×
Ad

ಪ್ರವಾಸಿಗರನ್ನು ಆಕರ್ಷಿಸುತ್ತಿದೆ ‘ಬೆಳ್ಕಲ್ ತೀರ್ಥ’ ಜಲಧಾರೆಯ ಸೊಬಗು

Update: 2025-07-14 13:56 IST

ಕುಂದಾಪುರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇತ್ತೀಚಿನ ಕೆಲವು ದಿನ ಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೊಡಚಾದ್ರಿ ಬೆಟ್ಟದಿಂದ ನೂರಾರು ಅಡಿಗೂ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಪುರಾಣದ ಹಿನ್ನೆಲೆಯುಳ್ಳ ‘ಬೆಳ್ಕಲ್ ತೀರ್ಥ’ (ಗೋವಿಂದ ತೀರ್ಥ) ಜಲಪಾತಕ್ಕೆ ಇದೀಗ ಜೀವಕಳೆ ಬಂದಿದೆ.

ಒಂದೆಡೆ ಘಟ್ಟ ಪ್ರದೇಶ, ಎಲ್ಲೆಲ್ಲೂ ನೋಡಿದರೂ ಬೆಟ್ಟಕ್ಕೆ ಹಸಿರು ಹೊದ್ದು ನಿಂತಿರುವ ಪ್ರಕೃತಿ. ಎತ್ತರದಿಂದ ಕಲ್ಲುಬಂಡೆಗಳ ನಡುವೆ ಕವಲು-ಕವಲಾಗಿ ಭೋರ್ಗರೆಯುತ್ತಿರುವ ಈ ಜಲಧಾರೆಯ ಸೊಬಗನ್ನು ಕಾಣಲು ಕಳೆದ ಕೆಲ ದಿನಗಳಿಂದ ದುರ್ಗಮ ಹಾದಿಯ ನಡುವೆಯೂ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಮೊದಲೆಲ್ಲಾ ಎಳ್ಳಮಾವಾಸ್ಯೆ ದಿನದ ಪವಿತ್ರ ಸ್ನಾನದ ಸಂದರ್ಭದಲ್ಲಿ ಮಾತ್ರ ಇಲ್ಲಿಗೆ ಭಕ್ತರು ಬರುತ್ತಿದ್ದರು. ಇತ್ತೀಚಿನ ಕೆಲವು ಕೆಲ ವರ್ಷಗಳಿಂದ ಇಲ್ಲಿಗೆ ಆಗಮಿಸಿದವರು ಸಾಮಾಜಿಕ ಜಾಲತಾಣದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯದ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಅದಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಿದ ಕಾರಣ ಇದೀಗ ಬರುವ ಪ್ರವಾಸಿಗರು, ಭಕ್ತರ ಸಂಖ್ಯೆ ದುಪ್ಪಟ್ಟುಗೊಂಡಿದೆ.

ಸರಿಸುಮಾರು 500 ಅಡಿ ಎತ್ತರದಿಂದ ಧುಮ್ಮಿಕ್ಕುವ ಬೆಳ್ಕಲ್ ತೀರ್ಥ ಜಲಪಾತ ಕುಂದಾಪುರದಿಂದ ಸುಮಾರು 50 ಕಿ.ಮೀ., ಕೊಲ್ಲೂರಿನಿಂದ 15 ಕಿ.ಮೀ. ದೂರದಲ್ಲಿದೆ. ಹೆಮ್ಮಾಡಿ - ಕೊಲ್ಲೂರು ಮುಖ್ಯ ರಸ್ತೆಯ ಜಡ್ಕಲ್‌ಗೆ ತೆರಳಿ, ಅಲ್ಲಿಂದ ಮುದೂರಿಗೆ ತೆರಳುವ ರಸ್ತೆಯಲ್ಲಿ 8 ಕಿ.ಮೀ. ಸಾಗಬೇಕು. ಅಲ್ಲಿ ಮೈದಾನ ಎಂಬ ಊರಿದ್ದು ಅಲ್ಲಿಂದ ಸ್ವಲ್ಪ ದೂರದವರೆಗೆ ಮಾತ್ರ ವಾಹನ ಸಂಚಾರ ಸಾಧ್ಯವಿದೆ. ಮತ್ತೆ 4-5 ಕಿ.ಮೀ. ಕಾಡಿನಲ್ಲಿ ಬೆಟ್ಟ, ಗುಡ್ಡ, ಕಡಿದಾದ ದಾರಿಯಲ್ಲಿ ಕಾಲ್ನಡಿಗೆಯ ಮೂಲಕವೇ ತೆರಳಬೇಕು. ಸಿದ್ಧಾಪುರ, ಹಳ್ಳಿಹೊಳೆ ಮಾರ್ಗವಾಗಿಯೂ ಬೆಳ್ಕಲ್ ತೀರ್ಥಕ್ಕೆ ಬರಬಹುದು.

ಎಳ್ಳಮಾವಾಸ್ಯೆ ಸ್ನಾನ ವಿಶೇಷ: ಈ ಜಲಪಾತದಿಂದ 3-4 ಕಿ.ಮೀ. ದೂರದಲ್ಲಿ ವಿಶ್ವಂಭರ ಮಹಾಗಣಪತಿ, ಕೋಟಿಲಿಂಗೇಶ್ವರ, ಗೋವಿಂದ ದೇವರ ದೇವಸ್ಥಾನವಿದೆ. ಹಿಂದೆ ಈ ದೇಗುಲ ಜಲಪಾತದ ಸನಿಹದಲ್ಲೇ ಇದ್ದು ಅಲ್ಲಿಗೆ ಹೋಗುವ ದಾರಿ ದುರ್ಗಮ ಆಗಿದ್ದರಿಂದ ಅದನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು. ಪುರಾಣ ಕಾಲದಲ್ಲಿ ರಾಕ್ಷಸರ ಸಂಹಾರದ ಬಳಿಕ ಮೂಕಾಂಬಿಕೆ ತನ್ನ ಆಯುಧವನ್ನು ಈ ಬೆಳ್ಕಲ್ ತೀರ್ಥದಲ್ಲಿ ತೊಳೆದರೆನ್ನುವು ದನ್ನು ಇಲ್ಲಿನ ಪುರಾಣ ಹೇಳುತ್ತದೆ. ಹೀಗಾಗಿ ಎಳ್ಳಮಾವಾಸ್ಯೆ ದಿನ ಇಲ್ಲಿ ತೀರ್ಥ ಸ್ನಾನ ಮಾಡಲು ಸಹಸ್ರಾರು ಮಂದಿ ಬರುತ್ತಾರೆ.

ಹೆಜ್ಜೆಹೆಜ್ಜೆಗೂ ಎಚ್ಚರವಿರಬೇಕು: ಬೆಳ್ಕಲ್ ತೀರ್ಥದ ಸಮೀಪಕ್ಕೆ ತೆರಳಲು ದುರ್ಗಮ ಹಾದಿಯ ನಡುವೆ ಸಾಗಬೇಕು. ಇಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರ ಇರಲೇಬೇಕು. ಮಳೆಗಾಲದಲ್ಲಂತೂ ಇಲ್ಲಿನ ಕಲ್ಲುಬಂಡೆಗಳ ಮೇಲೆ ಕಾಲಿಡುವುದೇ ಅಪಾಯ. ಆದ್ದರಿಂದ ನಡೆದುಕೊಂಡು ಹೋಗುವಾಗ ಪ್ರತೀ ಹೆಜ್ಜೆಗೂ ಮುನ್ನೆಚ್ಚರಿಕೆ ಅಗತ್ಯ. ಜಲಪಾತದ ನೀರಿನಲ್ಲಿ ಇಳಿಯುವಾಗಲೂ ಇನ್ನಷ್ಟು ಮುಂಜಾಗ್ರತೆ ಅಗತ್ಯ. ಕಲ್ಲುಬಂಡೆಗಳು ಪಾಚಿಗಟ್ಟಿ ಜಾರುತ್ತಿದ್ದು, ಮೋಜು ಮಸ್ತಿಯಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ.

ಅದೇ ರೀತಿ ಇಲ್ಲಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್, ನೀರಿನ ಬಾಟಲಿ, ತಿಂಡಿಯ ಪೊಟ್ಟಣಗಳು, ಒದ್ದೆಯಾದ ಬಟ್ಟೆ-ಬರೆಗಳನ್ನು ಇಲ್ಲಿ ಎಸೆದು ಶುಚಿತಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಕಡಿವಾಣ ಹಾಕಬೇಕೆಂದು ಪ್ರಜ್ಞಾವಂತ ನಾಗರಿಕರು ಇಲಾಖೆಯ ಅಧಿಕಾರಿಗಳಲ್ಲಿ ಒತ್ತಾಯಿಸುತ್ತಿದ್ದಾರೆ.

ಕೊಡಚಾದ್ರಿಯ 64 ತೀರ್ಥಗಳಲ್ಲಿ ಒಂದಾದ ಪವಿತ್ರ ಬೆಳ್ಕಲ್ ತೀರ್ಥಕ್ಕೆ ಬಹುಸಂಖ್ಯೆಯಲ್ಲಿ ಜನರು ಬರುತ್ತಿರುವುದು ಸ್ವಾಗತಾರ್ಹ. ಕ್ಷೇತ್ರವು ಪೌರಾಣಿಕ ಹಿನ್ನೆಲೆ ಹೊಂದಿದ್ದು, ಭಕ್ತರ ಸೋಗಿನಲ್ಲಿ ಬಂದು ಅಪಚಾರ ಮಾಡುವುದು ಸರಿಯಲ್ಲ. ತಪೋತ್ಥಾನ ಸ್ಥಳಗಳು, ಅರಣ್ಯಗಳಲ್ಲಿ ಪ್ರಾಕೃತಿಕ ವ್ಯವಸ್ಥೆಗೆ ದಕ್ಕೆಯಾಗಬಾರದು. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್, ಅರಣ್ಯ ಇಲಾಖೆ ಕ್ರಮ ವಹಿಸಿ ಬೆಳ್ಕಲ್ ತೀರ್ಥದ ಪಾವಿತ್ರ್ಯತೆಗೆ ದಕ್ಕೆಯಾಗದಂತೆ ಸಂರಕ್ಷಿಸಬೇಕು.

- ಈಶ ವಿಠಲದಾಸ ಸ್ವಾಮೀಜಿ, ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮ

ಮೂಲಸೌಕರ್ಯ ಒದಗಿಸಿ: ವಾಸುದೇವ ಮುದೂರು

ಮಳೆಗಾಲದಲ್ಲಿ ಬೆಳ್ಕಲ್ ತೀರ್ಥದಲ್ಲಿ ಕಾನನದ ನಡುವಿನ ಹಸಿರು ಪ್ರಕೃತಿಯ ಸೊಬಗಿನಲ್ಲಿ ಧುಮ್ಮಿಕ್ಕುವ ಜಲಧಾರೆ ಜನರನ್ನು ಆಕರ್ಷಿಸುತ್ತದೆ. ನಿತ್ಯ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯು ಹೆಚ್ಚುತ್ತಿರುವುದರಿಂದ ನಮ್ಮ ಕುಗ್ರಾಮ ಪ್ರಚಾರ ಪಡೆದು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂಬುದು ಕನಸಾಗಿಯೇ ಉಳಿದಿದೆ. ದಟ್ಟ ಕಾಡಿನ ನಡುವೆ ಸುಮಾರು ನಾಲ್ಕು ಕಿ.ಮೀ. ದೂರ ಕಡಿದಾದ ದುರ್ಗಮ ಹಾದಿಯಲ್ಲಿ ಸಾಗಿ ಬೆಳ್ಕಲ್ ತೀರ್ಥ ತೆರಳಲು ಹಾಗೂ ಸ್ನಾನ ಮಾಡಲು ಬರುವ ಪ್ರವಾಸಿಗರಿಗೆ ಸೂಕ್ತ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳು ಇಲ್ಲದಿರುವುದು ಸವಾಲಾಗಿಯೇ ಉಳಿದಿದೆ ಎಂದು ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು ಹೇಳುತ್ತಾರೆ.

ಇಲ್ಲಿ ಬರುವವರಿಗೆ ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲ. ಸ್ವಚ್ಛತೆಗೆ ಒತ್ತು ನೀಡಿಲ್ಲ. ಶೌಚಾಲಯಗಳಿಲ್ಲ. ಸ್ಥಳೀಯ ಗ್ರಾಪಂ ಇದನ್ನು ಸುಪರ್ದಿಗೆ ಪಡೆದು ನಿರ್ವಹಣೆ ಮಾಡುವುದಕ್ಕೆ ಅರಣ್ಯ ಇಲಾಖೆ ಕಾಯ್ದೆ- ಕಾನೂನುಗಳು ಅಡ್ಡಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ನಾಲ್ಕಾರು ವರ್ಷಗಳಿಂದ ಅರಣ್ಯ ಇಲಾಖೆಯ ವತಿಯಿಂದ ಪ್ರವೇಶ ದರ ವಸೂಲಿ ಮಾಡುತಿದ್ದು, ಆ ಹಣ ಇಲ್ಲಿನ ಅಭಿವೃದ್ಧಿಗೆ ಬಳಕೆ ಮಾಡಿಲ್ಲ. ಈ ಬಗ್ಗೆ ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ. ಈ ಸ್ಥಳ ಅಕ್ರಮ ಚಟುವಟಿಕೆಗಳ ಆಗರವಾಗುವುದನ್ನು ತಪ್ಪಿಸಲು ಸಂಬಂದಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು, ಆಗಮಿಸುವ ನಾಗರಿಕರಿಗೆ ಮೂಲಸೌಕರ್ಯ ಒದಗಿಸಿ ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೀಶ್ ಕುಂಭಾಸಿ

contributor

Similar News