×
Ad

ಉಪ್ಪುಂದ: ರಾಜ್ಯದಲ್ಲೇ ಮೊದಲ ಬಾರಿ ಯಶಸ್ಸು ಕಂಡ 'ಸೀವೀಡ್ ಕೃಷಿ'

Update: 2025-05-05 10:03 IST

ಬೈಂದೂರು: ಕರಾವಳಿಯ ವೈವಿಧ್ಯಮಯ ಮೀನುಗಳಿಗೆ ರಾಜ್ಯದ ಎಲ್ಲಾ ಕಡೆಗಳಲ್ಲೂ ವಿಶೇಷ ಬೇಡಿಕೆ ಇದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ನದಿಯಲ್ಲಿ ಪಂಜರವಿಟ್ಟು ಬೆಳೆಸುವ ವಿವಿಧ ರೀತಿಯ ಮೀನುಗಳಿಗೆ ಬಾರೀ ಬೇಡಿಕೆ ಬರುತ್ತಿದೆ. ಪಂಜರ ಮೀನು ಕೃಷಿ, ಪಚ್ಚಿಲೆ ಕೃಷಿ ಜೊತೆಗೆ ಈ ಬಾರಿ ಸೀವೀಡ್ ಕೃಷಿ ಕುರಿತಂತೆ ರಾಜ್ಯ ದಲ್ಲೇ ಮೊದಲ ಬಾರಿಗೆ ಉಪ್ಪುಂದ ಕರ್ಕಿಕಳಿಯಲ್ಲಿ ಪ್ರಯೋಗ ಮಾಡಿದ್ದು, ಅತ್ಯಂತ ಯಶಸ್ವಿಯಾಗಿ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಜಿಲ್ಲೆಯಲ್ಲೇ ಪಂಜರ ಮೀನು ಕೃಷಿಯ ತವರು ಎನ್ನಬಹುದು. ಇಲ್ಲಿ ಆರಂಭಗೊಂಡ ಪಂಜರ ಮೀನು ಕೃಷಿ ಬಳಿಕ ಜಿಲ್ಲೆಯ ಹಲವೆಡೆ ವ್ಯಾಪಿಸಿತು. ಈ ಭಾಗದಲ್ಲಿ ಕಳೆದ ಒಂದೂವರೆ ದಶಕದಿಂದ ಪಂಜರ ಮೀನು ಕೃಷಿಯಲ್ಲಿ ತೊಡಗಿಸಿಕೊಂಡು ಸೀಬಾಸ್, ಸಿಲ್ವರ್ ಪಾಂಪೆನೋ ಮೊದಲಾದ ತಳಿ ಮೀನುಗಳನ್ನು ಬೆಳೆಯುತ್ತಿದ್ದ ಚಂದ್ರ ಖಾರ್ವಿ ಕರ್ಕಿಕಳಿ ಹಾಗೂ ಗಣೇಶ್ ಎನ್ನುವರು ಕಳೆದ ಒಂದೆರಡು ವರ್ಷ ಗಳಿಂದ ಪಚ್ಚಿಲೆ ಬೆಳೆದು ಯಶಸ್ವಿಯಾಗಿದ್ದರು. ಈ ಬಾರಿ ಮೊದಲ ಪ್ರಯೋಗ ಎಂಬಂತೆ ಸೀವೀಡ್ (ಜಲಸಸ್ಯ) ಬೆಳೆದಿದ್ದಾರೆ. 45 ದಿನಗಳಲ್ಲಿ ಸೀವೀಡ್ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ(ಎನ್‌ಎಫ್‌ಡಿಬಿ) ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು, ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ (ಸಿಎಂಎಫ್‌ಆರ್‌ಐ) ಮೂಲಕ ಮಂಗಳೂರು ಪ್ರಾದೇಶಿಕ ಕೇಂದ್ರ ಈ ಯೋಜನೆಯನ್ನು ಅನುಷ್ಠಾನ ಗೊಳಿಸಿದೆ. ಚಂದ್ರ ಖಾರ್ವಿ ಕರ್ಕಿಕಳಿ ಹಾಗೂ ಗಣೇಶ್ ಈ ಬಹುಸ್ತರ ಸಮಗ್ರ ಜಲಕೃಷಿ ಅಳವಡಿಸಿಕೊಂಡಿದ್ದಾರೆ.

ಈ ಬಾರಿ ತಾಲೂಕಿನ ಕರ್ಕಕಳಿ ಎಂಬಲ್ಲಿನ ನದಿಯಲ್ಲಿ ಪಂಜರ ಮೀನು ಕೃಷಿ ಮಾಡಿದ್ದು 5-6 ತಿಂಗಳ ಒಳಗೆ ಉತ್ತಮವಾಗಿ ಬೆಳೆಯಬಲ್ಲ, ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿರುವ ಸಿಲ್ವರ್ ಪಾಂಪೆನೊ (ಹೊಳೆ ಮಾಂಜಿ, ಹೊಳೆ ಪಾಂಪ್ರೆಟ್), ಪಚ್ಚಿಲೆ ಕೃಷಿ ಮಾಡಿದ್ದು ಸೀವೀಡ್ ಕೂಡ ಹಾಕಿದ್ದಾರೆ.

ಸೀವೀಡ್ ಉಪಯೋಗ: ಕಪ್ಪಾಫೈಕಸ್ ಆಲ್ವರೇಝಿ ಎಂಬ ಜಲಸಸ್ಯ (ಸೀವೀಡ್) ಐಸ್‌ಕ್ರೀಮ್ ಮೇಲಿನ ಜೆಲ್ಲಿ, ಔಷಧ, ಸೌಂದರ್ಯವರ್ಧಕ ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಅಲ್ಲದೇ ಗೊಬ್ಬರ ಮಾಡಲು ಕೆಲವು ಸೀವೀಡ್ ಉಪಕಾರಿ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದನ್ನು ಸಲಾಡ್ ಮಾಡಿ ತಿನ್ನುವ ಪರಿಪಾಠವಿದ್ದು, ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೆಯೇ ನೀರಿನಲ್ಲಿರುವ ತಾಜ್ಯ ವಸ್ತುಗಳನ್ನು ಸೀವೀಡ್ ಹೀರುವುದರಿಂದ ನೀರಿನ ಗುಣ ಮಟ್ಟ, ಶುದ್ಧತೆ ಹೆಚ್ಚುತ್ತದೆ ಎಂದು ವಿಜ್ಞಾನಿ ಗಳು ಹೇಳುತ್ತಾರೆ.

ರಾಜ್ಯದಲ್ಲೆ ಪ್ರಥಮ: ಉಡುಪಿ ಜಿಲ್ಲೆಯ ಕರ್ಕಿಕಳಿಯಲ್ಲಿ ಬಹುಸ್ತರ ಮೀನು ಕೃಷಿ ನಡೆಸುವ ಚಿಂತನೆಯಡಿ ‘ಸಿಲ್ವರ್ ಪಾಂಪೆನೊ’ ಹಾಗೂ ‘ಪಚ್ಚಿಲೆ’ ಜೊತೆಗೆ ’ಸೀವೀಡ್’ ಬೆಳೆಯುವ ಪರಿಣಾಮಕಾರಿ ಯೋಜನೆಗೆ ಮುಂದಾಗಿದ್ದು, ಪ್ರಸಕ್ತ ಜಿಲ್ಲೆಯಲ್ಲಿ ‘ಸಮಗ್ರ ಬಹುಸ್ಥರ ಜಲಕೃಷಿ’ಯಡಿ ಮೀನು, ಪಚ್ಚಿಲೆ, ಸೀವೀಡ್ ಸಾಕಿದ್ದಾರೆ. ಸೀವೀಡ್ ಕೃಷಿ ರಾಜ್ಯದಲ್ಲೆ ಇಲ್ಲಿ ಪ್ರಥಮವಾಗಿ ಬೆಳೆಯಲಾಗುತ್ತಿದೆ. ಈಗಾಗಲೇ ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಸೀವೀಡ್ ಕೃಷಿ ಯಶಸ್ಸು ಕಂಡಿದೆ.

‘ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಪ್ರಾಯೋಜಿತ ಕಾರ್ಯಕ್ರಮ ಇದಾಗಿದೆ. ಸಮಗ್ರ ಮೀನು ಕೃಷಿಯಲ್ಲಿ ಒಂದು ಪ್ರಭೇದದ ಜೀವಿಗಳು ಸೇವಿಸಿದ ನಂತರ ಉಳಿಯುವ ಹಾಗೂ ತ್ಯಜಿಸುವ ಆಹಾರವನ್ನು ಉಪಯೋಗಿಸಿ ಇನ್ನೊಂದು ಜೀವಿಯು ಬೆಳವಣಿಗೆ ಹೊಂದುವುದರಿಂದ ಕಡಿಮೆ ಖರ್ಚಿನಲ್ಲಿ ಮೀನುಗಾರರು ಹೆಚ್ಚು ಇಳುವರಿ ಪಡೆದು ಅಧಿಕ ಲಾಭ ಗಳಿಸಲು ಅನುಕೂಲವಾಗಿದೆ. ಈಗಾಗಲೇ ಕಳೆದ ವರ್ಷ ಈ ತಂತ್ರಜ್ಞಾನದ ಉಪಯೋಗದಿಂದ ಕರಾವಳಿಯ ಮೀನು ಕೃಷಿಕರ ಜೀವನೋಪಾಯಕ್ಕೆ ಉತ್ತೇಜನ ನೀಡಲು ಮೀನು ಮತ್ತು ಪಚ್ಚಿಲೆ ಕೃಷಿಯ ಸಮಗ್ರ ಕೃಷಿಯ ಪ್ರಾತ್ಯಕ್ಷಿಕೆಯನ್ನು ತಲ್ಲೂರು, ಪಡುತೋನ್ಸೆ, ಕೊಡೇರಿ ಮತ್ತು ತಾರಾಪತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿತ್ತು. ಈ ಬಾರಿ ಪಾಂಪೆನೋ, ಪಚ್ಚಿಲೆ ಜೊತೆಗೆ ಕರ್ಕಿಕಳಿಯಲ್ಲಿ ಸೀವೀಡ್ ಕೃಷಿಯನ್ನು ಯಶಸ್ವಿಯಾಗಿ ಮಾಡಲಾಗಿದೆ.

-ಡಾ.ರಾಜೇಶ್ ಕೆ.ಎಂ., ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ.

ಎನ್‌ಎಫ್‌ಡಿಬಿ ಹಾಗೂ ಸಿಎಂಎಫ್‌ಆರ್‌ಐ ಅಲ್ಲದೇ, ಮೀನುಗಾರಿಕೆ ಇಲಾಖೆಯವರ ಪ್ರೋತ್ಸಾಹ, ಮುತುವರ್ಜಿಯಲ್ಲಿ 2008-09ನೇ ಸಾಲಿನಿಂದ ಪಂಜರ ಮೀನು ಕೃಷಿ ಮಾಡುತ್ತಿದ್ದು, ಉಪ್ಪುಂದ ಪಂಜರ ಮೀನು ಕೃಷಿಯ ತವರೂರು ಎನಿಸಿದೆ. ಈ ಬಾರಿ ಪಾಂಪೆನೋ ಮೀನು, ಹಸಿರು ಪಚ್ಚಿಲೆ, ಸೀವೀಡ್ ಕೃಷಿ ಮಾಡಿದ್ದೇವೆ. ಪಾಂಪೆನೋಗೆ ಹಾಕಿದ ಆಹಾರ ಪಚ್ಚಿಲೆ ಹಾಗೂ ಸೀವೀಡ್ ಬಳಸುತ್ತದೆ. ಹೀಗಾಗಿ ಕಡಿಮೆ ವೆಚ್ಚ ಸಾಕು. ಕರ್ನಾಟಕದಲ್ಲಿ ಸೀವೀಡ್ ಕೃಷಿಯನ್ನು ಪ್ರಥಮವಾಗಿ ನಾವು ಮಾಡಿದ ಹೆಗ್ಗಳಿಕೆ ಇದೆ. ಈಗ ತಮಿಳುನಾಡಿಗೆ ತೆರಳಿ ಮೀನು ಮರಿ, ಸೀವೀಡ್‌ಗಳನ್ನು ತರಬೇಕಾದ ಅನಿವಾರ್ಯತೆಯಿದ್ದು, ಸ್ಥಳೀಯವಾಗಿ ನಮಗೆ ಸಿಕ್ಕಲ್ಲಿ ಇನ್ನಷ್ಟು ಅನುಕೂಲವಾಗಲಿದೆ.

-ಚಂದ್ರ ಖಾರ್ವಿ ಕರ್ಕಿಕಳಿ, ಗಣೇಶ್, ಪಂಜರ ಮೀನು ಕೃಷಿಕರು

ಸೀವೀಡ್ ಕೃಷಿ ಹೇಗೆ?

ಕಪ್ಪಾಫೈಕಸ್ ಆಲ್ವರೇಝಿ ಎಂಬ ಜಲಸಸ್ಯವನ್ನು (ತಮಿಳುನಾಡಿನ ಮಂಡಪಮೌನಲ್ಲಿ) ತಂದು ಮೀನುಗಾರಿಕೆಗೆ ಉಪಯೋಗವಾಗುವ ಬಲೆಯಿಂದ ವೃತ್ತಾಕಾರದ ಟ್ಯೂಬ್‌ಗಳನ್ನು ತಯಾರಿಸಿ ಅದರಲ್ಲಿ ಸೀವೀಡ್ ಹಾಕಿ 10 ಅಡಿ ಉದ್ದ ಮತ್ತು 10 ಅಡಿ ಅಗಲದ ಪ್ಲಾಸ್ಟಿಕ್ ಪೈಪ್‌ನಿಂದ ತಯಾರಿಸಿದ ರಾಫ್ಟ್‌ಗಳಲ್ಲಿ ಕಟ್ಟಿ ಪಚ್ಚಿಲೆ ಮತ್ತು ಮೀನುಕೃಷಿ ಪಂಜರದೊಂದಿಗೆ ಬಿಡಬೇಕು.

ಕರ್ಕಿಕಳಿಯಲ್ಲಿ ಕಳೆದ ಮಾರ್ಚ್ ಕೊನೆಯ ವಾರದಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು. ಸುಮಾರು 45 ದಿನಗಳ ಅವಧಿಗೆ ಕೃಷಿ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಪ್ರತೀ ಟ್ಯೂಬ್‌ನಲ್ಲಿ ಇರಿಸಲಾಗಿದ್ದ 2 ಕೆ.ಜಿ. ಸೀವೀಡ್ ಸುಮಾರು 6ರಿಂದ 7ಕೆ.ಜಿಯಷ್ಟು ಬೆಳವಣಿಗೆಯಾಗಿದ್ದು, ಚಂದ್ರ ಖಾರ್ವಿ ಕರ್ಕಿಕಳಿ ಹಾಗೂ ಗಣೇಶ್ ಮುಂದೆಯೂ ಸೀವೀಡ್ ಕೃಷಿ ಮಾಡುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಜೊತೆಗೆ ಕೈಗೊಳ್ಳಲಾದ ಸಿಲ್ವರ್ ಪಾಂಪೆನೊ ಮೀನುಕೃಷಿ ಮತ್ತು ಪಚ್ಚಿಲೆ ಕೃಷಿ ಸಹ ಉತ್ತಮವಾಗಿ ಬೆಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೀಶ್ ಕುಂಭಾಸಿ

contributor

Similar News