×
Ad

ಕನ್ನಡದ ಕರ್ನಾಟಕತನ

Update: 2025-10-06 11:48 IST

ಕನ್ನಡ ನಾಡು ಸರ್ವಧರ್ಮಗಳ ಆಡುಂಬೊಲ. ಅಂದರೆ ಕರ್ನಾಟಕ ಹಲವು ಧರ್ಮಗಳ ನೆಲೆ, ಧರ್ಮ ಸಮನ್ವಯ ಭೂಮಿಯಾಗಿದೆ. ಬೌದ್ಧ, ಜೈನ, ಶೈವ, ವೀರಶೈವ, ಮುಸ್ಲಿಮ್, ಕ್ರೈಸ್ತ ಮುಂತಾದ ಧರ್ಮಗಳ ಜನ ಇಲ್ಲಿ ಸಾಮರಸ್ಯದಿಂದ, ಸಮನ್ವಯ ಭಾವನೆಯಿಂದ ಬಾಳಿ ಬದುಕಿದ್ದಾರೆ. ನಮ್ಮ ಸಾಹಿತ್ಯದುದ್ದಕ್ಕೂ ಪರಧರ್ಮ ಸಹಿಷ್ಣುತೆ, ಧರ್ಮಸಮನ್ವಯ ಭಾವನೆಗಳನ್ನು ಕವಿಗಳು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸುತ್ತಾ ಬಂದುದನ್ನು ಕಾಣುವೆವು. ಭಾವೈಕ್ಯ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಾಣವಾಗುವುದಿಲ್ಲ. ಉಳಿ ಮತ್ತು ಸುತ್ತಿಗೆಗಳಿಂದ ನಿರ್ಮಾಣ ವಾಗುವುದಿಲ್ಲ ಅದು ಜನರ ಮನಸ್ಸಿನಿಂದ ಬರಬೇಕು ಎಂದು ಸರ್ವಪಲ್ಲಿ ರಾಧಾಕೃಷ್ಣ ನ್ ಅವರು ಹೇಳಿದ್ದಾರೆ.

ಒಂದೂವರೆ ಸಾವಿರ ವಷರ್ಗಳ ಹಿಂದೆಯೇ ಇದೇ ನೆಲದ ಕವಿರಾಜಮಾರ್ಗಕಾರನು ಹೇಳಿದ ಪರರ ಧರ್ಮ ಮತ್ತು ಪರರ ವಿಚಾರಗಳನ್ನು ಗೌರವಿಸುವುದೇ, ಮನುಷ್ಯ ಪ್ರೀತಿಯ ನಿಜದ ನೆಲೆಯ ಸಂಪತ್ತು. ನೃಪತುಂಗ ನೆಲದ ಇಂತಹ ಬೀಜದ ಮಾತುಗಳು ಇಡೀ ದೇಶಕ್ಕೇ ಇವತ್ತು ಹೆಚ್ಚು ಹೆಚ್ಚು ಅನ್ವಯಿಸಿ ಅನುಷ್ಠಾನಕ್ಕೆ ಬರಬೇಕಾಗಿದೆ.

ನಮ್ಮ ನಾಡು ಬಹಳ ಹಳೆಯದೇ ಆದರೂ, 20ನೇ ಶತಮಾನದಲ್ಲಿ ನಡೆದ ಕರ್ನಾಟಕ ಏಕೀಕರಣ ಚಳವಳಿಯು ಆಧುನಿಕ ಕರ್ನಾಟಕದ ಬಗ್ಗೆ ನಮ್ಮಲ್ಲೊಂದು ಚಿತ್ರ ಮೂಡಿಸಿತು. ಅದಕ್ಕೂ ಹಿಂದೆ, ಕದಂಬ, ಗಂಗ, ಚಾಳುಕ್ಯ ಮತ್ತು ರಾಷ್ಟ್ರಕೂಟ ಅರಸರ ಕಾಲದಲ್ಲಿ ಕರ್ನಾಟಕದ ಗಡಿಗಳು ನಿರಂತರವಾಗಿ ಬದಲಾಗುತ್ತಲೇ ಇದ್ದುವು. ರಾಷ್ಟ್ರಕೂಟರ ಕಾಲದಲ್ಲಿ ಕನ್ನಡ ನಾಡು ತೆಳುವಾಗಿಯಾದರೂ ‘ಕಾವೇರಿಯಿಂದ ಗೋದಾವರಿವರೆಗೆ’ ಹಬ್ಬಿತ್ತು. ಆದರೆ ಮುಂದೆ ಹೊಯ್ಸಳರು ಮತ್ತು ಸೇವುಣರ ನಡುವಿನ ಜಗಳದಲ್ಲಿ (13ನೇ ಶತಮಾನ) ಕನ್ನಡ ನಾಡು ಇಬ್ಭ್ಬ್ಬಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳಿದರು. ಆಗ ಬೇರೆಯಾದ ಕನ್ನಡಿಗರು ಮತ್ತೆ ಒಟ್ಟಾಗಬೇಕಾದರೆ 1956ರ ವರೆಗೆ ಕಾಯಬೇಕಾಯಿತು. ಅಂದರೆ ಸುಮಾರು 750 ವರ್ಷಗಳ ಕಾಲ ಕನ್ನಡಿಗರೇ ಅಧಿಕವಾಗಿದ್ದ ಭಾಗಗಳನ್ನು ಕನ್ನಡೇತರರು ಆಳಿದರು. 1799ರಲ್ಲಿ ಟಿಪ್ಪು ಮರಣ ಹೊಂದಿದ ಆನಂತರ, ಮೈಸೂರು ಸಂಸ್ಥಾನವು ಮಾತ್ರ ಮೈಸೂರಿನ ಒಡೆಯರಿಗೆ ಉಳಿಯಿತು. ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬೈ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ, ಬಳ್ಳಾರಿ ಜಿಲ್ಲೆಗಳು ಬ್ರಿಟಿಷರ ಮದರಾಸಿನ ಆಧಿಪತ್ಯಕ್ಕೂ, ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಗೂ ಸೇರಿದವು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು. ಮತ್ತೆ ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು. ಭಾರತ ದೇಶದ ಯಾವ ರಾಜ್ಯವೂ ಈ ಬಗೆಯಲ್ಲಿ ಚೂರು ಚೂರಾಗಿರಲಿಲ್ಲ. ಹೀಗೆ ಒಡೆದು ಹೋದ ಕರ್ನಾಟಕವನ್ನು ಏಕೀಕರಣ ಚಳವಳಿ ಒಂದುಗೂಡಿಸಿದ್ದು ಈಗ ಇತಿಹಾಸ ಕರ್ನಾಟಕದ ಈ ಚರಿತ್ರೆಯು ಅದರ ಸಂಕೀರ್ಣ ಮತ್ತು ಬಹುಮುಖಿ ಪರಂಪರೆಗೂ ಕಾರಣವಾಯಿತು. ಇದನ್ನು ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟವೆಂದು ಸಮರ್ಪಕವಾಗಿ ವ್ಯಾಖ್ಯಾನಿಸಿದರು.

ಕರ್ನಾಟಕ ಸಂಸ್ಕೃತಿಯು ಆರಂಭದಿಂದಲೂ ಬಹುಮುಖಿಯಾಗಿಯೇ ಬೆಳೆಯಿತು. ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲಿ ಬಿಹಾರದಿಂದ ವಲಸೆ ಹೊರಟ ಭದ್ರಬಾಹು ಭಟಾರರು ಮತ್ತು ಸಂಪ್ರತಿ ಚಂದ್ರಗುಪ್ತರು ಕೊನೆಗೂ ನೆಲೆ ನಿಂತದ್ದು ನಮ್ಮ ಶ್ರವಣಬೆಳಗೊಳದಲ್ಲಿ. ಜೈನರು ಮುಂದೆ ಕರ್ನಾಟಕವನ್ನು ‘‘ಜಿನ ಧರ್ಮದ ಆಡುಂಬೊಲಂ’’ ಮಾಡಿಕೊಂಡರು. ಕನ್ನಡಕ್ಕೆ ಪಂಪ, ಪೊನ್ನ, ರನ್ನ, ನಾಗಚಂದ್ರ, ಕೇಶೀರಾಜ, ನಯಸೇನ, ಜನ್ನ, ರತ್ನಾಕರವರ್ಣಿ ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟರು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳಲ್ಲಿ ವಾಸಿಸಿ ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರಿಗೆ ಮೇಲುಕೋಟೆಯಲ್ಲಿ ಜಾಗ ನೀಡಿದರು. ಶೃಂಗೇರಿ ಅದ್ವೈತ ಪರಂಪರೆಯ ಕೇಂದ್ರವಾದರೆ ಉಡುಪಿಯು ದ್ವೈತ ಮತದ ಕೇಂದ್ರವಾಯಿತು. ಕ್ರಿಸ್ತಶಕ ಏಳನೆಯ ಶತಮಾನದ ಹೊತ್ತಿಗೆ ಕರಾವಳಿಗೆ ಆಗಮಿಸಿದ ಮುಸ್ಲಿಮರು ತಮ್ಮ ವ್ಯಾಪಾರ ಕಾರಣವಾಗಿ ಕರಾವಳಿಯನ್ನು ಪೂರ್ವ ಮತ್ತು ಪಶ್ಚಿಮದ ದೇಶಗಳಿಗೆ ಜೋಡಿಸಿದರು. ಕರ್ನಾಟಕದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಜನಪ್ರಿಯವಾಯಿತು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡ ಮತ್ತಿತರ ಕಡೆಗಳಲ್ಲಿ ಕೆಲಸಮಾಡುತ್ತಾ, ಆಧುನಿಕ ಶಿಕ್ಷಣಕ್ಕೆ ನಾಡನ್ನು ತೆರೆದಿಟ್ಟರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆ ಮೊದಲಾದ ಅನೇಕ ಪ್ರಕಾರಗಳನ್ನು ಒಳಗೊಳ್ಳುತ್ತಾ ಬೆಳೆಯಿತು.

ಕುಲ ಕುಲವೆಂದು ಹೊಡೆದಾಡದಿರಿ

ನಿಮ್ಮ ಕುಲದ ನೆಲೆಯನೆನಾದರು ಬಲ್ಲಿರಾ

ಕನಕದಾಸರು ತಮ್ಮ ರಾಮಧಾನ್ಯ ಚರಿತೆಯಲ್ಲಿ ಭತ್ತ ಮತ್ತು ರಾಗಿ ಇವುಗಳ ಸಂಘರ್ಷವನ್ನು ಚಿತ್ರಿಸಿದ್ದಾರೆ. ಅಂತ್ಯದಲ್ಲಿ ಬಡಜನರ ಆಹಾರವಾದ ರಾಗಿಯು ಉನ್ನತ ಕುಲದವರ ಆಹಾರವಾದ ಭತ್ತಕ್ಕಿಂತ ಶ್ರೇಷ್ಠ ಎಂಬ ಪ್ರಶಸ್ತಿಯನ್ನು ಶ್ರೀರಾಮನಿಂದ ಕೊಡಿಸಿದ್ದಾರೆ. ಈ ಸಾಂಕೇತಿಕ ಕಥೆಯ ಮೂಲಕ ಸಮಾನತೆಯನ್ನು ಸಾರಿದ್ದು ಗಮನಾರ್ಹವಾಗಿದೆ.

ಏನು ಮಾಡಿದೆ ಜಾತಿ

ಕೆಡಿಸಿತಷ್ಟ್ಟೆೇ ಶಾಂತಿ

ಏನು ಮಾಡಿದೆ ಜಾತಿ

ತಡೆಯಿತ್ತಷ್ಟ್ಟೆೇ ಪ್ರಗತಿ

ಜಾತಿ ಭೂತಗಳೊಡೆದು

ಒಡೆದು ತುಂಡಾಗಿಸಿದ

ಕೋಟಿ ತುಂಡುಗಳನೆಲ್ಲ

ಒಂದು ಮಾಡುವುದು ಪ್ರೀತಿ

ಜಾತಿ ಬಿಟ್ಟು ಬನ್ನಿ, ಮನುಷ್ಯ ತನವನ್ನು ಕಟ್ಟಿ

ಚನ್ನಣ್ಣ ವಾಲಿಕಾರ ಅವರು ‘‘ಬುದ್ಧ ಅತ್ತರೂ ಇಲ್ಲ, ಕ್ರಿಸ್ತ ಸತ್ತರೂ ಇಲ್ಲ, ಬಸವ ನೆತ್ತರೂ ಹರಿಸಿದರಿಲ್ಲ ಫಲವು, ಗಾಂಧಿ ಅಂಬೇಡ್ಕರರು ಏನು ಮಾಡಿದರಿಲ್ಲ, ಬಿದ್ದುಕೊಂಡಿದೆ ಹಾಗೆ ನಮ್ಮ ನೆಲವು. ಒಂದೇ ನೋವಿರುವಂಥ ಒಂದೇ ಸಾವಿರುವಂಥ ಜನರೆ ಒಡೆದಿಟ್ಟಿದ್ದು ಎಂಥ ಮಾತು. ಉಚ್ಚ ನೀಚವೆ ತಂದು ಗೋಡೆ ಕಟ್ಟಿದ ಕಥೆಯು ಅದರಿಂದ ಮಾಡಿದರು ಧನದೌಲತ್ತು’’ ಎಂದು ಹೇಳಿದ್ದಾರೆ. ಎಲ್ಲ ಧರ್ಮಗಳನ್ನೂ ಗೌರವಿಸಬೇಕು. ಸ್ವಧರ್ಮವನ್ನು ಆಚರಿಸಬೇಕು ಎಂಬುದೇ ಆದರ್ಶ.

ಈ ನಡುವೆ ಚಾರಿತ್ರಿಕವಾಗಿ ಕನ್ನಡದ ಮಣ್ಣು ಅನೇಕ ಜನ ಸಮುದಾಯಗಳನ್ನು ತನ್ನೊಳಗೆ ಬರಮಾಡಿಕೊಂಡಿದೆ. ಇಥಿಯೋಪಿಯಾದಿಂದ ಬಂದ ಹಬಷಿಗಳು, ಉತ್ತರದಿಂದ ಆಗಮಿಸಿದ ಲಂಬಾಣಿಗಳು, ಆಫ್ರಿಕಾದಿಂದ ವಲಸೆ ಬಂದ ಸಿದ್ದಿಯರು ಮೊದಲಾದ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದವು. ಯಾರನ್ನೂ ತಿರಸ್ಕರಿಸದ ಅಥವಾ ಹೊರಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನ್ನೂ ಒಳಗೊಳ್ಳುವ ವೈಶಿಷ್ಟ್ಯವನ್ನು ಮೆರೆಯಿತು. ಈ ಸೌಹಾರ್ದ ಪರಂಪರೆಯನ್ನು ಹೊಸ ತಲೆಮಾರಿಗೆ ತಿಳಿಪಡಿಸುವ ಮಹತ್ವದ ಕಾರ್ಯ ಆಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಸಂತೋಷ ಹಾನಗಲ್ಲ

contributor

Similar News