×
Ad

ಗುಡಿಸುವ ಕಾಯಕದ ಹಳ್ಳೇರ್

Update: 2025-11-12 09:55 IST

‘‘ನಾವು ಹಳೆಯ ಶಿಸ್ತಿನಿಂದ ಇರುವುದರಿಂದಾಗಿ ಹಳ್ಳೇರು ಎಂಬ ಹೆಸರು ಬಂತು. ನಾವು ಹಳೆಯ ನಡೆ ನಡಾವಳಿಕೆಗಳನ್ನು ಪಾಲಿಸಿಕೊಂಡು ಬರುವ ಭಕ್ತರು. ನಾವು ಹಳೆಯರು, ಹಳಬರು, ಹಳೆಯರೇ ಮುಂದೆ ಹಳ್ಳೇರರಾದವರು’’ ಎಂದು ಹಳ್ಳೇರ್ ಸಮುದಾಯದವರು ಮುಗ್ಧವಾಗಿ ಹೇಳುತ್ತಾರೆ.

ಅಗೇರ ಸೋಮು ಹಳ್ಳೇರ ಕೇಮು ಮುಕ್ರಿ ಓಮು ಹರಿಜನರೊ

ಹಗಲು ಇರುಳು ಬೆಳಗು ಬೈಗು

ದುಡಿದು ದುಡಿದು ಸುಸ್ತಾದವರು

ಇಲ್ಲಾ ಗದ್ದೆ ಇರುವುದು ಹುದ್ದೆ

ಹರಿಜನ ಹುದ್ದೆಯು ನಿಮಗಿಲ್ಲ

‘ಹಳ್ಳೇರ್’ ಸಮುದಾಯ ಬಹುತೇಕ ಬದುಕು ಕಟ್ಟಿಕೊಂಡಿರುವ ಉತ್ತರ ಕನ್ನಡದಲ್ಲೇ ನೆಲೆಸಿದ್ದ ಕನ್ನಡದ ಖ್ಯಾತ ಚುಟುಕು ಕವಿ ದಿನಕರ ದೇಸಾಯಿ ಅವರು ಹಳ್ಳೇರ್ ಸಮುದಾಯವನ್ನು ತಮ್ಮದೊಂದು ಪದ್ಯದಲ್ಲಿ ಮೇಲಿನಂತೆ ಸ್ಮರಿಸಿದ್ದಾರೆ.

ಹಳ್ಳೇರ್ ಅಂದರೆ ಯಾರು? ‘‘ನಾವು ಹಳೆಯ ಶಿಸ್ತಿನಿಂದ ಇರುವುದರಿಂದಾಗಿ ಹಳ್ಳೇರು ಎಂಬ ಹೆಸರು ಬಂತು. ನಾವು ಹಳೆಯ ನಡೆ ನಡಾವಳಿಕೆಗಳನ್ನು ಪಾಲಿಸಿಕೊಂಡು ಬರುವ ಭಕ್ತರು. ನಾವು ಹಳೆಯರು, ಹಳಬರು, ಹಳೆಯರೇ ಮುಂದೆ ಹಳ್ಳೇರರಾದವರು’’ ಎಂದು ಹಳ್ಳೇರ್ ಸಮುದಾಯದವರು ಮುಗ್ದವಾಗಿ ಹೇಳುತ್ತಾರೆ.

ಒಮ್ಮೆ ಸಾಮಾನು ಸರಂಜಾಮುಗಳನ್ನೆಲ್ಲ ಒಟ್ಟಿಗೆ ಇಟ್ಟುಕೊಂಡು ಬೇರೆ ಬೇರೆ ಗುಂಪಿನ ಜನರೆಲ್ಲಾ ಒಂದೆಡೆ ನೆರೆದರಂತೆ, ಆಗ ಯಜಮಾನನಾದವ ನೆರೆದವರಿಗೆ ‘‘ನಿಮಗೆ ಬೇಕಾದ್ದನ್ನು ಎತ್ತಿಕೊಳ್ಳಿ’’ ಎಂದನಂತೆ. ಆಗ ಅಲ್ಲಿ ಸೇರಿದ್ದ ಬೇರೆಬೇರೆ ಜಾತಿಯ ಜನ ತಮಗೆ ಬೇಕಾದ ಅಮೂಲ್ಯ ವಸ್ತುಗಳನ್ನು ಎತ್ತಿಕೊಂಡರಂತೆ. ಆಗ ಹಳ್ಳೇರ ಮುದುಕಿಯೊಬ್ಬಳು ‘‘ನಮಗೊಂದು ಹಡಿ(ಕಸಬರಿಕೆ) ಗರಿ ಇದ್ರೆ ಸಾಕ್’’ ಎಂದು ಪೊರಕೆಯನ್ನು ತೆಗೆದುಕೊಂಡು ಬಂದಳಂತೆ.

ಆ ಹಿಡಿ, ಗೆರ್ಸಿ ತೆಗೆದುಕೊಂಡು ಹಳ್ಳಿ ಹಳ್ಳಿ ತಿರುಗಿ, ಮೇಲ್ಜಾತಿ ಜನರ ಮನೆ ಮುಂದೆ ಕಸ ಗುಡಿಸುತ್ತಾ ‘‘ನಮ್ಗೆ ಹಿಡಿ ಗೆರ್ಸಿ ಸಿಕ್ಕಿದ್ದೇ ಸಾಕು ನಾವು ಹಳ್ಳಿ ಹಳ್ಳಿ ಗುಡಿಸುವ ಹಳ್ಳೇರೆಯ’’ ಎಂದು ಆ ಅಜ್ಜಿ ಹೇಳಿದ ಕಾರಣ ಹಳ್ಳೇರರಾದರಂತೆ.

ಕಾರವಾರದ ಕಡೆಯ ವೆಂಕಟೇಶ್ ಹಳ್ಳೇರ್, ಕುಮಟಾದ ಮಹದೇವ್ ಹಳ್ಳೇರ್ ನನಗೆ ಆಗೀಗ ಫೋನ್ ಮಾಡಿ ತಮ್ಮ ಸಮುದಾಯದ ಜಾತಿಪ್ರಮಾಣ ಪತ್ರದ ಸಮಸ್ಯೆಯಿಂದ ಹಿಡಿದು ತಮ್ಮ ಮಕ್ಕಳು ವಾಹನ ದಟ್ಟಣೆ ಹೆಚ್ಚಾಗಿ ಇರುವ ರಸ್ತೆಗಳಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ಅವರಿಗೆ ಒಂದು ಬಸ್ ಹಾಕಿಸಿಕೊಡಿ ಎಂಬ ಮನವಿಗಳನ್ನು ಮಾಡುತ್ತಾರೆ. ಯಾವುದೇ ಅಧಿಕಾರ, ಪ್ರಭಾವ ಇಲ್ಲದ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಇದನ್ನು ಹೊರತುಪಡಿಸಿದರೆ ಹಳ್ಳೇರ್ ಸಮುದಾಯದ ಕುರಿತು ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಡಾ. ಅಂಬೇಡ್ಕರ್ ಸಂಶೋಧನಾ ಕೇಂದ್ರ ನನಗೆ ಎಸ್.ಸಿ. ಪಟ್ಟಿಯಲ್ಲಿರುವ ಸಮುದಾಯಗಳ ಕುರಿತು ಸಂಶೋಧನೆ ಮಾಡಿಸುವ ಜವಾಬ್ದಾರಿ ನೀಡಿದಾಗ, ಸದರಿ ಹಳ್ಳೇರ್ ಸಮುದಾಯದ ಕುರಿತು ಸಂಶೋಧನೆ ಮಾಡಲು ಗೆಳೆಯ ಮಹೇಂದ್ರ ಕುಮಾರ್ ಬಿ.ಪಿ.ಯವರಿಗೆ ವಹಿಸಿದೆ. ಉತ್ತರ ಕನ್ನಡದ ಕಾಡುಗಳಲ್ಲಿರುವ ಆದಿವಾಸಿಗಳ ಕುರಿತು ಅಪಾರ ಅರಿವು, ಕಾಳಜಿ ಇದ್ದ ಮಹೇಂದ್ರಕುಮಾರ್ ಹಳ್ಳೇರ್ ಸಮುದಾಯದ ಕುರಿತು ಅಪಾರ ಮಾಹಿತಿಯುಳ್ಳ ಸಂಶೋಧನೆಯನ್ನು ಮಾಡಿಕೊಟ್ಟಿದ್ದಾರೆ.

ಹಳ್ಳೇರ್ ಸಮುದಾಯ ಬಹುತೇಕ ಉತ್ತರ ಕನ್ನಡ ಜಿಲ್ಲೆಯ ಮುಂಡಳ್ಳಿ, ತೇರನಮಕ್ಕಿ, ಮಂಕಿ, ಹಡಿನಬಾಳ, ಚಿಕ್ಕನಗೋಡು, ಮೂಡ್ಕಣಿ, ಕಡಗೇರಿ, ಖರ್ವಾ, ಅಳ್ಳಂಕಿ, ಸಂಸಿ, ಜಲವಳ್ ಕರ್ಕಿ, ತಲಗೋಡು, ಹಾಡಗೇರಿ, ಗುಂಡೀಬೈಲು, ಇಡಗುಂಜಿ, ಮಾಳಕೋಡು, ಹಿರೇಗುತ್ತಿ, ಎಣ್ಣೆಮಡಿ, ಮೊರಬ, ಮಾದನಗೇರಿ, ಬಾಡ, ಕಾಗಾಲ, ಬಳಲೆ, ಅಚವೆ, ಚಿನಗಾರ ಕೇಸೂಳ್ಳಿ, ಕುಂಟಕಣಿ, ಮಾಬ್ಗಿ ಸಿರಸಿಗಳಲ್ಲಿ ನೆಲೆಸಿದ್ದಾರೆ. ಅಂತೆಯೇ ಮುಂಬೈ ಪ್ರಾಂತದ ಗೆಜೆಟಿಯರ್ ನಂತೆ ಬಾಡ, ಸಿದ್ದರ, ಶಿವೇಶ್ವರ, ಮಾಚಾಳಿ, ಕಡ್ವಾಡ, ಕಾರವಾರ, ಅಂಕೋಲ, ಕರ್ಕಿ ಹಳ್ದೀಪುರ ಮುಂತಾದೆಡೆ ನೆಲೆಸಿದ್ದಾರೆ.

ಹಳ್ಳೇರ್ ಸಮುದಾಯದಲ್ಲಿ ಒಂಭತ್ತು ಬಳಿಗಳಿವೆ. ಅಜ್ಜಾರ, ಗಂಗಾರ, ಹೊನ್ನ, ಆನೆ, ಸಿರಿನ, ಸಿಟ್ಟಿ, ತೋಣರ, ಕುದ್ರಿ ಮತ್ತು ರಾಜ್. ಇವೆಲ್ಲವೂ ಗಿಡ, ಮರ, ಪ್ರಾಣಿಗಳ ಹೆಸರುಗಳಾಗಿದ್ದು ಪ್ರಕೃತಿಯ ಮೂಲ ಆರಾಧನೆಯನ್ನು ತಮ್ಮ ಕುಲಚಿಹ್ನೆಗಳ ಮೂಲಕ ಕಾಪಾಡುತ್ತಾ ಬಂದಿದ್ದಾರೆ. ತಮ್ಮ ಕುಲದ ಚಿಹ್ನೆಯ ಪ್ರಾಣಿ, ಕಾಡು, ಮರಗಳನ್ನು ನಾಶಪಡಿಸದೆ ಜತನದಿಂದ ಕಾಪಾಡಿಕೊಳ್ಳುತ್ತಾರೆ. ಇವರದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ. ಇವರ ಬದುಕು ಬಾಳುಗಳು ಮುಂದುವರಿಯುವುದೇ ಹೆಣ್ಣಿಂದ. ಈಗೀಗ ಇತರ ಸಮುದಾಯಗಳ ಪ್ರಭಾವದಿಂದ ಪಿತೃ ಪ್ರಧಾನ ವ್ಯವಸ್ಥೆಯೆಡೆಗೆ ಚಲಿಸುತಿದ್ದಾರೆ.

ಇವರು ಬೇಟೆಗಾರರೂ ಹೌದು, ವರ್ಷಕ್ಕೆ ಕನಿಷ್ಠ ಎರಡು ಸಲ ಬೇಟೆಯಾಡಲೇಬೇಕು, ಇಲ್ಲದಿದ್ದರೆ ದನಕರುಗಳಿಗೆ, ಊರಿಗೆ ತೊಂದರೆ ಬರುತ್ತದೆಂದು ನಂಬಿದ್ದಾರೆ. ವರ್ಷದಲ್ಲಿ ಒಂದು ವಾರ ಕಾಡಿನಲ್ಲಿಯೇ ಇದ್ದು ಬೇಟೆಯಾಡುತ್ತಾರೆ. ಇದನ್ನು ವಸತಿ ಬೇಟೆ ಎಂದು ಕರೆಯುತ್ತಾರೆ.

ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರಾಗಿರುವ ಹಳ್ಳೇರ್ ಸಮುದಾಯದವರು ತಮ್ಮದೇ ಆದ ಮೌಖಿಕ ಕಾವ್ಯಗಳನ್ನು ಕಟ್ಟಿಕೊಂಡು ಹಾಡುತ್ತಾರೆ. ಇವರ ಮೌಖಿಕ ಕಾವ್ಯವನ್ನು ನಮ್ಮ ‘ಸಭ್ಯ’ ಸಮಾಜ ಇತ್ತೀಚೆಗಷ್ಟೇ ಕಣ್ಣು ತೆರೆದು ನೋಡುತ್ತಿದೆ.

ಕಡುಬಡವರಾದ ಹಳ್ಳೇರ್ ಸಮುದಾಯದಲ್ಲಿ ಬಹುತೇಕ ಹೊರಹೋಗಿ ಕೂಲಿನಾಲಿ ಮಾಡಬೇಕಾಗಿರುತ್ತದೆ, ಈ ಕಾರಣಕ್ಕೆ ಹಳ್ಳೇರರ ಮಕ್ಕಳು ಮನೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಇವರಲ್ಲಿ ಸಾಕ್ಷರತಾ ಪ್ರಮಾಣ ಬಹಳ ಕಡಿಮೆ. ಅಂತೆಯೇ ಇವರ ಮೂಲ ಕಸುಬು ಜಮೀನ್ದಾರರ ಮನೆಗಳ ಮುಂದೆ ಕಸ ಗುಡಿಸುವುದು, ಕೃಷಿಕೂಲಿ ಕೆಲಸಗಳನ್ನು ಮಾಡುವುದಷ್ಟೇ. ಸರಕಾರದ ನಾಲ್ಕನೇ ದರ್ಜೆ ಕೆಲಸಗಳೂ ಇವರಿಗೆ ದಕ್ಕಿಲ್ಲ.ಬಹುತೇಕ ಜೀತಗಾರರಾಗಿದ್ದ ಸಮುದಾಯವಿದು.

ಹಳ್ಳೇರ್ ಸಮುದಾಯದವರು ಒಳ್ಳೆಯ ವಾದನಕಾರರು. ಅವರ ಕೊಳಲು, ಡೋಲು, ಸಂಬಾಳ, ಸನಾಯಿ, ಕಹಳೆ, ತಾಳಗಳಿಂದ ಕೂಡಿದ ಹಳ್ಳೇರ್ ಪಂಚವಾದ್ಯಗಳು ಈ ಪ್ರದೇಶದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದಿವೆ. ತಮ್ಮ ಶುಭ ಸಮಾರಂಭಗಳಲ್ಲಿ, ತೇರು, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಈ ವಾದ್ಯಗಳನ್ನು ಬಾರಿಸುತ್ತಾರೆ.

ಹಳ್ಳೇರ್ ಸಮುದಾಯ ಶತಶತಮಾನಗಳಿಂದ ‘ಘಜನಿ’ ಭೂಮಿಗೆ ಅವಲಂಬಿತವಾಗಿ ಸಮುದ್ರ ಮತ್ತು ಹೊಳೆ ಸೇರುವ ಕರಾವಳಿಯ ತಟದ ಉದ್ದಕ್ಕೂ ವಿಶೇಷ ತಳಿ ‘ಕಗ್ಗ’ ಭತ್ತವನ್ನು ಬೆಳೆದು ರಾಜರಿಂದ ಹಿಡಿದು, ಸೈನಿಕರು, ಜಮೀನ್ದಾರರುಗಳಿಗೆ ಕೊಟ್ಟು ಬದುಕು ಸವೆಸಿದವರು. ಆದರೆ ಅವರು ಮಾತ್ರ ನಿರ್ಗತಿಕರಾಗಿಯೇ ಉಳಿದುಬಿಟ್ಟರು. ಒಂದು ಕಾಲದಲ್ಲಿ ಅಂಕೋಲ, ಕುಮಟಗಳಲ್ಲಿ ಒಂದೋ ಎರಡೋ ಎಕರೆಗಳನ್ನು ಹೊಂದಿದ್ದ ಕೆಲ ಹಳ್ಳೇರರು ಭತ್ತ ಬೆಳೆಯುತ್ತಿದ್ದರು.

ಆದರೆ ಜುಲೈ 7, 1962ರಲ್ಲಿ ಸಮುದ್ರ ಸುನಾಮಿಯಂತಹ ಭೋರ್ಗರೆವ ನೆರೆಯಲ್ಲಿ ಅಷ್ಟೂ ಫಲವತ್ತಾದ ಭೂಮಿ ನೀರಿನಲ್ಲಿ ಮುಳುಗಿಹೋಯಿತು. ಇವರ ಬದುಕುಗಳೂ ನೀರಿನಲ್ಲೇ ಕೊಚ್ಚಿಹೋದವು. ಹೀಗೆ ಭೂಮಿ ಕಳಕೊಂಡ ಹಳ್ಳೇರರಿಗೆ ಸರಕಾರ ಮಣ್ಣಿನ ಮನೆ ಕಟ್ಟಿ ವಸತಿ ವ್ಯವಸ್ಥೆ ಮಾಡಿತು. ಆದರೆ ಬದುಕಿಗಾಗಿ ಬದಲೀ ವ್ಯವಸ್ಥೆ ಮಾಡಲಿಲ್ಲ! ಈ ನಿರ್ಗತಿಕ ಭೂಹೀನರಿಗೆ ಯಾವುದೇ ಸರಕಾರ ಯಾವುದೇ ರೀತಿಯ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ದುರಂತ.

ನೆರೆಬಂದು ಹಳ್ಳೇರರ ಹಲವಾರು ಎಕರೆ ಭೂಮಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಮೇಲೆ ಹಳ್ಳೇರರ ಮಿಕ್ಕಿದ್ದ 1,800 ಎಕರೆ ಘಜನಿ ಭೂಮಿಯನ್ನು ಉಳ್ಳವರಿಗೆ ಹಂಚಿಬಿಟ್ಟರು. ಮಿಕ್ಕದ್ದನ್ನು ಬಿಣಗಾ ಬಿರ್ಲಾ ಧಾಪರ್‌ರವರ ಕಾಸ್ಟಿಕ್ ಸೋಡಾ ಕಂಪೆನಿಗೆ ಉಪ್ಪು ತಯಾರಿಸಲು ಮಾರಿಬಿಟ್ಟರು. ನಂತರ ಈ ಜಾಗವನ್ನು ಮೈಸೂರ್ ಸ್ಟೇಟ್ ಲ್ಯಾಂಡ್ ಅಕ್ವಿಸಿಷನ್ ಡೆವಲಪ್‌ಮೆಂಟ್ ಬೋರ್ಡಿಗೆ ಬಿಟ್ಟುಕೊಟ್ಟರು. ಅಲ್ಲಿಂದ ಆಚೆ ಈ ಭೂಮಿ ಉದ್ಯಮಿ ಮಿತ್ತಲ್ ಅವರಿಗೆ ಮಾರಲಾಯಿತು. ಭೋಜರಾಜರಿಂದ ಹಿಡಿದು ಹಕ್ಕಬುಕ್ಕರ ಸಾಮ್ರಾಜ್ಯದವರೆಗೆ ತಮಗೆ ಬಳುವಳಿಯಾಗಿ ನೀಡಿದ್ದ ಅಧಿಕೃತ ತಾಮ್ರಪತ್ರಗಳನ್ನು ಹಿಡಿದು ಹಳ್ಳೇರರು ಇಂದಿಗೂ ಅಲೆಯುತ್ತಿದ್ದಾರೆ. ಆದರೆ ಇವರಿಗೆ ಭೂಮಿ ಕೊಡಿಸುವ ಸರಕಾರಗಳು ಬರಲೇ ಇಲ್ಲ. ಇವರ ಬದುಕುಗಳೊಂದಿಗೆ ಇವರ ಭೂಹೋರಾಟದ ಕುರಿತು ಕೂಡ ಸುದೀರ್ಘ ಚರಿತ್ರೆಯನ್ನೇ ಮಹೇಂದ್ರಕುಮಾರ್ ದಾಖಲಿಸಿದ್ದಾರೆ.

ಹಳ್ಳೇರ್ ಸಮುದಾಯದ ಹಿನ್ನೆಲೆ, ಜೀವನ, ಭೂಮಿ ಕಳಕೊಂಡ ಬದುಕು, ಸಾಂಸ್ಕೃತಿಕ ಕಥನಗಳನ್ನು ಓದುತ್ತಾ ಹೋದಾಗ ಇವರ ಹಳ್ಳಿಗಳಲ್ಲಿ ಒಂದೆರಡು ದಿನ ಇದ್ದು ಬರುವ ಆಸೆಯಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News