ಟೇ ಅಲ್ಲ; ಕೆಲವು ನಿರ್ದೇಶನಗಳನ್ನು ನೀಡಿತ್ತೂ ಕೂಡ. ಅದರಲ್ಲಿ ಮಹತ್ವದ್ದು ಎಂದರೆ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಿಂದುಳಿದ ವರ್ಗಗಳ ಆಯೋಗಗಳನ್ನು ಶಾಶ್ವತವಾಗಿ ನೆಲೆಗೊಳಿಸುವುದಾಗಿತ್ತು. ಅದರಂತೆ ಕೇಂದ್ರವನ್ನೊಳಗೊಂಡಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾಯ್ದೆಗಳನ್ನು ರೂಪಿಸುವುದರ ಮೂಲಕ ಅನುಷ್ಠಾನಗೊಳಿಸಿದವು. ಎಲ್ಲಾ ಕಾಯ್ದೆಗಳ ಸ್ವರೂಪ ಒಂದೇ ತೆರನಾಗಿದ್ದದ್ದು ತೀರ್ಪಿನಲ್ಲಿ ಬಂದ ಅಂಶಗಳ ವೈಶಿಷ್ಟ್ಯ. ಇದು ಆಯೋಗ ಮತ್ತು ಕಾಯ್ದೆಯ ಹಿನ್ನೆಲೆ.
ಕರ್ನಾಟಕದ ಕಾಯ್ದೆಯಿಂದಲೇ ಪ್ರಾರಂಭಿಸೋಣ:
ಈ ಕಾಯ್ದೆ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995’ (ಇನ್ನು ಮುಂದೆ ‘ಕಾಯ್ದೆ’) ಎಂದು ಕರೆಯಲಾಗಿದೆ. ಕೇವಲ 18 ಖಂಡಗಳನ್ನೊಳಗೊಂಡ ಒಂದು ಪುಟ್ಟ ಕಾಯ್ದೆ ಇದು. ಸಮೀಕ್ಷೆಯ ಉದ್ದೇಶದಿಂದ 3ನೇ ಅಧ್ಯಾಯ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅಧ್ಯಾಯವನ್ನು ಆಯೋಗದ ಪ್ರಕಾರ್ಯಗಳು ಮತ್ತು ಅಧಿಕಾರಗಳು ಎಂದು ಹೆಸರಿಸಲಾಗಿದೆ. ಈ ಅಧ್ಯಾಯದ ಈ ಖಂಡಗಳಾದ 9(2) ಮತ್ತು 11 ಸಮೀಕ್ಷೆಗೆ ಸಂಬಂಧಿಸಿದಂತೆ ಗುರುತರವಾದವುಗಳು.
ಖಂಡ 9ರಲ್ಲಿ ಕಾಯ್ದೆ ಹೀಗೆ ಹೇಳುತ್ತದೆ-
1) ನಾಗರಿಕರ ಯಾವುದೇ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಕೋರಿಕೆಗಳನ್ನು ಪರಿಶೀಲಿಸುವುದು ಮತ್ತು ಯಾವುದೇ ಹಿಂದುಳಿದ ವರ್ಗವನ್ನು ಅಂತಹ ಪಟ್ಟಿಯಲ್ಲಿ ಅಧಿಕವಾಗಿ ಸೇರಿಸಲಾಗಿದೆ ಎಂದು ಅಥವಾ ಸೇರಿಸಲಾಗಿಲ್ಲವೆಂದು ಬಂದ ದೂರುಗಳ ವಿಚಾರಣೆ ಮಾಡುವುದು ಮತ್ತು ಸರಕಾರಕ್ಕೆ ಅದು ಸಮುಚಿತವೆಂದು ಭಾವಿಸುವಂಥ ಸಲಹೆ ನೀಡುವುದು.
(2) ಕರ್ನಾಟಕ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳು ಮತ್ತು ಸಮಸ್ಯೆಗಳ ಬಗ್ಗೆ ಸಮೀಕ್ಷೆ ಮಾಡುವುದು (ಕಾಯ್ದೆ ತಿದ್ದುಪಡಿಗೆ ಮೊದಲು ‘ಕರ್ನಾಟಕ ಜನತೆ’ ಬದಲು ‘ಹಿಂದುಳಿದ ವರ್ಗಗಳು’ ಎಂದಿತ್ತು)
ಕಾಯ್ದೆಯ ಈ ಎರಡೂ ಉಪ ಖಂಡಗಳ ಪ್ರಕಾರ ಅನುಷ್ಠಾನದಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯನ್ನು ವಿಚಾರಣೆಗೆ ಒಳಪಡಿಸಿ ಯಾವುದೇ ಜಾತಿ ಅಥವಾ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಕೋರಿಕೆಗಳನ್ನು ಪರಿಶೀಲಿಸುವುದು. ಯಾವುದೇ ಹಿಂದುಳಿದ ವರ್ಗವನ್ನು ಅಂತಹ ಪಟ್ಟಿಯಲ್ಲಿ ಅಧಿಕವಾಗಿ ಅಥವಾ ಅನರ್ಹತೆ ಇರುವ ಜಾತಿ ಅಥವಾ ವರ್ಗವನ್ನು ಸೇರಿಸಲಾಗಿದ್ದಲ್ಲಿ ಅಂತಹವುಗಳನ್ನು ಪಟ್ಟಿಯಿಂದ ಹೊರಗೆ ಹಾಕುವುದು ಎಂದು ಅರ್ಥೈಸಬಹುದು.
ಈ ಎರಡೂ ಉಪಕ್ರಮಗಳನ್ನು ಅನುಸರಿಸಲು ಅವಶ್ಯವಾಗಿ ಸಮಗ್ರ ಕರ್ನಾಟಕದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಗಳು ಮತ್ತು ಸಮಸ್ಯೆಗಳ ಬಗ್ಗೆ ಸಮೀಕ್ಷೆ ಮಾಡಬೇಕಾಗಿದೆ. ಸಮೀಕ್ಷೆ ಕಡ್ಡಾಯವೆಂದು ಇಲ್ಲಿ ತಿಳಿಯುವ ಅಗತ್ಯವಿದೆ.
ಖಂಡ 11ರ ಉಪಖಂಡ (1)ರ ಕಾರಣಕ್ಕಾಗಿ, ಪರಿಷ್ಕರಣ ಕಾರ್ಯವನ್ನು ಎಷ್ಟು ಅವಧಿಗೆ ಒಮ್ಮೆ ಮಾಡಬೇಕು ಮತ್ತು ಯಾವ ಪ್ರಾಧಿಕಾರ ಮಾಡಬೇಕು ಎಂಬುದನ್ನು ಖಂಡ 11ರಲ್ಲಿ ಹೇಳಲಾಗಿದೆ. ಅದರ ಅರ್ಥ ವಿವರಣೆ ಹೀಗಿದೆ:
11. ರಾಜ್ಯ ಸರಕಾರದಿಂದ ಪಟ್ಟಿಗಳ ನಿಯತಕಾಲಿಕ ಪರಿಷ್ಕರಣೆ-
(1) ರಾಜ್ಯ ಸರಕಾರವು ಯಾವುದೇ ಸಮಯದಲ್ಲಿ ಮತ್ತು ಈ ಅಧಿನಿಯಮವು ಜಾರಿಗೆ ಬಂದ ದಿನಾಂಕದಿಂದ 10 ವರ್ಷಗಳ ಅವಧಿಯು ಮುಕ್ತಾಯವಾದಾಗ ಮತ್ತು ಅದರ ನಂತರ ಬರುವ ಪ್ರತೀ 10 ವರ್ಷಗಳ ಅವಧಿ ಮುಕ್ತಾಯವಾಗುವಾಗ ಹಿಂದುಳಿದ ವರ್ಗಗಳಾಗಿ ಉಳಿಯದೆ ಹೋಗಿರುವ ವರ್ಗಗಳನ್ನು(ಜಾತಿಗಳು) ತೆಗೆದು ಹಾಕುವ ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಅಂತಹ ಪಟ್ಟಿಯಲ್ಲಿ ಸೇರಿಸುವುದನ್ನು ಗಮನದಲ್ಲಿರಿಸಿಕೊಂಡು ಪಟ್ಟಿಗಳನ್ನು ಪರಿಷ್ಕರಣೆ ಮಾಡತಕ್ಕದ್ದು.
ಈ ಉಪಖಂಡದಂತೆ, ಹತ್ತು ವರ್ಷಗಳಿಗೊಮ್ಮೆ, ಖಂಡ 9 ಉಪಖಂಡ (2)ರ ಅನ್ವಯ, ಸಮಗ್ರ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯುವ ಬಗ್ಗೆ ಸಮೀಕ್ಷೆ ಮಾಡುವುದು ಕಡ್ಡಾಯವೆಂದಾಯಿತು.
ಖಂಡ 11ರ ಉಪಖಂಡ 2ರಂತೆ, ಒಂದನೇ ಉಪಖಂಡದಲ್ಲಿ ಉಲ್ಲೇಖಿಸಿದ ಪರಿಷ್ಕರಣೆಯನ್ನು ಕೈಗೊಳ್ಳುವಾಗ ಆಯೋಗದ ಸಲಹೆಯನ್ನು ಪಡೆಯತಕ್ಕದ್ದು ಎಂಬುದೂ ಸ್ಪಷ್ಟವಾಗಿದೆ. ಆದ್ದರಿಂದ ಪರಿಷ್ಕರಣ ಕಾರ್ಯವಾಗಲೀ ಅಥವಾ ಸಮಗ್ರ ಜನತೆಯ ಸಮೀಕ್ಷೆಯನ್ನಾಗಲೀ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದಲೇ ಸರಕಾರ ನಡೆಸಬೇಕು ಎಂಬುದೂ ಕೂಡ ವಿಧಿತವಾಯಿತು.
ಇಷ್ಟೇ ಅಲ್ಲದೆ, ಸರಕಾರ ಹೊಸದಾಗಿ ಹಿಂದುಳಿದ ವರ್ಗಗಳ ಉಪವರ್ಗೀಕರಣ ಮಾಡಬೇಕೆಂದು ಅಪೇಕ್ಷೆ ಪಟ್ಟಲ್ಲಿ, ಸಮೀಕ್ಷೆಯಲ್ಲಿ ಬಂದಂತಹ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಹೊಸ ಪಟ್ಟಿಯ ಜೊತೆಗೆ ಉಪವರ್ಗೀಕರಣ ಮಾಡಲವಕಾಶವಿದೆ.
ಪ್ರಸ್ತುತ ಮುಖ್ಯ ವಿಷಯಕ್ಕೆ ಬರೋಣ, ಕಾಯ್ದೆಯು ಅಕ್ಟೋಬರ್ 12, 1995ರಿಂದ ಜಾರಿಗೆ ಬಂದಿದೆ. ಜಾರಿಗೆ ಬಂದ ತಕ್ಷಣದಲ್ಲಿ ಆಯೋಗವನ್ನು ಸರಕಾರ ರಚಿಸಲಿಲ್ಲ. 1997ರಲ್ಲಿ ಆಯೋಗ ರಚನೆಗೊಂಡಿತು. ಪ್ರೊ. ರವಿವರ್ಮ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮೊದಲನೇ ಆಯೋಗ ರಚಿತಗೊಂಡಿತು.
ಹಿಂದುಳಿದ ವರ್ಗಗಳ ಮೊದಲನೇ ಆಯೋಗ ಸ್ಪಷ್ಟಪಡಿಸಿರುವಂತೆ ‘ನಿಜವಾಗಿಯೂ ಹಿಂದುಳಿದಿರುವಂತಹ ಜನರಿಗೆ ಪರಿಹಾರ ಒದಗಿಸಲು ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವುದು ಖಂಡಿತ ಅವಶ್ಯ’. ಈ ವಿಷಯವನ್ನು ಸರಕಾರಕ್ಕೆ ತಿಳಿಸಲಾಗಿ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲವಾದ್ದರಿಂದ ಆಯೋಗ ತಾನೇ ಸ್ವತಃ ಪಟ್ಟಿ ಪರಿಷ್ಕರಣೆಗೆ ಮುಂದಾಗಲಿಲ್ಲ.
ಖಂಡ 11ರ ಅನ್ವಯ, ಪಟ್ಟಿಯ ಪರಿಷ್ಕರಣೆಗೆ ತೀರ್ಮಾನ ತೆಗೆದುಕೊಳ್ಳುವುದು ಸರಕಾರದ ಪ್ರಾಥಮಿಕ ಕರ್ತವ್ಯ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಿಂದ ಅಂತಹ ಜಾತಿಗಳನ್ನು ತೆಗೆದುಹಾಕುವ ಅಥವಾ ಪಟ್ಟಿಗೆ ಸೇರಿಸುವ ದೃಷ್ಟಿಯಿಂದ ಅಂಥ ಪರಿಷ್ಕರಣೆಯನ್ನು ಕೈಗೊಳ್ಳಬೇಕಾಗುತ್ತದೆ. ಪಟ್ಟಿ ಪರಿಷ್ಕರಣೆಗೆ ಸರಕಾರ ತೀರ್ಮಾನ ತೆಗೆದುಕೊಂಡಾಗ ಮಾತ್ರ ಆಯೋಗದ ಪಾತ್ರ ಉದ್ಭವಿಸುತ್ತದೆ. ಹಾಗಾಗಿ ಪರಿಷ್ಕರಣ ಕಾರ್ಯಕ್ಕಾಗಿ ಜಾತಿ ಮತ್ತು ವರ್ಗಗಳ ಸಮೀಕ್ಷೆಯಲ್ಲಿ ಸಂಗ್ರಹಿಸಿದ ನವನವೀನ ದತ್ತಾಂಶಗಳು ಬೇಕೇ ಬೇಕು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಬೇಕು ಎಂದು ಮೊದಲ ಬಾರಿಗೆ 2004ರಲ್ಲಿ ಉತ್ಸುಕತೆ ತೋರಿ ಆಯ-ವ್ಯಯದಲ್ಲಿ ಸ್ವಲ್ಪ ಹಣ ಮೀಸಲಿಟ್ಟವರು ಅಂದಿನ ಹಣಕಾಸು ಸಚಿವ ಸಿದ್ದರಾಮಯ್ಯನವರು. (ವಾಸ್ತವವಾಗಿ ಕಾಯ್ದೆ ಅನುಸಾರ 2005ರಲ್ಲಿಯೇ ಸಮೀಕ್ಷೆ ನಡೆಯಬೇಕಾಗಿತ್ತು) ಅದು ಹಾಗೆ ನನೆಗುದಿಗೆ ಬಿದ್ದು, 2013ರಲ್ಲಿ ಅವರೇ ಮುಖ್ಯಮಂತ್ರಿ ಗಾದಿಗೆ ಏರಿದ ನಂತರ ಚಾಲನೆ ದೊರೆತು, ಸರಕಾರ ಅಧಿಸೂಚನೆ ಹೊರಡಿಸುವುದರ ಮೂಲಕ ಸಮೀಕ್ಷೆಗೆ ನಾಂದಿ ಹಾಡಲಾಯಿತು.
ಸಮೀಕ್ಷೆಗಾಗಿ ಆಯೋಗ ಪೂರ್ವಸಿದ್ಧತೆಯೊಡನೆ ಅಡಿ ಇಟ್ಟಿತು. ಅದಕ್ಕೆ ಅಗತ್ಯವಾಗಿ ಬೇಕಾದ ಸಕಲ ಏರ್ಪಾಡುಗಳೆಲ್ಲವನ್ನೂ ಮಾಡಿಕೊಂಡ ನಂತರವಷ್ಟೇ ವಾಸ್ತವ ಸಮೀಕ್ಷೆ 2015 ಎಪ್ರಿಲ್ 15ರಂದು ಪ್ರಾರಂಭಗೊಂಡು ಮೇ 30ರಂದು ಕೊನೆಗೊಳ್ಳುತ್ತದೆ. ಆನಂತರದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳೆಲ್ಲವನ್ನೂ ಕರ್ನಾಟಕದ ಜನತೆ ಬಲ್ಲವರಾಗಿರುವುದರಿಂದ ಮತ್ತೊಮ್ಮೆ ಇಲ್ಲಿ ಹೇಳುವುದು ಅನವಶ್ಯ ಎಂದು ಭಾವಿಸುತ್ತೇನೆ. ಆ ದಿಸೆಯಲ್ಲಿ ಮುನ್ನಡಿ ಇಡುವ ಸಕಾರಾತ್ಮಕ ಕಾರ್ಯವಾಗದೆ, ಸಮೀಕ್ಷೆ ಕಾರ್ಯಕ್ಕಾಗಿ ಖರ್ಚು ಮಾಡಿದ ಅಪಾರ ಹಣವೆಲ್ಲಾ ವ್ಯರ್ಥ ಎಂದು ಜನರೆಲ್ಲ ಮಾತಾಡಿಕೊಳ್ಳಲು ಶುರುವಿಟ್ಟುಕೊಂಡರು. ಅಷ್ಟರಲ್ಲಿ 10 ವರ್ಷ ಕಳೆದೇ ಹೋಯಿತು. ಸಮೀಕ್ಷೆಗೆ ವಿರುದ್ಧವಾಗಿದ್ದ ಜನ, ಸಮೀಕ್ಷೆ ಮಾಡಿ ಈಗಾಗಲೇ 10 ವರ್ಷ ಕಳೆದು ಹೋಗಿರುವುದರಿಂದ ದತ್ತಾಂಶಗಳನ್ನು ಬಿಡುಗಡೆ ಮಾಡುವ ಅಥವಾ ದತ್ತಾಂಶಗಳನ್ನು ಅಂತಹ ವರ್ಗಗಳ ಉನ್ನತಿಗೆ ಉಪಯೋಗಿಸುವ ಅವಶ್ಯಕ ಇಲ್ಲ ಎಂದು ತಡಬಡಿಸಲಾರಂಭಿಸಿದರು.
ಪಕ್ಷದ ವರಿಷ್ಠರೊಬ್ಬರ ಒತ್ತಾಯವೋ ಏನೋ ಕೊನೆಗೂ ಸರಕಾರ ಧೈರ್ಯ ತಾಳಿ ಸಮೀಕ್ಷೆಯ ದತ್ತಾಂಶವನ್ನು ಮಂಡಿಸುವ ಬದಲು, ಸಮೀಕ್ಷೆಯಿಂದ ಸೃಜಿಸಲ್ಪಟ್ಟ ಹೊಸ ಉಪವರ್ಗೀಕರಣದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಂಪುಟದ ಮುಂದಿಟ್ಟಿತು. ಆ ಬಗ್ಗೆ ಸಭೆಯಲ್ಲಿ ಏನೂ ತೀರ್ಮಾನವಾಗದೆ, ಉಪವರ್ಗೀಕರಣದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಎಲ್ಲಾ ಮಂತ್ರಿಗಳಿಗೂ ಒಂದೊಂದು ಪ್ರತಿಯನ್ನು ಅಧ್ಯಯನಕ್ಕೋಸ್ಕರ ಕೊಡಲಾಯಿತು. ಮರುದಿನವೇ ಪತ್ರಿಕೆಯೊಂದರಲ್ಲಿ, ಕೆಲವು ದತ್ತಾಂಶಗಳ ವಿವರಗಳು ಬಯಲಾದವು. ಅಷ್ಟು ತಿಳಿದುಕೊಂಡಿದ್ದೇ ಜನರ ಸೌಭಾಗ್ಯ!
ಹಲವು ಸಂಪುಟಗಳ ಸಭೆ ನಡೆದರೂ ಸಚಿವ ಸಂಪುಟ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಕೊನೆಗೆ, ಪಕ್ಷದ ವರಿಷ್ಠರವರೆಗೂ ವಿಷಯ ತೀರ್ಮಾನಕ್ಕಾಗಿ ಎಡತಾಕುವಂತಾಯಿತು. ಈಗಾಗಲೇ ನಡೆಸಿ ನನೆಗುದಿಗೆ ಬಿದ್ದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶವನ್ನು ‘ತಾತ್ವಿಕ’ವಾಗಿ ಒಪ್ಪಿಕೊಂಡು, ಮರು ಸಮೀಕ್ಷೆ ಮಾಡಲು ವರಿಷ್ಠರು ತೀರ್ಮಾನ ಕೈಗೊಂಡರು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳು ಮಾಧ್ಯಮಗಳ ಮುಂದೆ ವಿವರಿಸಿದರು. ಯಾವುದೇ ಪಕ್ಷದ ಸರಕಾರಕ್ಕೆ, ಆ ಪಕ್ಷದ ವರಿಷ್ಠರ ತೀರ್ಮಾನವೇ ಮುಖ್ಯವಾಗುತ್ತದೆ!
ಅದೇ ತೀರ್ಮಾನವನ್ನು, ದಿನಾಂಕ 12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, ದತ್ತಾಂಶ ಸಂಗ್ರಹಿಸಿ 10 ವರ್ಷಗಳಾಗಿರುವುದರಿಂದ ‘ಮರು’ ಸಮೀಕ್ಷೆ ನಡೆಸಲಾಗುವುದು ಎಂದಷ್ಟೇ ಹೇಳಿ, ಪ್ರಸ್ತುತ ಸರಕಾರದ ಬಳಿ ಇರುವ, ಈಗಾಗಲೇ ನಡೆಸಿರುವ ಸಮೀಕ್ಷೆಯ ಬಗ್ಗೆ ಏನನ್ನೂ ಹೇಳದಿರುವುದು, ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಇದಿಷ್ಟು ಸರಕಾರ ಕೈಗೊಂಡ ತೀರ್ಮಾನ. ಈ ತೀರ್ಮಾನ ಹಿಂದುಳಿದ ವರ್ಗಗಳಿಗೆ ಕಳವಳ ತಂದರೂ ಸರಕಾರದ ತೀರ್ಮಾನವೇ ಅಂತಿಮವೆಂದು ಗ್ರಹಿಸಿ ಹಿಂದೆ ನಡೆದ ಸಮೀಕ್ಷೆಯ ಪರ-ವಿರೋಧ ಇರುವ ಸಂಘಟನೆಗಳು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾ ಮಾಧ್ಯಮಗಳ ಮುಂದೆ ಹೋಗುತ್ತಿವೆ.
ಕಾಯ್ದೆ ಬಗ್ಗೆ ಮೇಲೆ ಹೇಳಿರುವೆ. ರಾಜ್ಯಮಟ್ಟದಲ್ಲಿ ಕೆಲವು ರಾಜ್ಯಗಳು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಿವೆ. ಆದರೆ, ಅವುಗಳನ್ನು ಬಚ್ಚಿಟ್ಟಿಲ್ಲ, ಬಿಚ್ಚಿಟ್ಟಿವೆ. ಕಾಯ್ದೆಯಲ್ಲಿ ಹೇಳುವಂತೆ ವಿವಿಧ ಉದ್ದೇಶಗಳಿಗೆ ಸಮೀಕ್ಷೆ ನಡೆಸಬೇಕಾದ್ದು ಸರಕಾರದ ಕರ್ತವ್ಯ. ಕಾಯ್ದೆಯ ಒಳಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೃಷ್ಟಿಗೆ ಗೋಚರಿಸುವ ಅರ್ಥವೇ ಬೇರೆ ಇದೆ. ಎಂದೋ ಮಾಡಬೇಕಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2015ರಲ್ಲಾದರೂ ಆಗಗೊಳಿಸಲು ಸರಕಾರ ದೊಡ್ಡ ಮನಸ್ಸು ಮಾಡಿದೆ. ಕಾಯ್ದೆಯ ಅರ್ಥ ವಿವರಣೆಯಂತೆ ಆ ಸಮೀಕ್ಷೆಯನ್ನು ಸಮೀಕ್ಷೆ-1 ಎಂದು ಕರೆಯಬೇಕು. ಈಗ ಮಾಡಲು ಹೊರಟಿರುವ ಸಮೀಕ್ಷೆ ವಾಸ್ತವವಾಗಿ ಅದು 2ನೇ ಸಮೀಕ್ಷೆ. ಅದು ಯಾವುದೇ ಕಾರಣಕ್ಕೂ ಸರಕಾರ ಹೇಳಿರುವ ಹಾಗೆ ಮರು ಸಮೀಕ್ಷೆ ಅಥವಾ ಪುನರ್ ಸಮೀಕ್ಷೆ ಎಂದಂತಾಗುವುದಿಲ್ಲ. ಹೀಗಾಗಿ ಮೊದಲನೇ ಸಮೀಕ್ಷೆಯ ದತ್ತಾಂಶಗಳನ್ನು ಜನರ ಮುಂದಿಡುವುದು ಸರಕಾರದ ಕರ್ತವ್ಯ. ದತ್ತಾಂಶವನ್ನು ಎಷ್ಟು ಜನ ಸ್ವಾಗತಿಸುತ್ತಾರೋ ಇಲ್ಲವೋ ಎಂಬುದು ಪ್ರಶ್ನೆ ಇಲ್ಲಿಲ್ಲ. ಕೆಲವರಿಗೆ ತಲೆ ಎಣಿಕೆಯಷ್ಟೇ ಬೇಕಾಗಿದ್ದರೆ ಮತ್ತೆ ಎಲ್ಲಾ ವರ್ಗದ ಬಡವರು, ಹಿಂದುಳಿದ ವರ್ಗಗಳು, ಅಲಕ್ಷಿತರು ಮತ್ತು ಆದಿವಾಸಿಗಳು ಹಾಗೂ ಅಲೆಮಾರಿ ಸಮುದಾಯಗಳಿಗೆ ದತ್ತಾಂಶಗಳ ಒಳ ಹೂರಣದ ಅಗತ್ಯವಿದೆ. ಯಾವುದೇ ಜಾತಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕಾದ ಉದ್ದೇಶ ಸರಕಾರಕ್ಕೆ ಇರಬೇಕು. ಆ ಮೂಲಕ ಅವುಗಳ ಸರ್ವೋನ್ನತಿಗೆ ಶ್ರಮಿಸಬೇಕು.
ಬರಿ ತಲೆಯನ್ನಷ್ಟೇ ಗಮನಿಸುವ ಕೆಲವು ಜಾತಿ-ವರ್ಗಗಳಿಗೆ, ಅವರ ಇಚ್ಛಾನುಸಾರ ಹೇಗಿದ್ದರೂ ಸರಕಾರ ಎರಡನೇ ಸಮೀಕ್ಷೆ ಮಾಡಲು ತೀರ್ಮಾನಿಸಿದೆ. ಆದ್ದರಿಂದ ಒಂದನೇ ಸಮೀಕ್ಷೆಯ ದತ್ತಾಂಶಗಳನ್ನು ಬಿಡುಗಡೆ ಮಾಡಲು ಸರಕಾರ ಗೊಂದಲ ಪಡಬೇಕಾಗಿಲ್ಲ. ಹಾಗೆ ಮಾಡುವುದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇದನ್ನು ಸರಕಾರ ತೀವ್ರವಾಗಿ ಗಮನಿಸಬೇಕು.
ಸರಕಾರ ಹೇಳಿರುವ ಹಾಗೆ ಎರಡನೇ ಸಮೀಕ್ಷೆಯನ್ನು ಕೇವಲ 90 ದಿನಗಳಲ್ಲಿ ಮಾಡುವುದು ಅಸಾಧ್ಯ. ಸಮೀಕ್ಷೆಯ ಪೂರ್ವಸಿದ್ಧತೆಗೆ ಸಾಕಷ್ಟು ಕಾಲಾವಕಾಶ ಬೇಕೇ ಬೇಕಾಗುತ್ತದೆ (ಈ ವಿಷಯದ ಬಗ್ಗೆ ಮುಂದೊಮ್ಮೆ ವಿವರವಾಗಿ ಬರೆಯಲಾಗುವುದು). ಮತ್ತೊಂದು ಮಹತ್ವದ ಸಮಸ್ಯೆ ಎಂದರೆ ಶಾಲಾ ಶಿಕ್ಷಕರನ್ನು ಗಣತಿ ಕೆಲಸಕ್ಕೆ ಬಳಸಿಕೊಳ್ಳುವ ಹಾಗಿಲ್ಲ. ಶಿಕ್ಷಣದ ಹಕ್ಕು 2009ರ ಕಾಯ್ದೆ ಖಂಡ 24 ಉಪಖಂಡ 1ರ ಪ್ರಕಾರ ಶಾಲಾ ಶಿಕ್ಷಕರನ್ನು ರಜಾ ಅವಧಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ನಾನ್ ಅಕಾಡಮಿಕ್ ಉದ್ದೇಶಕ್ಕೆ ಬಳಸಿಕೊಳ್ಳುವ ಹಾಗಿಲ್ಲ(ಹಾಗಂತ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಂದ ಈ ಆಧುನಿಕ ತಾಂತ್ರಿಕ ಪರಿಕರಗಳಿಂದ ಕೂಡಿದ ಸಮೀಕ್ಷಾ ಕಾರ್ಯವನ್ನು ಮಾಡಬೇಕಾಗುವುದರಿಂದ, ಅದು ಅವರಿಂದ ಕಷ್ಟವಾಗಬಹುದು). ಆದ್ದರಿಂದ ಸಮೀಕ್ಷೆಗೆ ಸಮಗ್ರ ಪೂರ್ವ ಸಿದ್ಧತೆ ಮಾಡಿಕೊಂಡ ನಂತರ ಅಂದರೆ ಎಪ್ರಿಲ್ 2026ಕ್ಕೆ ವಾಸ್ತವ ಸಮೀಕ್ಷೆಯನ್ನು ಪ್ರಾರಂಭಿಸಲು ಸಾಧ್ಯ. ಒಂದು ವೇಳೆ ಸರಕಾರ ದಸರಾ ಅವಧಿಯ ರಜಾ ದಿನಗಳಲ್ಲಿ ಮಾಡಿಸಬೇಕೆಂಬ ಇಚ್ಛೆ ಇದ್ದಲ್ಲಿ ಆ 15 ದಿನಗಳ ಅವಧಿ ಖಂಡಿತ ಸಾಕಾಗುವುದಿಲ್ಲ.
ಕಾಯ್ದೆಯನ್ವಯ ಎರಡನೇ ಸಮೀಕ್ಷೆ ಕಾರ್ಯ ಕೈಗೊಳ್ಳಲು ಸರಕಾರದ ತೀರ್ಮಾನ ಮತ್ತು ಆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ವಿಷಯ ಗೊಂದಲಮಯವಾಗಿದೆ. ಆ ನಿಮಿತ್ತ ಸ್ಪಷ್ಟೀಕರಣವೇ ಈ ಲೇಖನದ ಉದ್ದೇಶ. ಸರಕಾರ ಇನ್ನಾದರೂ ಕಾಯ್ದೆಯಲ್ಲಿ ಒಳಗೊಂಡಿರುವ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಜನರೆಲ್ಲರಿಗೂ ಒಪ್ಪಿಗೆಯಾಗುವಂಥ ಕಾರ್ಯ ಕೈಗೊಳ್ಳಬೇಕು.