×
Ad

ಭಾಷೆಯ ರಾಜಕೀಯ!

Update: 2025-03-04 12:17 IST

ಮನುಷ್ಯನ ವಿಕಾಸದೊಂದಿಗೇ ಭಾಷೆಯ ಬೆಳವಣಿಗೆಯೂ ಆಗಿದೆ. ಇದು ಲಕ್ಷಾಂತರ ವರ್ಷಗಳಿಂದ ನಡೆದುಬಂದ ಪ್ರಕ್ರಿಯೆ. ಇದರಿಂದಾಗಿ ಪರಸ್ಪರ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಯಿತು.

ಕಾಲಾನಂತರದಲ್ಲಿ ಭಾಷೆ, ಅಭಿವೃದ್ಧಿಯ ವೇಗಕ್ಕೆ ಅನುಗುಣವಾಗಿ, ಸಂವಹನವನ್ನು ಸುಲಭಗೊಳಿಸಿತು.

ಆದರೆ ರಾಜಕೀಯ ಎಲ್ಲ ರಂಗಗಳನ್ನೂ ಆವರಿಸುವಾಗ, ಭಾಷೆಯೂ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸುವುದು ಸಾಧ್ಯವಾಗಿಲ್ಲ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘‘ಹಿಂದಿ ಭಾಷೆ ಎಷ್ಟು ಭಾರತೀಯ ಭಾಷೆಗಳನ್ನು ನುಂಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?’’ ಎಂಬ ಪ್ರಶ್ನೆಯನ್ನು ತಮ್ಮ ಟ್ವೀಟ್‌ನಲ್ಲಿ ಎತ್ತಿದ್ದಾರೆ.

ಗರ್ಹ್ವಾಲಿ, ಕುಮಾವಾನಿ, ಮಗಾಹಿ, ಅವಧಿ, ಮೈಥಿಲಿ, ಭೋಜ್‌ಪುರಿ, ಬ್ರಜ್, ಬುಂಡೇಲಿ, ಇತ್ಯಾದಿ ಸ್ಥಳೀಯ ಭಾಷೆಗಳನ್ನು ಅವರು ಉಲ್ಲೇಖಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಪ್ರಸಕ್ತ ತಮಿಳುನಾಡಿಗೆ ರೈಸಿಂಗ್ ಇಂಡಿಯಾ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಶಾಲೆಗಳಲ್ಲಿ ಸಮಗ್ರ ಶಿಕ್ಷಾ ನೀತಿಯನ್ನು ಅನುಷ್ಠಾನಗೊಳಿಸಲು 2,152 ಕೋಟಿ ರೂ.ಗಳನ್ನು ತಡೆಹಿಡಿದಿದೆ.

ಸಮಗ್ರ ಶಿಕ್ಷಾ ಅಭಿಯಾನದಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ನಿಯಮದ ಕಡ್ಡಾಯ ಹೇರಿಕೆಯನ್ನು ತಮಿಳುನಾಡು ಸರಕಾರ ಒಪ್ಪಿಕೊಳ್ಳಲು ಬಯಸುವುದಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ನಿಯಮದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿ ಮೂರು ಭಾಷೆಗಳನ್ನು ಕಲಿಯಬೇಕು ಎಂದಿದೆ. ಎರಡು ಭಾರತೀಯ ಭಾಷೆಗಳಲ್ಲಿ ಒಂದು ಸ್ಥಳೀಯ ಭಾಷೆಯೂ ಆಗಿರಬಹುದು ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಕಡ್ಡಾಯವಾಗಿದೆ.

ಭಾರತೀಯ ಭಾಷೆಗಳಲ್ಲಿ ಹಿಂದಿ ಭಾಷೆಯನ್ನು ನಿರ್ದಿಷ್ಟವಾಗಿ ಹೆಸರಿಸಲಾಗಿಲ್ಲ.

ಭವಿಷ್ಯದಲ್ಲಿ ಹಿಂದಿಯ ಅನಿವಾರ್ಯತೆಯ ಬಗ್ಗೆ ಪ್ರತಿಭಟನೆಯ ಧ್ವನಿಗಳು ಎದ್ದಿವೆ. ಈ ಪ್ರತಿಭಟನೆಯಿಂದಾಗಿ, ತಮಿಳುನಾಡಿನ ರೈಲು ನಿಲ್ದಾಣದಲ್ಲಿ ಬೋರ್ಡ್‌ನಲ್ಲಿ ಬರೆಯಲಾದ ಹಿಂದಿ ಪದಗಳ ಮೇಲೆ ಕಪ್ಪು ಬಣ್ಣ ಬಳಿದಿದೆ.ಅಲ್ಲಿ ಹಿಂದಿ ಭಾಷೆಯ ವಿರುದ್ಧ ಕಠೋರ ನಿಲುವು ವ್ಯಕ್ತವಾಗುತ್ತಿದೆ.

ಈಗ ಮತ್ತೊಂದು ರಾಜಕೀಯ ಉದಾಹರಣೆ ನಮ್ಮ ಮುಂದಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಉರ್ದು ಭಾಷೆಯ ವಿರುದ್ಧ ಕಠೋರ ನಿಲುವು ವ್ಯಕ್ತಪಡಿಸಿದ್ದಾರೆ.

ಈ ಜನರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಾರೆ ಮತ್ತು ಸರಕಾರ ಇತರರ ಮಕ್ಕಳಿಗೆ ಆ ಸೌಲಭ್ಯ ಒದಗಿಸಲು ಬಯಸಿದರೆ, ಉರ್ದು ಕಲಿಸಿ ಎಂದು ಹೇಳುತ್ತಾರೆ, ಉರ್ದು ಕಲಿಸಿ, ಮಕ್ಕಳನ್ನು ಮೌಲ್ವಿಗಳನ್ನಾಗಿ ಮಾಡಲು ನೋಡುತ್ತಾರೆ ಎಂದು ಎಸ್‌ಪಿ ವಿರುದ್ಧ ಆದಿತ್ಯನಾಥ್ ಹರಿಹಾಯ್ದಿದ್ದಾರೆ.

ನಿಜವೇನೆಂದರೆ, ಕೋಮುವಾದ ಉರ್ದುವಿನ ಕೊಡುಗೆಯಲ್ಲ. ಉರ್ದು ಭಾಷೆಯನ್ನು ಕಲಿಯುವುದರಿಂದ ಯಾರೂ ಮೌಲ್ವಿಯಾಗುವುದಿಲ್ಲ. ಹಾಗೆಯೇ, ಸಂಸ್ಕೃತವನ್ನು ಕಲಿಯುವುದರಿಂದ ಯಾರೂ ಪುರೋಹಿತರಾಗುವುದಿಲ್ಲ.

ಹೀಗೆ ಭಾಷೆಯನ್ನು ಸಾಂಪ್ರದಾಯಿಕತೆಗೆ ಸೀಮಿತಗೊಳಿಸುವ ರಾಜಕೀಯದಲ್ಲಿ ಇರುವುದು ಮೂರ್ಖತನ ಮತ್ತು ಕೋಮುವಾದ.

ಕೋಮುವಾದಿ ಚಿಂತನೆ ಹಿಂದಿ, ಉರ್ದು ಅಥವಾ ಇಂಗ್ಲಿಷ್‌ನಿಂದ ಹುಟ್ಟುವುದಿಲ್ಲ, ಬದಲಿಗೆ ಹಿಂದೂ ಮತ್ತು ಮುಸ್ಲಿಮ್ ಕೋಮುವಾದ ಹಿಂದಿ ಮತ್ತು ಉರ್ದುವನ್ನು ಹತಾರವನ್ನಾಗಿ ಮಾಡಿಕೊಂಡಿತು ಮತ್ತು ಅದೇ ರೀತಿಯಲ್ಲಿ ಬಳಸಿತು.

ದೀರ್ಘಕಾಲದಿಂದ, ಹಿಂದಿ ಮತ್ತು ಉರ್ದುವನ್ನು ಬೇರ್ಪಡಿಸಲು ವ್ಯರ್ಥ ಪ್ರಯತ್ನ ನಡೆಯುತ್ತಿದೆ.

ಇಲ್ಲಿ ಉರ್ದು ಭಾಷೆಯ ಬಗೆಗಿನ ಕಠೋರ ನಿಲುವಿಗೆ ಸೌಮ್ಯವಾದ ಧ್ವನಿಯಲ್ಲಿ ಪ್ರತಿಭಟನೆಯ ಧ್ವನಿಗಳು ಎದ್ದವು. ಅದು ಕೇವಲ ಭಾಷೆಯ ವಿಷಯವಾಗಿತ್ತು. ಆದರೆ ರಾಜಕೀಯ ಅದಕ್ಕೆ ಧಾರ್ಮಿಕ ಬಣ್ಣವನ್ನು ನೀಡಿತು.

ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡ ಮತ್ತೊಂದು ಭಾಷೆ ಇತ್ತು.

ಇಂಗ್ಲಿಷ್ ಭಾಷೆ ಹೊರಗಿನಿಂದ ಬಂತು.

ಕಾಲ ಕಳೆದಂತೆ, ಅಧಿಕೃತವಾಗಿ ಎಲ್ಲಾ ಸಂದರ್ಭಗಳಲ್ಲಿ ದೇವನಾಗರಿ ಹಿಂದಿಗಿಂತ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡಲಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.

ಶಿಕ್ಷಣ ಸಂಸ್ಥೆಗಳಲ್ಲಿ, ಎಲ್ಲಾ ಸಂದರ್ಭಗಳಲ್ಲಿ ಇಂಗ್ಲಿಷ್ ಅನ್ನು ಕಲಿಸಲಾಗುತ್ತಿತ್ತು ಮತ್ತು ಅಧ್ಯಯನ ಮಾಡಲಾಗುತ್ತಿತ್ತು. ಮಾತನಾಡುವ ಭಾಷೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಯಿತು. ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಮಾತನಾಡುವುದನ್ನು ನೋಡಿ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಾಲೆಗಳಲ್ಲಿ ಶಿಕ್ಷಣ ನೀಡುವುದು ಸೂಕ್ತವೆಂದು ಪರಿಗಣಿಸುತ್ತಾರೆ.

‘ಇಂಡಿಯನ್ ಎಕ್ಸ್‌ಪ್ರೆಸ್’ನ 2021ರ ವರದಿ 18,000 ಸೀಟುಗಳಿಗೆ ಸುಮಾರು 6,00,000 ಅರ್ಜಿಗಳು ಬಂದಿದ್ದರ ಬಗ್ಗೆ ಹೇಳುತ್ತದೆ.

ಇದು ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಲಭ್ಯವಿರುವ ಸಂಖ್ಯೆಯ ಮೂರು ಪಟ್ಟು ಹೆಚ್ಚು.

ಹಳೆಯ ವರದಿಯ ಪ್ರಕಾರ, ಭಾರತದಲ್ಲಿ ಶೇ. 42ರಷ್ಟು ಮಕ್ಕಳು ಹಿಂದಿ ಮಾಧ್ಯಮದಲ್ಲಿ ಮತ್ತು ಶೇ. 26ರಷ್ಟು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಒಂದು ಲೇಖನದ ಪ್ರಕಾರ, ಶಿಕ್ಷಣದಲ್ಲಿ ಭಾಷೆಯ ಕುರಿತಾದ ಚರ್ಚೆ ಇಂದಿನದ್ದಲ್ಲ. ಬದಲಾಗಿ ನಮ್ಮ ದೇಶದ ಮೊದಲ ಶಿಕ್ಷಣ ತಜ್ಞ ಮತ್ತು ನಂತರ ಭಾರತದ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕಾಲದಲ್ಲೂ ನಡೆದಿತ್ತು ಎಂದು ಅದು ವಿವರಿಸುತ್ತದೆ.

ರಾಧಾಕೃಷ್ಣನ್ ಆಯೋಗ ಹಿಂದಿ ಅಥವಾ ಹಿಂದೂಸ್ತಾನಿಯನ್ನು ಭಾರತದ ಫೆಡರಲ್ ಭಾಷೆಯಾಗಿ ಬೆಂಬಲಿಸಿತ್ತು. ಇದನ್ನು ಎಲ್ಲಾ ಆಡಳಿತ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಮತ್ತು ಪ್ರಾದೇಶಿಕ ಭಾಷೆಗಳು ಆಯಾ ಪ್ರಾಂತಗಳಲ್ಲಿ ಮುಖ್ಯವಾಗುತ್ತವೆ.

ಇಂಗ್ಲಿಷ್ ಅನ್ನು ತಕ್ಷಣವೇ ತ್ಯಜಿಸುವುದು ಅಪ್ರಾಯೋಗಿಕ ಎಂದು ಆಯೋಗ ಆ ಸಮಯದಲ್ಲಿ ನಂಬಿತ್ತು.

ಎಲ್ಲಾ ಪ್ರಾಂತಗಳು ಬದಲಾವಣೆಗೆ ಸಿದ್ಧವಾಗುವವರೆಗೆ ಮತ್ತು ಅವರ ಫೆಡರಲ್ ಭಾಷೆಯನ್ನು ಸಾಕಷ್ಟು ಹರಡುವವರೆಗೆ ಇಂಗ್ಲಿಷ್ ಬಳಕೆ ಮುಂದುವರಿಯಬೇಕಾಗುತ್ತದೆ ಎಂದಿತ್ತು.

2011ರ ಜನಗಣತಿಯ ಪ್ರಕಾರ, ಭಾರತದಲ್ಲಿ 120 ಭಾಷೆಗಳು ಮತ್ತು 270 ಮಾತೃಭಾಷೆಗಳಿವೆ.

ಜಾಗತಿಕ ವೇದಿಕೆಯಲ್ಲಿ ವ್ಯವಹಾರ ನಿರ್ವಹಿಸಲು ಭಾರತ ತನ್ನದೇ ಆದ ಭಾಷೆಗಳ ಬದಲು ಇಂಗ್ಲಿಷ್ ಅನ್ನು ಅಳವಡಿಸಿಕೊಂಡಿತು. ಆದರೆ ದೇಶದಲ್ಲಿನ ಜನರು ತಮ್ಮದೇ ಆದ ಭಾಷೆಗಳಲ್ಲಿ ರಾಜಕೀಯವನ್ನು ನೋಡುತ್ತಿದ್ದಾರೆ.

ಉರ್ದು ರಾಜಕೀಯ ಚರ್ಚೆಗೆ ಕಾರಣವಾಯಿತು. ಹಿಂದಿ ಹಿಂದೂಗಳ ಭಾಷೆಯಾಯಿತು. ದಕ್ಷಿಣ ಭಾರತದಲ್ಲಿ ಹಿಂದಿಯ ಅಗತ್ಯವನ್ನು ಅನುಮಾನಿಸುವುದು ರಾಷ್ಟ್ರವಿರೋಧಿ ವಿಷಯವಾಯಿತು.

ಬೆಂಗಳೂರಿನಲ್ಲಿ, ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರರೊಬ್ಬರು ಹಿಂದಿ ಬಳಸುತ್ತಿದ್ದುದನ್ನು ವಿರೋಧಿಸಿ, ಕನ್ನಡ ಕಲಿಯದೆ ಬೆಂಗಳೂರಿಗೆ ಬರಬೇಡಿ ಎಂದಿದ್ದಾರೆ.

ಆ ಮನವಿಯ ಕುರಿತು ಪ್ರಾರಂಭವಾದ ಚರ್ಚೆ ದೇಶದ ಭಾಷೆಗಳ ನಡುವೆ ಬೆಳೆದಿರುವ ಬಿರುಕುಗಳನ್ನು ಸ್ಪಷ್ಟವಾಗಿ ತೋರಿಸಿದೆ.

ರಾಜಕೀಯ ಮೊದಲು ಜನರನ್ನು ಬಣ್ಣಗಳ ಆಧಾರದ ಮೇಲೆ ಮತ್ತು ಧರ್ಮದ ಹೆಸರಿನಲ್ಲಿ ವಿಭಜಿಸಿತು ಮತ್ತು ಈಗ ಭಾಷೆಗಳ ವಿಭಜನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ಏಕೈಕ ಫಲಾನುಭವಿಗಳು ರಾಜಕಾರಣಿಗಳು.

ಹಿಂದಿ ಭಾಷಿಕರು ತಮ್ಮ ಭಾಷೆಯ ಬಗ್ಗೆ ಹೆಮ್ಮೆಪಡುವಷ್ಟೇ, ತಮಿಳು, ತೆಲುಗು, ಮರಾಠಿ ಭಾಷಿಕರು ಹೆಮ್ಮೆಪಡುತ್ತಾರೆ. ಹಾಗೆಯೇ ನಾವು ಕನ್ನಡಿಗರು ನಮ್ಮ ಕನ್ನಡ ಭಾಷೆಯ ಬಗ್ಗೆ ಅಷ್ಟೇ ಹೆಮ್ಮೆ ಪಡುತ್ತೇವೆ.

ಇತರ ಎಲ್ಲಾ ಭಾಷೆಗಳನ್ನು ಮಾತನಾಡುವವರು ಸಹ ಅದೇ ಮಟ್ಟದಲ್ಲಿ ಹೆಮ್ಮೆಪಡುತ್ತಾರೆ.

ಆದರೆ ಹಿಂದಿ ಇತರ ಭಾಷೆಗಳ ಮೇಲೆ ಅಧಿಕಾರ ಸ್ಥಾಪಿಸುವಂತಹ ರಾಜಕೀಯವೊಂದು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿದೆ ಮತ್ತು ನಾವು ಸಾಮಾನ್ಯ ಜನರು ಭಾಷೆಯಲ್ಲಿ ರಾಜಕೀಯವನ್ನು ನೋಡಲು ಪ್ರಾರಂಭಿಸಿದ್ದೇವೆ.

ಐದು ವರ್ಷಗಳ ಕಾಲ ಅಧಿಕಾರದ ಕುರ್ಚಿಯಲ್ಲಿ ಉಳಿಯಲು, ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾಷೆಗಳಿಗೆ ರಾಜಕೀಯ ಬಣ್ಣ ನೀಡಲಾಗುತ್ತಿದೆ.

ರಾಜಕಾರಣಿಗಳು ಅಧಿಕಾರವನ್ನು ಪಡೆಯಲು ಶಿಕ್ಷಣ, ನಿರುದ್ಯೋಗ, ಹಣದುಬ್ಬರ, ಭದ್ರತೆ, ಭ್ರಷ್ಟಾಚಾರ ಇತ್ಯಾದಿ ವಿಷಯಗಳನ್ನು ಎತ್ತುವುದೇ ಇಲ್ಲ. ಅವುಗಳ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಆದರೆ ಅವುಗಳ ಹೊರತಾಗಿ, ಇಂದಿನ ಕಾಲದಲ್ಲಿ ಸಮಸ್ಯೆಗಳು ಕೇವಲ ಧಾರ್ಮಿಕ ಆಧಾರದ ಮೇಲೆ ಮಾತ್ರ ರೂಪುಗೊಳ್ಳುತ್ತಿವೆ.

ಸಾಮಾನ್ಯ ಜನರು ಈ ಧಾರ್ಮಿಕ ವಿಷಯಗಳಿಗಾಗಿ ತಮ್ಮ ಅಭಿವೃದ್ಧಿಯನ್ನೇ ಕಡೆಗಣಿಸುವುದೂ ನಡೆದಿದೆ.

ಕವಿ ಧುಮಿಲ್ ಅವರ ಕವಿತೆ ‘ಭಾಷಾ ಕಿ ರಾತ್’ನಲ್ಲಿ ಬರುವ ಸಾಲುಗಳು ಹೀಗಿವೆ:

‘‘ಈ ನಗರದಲ್ಲಿ ಅಥವಾ ಆ ನಗರದಲ್ಲಿ

ಅಂದರೆ ನನ್ನ ಅಥವಾ ನಿಮ್ಮ ನಗರದಲ್ಲಿ,

ಕೆಲವು ಬುದ್ಧಿವಂತ ಜನರು ಚರ್ಚೆಗಾಗಿ ಹಸಿವಿನ ಬದಲಿಗೆ ಭಾಷೆಯನ್ನು ಇಟ್ಟಿದ್ದಾರೆ.

ಹಸಿವಿನಿಂದ ಓಡಿಹೋಗುವ ಮನುಷ್ಯ ಭಾಷೆಯತ್ತ ಹೊರಳುತ್ತಾನೆ ಎಂದು ಅವರಿಗೆ ತಿಳಿದಿದೆ.

ಹೊಟ್ಟೆಬಾಕ ಕೋಪಗೊಂಡಾಗ, ಅವನು ತನ್ನ ಬೆರಳುಗಳನ್ನು ತಾನೇ ಕಚ್ಚಿಕೊಳ್ಳುತ್ತಾನೆ ಎಂಬುದು ಅವರಿಗೆ ಗೊತ್ತಾಗಿಬಿಟ್ಟಿದೆ.’’

ಅಂದರೆ ರಾಜಕಾರಣ, ನಿಜವಾದ ವಿಷಯಗಳಿಂದ, ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಯ ಕಡೆಗೆ ಸೆಳೆಯುವ ಆಟವನ್ನು ಆಡುತ್ತಿದೆ.

ಜನರನ್ನು ಅವರಿಗೇ ಬೇಕಾಗಿಯೇ ಇರದ ಮತ್ತೊಂದು ವಿಷಯದ ಅಮಲಿನಲ್ಲಿ ಮುಳುಗಿಸುವುದರಲ್ಲಿ ಈ ದೇಶದ ರಾಜಕಾರಣ ಪಳಗಿಬಿಟ್ಟಿದೆ

ನಿರುದ್ಯೋಗ ಕಳೆದ ಎರಡು ಮೂರು ದಶಕಗಳಲ್ಲೇ ಈಗ ಅತಿ ಹೆಚ್ಚಾಗಿದೆ. ಲಕ್ಷಗಟ್ಟಲೆ ಯುವಜನರು ಹತಾಶರಾಗಿದ್ದಾರೆ. ಲಕ್ಷ ಲಕ್ಷ ಹಣ ಕೊಟ್ಟು ಪಡೆದ ಪದವಿಯನ್ನು ಕೇಳುವವರೇ ಇಲ್ಲವಾಗಿದೆ. ಆದರೆ ಆಳುವವರು ಮಾತ್ರ ನೀವು ಧರ್ಮವನ್ನು ರಕ್ಷಿಸಿ, ಧರ್ಮ ಅಪಾಯದಲ್ಲಿದೆ ಎಂದು ಯುವಜನರನ್ನೂ, ಅವರ ಮನೆಯವರನ್ನೂ ಬೇರೆಯದೇ ಅಮಲಿನಲ್ಲಿಟ್ಟಿದ್ದಾರೆ

ಜನ ಅದನ್ನೇ ನಂಬಿ ಬಿಟ್ಟಿದ್ದಾರೆ

ದೇಶದ ಎಂಭತ್ತು ಕೋಟಿ ಜನ ಈಗಲೂ ಹಸಿವು ನೀಗಿಸಲು ಸರಕಾರ ಕೊಡುವ ಧಾನ್ಯದ ಆಸರೆಯಲ್ಲಿದ್ದಾರೆ. ಅವರಿಗೆ ತಿಂಗಳಿಗೆ ಹತ್ತು ಸಾವಿರ ರೂ. ಆದಾಯ ಸಿಗುವುದೂ ಕಷ್ಟವಾಗಿದೆ. ಆದರೆ ರಾಜಕಾರಣಿಗಳು ನೀವು ಗೋವನ್ನು ರಕ್ಷಿಸಿ, ಗೋವು ಅಪಾಯದಲ್ಲಿದೆ, ಗೋವಿಗಾಗಿ ಹೋರಾಡಿ ಎಂದು ಹೇಳುತ್ತಿದ್ದಾರೆ

ಜನರು ಅದನ್ನು ನಂಬಿದ್ದಾರೆ.

ಇದು ಬಹಳ ವರ್ಷಗಳಿಂದ ನಡೆದಿದೆ ಮತ್ತು ಈಗ ಭಾಷೆ ಕೂಡ ಅಂಥ ರಾಜಕೀಯ ಆಟದ ಒಂದು ದಾಳವಾಗಿರುವುದು ದೊಡ್ಡ ವಿಪರ್ಯಾಸ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎ.ಎನ್. ಯಾದವ್

contributor

Similar News