×
Ad

ಅರಸು ‘ಕಾಲ’ದ ದಾಖಲೆ ಮುರಿದ ಸಿದ್ದು ‘ಕಾಲ’

Update: 2026-01-08 11:23 IST

(Image: PTI/IndiaToday)

ದೇವರಾಜ ಅರಸುರವರು ಎಲ್ಲಾ ಪ್ರಾತಿನಿಧ್ಯ ವಂಚಿತ ತಳ ಸಮುದಾಯಗಳಿಗೂ ತಮ್ಮ ಸರಕಾರದಲ್ಲಿ ಪ್ರಾತಿನಿಧ್ಯ ನೀಡಿದ್ದರು. ತಾವೆಂದೂ ತಮ್ಮ ಜಾತಿಯವರಿಗೆ ಮಾನ್ಯತೆ ನೀಡಲಿಲ್ಲ, ಹತ್ತಿರ ಸೇರಿಸಲಿಲ್ಲ, ಜಾತಿವಾದಿ ಎಂಬ ಕಳಂಕ ಹೊರಲಿಲ್ಲ. ಅಷ್ಟೇಕೆ ತಮ್ಮ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲೂ ಸೇರಿಸಲು ಪ್ರಯತ್ನಿಸಲಿಲ್ಲ.

ಸಿದ್ದರಾಮಯ್ಯನವರ ಸರಕಾರದಲ್ಲಿನ ನೇಮಕಾತಿಗಳಲ್ಲಿ ಅತ್ಯಂತ ಹಿಂದುಳಿದವರನ್ನು (most backward classes or extremely backward classes) ಭೂತಗನ್ನಡಿ ಹಾಕಿ ಹುಡುಕಿದರೂ ಕಾಣುವುದು ಕಡುಕಷ್ಟ.

ಇದೇ ಜನವರಿ 7ರಂದು ಸಿದ್ದರಾಮಯ್ಯನವರು ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ದೇವರಾಜ ಅರಸು ಅವರ ದಾಖಲೆಯನ್ನು ಮುರಿದಿದ್ದಾರೆ.

ದೇವರಾಜ ಅರಸುರವರು 7ವರ್ಷ 239 ದಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು, ಸಿದ್ದರಾಮಯ್ಯನವರು 7ವರ್ಷ 340 ದಿನ ರಾಜ್ಯವಾಳಿದ ದಾಖಲೆಯನ್ನು ಮುರಿದು ಇನ್ನೂ ಎಷ್ಟು ಸಾಧ್ಯವೋ ಅಷ್ಟು ದಿನ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದ ದೇವರಾಜ ಅರಸರ ದಾಖಲೆಯನ್ನು ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯನವರೇ ಮುರಿಯುವುದು ಸಂತೋಷದ ವಿಚಾರ. ಈ ರಾಜ್ಯದಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಗಳಾಗಿದ್ದವರು ವೀರಶೈವರು ಮತ್ತು ಒಕ್ಕಲಿಗರು ಆದರೆ ಅವರಲ್ಲಿ ಒಬ್ಬರೇ ವ್ಯಕ್ತಿ ಇಷ್ಟು ದೀರ್ಘ ಕಾಲ ಮುಖ್ಯಮಂತ್ರಿಯಾಗಿರಲಿಲ್ಲ.

ಈ ಸಂದರ್ಭದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಕಾಲದ ದಾಖಲೆ ಮುರಿದದ್ದು ಮಹತ್ವದ್ದೋ ಅಥವಾ ದೇವರಾಜ ಅರಸರ ಆಳ್ವಿಕೆಯ ಜನಪರ ಶಾಸನ, ಕಾಯ್ದೆ ಮತ್ತು ಕಾರ್ಯಕ್ರಮಗಳ ದಾಖಲೆಯನ್ನು ಮುರಿಯುವುದು ಮುಖ್ಯವೋ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

ದೇವರಾಜ ಅರಸು ಎಂದಾಕ್ಷಣ ನಮಗೆ ನೆನಪಾಗುವುದು ಅವರ ಆಡಳಿತದಲ್ಲಿ ದಾಖಲಾದ ಕ್ರಾಂತಿಕಾರಿ ಕಾಯ್ದೆಗಳು, ಅದರಲ್ಲೂ ಪ್ರಮುಖವಾಗಿ ಭೂಸುಧಾರಣೆ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಹಾವನೂರು ವರದಿಯ ಜಾರಿ, ಜೀತಪದ್ಧತಿ ನಿರ್ಮೂಲನೆ, ಋಣಪರಿಹಾರ ಕಾಯ್ದೆ, ಮಲಹೊರುವ ಪದ್ಧತಿಯ ನಿಷೇಧ, ಭಾಗ್ಯಜ್ಯೋತಿ, ಕನಿಷ್ಠ ಕೂಲಿ ನಿಗದಿ, ವೃಕ್ಷ ಸಂರಕ್ಷಣಾ ಕಾಯ್ದೆ ಮುಂತಾದವು ಕಾಯ್ದೆಗಳಾದ್ದರಿಂದ ಸರಕಾರಗಳು ಬದಲಾದರೂ ಇಂದಿಗೂ ನಾವು ಇದರ ಫಲಗಳನ್ನು ಅನುಭವಿಸಲು ಸಾಧ್ಯವಾಗಿದೆ. ಇದರಿಂದಾಗಿ ಸಾಮಾಜಿಕ ಕ್ಷೇತ್ರದಲ್ಲಾದ ಮಹತ್ತರ ಬದಲಾವಣೆಯನ್ನು ಇಂದೂ ಢಾಳಾಗಿ ಕಾಣುತ್ತಿದ್ದೇವೆ.

ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ತಂದ ಪಂಚ ಗ್ಯಾರಂಟಿಗಳು ಅತ್ಯಂತ ಜನಪರವಾದವು ಮತ್ತು ಜನಪ್ರಿಯವಾದವು ಕೂಡ. ಆದರೆ ಅವು ಕಾಯ್ದೆಗಳಲ್ಲ, ಅವು ಕಾರ್ಯಕ್ರಮಗಳಾದ್ದರಿಂದ ಸರಕಾರಗಳು ಬದಲಾದಂತೆಲ್ಲಾ ಅವು ನಿಂತು ಹೋಗಲೂಬಹುದು. ಈ ಗ್ಯಾರಂಟಿಗಳಿಗೆ ಮುಂದೆ ಗ್ಯಾರಂಟಿಯಂತೂ ಇಲ್ಲ.

ಅರಸರು ತಂದ ಭೂಸುಧಾರಣೆ ಕಾಯ್ದೆಯಿಂದಾಗಿ 7,80,000ಕ್ಕಿಂತಲೂ ಹೆಚ್ಚು ಬಡ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಗೇಣಿದಾರರು ಭೂಮಾಲಕರಾದರು. ಅಂತಹದ್ದೊಂದು ಕ್ರಾಂತಿಕಾರಿ ಕಾಯ್ದೆ ಸಿದ್ದರಾಮಯ್ಯನವರ ಕಾಲಘಟ್ಟ ಬಿಡಿ ಮಿಕ್ಕ ಯಾವ ಮುಖ್ಯಮಂತ್ರಿಗಳ ಕಾಲಘಟ್ಟದಲ್ಲೂ ಆಗಲಿಲ್ಲ. ಭೂಸುಧಾರಣೆ, ಬಗರ್ ಹುಕುಂ ಭೂಮಿ, ದೇವರ ಭೂಮಿ, ಅರಮನೆ ಭೂಮಿ ಹೀಗೆ ‘ಉಳುವವನೇ ಭೂಒಡೆಯ’ ಕಾರ್ಯಕ್ರಮದಲ್ಲಿ ಸುಮಾರು 22 ಲಕ್ಷ ಎಕರೆ ಭೂಮಿಯನ್ನು ಭೂರಹಿತ ಬಡವರಿಗೆ ಹಂಚಿದ್ದನ್ನು ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್ ಅವರು ಇಂದಿಗೂ ನೆನೆಯುತ್ತಾರೆ. ಇಂತಹ ಭೂಮಿ ಹಂಚಿಕೆಯ ಕಾರ್ಯ ಸಿದ್ದರಾಮಯ್ಯನವರ ಕಾಲವಿರಲಿ ದೇಶದ ಯಾವುದೇ ರಾಜ್ಯದಲ್ಲೂ ಹಂಚಿಕೆಯಾದ ದಾಖಲೆಯಿಲ್ಲ.

ಅರಸು ಮುಖ್ಯಮಂತ್ರಿಗಳಾಗಿದ್ದಾಗ ಅವಕಾಶ ವಂಚಿತ ಜಾತಿಯವರಿಗೆ ಅಧಿಕಾರ ನೀಡಲು ಆಯಾ ಸಮುದಾಯಗಳಲ್ಲೇ ಎರಡನೇ ಸಾಲಿನ ನಾಯಕರನ್ನು ಗುರುತಿಸಿದರು. ‘‘ಶಿವಾಜಿನಗರದ ಕೋಲ್ಸ್ ಪಾರ್ಕ್ ನಲ್ಲಿ ಕಡ್ಲೇಕಾಯಿ ಮಾರುವ ಹಮೀದ್ ಷಾ, ಸೇವಾದಳದಲ್ಲಿದ್ದ ಜಾಫರ್ ಶರೀಫ್, ಕಾರ್ಕಳದಲ್ಲಿ ಸೈಕಲ್ ತುಳಿಯುತ್ತಿದ್ದ ವೀರಪ್ಪ ಮೊಯ್ಲಿ, ವಿದ್ಯಾರ್ಥಿಯಾಗಿದ್ದ ರಮೇಶ್ ಕುಮಾರ್, ಗೌರ್ಮೆಂಟ್ ಪ್ರೆಸ್ ವರ್ಕರ್ ಲಕ್ಕಣ್ಣ, ಮಿಲ್ ಕಾರ್ಮಿಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಕೋಲಿ ಸಮಾಜದ ಬಿ.ಇ. ಚೌಧರಿ, ಉಡುಪಿಯ ಬಡ ಬ್ರಾಹ್ಮಣ ರಂಗನಾಥ ಶೆಣೈ, ಚಿಕ್ಕಮಗಳೂರಿನ ಕ್ರೈಸ್ತ ಧರ್ಮಕ್ಕೆ ಸೇರಿದ ಇ.ಇ. ವಾಜ್, ರಾಜಾ ಮಿಲ್ ಕಾರ್ಮಿಕ ರಾಮುಲು, ಮೀನುಗಾರ ಸಮುದಾಯದ ಮನೋರಮಾ, ಬಿಲ್ಲವರ ದಾಮೋದರ್ ಮುಲ್ಕಿ, ಬ್ಯಾರಿ ಸಮುದಾಯದ ಮೊಹಿಯುದ್ದೀನ್, ಗಾಣಿಗರ ತೇಲ್ಕರ್, ಅಕ್ಕಸಾಲಿಗರ ಪತ್ತಾರ್, ಮಾದಿಗರ ಕಿತ್ತೂರು, ವಡ್ಡರ ವೆಂಕಟೇಶಪ್ಪ, ಕುರುಬರ ನಾಯ್ಕರ್, ರಜಪೂತ ಧರಂಸಿಂಗ್, ಬಳ್ಳಾರಿಯ ಭಾಸ್ಕರ್ ನಾಯ್ಡು..’’ ಬಸವರಾಜು ಮೇಗಲಕೇರಿ ಸಂಪಾದಿಸಿದ ‘ನಮ್ಮ ಅರಸು’ ಪುಸ್ತಕದಲ್ಲಿ ಈ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಇಂತಹದೊಂದು ಪಟ್ಟಿಯನ್ನು ಈಗಿನ ಪರಿಸ್ಥಿತಿಯಲ್ಲಿ ಕನಿಷ್ಠ ಊಹಿಸಲು ಸಾಧ್ಯವೆ?

ಅದೇ ರೀತಿ ಅರಸುರವರು ಹಿಂದುಳಿದವರಿಗೆ ಮೀಸಲಾತಿ ನೀಡಲು ಎಲ್.ಜಿ. ಹಾವನೂರು ಆಯೋಗವನ್ನು ರಚಿಸಿದಾಗ ಸ್ವತಹ ಹಾವನೂರರು ಬೇಡರ ಜಾತಿಗೆ ಸೇರಿದವರಾಗಿದ್ದರು. ಮಿಕ್ಕಂತೆ ಸದಸ್ಯರಾಗಿದ್ದ ವೈ. ರಾಮಕೃಷ್ಣ ಕುರುಬ, ಕೆ.ಆರ್.ಎಸ್. ನಾಯ್ಡು ವೆಲ್ಲಮ, ಕೆ.ಎಂ. ನಾಗಣ್ಣ ದೇವಾಂಗ, ಎ. ಮಸಣಶೆಟ್ಟಿ ಉಪ್ಪಾರ, ಎನ್. ಧರಂಸಿಂಗ್ ರಜಪೂತ, ಪಿ.ಜಿ. ಹಬೀಬ್ ಸೂರ್ಯವಂಶ ಕ್ಷತ್ರಿಯ, ಹೀಗೆ ಸಣ್ಣಪುಟ್ಟ ಜಾತಿಗಳಿಗೆ ಅರಸು ಅವರು ಆಯೋಗದಲ್ಲಿ ಪ್ರಾತಿನಿಧ್ಯ ನೀಡಿದ್ದರು.

ಸಿದ್ದರಾಮಯ್ಯನವರಿಗೆ ಇದೇ ರೀತಿಯ ಅವಕಾಶ ಸಿಕ್ಕಾಗ ಅವರು ಆಯೋಗದ ಅಧ್ಯಕ್ಷರನ್ನಾಗಿ ಮಾಡುತ್ತಾ ಬಂದಿದ್ದು ಪ್ರವರ್ಗ 3(ಎ) ಮತ್ತು ಪ್ರವರ್ಗ 2(ಎ)ಗೆ ಸೇರಿದ ಒಕ್ಕಲಿಗ, ಬಂಟ, ಕುರುಬ ಮತ್ತು ನಾಡವರ್ ಯಾನೆ ಬಂಟರನ್ನು. ಅವರು ನಿಜಕ್ಕೂ ಮಾಡಬೇಕಾಗಿದ್ದದ್ದು ಪ್ರವರ್ಗ ಒಂದರಲ್ಲಿದ್ದ ಅತ್ಯಂತ ಹಿಂದುಳಿದವರನ್ನು(most backward), ಅಲೆಮಾರಿಗಳನ್ನು, ಕನಿಷ್ಠ 2(ಎ)ಗೆ (more backward)ಸೇರಿದ ಬೆಸ್ತ, ತಿಗಳ, ದೇವಾಂಗ, ಈಡಿಗ, ಗಾಣಿಗ, ವಿಶ್ವಕರ್ಮ, ಮಡಿವಾಳ, ಸವಿತ, ಕುಂಬಾರ, ಕಮ್ಮಾರರೇ ಮುಂತಾದ ಅತಿಹಿಂದುಳಿದವರನ್ನು. ಮೊತ್ತ ಮೊದಲ ಬಾರಿಗೆ ಲಿಂಗಾಯತ ಮತ್ತು ಒಕ್ಕಲಿಗರಿಗೆ ಆಯೋಗದ ಸದಸ್ಯತ್ವ ನೀಡಿ ಅವರನ್ನೂ ಹಿಂದುಳಿದವರೆಂದು ಅಧಿಕೃತಗೊಳಿಸಿದ್ದು ಸಿದ್ದರಾಮಯ್ಯನವರು ಅನ್ನುವುದು ವಿಪರ್ಯಾಸ!

ದೇವರಾಜ ಅರಸು ಅವರು ಹಾವನೂರು ವರದಿ ಜಾರಿಗೆ ತರಲು ಹೊರಟಾಗ ಅವರ ವಿರುದ್ಧ ಬಲಿಷ್ಠ ಜಾತಿಗಳಿಂದ ಭುಗಿಲೆದ್ದ ಪ್ರತಿರೋಧವನ್ನು ಅರಸರು ನಿಭಾಯಿಸಿ ಹಾವನೂರು ವರದಿಯನ್ನು ಜಾರಿಗೆ ತಂದೇ ತಂದರು. ಸಿದ್ದರಾಮಯ್ಯನವರು ತಾವೇ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ ಕಾಂತರಾಜುರಿಗೆ ಸತತವಾಗಿ ಎರಡು ಅವಧಿಯ ಅವಕಾಶ ಕೊಟ್ಟರೂ ಕಾಂತರಾಜು ಅವರು ವರದಿ ನೀಡಲೇ ಇಲ್ಲ! ಕಡೆಗೆ ‘‘ಇದು ಹತ್ತು ವರ್ಷದ ಹಿಂದಿನ ಅಂಕಿಅಂಶಗಳಿಂದ ಕೂಡಿದೆ’’ ಎಂದು ಕಾಂತರಾಜು ನೀಡಿದ ವರದಿಗೆ ಅಂತ್ಯ ಹಾಡಿದರು. ಕಡೆಗೆ ಬಿಜೆಪಿ ಸರಕಾರದಿಂದ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ ಹೆಗ್ಡೆಯವರನ್ನೇ ಮುಂದುವರಿಸಿ ಅವರಿಂದ ಕಾಟಾಚಾರಕ್ಕೊಂದು ವರದಿ ಪಡೆದು ಅದನ್ನು ಶೈತ್ಯಾಗಾರಕ್ಕೆ ದೂಡಿದರು.

ದೇವರಾಜ ಅರಸುರವರು ಎಲ್ಲಾ ಪ್ರಾತಿನಿಧ್ಯ ವಂಚಿತ ತಳ ಸಮುದಾಯಗಳಿಗೂ ತಮ್ಮ ಸರಕಾರದಲ್ಲಿ ಪ್ರಾತಿನಿಧ್ಯ ನೀಡಿದ್ದರು. ತಾವೆಂದೂ ತಮ್ಮ ಜಾತಿಯವರಿಗೆ ಮಾನ್ಯತೆ ನೀಡಲಿಲ್ಲ, ಹತ್ತಿರ ಸೇರಿಸಲಿಲ್ಲ, ಜಾತಿವಾದಿ ಎಂಬ ಕಳಂಕ ಹೊರಲಿಲ್ಲ. ಅಷ್ಟೇಕೆ ತಮ್ಮ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲೂ ಸೇರಿಸಲು ಪ್ರಯತ್ನಿಸಲಿಲ್ಲ.

ಸಿದ್ದರಾಮಯ್ಯನವರ ಸರಕಾರದಲ್ಲಿನ ನೇಮಕಾತಿಗಳಲ್ಲಿ ಅತ್ಯಂತ ಹಿಂದುಳಿದವರನ್ನು (most backward classes or extremely backward classes) ಭೂತಗನ್ನಡಿ ಹಾಕಿ ಹುಡುಕಿದರೂ ಕಾಣುವುದು ಕಡುಕಷ್ಟ. ಇಂತಹ ಅತಿ ಹಿಂದುಳಿದ ಸಮುದಾಯಗಳ ಅನೇಕ ನಿಗಮಗಳಿಗೆ ಅಧ್ಯಕ್ಷರನ್ನೂ, ಸದಸ್ಯರನ್ನೂ ನೇಮಿಸದೆ ಎರಡೂವರೆ ವರ್ಷ ಮುಗಿದರೂ ಇನ್ನೂ ಖಾಲಿ ಇಟ್ಟುಕೊಂಡಿದ್ದಾರೆ! ಮಿಕ್ಕಂತೆ ಬೆರಳೆಣಿಕೆಯಷ್ಟು ನಿಗಮಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಿಸಿದ್ದರೂ ಅವರಿಗೆ ಅನುದಾನವಿಲ್ಲದೆ ನಿಗಮಗಳು ಸೊರಗುತ್ತಿವೆ.

ಅರಸುರವರು ಬಿಜಾಪುರದಲ್ಲಿ ಮುಂಜಾನೆಯ ವಾಯುವಿಹಾರಕ್ಕೆ ಹೊರಟಾಗ ‘ಹೆಳವ’ ಎಂಬ ಅಲೆಮಾರಿ ಜಾತಿಯವನೊಬ್ಬ ಎತ್ತಿನ ಮೇಲೆ ಸವಾರಿ ಮಾಡುತ್ತಾ ಗಂಟೆ ಬಾರಿಸುತ್ತಾ ಭಿಕ್ಷೆಗೆ ಹೊರಟಿರುತ್ತಾನೆ. ಅರಸು ಅವರು ಆತನನ್ನು ಕಂಡು ಆತನ ಜಾತಿಕುಲಗಳನ್ನು ವಿಚಾರಿಸಿ ಅವರಲ್ಲೇ ಒಬ್ಬ ವಿದ್ಯಾವಂತನನ್ನು ಕರೆತಂದು ಕಡೂರಿನ ಬಳಿ ಆತನ ಸಮುದಾಯಕ್ಕೆ ಜಮೀನು ನೀಡಿದ ಪರಿಣಾಮ ಅಲ್ಲಿ ಇಂದು ಇನ್ನೂರು ಕುಟುಂಬಗಳು ವಾಸಿಸುತ್ತಿವೆ. ಅವರಲ್ಲನೇಕರು ಡಾಕ್ಟರ್, ಇಂಜಿನಿಯರ್, ಲಾಯರ್ ಮುಂತಾಗಿ ವಿದ್ಯಾವಂತರಾಗಿದ್ದಾರೆ. ಅರಸರು ಅಲೆಮಾರಿಗಳಿಗಾಗಿ ಮಾಡಿದ ಕೆಲಸವನ್ನು ಸದಾ ನೆನೆಯಲು ಆ ಕಾಲನಿಗೆ ‘ಶ್ರೀ ದೇವರಾಜ ಅರಸು ಹೆಳವರ ಹಟ್ಟಿ’ ಅಂತ ಇಟ್ಟುಕೊಂಡಿದ್ದಾರೆ.

ಅನೇಕ ವರ್ಷಗಳಿಂದ ಕರ್ನಾಟಕದ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಇತ್ತು. ನ್ಯಾಯಮೂರ್ತಿ ಸದಾಶಿವ ಆಯೋಗ, ಬಿಜೆಪಿ ಸರಕಾರದ ಮಾದುಸ್ವಾಮಿ ಸಮಿತಿ ಹಾಗೂ ಸಿದ್ದರಾಮಯ್ಯನವರೇ ನೇಮಿಸಿದ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಪರಿಶಿಷ್ಟ ಜಾತಿಯ 59 ಅಲೆಮಾರಿ ಸಮುದಾಯಗಳಿಗೆ ಒಂದು ಪರ್ಸೆಂಟ್ ಮೀಸಲಾತಿ ನೀಡುವ ಶಿಫಾರಸು ಮಾಡಿದ್ದರು. ಸಿದ್ದರಾಮಯ್ಯನವರ ಕ್ಯಾಬಿನೆಟ್ ಈ ಒಂದು ಪರ್ಸೆಂಟ್ ಅನ್ನೂ ರದ್ದುಪಡಿಸಿ ಬಲಿಷ್ಠ ಜಾತಿಗಳೊಂದಿಗೇ ಅಲೆಮಾರಿಗಳೂ ಪಾಲು ಪಡೆಯುವಂತೆ ಸಾಮಾಜಿಕ ಅನ್ಯಾಯದ ನಿರ್ಣಯ ಕೈಗೊಂಡರು. ಇದನ್ನು ಅಲೆಮಾರಿಗಳು ತೀವ್ರವಾಗಿ ಪ್ರತಿಭಟಿಸಿದಾಗ ’ಗ್ರೂಪ್ ಸಿ’ಗೆ ಸಿಗುವ ಮೀಸಲಾತಿಯ ಐದು ಸ್ಥಾನಗಳಲ್ಲಿ ಐದನೆಯದನ್ನು ಅಲೆಮಾರಿಗಳಿಗೆ ನೀಡುವಂತೆ ಅಸಂಬದ್ಧ ಆರ್ಡಿನೆನ್ಸ್ ತಂದು ಅಲೆಮಾರಿಗಳ ತಲೆಯ ಮೇಲೆ ಬಂಡೆ ಎಳೆದರು.

ಕರ್ಪೂರಿ ಠಾಕೂರ್, ಡಾ. ರಾಮಮನೋಹರ ಲೋಹಿಯ, ಕಾನ್ಶೀರಾಂರವರಿಗೆ ಹೋಲಿಸಬಹುದಾದ ದೇವರಾಜ ಅರಸು ಮೊತ್ತ ಮೊದಲ ಸಲ ‘ಸಾಮಾಜಿಕ ನ್ಯಾಯ’ ಎಂಬ ಶಬ್ದವನ್ನು ಬಳಸಿದರು. ಸಿದ್ದರಾಮಯ್ಯನವರು ಅತಿ ಹೆಚ್ಚು ಸಲ ‘ಸಾಮಾಜಿಕ ನ್ಯಾಯ’ ಎಂಬ ಪದವನ್ನು ತಮ್ಮ ಮಾತು ಮತ್ತು ಭಾಷಣಗಳಲ್ಲಿ ಬಳಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News