ಒಳಮೀಸಲಾತಿಯ ಒಳಸುಳಿಗಳು
ಭಾಗ- 2
1916ರಲ್ಲಿ ಪಂಚಮ ಸಮ್ಮೇಳನ ನಡೆಯಿತು. 1920ರಲ್ಲಿ ಪಂಚಮ ಸಮ್ಮೇಳನಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ಕರೆತರಲು ಪ್ರಯತ್ನಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಸಿ.ಆರ್.ರೆಡ್ಡಿಯವರ ಪ್ರಯತ್ನಕ್ಕೆ ಸೋಲಾಗಿತ್ತು. 30.3.1920ರಂದು ಪಂಚಮ ಸಮ್ಮೇಳನ ನಡೆಯಿತು. 1922ರಲ್ಲಿ ಬೆಂಗಳೂರಿನಲ್ಲಿ ಪಂಚಮ ಬೋರ್ಡಿಂಗ್ ಹೋಂ ಆರಂಭವಾಯಿತು. 1923ರಲ್ಲಿ ಪಂಚಮ ಸಮ್ಮೇಳನ, 1924ರಲ್ಲಿ ಪಂಚಮ ಸಮ್ಮೇಳನ, 1922ರ ಮದ್ರಾಸಿನ ಸರಕಾರದ ಆದೇಶದಿಂದ ಪ್ರೇರಿತರಾಗಿ ಮೈಸೂರು ಸಂಸ್ಥಾನದ ಮಹಾರಾಜರು ಹೊಲೆಯ, ಮಾದಿಗ ಎಂಬ ಹೆಸರನ್ನು ವಜಾ ಮಾಡಿ, ಈ ಸಮುದಾಯದವರು ಆದಿಕರ್ನಾಟಕರೆಂದು ಘೋಷಿಸಿದರು. 1925ರ ಕೊರಟಗೆರೆ ಸಮ್ಮೇಳನದಲ್ಲಿ ಎರಡೂ ಸಮುದಾಯದವರೂ ಆದಿಕರ್ನಾಟಕದವರು ಎಂದು ಘೋಷಿಸಿಕೊಂಡರು. 1933ರಲ್ಲಿ ಎಡತೊರೆ ಪಂಚಮ ಸಮ್ಮೇಳನ ನಡೆಯಿತು. 1931 ಮತ್ತು 1941 ಜನಗಣತಿಯಲ್ಲಿ ಎರಡೂ ಸಮುದಾಯದವರು ಆದಿಕರ್ನಾಟಕ, ಆದಿದ್ರಾವಿಡ ಎಂದು ಬರೆಸಿದ್ದಾರೆ. ಮೈಸೂರು ಸಂಸ್ಥಾನದ 8 ಜಿಲ್ಲೆಗಳಲ್ಲಿ ಇರುವ ಒಟ್ಟು ಜನಸಂಖ್ಯೆಯಲ್ಲಿ ಇವರು 2ನೇ ಸ್ಥಾನದಲ್ಲಿದ್ದರು.
ಮದ್ರಾಸ್, ಮುಂಬೈ, ಬಂಗಾಳ ಪ್ರಾಂತಗಳಲ್ಲಿ ಪ್ರಸಿದ್ಧಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಲಂಡನ್‌ನ ದುಂಡುಮೇಜಿನ ಸಭೆಯಲ್ಲಿದ್ದಾಗ ನಮ್ಮ ಹಕ್ಕಿನ ಬಗ್ಗೆ ಚರ್ಚಿಸಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ನೂರಾರು ಟೆಲಿಗ್ರಾಂ ಕಳುಹಿಸಿದ್ದವರು ಕೋಲಾರ ಮತ್ತು ಕೆಜಿಎಫ್‌ನ ಆದಿದ್ರಾವಿಡರು. 1800ರ ಮೊದಲು ಮತ್ತು ನಂತರವೂ ಬ್ರಿಟಿಷರ ಸೈನ್ಯದಲ್ಲಿ ಸೈನಿಕರಾಗಿ ಮನೆಯಲ್ಲಿ ಕಾವಲುಗಾರರಾಗಿ, ಅಡುಗೆಯವರಾಗಿ, ತೋಟದ ಮಾಲಿಗಳಾಗಿ, ಅಂಗರಕ್ಷಕರಾಗಿ, ಕುದುರೆ ಲಾಯದವರಾಗಿ, ಜವಾನರಾಗಿ ಕೆಲಸ ಮಾಡುತ್ತಿದ್ದು, ಕೋಲಾರದ ಚಿನ್ನದ ಗಣಿ ಕೆಲಸಕ್ಕೆ ಯಾರೂ ಬರದಿದ್ದ ಸಮಯದಲ್ಲಿ 2 ಹೊತ್ತು ಊಟಕ್ಕಾಗಿ ನೂರಾರು ಮೀಟರ್ ಆಳದಲ್ಲಿ ಕೆಲಸ ಮಾಡಲು ಬಂದ ಪರಯರ್ 1922ರ ಆದೇಶದಂತೆ ತಮ್ಮನ್ನು ಆದಿದ್ರಾವಿಡರೆಂದು ಕರೆದುಕೊಂಡರು. ಆಂಧ್ರದಲ್ಲಿ ಭಾಗ್ಯವರ್ಮರವರು ಇದೇ ಕಾಲದಲ್ಲಿ ಆಂಧ್ರ ಅಸ್ಪಶ್ಯರನ್ನು ಸಂಘಟಿಸಿ ತಾವು ಆದಿ ಆಂಧ್ರರು ಎಂದು ಘೋಷಿಸಲು ಒತ್ತಾಯ ತಂದರು. ಆದಿ ದ್ರಾವಿಡ ಸಮುದಾಯದ ಮುರುಗೇಶ್ ಪಿಳ್ಳೆಯವರು 1925ರವರೆಗೆ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಮೈಸೂರು ಸಂಸ್ಥಾನದಲ್ಲಿ ಪರಿಶಿಷ್ಟ ಜಾತಿಯ ಚಳವಳಿಗಳು ನಡೆಯದಿದ್ದರೂ ಆರ್. ಗೋಪಾಲಸ್ವಾಮಿ ಅಯ್ಯರ್‌ರವರ ಸಾಮಾಜಿಕ ಸೇವೆಯಿಂದ ಶೈಕ್ಷಣಿಕ ಪ್ರಗತಿ ಸ್ವಲ್ಪ ಮಟ್ಟಿಗೆ ಆಯಿತು.
ತಮಿಳುನಾಡಿನ ಸರಕಾರದಲ್ಲಿ ಆದಿದ್ರಾವಿಡ ನಿರ್ದೇಶನಾಲಯವಿದೆ. ಅಲ್ಲಿನ ಪರಿಶಿಷ್ಟ ಜಾತಿಯಲ್ಲಿ ಶೇ. 70ರಷ್ಟು ಜನ ಆದಿದ್ರಾವಿಡರು. ಒಬ್ಬರು 2016ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿ ಆದಿ ದ್ರಾವಿಡ ಒಂದು ಜಾತಿಯ ಹೆಸರು, ಆದ್ದರಿಂದ ನಿರ್ದೇಶನಾಲಯದ ಹೆಸರನ್ನು ಬದಲಾಯಿಸಿ ಎಂದು ಕೇಳಿಕೊಂಡಿದ್ದರು. ಗೌರವಾನ್ವಿತ ನ್ಯಾಯಮೂರ್ತಿಗಳು ಈ ವಿಷಯ ಕಾರ್ಯಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಆದೇಶ ನೀಡಿ ವಜಾಗೊಳಿಸಿದ್ದರು (30.08.2016). ವಿ.ಸಿ.ಕೆ. ಪಕ್ಷದ ಲೋಕಸಭೆ ಸದಸ್ಯರಾಗಿದ್ದ ಡಿ. ರವಿಕುಮಾರ್‌ರವರು ‘‘ನಾವು ಯಾರನ್ನೂ ಆದಿದ್ರಾವಿಡ ಎಂದು ಕರೆದುಕೊಳ್ಳಿ ಎಂದು ಹೇಳಿಲ್ಲ. ತಮಿಳುನಾಡಿನಲ್ಲಿ 76 ಪರಿಶಿಷ್ಟ ಜಾತಿಗಳಿವೆ. ಪಲ್ಲರ್ ಸಹಿತ 7 ಜಾತಿಗಳು ದೇವೇಂದ್ರಕುಲ ವೆಳ್ಳಲಾರ್ ಹೆಸರಿನಡಿ ಒಂದಾಗಿವೆ ಮತ್ತು 7 ಜಾತಿಗಳು ಆರುಂಧತಿಯರ್ ಹೆಸರಿನಡಿ ಬರುತ್ತವೆ. 2 ಜಾತಿಗಳು ಇಲ್ಲವೇ ಇಲ್ಲ. 60 ಜಾತಿಗಳು ಆದಿದ್ರಾವಿಡ ಹೆಸರಲ್ಲಿ ಒಂದಾದರೆ ನಮ್ಮದೇನು ಅಭ್ಯಂತರವಿಲ್ಲ’’ವೆಂದು ಹೇಳಿದ್ದರು. (ದಿ ಹಿಂದು ದಿನಾಂಕ: 28.09.2020).
ಹೊಲಯ (ಹೊಲೆಯ)
ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿರುವ ಕನ್ನಡ ರತ್ನಕೋಶದ 13ನೇ ಆವೃತ್ತಿ 366ನೇ ಪುಟದಲ್ಲಿ ಹೊಲೆ=ಮೈಲಿಗೆ, ಪಾಪ, ಹೊಲಮನಿ, ಹೆರಿಗೆ ಮನೆ ಹಾಗೂ ಹೊಲೆಯ=ಪಂಚಮ ವರ್ಣದವನು ಎಂದು ಇದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದ ರತ್ನಕೋಶ ಪುಟ-304ರಲ್ಲಿ ಹೊಲ=ಬೆಳೆಯುವ ಭೂಮಿ. ಹೊಲೆಯ=ಒಂದು ಜಾತಿ, ಕೀಳುವ್ಯಕ್ತಿ. ಹೊಲಗೇರಿ=ಹೊಲಯರ ಓಣಿ, ಹೊಲಸಾದ ಜಾಗ, ಹೊಲೆ=ಮೈಲಿಗೆ, ಶಾಪ, ಮುಟ್ಟು, ಹೆರಿಗೆಮನೆ, ಮಾಸು, ಕಸ, ಕೀಳು ಕೆಲಸ ಎಂಬ ಅರ್ಥವಿದೆ. ಹೊಲ ಬೆಳೆಯುವ ಭೂಮಿ ಎಂದಾದರೆ ಹೊಲಗೇರಿ ಎಂದರೆ ಹೊಲದ ಪಕ್ಕದ ಕೇರಿ ಆಗಬೇಕು ಅಥವಾ ಹೊಲ ಇರುವ ಕೇರಿ ಆಗಬೇಕು. ಹೊಲೆಯರ ಓಣಿ ಹೇಗಾಗುತ್ತದೆ? ಹೊಲಸಾದ ಜಾಗ ಎಂದು ಹೇಳಲು ಹೇಗೆ ಸಾಧ್ಯ? ಹಳೆಗನ್ನಡದಲ್ಲಿ ಪೊಲ ಎಂದರೆ ಹೊಲ. ಹೊಲಯ=ಹೊಲ ಉಳುವವನು. ಹೊಲಯ ಹೊಲೆಯ ಹೇಗೆ ಸಾಧ್ಯ? ಬರವಣಿಗೆ, ವ್ಯಾಖ್ಯಾನ, ಅರಿತಿದ್ದ ಕುತಂತ್ರಿಗಳ ಕೆಲಸವಿದು. ಮೂಲ ದ್ರಾವಿಡ ಭಾಷೆಯಲ್ಲಿ ಉಳುವನ್=ಉಳುವವನು. ಉಳತಿ=ಮಹಿಳಾ ಕೃಷಿಕಳು ಎಂದು ಇದೆ. ಕನ್ನಡದಲ್ಲಿ ಬರೆದಿರುವುದು ಹೊಲತಿ=ಹೊಲೆಯರ ಹೆಂಗಸು. ಹೊಲ, ಹೊಲೆ ವ್ಯತ್ಯಾಸ ಗುರ್ತಿಸದೆ ಈ ಸಮುದಾಯವನ್ನು ಅವಮಾನಿಸಲು ಹೊಲ ಎಂದು ಬರೆಯುವಲ್ಲೆಲ್ಲ ಹೊಲೆ ಎಂದು ಬರೆದಿದ್ದಾರೆ. ಮೂಲತಃ ವ್ಯವಸಾಯಿಗಳಾದ ಇವರು ಸಂಗೀತ ನುಡಿಸುವವರು ಆಗಿದ್ದರಿಂದ ಪರೈಯ ಬಂದಿರಬಹುದು. 1936 ಮತ್ತು 1950ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮದ್ರಾಸ್ ಮತ್ತು ತ್ರಿವಾಂಕೂರ್ ಸಂಸ್ಥಾನದಲ್ಲೂ ಕೂಡ ಪುಲಯ ಎಂದೂ ಇದೆ. ಪುಲಯಕ್ಕೆ ಹೊಲೆಯ ಎಂದು ಅರ್ಥೈಸಬಹುದು. ಇದರ ಹುಟ್ಟು ನಮಗೆ ಅಧಿಕೃತವಾಗಿ ಲಭ್ಯವಿಲ್ಲದಿದ್ದರೂ 1013ರ ಚೋಳರ ಶಾಸನದಲ್ಲಿ ಪರಯರ್ ಬಹುಪಾಲು ಕೃಷಿಕರ ಭೂಮಿ ಹೊಂದಿದ್ದು, ಕೃಷಿಕರಾಗಿದ್ದರು ಎಂದು ಇದೆ. ಇನ್ನು ಕೆಲವು ದಾಖಲೆಗಳಲ್ಲಿ ಭೂಮಿ ಹೊಂದಿದ್ದು, ಕಂದಾಯವನ್ನೂ ಸಹ ಕಟ್ಟುತ್ತಿದ್ದರು ಎಂದು ಬರೆದಿದೆ. ಆ ಕಾರಣಕ್ಕಾಗಿ ಕನ್ನಡದಲ್ಲಿ ಹೊಲಯ ಎಂದು ಕರೆದಿರಬಹುದು.
ಛಲವಾದಿ
ಛಲವಾದಿ ಪದದ ಉಗಮ, ವಿಕಾಸ, ಬಳಕೆ, ಪುರಾಣಕ್ಕೆ ಸಂಬಂಧಿಸಿದೆಯಾದರೂ ವೇದ, ಶಾಸ್ತ್ರ, ಪುರಾಣ ಅವರವರ ಅನುಕೂಲಕ್ಕೆ ಬರೆದುಕೊಂಡವಾದ್ದರಿಂದ ದಲಿತರು ಅವುಗಳ ಹಿಂದೆ ಹೋಗುವ ಅಗತ್ಯವಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್ ದಲಿತರಿಗೆ ದಾರಿ ತೋರಿಸಿದ್ದಾರೆ.
ಛಲವಾದಿ ಎಂದರೆ ಮೈಸೂರು ಭಾಗದಲ್ಲಿ ಮಾಹಿತಿದಾರ, ಮಾಹಿತಿ ತಲುಪಿಸುವವ, ಪತ್ರ ಸಂಗ್ರಹಕಾರ, ಗುಪ್ತಚರ, 18 ಜಾತಿಗಳ ಸಭೆಯ ಸಂಚಾಲಕ ಎಂದು ಇದೆ. ಆದರೆ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ದಲಿತರಲ್ಲೇ ಶ್ರೇಷ್ಠರು, ದಲಿತರ ಪೂಜಾರಿಗಳು, ದೇವರಗುಡ್ಡರು, ಬಸವ ಪರಂಪರೆಯವರು ಎಂಬ ವಿವರಣೆ ಇದೆ. ದೇವರ ಭಕ್ತ (ಗಂಟೆಭಟ್ಟಲು) ಇತ್ಯಾದಿ. ಇತರ ಜಾತಿಯವರೂ ಕೂಡ ಇವರನ್ನು ಗೌರವಿಸುತ್ತಾರೆ. ಮೂಲ ಕಸುಬು ಮಾತ್ರ ವ್ಯವಸಾಯವೇ.
ಬೆಳಗಾವಿ, ಬಿಜಾಪುರ, ಧಾರವಾಡ, ಕಾರವಾರ, ಕಲಬುರಗಿ, ಬೀದರ್, ರಾಯಚೂರುಗಳಲ್ಲಿ ಛಲವಾದಿ ಇದೆ. ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಛಲವಾದಿ ಎಂದು ಕರೆದುಕೊಂಡರೂ ಅವರ ದಾಖಲೆಗಳಲ್ಲಿ ಆದಿ ದ್ರಾವಿಡ ಎಂದೇ ಇದೆ. ಮದ್ರಾಸ್, ಆಂಧ್ರ, ಕೇರಳದ ಮಲಬಾರ್ ಜಿಲ್ಲೆ, ಗುಜರಾತ್, ಮುಂಬೈ ಈ ಪ್ರದೇಶಗಳಲ್ಲಿ ಛಲವಾದಿ ಎಂದೂ ಇದೆ. ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಯವರು ಮೈಸೂರಿನ ಭಾಗದವರ ಜೊತೆ ಸಂಬಂಧ ಬೆಳೆಸಿದ್ದಾರೆ. ಬೆಳಗಾವಿ, ಬಿಜಾಪುರ, ಕಲಬುರಗಿ, ಧಾರವಾಡದ ಮಹಾರರು ಮೈಸೂರು ಭಾಗದವರೊಡನೆ ಸಂಬಂಧ ಬೆಳೆಸಿದ್ದಾರೆ. 1800ಕ್ಕೂ ಮೊದಲೇ ಬೆಂಗಳೂರಿನಲ್ಲಿದ್ದ ಮತ್ತು 1800ರ ನಂತರ ಬಂದ ತಮಿಳು ಮಾತನಾಡುವ ಪರೆಯರ್ ಕೋಲಾರ, ಬೆಂಗಳೂರು, ಮೈಸೂರಿನವರ ಜೊತೆ ವೈವಾಹಿಕ ಸಂಬಂಧ ಇದೆ. ಗೌರಿಬಿದನೂರು, ಹಿಂದುಪುರ, ಅನಂತಪುರ, ಮಡಕಶಿರ ಈ ಭಾಗಗಳಲ್ಲಿ ಮಾಲಾ ಮತ್ತು ಆದಿ ದ್ರಾವಿಡರಲ್ಲಿ ಮದುವೆಗಳು ನಡೆದಿವೆ. ಕರ್ನಾಟಕದ ಆದಿ ಕರ್ನಾಟಕ ಆದಿ ದ್ರಾವಿಡರಲ್ಲಿಯೂ ಅಲ್ಲಲ್ಲಿ ಮದುವೆಗಳಾಗಿವೆ.
ಸಮೀಕ್ಷೆಯಲ್ಲಿ 22ನೇ ಕಲಂ 61ನೇ ಕಾಲಂನಲ್ಲಿ ಮೂರು ಅಕ್ಷರಗಳ ಒಂದೇ ಜಾತಿಯನ್ನು ಬರೆಸಿ ಎಂದು ಹೋರಾಡುತ್ತಿರುವ ಗುಂಪು ಕರೆ ಕೊಟ್ಟಿದೆ. 37-40 ಜಾತಿಯ ಗುಂಪು ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರದ ಅಡಿಯಲ್ಲಿ ಜೊತೆಗೆ ನಿಮ್ಮ ಮೂಲ ಜಾತಿ ಬರೆಸಿ ಎಂದು ಮನವಿ ಮಾಡಿದೆ. ಹಿಂದಿನ ಸಮೀಕ್ಷೆಯಲ್ಲಿ ಮಾಹಿತಿ ನೀಡದ 6 ಲಕ್ಷ 33 ಸಾವಿರದ ಜನರ ಭವಿಷ್ಯವನ್ನು ಏನೆಂದು ಆಯೋಗ ತೀರ್ಮಾನಿಸುತ್ತದೆ? ಕೇಂದ್ರೀಕೃತ ವ್ಯವಸ್ಥೆ ಇಲ್ಲದೆ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಒಂದು ಸಮುದಾಯಕ್ಕೆ ಹೇಳಿಕೆಗಳಲ್ಲಿ ಗೊಂದಲ ಉಂಟು ಮಾಡುತ್ತಿರುವುದರಿಂದ ಸಮೀಕ್ಷೆಯಲ್ಲಿ ಅಂಕಿ ಸಂಖ್ಯೆಗಳು ಏರುಪೇರಾಗುವ ಸಾಧ್ಯತೆ ಇದೆ. ಎಡ-ಬಲ, ಸ್ಪರ್ಶ, ಇತರ ಎಂದು ವಿಭಾಗಿಸದೆ ಎ,ಬಿ,ಸಿ,ಡಿ ಎಂದು ವರ್ಗೀಕರಣ ಮಾಡುವುದು ಸೂಕ್ತ. ಒಟ್ಟಾರೆ ಕೆಲವು ಗುಂಪು ಜಾತಿಗಳು ಒಂದೇ ಹೆಸರಿಗೆ ಬಿದ್ದಿರುವುದರಿಂದ ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳ ಸಂಖ್ಯೆ ಕಡಿಮೆ ಆಗುವುದು ಒಳ್ಳೆಯ ಬೆಳವಣಿಗೆ. ಯಾರಿಗೆ ಎಷ್ಟಾದರೂ ಹಂಚಿ. ಹಿಂದಿನ ಜನಗಣತಿ ಅಂಕಿ-ಅಂಶಗಳನ್ನು ಪರಾಮರ್ಶೆ ಮಾಡಿ. ಪರಿಶಿಷ್ಟ ಜಾತಿಗಳು 101 ರಿಂದ 50ಕ್ಕೆ ಬಂದು ನಿಂತರೆ ಆ 50 ಜಾತಿಗಳು ಒಂದೇ ಮರದ ನೆರಳಲ್ಲಿ ಒಂದಾಗಲು ಭವಿಷ್ಯದಲ್ಲಿ ಯೋಜನೆ ರೂಪಿಸಿ. ಎರಡೂ ಕೈಗಳು ಒಂದೇ ದೇಹದ್ದಾಗುವ ಕಾಲಬರಲಿ.