×
Ad

ಅಸ್ಪೃಶ್ಯರಿಗೇ ಅಸ್ಪೃಶ್ಯರಾದ ದಕ್ಕಲರು

Update: 2025-12-03 09:27 IST

ಆದಿಜಾಂಬವ ಪರಂಪರೆಯ ಮಾದಿಗ ಕುಲದ ಉಪಜಾತಿಗಳಲ್ಲಿ ಒಂದಾಗಿರುವ ದಕ್ಕಲರನ್ನು ದೊಕ್ಕಲ ಮಕ್ಕಳು, ಮನೆಮಕ್ಕಳು, ಹಳೇಮಕ್ಕಳು ಎಂದು ಗುರುತಿಸಿದರೂ ಮಾದಿಗರ ಸಂಬಂಧಿಗಳೆಂಬ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ದಕ್ಕಲರನ್ನು ಗುರುತಿಸಲಾಗುತ್ತದೆ. ದಕ್ಕಲಿಗರು ಹಸಿವು ನೀಗಿಸಿಕೊಳ್ಳುವ ಪಡಿಪಾಟಲನ್ನು, ಹಸಿವಿನ ಹಾಹಾಕಾರವನ್ನು ನೋಡಿದ ನಮ್ಮ ‘ಸಭ್ಯ’ಸಮಾಜ ಯಾರಾದರೂ ಉಣ್ಣಲು ಹಾತೊರೆದರೆ ‘ದೊಕ್ಕಲೋರು ಆಡ್ದಂಗೆ ಆಡ್ತಾನೆ’ ಎಂದು ಬೈಗುಳವಾಗಿ ದಕ್ಕಲರ ಹಸಿವನ್ನು ಇಂದಿಗೂ ಆಡಿಕೊಳ್ಳುತ್ತದೆ.

‘ದಕ್ಕಲರು’ ಅಂದರೆ ಅದೊಂದು ನಗಣ್ಯವಾದ, ಅತಿಸೂಕ್ಷ್ಮವಾದ ಅಲೆಮಾರಿ, ಅಸ್ಪೃಶ್ಯ ಕುಲ. ದಕ್ಕಲ, ದಕ್ಕಲ್, ದಕ್ಕಲರು, ದಕ್ಕಲಿಗ, ದೊಕ್ಕಲೊಳ್ಳು, ದಕ್ಕಲ್ವಾರ, ದೊಕ್ಕಲೇರು, ಡಕ್ಕಲೇರು, ದೊಕ್ಕಲ ಮುಂತಾಗಿ ಕರೆಯಲಾಗುವ ಈ ಸಮುದಾಯ ಭಾರತೀಯ ಜಾತಿ ಶ್ರೇಣಿಯಲ್ಲಿ ಕಟ್ಟಕಡೆಯ ಸಮುದಾಯ ಎಂದು ಪರಿಗಣಿಸಲಾಗಿದೆ.

ದಕ್ಕಲರು ಅಸ್ಪೃಶ್ಯರಿಗೆ ಅಸ್ಪೃಶ್ಯರು! ಅಂದರೆ ಅಸ್ಪೃಶ್ಯರಾದ ಮಾದಿಗರು ಹಿಂದೆ ದಕ್ಕಲರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಅವರ ಗುಡಿಸಲು, ಗುಡಾರಗಳಲ್ಲಿ ಅನ್ನ, ನೀರುಗಳನ್ನೂ ಸ್ವೀಕರಿಸುತ್ತಿರಲಿಲ್ಲ! ಹಿಂದೆ ದಕ್ಕಲರು ‘‘ನಾವು ದಕ್ಕಲರು, ನಿಮ್ಮ ಮಕ್ಕಳು ಭಿಕ್ಷೆಗೆ ಬಂದಿದ್ದೇವೆ..’’ ಎಂದು ಮಾದಿಗರ ಹಟ್ಟಿಗಳ ಹೊರಗೆ ನಿಂತು ಬೇಡಿದರೆ ಇಡೀ ಮಾದಿಗರ ಹಟ್ಟಿಯೇ ಬಾಗಿಲು ಮುಚ್ಚಿಕೊಳ್ಳುತ್ತಿತ್ತು. ನಂತರ ಮಾದಿಗ ವ್ಯಕ್ತಿಯೊಬ್ಬ ಮಾದಿಗರ ಹಟ್ಟಿಯಲ್ಲಿನ ಎಲ್ಲಾ ಗುಡಿಸಲುಗಳಲ್ಲಿ ಉಂಡುಳಿದ ಗಂಜಿ, ಅನ್ನಾಹಾರಗಳನ್ನು ಸಂಗ್ರಹಿಸಿ, ಒಂದು ಮಣ್ಣಿನ ಕೊಡದಲ್ಲಿ ತಂದು ಹಟ್ಟಿಯ ಹೊರಗಿಡುತ್ತಿದ್ದ. ಆ ಭಿಕ್ಷಾನ್ನವನ್ನು ತೆಗೆದುಕೊಂಡು ಹೋಗುವಾಗ ದಕ್ಕಲರು ‘‘ನಿಮ್ಮ ಮಕ್ಕಳು ಭಿಕ್ಷೆಯನ್ನು ಪಡೆದಿದ್ದೇವೆ.. ಬಾಗಿಲು ತೆಗೆದುಕೊಳ್ಳಬಹುದು..’’ ಎಂದು ಹೇಳಿದ ಮೇಲಷ್ಟೇ ಬಾಗಿಲು ತೆಗೆಯುತ್ತಿದ್ದರಂತೆ. ದಕ್ಕಲರು ಮಾದಿಗರಿಗಷ್ಟೇ ಅಲ್ಲ ಇಡೀ ಜನಸಮುದಾಯಕ್ಕೆ ಕೇವಲ ಮುಟ್ಟಬಾರದವರಲ್ಲ, ನೋಡಬಾರದವರೂ ಆಗಿದ್ದರು! ದಕ್ಕಲರು ತಮ್ಮನ್ನು ಮಾದಿಗರ ಮಕ್ಕಳು ಎಂದು ಇಂದಿಗೂ ಹೇಳಿಕೊಳ್ಳುತ್ತಾರೆ. ಆದ್ದರಿಂದಲೇ ‘ಮಾದಿಗರಿಂದ ಭಿಕ್ಷೆ ಪಡೆಯುವುದು ನಮ್ಮ ಹಕ್ಕು’ ಎಂದು ಭಾವಿಸಿದ್ದಾರೆ.

ಆದಿಜಾಂಬವ ಪರಂಪರೆಯ ಮಾದಿಗ ಕುಲದ ಉಪಜಾತಿಗಳಲ್ಲಿ ಒಂದಾಗಿರುವ ದಕ್ಕಲರನ್ನು ದೊಕ್ಕಲ ಮಕ್ಕಳು, ಮನೆಮಕ್ಕಳು, ಹಳೇಮಕ್ಕಳು ಎಂದು ಗುರುತಿಸಿದರೂ ಮಾದಿಗರ ಸಂಬಂಧಿಗಳೆಂಬ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ದಕ್ಕಲರನ್ನು ಗುರುತಿಸಲಾಗುತ್ತದೆ. ದಕ್ಕಲಿಗರು ಹಸಿವು ನೀಗಿಸಿಕೊಳ್ಳುವ ಪಡಿಪಾಟಲನ್ನು, ಹಸಿವಿನ ಹಾಹಾಕಾರವನ್ನು ನೋಡಿದ ನಮ್ಮ ‘ಸಭ್ಯ’ಸಮಾಜ ಯಾರಾದರೂ ಉಣ್ಣಲು ಹಾತೊರೆದರೆ ‘ದೊಕ್ಕಲೋರು ಆಡ್ದಂಗೆ ಆಡ್ತಾನೆ’ ಎಂದು ಬೈಗುಳವಾಗಿ ದಕ್ಕಲರ ಹಸಿವನ್ನು ಇಂದಿಗೂ ಆಡಿಕೊಳ್ಳುತ್ತದೆ.

ದಕ್ಕಲರ ಭೀಕರ ದಾರಿದ್ರ್ಯ ಕಂಡವರು ಅವರು ವಾಸವಾಗಿರುವ ಕಡೆ ಸುಳಿಯುವುದೇ ಇಲ್ಲ. ಇವರ ವೋಟು ಪಡೆದರೂ ದಾರಿದ್ರ್ಯ ಬರುತ್ತದೆ, ಇದರಿಂದಾಗಿ ಸೋಲುತ್ತೇವೆ ಎಂಬ ಕಾರಣಕ್ಕೆ ಮತ್ತು ‘ವೋಟಿಗೂ ಅಸ್ಪೃಶ್ಯತೆ’ ತಗಲುತ್ತದೆಂಬ ಕಾರಣದಿಂದಾಗಿ ಇವರನ್ನು ಅನೇಕ ಕಡೆ ಮತಪಟ್ಟಿಗೂ, ಮತಗಟ್ಟೆಗೂ ಸೇರಿಸುತ್ತಿರಲಿಲ್ಲ! ಈ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ ಇವರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಸರ್ಟಿಫಿಕೇಟ್ ದೊರಕುತ್ತಿಲ್ಲ.

ಈಚೆಗೆ ನನಗೆ ತಿಳಿದುಬಂದಂತೆ ಡಾ.ಅಂಬೇಡ್ಕರ್ ಭವನವೊಂದರಲ್ಲಿ ಆಯೋಜಿಸಿದ್ದ, ಧರ್ಮಸ್ಥಳ ಮಂಜುನಾಥೇಶ್ವರ ಸೊಸೈಟಿಗೆ ಸದಸ್ಯರಾಗಲು ಸಾಲಿನಲ್ಲಿ ನಿಂತಿದ್ದ ದಕ್ಕಲರನ್ನು ಅಂಬೇಡ್ಕರ್ ಭವನದೊಳಕ್ಕೇ ಸೇರಿಸದೆ ಹೋದದ್ದು ವಿಪರ್ಯಾಸ! ಯಾರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ಹೋರಾಡಿದರೋ ಅವರ ಹೆಸರಿನ ಭವನದೊಳಕ್ಕೂ ದಕ್ಕಲರನ್ನು ಸೇರಿಸದೇ ಹೋದ ಅಸ್ಪೃಶ್ಯ ಮನಸ್ಸುಗಳನ್ನು ಏನೆಂದು ಕರೆಯಬೇಕು?

ಸುಮಾರು ನಲವತ್ತು ವರ್ಷಗಳ ಹಿಂದೆ ‘ಲಂಕೇಶ್ ಪತ್ರಿಕೆ’ಗೆ ಬರೆಯಲು ಕೋಲಾರಜಿಲ್ಲೆಯ, ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಬಳಿಯಿರುವ ಬೈಕೊತ್ತೂರು ಎಂಬ ಕುಗ್ರಾಮಕ್ಕೆ ಹೋಗಿ ದಕ್ಕಲಿಗ ಸಮುದಾಯದ ಹಾಡುಗಾರ, ತೀರಾ ವಯಸ್ಸಾಗಿದ್ದ ವಯೋವೃದ್ಧ ಜೋಂಕಿಣಿ ಮುನೆಪ್ಪನನ್ನು ಬೆಟ್ಟಿಮಾಡಿ, ಆತ ಹಾಡುತ್ತಿದ್ದ ‘ಗಂಗ ಭಾರತ’ವನ್ನು ಸಂಗ್ರಹಿಸಿ ಲಂಕೇಶ್ ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ಬರೆದೆ. ದಕ್ಕಲಿಗ ಮತ್ತು ಮಾದಿಗ ಸಮುದಾಯಗಳ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿದು ಜೋಂಕಿಣಿ ವಾದ್ಯ ನುಡಿಸುತ್ತಾ ಹಾಡುತಿದ್ದ ಜೋಂಕಿಣಿ ಮುನೆಪ್ಪ ತನ್ನ ಕುಲದ ಮೂಲಪುರುಷ ಜಾಂಬುತಾತ ‘ಆಕಾಶಕ್ಕಿಂತಲೂ ಆರು ತಿಂಗಳು ದೊಡ್ಡವನು, ಭೂಮಿಗಿಂತಲೂ ಮೂರು ತಿಂಗಳು ದೊಡ್ಡವನು’ ಎಂದು ಹೇಳುವುದರ ಮೂಲಕ ‘ಇಡೀ ಮನುಕುಲಕ್ಕೇ ನಾವು ದಕ್ಕಲರು ಮೂಲಪುರುಷರು’ ಎಂಬುದನ್ನು ಅನೇಕ ನಿದರ್ಶನಗಳನ್ನು ನೀಡುತ್ತಾ ಹಾಡಿನಲ್ಲೇ ದಾಖಲಿಸುತ್ತಿದ್ದ. ‘ಲಂಕೇಶ್ ಪತ್ರಿಕೆ’ಯಲ್ಲಿ ಇದನ್ನು ಓದಿದ್ದ, ಆಗಿನ ಜಾನಪದ ಅಕಾಡಮಿಯ ಅಧ್ಯಕ್ಷರಾಗಿದ್ದ ಜಾನಪದ ತಜ್ಞ ಡಾ.ಎಚ್.ಎಲ್. ನಾಗೇಗೌಡರು, ಅಕಾಡಮಿಯ ರಿಜಿಸ್ಟ್ರಾರ್ ಆಗಿದ್ದ ಡಾ. ಬೋರಲಿಂಗಯ್ಯನವರು, ಅಕಾಡಮಿ ಸದಸ್ಯರಾಗಿದ್ದ ಡಾ.ಕಾಳೇಗೌಡ ನಾಗವಾರರು ಸೇರಿ ಜೋಕಿಂಣಿ ಮುನೆಪ್ಪನನ್ನು ನೋಡದೆಯೇ ಕೇವಲ ನನ್ನ ಲೇಖನದ ಆಧಾರದ ಮೇಲೆ ಅವರಿಗೆ ಅಡಾಡಮಿ ಪ್ರಶಸ್ತಿ ಘೋಷಿಸಿ, ಜೋಂಕಿಣಿ ಮುನೆಪ್ಪನ ಕುಗ್ರಾಮಕ್ಕೇ ಹೋಗಿ ಪ್ರಶಸ್ತಿ, ಹಣ ನೀಡಿ ಗೌರವಿಸಿ ಬಂದಿದ್ದೆವು. ಇದಕ್ಕೆ ಸ್ಥಳೀಯ ಕವಿ ಸ.ರಘುನಾಥ್ ಅವರು ಸಾತ್ ನೀಡಿದ್ದರು.

ಇದಾದ ಹಲವು ವರ್ಷಗಳ ನಂತರ ನಾನು ಆಯೋಗದ ಅಧ್ಯಕ್ಷನಾಗಿ ಚಿಕ್ಕನಾಯಕನಹಳ್ಳಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದೆ. ಮಾರ್ಗ ಮಧ್ಯೆ ಸ್ಮಶಾನವೊಂದರ ಸೆರಗಿನಲ್ಲಿ ಇಡೀ ದಾರಿದ್ರ್ಯವೇ ಮೈವೆತ್ತಂತಹ ಕಡು ಬಡತನದ ಟೆಂಟು, ಗುಡಾರಗಳನ್ನು ನೋಡಿದೆ. ನನ್ನೊಂದಿಗೇ ಇದ್ದ ಗೆಳೆಯ ಡಾ. ರಘುಪತಿ ‘‘ನೋಡಿ ಸರ್.. ಇವರು ದಕ್ಕಲಿಗರು ಇವರ ಪರಿಸ್ಥಿತಿ ಒಮ್ಮೆ ನೋಡಿ..’’ ಎಂದರು. ನಾನು ಕುತೂಹಲಗೊಂಡು ಅಲ್ಲೇ ಕಾರು ನಿಲ್ಲಿಸಿದೆ. ಕಾರು ನಿಂತಿದ್ದೇ ತಡ ನನ್ನ ಮುಂದಿದ್ದ ಪೊಲೀಸ್ ಪ್ರೋಟೋಕಾಲ್ ಮತ್ತು ನಮ್ಮ ಅಧಿಕಾರಿಗಳ ಕಾರುಗಳನ್ನು ನೋಡಿದ್ದೇ ತಡ ದಕ್ಕಲರು ತಮ್ಮ ಮಕ್ಕಳನ್ನು ಕಂಕುಳಲ್ಲಿ ಹಾಕಿಕೊಂಡು, ಕೈಗೆ ಸಿಕ್ಕಷ್ಟು ಪ್ಲಾಸ್ಟಿಕ್ ಬಿಂದಿಗೆ, ಬಟ್ಟೆಬರೆಗಳನ್ನು ಎತ್ತಿಕೊಂಡು ಓಡತೊಡಗಿದರು. ಅನಧಿಕೃತವಾಗಿ ಅಲ್ಲಿ ಟೆಂಟುಗಳನ್ನು ಹಾಕಿಕೊಂಡಿದ್ದ ಅವರನ್ನು ಎತ್ತಂಗಡಿ ಮಾಡಿಸಲು ಬಂದಿರುವ ಅಧಿಕಾರಿಗಳು ಎಂದು ಭಾವಿಸಿದ್ದರು. ನಾನು ಅವರನ್ನು ಕೂಗಿ ಕರೆದು ಕೂರಿಸಿ ಮಾತಾಡತೊಡಗಿದೆ. ಅವರಲ್ಲೇ ಸ್ವಲ್ಪ ಅರಿವಿದ್ದ ಶಾಂತರಾಜು ಎಂಬ ಹುಡುಗ ತನಗೆ ತಿಳಿದಷ್ಟು ದಕ್ಕಲರ ಬದುಕಿನ ವಿವರಗಳನ್ನು ಕಟ್ಟಿಕೊಟ್ಟ, ನೆಲೆಯೇ ಇಲ್ಲದ ದಕ್ಕಲರ ಬದುಕು ಅರ್ಥವಾಗತೊಡಗಿತು.

ನಮ್ಮೊಂದಿಗೆ ಇದ್ದ ಜಿಲ್ಲಾಧಿಕಾರಿ ಸೋಮಶೇಖರ್ ಅವರಿಗೆ ದಕ್ಕಲರ ದರ್ಶನ ಮಾಡಿಸಿದೆ. ಅವರು ಬೆಚ್ಚಿಬಿದ್ದವರಂತೆ ದಕ್ಕಲರನ್ನು ನೋಡತೊಡಗಿದರು, ಅವರ ಹೃದಯ ನೀರಾಯಿತು, ಅವರು ಕಾಳಜಿ ವಹಿಸಿ ಕೇವಲ ಒಂದೆರಡು ತಿಂಗಳಲ್ಲಿ ಅಲ್ಲಿದ್ದ ಕುಟುಂಬಗಳಿಗೆ ನಿವೇಶನ ನೀಡಿದರು. ಮನೆ ಕಟ್ಟಿಸಿಕೊಡುವಷ್ಟರಲ್ಲಿ ಸರಕಾರ ಅವರನ್ನು ಬೇರೆಡೆಗೆ ವರ್ಗಾಯಿಸಿತ್ತು.

ದಕ್ಕಲ ಸಮುದಾಯದ ಬಗ್ಗೆ ‘ಔಟ್ ಲುಕ್’ ಪತ್ರಿಕೆಯ ಗೆಳೆಯ ಸುಗತ ಶ್ರೀನಿವಾಸರಾಜು ಅವರ ಗಮನ ಸೆಳೆದೆ. ಅತ್ಯಂತ ಕಾಳಜಿ ಮತ್ತು ಆಸಕ್ತಿ ತೋರಿದ ಸುಗತ ದಂಪತಿ ಚಿಕ್ಕನಾಯಕನಹಳ್ಳಿಯ ದಕ್ಕಲರ ಟೆಂಟುಗಳಿಗೆ ಬಂದರು, ಅಂದು ಸ್ವಾತಂತ್ರ್ಯ ದಿನೋತ್ಸವ, ಹಾಗೆಂದರೇನೇ ತಿಳಿಯದ ದಕ್ಕಲರ ಮಕ್ಕಳೊಂದಿಗೆ ಭಾರತದ ಬಾವುಟ ಹಾರಿಸಿ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿ, ಸಿಹಿ ಹಂಚಿಕೊಂಡೆವು.

‘ಔಟ್ ಲುಕ್’ ಪತ್ರಿಕೆಯಲ್ಲಿ ದಕ್ಕಲರ ಕುರಿತು ಸುಗತ ಅವರು ಬರೆದ ಹೃದಯಸ್ಪರ್ಶಿ ಲೇಖನದಿಂದಾಗಿ ದಕ್ಕಲ ಸಮುದಾಯದ ಬಗ್ಗೆ ಇಡೀ ಜಗತ್ತಿಗೆ ತಿಳಿಯಿತು. ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ಲೇಖನ ಓದಿ ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ದಕ್ಕಲರ ದಾರಿದ್ರ್ಯದ ಕುರಿತು ಮಾತನಾಡಿದರು. ಒಂದೇ ದಿನದಲ್ಲಿ ದಕ್ಕಲರ ಕಾಲನಿಗೆ ಅಧಿಕಾರಿಗಳು, ಸರಕಾರದ ಮುಖ್ಯಸ್ಥರು ಬರತೊಡಗಿದರು. ಪರಿಣಾಮ ದಕ್ಕಲರಿಗೆ ಮನೆಗಳು ಸಿಕ್ಕವು. ಆದರೆ ನಂತರ ಬಂದ ಸರಕಾರಗಳು ದಕ್ಕಲರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯದ ಬದುಕನ್ನು ನೋಡಲೇ ಇಲ್ಲ. ಇದರ ಪರಿಣಾಮ ಅಂದು ಟೆಂಟುಗಳಲ್ಲಿದ್ದ ದಾರಿದ್ರ್ಯ ಇಂದು ಮನೆಗಳಲ್ಲಿದೆ ಅಷ್ಟೇ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News