×
Ad

ಆಸಾದಿಗಳ ಅಸಾಧಾರಣ ಲೋಕ

Update: 2025-11-05 11:43 IST

ಆಸಾದಿ ಸಮುದಾಯ ಅತ್ಯಂತ ಸೂಕ್ಷ್ಮ ಸಮುದಾಯವಾಗಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಅತ್ಯಂತ ಶೋಷಿತ ಸಮುದಾಯವಾಗಿ ಅಸ್ಪಶ್ಯತೆಯ ಕಪಿಮುಷ್ಟಿಯಲ್ಲಿ ಸಿಲುಕಿ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುತ್ತಿರುವುದು ಕಣ್ಣಿಗೆ ರಾಚುತ್ತದೆ.

‘‘ನನಗೆ ತಿಳಿದ ಮಟ್ಟಿಗೆ ನಾವು ಕಾಡ್ ಜನಗೋಳು, ಆವತ್ನಿಂದ ಅಷ್ಟು ಘನ್ತಿಯಿಂದ ಬದುಕಿಲ್ಲ.. ‘ನಿನ್ಗಾ ಒಬ್ನೇ ಗಂಡೇನು? ಅವ್ನ ಬಿಟ್ಟೆ ಇವನ್ನಾ ಮಡಿಕ್ಕಂಡೆ, ಇವನ್ನಾ ಬಿಟ್ಟೆ ಮತ್ತೊಬ್ನಾ ಮಡಿಕ್ಕಂಡೆ’ ಅಂತಾರೂ, ನಮ್ಮ ತಾಯೇರು ಹಂಗಾ ಬದುಕೀರು. ನನ್ನಾ ಕೂಡ ಹಂಗಾ ಮಾಡಿದ್ರು. ಆದ್ರ ನಾನು ನನ್ನ ಮಕ್ಳಿಗೆ ಹಂಗ ಮಾಡೀಲ್ರೀ, ಹಿಂದಾ ಮಾಡ್ತಿದ್ದಂಗ ಮಾಡ್ತಿದ್ರ ಜಾತೀಗ್ ಗೌರವಾ ಸಿಕ್ತಾದೇನ್ರಿ? ಸರಿ ಮಾಡ್ಕಬೇಕು ಅಲ್ವೇನ್ರಿ? ಅಂತದ್ರಾಗ ನನ್ನ ಮಕ್ಳಿಗೆ ಹಾಲಿಲ್ಲ, ಮನೀ ಕಟ್ಗಣಾಕ ಜಾಗಿಲ್ಲ.. ಇಂತಾ ಪರಿಸ್ಥಿತಿ ಒಳಗಾ ಬದುಕೇವ್ರ ನೋಡ್ರಿ, ಮೂರು ಹೆಣ್ಮಕ್ಳ ಕಟಗೊಂಡು ಕಣ್ಣೀರ್ನಾಗ ಕೈ ತೊಳೀಲಿಕ್ ಹತ್ತೇವು. ಆ ದೇವೀಗ್ ಇನ್ನೂ ಅರಿಕೆ ಆಗಿಲ್ಲ. ಅಂತದ್ರಾಗ ತಾಯಿ ಹೆಸರೇಳಿಕೊಂಡು ಭಿಕ್ಷಾ ಬೇಡ್ಕೊಂಡು ಜೀವ್ನಾ ಮಾಡ್ತಿದೀವಿ. ಸಾಲದಕ್ಕಾ ವಯಸ್ನಲ್ಲಿ ಗಂಡನ್ನ ಕಳಕೊಂಡೆ, ಮೂರು ಹೆಣ್ಮಕ್ಕಳ ಮದ್ವೀ ಮಾಡ್ದೆ. ನಮ್ಮಂಗ ಅವ್ರ ಜೀವ್ನ ಹಾಳಾಗೋದು ಬ್ಯಾಡ. ಗಂಡುನ ಮನೀ ಗರ್ತೀರಾಗಿ, ಆಟೋ ಈಟೋ ಆಸ್ತಿ ಅಂತ ಆದ್ರ ಸಾಕಲ್ಲ? ಆಸ್ತಿ ಇಲ್ದಿದ್ರೆ ಹೋಗ್ಲಿ, ಕಡೀಕ್ ಕೂಲಿ ಮಾಡ್ಕಂಡು ತಿನ್ಲಿ.. ಗೌರವ, ಘನ್ತಿ ಸಿಕ್ತೈತಿ ಅಂತ ಹೋರಾಟ ಮಾಡ್ತಾ ಬದುಕಾ ಸಾಗಸ್ತೀನಿ ನೋಡ್ರಿ..’’ ಎಂದು ಅನವಟ್ಟಿ ಸಮೀಪ ನೆಗಲವಾಡಿ ಊರಿನ ಆಸಾದಿ ಸಮುದಾಯದ, ದೇವದಾಸಿಯಾಗಿದ್ದ ರೇಣುಕವ್ವ ಹೇಳಿದ ಮಾತುಗಳು ಇಡೀ ಆಸಾದಿ ಸಮುದಾಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ.

ಬಹುತೇಕ ಆಸಾದಿಗಳು ದೇವದಾಸಿ ಪದ್ಧತಿಯಂತಹ ಅಮಾನುಷ ಆಚರಣೆಗಳಿಗೆ ಬಲಿಯಾಗಿರುವುದನ್ನು ಸಹಜವಾಗಿ ಕಾಣುತ್ತೇವೆ. ಒಮ್ಮೆ ಎಲ್ಲಮ್ಮನ ಗುಡ್ಡಕ್ಕೆ ಹೋಗಿದ್ದಾಗ ನನಗೆ ಸಿಕ್ಕ ಬಹುತೇಕ ದೇವದಾಸಿ ಹೆಣ್ಣುಮಕ್ಕಳ ಜಾತಿ ಕೇಳಿದಾಗ ಅವರು ‘ಆಸಾದಿ’ ಎಂದು ಹೇಳಿದ್ದು ಇಂದಿಗೂ ನೆನಪಿದೆ. ಅದೇಕೆ ಆಸಾದಿಗಳಲ್ಲೇ ಹೆಚ್ಚು ಜನ ಹೆಣ್ಣುಮಕ್ಕಳು ದೇವದಾಸಿಯರಾಗುತ್ತಿದ್ದರು? ಎಂಬುದಕ್ಕೆ ಉತ್ತರ ಅಸಾಧ್ಯ ಬಡತನ ಮತ್ತು ಧಾರ್ಮಿಕ ನಂಬಿಕೆಗಳೇ ಕಾರಣ ಎನಿಸುತ್ತದೆ. ಆಸಾದಿ ಸಮುದಾಯ ಅತ್ಯಂತ ಸೂಕ್ಷ್ಮ ಸಮುದಾಯವಾಗಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಅತ್ಯಂತ ಶೋಷಿತ ಸಮುದಾಯವಾಗಿ ಅಸ್ಪಶ್ಯತೆಯ ಕಪಿಮುಷ್ಟಿಯಲ್ಲಿ ಸಿಲುಕಿ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುತ್ತಿರುವುದು ಕಣ್ಣಿಗೆ ರಾಚುತ್ತದೆ.

ಮೊದಮೊದಲು ಆಸಾದಿಗಳೆಂದರೆ ಕೇವಲ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಜಾತಿಯವರಿರಬೇಕೆಂದು ತಿಳಿದಿದ್ದ ನನಗೆ ಗೆಳೆಯ ಡಾ.ಮುಝಪ್ಫರ್ ಅಸ್ಸಾದಿಯವರೊಂದಿಗೆ ಒಮ್ಮೆ ಮಾತನಾಡಿದಾಗ ‘‘ಅದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಜಾತಿಯಲ್ಲ, ಅದೊಂದು ದಲಿತ ಸಮುದಾಯಕ್ಕೆ ಸೇರಿದ ಅಸ್ಪಶ್ಯ ಜಾತಿ. ಮುಸ್ಲಿಮರಲ್ಲಿ ಅಸ್ಸಾದಿ ಎಂಬುದು ಮುಸ್ಲಿಮ್ ಧರ್ಮದ ಮನೆತನದ ಹೆಸರು’’ ಎಂದು ಹೇಳಿದಾಗ ಅಸ್ಪಶ್ಯ ಆಸಾದಿಗಳಿಗೂ ಮುಸ್ಲಿಮ್ ಅಸ್ಸಾದಿ ಮನೆತನಕ್ಕೂ ಸಂಬಂಧವಿಲ್ಲ ಎಂಬುದು ತಿಳಿಯಿತು.

ಪ್ರೊ.ರಹಮತ್ ತರೀಕೆರೆಯವರ ‘ಶಾಕ್ತಪಂಥ’ ಎಂಬ ಕೃತಿಯಲ್ಲಿ ಉಲ್ಲೇಖವಾಗಿರುವ ಆಸಾದಿಗಳ ಕುರಿತಾದ ಒಂದು ಪಠ್ಯ ಹೀಗಿದೆ... ‘‘ಮಧ್ಯ ಕರ್ನಾಟಕದಲ್ಲಿ ದಟ್ಟವಾಗಿಯೂ, ಉತ್ತರ ಕರ್ನಾಟಕದ ಭಾಗಗಳಲ್ಲಿ ವಿರಳವಾಗಿಯೂ ಕಾಣುವ ಆಸಾದಿ ಪರಂಪರೆಯಿದೆ. ಆಯಾ ಪ್ರದೇಶದ ಶಾಕ್ತ ಗುರುವರ್ಗಕ್ಕೆ ಸೇರಿದ ಆಸಾದಿಗಳು ಜೋಗತಿಯರಂತೆ ವಿಶಾಲ ಪಥದಲ್ಲಿ ತಿರುಗಾಟ ಮಾಡದೆ ತಮ್ಮ ಸೀಮೆಯ ಅಮ್ಮಂದಿರ ಜಾತ್ರೆ- ಹಬ್ಬಗಳಿಗೆ ಸೀಮಿತರು. ಜಾತ್ರೆಯ ಮುಂಚೆ ಊರೂರ ಮೇಲೆ ಹೋಗಿ ಸಾರುವುದರಿಂದ ಹಿಡಿದು, ದೇವರನ್ನು ಹೊರಡಿಸುವಾಗ, ತೇರಿಗೆ ಕಳಸವೇರಿಸುವಾಗ, ತೇರೆಳೆಯುವಾಗ, ಉಯ್ಯಾಲೆ ಆಡಿಸುವಾಗ ಹಾಗೂ ಕೇಲು ಹೊರುವಾಗ ಇವರ ವಾದನ ಮತ್ತು ಹಾಡಿಕೆ ಇರುತ್ತೆ’’

‘‘ಉಳಿದ ಶಾಕ್ತ ಗುರುವರ್ಗಕ್ಕೆ ಹೋಲಿಸಿದರೆ ಆಸಾದಿಗಳು ಎರಡು ಕಾರಣದಿಂದ ವಿಶಿಷ್ಟರು. 1. ದಲಿತರು ಅದರಲ್ಲೂ ಮಾದಿಗರು ಮಾತ್ರ ಆಸಾದಿಗಳಾಗುವುದು, ಕೃಷಿ ಪ್ರಧಾನ ಜಾತಿ ವ್ಯವಸ್ಥೆಯ ಸಾಂಪ್ರದಾಯಿಕ ಹಳ್ಳಿಗಳಲ್ಲಿ ನಡೆಯುವ ಅಮ್ಮನ ಹಬ್ಬಗಳಲ್ಲಿ ಕೋಣಬಲಿ, ಅದರ ಮಾಂಸ ಸೇವನೆ, ಚರ್ಮ ಹದ ಮಾಡುವುದು, ಚರ್ಮೋತ್ಪನ್ನ ತಯಾರಿಸುವುದು ಇವರ ಪಾರಂಪರಿಕ ಉದ್ಯೋಗ, ಕಸುಬು, ಪತಂಥಿಕ ಸೇವೆ ಮತ್ತು ಆಹಾರ ಸಂಸ್ಕೃತಿಗಳನ್ನು ಈ ಹಾಡಿಕೆಯ ಕಲಾತ್ಮಕ ಎಳೆಗಳು ಬಂಧಿಸಿವೆ. ಪಾಂಥಿಕ ದೀಕ್ಷೆಯ ನಂತರವೇ ಆಸಾದಿಗಳಿಗೆ ಹಾಡುವ ಮತ್ತು ಹಲಗೆ ನುಡಿಸುವ ಅಧಿಕಾರ ಸಿಗುವುದು. ಆಸಾದಿ ದೀಕ್ಷೆಗೆ ‘ಹೂಮುದ್ರೆ ಹಾಕುವುದು’ ಎನ್ನುವರು. ಕೆಂಗಣಿಗಿಲೆ ಹೂವಿನಿಂದ ಭುಜಗಳಿಗೆ ಮುಟ್ಟಿಸುವ ಮೂಲಕ ಹಾಕುವುದೂ ಇದೆ. ಈ ಹೂಮುದ್ರೆಯು ಶಾಕ್ತರ ಯೋನಿಮುದ್ರೆಯ ಪರ್ಯಾಯ ರೂಪ. ಆಸಾದಿಗಳ ಹಲಗೆಯ ಮೇಲೆ ಅಮ್ಮನ ಪಾದದ ಗುರುತುಗಳಿದ್ದು ಪ್ರತಿಸಲ ಬಾರಿಸುವಾಗಲೂ ದೇವಿಚರಣಕ್ಕೆ ನಮಿಸುವ ಅರ್ಥ ಹೊಂದಿದೆ. ಆಸಾದಿ ಪದಗಳು ಅಮ್ಮನ ರಣಶೌರ್ಯ, ಚೆಲುವಿನ ವರ್ಣನೆ, ಮಿಥುನ ಸಮಕ್ಷಮ ಹಾಗೂ ಪ್ರತಿಷ್ಠಿತರ ವಿಡಂಬನೆ ಕುರಿತಾಗಿವೆ’’

ಹೀಗೆ ಆಸಾದಿ ಪದಗಳಲ್ಲಿರುವ ಅಮ್ಮನ ಚೆಲುವಿನ ವರ್ಣನೆಗಳಲ್ಲಿ ಆಕೆ ಧರಿಸುವ ಆಭರಣ, ಸೀರೆ, ರವಿಕೆಗಳ ಸೂಕ್ಷ್ಮ ಮಾಹಿತಿಗಳೂ ಸೇರಿರುತ್ತವೆ. ಇಲ್ಲಿ ಅಮ್ಮ ಎದುರಾಳಿಗಳನ್ನು ಕದನದಲ್ಲಿ ಸೋಲಿಸುವ ಕತೆಗಳೂ ಇರುತ್ತವೆ ಅಂತೆಯೇ ಈ ಕತೆಗಳಲ್ಲಿ ಕೊಣವೇಗೌಡ ಮಣಿಸುವ ಪ್ರಸಂಗ ಹೆಚ್ಚು ಜನಪ್ರಿಯ.

ಡಾ. ಬಸವರಾಜ ನೆಲ್ಲಿಸರ ಅವರು ಹೇಳುವಂತೆ ಆಸಾದಿಗಳನ್ನು ದೈವದ ಒಕ್ಕಲುಗಳು ಹೇಗೆ ಪಾವಿತ್ರ್ಯತೆಯಿಂದ ಕಾಣುತ್ತಾರೆ ಎಂದರೆ ಅವರ ಕೈಯಲ್ಲಿ ಎಂಜಲು ತೆಗೆಸುವುದಿಲ್ಲ, ಅವರಿಗೆ ಎಂಜಲು ಮಾಡಿದ ಆಹಾರವನ್ನಾಗಲಿ, ಹಳಸಿದ ತಂಗಳನ್ನಾಗಲಿ ನೀಡುವುದಿಲ್ಲ. ಅವರನ್ನು ಪೂಜ್ಯ ಭಾವನೆಯಿಂದ ಸತ್ಕರಿಸುತ್ತಾ ಅಮ್ಮನ ವರಪುತ್ರರೆಂದೋ, ದೇವದೂತರೆಂದೋ ಪರಿಗಣಿಸುತ್ತಾರೆ.

ಸಾಂಸ್ಕೃತಿಕವಾಗಿ ಬಹುತೇಕ ಮಾದಿಗರೊಂದಿಗೇ ಬೆರೆತಿರುವ ಆಸಾದಿಗಳ ಅಸ್ಮಿತೆಯ ಕುರಿತು ಸಂಶೋಧನಾ ಪ್ರಬಂಧ ಬರೆದಿರುವ ಬಿ.ಆರ್. ಬಾಸ್ಕರ್ ಪ್ರಸಾದ್, ಆಸಾದಿಗಳ ಬದುಕಿನ ಮಜಲುಗಳನ್ನೂ, ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ, ಅವರ ಸಾಮಾಜಿಕ ದಾರಿದ್ರ್ಯವನ್ನೂ ಪದರಪದರವಾಗಿ ಕಟ್ಟಿಕೊಟ್ಟಿದ್ದಾರೆ. ಮಾದಿಗರ, ದಕ್ಕಲಿಗರ, ಮಾಸ್ಟೀಕರ ಕುಲಮೂಲಗಳೊಂದಿಗೆ ಆಸಾದಿಗಳ ಕುಲಮೂಲ, ಪದಮೂಲ, ವೃತ್ತಿಮೂಲಗಳಿಂದ ಹಿಡಿದು ಮಾತಂಗಿ ಕತೆ, ಚೌಡಿಕೆ ಕತೆ, ಮಾರಿಬಲಿ ಕಥಾನಕಗಳನ್ನು ದಾಟಿ ಅವರ ಅಸ್ಮಿತೆ ಮತ್ತು ಸಾಮಾಜಿಕ, ಸಾಂಸ್ಕೃತಿಕ, ಜಾಗತಿಕ ಹಿನ್ನೆಲೆಗಳೊಂದಿಗೆ ಅವರ ಮತೀಯ ವಿಭಿನ್ನತೆಯ ಕಥನಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ಪದವಾಗಿ ಆಸಾದಿಯ ಅರ್ಥದ ಹಿಂದೆ ಚಲಿಸಿದಾಗ ಅನೇಕ ಕಡೆಗಳಲ್ಲಿ ಅನೇಕ ಅರ್ಥಗಳು ಸಿಗುತ್ತವೆ. ಆದಿಶಕ್ತಿಯ ದಿಕ್ಕುಗಳು, ಪ್ರಸಾದಿಗಳು, ರಾಣಿಗೇರ್, ಆಶೇರು, ತಾಯಿಗೆ ಆಸರೆಯಾದ ಮಗ, ಹಸಾದಿ, ಆಸೆ ಮತ್ತು ಆದಿಯ ಸೂಚಕ, ಹಾಸ್ಯದವನು ಹೀಗೆ ಅನೇಕ ಪದಗಳು ದಕ್ಕುತ್ತವೆ. ಆಸಾದಿಗಳು ಎಂದರೆ ಧಾರ್ಮಿಕ ವೃತ್ತಿಗಾಯಕ ಪರಂಪರೆಗೆ ಸೇರಿದ ಮಾರಮ್ಮ, ಯಲ್ಲಮ್ಮ ಮತ್ತು ದುರ್ಗಮ್ಮನ ಆರಾಧಕರು, ಮಾರಮ್ಮನಿಗೆ ಸಂಬಂಧಿಸಿದ ಹಾಡುಗಳನ್ನೇ ಹೆಚ್ಚಾಗಿ ಹಾಡುವವರು, ಆಕೆ ಮೆರೆದ ಪವಾಡಗಳನ್ನು ಹಾಗೂ ಮಹಿಮೆಗಳನ್ನು ಭಕ್ತ ಸಮೂಹಕ್ಕೆ ತಿಳಿಸುತ್ತಾ ಅವರಲ್ಲಿ ಒಂದು ರೀತಿಯ ಭಯ, ಭಕ್ತಿ, ಧರ್ಮಶ್ರದ್ಧೆಗಳನ್ನು ಮೂಡಿಸುವುದೇ ಆಸಾದಿಗಳ ಕಾಯಕವಾಗಿದೆ.

ಇಂತಹದ್ದೊಂದು ಸಾಂಸ್ಕೃತಿಕ ಹಿರಿಮೆಯನ್ನು, ಐತಿಹಾಸಿಕ ಶ್ರೀಮಂತಿಕೆಯನ್ನು, ಅವೈದಿಕ ಪರಂಪರೆಯ ಬೇರುಗಳನ್ನು ಹೊಂದಿರುವ ಸಮುದಾಯವೊಂದು ಅತೀವ ಬಡತನ, ಸರಕಾರಗಳ ನಿರ್ಲಕ್ಷ್ಯತನ, ಅಸಡ್ಡೆಗಳಿಗೆ ಗುರಿಯಾಗಿ ನಶಿಸಿಹೋಗುತ್ತಿದೆ! ಯಾವುದೇ ರಾಜಕೀಯ ಪ್ರಭಾವ, ಸಂಘಟನೆ, ಅರಿವು ಇಲ್ಲದಂತಹ ಸಮುದಾಯಗಳನ್ನು ಕಾಪಾಡುವವರಾರು?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News