ಶೋಷಿತ ವರ್ಗದ ಶಿಕ್ಷಣಕ್ಕೆ ರಾಜ್ಯ ಸರಕಾರದ ಕಾಯಕಲ್ಪ
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ 1914-15ರ ಸುಮಾರಿಗೆ ಭಾರತದಲ್ಲಿದ್ದ ಅವರ ತಂದೆಯ ಗೆಳೆಯರಿಗೆ ತಮ್ಮ ಮಕ್ಕಳನ್ನು ಓದಿಸಿರಿ, ಅದರಲ್ಲೂ ಹೆಣ್ಣು ಮಕ್ಕಳನ್ನು ಓದಿಸಿರಿ ಎಂದು ಪತ್ರಗಳನ್ನು ಬರೆಯುತ್ತಿದ್ದರು. ಶೋಷಿತರ ವಿಮೋಚನೆಗೆ ಶಿಕ್ಷಣವು ಒಂದು ಅಸ್ತ್ರವೆಂದು ಅಂಬೇಡ್ಕರರು ಬಲವಾಗಿ ನಂಬಿದ್ದರು. ಅವರ ಓದಿಗೆ ಬರೋಡಾದ ಮಹಾರಾಜರಾದ ಸಯ್ಯಾಜಿರಾವ್ ಗಾಯಕವಾಡರು ಕೊಟ್ಟ ಮಾಸಿಕ 11.5 ಪೌಂಡ್‌ಗಳ ವಿದ್ಯಾರ್ಥಿವೇತನದ ಬೆಂಬಲವಿತ್ತು. ನಂತರ ಇಂಗ್ಲೆಂಡ್‌ನಲ್ಲಿ ಓದಲು ಕೊಲ್ಲಾಪುರದ ಶಾಹು ಮಹಾರಾಜರ ಹಣಸಹಾಯ ಒದಗಿಬಂತು. ಆ ಮಧ್ಯೆ, ಪಾರ್ಸಿ ಗೆಳೆಯನಾದ ನವಲ್ ಭತೀನಾ ಅವರಿಂದ ಕೈಸಾಲವನ್ನು ಆಗಿಂದಾಗ ಪಡೆದು ಅಂಬೇಡ್ಕರರು ಉನ್ನತ ಶಿಕ್ಷಣವನ್ನು ಪೂರೈಸಿದರು.
‘‘ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿರಿ. ಗಂಡು ಮಕ್ಕಳಿಗೆ ಶಿಕ್ಷಣ ಹೇಗೆ ಅಗತ್ಯವೋ, ಹೆಣ್ಣು ಮಕ್ಕಳಿಗೂ ಶಿಕ್ಷಣ ಅತ್ಯಗತ್ಯ. ನಿಮಗೆ ಓದಲು ಮತ್ತು ಬರೆಯಲು ಬಂದರೆ ಅದೇ ಒಂದು ದೊಡ್ಡ ಪ್ರಗತಿ’’ ಎಂದು ಜುಲೈ 18, 1927ರಲ್ಲಿ ಮಹಾರಾಷ್ಟ್ರದ ಮಹಾಡ್‌ನಲ್ಲಿ ನಡೆದ ಶೋಷಿತರ ಮಹಿಳಾ ಸಮ್ಮೇಳನದಲ್ಲಿ ಡಾ. ಅಂಬೇಡ್ಕರರು ಕರೆಯಿತ್ತರು.
ಡಾ. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿಯವರ ಮಧ್ಯೆ 1932ರಲ್ಲಾದ ಪೂನಾ ಒಪ್ಪಂದದಲ್ಲಿ ಶೋಷಿತರ ಶಿಕ್ಷಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಪ್ರಾಂತದಲ್ಲೂ ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಹಣವನ್ನು ಮೀಸಲಿಡಬೇಕು ಎಂಬ ಒಡಂಬಡಿಕೆಯಾಯಿತು. ನಾಗಪುರದಲ್ಲಿ ಜುಲೈ 18 ಮತ್ತು 19, 1942ರಲ್ಲಿ ನಡೆದ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಸಮ್ಮೇಳನದಲ್ಲಿ ಪ್ರತಿಯೊಂದು ಪ್ರಾಂತೀಯ ಸರಕಾರದ ಆಯವ್ಯಯದಲ್ಲಿ, ಪರಿಶಿಷ್ಟ ಜಾತಿಯ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯಲು ಗೊತ್ತಾದ ಮೊತ್ತವನ್ನು ನಿಗದಿಪಡಿಸಬೇಕು. ಅವರು ಉನ್ನತ ಶಿಕ್ಷಣದಲ್ಲೂ ಪ್ರಗತಿ ಹೊಂದಲು ಹಣ ನಿಗದಿಯಾಗಬೇಕು. ಪ್ರಾಂತೀಯ ಆದಾಯದಲ್ಲಿ ಪ್ರಥಮ ಆದ್ಯತೆ ಮೇರೆಗೆ ಅಂತಹ ಹಣವನ್ನು ತೆಗೆದಿರಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿ ಅದನ್ನು ಮುಂಬರುವ ಸಂವಿಧಾನದಲ್ಲಿ ಅಳವಡಿಸಬೇಕೆಂದು ಒತ್ತಾಯಿಸಲಾಯಿತು.
ಕೇಂದ್ರ ಪುರಸ್ಕೃತ ಯೋಜನೆಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಬಲೀಕರಣಕ್ಕಾಗಿ ವಿದ್ಯಾರ್ಥಿವೇತನ ನೀಡುವ ಕ್ರಮವು 1944-1945ರಿಂದ ಜಾರಿಯಲ್ಲಿದೆ. ಹೊಸದಿಲ್ಲಿಯ ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ನಾಮದೇವ ನಿಮ್ಗಾಡೆ ಎಂಬ ಕೃಷಿ ಪದವೀಧರರು ನವೆಂಬರ್ 14, 1949ರಲ್ಲಿ ಡಾ. ಅಂಬೇಡ್ಕರರನ್ನು ಭೇಟಿ ಮಾಡಿ, ಅವರ ಮಾರ್ಗದರ್ಶನದಂತೆ ಸ್ಕಾಲರ್‌ಶಿಪ್ ಬೋರ್ಡಿನ ಅಧ್ಯಕ್ಷರಾಗಿದ್ದ ಪಂಜಾಬರಾವ್ ದೇಶಮುಖರ ಮೂಲಕ ವಿದ್ಯಾರ್ಥಿವೇತನ ಪಡೆದರು.
ಶೋಷಿತರಿಗೆ ಶಿಕ್ಷಣದ ಮಹತ್ವ ಸಾರುವ ಡಾ. ಅಂಬೇಡ್ಕರರ ಆಶಯವು ಭಾರತದ ಸಂವಿಧಾನದಲ್ಲಿ ಅನುಚ್ಛೇದ 15, 45 ಮತ್ತು 46ರಲ್ಲಿ ಅನಾವರಣಗೊಂಡಿತು. ಅನುಚ್ಛೇದ 15ರಂತೆ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಮೀಸಲಾತಿ ಮತ್ತು 45ರಂತೆ ಎಲ್ಲಾ ಮಕ್ಕಳಿಗೂ 14 ವರ್ಷ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಅನುಚ್ಛೇದ 46ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಜಾಗರೂಕತೆಯಿಂದ ಸಂವರ್ಧಿಸತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಸಂರಕ್ಷಿಸತಕ್ಕದ್ದು ಎಂದಿದೆ.
ಭಾರತದ ಸಂವಿಧಾನ ಜಾರಿಗೆ ಬಂದಂದಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಮಂಜೂರಿನ ನಿಯಮಗಳನ್ನು ಕೇಂದ್ರ ಸರಕಾರ ಹೊರಡಿಸುತ್ತಿತ್ತು. ಅದರ ಹೆಸರೇ ಭಾರತ ಸರಕಾರದ ವಿದ್ಯಾರ್ಥಿವೇತನ. ಮಾಸಿಕ ವಿದ್ಯಾರ್ಥಿವೇತನದ ದರ, ವಾರ್ಷಿಕ ಆದಾಯ ಮಿತಿ ಮುಂತಾದ ನಿಯಮಗಳು ಅದರಲ್ಲಿರುತ್ತಿದ್ದವು. ಎರಡು ವರ್ಷಗಳಿಗೊಮ್ಮೆ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಹಾಗೂ ಹಣದುಬ್ಬರಕ್ಕೆ ಅನುಗುಣವಾಗಿ ವಿದ್ಯಾರ್ಥಿವೇತನದ ದರಗಳು ಪರಿಷ್ಕರಣೆಯಾಗಬೇಕಿತ್ತು. ಆದರೆ, ದೀರ್ಘ ಕಾಲದಿಂದ ಕೇಂದ್ರ ಸರಕಾರವು ಈ ದರಗಳ ಪರಿಷ್ಕರಣೆಗೆ ಕೈ ಹಾಕಿಲ್ಲ ಎಂಬುದು ಅತ್ಯಂತ ದುರದೃಷ್ಟಕರ ವಿಷಯ.
ಕೊನೆಯ ಬಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನದ ದರಗಳು ಜುಲೈ 1, 2010ರಂದು ಪರಿಷ್ಕರಣೆಯಾದವು. ಅದರಂತೆ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಸಮಾನಾಂತರ ಗ್ರೂಪ್ ಎ ಕೋರ್ಸುಗಳ ಹಾಸ್ಟೆಲ್ ವೆಚ್ಚದ ಮಾಸಿಕ ವಿದ್ಯಾರ್ಥಿವೇತನ ರೂ. 1,200 ನಿಗದಿಯಾಯಿತು. ಈ ದರಗಳು ಗ್ರೂಪ್ ಬಿ, ಸಿ, ಡಿ ಗೆ ಕ್ರಮವಾಗಿ ರೂ. 820, 570 ಮತ್ತು 380 ನಿಗದಿಯಾದವು. ಇಂದಿಗೂ ಅದೇ ದರಗಳು ದೇಶಾದ್ಯಂತ ಅನ್ವಯ! ಕೇಂದ್ರ ಸರಕಾರವು ಈ ದರಗಳನ್ನು ಪರಿಷ್ಕರಿಸದಿರುವುದು ಅತ್ಯಂತ ದುರದೃಷ್ಟಕರ. ಹಾಗೆಯೇ, ಈ ವಿದ್ಯಾರ್ಥಿವೇತನ ಪಡೆಯಲು ಹಿಂದಿನ ಯುಪಿಎ ಆಳ್ವಿಕೆಯ ಕೇಂದ್ರ ಸರಕಾರ ಎಪ್ರಿಲ್ 29, 2013ರಂದು ನಿಗದಿ ಮಾಡಿದ 2.5 ಲಕ್ಷ ರೂಪಾಯಿಗಳ ಆದಾಯ ಮಿತಿಯನ್ನೂ ಕೂಡ ಇಂದಿನ ಎನ್‌ಡಿಎ ಸರಕಾರ ಪರಿಷ್ಕರಿಸುವ ಗೋಜಿಗೆ ಹೋಗಿಲ್ಲದಿರುವುದು ಶೋಚನೀಯ ವಿಷಯ.
ಸಂಸತ್ತಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ಥಾಯಿ ಸಮಿತಿಯು ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿ, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ವಸ್ತುಸ್ಥಿತಿಯ ಆಧಾರದ ಮೇಲೆ ಮಾಸಿಕ ವಿದ್ಯಾರ್ಥಿವೇತನದ ದರ, ವಾರ್ಷಿಕ ಆದಾಯ ಮಿತಿಯ ಪರಿಷ್ಕರಣೆಗೆ ಶಿಫಾರಸು ಮಾಡುತ್ತಿತ್ತು. ಇದೀಗ ಇದೇ ಮಾರ್ಚ್ 17, 2025ರಂದು ವರದಿಯಾಗಿರುವಂತೆ ಸಂಸದೀಯ ಸ್ಥಾಯಿ ಸಮಿತಿಯು ಈಗ ನೀಡಲಾಗುತ್ತಿರುವ ವಿದ್ಯಾರ್ಥಿವೇತನವು ಸಾಕಾಗುತ್ತಿಲ್ಲ. ಗುಣಮಟ್ಟದ ಕಲಿಕೆಗಾಗಿ ವಿದ್ಯಾರ್ಥಿವೇತನವನ್ನು ಪರಿಷ್ಕರಿಸಬೇಕು ಎಂದು ಹೇಳಿದೆ.
ಹೀಗಿರುವಾಗ, ಕರ್ನಾಟಕ ರಾಜ್ಯ ಸರಕಾರವು ಮಾರ್ಚ್ 7, 2025ರಂದು ಮಂಡಿಸಿದ 2025-26ರ ಆಯವ್ಯಯದಲ್ಲಿ ಕಂಡಿಕೆ 188ರಲ್ಲಿ ಸರಕಾರಿ ಮತ್ತು ಖಾಸಗಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಅದೇ ಕಾಲೇಜಿನ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದಿದ್ದಲ್ಲಿ, ಅವರಿಗೆ ವಸತಿ ನಿಲಯದ ವೆಚ್ಚವಾಗಿ ಪ್ರತೀ ತಿಂಗಳು ರೂ. 3,500ಗಳನ್ನು ಪಾವತಿಸಲಾಗುವುದು ಎಂದು ಘೋಷಿಸಿದೆ. ಇದರಿಂದ ವೃತ್ತಿಪರ ಕೋರ್ಸುಗಳಲ್ಲಿ ಓದುತ್ತಿರುವ ಲಕ್ಷಾಂತರ ಪರಿಶಿಷ್ಟ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಹದುಪಕಾರವಾಗಲಿದೆ. ಈ ಕ್ರಮದಿಂದ ಡಾ. ಅಂಬೇಡ್ಕರ್‌ರವರ ಶಿಕ್ಷಣದ ಪರಿಕಲ್ಪನೆಗೆ ರಾಜ್ಯ ಸರಕಾರ ಕಾಯಕಲ್ಪ ಮಾಡಿದೆ. ರಾಜ್ಯ ಸರಕಾರದ ನಡೆ ಅವಿಸ್ಮರಣೀಯ. ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಮಂತ್ರಿಗಳು ಅಭಿನಂದನಾರ್ಹರು.