ರೈತ ಸಂಪರ್ಕ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿ ಖಾಲಿ; ತೊಂದರೆ ಅನುಭವಿಸುತ್ತಿರುವ ರೈತರು
ಗುಡಿಬಂಡೆ: ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಯಂ ಸರಕಾರಿ ಅಧಿಕಾರಿಗಳ ಹಾಗೂ ಸಿಬ್ಬಂದಿ ನೌಕರರ ಹುದ್ದೆಗಳು ಖಾಲಿಯಾಗಿದ್ದು, ರೈತರ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕು ಕೇಂದ್ರ ಸ್ಥಾನದಲ್ಲಿ ಇರುವಂತಹ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸೇರಿದಂತೆ ತಾಲೂಕಿನಲ್ಲಿ ಇರುವಂತಹ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು ಖಾಯಂ ಅಧಿಕಾರಿ ಸಿಬ್ಬಂದಿ ನೌಕರರು ಸಂಖ್ಯೆ 18 ಇದ್ದು, ಕೃಷಿ ಅಧಿಕಾರಿ ಹುದ್ದೆ 2, ಕೃಷಿ ಅಧಿಕಾರಿ ತಾಂತ್ರಿಕ ಅಧಿಕಾರಿಗಳ ಹುದ್ದೆಗಳು 2, ಸಹಾಯಕ ಕೃಷಿ ಅಧಿಕಾರಿ 2, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು 2, ಬೆರಳಚ್ಚು ಗಾರರ ಹುದ್ದೆ 1, ಡಿ ದರ್ಜೆ ನೌಕರರ 3 ಹುದ್ದೆಗಳೂ ಖಾಲಿಯಾಗಿವೆ .
ಅಧೀಕ್ಷಕರ ಹುದ್ದೆ ಹಾಗೂ ಚಾಲಕರ ಹುದ್ದೆಗಳು ಮಾತ್ರ ಜಂಟಿ ಕೃಷಿ ನಿರ್ದೇಶಕರು ಚಿಕ್ಕಬಳ್ಳಾಪುರದ ಕಚೇರಿಯಿಂದ ನಿಯೋಜನೆ ಮಾಡಿದ್ದಾರೆ. ತಾಲೂಕು ಕೃಷಿ ಇಲಾಖೆಯ ವ್ಯಾಪ್ತಿಗೆ ಸರಿಸುಮಾರು 8,820 ಎಕರೆ ಯಷ್ಟು ಪ್ರದೇಶದ ಜಮೀನು ವ್ಯಾಪ್ತಿ ಇದ್ದು ಈ ಪ್ರದೇಶ ವ್ಯಾಪ್ತಿಯಲ್ಲಿ ಸಾವಿರಾರು ಜನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ರೈತರು ಒಂದಲ್ಲ ಒಂದು ಕೆಲಸಕ್ಕೆ ಕೃಷಿ ಇಲಾಖೆಗೆ ಭೇಟಿ ಮಾಡಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗಿದೆ. ಆದರೆ ಇಲ್ಲಿನ ಕೃಷಿ ಇಲಾಖೆಯಲ್ಲಿ ಮಾತ್ರ ರೈತರಿಗೆ ಕೆಲಸ ಮಾಡಿಕೊಡಲು ಅಧಿಕಾರಿ, ಸಿಬ್ಬಂದಿ ಇಲ್ಲದೇ ರೈತರ ಕೆಲಸ ಕಾರ್ಯಗಳು ಹೇಗೆ ನಡೆಯುವುದು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಸರಕಾರದ ಯೋಜನೆಗಳನ್ನು ರೈತರಿಗೆ ಸಕಾಲಕ್ಕೆ ತಲುಪಿಸುತ್ತಿದ್ದೇವೆ. ಖಾಯಂ ಸಿಬ್ಬಂದಿ ಇದ್ದರೆ ರೈತರಿಗೆ ಹೆಚ್ಚಿನ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತದೆ.
-ಕೇಶವರೆಡ್ಡಿ, ಗುಡಿಬಂಡೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಅನೇಕ ಇಲಾಖೆಗಳಲ್ಲಿ ಖಾಯಂ ಹುದ್ದೆಗಳಿವೆ. ಸರಕಾರ ಖಾಯಂ ಹುದ್ದೆಗಳನ್ನು ತುಂಬಬೇಕಾಗಿದೆ. ಶಾಸಕರು ಕಾಲಕಾಲಕ್ಕೆ ಖಾಯಂ ಹುದ್ದೆಗಳನ್ನು ತುಂಬಿ ಎಂದು ಸರಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಖಾಲಿ ಇರುವ ಖಾಯಂ ಹುದ್ದೆಗಳನ್ನು ಸರಕಾರ ಕೂಡಲೇ ತುಂಬಬೇಕಿದೆ.
-ಎಚ್.ಪಿ.ಲಕ್ಷ್ಮೀನಾರಾಯಣ, ಕೆಡಿಪಿ ಸದಸ್ಯರು ಗುಡಿಬಂಡೆ