×
Ad

ಪಿಎಚ್.ಡಿ. ಮಾರ್ಗದರ್ಶಕರ ಮಾನ್ಯತೆ ವಿಧಾನಕ್ಕೇ ಬೇಕಿದೆ ದೊಡ್ಡ ಸರ್ಜರಿ

Update: 2025-10-18 12:23 IST

ಭಾರತೀಯ ವಿಶ್ವವಿದ್ಯಾನಿಲಯಗಳು ಹಳೆಯ ಕಾಲದ ವ್ಯವಸ್ಥೆಯಿಂದ ದೂರ ಸರಿದು, ಕೌಶಲ್ಯ ಮತ್ತು ನೈತಿಕತೆ ಆಧಾರಿತ ಪಿಎಚ್.ಡಿ. ಮಾರ್ಗದರ್ಶಕರ ಆಯ್ಕೆ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಪಾರದರ್ಶಕ ಮತ್ತು ಕಠಿಣ ಮೌಲ್ಯಮಾಪನ, ತರಬೇತಿ, ಮೇಲ್ವಿಚಾರಣೆ ವ್ಯವಸ್ಥೆಯು ಹೊಣೆಗಾರಿಕೆಯುಳ್ಳ ಮತ್ತು ಸೃಜನಶೀಲ ಮಾರ್ಗದರ್ಶಕರ ಹೊಸ ಪೀಳಿಗೆಯನ್ನು ಬೆಳೆಸಬೇಕು. ಆಗ ಮಾತ್ರ ಭಾರತ ಜಾಗತಿಕ ಮಟ್ಟದ ಸಂಶೋಧನಾ ತಂಡವನ್ನು ನಿರ್ಮಾಣ ಮಾಡಲು ಸಾಧ್ಯ.

ಭಾರತೀಯ ವಿಶ್ವವಿದ್ಯಾನಿಲಯಗಳು ಪಿಎಚ್.ಡಿ. ಮಾರ್ಗದರ್ಶಕರ ಆಯ್ಕೆ ಪ್ರಕ್ರಿಯೆಯಲ್ಲಿ ತುರ್ತು ಸುಧಾರಣೆಗಳನ್ನು ತರಬೇಕಾಗಿದೆ ಎನ್ನುವ ಕೂಗು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಈಗ ಕೇಳಿಬರುತ್ತಿದೆ. ಏಕೆಂದರೆ ದೇಶದ ಸಂಶೋಧನಾ ಗುಣಮಟ್ಟ ಮತ್ತು ಪಿಎಚ್.ಡಿ. ಮಾರ್ಗದರ್ಶನದ ಸ್ಥಿತಿ ಇಂದು ಗಂಭೀರ ಚಿಂತನೆಯ ವಿಷಯವಾಗಿದೆ. ಭಾರತದ ಡಾಕ್ಟರಲ್ ಸಂಶೋಧನೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆ ದೇಶೀಯವಾಗಿಯೂ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶ್ನೆಗೆ ಒಳಗಾಗುತ್ತಿದೆ. ಇದರ ಮುಖ್ಯ ಕಾರಣಗಳಲ್ಲಿ ಒಂದು, ವಿವಿ/ಯುಜಿಸಿ ಪಿಎಚ್.ಡಿ. ಮಾರ್ಗದರ್ಶಕರ ನೇಮಕಾತಿ ಮತ್ತು ಮಾನ್ಯತೆ ನೀಡುವ ಕ್ರಮದಲ್ಲಿನ ದೋಷವಾಗಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ, ಮಾರ್ಗದರ್ಶಕನಾಗಲು ಕೇವಲ ಪಿಎಚ್.ಡಿ. ಪದವಿ ಹೊಂದಿರುವುದು, ಕೆಲವು ವರ್ಷಗಳ ಬೋಧನಾ ಅನುಭವ ಮತ್ತು ಕೆಲವು ಪ್ರಕಟಣೆಗಳಿರಬೇಕು ಎಂಬ ನಿಗದಿತ ಅಂಶಗಳು ಮಾತ್ರ ಪರಿಗಣಿಸಲಾಗುತ್ತವೆ. ಆದರೆ ಅವುಗಳ ಗುಣಮಟ್ಟ ಅಥವಾ ಪರಿಣಾಮವನ್ನು ಪರಾಮರ್ಶಿಸುವುದು ವಿರಳ. ಈ ರೀತಿಯ ಯಾಂತ್ರಿಕ ವಿಧಾನವು ನಿಜವಾದ ಸಂಶೋಧನಾ ಸಾಮರ್ಥ್ಯ, ನೈತಿಕ ಅರಿವು ಅಥವಾ ಮಾರ್ಗದರ್ಶನ ಕೌಶಲ್ಯವಿಲ್ಲದ ಅಣಬೆಗಳಂತೆ ವಿವಿಗಳಲ್ಲಿ ಮಾರ್ಗದರ್ಶಕರ ನೇಮಕಾತಿಗೆ ಕಾರಣವಾಗಿದೆ. ಪರಿಣಾಮವಾಗಿ, ಸಾವಿರಾರು ಸಂಶೋಧನಾ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನದ ಕೊರತೆ ಮತ್ತು ಕಳಪೆ ಗುಣಮಟ್ಟದ ಸಂಶೋಧನೆಗೆ ಕಾರಣವಾಗುತ್ತಿದ್ದಾರೆ. ಇದರಿಂದ ಪದವಿ ಪಡೆಯುವುದು ತಡವಾಗುತ್ತಿದೆ.

ಇತ್ತೀಚೆಗೆ ಭಾರತ ಸರಕಾರವು ವಿವಿಗಳ ಪಿಎಚ್.ಡಿ. ಮಾರ್ಗದರ್ಶಕರ ಮಾನ್ಯತೆ/ ಆಯ್ಕೆ ವಿಧಾನವನ್ನು ಮರುಪರಿಶೀಲಿಸಲು ವಿವಿಧ ಸಚಿವಾಲಯಗಳು ಮತ್ತು ಕೇಂದ್ರ ಇಲಾಖೆಗೆ ನಿರ್ದೇಶನಗಳನ್ನು ನೀಡಿದೆ. ಈ ಹೊಸ ಕ್ರಮವು ಪಿಎಚ್.ಡಿ. ಸಂಶೋಧನಾ ಕಾರ್ಯಕ್ರಮಗಳನ್ನು ಹೊಸ ತಂತ್ರಜ್ಞಾನಾಭಿವೃದ್ಧಿ, ನಾವೀನ್ಯತೆ ಮತ್ತು ಸಹಯೋಗಿ ಸಂಶೋಧನೆಯನ್ನು ಉತ್ತೇಜಿಸುವ ದಿಕ್ಕಿನಲ್ಲಿ ಪುನರ್‌ನಿರ್ದೇಶಿಸಲು ಉದ್ದೇಶಿಸಲಾಗಿದೆ. ಈ ಬದಲಾವಣೆಯನ್ನು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಹೊಸ ನಿರ್ದೇಶನಗಳು ಪಿಎಚ್.ಡಿ. ಆಯ್ಕೆ ಪ್ರಕ್ರಿಯೆ ಮತ್ತು ವಿಷಯ ಆಯ್ಕೆ ಕ್ರಮವನ್ನು ಪರಿಷ್ಕರಿಸಲು ತಿಳಿಸಲಾಗಿದೆ. ನಾವೀನ್ಯತೆಗೆ ಒತ್ತು ನೀಡಲು ಸೂಚಿಸಲಾಗಿದೆ. ಪಿಎಚ್.ಡಿ. ಕಾರ್ಯಕ್ರಮಗಳು ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು, ಆಲೋಚನೆಗಳು ಮತ್ತು ಸಂಶೋಧನಾ ದಿಕ್ಕುಗಳನ್ನು ಅಭಿವೃದ್ಧಿಪಡಿಸುವತ್ತ ಕೇಂದ್ರೀಕೃತವಾಗಿರಬೇಕು ಎಂದು ಇದೀಗ ಸರಕಾರ ಸೂಚಿಸಿದೆ. ಸಹಯೋಗಿ ಸಂಶೋಧನೆಗೆ ಉತ್ತೇಜನ ನೀಡಲು ಸಲಹೆ ನೀಡಿದೆ. ಹಲವು ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ಸೇರಿ ಕೆಲಸ ಮಾಡುವ ನೆಟ್ವರ್ಕ್ ಪ್ರಾಜೆಕ್ಟ್ ಸಿಸ್ಟಮ್ ಮಾದರಿಯನ್ನು ವಿವಿಗಳಿಗೆ ಪರಿಗಣಿಸುವಂತೆ ಸರಕಾರ ಹೇಳಿದೆ. ಇದರಡಿ ಸಂಯುಕ್ತ ಪಿಎಚ್.ಡಿ.ಗಳ ಮೂಲಕ ಹಲವು ಸಂಶೋಧಕರು ಮತ್ತು ಸಂಸ್ಥೆಗಳು ಒಂದೇ ಯೋಜನೆಯಲ್ಲಿ ಭಾಗವಹಿಸಲಿವೆ. ಈ ಮಾದರಿಯನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಹಯೋಗಿ ಸಂಶೋಧನಾ ವ್ಯವಸ್ಥೆಗಳಿಂದ ಪ್ರೇರಣೆ ಪಡೆದು ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಭಾರತದ ವಿವಿಗಳ ಪ್ರಸ್ತುತ ಮಾರ್ಗದರ್ಶಕರ ಅನುಮೋದನಾ ವ್ಯವಸ್ಥೆ ಬಹುತೇಕ ಪ್ರಮಾಣಾತ್ಮಕ ಮತ್ತು ಆಡಳಿತಾತ್ಮಕವಾಗಿದೆ, ಗುಣಾತ್ಮಕ ಅಥವಾ ಕೌಶಲ್ಯ ಆಧಾರಿತವಲ್ಲ. ಸಾಮಾನ್ಯವಾಗಿ ಯುಜಿಸಿ ನಿಯಮಾನುಸಾರ ವಿಶ್ವವಿದ್ಯಾನಿಲಯಗಳು ಇಲಾಖಾ ಸಮಿತಿಗಳು ಅಥವಾ ಅಧ್ಯಯನ ಮಂಡಳಿಗಳ ಮೂಲಕ ಮಾರ್ಗದರ್ಶಕರನ್ನು ಕಣ್ಣುಮುಚ್ಚಿಕೊಂಡು ಅನುಮೋದಿಸುತ್ತವೆ. ಆದರೆ ಯಾವುದೇ ಪಾರದರ್ಶಕ ಅಥವಾ ಸ್ವತಂತ್ರ ಮೌಲ್ಯಮಾಪನ ವ್ಯವಸ್ಥೆಯಿಲ್ಲ. ಆ ಮಾರ್ಗದರ್ಶಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಇದ್ದರೆ ಸಾಕು. ಇನ್ನೇನು ಬೇಡ. ನಾಲ್ಕು ಲೇಖನ ಮತ್ತು ಮೂರು ವರ್ಷದ ಅನುಭವ ಇದ್ದರೆ ಸಾಕು! ಶೈಕ್ಷಣಿಕವಾಗಿ ನಿಷ್ಕ್ರಿಯರಾದ ಹಿರಿಯರು ಅನೇಕ ವರ್ಷಗಳಿಂದ ಮಾರ್ಗದರ್ಶನ ಮುಂದುವರಿಸುತ್ತಾರೆ. ಈ ಹೊಣೆಗಾರಿಕೆ ಇಲ್ಲದ ವ್ಯವಸ್ಥೆಯು ಕೃತಿಚೌರ್ಯ, ಡೇಟಾ ತಿರುಚುವಿಕೆ, ಗೋಸ್ಟ್ ರೈಟಿಂಗ್ ಮತ್ತು ಡಾಕ್ಟರಲ್ ಪದವಿಗಳ ವ್ಯಾಪಾರೀಕರಣದಂತಹ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗಿದೆ.

ಪಿಎಚ್.ಡಿ. ಪದವಿ ಪಡೆದಿರುವುದೇ ಒಬ್ಬರನ್ನು ಉತ್ತಮ ಮಾರ್ಗದರ್ಶಕನನ್ನಾಗಿಸುವುದಿಲ್ಲ. ಹಲವರು ಶೈಕ್ಷಣಿಕವಾಗಿ ಅರ್ಹರಾದರೂ, ಸಂಶೋಧನಾ ವಿನ್ಯಾಸ, ಡೇಟಾ ವಿಶ್ಲೇಷಣೆ, ಲೇಖನ ಅಥವಾ ಹೊಸ ವಿಚಾರಗಳ ಸಂಶೋಧನೆ ಮತ್ತು ತರಬೇತಿ ನೀಡುವ ಸಾಮರ್ಥ್ಯವಿರುವುದಿಲ್ಲ. ಕೆಲವರು ಆಡಳಿತಾತ್ಮಕ ಕೆಲಸಗಳು ಅಥವಾ ಬೋಧನಾ ಹೊಣೆಗಾರಿಕೆಯಲ್ಲಿ ವಿವಿ ಪ್ರಾಧ್ಯಾಪಕರು ಮುಳುಗಿರುವುದರಿಂದ ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಯ ಕೊಡುವುದಿಲ್ಲ. ಕೆಲವರು ಪಿಎಚ್.ಡಿ. ಮಾರ್ಗದರ್ಶನವನ್ನು ಸೃಜನಾತ್ಮಕ ಮತ್ತು ಬೌದ್ಧಿಕ ಪ್ರಕ್ರಿಯೆಯೆಂದು ಕಾಣದೆ, ಕೇವಲ ರೂಢಿಯಂತೆ ನಡೆಸುತ್ತಾರೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಹಳೆಯ ವಿಷಯಗಳಲ್ಲಿ ಪದವಿಗಾಗಿ ಪಿಎಚ್.ಡಿ. ಮಾಡುತ್ತಾರೆ. ಹೊಸ ಜ್ಞಾನವನ್ನು ಇರದ ಪ್ರೌಢ ಪ್ರಬಂಧಗಳನ್ನು ಸಲ್ಲಿಸುತ್ತಾರೆ. ಇನ್ನೂ ಕೆಲವು ಮಾರ್ಗದರ್ಶಕರು ಅತಿಯಾಗಿ ಅನೇಕ ವಿದ್ಯಾರ್ಥಿಗಳನ್ನು ಒಮ್ಮೆಲೇ ಪಿಎಚ್.ಡಿ.ಗೆ ತೆಗೆದುಕೊಳ್ಳುವುದರಿಂದ, ತಾತ್ಸಾರ, ವಿಳಂಬ ಮಾರ್ಗದರ್ಶನ, ಸಮಯದ ಕೊರತೆ ಮತ್ತು ಪ್ರಬಂಧ ಪೂರ್ಣಗೊಳಿಸಲು ಅನವಶ್ಯಕ ವಿಳಂಬ ಉಂಟಾಗುತ್ತಿದೆ. ಕುಲಪತಿ/ಕುಲಸಚಿವರ ಅಡಿಯಲ್ಲಿನ ಸಂಶೋಧನಾ ವಿದ್ಯಾರ್ಥಿಗಳದ್ದು ನಾಯಿಪಾಡು ಎಂದರೂ ತಪ್ಪಲ್ಲ.

ಒತ್ತಡದಿಂದ ಇಂದು ಪಿಎಚ್.ಡಿ. ಮಾರ್ಗದರ್ಶನ ಗುಣಮಟ್ಟ ಕುಸಿದಿದೆ. ಮಾರ್ಗದರ್ಶಕರಾಗಲು ಅಗತ್ಯವಿರುವ ಕನಿಷ್ಠ ಪ್ರಕಟಣೆಗಳ ಪ್ರಮಾಣವನ್ನು ಪೂರೈಸುವ ಸಲುವಾಗಿ, ಕೆಲವು ಅಧ್ಯಾಪಕರು ಆತುರವಾಗಿ ಗುಣಮಟ್ಟ ಇರದ ಜರ್ನಲ್ಸ್‌ಗಳಲ್ಲಿ ರಾತ್ರೋರಾತ್ರಿ ಲೇಖನಗಳನ್ನು ಪ್ರಕಟಿಸುತ್ತಾರೆ. ನಿರಂತರ ಮೌಲ್ಯಮಾಪನದ ಕೊರತೆಯಿಂದ ಈ ರೀತಿಯ ಪ್ರಕಟಣೆಗಳು ಸಮಾಜಕ್ಕೆ ಯಾವುದೇ ಪರಿಣಾಮವಿಲ್ಲದೆ ಮುಂದುವರಿಯುತ್ತವೆ. ವಿದ್ಯಾರ್ಥಿಗಳಿಂದ ವೈಯಕ್ತಿಕ ಮಾರ್ಗದರ್ಶನ ಪಡೆಯುವ ವ್ಯವಸ್ಥೆಯೂ ವಿವಿಗಳಲ್ಲಿ ಇಲ್ಲ. ಈ ಎಲ್ಲಾ ಕೊರತೆಯಿಂದ ಕೆಲವರು ಸಂಶೋಧನಾ ಪರಿಣಾಮಕಾರಿತ್ವ ಅಥವಾ ನೈತಿಕತೆ ಕುರಿತು ಚಿಂತಿಸದೆ ದೀರ್ಘಾವಧಿಯವರೆಗೆ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಮಾಡುತ್ತಾರೆ. ಕೆಲ ವಿಧ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆಯಲು 7ರಿಂದ 9 ವರ್ಷ ತೆಗೆದುಕೊಳ್ಳುತ್ತಾರೆ. ಕೆಲ ವಿದ್ಯಾರ್ಥಿಗಳು ಮಾರ್ಗದರ್ಶಕರಿಗೆ ಲಂಚ ನೀಡುವ ಆರೋಪ ಕೂಡ ಮಾಡಿದ್ದಾರೆ.

ಆದ್ದರಿಂದ ಪಿಎಚ್.ಡಿ. ಶಿಕ್ಷಣದ ಪ್ರಾಮಾಣಿಕತೆ ಮತ್ತು ಗುಣಮಟ್ಟವನ್ನು ಪುನಃಸ್ಥಾಪಿಸಲು ಸುಧಾರಣೆಗಳು ಅತ್ಯಗತ್ಯ. ವಿವಿಗಳಲ್ಲಿ ಮಾರ್ಗದರ್ಶಕರ ಆಯ್ಕೆ ಸಂಪೂರ್ಣವಾಗಿ ಪಾರದರ್ಶಕ, ಕೌಶಲ್ಯಾಧಾರಿತ ಮತ್ತು ಮೆರಿಟ್ ಆಧಾರಿತವಾಗಿರಬೇಕು. ಯುಜಿಸಿ/ವಿಶ್ವವಿದ್ಯಾನಿಲಯಗಳು ಪ್ರಾಧ್ಯಾಪಕರ ಅಕಾಡಮಿಕ್ ದಾಖಲೆ, ಪ್ರಕಟಣೆಗಳು ಸಂಶೋಧನಾ ಪ್ರಭಾವ, ಮಾರ್ಗದರ್ಶನ ಸಾಮರ್ಥ್ಯ ಮತ್ತು ನೈತಿಕತೆಗಳನ್ನು ಪರಿಗಣಿಸಬೇಕು. ಮಾರ್ಗದರ್ಶಕ ಮಾನ್ಯತೆ ಅವಧಿಗತವಾಗಿರಬೇಕು. ಉದಾಹರಣೆಗೆ ಐದು ವರ್ಷಗಳ ಕಾಲಾನಂತರ ಕಾರ್ಯಕ್ಷಮತೆಯ ಆಧಾರದ ಮೇಲೆ ನವೀಕರಿಸಬೇಕು. ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಪೂರ್ಣಗೊಂಡ ಪ್ರಬಂಧಗಳ ಗುಣಮಟ್ಟ, ಪ್ರಕಟಿತ ಲೇಖನಗಳ ಮಟ್ಟ ಮತ್ತು ಅದರಿಂದ ಸಮಾಜಕ್ಕೆ ಆದ ಉಪಯುಕ್ತ ಅಂಶಗಳನ್ನು ಒಳಗೊಂಡಿರಬೇಕು.

ಮಾರ್ಗದರ್ಶಕರನ್ನಾಗಿ ನೇಮಕಮಾಡುವ ಮೊದಲು, ಬೋಧಕರು ಸಂಶೋಧನಾ ವಿಧಾನಶಾಸ್ತ್ರ, ನೈತಿಕತೆ, ಡೇಟಾ ನಿರ್ವಹಣೆ ಮತ್ತು ಮಾರ್ಗದರ್ಶನ ತಂತ್ರಗಳ ಕುರಿತು ಕಡ್ಡಾಯ ಮತ್ತು ನಿರಂತರ ತರಬೇತಿ ಪಡೆಯಬೇಕು. ಯುಜಿಸಿ ಅಥವಾ ನ್ಯಾಕ್ ಈ ತರಬೇತಿಯನ್ನು ಕಡ್ಡಾಯಗೊಳಿಸಬೇಕು. ಅದೇ ಸಮಯದಲ್ಲಿ, ವಿದ್ಯಾರ್ಥಿ-ಮಾರ್ಗದರ್ಶಕ ಅನುಪಾತವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು, ಏಕೆಂದರೆ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದಾಗ ಗುಣಮಟ್ಟಕ್ಕೆ ಹಾನಿಯಾಗುತ್ತದೆ. ಇರಾನ್ ದೇಶದ ವಿವಿಗಳಲ್ಲಿ ಒಬ್ಬ ಪಿಎಚ್.ಡಿ. ಒಮ್ಮೆಲೆ ಇಬ್ಬರಿಗೆ ಮಾತ್ರ ಮಾರ್ಗದರ್ಶಕರಾಗಲು ಸಾಧ್ಯ. ಭಾರತದ ವಿವಿಗಳಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಒಬ್ಬರೇ ಮಾರ್ಗದರ್ಶಕರಿರುತ್ತಾರೆ!

ವಿವಿಗಳು ಪ್ರತೀ ಪಿಎಚ್. ಡಿ. ವಿದ್ಯಾರ್ಥಿಗೆ ಸ್ವತಂತ್ರ ಸಂಶೋಧನಾ ಸಲಹಾ ಸಮಿತಿಯನ್ನು ಸ್ಥಾಪಿಸಬೇಕು. ಈ ಸಮಿತಿಯಲ್ಲಿ ಕನಿಷ್ಠ ಒಬ್ಬ ಹೊರಗಿನ ತಜ್ಞನಿರಬೇಕು ಮತ್ತು ಅದು ವಿದ್ಯಾರ್ಥಿಯ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಿವಾದಗಳು ಅಥವಾ ನಿರ್ಲಕ್ಷ್ಯದ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಮಾರ್ಗದರ್ಶಕರ ಏಕಾಧಿಕಾರವನ್ನು ಕಡಿಮೆಗೊಳಿಸುತ್ತದೆ. ಇತರೆಯಾಗಿ, ಪ್ರಗತಿ ವರದಿಗಳು, ಮಧ್ಯಂತರ ಮೌಲ್ಯಮಾಪನಗಳು ಮತ್ತು ಪ್ರಸ್ತುತಿಗಳು ಕಡ್ಡಾಯವಾಗಬೇಕು. ಅಂತರ್‌ಶಿಸ್ತಿನ ಸಂಶೋಧನೆಗೆ ಮಾರ್ಗದರ್ಶಕರು ಹೆಚ್ಚು ಗಮನ ಕೊಡಬೇಕು.

ಮಾರ್ಗದರ್ಶಕರ ನೈತಿಕ ಹೊಣೆಗಾರಿಕೆಯನ್ನು ಪರಿಚಯಿಸುವುದು ಸಹ ಮುಖ್ಯ. ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಗಳು ಇಬ್ಬರಿಗೂ ಸಂಶೋಧನಾ ನೈತಿಕತೆ ಬಗ್ಗೆ ಅರಿವಿರಬೇಕು. ಮಾರ್ಗದರ್ಶಕರು ಸಂಶೋಧನಾ ನೈತಿಕ ಉಲ್ಲಂಘನೆ ಅಥವಾ ನಿರ್ಲಕ್ಷ್ಯದಲ್ಲಿ ತಪ್ಪಿತಸ್ಥರಾದರೆ ವಿವಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಪುನಃ ಪುನಃ ತಪ್ಪು ಮಾಡಿದರೆ ಅವರ ಮಾರ್ಗದರ್ಶನ ಹಕ್ಕು ರದ್ದಾಗಬೇಕು. ಉತ್ತಮ ಮಾರ್ಗದರ್ಶಕರಿಗೆ ಪ್ರಶಸ್ತಿ ಅಥವಾ ಗೌರವ ನೀಡುವ ವ್ಯವಸ್ಥೆ ಇರಬೇಕು. ಇದರಿಂದ ಮಾರ್ಗದರ್ಶಕರಿಗೆ ಪ್ರೋತ್ಸಾಹ ದೊರೆಯುತ್ತದೆ. ಯುಜಿಸಿ, ಎಐಸಿಟಿಇ ಮತ್ತು ನ್ಯಾಕ್ ಮುಂತಾದ ರಾಷ್ಟ್ರೀಯ ನಿಯಂತ್ರಣ ಸಂಸ್ಥೆಗಳು ಈ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಯುಜಿಸಿ ರಾಷ್ಟ್ರ ಮಟ್ಟದ ಮಾನ್ಯ ಮಾರ್ಗದರ್ಶಕರ ಪಟ್ಟಿಯನ್ನು(ಪಾಕಿಸ್ತಾನದ ಯುಜಿಸಿ ಮಾದರಿಯಲ್ಲಿ) ನೈತಿಕತೆ, ಸಂಶೋಧನಾ ಗುಣಮಟ್ಟ ಮತ್ತು ಮಾರ್ಗದರ್ಶನ ಅನುಭವದ ಆಧಾರದ ಮೇಲೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ನ್ಯಾಕ್ ತಂಡಗಳು ಪಿಎಚ್.ಡಿ. ಕಾರ್ಯಕ್ರಮಗಳ ಮೌಲ್ಯಮಾಪನದಲ್ಲಿ ಮಾರ್ಗದರ್ಶಕರ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಒಳಗೊಳ್ಳಬೇಕು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯ ಮತ್ತು ಕೆನಡಾ ದೇಶಗಳು ಈ ವಿಚಾರಗಳಲ್ಲಿ ಮಾದರಿಯಾಗಿವೆ. ಅಲ್ಲಿ ಪಿಎಚ್.ಡಿ. ಮಾರ್ಗದರ್ಶಕರಾಗಿ ಮಾನ್ಯತೆ ಪಡೆಯುವ ಮೊದಲು ಶಿಕ್ಷಕರು ತರಬೇತಿ ಮತ್ತು ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಪಿಎಚ್.ಡಿ. ವಿದ್ಯಾರ್ಥಿಗಳಿಂದ ಪ್ರತಿವರ್ಷ ಮಾರ್ಗದರ್ಶನದ ಅನುಭವದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ ಮತ್ತು ಫಲಿತಾಂಶದ ಆಧಾರದ ಮೇಲೆ ಗೈಡ್‌ಗಳ ಮಾನ್ಯತೆ ನವೀಕರಿಸಲಾಗುತ್ತದೆ. ಇದರಿಂದ ಭಾರತವೂ ಈ ಮಾದರಿಯನ್ನು ತನ್ನ ಶೈಕ್ಷಣಿಕ ಪರಿಸರಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು.

ಒಟ್ಟಿನಲ್ಲಿ, ಪಿಎಚ್.ಡಿ. ಮಾರ್ಗದರ್ಶಕರ ಆಯ್ಕೆ ಮತ್ತು ನಿಯಂತ್ರಣ ವ್ಯವಸ್ಥೆಯ ಸುಧಾರಣೆ ಕೇವಲ ಆಡಳಿತಾತ್ಮಕ ಕ್ರಮವಲ್ಲ, ಅದು ಬೌದ್ಧಿಕ ಮತ್ತು ನೈತಿಕ ಅಂಶವಾಗಿದೆ. ಸಂಶೋಧನೆ ರಾಷ್ಟ್ರದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪ್ರಗತಿಯ ಬೆನ್ನೆಲುಬು. ಸಮರ್ಥ ಮತ್ತು ನೈತಿಕ ಮಾರ್ಗದರ್ಶನವಿಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ತಮ್ಮ ಸಾಮರ್ಥ್ಯ ತೋರಲು ಸಾಧ್ಯವಿಲ್ಲ. ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಭಾರತದ ವಿಶ್ವವಿದ್ಯಾನಿಲಯಗಳ ಖ್ಯಾತಿ ಹಾಳಾಗಿದ್ದು, ಯುವ ಸಂಶೋಧಕರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪಿಎಚ್.ಡಿ. ಮಾರ್ಗದರ್ಶನವನ್ನು ಹಿರಿತನ ಅಥವಾ ಅನುಕೂಲತೆಯ ಆಧಾರದ ಮೇಲೆ ಅಲ್ಲ, ಸಂಶೋಧನಾ ಕೌಶಲ್ಯ, ನೈತಿಕತೆ ಮತ್ತು ಹೊಣೆಗಾರಿಕೆಯ ಆಧಾರದ ಮೇಲೆ ನೀಡುವ ಮೂಲಕ ಭಾರತವು ಉನ್ನತ ಸಂಶೋಧನೆಯಲ್ಲಿ ನಂಬಿಕೆಯನ್ನು ಪುನರ್‌ಸ್ಥಾಪಿಸಬಹುದು.

ಭಾರತೀಯ ವಿಶ್ವವಿದ್ಯಾನಿಲಯಗಳು ಹಳೆಯ ಕಾಲದ ವ್ಯವಸ್ಥೆಯಿಂದ ದೂರ ಸರಿದು, ಕೌಶಲ್ಯ ಮತ್ತು ನೈತಿಕತೆ ಆಧಾರಿತ ಪಿಎಚ್.ಡಿ. ಮಾರ್ಗದರ್ಶಕರ ಆಯ್ಕೆ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಪಾರದರ್ಶಕ ಮತ್ತು ಕಠಿಣ ಮೌಲ್ಯಮಾಪನ, ತರಬೇತಿ, ಮೇಲ್ವಿಚಾರಣೆ ವ್ಯವಸ್ಥೆಯು ಹೊಣೆಗಾರಿಕೆಯುಳ್ಳ ಮತ್ತು ಸೃಜನಶೀಲ ಮಾರ್ಗದರ್ಶಕರ ಹೊಸ ಪೀಳಿಗೆಯನ್ನು ಬೆಳೆಸಬೇಕು. ಆಗ ಮಾತ್ರ ಭಾರತ ಜಾಗತಿಕ ಮಟ್ಟದ ಸಂಶೋಧನಾ ತಂಡವನ್ನು ನಿರ್ಮಾಣ ಮಾಡಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಡಿ.ಸಿ. ನಂಜುಂಡ

contributor

Similar News