ತೆಲುಗಿನ ‘ಬಂಡ’ರೇ ಕರ್ನಾಟಕದ ‘ಮೊಂಡ’ರು ಕೊಡಗಿನ ‘ಕಲ್ಲಡಿ’ಗಳು..!
ಕಲ್ಲಡಿಗಳಿಗೆ ಮೊಂಡಿ, ಬಂಡರೆಂದು ಕರೆಯುವುದು ಅವರ ಪ್ರವೃತ್ತಿಯಿಂದಾಗಿ. ಮೊಂಡ ಅಂದರೆ ಹಠಮಾರಿ, ಮೊಂಡು ಬಿದ್ದು ಭಿಕ್ಷೆ ಬೇಡುವ ವೃತ್ತಿಯನ್ನು ಮಾಡುವುದರಿಂದ ಈ ಹೆಸರು ಬಂದಿರಬಹುದೆಂದು ಕೆಲ ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ರಾಜರಿಗೆ ತೆರಿಗೆ ಕಟ್ಟದೆ ಮೊಂಡುಬಿದ್ದ ಹಠಮಾರಿಗಳಾದ ಕಾರಣ ಇವರಿಗೆ ಮೊಂಡರು ಎಂಬ ಹೆಸರು ಬಂತೆಂಬ ವಾದವೂ ಇದೆ.
ಹಸಿವು ತಾಳಲಾರದೆ ಹೆಂಡತಿಯ ಮಾರಿಕೊಂಡೆನಯ್ಯ
ಹಸಿವು ತಾಳಲಾರದೆ ಮಕ್ಕಳ ಮಾರಿಕೊಂಡೆನಯ್ಯ
ಹಸಿವು ತಾಳಲಾರದೆ ಗುಡಿಸಲು ಮಾರಿಕೊಂಡೆನಯ್ಯ
ಹಸಿವು ತಾಳಲಾರದೆ ತಿರುದು ತಿಂದೆನಯ್ಯ
ಹರಿಹರ ಮೊಂಡಿ ಜಂಗಮನೆ
ಹಸಿವು ತಾಳಲಾರದೆ ಮಗನ ಕೊಂದು ತಿಂದೆನಯ್ಯ
-ಮೊಂಡರ ಕುಲಕಥನ
ನಾವು ಚಿಕ್ಕಂದಿನಲ್ಲಿ ಕಂಡಂತೆ ಕೈಮೈಯಲ್ಲೆಲ್ಲಾ ಕುಯ್ದ ಗಾಯಗಳುಳ್ಳ ಅತ್ಯಂತ ಕೊಳಕಿನ, ಬಹುತೇಕ ನಗ್ನನಾಗಿರುತ್ತಿದ್ದ ವ್ಯಕ್ತಿ ಉದ್ದನೆಯ ಕೂದಲು, ಮುಂಗೈಗೆ ಸರಪಳಿ ಕಟ್ಟಿಕೊಂಡು, ಕೈಯಲ್ಲಿ ಕಬ್ಬಿಣದ ಕತ್ತಿಹಿಡಿದು, ಎಡಭುಜದ ಮೇಲೆ ದೊಡ್ಡ ಕಲ್ಲೊಂದನ್ನು ಹೊತ್ತು ವಿಕಾರವಾಗಿ ಹೆಜ್ಜೆ ಹಾಕುತ್ತಾ ಬೀದಿಬೀದಿಗಳಲ್ಲಿ ನಡೆದುಬರುತ್ತಿದ್ದ. ನಾವು ಮಕ್ಕಳೆಲ್ಲ ‘‘ಮೊಂಡ ಬಂದ..ಮೊಂಡ ಬಂದ..’’ ಎಂದು ಕೂಗಿಕೊಂಡು ಮನೆಯೊಳಕ್ಕೆ ಓಡಿ ಕಿಟಕಿ, ಒಪ್ಪಾರಗಳನ್ನು ಏರಿ ಕೂರುತ್ತಿದ್ದೆವು. ಮನೆಮನೆಯ ಮುಂದೆ ನಿಂತು ದೊಡ್ಡಧ್ವನಿಯಲ್ಲಿ ಏನೇನನ್ನೋ ಒದರುತ್ತಾ ಭಿಕ್ಷೆ ಬೇಡುತ್ತಿದ್ದ. ಭಿಕ್ಷೆ ನೀಡದಿದ್ದರೆ ನಡುವಿನಿಂದ ಚೂಪಾದ ರೇಜರ್‌ನಂತಹ ಕತ್ತಿ ತೆಗೆದು ಮುಂಗೈ, ತೊಡೆಗಳನ್ನು ಕುಯ್ದುಕೊಂಡು ನೆತ್ತರು ಒಸರಿಸುತ್ತಿದ್ದ, ಕೆಲವೊಮ್ಮೆ ಅದೇ ನೆತ್ತರನ್ನು ನೆಕ್ಕುತ್ತಿದ್ದ! ಇದೊಂದು ಜಾತಿ ಎಂಬುದು ಆಗ ಗೊತ್ತಿರಲಿಲ್ಲ. 2019ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಪರಿಶಿಷ್ಟ ಜಾತಿವರ್ಗಗಳ ಅಲೆಮಾರಿ, ಅರೆಅಲೆಮಾರಿ ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳ ಅಧ್ಯಯನದ ಮಾರ್ಗದರ್ಶಕ ಜವಾಬ್ದಾರಿಯನ್ನು ನನಗೆ ವಹಿಸಿದಾಗ ಕರ್ನಾಟಕದಲ್ಲಿ ನೆಲೆಸಿರುವ ಕಲ್ಲಡಿ ಸಮುದಾಯದ ಕುರಿತು ವಿವರ ಸಂಗ್ರಹಿಸಲು ಪ್ರಾರಂಭಿಸಿದೆ. ಕೊಡಗಿನ ಕಲ್ಲಡಿ ಮತ್ತು ಕರ್ನಾಟಕದ ಇತರೆಡೆ ಇರುವ ಮೊಂಡರು ಒಂದೇ ಎಂಬುದು ಆಗ ಅರಿವಿಗೆ ಬಂತು. ಕಿರಿಯ ಗೆಳೆಯ ಆರಡಿ ಮಲ್ಲಯ್ಯ ಕಟ್ಟೇರ ಅವರಿಗೆ ಸಂಶೋಧನೆಯ ಜವಾಬ್ದಾರಿ ವಹಿಸಿದೆ. ಈ ಯುವಕ ಅದೆಷ್ಟು ಆಳವಾಗಿ ಈ ಸಮುದಾಯದ ಒಳಹೊಕ್ಕು ಕೆಲಸ ಮಾಡಿದ್ದಾರೆಂದರೆ ಈ ಹುಡುಗನ ಸಂಶೋಧನೆಯ ಆಳ ನೋಡಿ ದಂಗು ಬಡಿದು ಹೋದೆ! ಈ ಲೇಖನಕ್ಕೆ ಈತನ ಸಂಶೋಧನೆಯೂ ಆಧಾರವಾಗಿದೆ.
ಈಚೀಚೆಗೆ ನಮ್ಮ ‘ಅಲೆಮಾರಿ ಬುಡಕಟ್ಟು ಮಹಾಸಭಾ’ದ ಸಭೆಯೊಂದಕ್ಕೆ ತಾನು ಮೊಂಡರ ಜಾತಿಯವನು ಎಂದು ಹೇಳಿ ಒಬ್ಬಾತ ಬಂದಿದ್ದ. ಈತ ತನ್ನ ಸಮುದಾಯದ ದಾರುಣ ಬದುಕನ್ನೇ ನನ್ನ ಮುಂದೆ ತೆರೆದಿಟ್ಟ.
ಎಡ್ಗರ್ ಥರ್ಸ್ಟನ್ ಎಂಬ ಮಾನವಶಾಸ್ತ್ರಜ್ಞ ಮೊಂಡರನ್ನು ಮೊಂಡಿ, ಲಂಡ, ಕಲ್ಲಡಿ, ಸಿದ್ದನ್, ಮಂಗಮ್ ಎಂಬ ಹೆಸರುಗಳಿಂದ ಗುರುತಿಸುತ್ತಾನೆ. ತೆಲುಗಿನಲ್ಲಿ ಬಂಡ ಅಂದರೆ ಕಲ್ಲು, ಕನ್ನಡದಲ್ಲಿ ಕಲ್ಲಡಿ ಅಂದರೂ ಅದೇ ಅರ್ಥ. ಭಿಕ್ಷೆ ನೀಡದಿದ್ದರೆ ಮೊಂಡ ತನ್ನನ್ನು ತಾನೇ ಕಲ್ಲಲ್ಲಿ ಹೊಡೆದುಕೊಳ್ಳುತ್ತಾನೆ. ಆದ್ದರಿಂದ ಈ ಹೆಸರುಗಳು ಬಂದಿರಬಹುದು.
ಮೊಂಡ, ಮೊಂಡರು ಮುಕ್ರಿ, ಮೃಕುಂಡ, ಮುಂಡಲ, ಬಂಡೆ ಮುಂತಾದುವು ಕನ್ನಡ ಪದಗಳಾದರೆ, ಮೊಂಡಿ, ಮೊಂಡಿಗ, ಮೊಂಡಿವಾರು, ಮೊಂಡಿಪಟ್ಟ, ಬಂಡ ತೆಲುಗು ಪದಗಳಾಗಿವೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ತೂರು, ಕಡಪ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ಇವರನ್ನು ಮೊಂಡರು ಎಂದು ಗುರುತಿಸಿದರೂ ಸರಕಾರಿ ದಾಖಲೆಗಳಲ್ಲಿ ಮುಂಡಲ ಎಂಬ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಲ್ಲಡಿಗಳಿಗೆ ಮೊಂಡಿ, ಬಂಡರೆಂದು ಕರೆಯುವುದು ಅವರ ಪ್ರವೃತ್ತಿಯಿಂದಾಗಿ. ಮೊಂಡ ಅಂದರೆ ಹಠಮಾರಿ, ಮೊಂಡು ಬಿದ್ದು ಭಿಕ್ಷೆ ಬೇಡುವ ವೃತ್ತಿಯನ್ನು ಮಾಡುವುದರಿಂದ ಈ ಹೆಸರು ಬಂದಿರ ಬಹುದೆಂದು ಕೆಲ ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ರಾಜರಿಗೆ ತೆರಿಗೆ ಕಟ್ಟದೆ ಮೊಂಡುಬಿದ್ದ ಹಠಮಾರಿಗಳಾದ ಕಾರಣ ಇವರಿಗೆ ಮೊಂಡರು ಎಂಬ ಹೆಸರು ಬಂತೆಂಬ ವಾದವೂ ಇದೆ.
ಕೊಡಗು ಜಿಲ್ಲೆಯ ಗೆಜೆಟಿಯರ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ನಾಲ್ಕು ಜನ ಕಲ್ಲಡಿಗಳು ವಾಸವಿರುವುದಾಗಿ ದಾಖಲಿಸಲಾಗಿದೆ, ಆದರೆ ಮತ್ತೇನೂ ವಿವರಗಳಿಲ್ಲ. ವಿಜಯ ಪೂಣಚ್ಚ ತಂಬಂಡರವರ ‘ಅಮರಸುಳ್ಯ ಸಂಗ್ರಾಮ 1837’ ಅಧ್ಯಯನದಲ್ಲಿ ಕೊಡಗಿನ ಬಹಿಷ್ಕೃತ ಜಾತಿಗಳ ಕೋಷ್ಟಕ 14ರಲ್ಲಿ ಕಾಲಾಡಿ ಸಮುದಾಯದ ಪ್ರಸ್ತಾಪವಿದೆ.
ಕರ್ನಾಟಕದ ಮಲೆನಾಡು ಭಾಗಗಳಿಗಿಂತ ಬಯಲುಸೀಮೆಯ ಮತ್ತು ಬೆಂಗಳೂರಿನ ಕೊಳಗೇರಿ ಅಂಚುಗಳಲ್ಲಿ, ನಾಯಕನಹಟ್ಟಿ, ಬಳ್ಳಾರಿ, ಅಬ್ಬೇನಹಳ್ಳಿ, ಮ್ಯಾಸರಹಟ್ಟಿ ಮುಂತಾದೆಡೆ ನೆಲೆಗೊಂಡಿರುವ ಕಲ್ಲಡಿ ಅಥವಾ ಮೊಂಡರನ್ನು ನೋಡಿದ ತಕ್ಷಣ ಅವರ ಭೌತಿಕ ಭಿನ್ನತೆಯಿಂದಾಗಿ ಗಮನಸೆಳೆಯುತ್ತಾರೆ. ಕಡುಕಪ್ಪುಬಣ್ಣದ ಸದೃಢ, ಒರಟು ಮೈಯವರಾದ ಕಲ್ಲಡಿಗಳು ಗಡಸು ಮುಖಭಾವದವರು. ಬಲಿಷ್ಠ ಕೈಕಾಲು, ಆಕ್ರಮಣಕಾರಿ ನೋಟ, ಸಣ್ಣಗಡ್ಡ ಮತ್ತು ದಪ್ಪ ತುಟಿಯ, ದೊಡ್ಡಮೂಗಿನ ಇವರನ್ನು ಮೇಲ್ನೋಟಕ್ಕೆ ಆಸ್ಟ್ರೇಲಿಯದ ಬುಡಕಟ್ಟು ಜನರನ್ನು ನೋಡಿದಂತಾಗುತ್ತದೆ. ಕರ್ನಾಟಕದ ಕಲ್ಲಡಿಗಳು ಕೂಡ ಕನ್ನಡಕ್ಕಿಂತಲೂ ಹೆಚ್ಚು ತೆಲುಗನ್ನೇ ಮಾತನಾಡುತ್ತಾರೆ.
ಭಾರತೀಯ ಆದಿಮ ಸಂಸ್ಕೃತಿ ಮೂಲತಃ ಮುಂಡಾರ ಸಮುದಾಯದ್ದಾಗಿದೆ. ಈ ಮುಂಡರನ್ನೇ ಕನ್ನಡದಲ್ಲಿ ಮೊಂಡರೆಂದು, ತೆಲುಗಿನಲ್ಲಿ ಬಂಡರೆಂದು, ಕೊಡಗಿನ ಕಲ್ಲಡಿಗಳೆಂದು ಕರೆಯುತ್ತಾರೆ. ಭಾರತೀಯ ಪರಿಸರದಲ್ಲಿ ದ್ರಾವಿಡರಿಗಿಂತಲೂ ಪೂರ್ವದಲ್ಲಿ ಮುಂಡಾ ಸಂತಾಲ್ ಓರಾನ್ ಮುಂತಾದ ಸಮುದಾಯ ಸಂಸ್ಕೃತಿಗಳಿದ್ದವೆಂದು ಒಂದು ವಾದವಿದೆ. ಭಾರತದಲ್ಲಿ ಮುಂಡಾ ದ್ರಾವಿಡ, ಆರ್ಯ ಎಂದು ಅಧ್ಯಯನ ಮಾಡಬೇಕಾದ ಅನಿವಾರ್ಯವಿದೆಯೆಂದು, ಅಧ್ಯಯನಕಾರರು ಮುಂಡಾರನ್ನು ಒಳಗೊಂಡಂತೆ ಪ್ರಾಚೀನ ಸಮುದಾಯಗಳು ದ್ರಾವಿಡವೆಂದು ಕರೆಯುವ ಕಾರಣ ಅದನ್ನು ಪ್ರತ್ಯೇಕಿಸಿ ತೋರಿಸಲು ಆಗದಷ್ಟು ಬೆರೆತುಹೋಗಿದೆಯೆಂದು ಮೊಂಡರನ್ನು ಪ್ರತ್ಯೇಕವಾದ ವಿಧಾನದಲ್ಲಿ ಅಧ್ಯಯನ ಮಾಡಬೇಕೆಂದು ‘ಮೊಂಡರ ಸಂಸ್ಕೃತಿ’ಯ ಕರ್ತೃ ಎನ್. ಚಂದ್ರಪ್ಪನವರು ಅಭಿಪ್ರಾಯ ಪಡುತ್ತಾರೆ.
ಕಲ್ಲಡಿ/ಮೊಂಡರು ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡುಗಳಿಂದ ಬಂದವರು. ಇವರು ಅಸ್ಪಶ್ಯ ಜೀತಗಾರರಾದ ಕಾರಣ ಆಗಿನ ರಾಜರು ಇವರನ್ನು ಮನಸ್ಸಿಗೆ ಬಂದಂತೆ ಬಳಸಿಕೊಂಡಿದ್ದಾರೆ. ಅತ್ಯಂತ ಗಟ್ಟಿದೇಹದವರೂ ಶ್ರಮಜೀವಿಗಳಾದ್ದರಿಂದ ಇವರನ್ನು ಗುಹೆಗಳ ನಿರ್ಮಾಣದಂತಹ ಕಠಿಣ ಕೆಲಸಗಳಿಂದ ಹಿಡಿದು ಕೋಟೆಗಳನ್ನು ನಿರ್ಮಿಸಲು, ದೇವಸ್ಥಾನದ ನಿರ್ಮಾಣಕ್ಕೆ ಕಲ್ಲು ಒಡೆಯಲು, ಗಣಿಗಾರಿಕೆಯೇ ಮುಂತಾದ ಅನೇಕ ಶ್ರಮದಾಯಕ ಕೆಲಸಗಳಲ್ಲಿ ಬಳಸಿಕೊಂಡಿದ್ದಾರೆ.
ಅಲೆಮಾರಿಗಳೂ ಆದ ಕಲ್ಲಡಿಯರು ತಾವು ಕಲ್ಲು ಕೆಲಸ ಮಾಡುವಾಗ ತಮ್ಮ ಮೇಲೆ ಕಲ್ಲು ಬಿದ್ದು ಅಥವಾ ಮತ್ಯಾವುದೋ ಕಾರಣಕ್ಕೆ ಸತ್ತರೆ ಅವರ ನೆನಪಿಗಾಗಿ ಅವರ ಬಂಧುಗಳು ಅಲ್ಲೊಂದು ವಿಶಿಷ್ಟವಾದ ಕಲ್ಲು ನೆಟ್ಟು ಮುಂದೆ ನಡೆಯುತ್ತಾರೆ. ಈ ಕಲ್ಲನ್ನೇ ಕಲ್ಲಡಿಗಳು ಪೂಜೆ ಮಾಡುತ್ತಾರೆ. ಹೀಗಾಗಿ ಜಗತ್ತಿನಾದ್ಯಂತ ಕಲ್ಲು ಮೂರ್ತಿಗಳು ಸಿಗಲು ತಾವೇ ಕಾರಣವೆಂದೂ ಆದ್ದರಿಂದ ತಮ್ಮ ಪೂರ್ವಜರು ಜಗತ್ತನ್ನೇ ಸುತ್ತಾಡಿದ ಅನುಭವಸ್ಥರೆಂದೂ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಇವರಲ್ಲೂ ಕುಲಗುರುಗಳು, ಕುಲಪಂಚಾಯಿತಿಗಳೂ ಇವೆ. ಈ ಕುಲಪಂಚಾಯತಿಯ ಯಜಮಾನರಿಂದ ಇವರ ಬದುಕುಗಳು ಇನ್ನಷ್ಟು ಕುಲಗೆಟ್ಟಿವೆ.
ಹೀಗೇ ಹೇಳುತ್ತಾ ಹೋದರೆ ಇವರ ಬದುಕಿನ ಕುಲಕಥನಗಳು, ಕುಲಚಹರೆಗಳು, ಇವರ ಮರಗುಬಾಷೆಯ ‘ಕಿಲಿ’ಗಳು, ಸಾಂಸ್ಕೃತಿಕ ಕಥನಗಳು, ಸಾಮಾಜಿಕ ಸ್ಥಿತ್ಯಂತರಗಳು ಬೇಕಾದಷ್ಟಿವೆ. ಆದರೆ ಇಂದು ಮಾತ್ರ ಕಲ್ಲಡಿ ಅಥವಾ ಮೊಂಡರ ಬದುಕು ಬರ್ಬರ! ಶಿಕ್ಷಣವಿಲ್ಲ, ಕುಲವೃತ್ತಿಯಿಲ್ಲ, ಇರಲು ಸೂರಿಲ್ಲ, ಭಿಕ್ಷೆ ಬೇಡುವುದೇ ಬದುಕಾಗಿದೆ. ನಮ್ಮ ಸಭ್ಯ ಸರಕಾರಗಳಿಗೆ ಇವರನ್ನು ನೋಡುವ ಕಣ್ಣು ಯಾವಾಗ ಬರುತ್ತೋ...