ವಿರೋಧಪಕ್ಷಗಳೇ ಈಗ ಮಾಧ್ಯಮಗಳ ಹೊಣೆ ನಿಭಾಯಿಸಬೇಕಾಗಿದೆ!
ದಿಲ್ಲಿಯಲ್ಲಿ ಯಮುನೆ ಶುದ್ಧವಾಗಿದೆ ಎಂದು ತೋರಿಸುವ ದಿಲ್ಲಿ ಬಿಜೆಪಿ ಸರಕಾರದ ನಾಟಕ ಯಾರಿಂದ ಬಯಲಾಯಿತು ಎಂಬುದನ್ನು ಗಮನಿಸಿದರೆ, ಈ ದೇಶದ ಮಾಧ್ಯಮಗಳು ಹೇಗೆ ನೀತಿ ಮರೆತು ನಿಂತಿವೆ ಎಂಬುದೂ ಗೊತ್ತಾಗುತ್ತದೆ.
ಅದೆಷ್ಟೋ ಚಾನೆಲ್‌ಗಳು ಶುದ್ಧ ನೀರು ತುಂಬಿದ್ದ ಕೃತಕ ಕೊಳವನ್ನೇ ದಿಲ್ಲಿಯ ಯಮುನೆ ಎಂದು ತೋರಿಸಲು ನಿಂತಿದ್ದಾಗ, ಸತ್ಯ ಏನೆಂದು ಹೇಳಲು ಒಬ್ಬ ರಾಜಕೀಯ ನಾಯಕ ಬರಬೇಕಾಯಿತು.
ಎಎಪಿ ಮಾಜಿ ಸಚಿವ ಸೌರವ್ ಭಾರದ್ವಾಜ್ ದಿಲ್ಲಿಯ ಮಾಲಿನ್ಯ ಮತ್ತು ಯಮುನೆಯ ಕೊಳಕು ಎರಡನ್ನೂ ದೇಶದ ಎದುರು ತೆರೆದಿಟ್ಟರು. ಆದರೆ ಅದನ್ನು ನಿಜವಾಗಿಯೂ ಮಾಡಬೇಕಿದ್ದ ಪತ್ರಕರ್ತರು, ಈ ಅರಚಾಡುವ ಮೀಡಿಯಾಗಳು ಏಕೆ ಮಾಡುವ ಧೈರ್ಯ ತೋರಿಸಲಿಲ್ಲ ಎಂದು ಕೇಳಲೇಬೇಕಾಗುತ್ತದೆ.
ದಿಲ್ಲಿ ಸರಕಾರದ ಕೃತಕ ಕೊಳದ ಸುಳ್ಳಿನ ಕಂತೆಯ ಹಿಂದಿನ ಯಮುನೆಯ ನಿಜವಾದ ಅವಸ್ಥೆಯನ್ನು ಸೌರವ್ ಭಾರದ್ವಾಜ್ ಬಿಡಿಸಿಟ್ಟಾಗ, ಆ ಕೆಲಸವನ್ನು ಟಿವಿ ಚಾನೆಲ್‌ಗಳೇ ಮಾಡುವುದು ಸಾಧ್ಯವಿತ್ತು. ಆದರೆ ದಿಲ್ಲಿ ಸರಕಾರ ಸುಳ್ಳು ಹೇಳುತ್ತಿದೆ ಎಂದು ಯಾವ ಟಿವಿ ವಾಹಿನಿಯೂ ಸ್ಪಷ್ಟವಾಗಿ ಹೇಳಲಿಲ್ಲ.
ಈ ಕೊಳದಲ್ಲಿನ ನೀರು ಯಮುನೆಯಿಂದ ಬಂದದ್ದಲ್ಲ. ಅದನ್ನು ಸೋನಿಯಾ ವಿಹಾರ್‌ನಿಂದ ತರಲಾಗಿದೆ ಎಂಬುದನ್ನು ಸೌರವ್ ಭಾರದ್ವಾಜ್ ಹೇಳಬೇಕಾಯಿತು. ಅಲ್ಲದೆ, ಮಾಲಿನ್ಯ ಅಳತೆ ಸಾಧನವಿರುವ ಆನಂದ್ ವಿಹಾರ್‌ನಲ್ಲಿ ಟ್ರಕ್ ನೀರು ಸಿಂಪಡಿಸುತ್ತಿದೆ. ಮಾಲಿನ್ಯ ತಗ್ಗಿದೆ ಎಂದು ಬಿಂಬಿಸುವ ಕೆಲಸ ನಡೆದಿದೆ ಎಂಬುದನ್ನೂ ಸೌರವ್ ಭಾರದ್ವಾಜ್ ತೋರಿಸಿದರು.
ಇದೆಲ್ಲವೂ ಯಾವುದೇ ಮಾಧ್ಯಮಕ್ಕೂ ಮುಖ್ಯವಾಗಬೇಕಿದ್ದ ಪ್ರಶ್ನೆಯಾಗಿತ್ತು. ಸರಕಾರವೇ ಮಾಲಿನ್ಯ ಇಲ್ಲ ಎಂದು ತೋರಿಸಲು ಡೇಟಾ ತಿರುಚುವ ಕೆಲಸದಲ್ಲಿ ತೊಡಗಿದ್ದರೆ, ಅದಕ್ಕಿಂತ ದೊಡ್ಡ ವಂಚನೆ ಇನ್ನೇನಿದೆ? ಆದರೆ ಮಡಿಲ ಮೀಡಿಯಾ ಈ ವಂಚನೆಯ ವಿರುದ್ಧ ದನಿಯೆತ್ತಲೇ ಇಲ್ಲ.
ದುರಂತವೆಂದರೆ ಇಷ್ಟು ಬಣ್ಣಗೇಡಿಯಾದ ಬಳಿಕವೂ ಬಿಜೆಪಿಗೆ ಏನೂ ಅನ್ನಿಸುವುದಿಲ್ಲ. ಹಾಗೆಯೇ ಈ ಮಡಿಲ ಮೀಡಿಯಾಗಳಿಗೂ ಲಜ್ಜೆ ಖಂಡಿತ ಆಗುವುದಿಲ್ಲ.
ಮಡಿಲ ಮೀಡಿಯಾಗಳು ಸರಕಾರವನ್ನು ಪ್ರಶ್ನಿಸುವುದನ್ನೇ ಬಿಟ್ಟು ಬಹಳ ಕಾಲವಾಗಿದೆ. ಸತ್ಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನೇ ಜನರು ಕಳೆದುಕೊಂಡಿರುವಾಗ, ತಾವು ಹೇಳುವ ಸುಳ್ಳೇ ಸತ್ಯವಾಗುತ್ತದೆ ಎಂಬುದು ಸರಕಾರದಲ್ಲಿರುವವರಿಗೂ, ಈ ಮೀಡಿಯಾಗಳಿಗೂ ಖಾತ್ರಿಯಾಗಿಬಿಟ್ಟಿದೆ.
ಸರಕಾರದ ವಿರುದ್ಧ ನಿಲ್ಲುವುದು ಎಷ್ಟೋ ವಿರೋಧ ಪಕ್ಷಗಳ ನಾಯಕರಿಗೂ ಬೇಡವಾಗಿದೆ.
ಈಗ ಸೌರವ್ ಭಾರದ್ವಾಜ್ ಮಾಡುತ್ತಿರುವುದನ್ನೇ ಈ ಮೊದಲು ರಾಹುಲ್ ಗಾಂಧಿಯೂ ಮಾಡಿದ್ದಾರೆ. ರಾಹುಲ್ ಅದಾನಿಯ ಬಗ್ಗೆ ಮಾತನಾಡಿದರು. ಎಂದಿಗೂ ಮಡಿಲ ಮೀಡಿಯಾಗಳು ಅದರ ಬಗ್ಗೆ ಚರ್ಚೆ ಎತ್ತಲೇ ಇಲ್ಲ. ಕಡೆಗೆ ರಾಹುಲ್ ಮಡಿಲ ಮೀಡಿಯಾಗಳ ನಿಜಬಣ್ಣವನ್ನೇ ತೆರೆದಿಟ್ಟದ್ದೂ ಆಯಿತು. ಅಷ್ಟಾದರೂ ಮಡಿಲ ಮೀಡಿಯಾ ಸುಧಾರಿಸಲಿಲ್ಲ.
ರಾಹುಲ್ ಗಾಂಧಿ ಸ್ವತಃ ಜನರ ನಡುವೆ ಹೋಗುತ್ತಾರೆ. ವಿವಿಧ ವೃತ್ತಿಗಳ ಜನರ ಜೀವನವನ್ನು ಸ್ವತಃ ನೋಡುತ್ತಾರೆ. ಸತ್ಯ ಗ್ರಹಿಸಲು ಯತ್ನಿಸುತ್ತಾರೆ. ವಾಸ್ತವವಾಗಿ ಇದೆಲ್ಲವೂ ಮೀಡಿಯಾ ಗಳು, ಪತ್ರಕರ್ತರು ಮಾಡಬೇಕಿರುವ ಕೆಲಸ. ಆದರೆ ಅವರೆಲ್ಲ ಕರ್ತವ್ಯ ಮರೆತು ನಿಂತಿರುವಾಗ, ರಾಹುಲ್ ಥರದ ನಾಯಕರು ಪತ್ರಕರ್ತರ ಹೊಣೆಯೇನು ಎಂಬುದನ್ನು ತೋರಿಸಿದರು.
ಅಂಗಡಿಕಾರರ ಮೇಲೆ ಜಿಎಸ್‌ಟಿ ಪರಿಣಾಮವೇನು ಎಂದು ಮೀಡಿಯಾಗಳು ಹೇಳದೆ ಉಳಿದಾಗ, ರಾಹುಲ್ ಸ್ವತಃ ವ್ಯಾಪಾರಿಗಳ ಬಳಿ ತೆರಳಿ ವಾಸ್ತವ ತೆರೆದಿಟ್ಟರು. ಸಮಸ್ಯೆಗಳೇನು ಎನ್ನುವುದನ್ನು ಅವರು ತಮ್ಮ ಪ್ರಣಾಳಿಕೆಗಳಲ್ಲೂ ಹೇಳಿದರು.
ಇತ್ತೀಚೆಗೆ, ರಾಹುಲ್ ಗಾಂಧಿ ಬಿಹಾರದ ವಿದ್ಯಾರ್ಥಿಗಳ ಜೊತೆ ಮಾತಾಡಿದರು. ಬಿಹಾರ ಏಕೆ ಹಿಂದುಳಿದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಸರಕಾರಿ ಶಾಲೆಗಳ ಸ್ಥಿತಿಯೇನಿದೆ ಎಂದು ನೋಡಿದರು. ಉನ್ನತ ಶಿಕ್ಷಣದ ದುರವಸ್ಥೆಯನ್ನೂ ನೋಡಿದರು.ಆದರೆ ಮಡಿಲ ಮೀಡಿಯಾಗಳು ಮಾಡಿದ್ದೇನು?
ವಿರೋಧ ಪಕ್ಷಗಳು ಎಸ್‌ಐಆರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದವು. ಆಗಲೂ ಮಡಿಲ ಮೀಡಿಯಾ ಮೌನವಾಗಿತ್ತು.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳಿಂದಾಗಿ ಎರಡು ರಾಜ್ಯಗಳಲ್ಲಿ ಒಂದೇ ಹೆಸರು ಕಂಡುಬಂದದ್ದರ ಬಗ್ಗೆ ಮಮತಾ ಬ್ಯಾನರ್ಜಿ ಹೇಳಬೇಕಾಯಿತು. ಮತದಾರರ ಪಟ್ಟಿಯಲ್ಲಿನ ಅಕ್ರಮಗಳು ಹೇಗೆ ಪತ್ತೆಯಾಗುತ್ತಿವೆ ಎಂಬುದನ್ನು ವಿವರಿಸಬೇಕಾಯಿತು. ಕಡೆಗೆ, ಚುನಾವಣಾ ಆಯೋಗ ತಿದ್ದುಪಡಿಗಳನ್ನು ಮಾಡಬೇಕಾಯಿತು.
ಅದೇ ರೀತಿ, ದಿಲ್ಲಿ ಚುನಾವಣೆಯ ಸಮಯದಲ್ಲಿ ಎಎಪಿಯೇ ತನಿಖೆ ನಡೆಸಿತ್ತು. ಮತದಾರರ ಪಟ್ಟಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು. ಆದರೆ ಮಡಿಲ ಮೀಡಿಯಾ ಯಾವುದನ್ನೂ ಗಂಭೀರವಾಗಿ ವರದಿ ಮಾಡಲಿಲ್ಲ.
ಅದಕ್ಕೆ ಕಾಣುವುದೇನಿದ್ದರೂ, ಹಿಂದೂ-ಮುಸ್ಲಿಮ್ ಸಮಸ್ಯೆ.
ಮತಗಳ್ಳತನದ ಚರ್ಚೆಯ ಹೊತ್ತಲ್ಲೂ ಮಡಿಲ ಮೀಡಿಯಾಗಳಿಗೆ ಅದು ಮುಖ್ಯವಾಗದೇ ಹೋಯಿತು. ಕರ್ನಾಟಕದಲ್ಲಿ ಪ್ರತೀ ಮತದಾರರ ಹೆಸರನ್ನು ಅಳಿಸಲು 80 ರೂ. ಕೊಡಲಾಗಿದೆ ಎಂಬುದರ ಬಗ್ಗೆಯೂ ಮಡಿಲ ಮೀಡಿಯಾಗಳು ಹೆಚ್ಚು ಮಾತಾಡಲೇ ಇಲ್ಲ.
ಯಮುನಾ ನದಿಯ ಬಗ್ಗೆ ಸೌರವ್ ಭಾರದ್ವಾಜ್ ತೋರಿಸಿದ್ದು, ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಹೇಳಿರುವುದು ಮಹತ್ವದ ಘಟನೆಗಳಾಗಿವೆ.
ಮಹಾರಾಷ್ಟ್ರದಲ್ಲಿ ಆದಿತ್ಯ ಠಾಕ್ರೆ ಕೂಡ ಅದನ್ನೇ ಮಾಡುತ್ತಿದ್ದಾರೆ.ಮತಗಳ್ಳತನದ ವಿಷಯದ ಬಗ್ಗೆ ಅವರು ವಿವರವಾಗಿ ಮಾತನಾಡಿದ್ದಾರೆ.ಅಂದರೆ, ಪತ್ರಕರ್ತರು ತಮ್ಮ ಹೊಣೆ ಮರೆತಿರುವಾಗ, ವಿರೋಧ ಪಕ್ಷದ ನಾಯಕರು ದನಿಯೆತ್ತುತ್ತಿದ್ದಾರೆ.
ಒಂದು ಕಾಲದಲ್ಲಿ ಪ್ರತಿಯೊಂದು ಚಾನೆಲ್ ಮತ್ತು ಪತ್ರಿಕೆಗಳಲ್ಲಿ ರಾಜಕೀಯ ವರದಿಗಾರರು ಇರುತ್ತಿದ್ದರು. ಈಗ ಎಲ್ಲ ಪತ್ರಕರ್ತರೂ ರಾಜಕೀಯ ಮಾಡುತ್ತಿದ್ದಾರೆ ಮತ್ತು ವಿರೋಧ ಪಕ್ಷಗಳ ನಾಯಕರು ಪತ್ರಕರ್ತರ ಕೆಲಸ ಮಾಡುವ ಅನಿವಾರ್ಯತೆ ಬಂದಿದೆ. ಅವರು ಸರಕಾರದ ಸುಳ್ಳನ್ನು ಬಯಲಿಗೆ ತರುತ್ತಿದ್ದಾರೆ.
ರಾಹುಲ್ ಮತಗಳ್ಳತನದ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿ ಯಾವುದೇ ವೃತ್ತಿಪರ ಟಿವಿ ಚಾನೆಲ್ ಸ್ಕ್ರೀನ್ ಮೇಲೆ ವಿವರಿಸುವ ರೀತಿಗಿಂತಲೂ ಪರಿಣಾಮಕಾರಿಯಾಗಿದ್ದುದನ್ನು, ಪ್ರಬುದ್ಧವಾ ಗಿದ್ದುದನ್ನು ನೋಡಿದ್ದೇವೆ.
ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಆದಿತ್ಯ ಠಾಕ್ರೆ, ಸೌರವ್ ಭಾರದ್ವಾಜ್ ಅವರು ಇದನ್ನೆಲ್ಲಾ ಏಕೆ ಮಾಡಬೇಕಾಗಿದೆ?
ಏಕೆಂದರೆ, ನಿಜವಾಗಿಯೂ ಇದನ್ನೆಲ್ಲ ಮಾಡಬೇಕಿದ್ದ ಪತ್ರಕರ್ತರು, ಮಾಧ್ಯಮಗಳು ತಮ್ಮ ಕರ್ತವ್ಯ ಮರೆತಿರುವುದರಿಂದಾಗಿ ಈ ಅನಿವಾರ್ಯತೆ ತಲೆದೋರಿದೆ.
ಮಡಿಲ ಮೀಡಿಯಾಗಳು ಸಂಪೂರ್ಣವಾಗಿ ಬಿಜೆಪಿ ಸರಕಾರದ ರಕ್ಷಣೆಗೆ ಟೊಂಕ ಕಟ್ಟಿ ನಿಂತುಬಿಟ್ಟಿವೆ. ಸರಕಾರಕ್ಕೆ ಅವರು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ಸರಕಾರ ಹೇಳಿದ್ದನ್ನು ಯಥಾವತ್ ಒಪ್ಪಿಸುವುದನ್ನಷ್ಟೇ ಮಾಡುತ್ತವೆ. ಸತ್ಯವನ್ನು ಹೇಳಲಾರದೆ ಮಾಧ್ಯಮಗಳು ಮೌನವಾಗಿರುವಾಗ, ಅವುಗಳ ಜಾಗದಲ್ಲಿ ವಿರೋಧ ಪಕ್ಷಗಳು ಸತ್ಯಕ್ಕೆ ದನಿಯಾಗತೊಡಗಿವೆ.
ಈ ವಿರೋಧ ಪಕ್ಷಗಳು ತಾವು ಹೇಳಬೇಕಿರುವ ಸತ್ಯವನ್ನು ಜನರಿಗೆ ಮುಟ್ಟಿಸಲು ಮಡಿಲ ಮೀಡಿಯಾವನ್ನು ನೆಚ್ಚಿಕೊಂಡಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ಇವತ್ತಿನ ಸನ್ನಿವೇಶದಲ್ಲಿ ವಿರೋಧ ಪಕ್ಷಗಳಿಗೆ ಯಾವುದೇ ಮಾರ್ಗವಿಲ್ಲ. ಚುನಾವಣಾ ಆಯೋಗ ನಿಷ್ಪಕ್ಷಪಾತಿ ಎನ್ನಿಸದ ಸ್ಥಿತಿಯಿದೆ. ಪ್ರಶ್ನಿಸುವುದನ್ನೇ ದೇಶದ್ರೋಹ ಎನ್ನುವ, ಭಯ ಸೃಷ್ಟಿಸುವ ವಾತಾವರಣವಿದೆ.
ಮಡಿಲ ಮೀಡಿಯಾದ ಆ್ಯಂಕರ್‌ಗಳಂತೂ ಅಸಂಬದ್ಧತೆಗೇ ಮತ್ತೊಂದು ಹೆಸರು ಎನ್ನುವಂತಿದ್ದಾರೆ. ಬರೀ ಕಿರುಚಾಟ, ಸುಳ್ಳುಗಳ ಸದ್ದಷ್ಟೇ ಪತ್ರಿಕೋದ್ಯಮ ಎಂದುಕೊಂಡ ಮೂರ್ಖರ ಮತ್ತು ನಿರ್ಲಜ್ಜರ ಸಂತೆ ಅದಾಗಿದೆ.
ಒಂದಂತೂ ಸತ್ಯ. ಜನರು ಮಡಿಲ ಮೀಡಿಯಾಗಳನ್ನು ನಂಬುವುದಕ್ಕಿಂತ ವಿರೋಧ ಪಕ್ಷದ ನಾಯಕರ ವೀಡಿಯೊಗಳನ್ನು ಹೆಚ್ಚು ನಂಬುತ್ತಾರೆ.
ಪ್ರಜಾಸತ್ತೆಯಲ್ಲಿ ಅದರ ಒಂದು ಪ್ರಮುಖ ಸ್ತಂಭವನ್ನೇ ದುರ್ಬಲಗೊಳಿಸಲು ಸರಕಾರವೇ ನಿಂತುಬಿಟ್ಟಾಗ, ಮತ್ತದಕ್ಕೆ ಅದೇ ಪತ್ರಿಕೋದ್ಯಮದ ಮಂದಿಯೇ ನೆರವಾದಾಗ, ಪರ್ಯಾಯವೊಂದರ ಅನಿವಾರ್ಯತೆ ಖಂಡಿತ ಇದೆ ಮತ್ತದು ವಿರೋಧಪಕ್ಷಗಳ ರೂಪದಲ್ಲಿ ಮುಂದೆ ಬರುತ್ತಿದೆ.
ಮಾಧ್ಯಮಗಳು ವಿರೋಧಪಕ್ಷಗಳ ಪಾತ್ರ ವಹಿಸಿ, ಸರಕಾರವನ್ನು ಪ್ರಶ್ನಿಸಬೇಕು. ಆದರೆ ಹಾಗಾಗುತ್ತಿಲ್ಲ ಮತ್ತು ಅದಕ್ಕಾಗಿ ವಿರೋಧಪಕ್ಷಗಳೇ ಮಾಧ್ಯಮಗಳ ಜಾಗದಲ್ಲಿ ಬಂದು ಸರಕಾರವನ್ನು ಎದುರಿಸತೊಡಗಿವೆ.
ಇದು ಒಂದು ದೊಡ್ಡ ಬದಲಾವಣೆಯ ಸೂಚನೆಯೂ ಆಗಿರಬಹುದು.