×
Ad

ಒಳಮೀಸಲಾತಿಯ ಒಳಸುಳಿಗಳು

ಮೈಸೂರು ವಿಶ್ವವಿದ್ಯಾನಿಲಯ 2007ರಲ್ಲಿ ಪ್ರಕಟಿಸಿದ ಡಾ.ಭಾಮಿನಿ ರಾಘವಯ್ಯ ಇವರ ಕೊಡಗಿನ ಬುಡಕಟ್ಟುಗಳು ಸಂಶೋಧನೆ ಲೇಖನದಲ್ಲಿ ಬಲಗೈಗಳ ಬಗ್ಗೆ ಇಲ್ಲ. ಡಾ.ರಾಮಕೃಷ್ಣ ಇವರ ಸಂಶೋಧನಾ ಲೇಖನ ‘ಕರ್ನಾಟಕದ ಬುಡಕಟ್ಟುಗಳು’ ಇದರಲ್ಲಿಯೂ ಬಲಗೈ ಪ್ರಸ್ತಾಪವಿಲ್ಲ. ಬಲಗೈ ಎಂದು ಬರೆಸಿದವರ ಕೊಡಗಿನ ಜನಸಂಖ್ಯೆ ಸುಮಾರು 1,000-2,000 ಇದ್ದಿರಬಹುದು. ಈ ಒಂದು ಸಣ್ಣ ಪ್ರಾಂತದಲ್ಲಿ ಜನಗಣತಿ ಬರೆಸುವಾಗ ಜಾತಿ ಹೆಸರು ಹೇಳಲು ಹಿಂಜರಿದು, ಬಲಗೈ ಗುಂಪಿಗೆ ಸೇರಿದವರೆಂದು ಬರೆಸಿರಬಹುದು. ಅದನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿ ಹೇಳುವುದೆಷ್ಟು ಸರಿ?

Update: 2025-05-06 10:52 IST

ಭಾಗ- 1

ಕರ್ನಾಟಕದಲ್ಲಿ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನೇಮಕವಾಗಿದ್ದ ನ್ಯಾ. ಸದಾಶಿವಯ್ಯ ಆಯೋಗ ಸುಮಾರು 6-7 ವರ್ಷ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯ ಮೇಲೆ ಆಗಿನ ಸರಕಾರಗಳು ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ವರದಿ ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೂ ಒಳಪಡಿಸಲಿಲ್ಲ. ಸುಪ್ರೀಂ ಕೋರ್ಟ್ ಒಂದು ತೀರ್ಪಿನಲ್ಲಿ ಉಲ್ಲೇಖವಾದ ಅಭಿಪ್ರಾಯದಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ ಮಾಡಿದ್ದ ಒಂದು ಪ್ರಬಲ ಗುಂಪು ನ್ಯಾ.ನಾಗಮೋಹನ್‌ದಾಸ್ ಆಯೋಗದ ನೇಮಕಕ್ಕೆ ಕಾರಣವಾಯಿತು. ಈ ಆಯೋಗದ ಮಧ್ಯಂತರ ವರದಿ ಸರಕಾರಕ್ಕೆ ತಲುಪಿ ಎಂಪೆಂಕಲ್ ಡೇಟಾ ಇಲ್ಲದೆ ಉಪವರ್ಗೀಕರಣ ಅಸಾಧ್ಯವೆಂದ ಮೇರೆಗೆ ಸರಕಾರವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಮಾಹಿತಿ ಕ್ರೋಡೀಕರಿಸಿ ಕೊಡುವುದಾಗಿ ಹೇಳಿದೆ. ನುಡಿದಂತೆ ನಡೆಯಲು ಸಮೀಕ್ಷೆ ದಿನಾಂಕಗಳ ಆರಂಭ ಆಗಿದೆ. ವರ್ಗೀಕರಣದ ಪರವಾಗಿ ಹೋರಾಡುತ್ತಿರುವ ಗುಂಪು ಸಮಾಲೋಚನೆ ಸಭೆ, ಜಾಗೃತಿ ಸಭೆ, ಸ್ವಯಂ ಸೇವಕರ ತಂಡ ನೇಮಿಸಿ ತಜ್ಞರ ಅಭಿಪ್ರಾಯ ಪಡೆದು ಸಮೀಕ್ಷೆಗಾಗಿ ಬರುವ ಸರಕಾರದ ಅಧಿಕಾರಿಗಳಿಗೆ ಯಾವ ರೀತಿ ಮಾಹಿತಿ ನೀಡಬೇಕು? ಹೇಗೆ ಭರ್ತಿ ಮಾಡಬೇಕು? ಸಮೀಕ್ಷೆ ಹೇಗೆ ಖಚಿತಪಡಿಸಿಕೊಳ್ಳಬೇಕೆಂಬ ಮಾಹಿತಿಯನ್ನು ಮನೆ ಮನೆಗೆ ತಲುಪಿಸಬೇಕೆಂದು ಕರೆಕೊಟ್ಟಿದೆ. ಈ ವಿಚಾರದಲ್ಲಿ ಮಾಜಿ ಸಮಾಜ ಕಲ್ಯಾಣ ಸಚಿವರ ಶ್ರದ್ಧೆ, ಅರ್ಪಣಾಮನೋಭಾವ, ಸ್ವಯಂ ತೊಡಗಿಸಿಕೊಳ್ಳುವಿಕೆಯನ್ನು ಎಂತಹವರೂ ಮೆಚ್ಚಲೇಬೇಕು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಚ್ಚರವಾಗಿರಬೇಕು. ಈ 10 ದಿನಗಳು ಯಾವ ಸಭೆ, ಸಮಾರಂಭ, ಮದುವೆ ಜಯಂತಿ ಆಚರಣೆ ಎಲ್ಲವನ್ನು ಮುಂದೂಡಿ ಇದರ ಯಶಸ್ಸಿಗೆ ಕಾರಣೀಕರ್ತರಾಗಬೇಕೆಂದು ಪಣ ತೊಟ್ಟಿದ್ದಾರೆ. ಉಪವರ್ಗೀಕರಣ ವಿರೋಧಿ ಗುಂಪು ಸದ್ಯಕ್ಕೆ ಸುಮ್ಮನಿದೆ. ಇನ್ನು ಈ 3 ಗುಂಪುಗಳ ಹೊರತಾದ ಇನ್ನೊಂದು ಗುಂಪಿನ ಗೋಳು ಹೇಳತೀರದು. ಇವರು ಅಸಂಘಟಿತರು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್‌ರವರು ಈ ಸಮುದಾಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

ಒಳಮೀಸಲಾತಿಗೆ ಪರವೂ ಅಲ್ಲದ ವಿರೋಧವೂ ಅಲ್ಲದ ಗುಂಪು ಕರ್ನಾಟಕದಲ್ಲಿ ‘ನಾವೇ ಅಂಕಿಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ ಯಾರ ಮೀಸಲಾತಿ ಬುಟ್ಟಿಗೂ ಕೈ ಹಾಕಿಲ್ಲ, ಸಂವಿಧಾನದ ನಿರ್ದೇಶನದಂತೆ ಎಲ್ಲರಿಗೂ ಸಿಗುವಂತೆ ನಮಗೂ ಪಾಲು ಸಿಗುತ್ತದೆ’ ಎಂದು ಅಲ್ಲಲ್ಲಿ ಸಭೆ, ಗುಂಪು ಚರ್ಚೆಗಳಲ್ಲಿ ಹೇಳಿಕೊಳ್ಳುತ್ತಿದೆ. ರಾಜಕಾರಣಿಗಳಾಗಲಿ, ವಿಧಾನಸಭೆ ಸದಸ್ಯರಾಗಲಿ, ರಾಜ್ಯ ಮಟ್ಟದ ನಾಯಕರಾಗಲಿ ಇವರಿಗೆ ಬೆಂಬಲ ಕೊಟ್ಟಿಲ್ಲ. ಕಳೆದ 10 ವರ್ಷಗಳಲ್ಲಿ ಒಂದು ಸಭೆ ನಡೆಸಿ ಚರ್ಚಿಸಿದ ಉದಾಹರಣೆಗಳಿಲ್ಲ. 2015ರಲ್ಲಿ ನಡೆದ ಸಾಮಾಜಿಕ ಆರ್ಥಿಕ ಗಣತಿಗೆ ನೂರಾರು ಸಂಘ ಸಂಸ್ಥೆಗಳು 2-3 ತಿಂಗಳ ಮುಂಚೆಯೇ ತಮ್ಮ ಸಮುದಾಯದ ಜನರು ಸಮೀಕ್ಷೆಗೆ ಒಳಪಡಬೇಕೆಂದು ಪತ್ರಿಕೆಗಳಲ್ಲಿ ಸಂಘಗಳ ಪರವಾಗಿ ಮಾಹಿತಿ ನೀಡುತ್ತಿದ್ದರು. ಒಳಮೀಸಲಾತಿಗೆ ವಿರೋಧ ಅಲ್ಲದ ಪರವೂ ಅಲ್ಲದ ಈ ಗುಂಪಿನ ಪರವಾಗಿ ಆಗಿನ ಕೆಪಿಎಸ್‌ಸಿ ಸದಸ್ಯರೊಬ್ಬರು ಸಮೀಕ್ಷೆಗೆ 5-6 ದಿನ ಬಾಕಿ ಇದ್ದ ಅವಧಿಯಲ್ಲಿ ‘‘ನಮ್ಮ ಸಮುದಾಯದಲ್ಲಿ 40 ಉಪಪಂಗಡಗಳಿವೆ ಬಲಗೈ ಬರೆಸಿ’’ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ಅದೇ ವ್ಯಕ್ತಿ 2024ರ ಡಿಸೆಂಬರ್‌ನಲ್ಲಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ‘‘ನಮ್ಮವರು ಬಲಗುಂಪು ನಮ್ಮಲ್ಲಿ ಇಷ್ಟು ಜಾತಿಗಳಿವೆ’’ ಎಂದು ಪ್ರತಿಪಾದಿಸಿದ್ದರು. ದಿನಾಂಕ: 24.04.2025ರ ಪತ್ರಿಕೆಯೊಂದರ ವರದಿಯಂತೆ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಒಂದು ಸಭೆ ನಡೆಸಿ, ‘‘ಬಲಗೈಗೆ ಸಂಬಂಧಿಸಿದ 37 ಉಪಜಾತಿಗಳು ನಮ್ಮ ಗುಂಪಿನಲ್ಲಿವೆ. ಉಪಜಾತಿ ಎದುರು ಕಡ್ಡಾಯವಾಗಿ ಬಲಗೈ, ಛಲವಾದಿ ಅಥವಾ ಹೊಲೆಯ ಈ 3ರಲ್ಲಿ ಯಾವುದಾದರೂ ಒಂದನ್ನು ನಮೂದಿಸಬೇಕು’’ ಎಂದು ಕರೆಕೊಟ್ಟಿದ್ದಾರೆ. ಕನಕಪುರ ದಲಿತ ಮುಖಂಡರೊಬ್ಬರು ‘‘ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳಲ್ಲಿ ಬಲಗೈನವರು ಹೆಚ್ಚಾಗಿದ್ದಾರೆ. ಸಮೀಕ್ಷೆಯಲ್ಲಿ ನಮ್ಮ ಸಂಖ್ಯೆ ನಿಖರವಾಗಿ ಗೊತ್ತಾಗಬೇಕಾದರೆ, ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು’’ ಎಂದು ಕರೆ ಕೊಟ್ಟಿದ್ದಾರೆ.

ದಿನಾಂಕ: 28.04.2025ರಂದು ಕರ್ನಾಟಕ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿ, ಬಲಗೈ ಸಮುದಾಯಕ್ಕೆ ಸೇರಿದ 37 ಉಪಜಾತಿಗಳು ಛಲವಾದಿ ಎಂದು ನಮೂದಿಸಬೇಕೆಂದು ಕರೆ ಕೊಟ್ಟಿದ್ದಾರೆ. ಉಪಜಾತಿ ನಮೂದಿಸದಿದ್ದರೆ, ಸರಕಾರದಿಂದ ಯಾವ ಸೌಲಭ್ಯವೂ ಸಿಗದು ಎಂದು ಕಾನೂನು ಪಂಡಿತರಂತೆ ಹೇಳಿದ್ದಾರೆ. ಈ ಸಮುದಾಯದ ನಿವೃತ್ತ ನ್ಯಾಯಾಧೀಶರು, ನ್ಯಾಯವಾದಿಗಳು, ಪ್ರೊಫೆಸರ್‌ಗಳು, ಸರಕಾರದ ಹಿರಿಯ ಅಧಿಕಾರಿಗಳು, ನಿವೃತ್ತರು, ಆರ್ಥಿಕ ತಜ್ಞರು, ಪ್ರಜ್ಞಾವಂತ ಸಾಹಿತಿಗಳು, ಕಲಾವಿದರು, ಕವಿಗಳು, ಹೋರಾಟಗಾರರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಭವಿಷ್ಯದಲ್ಲಿ ಈ ಸಮುದಾಯ, 1950-2025ರಲ್ಲಿ ಬದುಕಿದ್ದವರ ಮೇಲೆ ಕಳಂಕ ಹೊರಿಸಬಹುದು. ಕೆಲವರು ಮಾತ್ರ ಸೌಲಭ್ಯ ಅನುಭವಿಸಿ ಮುಂದಿನ ಜನಾಂಗ ಅಥವಾ ಮೀಸಲಾತಿ ಇರುವ ತನಕ ಅವರಿಗೆ ಮಾರ್ಗದರ್ಶನ ಮಾಡದಿರುವುದು ಸಾಮಾಜಿಕ ಅಪರಾಧ. ತಮ್ಮಲ್ಲಿ 40 ಜಾತಿಗಳಿವೆ, 37 ಜಾತಿಗಳಿವೆ ಎಂದು ಹೇಳುತ್ತ, ವಿಷಯದ ಆಳ-ಅಗಲ ತಿಳಿಯದೆ ಪ್ರಾಜ್ಞರೊಡನೆ ಚರ್ಚಿಸದೆ ಹೇಳಿಕೆ ನೀಡುತ್ತಿರುವುದು ಒಂದು ದೊಡ್ಡ ಸಮುದಾಯವನ್ನು ದಾರಿ ತಪ್ಪಿಸಿದಂತಾಗುತ್ತದೆ.

ಯಾವುದು ಬಲಗೈ?

ದಕ್ಷಿಣ ಭಾರತದ ಇತಿಹಾಸದಲ್ಲಿ ಕಂಡುಬರುವಂತೆ ಎಡಗೈ ಬಲಗೈ ಗುಂಪುಗಳು ಹಿಂದುಳಿದ ಜಾತಿಗಳ ಒಂದೊಂದು ತಂಡವೇ ಹೊರತು ಈ ಎರಡು ಜಾತಿಗಳ ಹೆಸರಲ್ಲ. ಎರಡೂ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಹೊಲೆಯ/ಪರೆಯ-ಮಾದಿಗ/ಚಕ್ಕಲಿಯನ್. ಚಪ್ಪಲಿ ಬಿಡುವ ಜಾಗದಲ್ಲಿ ಇವರನ್ನು ಆ ತಂಡದವರು ಇಟ್ಟಿದ್ದರು. ಇವರಿಂದ ಏನೆಲ್ಲ ಅನುಕೂಲ ಪಡೆದುಕೊಳ್ಳಬೇಕು ಅದನ್ನೆಲ್ಲ ಪಡೆದುಕೊಂಡಿದ್ದಾರೆ. ತಮಿಳು ದಾಖಲೆಗಳಲ್ಲಿ ವಲಂಗೈ ವೇಲೆಕಾರ ಪಡೆಗಳ್, ನಿಟ್ಟಿ ವಿನೋದ ತೆರಿಂದ ವಲಂಗೈ ವೇಲೆಕಾರ ಪಡೆಗಳ್ ಎಂದು ಇದೆ.

ಕ್ರಿ.ಶ.1400-1500ರ ಅವಧಿಯಲ್ಲಿ ರಾಜ್ಯದ ಆಡಳಿತ, ಭೂಮಾಲಕರ ವಿರುದ್ಧ ಬಂಡೆದ್ದವರು ಬಲಗೈ ಗುಂಪಿನವರು. ಚೋಳರ ಕಾಲದಲ್ಲಿ ಇವರು ಬಲಗೈ ತಂಡ ಕಟ್ಟಿದ್ದರು. ನಂತರ ಕುಶಲಕರ್ಮಿಗಳು ತಮಗೂ ಸ್ಥಾನಮಾನ ಬೇಕೆಂದು ಎಡಗೈ ಗುಂಪೆಂದು ಘೋಷಿಸಿಕೊಂಡರು. ಪ್ರಾರಂಭದಲ್ಲಿ ಎರಡೂ ಕಡೆ 98 ಜಾತಿಗಳಿದ್ದವು. ಚೋಳರು ತಮ್ಮ ಸ್ವಾರ್ಥ ಸಾಧನೆಗೆ ಹುಟ್ಟು ಹಾಕಿದ ಈ ಗುಂಪುಗಳವರು ಯಾವ ಉದ್ದೇಶಕ್ಕೆ ಬಂಡೆದ್ದರೋ ಅದನ್ನು ಮರೆತು ತಮ್ಮತಮ್ಮಲ್ಲೇ ಕಚ್ಚಾಡಿ ಅವರ ಅವಸಾನ ಅವರೇ ಮಾಡಿಕೊಂಡರು. ಇವರ ಕಿತ್ತಾಟದಿಂದ ಪಟ್ಟಭದ್ರ ಹಿತಾಸಕ್ತಿಗಳು ಮೇಲುಗೈ ಪಡೆದು ಮತ್ತಷ್ಟು ಶೋಷಣೆ ಮಾಡಿದರು. ಭಾರತ ದೇಶದ ಯಾವ ಭಾಗದಲ್ಲಿಯೂ ಕಾಣದ ಈ ವಿಚಿತ್ರ ವ್ಯವಸ್ಥೆ ತಮಿಳುನಾಡಿನಲ್ಲಿತ್ತು. ಮೈಸೂರು ಸಂಸ್ಥಾನದ ದಕ್ಷಿಣ ಭಾಗದಲ್ಲಿಯೂ ಇತ್ತು. ಡಾ.ಫ್ರಾನ್ಸಿಸ್ ಬೂಕನನ್ ಮತ್ತು ಹಯವದನರಾವ್ ಪ್ರಕಾರ ಬಲಗೈನಲ್ಲಿ 18 ಜಾತಿಗಳಿವೆ. ಇವರ ಮುಖ್ಯಸ್ಥರು ಬಣಜಿಗರು. ಕ್ರಿ.ಶ.1800ರ ಸುಮಾರಿಗೆ ಪ್ರತಿಯೊಂದು ಜಾತಿಯೂ ತನ್ನ ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಈ ಎರಡೂ ಗುಂಪಿನ ಎರಡೂ ಕೈಗಳು ಮಾಯವಾದವು. ಈ ಗುಂಪುಗಳನ್ನು ಸೃಷ್ಟಿಸಿದ ಅವರ ವಾರಸುದಾರರಾಗಿರುವ ಹೀಗಿರುವ ಜಾತಿಯ ಜನರಿಗೆ ಬಲಗೈ ಎಡಗೈ ಏನೆಂಬುದೇ ಗೊತ್ತಿಲ್ಲ. ಎಡಗೈ ಬಲಗೈ ಗುಂಪುಗಳ ಘರ್ಷಣೆಗಳನ್ನು ಇತಿಹಾಸಕಾರರಾದ ಜಪಾನಿನ ನೋಬೋರು ಕರಸಿಮ ತಮಿಳುನಾಡಿನ ಡಾ.ಶ್ರೀನಿವಾಸಚಾರಿ, ಅರ್ಜುನ್ ಅಪ್ಪದೊರೆ ತಮ್ಮ ಸಂಶೋಧನಾ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಹೀಗಿರುವಾಗ ಕೊನೆಯ ಎರಡು ಜಾತಿಗಳು ನಾನು ಬಲಗೈ, ನಾನು ಎಡಗೈ ಎಂದು ಕರೆದುಕೊಳ್ಳುತ್ತಿರುವುದು ಇತಿಹಾಸಕ್ಕೆ ಮಾಡುವ ದ್ರೋಹ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ರ ರಥವನ್ನು ಹಿಂದಕ್ಕೆ ಎಳೆಯುವ ದುರ್ಬುದ್ಧಿ, ತನ್ನನ್ನು ತಾನೇ ಅವಮಾನಿಸಿಕೊಳ್ಳುವ ಅಜ್ಞಾನದ ಪರಮಾವಧಿ. ಬಲಗೈ ಎಂದು ಬರೆಸಿ ಎಂದು ಸೂಚನೆ ಕೊಡುವ ನಿಮಗೆ ವಿನಂತಿಸುವುದೇನೆಂದರೆ, 1925 ರಿಂದ ಇಲ್ಲಿಯವರೆಗೂ ಬಲಗೈ ಸಮುದಾಯವೆಂದು ದಾಖಲಾತಿಯಲ್ಲಿ ತೋರಿಸಿ, ಸೌಲಭ್ಯವನ್ನು ಪಡೆದಿರುವವರ ಸಂಖ್ಯೆ ನಿಮ್ಮಲ್ಲಿದೆಯೇ? 1925ರ ನಂತರ ಮೈಸೂರು ಸಂಸ್ಥಾನದ ಶಾಲೆಗಳ ದಾಖಲಾತಿಯಲ್ಲಿ ಹೊಲೆಯ ಎಂದು ಬರೆಸಿರುವುದನ್ನು ತೋರಿಸುವಿರಾ? ಅದು ಸ್ವೀಕಾರವೇ? ಅಥವಾ 1952 ರಿಂದ 2024ರವರೆಗೆ ಬಲಗೈ ಎಂದು ನಮೂದಿಸಿ ಸರಕಾರಿ ನೌಕರಿ ಪಡೆದಿರುವವರ ವಿವರ ನಿಮ್ಮಲ್ಲಿದೆಯೇ? ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗಿ ಪ್ರೀವಿ ಕೌನ್ಸಿಲ್ ಶಿಫಾರಸು ಪಡೆದು, ಇಂಗ್ಲೆಂಡ್ ರಾಜನ ಬಂಕಿಂಗ್ ಹ್ಯಾಂ ಅರಮನೆಯ ಮುಖ್ಯ ಕಚೇರಿಯಿಂದ 30.04.1936 ಆದೇಶ ಹೊರಡಿಸಿ 1935ರ ಭಾರತ ಸರಕಾರದ ಕಾಯ್ದೆಯಡಿ ಪ್ರಕಟವಾದ ಗೆಜೆಟ್‌ನಲ್ಲಿ 6.6.1936 ರಂದು ಪ್ರಕಟಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮದ್ರಾಸ್ ಪ್ರಾಂತವೇ ಹೆಚ್ಚು ಪರಿಶಿಷ್ಟ ಜಾತಿಗಳನ್ನು ಹೊಂದಿ (86) ಬೊಂಬಾಯಿ, ಬಂಗಾಳ ಪ್ರಾಂತಗಳಲ್ಲೇ ಮೊದಲ ಸ್ಥಾನದಲ್ಲಿತ್ತು. ಈ ಪಟ್ಟಿಯಲ್ಲಿ ಎಡಗೈ ಬಲಗೈ ಕಾಣಿಸುತ್ತಿಲ್ಲ. ಆದೇಶಕ್ಕೆ ಭಾರತ ಸರಕಾರದ ಜಂಟಿ ಕಾರ್ಯದರ್ಶಿ ರೋಹ್ಡರ್ ಸಹಿ ಮಾಡಿದ್ದಾರೆ.

ದಿನಾಂಕ: 11.08.1950ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 92 ಜಾತಿಗಳನ್ನು ಹೊಂದಿ ಒಡಿಶಾ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಎರಡನೇ ಸ್ಥಾನದಲ್ಲಿ ಮದ್ರಾಸ್ ಪ್ರಾಂತವಿದ್ದು, 77 ಜಾತಿಗಳನ್ನು ಹೊಂದಿತ್ತು. ಆ ಪಟ್ಟಿಯಲ್ಲಿ ಎಡಗೈ ಬಲಗೈ ಕಾಣಿಸುತ್ತಿಲ್ಲ. ಕೊನೆಯ ಸ್ಥಾನದಲ್ಲಿ ಸೌರಾಷ್ಟ್ರವಿದ್ದು, 15 ಜಾತಿಗಳನ್ನು ಹೊಂದಿತ್ತು. ಆಶ್ಚರ್ಯಕರ ಮಾಹಿತಿ ಎಂದರೆ 16 ರಾಜ್ಯಗಳ ಪೈಕಿ ಒಂದೇ ಸಂಖ್ಯೆ (ಸಿಂಗಲ್ ಡಿಜಿಟ್) ಇರುವ ರಾಜ್ಯ ಮೈಸೂರು ಸಂಸ್ಥಾನವು ಆದಿಕರ್ನಾಟಕ, ಆದಿದ್ರಾವಿಡ, ಬಂಜಾರ ಅಥವಾ ಲಂಬಾಣಿ, ಬೋವಿ, ಕೊರಮ, ಕೊರಚ ಆರು ಜಾತಿಗಳನ್ನು ಮಾತ್ರ ಹೊಂದಿತ್ತು. ಈ ಆದೇಶಕ್ಕೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಭಾರತ ಸರಕಾರದ ಕಾರ್ಯದರ್ಶಿ ಕೆ.ವಿ.ಕೆ. ಸುಂದರಂ ಸಹಿ ಮಾಡಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಸಚಿವರಾಗಿದ್ದ ಕಾನೂನು ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದೆ. ಇಲ್ಲಿಯೂ ಕೂಡ ಎಡಗೈ ಬಲಗೈ ಇಲ್ಲ. ದಿನಾಂಕ: 20-09-1951ರಲ್ಲಿ ರಾಷ್ಟ್ರಪತಿಗಳು ಹೊರಡಿಸಿದ ಆದೇಶದಲ್ಲಿ ಸಿ ಗುಂಪಿನ 10 ರಾಜ್ಯಗಳಲ್ಲಿನ ಪರಿಶಿಷ್ಟ ಜಾತಿಗಳ ವಿವರ ಇದೆ. 41 ಪರಿಶಿಷ್ಟ ಜಾತಿಗಳನ್ನು ಹೊಂದಿ, ದಿಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕಡಿಮೆ ಸ್ಥಾನದಲ್ಲಿರುವ ಬಿಲ್ಹಾಸ್‌ಪುರ 9 ಜಾತಿಗಳನ್ನು ಹೊಂದಿದೆ. ಆಶ್ಚರ್ಯವೆಂದರೆ, ಕೂರ್ಗ್ 11 ಪರಿಶಿಷ್ಟ ಜಾತಿಗಳನ್ನು ಹೊಂದಿದೆ. 11ರ ಪೈಕಿ 4ನೇ ಸಂಖ್ಯೆ ಬಲಗೈ ಎಂದು ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅಧಿಕಾರಾವಧಿ ಮುಗಿದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಪಟ್ಟಿಯ ಪರಿಷ್ಕರಣೆ ಕಾರ್ಯ ಗೃಹ ಇಲಾಖೆಯ ವ್ಯಾಪ್ತಿಗೆ ಬಂದಿರಬಹುದು. ಗೆಜೆಟ್ ಆಫ್ ಇಂಡಿಯಾ ಪ್ರಕಟಣೆ ದಿನಾಂಕ: 29-10-1956ರಲ್ಲಿ ಹೆಚ್ಚಿನ ರಾಜ್ಯಗಳ ಪರಿಶಿಷ್ಟ ಜಾತಿ ವರ್ಗದ ಪಟ್ಟಿ ಜಿಲ್ಲಾವಾರು ಪರಿಷ್ಕರಣೆಯಾಗಿದೆ. ಇಲ್ಲಿಯೂ ಕೂಡ ಕರ್ನಾಟಕ ಪೂರ್ತಿ ಅನ್ವಯವಾಗುವ ಪಟ್ಟಿಯಲ್ಲಿ ಎಡಗೈ ಬಲಗೈ ಇಲ್ಲ. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ 11 ಪರಿಶಿಷ್ಟ ಜಾತಿಗಳಿದ್ದು, 4ನೇ ಸಂಖ್ಯೆಯಲ್ಲಿ ಬಲಗೈ ಇದೆ. ಹಾಗಾದರೆ 1951-56ರಲ್ಲಿ ಕೊಡಗಿನ ಜನಸಂಖ್ಯೆ ಏನು? ಬಲಗೈನವರ ಮಾಹಿತಿ ಏನು? ಇದು ಯಾರಲ್ಲಿದೆ? ಮೈಸೂರು ವಿಶ್ವವಿದ್ಯಾನಿಲಯ 2007ರಲ್ಲಿ ಪ್ರಕಟಿಸಿದ ಡಾ.ಭಾಮಿನಿ ರಾಘವಯ್ಯ ಇವರ ಕೊಡಗಿನ ಬುಡಕಟ್ಟುಗಳು ಸಂಶೋಧನೆ ಲೇಖನದಲ್ಲಿ ಬಲಗೈಗಳ ಬಗ್ಗೆ ಇಲ್ಲ. ಡಾ.ರಾಮಕೃಷ್ಣ ಇವರ ಸಂಶೋಧನಾ ಲೇಖನ ‘ಕರ್ನಾಟಕದ ಬುಡಕಟ್ಟುಗಳು’ ಇದರಲ್ಲಿಯೂ ಬಲಗೈ ಪ್ರಸ್ತಾಪವಿಲ್ಲ. ಬಲಗೈ ಎಂದು ಬರೆಸಿದವರ ಕೊಡಗಿನ ಜನಸಂಖ್ಯೆ ಸುಮಾರು 1,000-2,000 ಇದ್ದಿರಬಹುದು. ಈ ಒಂದು ಸಣ್ಣ ಪ್ರಾಂತದಲ್ಲಿ ಜನಗಣತಿ ಬರೆಸುವಾಗ ಜಾತಿ ಹೆಸರು ಹೇಳಲು ಹಿಂಜರಿದು, ಬಲಗೈ ಗುಂಪಿಗೆ ಸೇರಿದವರೆಂದು ಬರೆಸಿರಬಹುದು. ಅದನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿ ಹೇಳುವುದೆಷ್ಟು ಸರಿ?

ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಜಾತಿಗಳಲ್ಲವೆ?

ಪರೆಯನ್, ಪಲ್ಲನ್, ವಳ್ಳುವನ್, ಚಕ್ಕಲಿಯನ್, ಪೊರೆ ಕಳಚಿ 103 ವರ್ಷಗಳಾಗಿವೆ. ಪುನಃ ಹಿಂದಕ್ಕೆ ಎಳೆಯುವ ಕ್ರಮವೇಕೆ? ಹರಪ್ಪ, ಮೊಹೆಂಜದಾರೋ ಲಿಪಿಯ ಒಗಟನ್ನು ಬಿಡಿಸಿದರೆ, ದ್ರಾವಿಡರ ಚರಿತ್ರೆಯ ಆರಂಭ ಅಲ್ಲಿಂದನೇ ಆಗಿದೆ ಎನ್ನಬಹುದು. ಸದ್ಯಕ್ಕೆ ದ್ರಾವಿಡರ ಮೂಲ ಸ್ಥಳ ತಮಿಳುನಾಡು, ಕರ್ನಾಟಕ, ಆಂಧ್ರ, ಕೇರಳ. ದ್ರಾವಿಡ ಲಿಪಿಗೂ ಮೊದಲೇ ಆದಿದ್ರಾವಿಡ ಭಾಷೆ ಇತ್ತೆಂದು ಇತಿಹಾಸ ತಜ್ಞ ಡಾ. ಷಡಕ್ಷರಿ ಷೆಟ್ಟರ್ ಪ್ರತಿಪಾದಿಸಿದ್ದಾರೆ. ದಕ್ಷಿಣ ಭಾರತದ ಮೂಲ ನಿವಾಸಿಗಳು ದ್ರಾವಿಡರೆಂದು ಎಲ್ಲಾ ಸಂಶೋಧನೆಗಳು ಹೇಳುತ್ತಿವೆ. ಮೈಸೂರು ನವಾಬ ಹೈದರಲಿ ಖಾನ್ ಅಸಾಮಾನ್ಯ ಯುದ್ಧ ತಂತ್ರಗಾರ. ತನ್ನ ಜೀವಿತಾವಧಿಯ 30 ವರ್ಷಗಳನ್ನು ಯುದ್ಧಗಳಲ್ಲೇ ಕಳೆದರು. ಆರೋಗ್ಯ ಕೆಟ್ಟಾಗಲೂ ಯುದ್ಧ ಬಿಟ್ಟವರಲ್ಲ. ಇಂಗ್ಲಿಷರೊಡನೆ ಮೊದಲ ಯುದ್ಧದಲ್ಲಿ ಜಯಶಾಲಿಯಾದಾಗ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ದಲಿತ ಸೈನಿಕರಿಗೆ (ಚಕ್ಕಲಿಯನ್ ಸಹಿತ) ಉಳುಮೆಗೆ ಭೂಮಿ ಮಂಜೂರು ಮಾಡಿ, ಅವರು ಕೃಷಿಕರು, ಮೂಲ ಜಾತಿ ಹೆಸರನ್ನು ಕರೆಯಬಾರದು ಎಂದು ಸೂಚಿಸಿದ್ದ ಮಾಹಿತಿ ತಮಿಳುನಾಡಿನ ಇತಿಹಾಸದಲ್ಲಿ ದಾಖಲಾಗಿದೆ.

1881 ಜನಗಣತಿಯಲ್ಲಿ ನಾವು ಜಾತಿ ರಹಿತ ದ್ರಾವಿಡರು ಎಂದು ಬರೆಯಿಸಿ ಎಂದು ಕರೆಕೊಟ್ಟ ಮದ್ರಾಸ್ ಪ್ರಾಂತದ ಪಾರಂಪರಿಕ ವೈದ್ಯ, ಸಮಾಜ ಸುಧಾರಕ, ಆ ಕಾಲದ ಪತ್ರಿಕೋದ್ಯಮಿ, ಬರಹಗಾರ ಜ್ಯೋತಿದಾಸ್ ಪಂಡಿತರು (ಕಾತವರಾಯನ್) ದಡ್ಡರೇ? ಇವರು ಉದಕಮಂಡಲದಲ್ಲಿ 1.12.1891 ಆದಿದ್ರಾವಿಡ ಮಹಾಜನ ಸಭೆ ಸಮ್ಮೇಳನ ಏರ್ಪಡಿಸಿದ್ದು ಸುಳ್ಳೇ? 1882ರಲ್ಲಿ ದ್ರಾವಿಡ ಸಂಘ ಸ್ಥಾಪಿಸಿ, ಮದ್ರಾಸಿನ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದ ದಲಿತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮದ್ರಾಸ್ ಪ್ರಾಂತ್ಯದ ಗವರ್ನರ್‌ಗೆ ಮನವಿ ಪತ್ರಗಳನ್ನು ಅರ್ಪಿಸಿ ಕೆಲಸ ಮಾಡಿಸಿಕೊಡುತ್ತಿದ್ದ ಫಾ.ಜಾನ್‌ರತ್ನಂ ಅವರೇನು ಅವಿವೇಕಿಯೇ? ಮಹಾತ್ಮಾ ಗಾಂಧಿಯವರಿಗಿಂತ 10 ವರ್ಷ ಹಿರಿಯರಾಗಿದ್ದು, ಗಾಂಧೀಜಿಗೂ ಮೊದಲೇ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗದಲ್ಲಿದ್ದು, ತನ್ನ ಜನರ ಕಷ್ಟಗಳಲ್ಲಿ ಭಾಗಿಯಾಗಲು ಉದ್ಯೋಗ ತೊರೆದು ಮದ್ರಾಸಿಗೆ ಬಂದು, ಆದಿದ್ರಾವಿಡ ಮಹಾಜನ ಸಂಘ ಸ್ಥಾಪಿಸಿ, ಅದರ ಮೂಲಕ ಸೇವಾ ಕಾರ್ಯಗಳನ್ನು ಮಾಡಿ, ಬ್ರಿಟಿಷರಿಂದ ರಾವ್‌ಬಹದ್ದೂರ್ ಎಂಬ ಗೌರವ ಪಡೆದ, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜೊತೆ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ, 1932ನೇ ಪೂನಾ ಒಪ್ಪಂದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜೊತೆ ಸಹಿ ಮಾಡಿದ್ದ ರೆಟ್ಟಿಮಲೈ ಶ್ರೀನಿವಾಸನ್ ಅಪ್ರಯೋಜಕರೇ? ಜಾತಿ ಹೆಸರಿನ ಸೂಚಕಗಳು, ಮೌಢ್ಯ ಆಚರಣೆಗಳ ವಿರುದ್ಧ ದೊಡ್ಡ ಚಳವಳಿಗಳನ್ನು ರೂಪಿಸಿ, ಹೆಸರಿನ ಮುಂದೆ ಜಾತಿ ಸೂಚಕ ನಿಲ್ಲಿಸುವಂತೆ ಮತ್ತು ದ್ರಾವಿಡ ಕಳಗಂ ಪಕ್ಷ ಸ್ಥಾಪಿಸಿದ ಮಹಾನ್ ಕ್ರಾಂತಿಕಾರಿ ಪೆರಿಯಾರ್ ರಾಮಸ್ವಾಮಿಯವರು ಅಡ್ನಾಡಿಯೇ? ಹೆಸರು ಹಿಡಿದು ಕರೆಯುವುದೇ ಅಪಮಾನಕರವಾಗಿದ್ದ ಸನ್ನಿವೇಶದಲ್ಲಿ 4 ವರ್ಣಗಳ ಹೊರತಾಗಿ 5ನೇ ವರ್ಣ ಪಂಚಮರೆಂದು ಕರೆಯಬಹುದೆಂಬ ಮದ್ರಾಸ್ ಪ್ರಾಂತದ ಡೈರೆಕ್ಟರ್ ಆಫ್ ಪಬ್ಲಿಕ್ ಇನ್ಸ್‌ಟ್ರಕ್ಷನ್ ಮದ್ರಾಸ್ ಗವರ್ನರ್‌ಗೆ ವರದಿ ನೀಡಿದ ಪರಿಣಾಮವಾಗಿ ಪರೆಯನ್, ಚಬ್ಬಡಿಯ, ಗೋದರಿ, ಪುಲಯ, ಹೊಲಯ, ಮಾದಿಗ, ಮಾಲ, ಪಲ್ಲನ್, ಪರಿಯನ್, ತೋಟಿ, ವಳ್ಳುವನ್ ಜಾತಿಗಳನ್ನು ಪಂಚಮರೆಂದು 1902ರಲ್ಲಿ ಪ್ರಕಟಣೆ ಹೊರಡಿಸಲಾಗಿದ್ದದು ಆದೇಶವಲ್ಲವೇ? ಬಾಬಾಸಾಹೇಬ್ ಅಂಬೇಡ್ಕರ್ ರವರ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ, ಮದ್ರಾಸ್ ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದು, ನಂತರ 1945ರಲ್ಲಿ ಮದ್ರಾಸ್ ನಗರದ ಮೇಯರ್ ಆಗಿದ್ದ ಶಿವರಾಜನ್ ಅಜ್ಞಾನಿಯೇ? 1913ರಲ್ಲಿ ಪದವೀಧರೆಯಾಗಿ ಬರ್ಮದಲ್ಲಿದ್ದು, ತನ್ನ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸಲೆಂದು ಮದ್ರಾಸ್‌ಗೆ ವಾಪಸಾಗಿ ಸಾಮಾಜಿಕ ಸೇವೆಯಲ್ಲಿ ನಿರತರಾಗಿ, ಸೈಮನ್ ಕಮಿಷನ್‌ಗೆ ಹಾಜರಾಗಿ ಹೇಳಿಕೆ ನೀಡುವಂತೆ ಮದರಾಸಿನ ಬೀದಿಬೀದಿ ಸುತ್ತಿ, ಜನರನ್ನು ಜಾಗೃತಿಗೊಳಿಸಿದ್ದ, ತಾಯಿ ಮೀನಾಂಬಾಳ್ (ಪ್ರೊ.ಶಿವರಾಜನ್‌ರವರ ಪತ್ನಿ) ಬುದ್ಧಿಗೇಡಿಯೇ? ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮುಂಬೈನಿಂದ ಮದ್ರಾಸಿಗೆ ಪ್ರಯಾಣ ಮಾಡುವಾಗ ಸಹಪ್ರಯಾಣಿಕರು ಎಲ್ಲಿಗೆ ಹೋಗುತ್ತಿರುವಿರಿ? ಎಂದು ಕೇಳಿದರೆ, ‘‘ನನ್ನ ತಂಗಿಯ ಮನೆಗೆ ಹೋಗುತ್ತಿದ್ದೇನೆ’’ ಎಂದು ಹೇಳುತ್ತಿದ್ದರಂತೆ. ‘‘ಮುಂಬೈಯ ನಿಮ್ಮ ತಂಗಿಯನ್ನು ಮದ್ರಾಸಿಗೆ ಮದುವೆ ಮಾಡಿಕೊಟ್ಟಿದ್ದೀರ?’’ ಎಂದು ಕೇಳಿದಾಗ ‘‘ಈ ದೇಶದ ಎಲ್ಲಾ ಭಾಗದಲ್ಲೂ ನನ್ನ ತಂಗಿಯರಿದ್ದಾರೆ’’ ಎಂದು ಹೇಳುತ್ತಿದ್ದರು ಎಂಬುದು ಆ ತಾಯಿಗೆ ಸಲ್ಲಿಸಿದ ಗೌರವಲ್ಲವೇ?

1881ರಿಂದಲೂ ಆರಂಭವಾದ ಸ್ವಾಭಿಮಾನಿ ಚಳವಳಿಯಲ್ಲಿ ‘‘ನಾವು ಶೂದ್ರರೂ ಅಲ್ಲ ಪಂಚಮರೂ ಅಲ್ಲ ನಮಗೆ ಯಾವ ವರ್ಣವೂ ಬೇಡ, ನಮಗಿರುವ ವರ್ಣವೇ ನಮಗೆ ಶ್ರೇಷ್ಠ, ನಾವು ದ್ರಾವಿಡರು. ಘನತೆಯಿಂದ ಬದುಕಲು ನಮ್ಮನ್ನು ನಾವು ಆದಿ ದ್ರಾವಿಡರೆಂದು ಕರೆದುಕೊಳ್ಳುತ್ತೇವೆ’’ ಎಂಬ ಒತ್ತಾಯ ಬಲವಾಗಿತ್ತು. ವೀರಯ್ಯನ್‌ರವರು ಉದಕಮಂಡಲ ಭಾಗದ ವಿಧಾನಸಭೆ ಸದಸ್ಯರಾಗಿದ್ದರು. ಕೊಳ್ಳೆಗಾಲ ಮತ್ತು ಸತ್ಯಗಾಲ ಭಾಗದಲ್ಲಿ ಸಹ ಸಭೆಗಳನ್ನು ನಡೆಸಿ, ಆದಿ ಕರ್ನಾಟಕ, ಆದಿ ದ್ರಾವಿಡ ಹೆಸರನ್ನು ಸೂಚಿಸಲು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು. ಅಧಿಕಾರದಲ್ಲಿದ್ದ ಜಸ್ಟಿಸ್ ಪಕ್ಷ ಮದ್ರಾಸ್ ವಿಧಾನಸಭೆಯಲ್ಲಿ 15.03.1922 ಗೊತ್ತುವಳಿಯನ್ನು ಪಾಸ್ ಮಾಡಿತು. ಆ ಗೊತ್ತುವಳಿಯಂತೆ- ಪರೆಯರ್, ಪಲ್ಲರ್, ವಳ್ಳುವನ್, ಮಾಲಾ, ಮಾದಿಗ, ಚಕ್ಕಲಿಯನ್ ಜಾತಿಗಳನ್ನು ಆದಿದ್ರಾವಿಡರೆಂದು ಕರೆಯಬೇಕೆಂದು ಆದೇಶ ಹೊರಡಿತ್ತು. ಇದಕ್ಕೆ ಶ್ರಮಿಸಿದವರು ದ್ರಾವಿಡರ ಹಿರಿಯ ನಾಯಕರಾದ ಎಂ.ಸಿ.ರಾಜ, ಆರ್.ವೀರಯ್ಯನ್. ಇದರಿಂದ ಪ್ರೇರಣೆ ಪಡೆದ ಮೈಸೂರು ಮಹಾರಾಜರು ಹೊಲೆಯ-ಮಾದಿಗ ಸಮುದಾಯವನ್ನು ಪಂಚಮರೆಂದು ಕರೆದು 1915ರಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಪಂಚಮ ಬೋರ್ಡಿಂಗ್ ಹೋಂ ವಸತಿಸಹಿತ ನಿಲಯ ಸ್ಥಾಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಕೆ. ನಾಗರಾಜಮೂರ್ತಿ

contributor

Similar News