×
Ad

ಕೋಟೇಶ್ವರದಲ್ಲಿ ಉಡುಪಿ ಜಿಲ್ಲೆಯ ಪ್ರಥಮ ವಿದ್ಯುತ್ ಚಿತಾಗಾರ

Update: 2025-05-19 14:52 IST

ಕುಂದಾಪುರ, ಮೇ 18: ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಸುಮಾರು 25 ವರ್ಷಗಳ ಹಿಂದಿನ ಹಿಂದೂ ರುದ್ರಭೂಮಿಯನ್ನು ಮೂರು ವರ್ಷಗಳ ಹಿಂದೆ ಆಧುನಿಕ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸುಮಾರು ಒಂದು ಕೋಟಿ ರೂ. ಅಂದಾಜು ವೆಚ್ಚದ ಈ ವಿದ್ಯುತ್ ಚಿತಾಗಾರ ಮೇ 23ರಂದು ಉದ್ಘಾಟನೆಗೆ ಸಜ್ಜಾಗಿದೆ.

ಕೋಟೇಶ್ವರ ಹಿಂದೂ ರುದ್ರಭೂಮಿ ಸೇವಾ ಸಮಿತಿ ವತಿಯಿಂದ ಸ್ಥಳೀಯ ಗ್ರಾಪಂ ಮುತುವರ್ಜಿಯಲ್ಲಿ ಸತತ ಹೋರಾಟದ ಫಲವಾಗಿ ಈ ಈ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸುಮಾರು 96 ಲಕ್ಷ ರೂ. ಅನುದಾನ ಲಭಿಸಿತ್ತು.

ಅಂದಿನ ವಿಧಾನ ಪರಿಷತ್ ಸದಸ್ಯರು, ಸಭಾಪತಿ ಆಗಿದ್ದ ಕೆ.ಪ್ರತಾಪಚಂದ್ರ ಶೆಟ್ಟಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ 71 ಲಕ್ಷ ರೂ., ಹಿಂದಿನ ರಾಜ್ಯ ಸರಕಾರದಿಂದ ಮಂಜೂರಾಗಿದ್ದ 25 ಲಕ್ಷ ರೂ. ಅನುದಾನದಲ್ಲಿ ಉಡುಪಿ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆದಿತ್ತು. ಈ ಮೂಲಕ ಈ ವಿದ್ಯುತ್‌ಚಿತಾಗಾರ ಉಡುಪಿ ಜಿಲ್ಲೆಯಲ್ಲೇ ಪ್ರಥಮ ಆಗಿದೆ.

25 ವರ್ಷಗಳ ರುದ್ರಭೂಮಿ: ಸ್ಥಳೀಯ ಜನರು ಶವ ದಹನಕ್ಕೆ ಪಡಿಪಾಟಲು ಪಡುವುದನ್ನು ಮನಗಂಡು 2000ನೇ ಇಸವಿಯಲ್ಲಿ ಕೋಟೇಶ್ವರ ಗ್ರಾಪಂ ಆಡಳಿತವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರದಲ್ಲಿ ರುದ್ರಭೂಮಿ ಮಾಡಲಾಗಿತ್ತು. ಬಳಿಕ ದಾನಿಗಳ ನೇತೃತ್ವದಲ್ಲಿ ಹಂತಹಂತವಾಗಿ ರುದ್ರಭೂಮಿ ಅಭಿವೃದ್ಧಿಗೊಳಿಸಲಾಗಿತ್ತು.

1.6 ಎಕರೆ ವಿಸ್ತೀರ್ಣದ ರುದ್ರಭೂಮಿ ಇದಾಗಿದ್ದು ಕೋಟೇಶ್ವರ, ತೆಕ್ಕಟ್ಟೆ, ಕುಂಭಾಸಿ, ಗೋಪಾಡಿ, ಬೀಜಾಡಿ ಗ್ರಾಮದ ಹಾಗೂ ಕರಾವಳಿ ಭಾಗದವರು ಶವಸಂಸ್ಕಾರಕ್ಕೆ ಇಲ್ಲಿಗೆ ಬರುತ್ತಾರೆ. ಹಿಂದೂ ರುದ್ರಭೂಮಿ ಸೇವಾ ಸಮಿತಿ ಹಾಗೂ ಕೋಟೇಶ್ವರ ಗ್ರಾಪಂ ಇಲ್ಲಿನ ನಿರ್ವಹಣೆ ಕಂಡುಕೊಳ್ಳುತ್ತಿದೆ.

ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಶೆಟ್ಟಿ, ಸಮಾಜಸೇವಕ ರಂಗನಾಥ್ ಭಟ್, ಸಿಎ ಗಣೇಶ್ ಎಂ. ಕಾಮತ್, ಶಂಕರ್ ಕಾಮತ್, ವಿಠಲ ದಾಸ್, ನಾರಾಯಣ ಪೇಂಟರ್, ಕರಿಯ ದೇವಾಡಿಗ, ಶಂಕರ್ ಅಂಕದಕಟ್ಟೆ, ಸುಬ್ರಮಣ್ಯ ಶೆಟ್ಟಿಗಾರ್, ಶ್ರೀಪತಿ ಹೆಬ್ಬಾರ್, ಕೃಷ್ಣ ಗೊಲ್ಲ, ಪ್ರಶಾಂತ್ ಗೊಲ್ಲ, ಚಂದ್ರ ದೇವಾಡಿಗ ಮೊದಲಾದ 20-25 ಮಂದಿ ತಂಡ 25 ವರ್ಷದಿಂದ ಕಾರ್ಯಾಚರಿಸುವ ಹಳೆ ಸ್ಮಶಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.

ರಾಜ್ಯದ ಗ್ರಾಪಂ ವ್ಯಾಪ್ತಿಯ ಪ್ರಥಮ ವಿದ್ಯುತ್ ಚಿತಾಗಾರ ಇದಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದು ಮೊದಲನೆಯದ್ದಾಗಿದ್ದರಿಂದ ಸೂಕ್ತ ಆಂಬುಲೆನ್ಸ್ ವ್ಯವಸ್ಥೆ ಮಾಡಿದರೆ ಬೈಂದೂರಿನಿಂದ ಬ್ರಹ್ಮಾವರ ಕೇಂದ್ರೀಕರಿಸಿದಲ್ಲಿ 30 ನಿಮಿಷದಲ್ಲಿ ಮೃತದೇಹ ಕೋಟೇಶ್ವರಕ್ಕೆ ತರಬಹುದು. ನಿರ್ವಹಣೆ ನಿಟ್ಟಿನಲ್ಲಿ ಗ್ರಾಪಂ ನೇತೃತ್ವದಲ್ಲಿ ಟ್ರಸ್ಟ್ ಮಾಡುವುದು ಉತ್ತಮ.

-ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಅಧ್ಯಕ್ಷರು, ಕುಂದಾಪುರ ಬ್ಲಾಕ್ ಕಾಂಗ್ರೆಸ್

‘ಬೆಂಗಳೂರು ಮಾದರಿಯಲ್ಲಿ ಮಾಡಿದ ವಿದ್ಯುತ್ ಚಾಲಿತ ಚಿತಾಗಾರ ವ್ಯವಸ್ಥೆ ಇದಾಗಿದೆ. ಚಿತಾಗಾರಕ್ಕೆ ಸಂಬಂಧಿಸಿದ ಯಂತ್ರಗಳು, ಬೂದಿ ಹಾರದಂತೆ ಸ್ಟೋರೇಜ್, ಹೊರಗಡೆಗೆ ಶಾಖ ಹೊರಹಾಕಲು ಲೋಹದ ಚಿಮಣಿ, ಜನರೇಟರ್, ವಿಶ್ರಾಂತಿ ಗೃಹ, ಕಚೇರಿ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. 30-40 ನಿಮಿಷದಲ್ಲಿ ಮೃತದೇಹ ದಹನವಾಗುತ್ತದೆ. ವಾಯುಮಾಲಿನ್ಯ ಇರುವುದಿಲ್ಲ.

-ಮಹೇಶ್, ಇಂಜಿನಿಯರ್, ಉಡುಪಿ ನಿರ್ಮಿತಿ ಕೇಂದ್ರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೀಶ್ ಕುಂಭಾಸಿ

contributor

Similar News