ಯು.ಪಿ.: ಕೇಶವ್ ಮೌರ್ಯ ಮತ್ತೆ ಮುನ್ನೆಲೆಗೆ?
ಯುಪಿಯಲ್ಲಿ ಆದಿತ್ಯನಾಥ್ ದರ್ಬಾರ್ ವನ್ ಮ್ಯಾನ್ ಶೋ ರೀತಿಯಲ್ಲಿದೆ. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಅವರನ್ನು ದೂರವಿಡಲು ಸಾಧ್ಯವಾಗುವುದಿಲ್ಲ. ಅದೇ ವೇಳೆ ಬಿಜೆಪಿಗೆ ತನ್ನ ಒಬಿಸಿ ಬಲ ಹೆಚ್ಚಿಸಿಕೊಳ್ಳುವ ದಾರಿಯೂ ಬೇಕಾಗಿದೆ. ಅದಕ್ಕಾಗಿಯೇ ಒಬಿಸಿ ಮುಖವಾಗಿರುವ ಕೇಶವ್ ಮೌರ್ಯ ಅವರನ್ನು ಅವರ ಎಲ್ಲ ವೈಫಲ್ಯಗಳ ನಂತರವೂ ಮತ್ತೊಮ್ಮೆ ಮುಂದೆ ತರಲಾಗುತ್ತಿದೆ. ಈಗ ಅವರ ಸ್ಥಾನ ಭದ್ರ ಎನ್ನುವ ಸೂಚನೆ ಸಿಕ್ಕಿದೆ.
✍️ ಅಜಿತ್ ಕೆ.ಸಿ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ್ದಾಗಿನ ವಿದ್ಯಮಾನವೊಂದು ಉತ್ತರ ಪ್ರದೇಶ ರಾಜಕೀಯದಲ್ಲಿ, ಅದರಲ್ಲೂ ಬಿಜೆಪಿ ನಾಯಕತ್ವದ ವಿಚಾರದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಹೊಸದಾಗಿ ನೇಮಕಗೊಂಡ 60,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲು ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ರಾಜಕೀಯ ದಿಕ್ಕಿನ ಬಗ್ಗೆ, ಇದು ಬೇರೆ ಬೇರೆ ನೆಲೆಯಿಂದ ಮಹತ್ವದ ಸೂಚನೆಗಳನ್ನು ಸೂಕ್ಷ್ಮವಾಗಿ ನೀಡಿದಂತಿತ್ತು.
ವೇದಿಕೆಯಲ್ಲಿ ಅಮಿತ್ ಶಾ ಮಧ್ಯಭಾಗದಲ್ಲಿ ಕುಳಿತಿದ್ದರೆ, ಅವರ ಬಲಭಾಗದಲ್ಲಿ ಆದಿತ್ಯನಾಥ್ ಮತ್ತು ಎಡಭಾಗದಲ್ಲಿ ಕೇಶವ್ ಮೌರ್ಯ ಕುಳಿತಿದ್ದರು. ಕಾರ್ಯಕ್ರಮದುದ್ದಕ್ಕೂ ಅಮಿತ್ ಶಾ ಇಬ್ಬರೂ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದುದ್ದು ಕಂಡುಬಂತು. ಆದರೆ ಇದಕ್ಕಿಂತ ಹೆಚ್ಚಾಗಿ ಕುತೂಹಲಕ್ಕೆ ಕಾರಣವಾದದ್ದು ಅಮಿತ್ ಶಾ ಅವರ ಭಾಷಣ.
ಅಮಿತ್ ಶಾ ಮಾತನಾಡುತ್ತ, ಆದಿತ್ಯನಾಥ್ ಅವರ ಎದುರಲ್ಲಿಯೇ ಕೇಶವ್ ಮೌರ್ಯ ಅವರನ್ನು ತಮ್ಮ ಆತ್ಮೀಯ ಸ್ನೇಹಿತ ಎಂದು ವಿಶೇಷವಾಗಿ ಹೇಳಿದರು. ಜೊತೆಗೆ ಆದಿತ್ಯನಾಥ್ ಅವರ ಬಗ್ಗೆ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಮುಖ್ಯಮಂತ್ರಿ ಎಂದು ಕೂಡಾ ಹೇಳಿದರು.
ಅಮಿತ್ ಶಾ ಅವರು ಮೌರ್ಯ ಬಗ್ಗೆ ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ವೈರಲ್ ಆದ ಹೆಚ್ಚಿನ ಕ್ಲಿಪ್‌ಗಳು ಶಾ ಅವರು ಮೌರ್ಯ ಅವರನ್ನು ತಮ್ಮ ಸ್ನೇಹಿತ ಎಂದು ಕರೆದದ್ದನ್ನೇ ಹೆಚ್ಚು ಫೋಕಸ್ ಮಾಡಿದ್ದವು.
ಅಮಿತ್ ಶಾ ಹೀಗೆ ಹೇಳಿದ್ದರ ಅರ್ಥವೇನು?
ಮೌರ್ಯ ಅವರನ್ನು ತಮ್ಮ ಸ್ನೇಹಿತ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಮೂಲಕ, ಅವರನ್ನು ಹೈಕಮಾಂಡ್ ಈಗಲೂ ಮುಖ್ಯರೆಂದು ಪರಿಗಣಿಸುತ್ತದೆ ಎಂದು ಶಾ ಸೂಚಿಸಿದಂತಿದೆ. ಮೌರ್ಯ ಅವರ ಇತ್ತೀಚಿನ ಹಿನ್ನಡೆಗಳ ಹೊರತಾಗಿಯೂ, ಪಕ್ಷದಲ್ಲಿ ಅವರ ಉನ್ನತ ನಾಯಕತ್ವಕ್ಕೆ ಯಾವುದೇ ಧಕ್ಕೆಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ತಮ್ಮ ಮಾತಿನ ಮೂಲಕ ಯುಪಿ ಬಿಜೆಪಿಗೂ ಅಮಿತ್ ಶಾ ಈ ಸಂದೇಶ ಮುಟ್ಟಿಸಿದ ಹಾಗೆ ಕಾಣುತ್ತದೆ.
ಅಮಿತ್ ಶಾ ಅವರ ಹೇಳಿಕೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ಒಬಿಸಿ ಮುಖವಾಗಿ ಮೌರ್ಯ ಅವರ ಪ್ರಸ್ತುತತೆಯನ್ನು ಸೂಚಿಸಿರುವ ಹಾಗೆ ಕಾಣಿಸುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಸ್ಥಾನವನ್ನು ಕಳೆದುಕೊಂಡಿದ್ದರು ಮೌರ್ಯ. ಲೋಕಸಭೆ ಚುನಾವಣೆಯಲ್ಲೂ ಒಬಿಸಿ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿನ್ನಡೆ ಅನುಭವಿಸಿದ ನಂತರ ಮೌರ್ಯ ಅವರ ರಾಜಕೀಯ ಸ್ಥಾನಮಾನ ಕುಸಿದಂತೆ ಕಂಡುಬಂದಿತ್ತು. ಇಂಥ ಸಂದರ್ಭದಲ್ಲಿ ಅಮಿತ್ ಶಾರಿಂದ ಇಂಥದೊಂದು ಹೇಳಿಕೆ ಬಂದಿರುವುದು ಮಹತ್ವ ಪಡೆದಿದೆ.
ಕೇಶವ್ ಪ್ರಸಾದ್ ಮೌರ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ 2017ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದರು. ಚುನಾವಣೆಯಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ಬಂದಿತ್ತು. ಸಹಜವಾಗಿ ಮೌರ್ಯ ಸಿಎಂ ಸ್ಥಾನದ ಮುಂಚೂಣಿ ಅಭ್ಯರ್ಥಿಯಾಗಿದ್ದರು. ಆದರೆ ದಿಢೀರನೇ ಮನೋಜ್ ಸಿನ್ಹಾ ಹೆಸರು ಬಂತು. ಆದರೆ ಕೊನೆಗೆ ಅಚ್ಚರಿಯ ಆಯ್ಕೆಯಾಗಿ ಆದಿತ್ಯನಾಥ್ ಸಿಎಂ ಆದರು.
ಆದಿತ್ಯನಾಥ್ ಅವರು ಸಂಘ ಪರಿವಾರದಿಂದ ಬಂದವರಲ್ಲ. ಬಿಜೆಪಿಯಲ್ಲೂ ಬಂಡಾಯ ನಾಯಕರಾಗಿಯೇ ಗುರುತಿಸಿಕೊಂಡವರು. ಸಂಘ ಪರಿವಾರಕ್ಕೆ ಪರ್ಯಾಯವಾಗಿ ತನ್ನದೇ ಸಂಘಟನೆ ಕಟ್ಟಿಕೊಂಡವರು. ಈಗ ಅದೇ ಆದಿತ್ಯನಾಥ್ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರಾಗಿ ಬೆಳೆದಿದ್ದಾರೆ. ಉತ್ತರ ಪ್ರದೇಶ ಬಿಜೆಪಿಗೆ ಅನಿವಾರ್ಯ ಎಂಬಂತಾಗಿ ಬಿಟ್ಟಿದ್ದಾರೆ.
ವಿರೋಧ ಪಕ್ಷಗಳು ಜಾತಿ ನಿರೂಪಣೆಗಳ ಮೇಲೆ ಹೆಚ್ಚು ಗಮನವಿಟ್ಟಿರುವ ಹಿನ್ನೆಲೆಯಲ್ಲಿ ಒಬಿಸಿ ಪ್ರಾತಿನಿಧ್ಯದ ಮೇಲೆ ಬಿಜೆಪಿ ಕೂಡ ಹೊಸದಾಗಿ ಒತ್ತು ನೀಡಲು ಮುಂದಾದಂತಿದೆ.
ಅಖಿಲೇಶ್ ಯಾದವ್ ಪದೇ ಪದೇ ಆದಿತ್ಯನಾಥ್ ಸರಕಾರವನ್ನು ನಿರ್ದಿಷ್ಟ ಜಾತಿಯ ಸರಕಾರ ಎಂದು ಕರೆದಿದ್ದಾರೆ. ಠಾಕೂರ್ ವರ್ಸಸ್ ಪಿಡಿಎ ಎಂಬ ನಿರೂಪಣೆಯನ್ನು ಅಖಿಲೇಶ್ ಮುಂದಿಟ್ಟಿದ್ದಾರೆ. ಆದ್ದರಿಂದ, ಮೌರ್ಯ ಅವರನ್ನು ಒಬಿಸಿ ಮುಖವಾಗಿ ಮತ್ತೊಮ್ಮೆ ಮುನ್ನೆಲೆಗೆ ತರುತ್ತಿರುವುದು ವಿರೋಧ ಪಕ್ಷಗಳ ಈ ನಿರೂಪಣೆಗೆ ಪ್ರತ್ಯಸ್ತ್ರವಾಗಿರುವಂತಿದೆ.
ಆದಿತ್ಯನಾಥ್ ಮೂರನೇ ಬಾರಿಗೆ ಅಧಿಕಾರಕ್ಕೆ ಬರಬೇಕೆಂದು ಬಯಸುವ ಒಂದು ಬಣವಿದೆ ಮತ್ತು ಅದನ್ನು ಬಯಸದ ಇನ್ನೊಂದು ಬಣವಿದೆ.
ಅಮಿತ್ ಶಾ ಅವರು ಕೇಶವ್ ಮೌರ್ಯ ಅವರನ್ನು ಸ್ನೇಹಿತ ಎಂದು ಕರೆದರೆ, ಆದಿತ್ಯನಾಥ್ ಅವರು ಶಾ ಅವರ ಸ್ನೇಹಿತರಲ್ಲವೇ ಎಂಬ ಪ್ರಶ್ನೆಯೂ ಬರುತ್ತದೆ.
ಇಲ್ಲಿ ಅಮಿತ್ ಶಾ ಹೇಳಿಕೆ ಕೇಶವ್ ಮೌರ್ಯ ಅವರ ಸ್ಥಾನಮಾನವನ್ನು ಹೆಚ್ಚಿಸುವ ಉದ್ದೇಶದ್ದಾಗಿದೆ. ಇದರ ನಂತರ ಕೇಶವ ಮೌರ್ಯ ಅವರ ಜಾತಿ ಮತ್ತು ಆದಿತ್ಯನಾಥ್ ಅವರ ಬಣ ಒಟ್ಟಿಗೆ ಬರುತ್ತದೆ. ಇದು ಹಿಂದೂ ಧರ್ಮದ ಮತಗಳನ್ನು ಸೆಳೆಯುವಲ್ಲಿ ಮುಖ್ಯವಾಗುವ ಅಂಶವಾಗುತ್ತದೆ.
ಠಾಕೂರರು ಸಂಪೂರ್ಣವಾಗಿ ಆದಿತ್ಯನಾಥ್ ಅವರೊಂದಿಗೆ ಇದ್ದಾರೆ. ಆದಿತ್ಯನಾಥ್ ಬಣ ಸರಕಾರ ಮತ್ತೆ ಒಗ್ಗೂಡಬೇಕು ಮತ್ತು ಆದಿತ್ಯನಾಥ್ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತದೆ.
ಈ ಅಪೇಕ್ಷೆ ಉತ್ತರ ಪ್ರದೇಶದ ಕಾರಣಕ್ಕಾಗಿ ಅಲ್ಲ. ದಿಲ್ಲಿಯಲ್ಲಿ ಅಧಿಕಾರಕ್ಕೆ ಹೋಗುವ ದಾರಿ ಉತ್ತರ ಪ್ರದೇಶದ ಮೂಲಕ ಹೋಗುತ್ತದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕು.
ಯುಪಿ ಸಿಎಂ ಸ್ಥಾನಕ್ಕೆ ಆದಿತ್ಯನಾಥ್ ಬಂದ ಬಳಿಕ ಅವರು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಸಮಸ್ಯೆ ಪ್ರಾರಂಭವಾಯಿತು.
ಮೋದಿ ನಂತರ ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಾಗ, ಮತ್ತೆ ಗೊಂದಲ ತಲೆದೋರಿತ್ತು. ಆಗ ಶುರುವಾದದ್ದೇ ದಿಲ್ಲಿ ಮತ್ತು ಲಕ್ನೊ ಸಂಘರ್ಷ. ಇದ್ದಕ್ಕಿದ್ದಂತೆ ಸಿಎಂ ಆದಿತ್ಯನಾಥ್ ವಿರುದ್ಧ ಬಿಜೆಪಿಯವರಿಂದಲೇ ಕೂಗೆದ್ದಿತು. ಇಲ್ಲಿಂದ ಗುಂಪುಗಾರಿಕೆ ನೇರವಾಗಿ ಮುನ್ನೆಲೆಗೆ ಬಂತು.
ಇದೇ ಕೇಶವ್ ಮೌರ್ಯ ಪಕ್ಷ ಸರಕಾರಕ್ಕಿಂತಲೂ ದೊಡ್ಡದಾಗಿದೆ ಎಂದು ಹೇಳಿದಾಗ, ಅದು ನೇರವಾಗಿ ಆದಿತ್ಯನಾಥ್ ವಿರುದ್ಧದ ಹೇಳಿಕೆಯಾಗಿತ್ತು. ಆನಂತರ ಆದಿತ್ಯನಾಥ್ ಅವರನ್ನು ತೆಗೆದುಹಾಕಲಾಗುತ್ತದೆ ಎಂಬೆಲ್ಲ ಮಾತುಗಳಿದ್ದವು. ಆದರೆ ಆದಿತ್ಯನಾಥ್ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದನ್ನು ಬಿಟ್ಟು ಬಿಜೆಪಿಗೆ ಬೇರೆ ದಾರಿ ಇರಲಿಲ್ಲ.
ಈ ಹಂತದಲ್ಲಿ ಆದಿತ್ಯನಾಥ್ ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡಲು ಶುರು ಮಾಡಿ, ಪ್ರಧಾನಿ ಹುದ್ದೆಗೆ ಮುಂದಿನ ಸ್ಪರ್ಧಿ ಎಂದು ತೋರಿಸಿಕೊಂಡರು.
ದೇಶದುದ್ದಕ್ಕೂ ಇದು ದೊಡ್ಡ ಚರ್ಚೆಯಾಯಿತು.
ಎಷ್ಟು ಅನಿವಾರ್ಯ ಸ್ಥಿತಿ ಬಿಜೆಪಿಗೆ ಬಂತೆಂದರೆ, ಅದು ಬಂಗಾಳ ಮತ್ತು ಕಾಶ್ಮೀರಕ್ಕೆ ಹಾಗೂ ಚುನಾವಣೆಗಳು ನಡೆಯುವಲ್ಲೆಲ್ಲಾ ತನ್ನ ಸ್ಟಾರ್ ಪ್ರಚಾರಕರನ್ನಾಗಿ ಆದಿತ್ಯನಾಥ್ ಅವರನ್ನು ಕಳಿಸಬೇಕಾಯಿತು.
ಯುಪಿಯಲ್ಲೂ ಆದಿತ್ಯನಾಥ್ ದರ್ಬಾರ್ ವನ್ ಮ್ಯಾನ್ ಶೋ ರೀತಿಯಲ್ಲಿದೆ. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಅವರನ್ನು ದೂರವಿಡಲು ಸಾಧ್ಯವಾಗುವುದಿಲ್ಲ.
ಅದೇ ವೇಳೆ ಬಿಜೆಪಿಗೆ ತನ್ನ ಒಬಿಸಿ ಬಲ ಹೆಚ್ಚಿಸಿಕೊಳ್ಳುವ ದಾರಿಯೂ ಬೇಕಾಗಿದೆ. ಅದಕ್ಕಾಗಿಯೇ ಒಬಿಸಿ ಮುಖವಾಗಿರುವ ಕೇಶವ್ ಮೌರ್ಯ ಅವರನ್ನು ಅವರ ಎಲ್ಲ ವೈಫಲ್ಯಗಳ ನಂತರವೂ ಮತ್ತೊಮ್ಮೆ ಮುಂದೆ ತರಲಾಗುತ್ತಿದೆ. ಈಗ ಅವರ ಸ್ಥಾನ ಭದ್ರ ಎನ್ನುವ ಸೂಚನೆ ಸಿಕ್ಕಿದೆ.
ಒಂದೆಡೆ ಹಿಂದೂ ಮೇಲ್ಜಾತಿಯ, ಠಾಕೂರರ ಮುಖವಾಗಿ ಆದಿತ್ಯನಾಥ್ ಪ್ರಬಲರಾಗಿರುವಾಗ, ಹಿಂದುಳಿದ ವರ್ಗದವರ ಮತಗಳನ್ನು ಪಡೆಯುವ ದಾರಿಯಾಗಿ ಕೇಶವ್ ಮೌರ್ಯ ಅವರನ್ನು ಮುನ್ನೆಲೆಯಲ್ಲಿರಿಸುವುದು ಬಿಜೆಪಿಯ ತಂತ್ರವಾಗಿದೆ.
ಬಿಜೆಪಿ ಹೈಕಮಾಂಡ್ ಆದಿತ್ಯನಾಥ್ ಅವರನ್ನು ಸರಕಾರದ ಮುಖವಾಗಿ ಸ್ಪಷ್ಟವಾಗಿ ಬೆಂಬಲಿಸುತ್ತದೆ ಮತ್ತು ಅದೇ ವೇಳೆ ಕೇಶವ್ ಮೌರ್ಯ ಅವರನ್ನು ಪ್ರಮುಖ ಒಬಿಸಿ ಮುಖವಾಗಿ ಮುಂದಿಡುತ್ತಿದೆ.