×
Ad

ಅನನ್ಯತೆ: ಪ್ರಾಚೀನತೆ ಮತ್ತು ಶ್ರೇಷ್ಠತೆಯ ವ್ಯಸನ

ಗ್ರಾಮ, ಸಮಾಜ, ಜಿಲ್ಲೆ, ರಾಜ್ಯ, ರಾಷ್ಟ್ರ ಇವುಗಳ ನಡುವೆ ಇವತ್ತು ನಡೆಯುತ್ತಿರುವ ಅನೇಕ ಸಂಘರ್ಷಗಳಿಗೆ ಸಮುದಾಯಗಳ ಅನನ್ಯತೆ ಕಾರಣವಾಗುತ್ತಿರುವುದು ವಿಷಾದದ ವಿಷಯವಾಗಿದೆ. ವೈವಿಧ್ಯತೆ ಒಂದು ಸಮಾಜದ, ರಾಷ್ಟ್ರದ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಇದನ್ನು ಮರೆತು ‘ನನ್ನ ಭಾಷೆ ಪ್ರಾಚೀನ, ಹಾಗಾಗಿ ಶ್ರೇಷ್ಠ’ ಎಂದೆಲ್ಲ ಜನಪ್ರಿಯತೆಗಾಗಿ, ಸ್ವಾರ್ಥ ರಾಜಕೀಯ ಲಾಭಕ್ಕಾಗಿ ವೇದಿಕೆ ಹತ್ತಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಕಮಲ್ ಹಾಸನ್ ಪ್ರಕರಣ ಒಂದು ಹೊಸ ನಿದರ್ಶನವಾಗಿದೆ.

Update: 2025-06-17 10:20 IST

ಖ್ಯಾತ ನಟ ಕಮಲ್ ಹಾಸನ್ ಅವರು ತಮಿಳು ಭಾಷೆಯ ಪ್ರಾಚೀನತೆ ಮತ್ತು ಶ್ರೇಷ್ಠತೆಯ ಬಗ್ಗೆ ಆಡಿದ ಮಾತು ಕನ್ನಡಿಗರ ಪ್ರತಿಭಟನೆಗೆ ಕಾರಣವಾಯಿತು. ಕನ್ನಡದ ಜೊತೆ ತುಲನೆ ಮಾಡಿ ತಮಿಳು ಕನ್ನಡಕ್ಕಿಂತ ಪ್ರಾಚೀನ ಎಂದು ಮುಖ್ಯ ಸಮಾರಂಭವೊಂದರಲ್ಲಿ ಹೇಳಿದ್ದರಿಂದಲೇ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು, ಅದರಿಂದಾಗಿ ಕಾರಣ ಈಗಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಕನ್ನಡವನ್ನು ಪ್ರಸ್ತಾವಿಸದೆ ತಮಿಳು ಭಾಷೆ ಪ್ರಾಚೀನ, ಶ್ರೇಷ್ಠ ಎಂದು ಹೇಳಿದ್ದರೆ ಅದು ವಿವಾದಕ್ಕೆ ಕಾರಣವಾಗುತ್ತಿರಲಿಲ್ಲವೋ ಏನೋ. ಕೋರ್ಟಿನ ಮೊರೆ ಹೋದ ಕಮಲ್ ಹಾಸನ್ ಅವರಿಗೆ ‘‘ನೀವು ಭಾಷಾ ವಿಜ್ಞಾನಿಯೇ? ನೀವು ಒಬ್ಬ ನಟ ತಾನೆ ! ಬಹು ಭಾಷೆಗಳಿರುವ ಒಂದು ಸಂದರ್ಭದಲ್ಲಿ ನೀವು ನೀಡಿದ ಒಂದು ತಪ್ಪು ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ. ಕ್ಷಮೆ ಯಾಚಿಸಿ ವಿವಾದಕ್ಕೆ ತೆರೆ ಎಳೆಯಬಹುದಲ್ಲವೇ?’’ ಎಂದು ನ್ಯಾಯಾದೀಶರು ಸೂಚಿಸಿದರೂ ಅವರು ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಕನ್ನಡಕ್ಕಿಂತ ತಮಿಳು ಪ್ರಾಚೀನ ಎಂದು ಹೇಳುವುದರ ಹಿಂದೆ, ಪ್ರಾಚೀನ ಮಾತ್ರವಲ್ಲ ಶ್ರೇಷ್ಠ ಎಂದು ಸಾರುವ ಮನೋಧರ್ಮ ಅವರಲ್ಲಿತ್ತು ಎನ್ನುವುದು ಸ್ಪಷ್ಟ. ಇದು ಪ್ರಾಚೀನತೆಯೇ ಶ್ರೇಷ್ಠತೆಯ ಮಾನದಂಡ ಎಂಬ ತಪ್ಪು ತಿಳುವಳಿಕೆಯ ವ್ಯಸನಕ್ಕೆ ಸಂಬಂಧಿಸಿದೆ. ದ್ರಾವಿಡ ವರ್ಗದ ಭಾಷೆಗಳಿಗೆ ಅನ್ವಯವಾಗುವ ಮೂಲದ್ರಾವಿಡ ಭಾಷೆಯನ್ನು ಪರಿಕಲ್ಪಿಸಿ ಅದರಿಂದ ದ್ರಾವಿಡ ವರ್ಗದ ಇತರ ಭಾಷೆಗಳು ಕಾಲಕ್ರಮೇಣ ಸಿಡಿದು/ಒಡೆದು ಬೇರೆ ಬೇರೆ ಭಾಷೆಗಳಾದುವು, ಮೂಲದ್ರಾವಿಡದಿಂದ ತಮಿಳಿಗಿಂತ ಕನ್ನಡ ಮೊದಲು ಬೇರೆಯಾಯಿತು, ತಮಿಳು ಆಮೇಲೆ ಪ್ರತ್ಯೇಕ ಭಾಷೆಯಾಗಿ ವಿಕಾಸಗೊಂಡಿತು. ಹಾಗಾಗಿ ತಮಿಳಿನಲ್ಲಿ ಮೂಲದ್ರಾವಿಡದ ಲಕ್ಷಣಗಳು ಹೆಚ್ಚು ಕಂಡುಬರುತ್ತವೆ. ಒಂದು ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟುತ್ತದೆ ಎಂಬುದು ಸರಿಯಲ್ಲ. ವಾಸ್ತವಿಕವಾಗಿ ಅವು ವಿಕಾಸದ ಹಾದಿಯನ್ನು ಪಡೆಯುತ್ತವೆ. ‘‘ಮೂಲ ದ್ರಾವಿಡದ ಅಂಶಗಳು ತಮಿಳಿನಲ್ಲಿ ಹೆಚ್ಚು ಇವೆ ಎಂಬ ಕಾರಣಕ್ಕೆ ತಮಿಳು ಶ್ರೇಷ್ಠ ಅಲ್ಲ’’ ಎಂದು ವಿವರಿಸಿದ್ದ ಭಾಷಾ ವಿಜ್ಞಾನಿಗಳ ಅಭಿಪ್ರಾಯವನ್ನು, ಅದು ಗೊತ್ತಿದ್ದರೂ ಅಥವಾ ಅದನ್ನು ಗಮನಕ್ಕೆ ತಂದರೂ, ಕಮಲ್‌ಹಾಸನ್ ಅವರು ಒಪ್ಪಲು ತಯಾರಿಲ್ಲ. ಇದಕ್ಕೆ ಕಾರಣ ತಮಿಳು ಭಾಷೆಯ ಜೊತೆ ಅವರು ಸ್ಥಾಪಿಸಿಕೊಂಡಿರುವ ‘ಭಾಷಾ ಅನನ್ಯತೆ’ ಎಂಬ ಅತಿರೇಕದ ಸಂಬಂಧ!

ಜನರು ತಾವು ಮಾತನಾಡುವ ಭಾಷೆಯ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅನನ್ಯತೆ ಅಂದರೆ ಭಾಷೆ, ವಸ್ತು, ಸ್ಥಳ, ಚಿಹ್ನೆ ಮೊದಲಾದ ವಿಷಯಗಳ ಜೊತೆ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳುವ ಒಂದು ಕ್ರಮ, ಒಂದು ಪ್ರವೃತ್ತಿ. ಇದು ಎಲ್ಲಾ ಸಮುದಾಯಗಳ ಜನರಲ್ಲಿ ಕಂಡುಬರುವ ಒಂದು ಸಾಮಾನ್ಯ ಪ್ರವೃತ್ತಿ. ಕರ್ನಾಟಕದ ಭಾಷೆಗಳಾದ ಕನ್ನಡ, ತುಳು, ಕೊಡವ, ಗೌಡಕನ್ನಡ, ಬ್ಯಾರಿ, ಕೊಂಕಣಿ, ಬಂಜಾರ, ಹವ್ಯಕ, ಮರಾಟಿ, ಕೊರಗ, ಹಾಲಕ್ಕಿ, ಉತ್ತರ ಕರ್ನಾಟಕದ ಅನೇಕ ಬುಡಕಟ್ಟು ಭಾಷೆಗಳನ್ನು ಮಾತನಾ ಡುವ ಜನರು ಅವರವರ ಭಾಷೆಯ ಜೊತೆಗೆ ಅನನ್ಯ ಎಂಬಂತೆ ಗುರುತಿಸಿಕೊಂಡಿದ್ದಾರೆ. ಅನೇಕ ಸಮುದಾಯಗಳ ಜನರು ಮನೆಮಾತು, ಸ್ಥಳೀಯ ಭಾಷೆ ಮತ್ತು ಕನ್ನಡ ಹೀಗೆ ಎರಡು ಮೂರು ಭಾಷೆಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ಹೀಗೆ ಒಂದಕ್ಕಿಂತ ಹೆಚ್ಚು ಭಾಷೆಗಳ ಜೊತೆ ಗುರುತಿಸಿಕೊಳ್ಳುವಾಗ ಆದ್ಯತೆಯ ಪ್ರಶ್ನೆಯೂ ಎದುರಾಗುತ್ತದೆ. ಇದರ ಸೂಕ್ಷ್ಮ ಚರ್ಚೆಗೆ ನಾನು ಹೋಗುವುದಿಲ್ಲ. ಭಾಷೆ/ ಭಾಷೆಗಳ ಜೊತೆ ಗುರುತಿಸಿಕೊಳ್ಳುವ ಇಂತಹ ಪ್ರವೃತ್ತಿ ಅಥವಾ ಪ್ರಕ್ರಿಯೆ ಬೇರೆಯವರಲ್ಲಿ ಇಲ್ಲ ಎಂದು ಹೇಳುವುದು ತಪ್ಪು. ಹೀಗೆ ಗುರುತಿಸಿಕೊಳ್ಳುವುದರ ಮೂಲಕ ಪ್ರಾಪ್ತವಾಗುವ ಅನನ್ಯತೆಯಿಂದ ನಾವು ಇತರರಿಂದ ಶ್ರೇಷ್ಠರಾಗುತ್ತೇವೆ ಎಂದು ಭಾವಿಸುವುದು ಮಾತ್ರ ಭ್ರಮೆ. ಹೀಗೆ ಭಾಷೆ, ವಸ್ತು, ಆರಾಧನೆ, ಬಣ್ಣ, ಆಚರಣೆ, ಆಹಾರ ಮೊದಲಾದ ಸಂಗತಿಗಳ ಜೊತೆ ಗುರುತಿಸಿಕೊಂಡು, ಇದು ನಮ್ಮ ಅನನ್ಯತೆ ಎಂದು ಸಾರ್ವಜನಿಕವಾಗಿ ಸಾರುವ ಅತ್ಯುತ್ಸಾಹದಲ್ಲಿ ಇತರರು ಗುರುತಿಸಿಕೊಂಡಿರುವ ಅಂಥದ್ದೇ ಮಾದರಿಯ ಅನನ್ಯತೆಯನ್ನು ಧಿಕ್ಕರಿಸುವ, ಪ್ರಶ್ನಿಸುವ ಮತ್ತು ಅವಹೇಳನ ಮಾಡುವ ಮನೋಸ್ಥಿತಿ ಅಪಾಯಕಾರಿಯಾದುದು. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದು. ಕಮಲ್ ಹಾಸನ್ ಸೃಷ್ಟಿಸಿರುವ ಭಾಷಾ ಕಲಹಕ್ಕೆ, ಭಾಷಾ ಸಮುದಾಯಗಳ ನಡುವಣ ವೈರತ್ವ ಮತ್ತು ದ್ವೇಷಗಳಿಗೆ ಇದು ಕಾರಣವಾಗಿದೆ.

ಇಂದಿನ ದಿನಗಳಲ್ಲಿ ಬೇರೆಬೇರೆ ಸಮುದಾಯಗಳನ್ನು ಅಧ್ಯಯನ ನಡೆಸಿರುವ ವಿದ್ವಾಂಸರು ಅಂತಹ ಸಮುದಾಯಗಳ ಅನನ್ಯತೆಗಳನ್ನು ಗುರುತಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾ ಬಂದಿದ್ದಾರೆ. ತುಳುನಾಡನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಇದಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಪ್ರಸ್ತಾವಿಸುತ್ತೇನೆ. ಅನನ್ಯತೆಗಳನ್ನು ಗುರುತಿಸುವ ಭರದಲ್ಲಿ ಅವುಗಳು ಉಂಟುಮಾಡಬಹುದಾದ ಅಪಾಯಗಳನ್ನು ಗಮನಿಸದೇ ಇರುವುದು ಸರಿಯಲ್ಲ. ಒಂದು ನಿರ್ದಿಷ್ಟ ಸಮುದಾಯದ ಅನನ್ಯತೆಗಳನ್ನು ಗುರುತಿಸಿ ಹೇಳುವಾಗ ಇತರ ಸಮುದಾಯಗಳು ಅವುಗಳದ್ದೇ ಆದ ವಿಶಿಷ್ಟ ಅನನ್ಯತೆಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಗೌರವದಿಂದ ನೋಡುವ ಮನೋಧರ್ಮ ಇರಬೇಕು ಎಂದು ಹೇಳುವ ಅಗತ್ಯವಿದೆ.

ಅನನ್ಯತೆ ಎಂಬುದು ಆಯಾ ಸಮುದಾಯಗಳಿಗೆ ಸಾಮಾಜಿಕ ಮನ್ನಣೆಯನ್ನು ತರುವ ಗುರುತಾಗಿದೆ. ಸಮುದಾಯದ ಜನರನ್ನು ಈ ಅನನ್ಯತೆಯ ಅಂಶ ಒಂದುಗೂಡಿಸುತ್ತದೆ. ಸಮುದಾಯಗಳ ಹೋರಾಟದ ಸಂದರ್ಭದಲ್ಲಿ ಅನನ್ಯತೆಯ ಅಂಶ ಹೆಚ್ಚಿನ ಬಲವನ್ನೂ ಕೆಚ್ಚನ್ನು ತಂದುಕೊಡುತ್ತದೆ. ಸಮುದಾಯಗಳಿಗೆ ಪ್ರತ್ಯೇಕತೆಯನ್ನೂ ಸಾಂಸ್ಕೃತಿಕ ವಿಶಿಷ್ಟತೆಯನ್ನೂ ತಂದುಕೊಡುವ ಶಕ್ತಿ ಅನನ್ಯತೆಗೆ ಇರುತ್ತದೆ. ಅದು ಒಗ್ಗೂಡಿಸುವ ಕೆಲಸವನ್ನೂ ಮಾಡುತ್ತದೆ. ‘‘ಅನನ್ಯತೆ ಎಂಬುದು ಭಾಷೆ, ವೇಷಭೂಷಣ, ಸಂಗೀತ, ಕುಣಿತ, ವಾಸ್ತುಶಿಲ್ಪ, ಇತಿಹಾಸ, ಪುರಾಣ, ಆಚರಣೆ, ಭೌಗೋಳಿಕ ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿರುತ್ತವೆ. ಹೆಸರುಗಳು, ಧ್ವಜಗಳು, ಬಣ್ಣಗಳು ಮುಂತಾದ ಚಿಹ್ನೆಗಳು ಆಗಬಹುದು. ಇವುಗಳಿಗೆಲ್ಲಾ ಸಾಂಕೇತಿಕ ಅರ್ಥಗಳು ಇರುತ್ತವೆ. ಅನನ್ಯತೆಯನ್ನು ಹೊಂದಿದ ಸಮುದಾಯವು ಈ ರೀತಿ ಆಯ್ಕೆ ಮಾಡಿದ ಸಂಕೇತಗಳ ಅರ್ಥ ಮತ್ತು ಭಾವನೆಗಳ ಮೂಲಕ ಒಂದುಗೂಡುತ್ತವೆ’’(ಬಿ.ಎ. ವಿವೇಕ ರೈ).

ತುಳುನಾಡಿನಲ್ಲಿ ಸಮುದಾಯಗಳು ತಮ್ಮ ಅನನ್ಯತೆಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಪ್ರಕಟಿಸುವುದನ್ನು ಕಾಣಬಹುದು. ನಲಿಕೆ, ಪರವ ಮತ್ತು ಪಂಬದ ಜಾತಿಯ ಜನರು ಭೂತಗಳ ಹುಟ್ಟು, ಕಾರಣಿಕ ಮತ್ತು ಪ್ರಸರಣವನ್ನು ವಿವರಿಸುವ ಪಾಡ್ದನಗಳ ಅಧಿಕೃತ ಒಡೆಯರಾಗಿ ಮತ್ತು ದೈವಾರಾಧನೆಯ ನರ್ತಕರಾಗಿ ಪ್ರಸಿದ್ಧರಾಗಿದ್ದಾರೆ. ಜನಪದ ವೈದ್ಯ ಮತ್ತು ಕರಕುಶಲ ಕಸುಬುಗಳ ಸೃಜನಶೀಲತೆಯಿಂದ ಗಮನ ಸೆಳೆದಿದ್ದಾರೆ. ಚಿಕಿತ್ಸಕರಾಗಿ ಮತ್ತು ನ್ಯಾಯ ನೀಡುವ ದೈವ ಮಾಧ್ಯಮವಾಗಿ ತಮ್ಮ ಮದಿಪು ನುಡಿಕಟ್ಟುಗಳ ಮೂಲಕ ಶಕ್ತರು ಎನ್ನಿಸಿದ್ದಾರೆ. ಈ ಅಂಶಗಳು ಅವರ ಅನನ್ಯತೆಯ ಗುರುತುಗಳಾಗಿವೆ. ಬಿಲ್ಲವರು ತಾಳೆ ಮರದಿಂದ ಶೇಂದಿ ಇಳಿಸುವ ಮೂರ್ತೆಗಾರಿಕೆಗೆ ಪ್ರಸಿದ್ಧರು. ಈ ಸಾಂಪ್ರದಾಯಿಕ ಕಸುಬಿನಲ್ಲಿ ಬಳಸುವ ತರ್ಕತ್ತಿ, ಕೈತಳೆ ಮತ್ತು ಕಾಲ ತಳೆಯನ್ನು ತಮ್ಮ ಸಮುದಾಯದ ಅನನ್ಯ ಗುರುತುಗಳು ಎಂದು ಭಾವಿಸಿದ್ದಾರೆ. ಒಗ್ಗಟ್ಟು ಪ್ರದರ್ಶಿಸುವ ಮತ್ತು ಸಾರ್ವಜನಿಕ ಹೋರಾಟದ ಒಂದು ಸಂದರ್ಭದಲ್ಲಿ ಈ ವಸ್ತುಗಳನ್ನು ಹಿಡಿದುಕೊಂಡು ಬಿಲ್ಲವರು ಮೆರವಣಿಗೆ ಹೋಗಿ ತಮ್ಮ ಸಮುದಾಯದ ಅನನ್ಯತೆಯನ್ನು ಪ್ರಕಟಿಸಿದ್ದಾರೆ. ತಮ್ಮದು ಸಾಹಸ ಪ್ರವೃತ್ತಿ ಎಂಬುದಕ್ಕೆ ಅವರ ವೃತ್ತಿಯನ್ನು ಉಲ್ಲೇಖಿಸುತ್ತಾ ಬಂದಿದ್ದಾರೆ. ಗೌಡರು ಅವರು ನಡೆಸುವ ಬೇಸಾಯದಲ್ಲಿ ಅವರ ಅನನ್ಯತೆ ಇದೆ ಎಂದಿದ್ದಾರೆ. ಬೇಸಾಯ ಸಂಬಂಧೀ ಆಚರಣೆಗಳಲ್ಲಿ, ಜೀವನಾವರ್ತನ ಮತ್ತು ವಾರ್ಷಿಕಾವರ್ತನ ಆಚರಣೆಗಳಲ್ಲಿ ಪ್ರಕಟವಾಗುವ ಲೋಕದೃಷ್ಟಿಯಲ್ಲಿ ಅವರ ಅನನ್ಯತೆಯನ್ನು ಕಾಣಬಹುದು. ಬಂಟರು ಬೇಸಾಯದಲ್ಲಿ, ಕೃಷಿ ಸಂಬಂಧಿಯಾಗಿ ನಡೆಸುವ ಕಂಬಳದಂತಹ ಆಚರಣಾತ್ಮಕ ಕ್ರೀಡೆಗಳಲ್ಲಿ ಅವರ ಅನನ್ಯತೆ ಅಡಗಿದೆ ಎಂದು ನಂಬಿದ್ದಾರೆ. ಮುಗೇರ ಸಮುದಾಯದವರ ಅನನ್ಯತೆಯನ್ನು ಮುಗೇರ ಕೋಲ ಮತ್ತು ದುಡಿ ಕುಣಿತಗಳಲ್ಲಿ ಗುರುತಿಸಬಹುದು. ಮುಗೇರರ ಅಧಿದೈವ ಮುದ್ದ ಕಳಲ, ಆದಿಕರ್ನಾಟಕ ಸಮುದಾಯದ ಕಾಣದ ಕಾಟದ, ಗೌಡರ ಉಳ್ಳಾಯ ಉಳ್ಳಾಕುಲು ಹೀಗೆ ಕೆಲವು ಸಮುದಾಯದವರು ತಾವು ಮುಂದೆ ನಿಂತು ನಡೆಸುವ ಆರಾಧನೆಗಳ ಮೂಲಕ ತಮ್ಮ ಅನನ್ಯತೆಯನ್ನು ಸಾರಿದ್ದಾರೆ. ಈ ದೈವಗಳನ್ನು ನಿರ್ದಿಷ್ಟ ಸಮುದಾಯದವರು ಅವರ ಸಾಂಸ್ಕೃತಿಕ ವೀರರು ಎಂದು ಪರಿಗಣಿಸಿ ಗೌರವಿಸಿದ್ದಾರೆ. ಬಂಟರ ಅನನ್ಯತೆಯನ್ನು ಸಿರಿ ಬಳಗದಲ್ಲಿ ಅವರು ಕಂಡಿದ್ದಾರೆ. ಬೇಸಾಯವನ್ನು, ಭೂತಾರಾಧನೆಯನ್ನು, ಕಂಬಳವನ್ನು, ಇತರ ಕೆಲವು ಆಚರಣೆಗಳನ್ನು ಇಡಿಯ ತುಳುನಾಡಿನ ಅನನ್ಯತೆಯ ಗುರುತಾಗಿ ಪರಿಭಾವಿಸಿದ್ದೂ ಇದೆ. ಇಂತಹ ಅನನ್ಯತೆಗಳು ಸಮುದಾಯಗಳ ನಡುವೆ ಮಾಡುವ ಹೋಲಿಕೆಗಳಿಂದ ಸಿದ್ಧವಾಗುತ್ತವೆ. ಈ ಅನನ್ಯತೆಗಳು ಸಮುದಾಯಗಳಿಗೆ ಪ್ರತ್ಯೇಕತೆಯನ್ನು ತಂದುಕೊಡುತ್ತವೆ. ಈ ಅನನ್ಯತೆಗಳನ್ನು ಕಾಪಾಡಿಕೊಳ್ಳುವ ಜಾಗೃತಿಯನ್ನು ಜನರಲ್ಲಿ ಮೂಡಿಸುತ್ತವೆ. ಈ ಅನನ್ಯತೆಗಳಿಗೆ ದೀರ್ಘಕಾಲದ ಮುದ್ರೆ ಇರುವುದರಿಂದ ಅವುಗಳನ್ನು ಕಾಪಾಡಿಕೊಳ್ಳಲು ನಿರಂತರ ಪರಿಶ್ರಮ ಪಡುತ್ತಾರೆ. ಅಂಚಿಗೆ ತಳ್ಳಲ್ಪಟ್ಟ ರೈತ, ದಲಿತ ಮತ್ತು ಕಾರ್ಮಿಕ ಸಮುದಾಯಗಳ ಅಧ್ಯಯನದ ಪರಿಣಾಮವಾಗಿ ಅಂತಹ ಅವಕಾಶವಂಚಿತ ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಗಳು ಮುನ್ನೆಲೆಗೆ ಬಂದು ಅವು ತಲೆ ಎತ್ತಿ ನಿಲ್ಲುವಂತಾದುದು ಧನಾತ್ಮಕ ಬೆಳವಣಿಗೆಯೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗೆ ಅನಾವರಣಗೊಂಡ ಅನನ್ಯತೆಗಳು ಸಾಮಾಜಿಕ ಸಂಘಟನೆಗೆ ಪ್ರೇರಕವಾಗಬೇಕೇ ಹೊರತು ವಿಘಟನೆಗಲ್ಲ.

ತುಳುನಾಡಿನ ಎಲ್ಲಾ ಜನಸಮುದಾಯಗಳ ಜನರು ಭಾಷೆ, ಆರಾಧನೆ, ಆಹಾರ, ವೇಷಭೂಷಣ, ಆಚರಣೆ, ಕಸುಬು, ವಾಸಸ್ಥಾನ, ನ್ಯಾಯ, ದುಡಿಮೆ, ಕಾಲ, ಸ್ವರ್ಗ-ನರಕ, ಪಾಪ-ಪುಣ್ಯ ಪರಿಕಲ್ಪನೆ ಮೊದಲಾದ ಸಂಗತಿಗಳ ಕುರಿತಂತೆ ಅನನ್ಯವಾದ ಗ್ರಹಿಕೆಗಳನ್ನು ಹೊಂದಿದ್ದಾರೆ. ಒಂದು ಸಮುದಾಯ ಹೊಂದಿರುವ ಇಂತಹ ಅನನ್ಯತೆಗಳು ಇತರ ಸಮುದಾಯಗಳಿಗಿಂತ ಭಿನ್ನವಾಗಿರುತ್ತವೆ ಎಂಬುದು ಮುಖ್ಯ. ಈ ಅನನ್ಯತೆಗಳನ್ನು ಪರಸ್ಪರ ವಿರೋಧೀ ನೆಲೆಯಿಂದ ನೋಡಬಾರದು. ಭಿನ್ನತೆ ಯಾವತ್ತೂ ವೈರುಧ್ಯವಲ್ಲ. ಭಿನ್ನತೆಗಳಿರುವುದು ಸಮಾಜದ ಬಹುತ್ವದ ಲಕ್ಷಣ. ಹಾಗಾಗಿ ಅನನ್ಯತೆ ಎಂಬುದು ಬಹುಭಾಷಿಕರ ನಡುವೆ, ಬಹು ಸಂಸ್ಕೃತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಾರದು. ಅನನ್ಯತೆಗಳು ಸಮಾಜದ ಸಮೃದ್ಧಿಯ ಸೂಚಕಗಳು ಎಂಬುದನ್ನು ಮರೆಯಬಾರದು. ವಿವಿಧ ಭಾಷಿಕ ಸಮುದಾಯಗಳಲ್ಲಿ ಇರುವ ಆರಾಧನಾ ಪದ್ಧತಿಗಳ ನಡುವೆ, ಜನಪದ ಕುಣಿತಗಳ ನಡುವೆ, ಜನರು ಮಾತನಾಡುವ ಭಾಷೆಗಳ ನಡುವೆ ಸ್ಪರ್ಧೆ ಇಲ್ಲ, ಇರಬಾರದು. ಜನಪದ ಕುಣಿತಗಳು, ಆರಾಧನೆಗಳು, ಭಾಷೆಗಳು ಇರುವುದು ನಿರ್ವಹಣೆ ಮತ್ತು ಪ್ರದರ್ಶನಕ್ಕೆ ಹೊರತು ಸ್ಪರ್ಧೆಗೆ ಅಲ್ಲ ಎಂಬ ಎಚ್ಚರ ಇರಬೇಕು. ಇದನ್ನು ಮರೆತು ವರ್ತಿಸಿದ ಸಮುದಾಯಗಳ ನಡುವೆ ಜಗಳ ತಪ್ಪಿದ್ದಲ್ಲ. ಗ್ರಾಮ, ಸಮಾಜ, ಜಿಲ್ಲೆ, ರಾಜ್ಯ, ರಾಷ್ಟ್ರ ಇವುಗಳ ನಡುವೆ ಇವತ್ತು ನಡೆಯುತ್ತಿರುವ ಅನೇಕ ಸಂಘರ್ಷಗಳಿಗೆ ಸಮುದಾಯಗಳ ಅನನ್ಯತೆ ಕಾರಣವಾಗುತ್ತಿರುವುದು ವಿಷಾದದ ವಿಷಯವಾಗಿದೆ. ವೈವಿಧ್ಯತೆ ಒಂದು ಸಮಾಜದ, ರಾಷ್ಟ್ರದ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಇದನ್ನು ಮರೆತು ‘ನನ್ನ ಭಾಷೆ ಪ್ರಾಚೀನ, ಹಾಗಾಗಿ ಶ್ರೇಷ್ಠ’ ಎಂದೆಲ್ಲ ಜನಪ್ರಿಯತೆಗಾಗಿ,

ಸ್ವಾರ್ಥ ರಾಜಕೀಯ ಲಾಭಕ್ಕಾಗಿ ವೇದಿಕೆ ಹತ್ತಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಕಮಲ್ ಹಾಸನ್ ಪ್ರಕರಣ ಒಂದು ಹೊಸ ನಿದರ್ಶನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕೆ. ಚಿನ್ನಪ್ಪ ಗೌಡ

contributor

Similar News