×
Ad

ಟ್ರಾನ್ಸ್‌ಜೆಂಡರ್‌ ರಕ್ಷಿತಾ ಬದುಕಿನ ಯಶೋಗಾಥೆ

Update: 2025-03-10 13:46 IST

ಬೆಂಗಳೂರು: ರಕ್ಷಿತಾ ಮಲ್ಲಿಕಾರ್ಜುನ್ ಎಲ್‌ಐಸಿಯಲ್ಲಿ ವ್ಯವಸ್ಥಾಪಕರಾಗಿದ್ದ ಮಲ್ಲಿಕಾರ್ಜುನ ಶಾಸ್ತ್ರಿ, ಪ್ರಾಧ್ಯಾಪಕಿಯಾಗಿದ್ದ

ಬಿ.ವಿ.ಶಕುಂತಲಾರ ಮಗನಾಗಿ 1990ರಲ್ಲಿ ಬೆಂಗಳೂರಿನ ಬಸವೇಶ್ವರನಗರ ಶಂಕರಮಠದಲ್ಲಿ ಜನಿಸುತ್ತಾರೆ. ಗಂಡಾಗಿ ಹುಟ್ಟಿದ ರಕ್ಷಿತಾ, ಕಾಲಾನಂತರದಲ್ಲಿ ಲಿಂಗ ಪರಿವರ್ತನೆಯಾಗಿ ಮಹಿಳೆಯಾಗಿ ಗುರುತಿಸಿಕೊಳ್ಳಲು ಪ್ರಾರಂಭ ಮಾಡಿದಾಗಿನಿಂದಲೂ ಜೀವನದಲ್ಲಿ ಸಾಕಷ್ಟು ಸಂಕಷ್ಟ, ಸಮಸ್ಯೆಗಳನ್ನು ಎದುರಿಸಿ ಇದೀಗ ‘ಒಂದೆಡೆ’ ಸಂಸ್ಥೆಯಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಾ, ಎಲ್‌ಜಿಬಿಟಿಕ್ಯೂ ಸಮುದಾಯದ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದಾರೆ.

ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ಮುಗಿಸಿದ ರಕ್ಷಿತಾರ ಹೋರಾಟ ಆ ಕಾಲೇಜಿನಿಂದಲೇ ಪ್ರಾರಂಭವಾಗುತ್ತದೆ. ಕಾಲೇಜಿನ ಘಟಿಕೋತ್ಸವಕ್ಕೆ ಪದವಿ ದಾಖಲಾತಿ ಪಡೆದುಕೊಳ್ಳಲು ಹೋದಾಗ, ಪ್ರಾಧ್ಯಾಪಕರು ‘ನೀನು ಗಂಡು ವೇಷದಲ್ಲಿ ಬಂದರೆ ಮಾತ್ರ ಪದವಿ ದಾಖಲಾತಿ ಕೊಡುತ್ತೇವೆ’ ಇಲ್ಲದಿದ್ದರೆ ಕೊಡುವುದಿಲ್ಲ ಎಂದು ಹೇಳುತ್ತಾರೆ. ರಕ್ಷಿತಾ ಮೂರು-ನಾಲ್ಕು ಬಾರಿ ಪದವಿ ದಾಖಲಾತಿಗಾಗಿ ಮನವಿ ಮಾಡಿಕೊಂಡರೂ ದಾಖಲಾತಿ ಸಿಗುವುದಿಲ್ಲ. ಕೊನೆಗೆ ರಕ್ಷಿತಾ ದಾಖಲಾತಿಯನ್ನು ನಿರಾಕರಿಸಿ ಹೊರಡುತ್ತಾರೆ.

ರಕ್ಷಿತಾ ಒಂದು ದಿನ ತಾಯಿಯ ಬಳಿ ಹೋಗಿ ‘ಅಮ್ಮ ನಾನು ಮಹಿಳೆಯಾಗಿ ಪರಿವರ್ತನೆ ಆಗುತ್ತಿದ್ದೇನೆ’ ಎಂದು ಹೇಳಿದಾಗ, ತಾಯಿ ಅವರಿಗೆ ಇಸ್ತ್ರಿ ಪೆಟ್ಟಿಗೆ ಇಂದ ಹೊಡೆದು ಮನೆಯಿಂದ ಹೊರಹಾಕುತ್ತಾರೆ. ಮನೆಯಲ್ಲಿಯೇ ಅವಮಾನಕ್ಕೊಳಗಾದ ರಕ್ಷಿತಾ ಕಣ್ಣೀರು ಹಾಕುತ್ತಲೇ ಎಲ್ಲಿ ಹೋಗಬೇಕೆಂದು ದಿಕ್ಕು ತೋಚದೆ, ಯಶ್ವಂತಪುರ ರೈಲು ನಿಲ್ದಾಣಕ್ಕೆ ಹೋಗುತ್ತಾರೆ.

ರೈಲು ನಿಲ್ದಾಣದಲ್ಲಿ ಒಂದು ವಾರ ಊಟ ಇಲ್ಲದೇ ಕುಳಿತಿದ್ದಾಗ, ಒಬ್ಬ ವ್ಯಕ್ತಿ ರಕ್ಷಿತಾರ ಮುಖಕ್ಕೆ ಒಂದು ರೂಪಾಯಿ ನಾಣ್ಯವನ್ನು ಎಸೆದಾಗ ಬೇಸರಗೊಂಡು, ಹೇಗಾದರೂ ಮಾಡಿ ದುಡಿದು ಬದುಕಬೇಕೆಂಬ ಛಲ ಹುಟ್ಟುತ್ತದೆ. ಕೆಲಸ ಹುಡುಕಲು ಪ್ರಾರಂಭಿಸಿ 2011ರಲ್ಲಿ ಮನೆ ಕೆಲಸಕ್ಕೆ ಸೇರಿ ಆರು ತಿಂಗಳ ಕಾಲ ದುಡಿಯುತ್ತಾರೆ.

ರಕ್ಷಿತಾ 2012ರಲ್ಲಿ ಕರ್ನಾಟಕ ಹೆಲ್ತ್ ಪ್ರಿಡಿಕ್ಷನ್ ಟ್ರಸ್ಟ್‌ನಲ್ಲಿ ಎಚ್‌ಐವಿ ಪ್ರಾಜೆಕ್ಟ್‌ನಲ್ಲಿ ವ್ಯವಸ್ಥಾಪಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದೇ ರೀತಿ 2014ರವರೆಗೆ ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದ ಅವರು ಅಕ್ಕೈ ಪದ್ಮಶಾಲಿಯವರ ‘ಒಂದೆಡೆ’ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ಸೇರಿಕೊಳ್ಳುತ್ತಾರೆ.

2018ರಲ್ಲಿ ಬೆಳ್ಳಂದೂರಿನಲ್ಲಿರುವ ‘ಶೆಲ್ ಐಟಿ ಹಬ್’ನಲ್ಲಿ ಕಾರ್ಯನಿರ್ವಾಹಕಿಯಾಗಿ ಕೆಲಸ ಪಡೆದುಕೊಳ್ಳುತ್ತಾರೆ. ಆದರೆ, ಅಲ್ಲಿನ ಅಧಿಕಾರಿಗಳ ನಿರ್ಬಂಧಗಳನ್ನು ಸಹಿಸಿಕೊಳ್ಳದೇ ಪ್ರಶ್ನೆ ಮಾಡುತ್ತಾರೆ. ಈ ಕಾರಣಕ್ಕೆ ಅಧಿಕಾರಿಗಳು ಆಕೆಯನ್ನು ಕೆಲಸದಿಂದ ತೆಗೆದುಹಾಕುತ್ತಾರೆ.

ಅಷ್ಟಕ್ಕೆ ಅವರ ಕೆಲಸ ನಿಲ್ಲುವುದಿಲ್ಲ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್ ಎನ್ನುವ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಒಂದು ಕಾನೂನು ಮಾಡಲು ಎಲ್‌ಜಿಬಿಟಿಕ್ಯೂ ಸಮುದಾಯದಲ್ಲಿ ಕೆಲಸ ಮಾಡಿದವರನ್ನು ಹುಡುಕುತ್ತಿದ್ದಾಗ, ರಕ್ಷಿತಾ ಆಯ್ಕೆ ಆಗುತ್ತಾರೆ. ಅದರಲ್ಲಿ ಇವರು ಎಚ್‌ಆರ್ ಆಗಿ ಕೆಲಸ ಮಾಡುತ್ತಾರೆ. 24 ಹೊಸ ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊಂಡು ಕಾನೂನು, ತೀರ್ಮಾನಗಳ ಬಗ್ಗೆ ಚರ್ಚೆ ಮಾಡಿ, ಸಮುದಾಯದ ಪರವಾಗಿ ಸಂಸ್ಥೆಯ ಒಳಗೆ ಯಾವ ಕಾನೂನುಗಳನ್ನು ತರಬೇಕು, ತರಬಾರದು ಎನ್ನುವ ವಿಚಾರ ಮಂಡಿಸುತ್ತಾರೆ. ಕಾನೂನಾದ ಕೆಲವೇ ದಿನಗಳಲ್ಲಿ ಅದೇ ಸಂಸ್ಥೆಯಲ್ಲಿ ಸಮುದಾಯದ ಹಲವರಿಗೆ ಉದ್ಯೋಗ ಸಿಗುತ್ತದೆ.

ಇದೀಗ ರಕ್ಷಿತಾ ಸಮುದಾಯದ ಏಳಿಗೆಗಾಗಿ ಸರಕಾರದೊಡನೆ ಸೇರಿಕೊಂಡು, ಕರ್ನಾಟಕದಲ್ಲಿ ಏಳು ಪೊಲೀಸ್ ಠಾಣೆ ಶಾಲೆಗಳಿಗೆ, ಮೈಸೂರು ಪೊಲೀಸ್ ಅಕಾಡಮಿ, ಐಎಎಸ್ ಇನ್ನಿತರ ಅಧಿಕಾರಿಗಳಿಗೆ ಲಿಂಗತ್ವ ಅಲ್ಪಸಂಖ್ಯಾತರ ಕಾನೂನುಗಳ ಬಗ್ಗೆ ಹಾಗೂ ಅವರ ವಿಚಾರಗಳ ಬಗ್ಗೆ ಯುವ ಪರಿವರ್ತನಾ ಕಾರ್ಯಕರ್ತೆಯಾಗಿ ತರಬೇತಿ ಕೊಡುತ್ತಿದ್ದಾರೆ. ರಕ್ಷಿತಾ ಇದುವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಸಮುದಾಯದವರಿಗೆ ಸಮಸ್ಯೆಗಳಾದರೆ ಹೇಗೆ ಬಗೆಹರಿಸಬೇಕು ಎಂದು ತಿಳಿದುಕೊಳ್ಳಲು ಮತ್ತು ಸಲಹೆಗಳಿಗಾಗಿ ನಮ್ಮ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ.

ಸರಕಾರದ ಮುಂದಿಟ್ಟ ಬೇಡಿಕೆಗಳು

► ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡಬೇಕು.

► ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸಂಬಂಧ ಪಟ್ಟ ಒಂದು ನಿಗಮ, ಮಂಡಳಿಯನ್ನು ರಚಿಸಬೇಕು.

ರಾಜ್ಯಮಟ್ಟದಲ್ಲಿ ಸಮುದಾಯಕ್ಕಾಗಿ ಸಮಿತಿ ರಚಿಸಬೇಕು.

► ಸಮುದಾಯವರಿಗೆ 1,800 ರೂ. ಪಿಂಚಣಿ ಕೊಡುತ್ತೇವೆಂದು ಹೇಳಿದ್ದರೂ, ಇದುವರೆಗೂ ಯಾವುದೇ ಪಿಂಚಣಿ ಹಣ ಸಿಕ್ಕಿಲ್ಲ ಮತ್ತು ಕೊಡುತ್ತೇವೆಂದು ಹೇಳಿದ್ದ ಹಣದ ಮೊತ್ತವನ್ನು ಏರಿಸಬೇಕು.

► ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಸಕಾಲಕ್ಕೆ ದೊರಕುವಂತೆ ಮಾಡಬೇಕು.

► ಸಮುದಾಯದವರಿಗೆ ವಸತಿಗಳನ್ನು ನಿರ್ಮಿಸಿ ಕೊಡಬೇಕು.

► ಸಮುದಾಯದವರಿಗೆ ಬಾಡಿಗೆಗೆ ಮನೆ ಕೊಡದೇ ಇರುವ ಮಾಲಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್

contributor

Similar News