×
Ad

ಯುನೆಸ್ಕೊ ಸೇರುವ ಸಾಲಿನಲ್ಲಿ ಶಿಲಾಯುಗದ ಮೋರೇರ ಗೋರಿಗಳು

Update: 2025-06-30 15:15 IST

ಕೊಪ್ಪಳ: ನಗರದಿಂದ 40 ಕಿ.ಮೀ. ದೂರದಲ್ಲಿರುವ ಹಿರೇಬೆಣಕಲ್ ಗ್ರಾಮದ ಕಡಿದಾದ ಗುಡ್ಡದಲ್ಲಿರುವ ಶಿಲಾಯುಗದ ಜನರು ನಿರ್ಮಿಸಿದ ಮೋರೇರ ಗೋರಿಗಳು ಭಾರತದಲ್ಲಿನ ಅಪರೂಪದ ಸ್ಥಳಗಳಲ್ಲಿ ಇದೂ ಒಂದಾಗಿದೆ.

ನಾವು ಇಂದು ನೋಡುವ ಸ್ಮಾರಕಗಳು 1,000 ದಿಂದ 1,500 ವರ್ಷಗಳ ಹಿಂದಿನವು. ಕ್ರಿಸ್ತ ಪೂರ್ವ 2,000-ದಿಂದ 3,000ದಲ್ಲಿ ನಿರ್ಮಾಣ ಮಾಡಲಾದ ಈ ಮೋರೇರ ಗೋರಿಗಳು ಭಾರತದ ಮೇಘಾಲಯವನ್ನು ಹೊರತುಪಡಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೋರೇರ ಗೋರಿಗಳು ಇರುವುದು ಕೊಪ್ಪಳದ ಹಿರೇಬೆಣಕಲ್‌ನಲ್ಲಿ. ಈ ಸ್ಥಳವನ್ನು ವಿಶ್ವಪಾರಂಪರಿಕ ತಾಣದಲ್ಲಿ ಸೇರಿಸಲು ನಿರ್ಧಾರ ಮಾಡಿದ್ದು ಈ ಭಾಗದ ಜನರಲ್ಲಿ ಸಂತಸವನ್ನು ಮೂಡಿಸಿದೆ.

ಸದ್ಯ 28 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸಲಾಗಿದ್ದು, ಈ ಸ್ಮಾರಕಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲು ಬೆಂಗಳೂರಿನ ಇನ್‌ಟ್ಯಾಕ್ಟ್ ಎನ್‌ಜಿಒಗೆ ನೀಡಲಾಗಿದ್ದು, ಈ ಸಂಸ್ಥೆಯು ಈ ಹಿಂದೆ ಬೇಲೂರು ಮತ್ತು ಹಳೆಬೀಡು ಪ್ರದೇಶದಲ್ಲಿ ಉತ್ಖನನ ನಡೆಸಿ ಯುನೆಸ್ಕೊ ಪಟ್ಟಿಗೆ ಸೇರಿಸಲು ವರದಿಯನ್ನು ಸಿದ್ಧಪಡಿಸಿತ್ತು ಮತ್ತು ಈ ಪ್ರದೇಶಗಳು 2023ರಲ್ಲಿ ಯುನೆಸ್ಕೊ ಪಟ್ಟಿಗೆ ಸೇರಿತ್ತು.

ಸದ್ಯ ಜನರಲ್ಲಿ ಮೋರೇರ ಗೋರಿಗಳ ಕುರಿತು ಗೊಂದಲಗಳಿದ್ದು, ಕೆಲವರು ಇದನ್ನು ಗೋರಿಗಳಲ್ಲ ಇವು ಅವರ ಮನೆಗಳು ಎಂದು ಹೇಳುತ್ತಾರೆ. ಇನ್ನು ಕೆಲವರು ಇದು ಮೋರೇರ ಗೋರಿಗಳು ಎನ್ನುತ್ತಾರೆ. ಈ ಬಗೆಗಿನ ಗೊಂದಲ ಉತ್ಖನನದ ನಂತರ ನಿವಾರಣೆಯಾಗುವ ಸಾಧ್ಯತೆಗಳಿವೆ.

ಸಮಾಧಿಗಳಿಂದ ಸ್ವಲ್ಪ ದೂರದಲ್ಲಿರುವ ಕೆರೆ ಮತ್ತು ಗವಿಗಳ್ಳಿ ಅಂದಿನ ಜನರಿಂದ ಚಿತ್ರಿಸಲಾದ ಚಿತ್ರಗಳು ಇಲ್ಲಿ ಜನರು ವಾಸಿಸುತ್ತಿದ್ದರು ಎಂದು ಹೇಳುತ್ತವೆ. ಗುಹೆಗಳಲ್ಲಿ ಆ ಕಾಲದ ಜನರು ಮಹಿಳೆಯ ಪ್ರಸವದ ಚಿತ್ರ ಬಿಡಿಸಿದ್ದು ಇದು ನಿಜಕ್ಕೂ ಅದ್ಭುತವಾಗಿದೆ.

ಹಿನ್ನೆಲೆ: ಸುಮಾರು 200ಕ್ಕೂ ಹೆಚ್ಚು ಇಂತಹ ಶಿಲೆಗಳಿದ್ದು, ಇವುಗಳನ್ನು ಯಾವುದೇ ಗಾರೆಯ ಸಹಾಯದಿಂದ ನಿರ್ಮಿಸಲಾಗಲಿಲ್ಲ, ಸ್ಥಳೀಯರು ಈ ಪ್ರದೇಶವನ್ನು ಏಳು ಬೆಟ್ಟಗಳು ಅಥವಾ ಮೋರೇರ ಮನೆಗಳು ಎಂದು ಕರೆಯತ್ತಾರೆ. ಈ ಪ್ರದೇಶವನ್ನು ಆಕಾಲಕ್ಕೆ ಆಳುತ್ತಿದ್ದ ಹೈದರಾಬಾದ್‌ನ ನಿಜಾಮನ ಆಡಳಿತದಲ್ಲಿದ್ದ ಫಿಲಿಪ್ ಮೆಡೋಸ್ ಟೇಲರ್ ಎಂಬ ಅಧಿಕಾರಿ ಕಂಡು ಹಿಡಿದಿದ್ದ ಮತ್ತು ಇದರ ಕುರಿತು 1835ರಲ್ಲಿ ‘ಜರ್ನಲ್ ಆಫ್ ದಿ ರಾಯಲ್ ಏಷಿಯಾಟಿಕ್ ಸೊಸೈಟಿ’ ಎಂಬ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು ಎಂದು ಹೇಳಲಾಗುತ್ತದೆ.

ಈ ಸ್ಥಳದಲ್ಲಿ ಸುಮಾರು 80 ಶಿಲಾ ಕೋಣೆಗಳಿದ್ದು ಇದರಲ್ಲಿ ಇದರಲ್ಲಿ ಅಗಲಿದವರ ದೇಹದ ಮೂಳೆಗಳನ್ನು ಒಂದು ಮಡಿಕೆಯಲ್ಲಿ ಹಾಕಿ ಹೂತಿರುವುದನ್ನು ಕಾಣಬಹುದು. ಈ ಶಿಲಾ ಕೋಣೆಗಳಲ್ಲಿ ಒಂದು ಸಣ್ಣದಾದ ರಂದ್ರವಿದ್ದು ಅದರಿಂದ ಅವರಿಗೆ ನೈವೇದ್ಯವನ್ನು ಹಾಕಲಾಗುತ್ತಿತ್ತು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ ಮತ್ತು ಈ ವ್ಯವಸ್ಥೆಯು ಆ ಕಾಲದಲ್ಲಿ ಇದ್ದ ಜನರ ಪುರ್ನಜನ್ಮದ ನಂಬಿಕೆಯನ್ನು ತೋರುತ್ತದೆ. ಕೆಲ ಸಮಾಧಿಗಳ ಮುಂದೆ ಒಂದು ಮೂರ್ತಿ ಇದ್ದು, ಅದರ ತಲೆ ಮುರಿದು ಬಿದ್ದಿದ್ದು ಬೇರೆ ಕಡೆ ಇರುವ ಮೂರ್ತಿಗಳಿಗೆ ಹೋಲಿಸಿದರೆ ಇದು

ಉತ್ತಮ ಸ್ಥಿತಿಯಲ್ಲಿದೆ. ಇನ್ನು ಭಾರತದ ಬೇರೆ ಕಡೆ ಇರುವ ಈ ಇಂತಹ ಸ್ಥಳಗಳಿಗೂ ಈ ಸ್ಥಳಗಳಿಗೂ ಒಂದು ವಿಶೇಷವಿದ್ದು ಅದು ಇಲ್ಲಿನ ಗವಿಚಿತ್ರಗಳು, ಇಲ್ಲಿರುವ ಚಿತ್ರಗಳಗಾತ್ರ ಬೇರೆ ಕಡೆ ಕಾಣಲು ಸಿಗುವುದಿಲ್ಲ.

ಅಪರೂಪದ ಗವಿ ಚಿತ್ರಗಳು

ಈ ಮೋರೇರ ಗೋರಿಗಳಿರುವ ಗುಡ್ಡದಲ್ಲಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಿದ್ದು, ಅವುಗಳಲ್ಲಿ 2 ಮತ್ತು 17ನೇ ಗವಿಯಲ್ಲಿರುವ ಚಿತ್ರಗಳು ಸೊಗಸಾಗಿವೆ. ಇದರಲ್ಲಿ ಒಂದು ಚಿತ್ರ ಹೆಬ್ಬಾವಿನದಾಗಿದ್ದು ಇದರಲ್ಲಿ ಹಾವಿನ ನಾಲಿಗೆ, ಕಣ್ಣುಗಳು ಕಾಣುವ ದೃಶ್ಯಗಳಿವೆ. ಇದರಲ್ಲಿ ಮನುಷ್ಯನ ಚಿತ್ರ, ಹಂದಿಯ ಮುಖ, ಎತ್ತುಗಳು ಮತ್ತು ಸ್ತ್ರೀ-ಪುರುಷರ ರೇಖಾಚಿತ್ರವನ್ನು ಕಾಣಬಹುದು. ವಿಶೇಷವಾಗಿ ಗರ್ಭಿಣಿಯ ಪ್ರಸವದ ಅಪರೂಪದ ಚಿತ್ರಗಳಿದ್ದು, ಇದರಲ್ಲಿ ಪ್ರಸವದ ಎರಡು ಹಂತಗಳನ್ನು ಕಾಣಬಬಹುದು. ಪ್ರಸವದ ಸಂದರ್ಭದಲ್ಲಿ ಹೊಟ್ಟೆಯಲ್ಲಿರುವ ಶಿಶುವಿನ ತಲೆ ಕೆಳಗಾಗಿ ಬಂದಿರುವುದು ಮತ್ತು ಪ್ರಸವದ ನಂತರ ಶಿಶು ಹೊರ ಬಂದಿರುವುದನ್ನು ಬಿಂಬಿಸುವ ಅಪರೂಪದ ಚಿತ್ರಗಳನ್ನು ಕಾಣಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News