ಅನಿರೀಕ್ಷಿತ ತಾಪಮಾನ ಏರಿಕೆ, ಅಕಾಲಿಕ ಮಳೆ: ಮಾವಿನ ಹಣ್ಣಿನ ಇಳುವರಿಯಲ್ಲಿ ಕುಸಿತ
ಬೆಂಗಳೂರು, ಮೇ 18: ರಾಜ್ಯದಲ್ಲಿ ಮಾವಿನ ಹಣ್ಣಿನ ಋತು ಈಗಾಗಲೇ ಆರಂಭವಾಗಿದ್ದು, ಅನಿರೀಕ್ಷಿತ ತಾಪಮಾನ ಏರಿಕೆ ಹಾಗೂ ಅಕಾಲಿಕ ಮಳೆ ಸೇರಿ ವಿವಿಧ ಕಾರಣಗಳಿಂದ ಮಾವಿನ ಹಣ್ಣಿನ ಇಳುವರಿ ಕಡಿಮೆಯಾಗಿದೆ.
ರಾಜ್ಯದಲ್ಲಿ ಮಾವಿನ ಋತುವು ಸಾಮಾನ್ಯವಾಗಿ ಎಪ್ರಿಲ್ ಕೊನೆಯ ವಾರದಿಂದ ಜೂನ್ ಅಂತ್ಯದವರೆಗೆ ಇರಲಿದ್ದು, ಮಾವಿನ ಹಣ್ಣು ಮಾರುಕಟ್ಟೆಗೆ ಈಗಾಗಲೇ ಆಗಮಿಸಿವೆ. ರಾಜ್ಯದಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಮಾವಿನ ಹಣ್ಣುಗಳನ್ನು ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಈ ಋತುವಿನಲ್ಲಿ ಮಾವು ನಿಗಮದ ತಾಂತ್ರಿಕ ಸಮಿತಿಯು 8-10 ಲಕ್ಷ ಮೆಟ್ರಿಕ್ ಟನ್ ಇಳುವರಿಯನ್ನು ಅಂದಾಜಿಸಿತ್ತು. ಆದರೆ ಅಂದಾಜುಗಿಂತ ಈಗ ಮಾವಿನ ಹಣ್ಣಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.
ಹೂಬಿಡುವ ತಿಂಗಳಾದ ಫೆಬ್ರವರಿಯಲ್ಲಿ ತಾಪಮಾನದಲ್ಲಿನ ಅಸಾಮಾನ್ಯ ಏರಿಕೆಯು ಕಾಯಿ ಕಚ್ಚುವುದು ಮತ್ತು ಕಾಯಿ ಬೀಳುವುದಕ್ಕೆ ಕಾರಣವಾಯಿತು. ಆದುದರಿಂದ ಅಂದಾಜು ಮಾಡಿರುವುದಕ್ಕಿಂತ ಈ ಬಾರಿಯ ಮಾವು ಇಳುವರಿ 2-3 ಲಕ್ಷ ಮೆಟ್ರಿಕ್ ಟನ್ ಕಡಿಮೆಯಾಗಬಹುದು. ಆದರೆ ಈ ಋತುವಿನಲ್ಲಿ ಮಾವು ಬೆಳೆಗೆ ಕೀಟ ಮತ್ತು ರೋಗಗಳ ಬಾಧೆ ಕಡಿಮೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯುವ ನಿರೀಕ್ಷೆಯಿದೆ.
ಮಾವು ನಿಗಮವು ತೋಟಗಾರಿಕೆ ಇಲಾಖೆಯ ಮೂಲಕ ಮಾವು ಬೆಳೆಯುವ ಜಿಲ್ಲೆಗಳಾದ್ಯಂತ ತಾಂತ್ರಿಕ ಮಾಹಿತಿ ಒದಗಿಸುವ ಮೂಲಕ ಮಾವು ಹಣ್ಣುಗಳ ಗುಣಮಟ್ಟದ ಉತ್ಪಾದನೆಗಾಗಿ ಮಾವು ಬೆಳೆಗಾರರಿಗೆ ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿದೆ.
ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಮಾರುಕಟ್ಟೆ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಮಾವು ನಿಗಮವು ಲಾಲ್‌ಬಾಗ್ ಮತ್ತು ಕರ್ನಾಟಕದ ಇತರ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಮೇಳಗಳನ್ನು ಆಯೋಜಿಸುತ್ತಿದೆ.
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾವು ಮೇಳವನ್ನು ಆರಂಭಿಸಲಾಗಿದೆ. ಮೇಳಗಳಲ್ಲಿ ಕೆಜಿಗೆ ಮಾವು 200 ರೂ.ವರೆಗೂ ಮಾರಾಟವಾಗುತ್ತಿದೆ. ಬಾದಾಮಿ, ಅಲ್ಫಾನ್ಸೋ, ಬಂಗನಪಲ್ಲಿ, ಇಮಾಮ್ ಪಸಂದ್, ತೋತಾಪುರಿ, ರುಮಾನಿ, ಮುಂಡಪ್ಪ, ರಸಪೂರಿ, ಮಲ್ಗೋವಾ, ಹಾಮ್ಲೆಟ್, ಸಿಂಧೂರ, ಕೇಸರ್, ಕಲಪಾಡಿ, ಕೊಂಕಣ್ ರುಚಿ, ಮಲ್ಲಿಕಾ ಮಾವಿನ ಹಣ್ಣಿನ ತಳಿಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಮತ್ತು ಮೇಳಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ.
ಫೆಬ್ರವರಿಯಲ್ಲಿ ಮಾವಿನ ಮರದಲ್ಲಿ ಒಳ್ಳೆಯ ಹೂವು ಬಿಟ್ಟಿದ್ದನ್ನು ನೋಡಿ, ಈ ಬಾರಿ ಒಳ್ಳೆಯ ಮಾವಿನ ಫಸಲು ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅನಿರೀಕ್ಷಿತ ತಾಪಮಾನ ಏರಿಕೆಯಿಂದ ಎಲ್ಲ ಹೂವು ಉದುರಿದೆ. ಇದರಿಂದ ಹಿಂದಿನ ವರ್ಷಕ್ಕಿಂತ ಈ ವರ್ಷ ನಮ್ಮ ತೋಟದಲ್ಲಿ ಶೇ.50ರಷ್ಟು ಮಾವಿನ ಫಸಲು ಕಡಿಮೆಯಾಗಲಿದೆ.
ಕಿರಣ್, ಮಾವಿನ ಬೆಳೆಗಾರರು