×
Ad

ಹುಳ ತಿಂದ ತೊಗರಿ ಪೂರೈಕೆ: ಬಡ ಮಕ್ಕಳ ಆರೋಗ್ಯದೊಂದಿಗೆ ಆಟ

ಉಪನಿರ್ದೇಶಕರು ಶಾಮೀಲಾಗಿರುವ ಆರೋಪ

Update: 2025-11-15 08:49 IST

ಯಾದಗಿರಿ : ಜಿಲ್ಲಾದ್ಯಂತ ಮಧ್ಯಾಹ್ನ ಬಿಸಿಯೂಟ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಪೂರೈಕೆ ಆಗುತ್ತಿರುವ ಆಹಾರ ಧಾನ್ಯದಲ್ಲಿ ನುಸಿಗಟ್ಟಿದ, ಹುಳ ತಿಂದ ತೊಗರಿಬೇಳೆ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಡ ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತಿರುವ ಈ ಅಕ್ರಮದಲ್ಲಿ ಅಕ್ಷರ ದಾಸೋಹ ಇಲಾಖೆಯ ಉಪನಿರ್ದೇಶಕರೇ ನೇರವಾಗಿ ಶಾಮಿಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಧ್ಯಾಹ್ನ ಬಿಸಿಯೂಟ ಯೋಜನೆ ಬಡ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡುವ ಉದ್ದೇಶದಿಂದ ಸರಕಾರ ಜಾರಿಗೊಳಿಸಿದ ಮಹತ್ವದ ಯೋಜನೆ. ಆದರೆ ಯಾದಗಿರಿಯಲ್ಲಿ ಅಧಿಕಾರಿಗಳು ಮತ್ತು ಟೆಂಡರ್‌ದಾರರ ನಂಟಿನಿಂದ ಕಳಪೆಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಿ, ಮಕ್ಕಳ ಆರೋಗ್ಯದೊಂದಿಗೆ ಆಟವಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಸಂಘಟನೆಯವರು ಆರೋಪಿಸಿದ್ದಾರೆ.

ಉಪನಿರ್ದೇಶಕರು ಟೆಂಡರ್‌ದಾರರಿಂದ ಲಂಚ ಸ್ವೀಕರಿಸಿ, ನುಸಿಗಟ್ಟಿದ ಮತ್ತು ಹುಳು ತಿಂದ ತೊಗರಿ ಬೆಳೆಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲು ಅವಕಾಶ ನೀಡುತ್ತಿದ್ದಾರೆ. ಫಲವಾಗಿ, ಮಕ್ಕಳು ಹೊಟ್ಟೆನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇಂತಹ ಬೆಳೆಯನ್ನು ಮಕ್ಕಳು ಸೇವಿಸುವುದೇ ವಿಷ ಸೇವಿಸುವಂತಾಗಿದೆ. ಜಿಲ್ಲೆಯ ಶಹಾಪೂರ, ಸುರಪುರ, ಯಾದಗಿರಿ ತಾಲೂಕುಗಳ ಎಲ್ಲ ಗೊದಾಮುಗಳನ್ನು ತಕ್ಷಣ ಪರಿಶೀಲಿಸಬೇಕು. ಇಲ್ಲವಾದರೆ ನವೆಂಬರ್ 20ರಂದು ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಸಂಘಟನೆಯವರು ಎಚ್ಚರಿಸಿದ್ದಾರೆ.

ಸಂಘಟನೆಗಳು ಉಪನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಸೇವೆಯಿಂದ ವಜಾಗೊಳಿಸಬೇಕೆಂದು ಸಂಘಟನೆಯವರು ಆಗ್ರಹಿಸಿದ್ದಾರೆ.

ಪತ್ರಕರ್ತರ ಕರೆ ಸ್ವೀಕರಿಸದ ಇಬ್ಬರು ಅಧಿಕಾರಿಗಳು :

ಪತ್ರಕರ್ತರು ಅಕ್ಷರ ದಾಸೋಹದ ಬಗ್ಗೆ ಮಾಹಿತಿ ಪಡೆಯಲು ಹಲವು ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿದರೂ-ಬಹುತೇಕರು ಕರೆ ಸ್ವೀಕರಿಸುವುದೇ ಇಲ್ಲ. ಜಿಲ್ಲಾ ಪಂಚಾಯತ್ ಅಧಿಕಾರಿಯಂತೂ ಪತ್ರಕರ್ತರ ಕರೆ ಸ್ವೀಕರಿಸದೇ ಮಾಯವಾಗುವುದು ರೂಢಿಯೇ ಆಗಿದೆ. ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಯೂ ಕರೆ ಸ್ವೀಕರಿಸಿಲ್ಲ ಎಂಬ ಆರೋಪವಿದೆ.

ಶಹಾಪೂರ, ಸುರಪುರ ಹಾಗೂ ಯಾದಗಿರಿ ತಾಲೂಕಿನ ಸರಕಾರಿ ಶಾಲೆಗಳ ಗೋದಾಮುಗಳಲ್ಲಿ ಕಳಪೆ ಧಾನ್ಯ ಸಂಗ್ರಹಿಸಿರುವುದು ಅತೀವ ಗಂಭೀರ ವಿಚಾರ. ಪೋಷಕರು ಬಿಸಿಯೂಟದ ಗುಣಮಟ್ಟವನ್ನು ಪ್ರಶ್ನಿಸುತ್ತಿದ್ದರೆ, ಶಿಕ್ಷಕರು ಹಾಗೂ ಅಡುಗೆ ಸಹಾಯಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀಡಬೇಕಾದ ಆಹಾರವೇ ಹಾಳಾಗಿದೆ ಎಂದಾದರೆ ಮಕ್ಕಳು ಅದನ್ನು ಹೇಗೆ ತಿನ್ನುತ್ತಾರೆ? ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ.

-ಮಾಳಪ್ಪ ಕಿರದಳ್ಳಿ, ಜಿಲ್ಲಾಧ್ಯಕ್ಷರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಯಾದಗಿರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News