ಹಕ್ಕುಪತ್ರಕ್ಕಾಗಿ ಹೋರಾಡುತ್ತಲೇ ಹೊರಟುಹೋದ ಅಲೆಮಾರಿ!!
ಮೊನ್ನೆ ಶಿವರಾತ್ರಿಯ ದಿನ ಕೋಲೆಬಸವ ಆಡಿಸುವ ವೆಂಕಟೇಶ ಮುಂಜಾನೆ ನಸುಕಿಗೆ ಎದ್ದವನೇ ತನ್ನ ಆನೆಗಾತ್ರದ ‘ಕೋಲೆ ಬಸವ’ನಿಗೆ ಶುಭ್ರವಾಗಿ ಸ್ನಾನ ಮಾಡಿಸಿ, ಮೇವು ಹಾಕಿ, ಕಲ್ಲಗಚ್ಚಲು ಕುಡಿಸಿ, ಮುಖಕ್ಕೆ ಮುಖವರ್ಣಿಕೆಯಂತಿದ್ದ ಆಂಜನೇಯನ ವಿಗ್ರಹ ಕಟ್ಟಿ, ಕೊಂಬಿಗೆ ಬಣ್ಣದ ಗುಬ್ಬೆಲು ಕಟ್ಟಿ, ಬಣ್ಣಬಣ್ಣದ ರೆಕ್ಕೆ ಬೊಂತಲು ಕಟ್ಟಿ, ಹಿಂದೆ ಬಾಲದ ಬಳಿ ಮೂವಲ ಪಟ್ಟಿ ಕಟ್ಟಿ, ನಾಲ್ಕೂ ಕಾಲಿಗೆ ಜಣಗೊಳಿಸುವ ಗೆಜ್ಜೆ ಕಟ್ಟಿ, ಶಿವರಾತ್ರಿಯಂದು ಕೈಲಾಸದಿಂದಲೇ ಧರೆಗೆ ಬಂದಂತೆ ತನ್ನ ಬಸವನಿಗೆ ಸಿಂಗಾರ ಮಾಡಿ ಡೋಲನ್ನು ಭುಜಕ್ಕೆ ಹಾಕಿಕೊಂಡು ಭಿಕ್ಷೆಗೆ ಹೊರಟ. ಶಿವರಾತ್ರಿಯ ದಿನ ಬಸವನನ್ನು ಪೂಜಿಸುವವರು ಒಂದಷ್ಟು ಹೆಚ್ಚು ಕಾಸು ಕೊಡುತ್ತಾರೆ ಎಂಬುದು ಅವನ ಆಸೆ. ನಾಲ್ಕು ಮನೆಗಳ ಬಳಿ ಹೋಗಿ ಡೋಲು ಬಾರಿಸುತ್ತಾ ಅದೊಂದು ಮನೆಯ ಮುಂದೆ ಭಿಕ್ಷೆಗಾಗಿ ಕಾಯತೊಡಗಿದ.
ತನ್ನ ಹಿಂದೆಯೇ ಇದ್ದ ದೈತ್ಯಗಾತ್ರದ ಕೋಲೆ ಬಸವನಿಗೆ ಅದೇನು ಹುಚ್ಚು ಕೋಪ ಬಂತೋ ಏನೋ ತಿಳಿಯಲಿಲ್ಲ, ತಕ್ಷಣ ರೌದ್ರಾವತಾರ ತಾಳಿದ ಕೋಲೆ ಬಸವ ವೆಂಕಟೇಶನ ಮುಂದೆ ನುಗ್ಗಿ ಆತನನ್ನು ಗೋಡೆಗೆ ಹಾಕಿ ಹಣೆಯನ್ನು ಎದೆಗಿಟ್ಟು ಒಂದೇ ಉಸುರಿಗೆ ಅದುಮಿ ಹಾಕಿತು! ಅದರ ರಭಸಕ್ಕೆ ಏನೂ ಮಾಡಲಾಗದ ವೆಂಕಟೇಶ ಅಲ್ಲೇ ರಕ್ತಕಾರಿ ನೆಲಕ್ಕುರುಳಿದ. ಅವನ ಕುಟುಂಬದ ಅನ್ನಕ್ಕೆ ಕಾಲಾಂತರದಿಂದ ಕಾರಣವಾಗಿದ್ದ, ಅವನ ಪಾಲಿಗೆ ಅನ್ನದಾತ, ದೈವಸ್ವರೂಪಿ ಕೋಲೆಬಸವನೇ ಅವನ ಸಾವಿಗೂ ಕಾರಣವಾಗಿತ್ತು..!! ಕ್ಷಣಾರ್ಧದಲ್ಲಿ ಎಲ್ಲವೂ ಮುಗಿದುಹೋಗಿತ್ತು..
ವೆಂಕಟೇಶನ ತಾಯಿ ಸುಮಾರು ಇಪ್ಪತ್ತು ದಿನಗಳ ಹಿಂದೆ ಆಂಧ್ರದ ಸ್ವಗ್ರಾಮದಲ್ಲಿ ನಿಧನರಾಗಿದ್ದರು. ಆಗ ಬಸವನನ್ನು ಗೊತ್ತಿಗೆ ಕಟ್ಟಿ ತಾಯಿಯ ಸಾವಿಗೆ ಹೋದ ವೆಂಕಟೇಶ, ಬಸವನಿಗೆ ವೆಂಕಟೇಶನ ಮಕ್ಕಳು ಹುಲ್ಲು, ನೀರು ಹಾಕುತ್ತಿದ್ದರು. ಇಪ್ಪತ್ತು ದಿನ ಬಸವ ಕಟ್ಟಿಹಾಕಿದ ಸ್ಥಿತಿಯಲ್ಲೇ ಇತ್ತು. ತಾಯಿಗೆ ತಲೆಗೊರವಿ ಇಟ್ಟ ವೆಂಕಟೇಶ ತಲೆ ಬೋಳಿಸಿಕೊಂಡು ರಾಯಸಂದ್ರಕ್ಕೆ ಬಂದ. ತಲೆಬೋಳಿಸಿಕೊಂಡು ಬಂದ ವೆಂಕಟೇಶನನ್ನು ಬಸವ ಗುರುತು ಹಿಡಿಯಲಿಲ್ಲ. ಸದಾ ಊರೂರು ಸುತ್ತುತ್ತಿದ್ದ ಅಲೆಮಾರಿ ಬಸವ ಇಪ್ಪತ್ತು ದಿನ ಕಟ್ಟಿಹಾಕಿದ ಕಡೆಯೇ ಇದ್ದು ಹುಚ್ಚುಹಿಡಿದಂತಾಗಿತ್ತು. ಎಲ್ಲಕ್ಕೂ ಒಂದಷ್ಟು ಪ್ರತಿರೋಧ ತೋರುತ್ತಿತ್ತು. ಅದು ಸಹಕರಿಸದೆ ಇದ್ದಿದ್ದರಿಂದ ವೆಂಕಟೇಶ ಒಂದೆರಡು ಹೊಡೆತ ಕೂಡ ಕೊಟ್ಟಿದ್ದ. ಈ ಎಲ್ಲವೂ ಬಸವನಿಗೆ ಕೋಪ ಬರಲು ಕಾರಣಗಳಿರಬಹುದು.
ಸುಮಾರು ಹನ್ನೊಂದು ವರ್ಷಗಳ ಹಿಂದೆ ಆನೇಕಲ್ ಸರ್ಜಾಪುರದ ಬಳಿಯ ರಾಯಸಂದ್ರ ಗ್ರಾಮಕ್ಕೆ ಹೊಟ್ಟೆಪಾಡಿಗಾಗಿ ಆಂಧ್ರದಿಂದ ಬಂದ ಕೆಲ ಅಲೆಮಾರಿ ಕೋಲೆಬಸವ ಸಮುದಾಯದ ಕುಟುಂಬಗಳು ಅಲ್ಲಿನ ಸರಕಾರಿ ಜಮೀನಿನಲ್ಲಿ ಮಕ್ಕಳು, ಮಹಿಳೆಯರು ಮತ್ತು ಮುದುಕರೊಂದಿಗೆ ಸೋಗೆ ಗುಡಿಸಲು ಹಾಕಿಕೊಂಡು ಜೀವಿಸುತ್ತಿದ್ದರು. ಒಂದು ದಿನ ನನ್ನ ಸಂಪರ್ಕಕ್ಕೆ ಬಂದ ಕೋಲೆಬಸವ ಸಮುದಾಯದ ತಮಟಂ ಶ್ರೀನಿವಾಸ್ ಎಂಬ ಹುಡುಗ ತಾವು ನಿವೇಶನಕ್ಕಾಗಿ ಹೋರಾಡುತ್ತಿರುವ ಬಗ್ಗೆ ತಿಳಿಸಿದ. ಆ ಸಂದರ್ಭದಲ್ಲಿ ಕರ್ನಾಟಕ ಕೋಲೆ ಬಸವ ಸಂಘ ಕಟ್ಟಿ ಅದಕ್ಕೆ ತಮಟಂ ಶ್ರೀನಿವಾಸ್ ಅಧ್ಯಕ್ಷನಾಗಿ, ಇದೀಗ ತೀರಿಕೊಂಡ ವೆಂಕಟೇಶ ಉಪಾಧ್ಯಕ್ಷನಾದ, ನಾನು ಗೌರವಾಧ್ಯಕ್ಷನಾದೆ. ಪ್ರತೀ ಸಂದರ್ಭದಲ್ಲೂ ತಮಟಂ ಶ್ರೀನಿವಾಸನ ಜತೆ ವೆಂಕಟೇಶ ನಮ್ಮ ಕಚೇರಿಗೆ ಬರುತ್ತಿದ್ದ. ಯಾವುದಾದರೂ ಹೋರಾಟ, ಪ್ರತಿಭಟನೆ ಇರುವಾಗ ವೆಂಕಟೇಶ ತನ್ನ ಕೋಲೆಬಸವನೊಂದಿಗೆ ಹಾಜರಾಗುತ್ತಿದ್ದ. ಅಷ್ಟೇಕೆ ನನ್ನ ಲೇಖನಗಳ ಸಂಗ್ರಹ ‘ಮೂಕನಾಯಕ’ ಪುಸ್ತಕವನ್ನು ಬಿಡುಗಡೆ ಮಾಡಿದ್ದೂ ಈ ಕೋಲೆಬಸವನೆ!
ಸತತ ಹೋರಾಟದ ಫಲ ಕೋಲೆಬಸವ ಸಮುದಾಯಕ್ಕೆ ಆಶ್ರಯ ಯೋಜನೆಯಡಿ 1 ಎಕರೆ 22 ಗುಂಟೆ ಜಮೀನು ಮುಂಜೂರಾಯಿತು. ಆದರೆ ಹಕ್ಕುಪತ್ರ ನೀಡಲು ಕೆಲ ಸ್ಥಳೀಯ ಅನುಕೂಲಸ್ಥ ಜಾತಿಯ ಪುಢಾರಿಗಳು ಅಡ್ಡಿಯಾಗತೊಡಗಿದರು!
ಈ ಸಂದರ್ಭದಲ್ಲಿ ಬಂದ ಜಿಲ್ಲಾಧಿಕಾರಿಗಳು, ಎ.ಸಿ.ಗಳು, ತಹಶೀಲ್ದಾರರನ್ನು ಎಡತಾಕತೊಡಗಿದರು. ಎಲ್ಲಾ ಅಧಿಕಾರಿಗಳೂ ಇವರ ಪರಿಸ್ಥಿತಿ ನೋಡಿ ಮನ ಕರಗಿ ಹಕ್ಕುಪತ್ರ ಕೊಡಲು ಮುಂದಾದರು. ಆದರೆ ಸ್ಥಳೀಯ ಕೆಲ ಪ್ರತಿಷ್ಠಿತರು ಅಡ್ಡಿಯಾಗುತ್ತಲೇ ಇದ್ದರು.
ತನಗೆ ಹಕ್ಕುಪತ್ರ ಸಿಗುತ್ತದೆಂಬ ಆಸೆಯಿಂದ ಹೋರಾಟಕ್ಕೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೆಂಕಟೇಶ ಹಕ್ಕುಪತ್ರವನ್ನು ನೋಡದೆಯೇ ಅಸುನೀಗಿದ.
ಅಂತೆಯೇ ಕೋಲೆಬಸವ ಸಮುದಾಯ ಕರ್ನಾಟಕದ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲ. ಈ ಕಾರಣಕ್ಕೆ ಈ ಸಮುದಾಯದ ಮಕ್ಕಳಿಗೆ ಅಕ್ಷರವೂ ಇಲ್ಲ, ಶಾಲೆಯೂ ಇಲ್ಲ. ಈ ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಲೂ ಕೂಡ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆಯಿಂದ ಸತತವಾಗಿ ಹೋರಾಟ ಮಾಡುತ್ತಲೇ ಇದ್ದೇವೆ. ಅದು ಈಗಷ್ಟೇ ಯಶಸ್ಸಿನ ಕಡೆ ಹೆಜ್ಜೆ ಇಟ್ಟಿದೆ.
ಹಕ್ಕುಪತ್ರ ನೋಡದ, ತನ್ನ ಸಮುದಾಯದ ಮಕ್ಕಳಿಗೆ ಜಾತಿಪ್ರಮಾಣಪತ್ರ ನೋಡದ ವೆಂಕಟೇಶ ಇಂದು ನಮ್ಮೊಂದಿಗೆ ಇಲ್ಲ. ಅದರಲ್ಲೂ ವೆಂಕಟೇಶನಿಗೆ ಮನೆಯಿರಲಿಲ್ಲ, ನಾಲ್ಕು ಜನ ಸಣ್ಣ ಮಕ್ಕಳು. ಆ ಕುಟುಂಬದ ಅನ್ನಕ್ಕೆ ಆಧಾರವಾಗಿದ್ದಿದ್ದೇ ವೆಂಕಟೇಶ. ಈಗ ಕೋಲೆಬಸವನನ್ನು ಭಿಕ್ಷೆಗೆ ಕೊಂಡುಹೋಗುವವರಿಲ್ಲ, ಸದಾ ನುಡಿಯುತ್ತಿದ್ದ ಡೋಲು ಸ್ತಬ್ಧವಾಗಿ ಸೋಗೆ ಗುಡಿಸಲ ಮೂಲೆ ಸೇರಿದೆ.