ಸಂವಿಧಾನದ ಯಾವ ಆದೇಶದಡಿ ವೀರಶೈವ ಜಂಗಮರು ಬೇಡ (ಬುಡ್ಗ) ಜಂಗಮರಾಗಿದ್ದಾರೆ?
ವೀರಶೈವ ಜಂಗಮರ ಹಾವಳಿ ಹೆಚ್ಚಾಗಲು ಮೂಲ ಕಾರಣ ಜನರನ್ನಾಳುವ ಸರಕಾರಗಳ ಕಣ್ಣು ಕುರುಡಾಗಿ, ಕಿವಿ ಕಿವುಡಾಗಿರುವುದು. ಹಾಗಾಗಿ ಸಂವಿಧಾನದ ಆಶಯ ಮಣ್ಣಾಗಿದೆ. ಘನ ನ್ಯಾಯಾಲಯಗಳು ಸುಳ್ಳು ಜಾತಿ ಪತ್ರಗಳನ್ನು ಸದೆಬಡಿಯಲು ಸಕಾಲದಲ್ಲಿ ನ್ಯಾಯೋಚಿತ ಮಾರ್ಗದಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತಹ ತೀರ್ಪುಗಳನ್ನು ನೀಡದಿರುವ ಕೊರತೆಗಳೂ ಮತ್ತೊಂದು ಕಾರಣ. ಮೇಲ್ವರ್ಗದ ಜನಪ್ರತಿನಿಧಿಗಳ ಮುಕ್ತ ಬೆಂಬಲ ಬೇರೆ ಇದೆ. ಅನೇಕ ಮಠಮಾನ್ಯಗಳ ರಾಜಾಶ್ರಯವಿದೆ. ಅದರಲ್ಲೂ ಸುಳ್ಳು ಜಾತಿ ಪತ್ರ ಪಡೆದಿರುವವರಿಗೆ ಮಾನವೀಯತೆಯ ಕೃಪಾಕಟಾಕ್ಷದಡಿ ವಿನಾಯಿತಿ ಬೇರೆ ಸಿಗುತ್ತಿದೆ.
ಮೀಸಲಾತಿ ಯಾವುದೇ ಯಕ್ಷಿಣಿ ಮಾಯಾಜಾಲದಿಂದ ಹುಟ್ಟಿಲ್ಲ. ಇದಕ್ಕೊಂದು ಸುದೀರ್ಘ ಹೋರಾಟದ ಇತಿಹಾಸವಿದೆ. ಪೂನಾ ಒಪ್ಪಂದ ತರುವಾಯ ಪರಿಶಿಷ್ಟರ ಮೀಸಲಾತಿಗೆ 1911ರ ಜನಗಣತಿಯ ಮಾನದಂಡಗಳನ್ನು ಆಯ್ಕೆ ಮಾಡಲಾಗಿತ್ತು. ಆಗ ವೀರಶೈವ ಜಂಗಮರು ಯಾವ ಊರುಗಳಲ್ಲೂ ಅಸ್ಪಶ್ಯರಾಗಿ, ಬಿಂದಿಗೆ ನೀರಿಗಾಗಿ ದಿನಗಟ್ಟಲೆ ನಿಂತ ಉದಾಹರಣೆಗಳಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದಯ ಕೇವಲ ವೈಯಕ್ತಿಕ ಜಿದ್ದಾಜಿದ್ದಿಗಾಗಿ ಹುಟ್ಟಿಬಂದಿರುವ ಸಾಂವಿಧಾನಿಕ ಪದಗಳಲ್ಲ. ಈ ದೇಶದ ಸಾಮಾಜಿಕ ರೊಚ್ಚಿನಡಿ ನೊಂದು ಬೆಂದು ಸಾಮಾಜಿಕ ಸಮಾನತೆಯ ಬೆಳಕಿಲ್ಲದೆ ಬದುಕುತ್ತಿದ್ದ ನತದೃಷ್ಟ ಸಮುದಾಯಗಳಿಗೆ 1936ರಲ್ಲಿ ಸಾಂವಿಧಾನಿಕ (1935) ಆದೇಶಾನುಸಾರ ಮೀಸಲಾತಿ ನೀಡಲು ಸಿದ್ಧಗೊಂಡ ಜಾತಿ/ಪಂಗಡಗಳ ಸಮೂಹಗಳಾಗಿವೆ. ಆಗ ಜೈನ, ಕ್ರೈಸ್ತ, ಇಸ್ಲಾಮ್ ಮತ್ತು ಬೌದ್ಧ ಧರ್ಮಗಳಿಗೆ ಮೀಸಲಾತಿ ನೀಡಿರಲಿಲ್ಲ.
1950ರಲ್ಲಿ ರಾಜ್ಯಾಂಗ ಸಭೆಯು ಅನುಸೂಚಿತ ಜಾತಿ ಪಟ್ಟಿಯನ್ನು ಅಖೈರು ಮಾಡುವಾಗ ತನ್ನ ಕರಡಿನಲ್ಲಿ ತನ್ನ ಆಶಯವನ್ನು ಹೀಗೆ ಉಲ್ಲೇಖಿಸಿದೆ: “This is in conformity with the views of the majority of the State Governments and continues unaltered the position which obtained under the Government of India Act, 1935 and the Government of India (Scheduled Castes) order 1936. It is also consistent with the object and the purpose of the provisions of the Constitution relating to the Scheduled Castes.” (File No-28/49-C, Source: Parliament Library Document) ಸಂವಿಧಾನ ಸಭೆಯು (1949) ರಾಜ್ಯ ಮತ್ತು ಪ್ರಾಂತವಾರು ಸರಕಾರಗಳು ಪರಿಶಿಷ್ಟ ಜಾತಿಗಳನ್ನು ಗುರುತಿಸಲು 1936ರಲ್ಲಿದ್ದ ನಿಮ್ನ ವರ್ಗಗಳ (ಜಾತಿ) ಸಾಮಾಜಿಕ ಹಿಂದುಳಿದಿರುವಿಕೆ ಮತ್ತು ಅಸ್ಪಶ್ಯತೆ ಮಾನದಂಡವನ್ನೇ ಅನುಮೋದಿಸಿವೆೆ. 1950ರಲ್ಲಿಯೂ 1931ರ ಜನಗಣತಿ ವಿಧಿಸಿದ್ದ ಹೊರ ಜಾತಿ (Exterior castes/ Out Castes) ಸಾಮಾಜಿಕ ಸೂತ್ರಗಳನ್ನು ಮಾನ್ಯ ಮಾಡಿದೆ. ಆದರೆ ಮೈಸೂರು ಸರಕಾರ ಸ್ಪಶ್ಯ ಜಾತಿಗಳನ್ನು ಸೇರಿಸುವಾಗ ಜಾಣ ಕುರುಡು ತೋರಿದೆ. ಆಗ, ವೀರಶೈವ ಜಂಗಮರನ್ನು ಮೈಸೂರು, ಹೈದರಾಬಾದ್, ಬಾಂಬೆ, ಮದ್ರಾಸ್, ಬೆರಾರ್, ತಿರುವಾಂಕೂರು, ಬಂಗಾಳ ಮತ್ತು ಮಧ್ಯಭಾರತ ಪ್ರದೇಶಗಳಲ್ಲಿ ಅಸ್ಪಶ್ಯ ಸಮಾಜದ ನಿಮ್ನ ಜಾತಿಗಳೆಂದು ಗುರುತಿಸಿಲ್ಲ. ಮರಾಠವಾಡದಲ್ಲಿ ಜಂಗಮರನ್ನು ಮಹೇಶ್ವರರು; ಹಳೆ ಮೈಸೂರು ಭಾಗದಲ್ಲಿ ಆರಾಧ್ಯರು ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಜಂಗಮ ಎನ್ನುವರು.
ಆದುದರಿಂದ ಅವರಂದು ಎಲ್ಲಿಯೂ ಪರಿಶಿಷ್ಟ ಜಾತಿಗಳಾಗಿರಲಿಲ್ಲ. ಹಾಗಾಗಿ, 1950/1956 ಸಂವಿಧಾನ ಆದೇಶದಡಿ ವೀರಶೈವ/ಲಿಂಗಾಯತ ಜಂಗಮರ ಯಾವುದೇ ಉಪ ಜಾತಿಗಳನ್ನು ಸೇರಿಸಿಲ್ಲ. ಹಾಗೆಯೇ ಜಂಗಮ ಪದ ಜಾತಿ ಸೂಚಕವಲ್ಲ. ಆದುದರಿಂದ, 1931 ಜನಗಣತಿ ಜಂಗಮರನ್ನು ಲಿಂಗಾಯತ ಒಳ ಸಮುದಾಯವೆಂದು ಸಾರಿದೆ. ಬಾಂಬೆ ಪ್ರಾಂತದಲ್ಲಿ ಅಪ್ಪಟ ಲಿಂಗಾಯತರು (Pure) ಮತ್ತು ಸಂಯೋಜಿತ (Affiliated) ಲಿಂಗಾಯತರೆಂಬ ಪ್ರಭೇದಗಳವೆ; ಛಲವಾದಿಗಳು-ಮಾದಿಗರು ಸಂಯೋಜಿತರ ಕೊನೆಯ ಪಂಕ್ತಿಯಲ್ಲಿಡಲಾಗಿದೆ. ಅದರಲ್ಲಿಯೂ ವೀರಶೈವ ಜಂಗಮರನ್ನು ಪುರೋಹಿತರು ಮತ್ತು ಸಾಮಾಜಿಕವಾಗಿ ಉನ್ನತೀಕರಿಸಿದವರೆನ್ನಲಾಗಿದೆ. ರೂಢಿಗತ ವಿವಾಹ ಪದ್ಧತಿ ಅನುಸರಿಸುವ ಸಮುದಾಯವಾಗಿದೆ (Hyper gamy: the action of marrying or forming a sexual relationship with a person of a superior sociological or educational background). ಅವಿಚ್ಛಿನ್ನವಾಗಿ ಪೂರ್ವದಿಂದಲೂ ಕುಲಹೀನರೆನ್ನಲಾಗುತ್ತಿದ್ದ ಹೊಲೆಯ-ಮಾದಿಗರ ಅಥವಾ ಅತಿ ಹಿಂದುಳಿದವರ ಜೊತೆ ವೈವಾಹಿಕ ಸಂಬಂಧ ಹೊಂದಿಲ್ಲದ ವೀರಶೈವ ಜಂಗಮರು ಮೀಸಲಾತಿಗಾಗಿ ಪರಿಶಿಷ್ಟ ಜಾತಿಯವರಾಗಲು ಇಂದು ಸಾಮಾಜಿಕ ಭ್ರಷ್ಟತೆಯನ್ನು ಜಗತ್ತೇ ನಾಚುವಂತೆ ಪ್ರದರ್ಶನಮಾಡುತ್ತಿದ್ದಾರೆ. ಜಂಗಮರಲ್ಲಿ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಅವಕಾಶಗಳಿಲ್ಲ.
ಹೈದರಾಬಾದ್ ಜನಗಣತಿಯ (1921) ನಿಮ್ನ ವರ್ಗಗಳ ಪಟ್ಟಿಯಲ್ಲಿರುವ ಜಂಗಮರು ಮಾದಿಗ ಸಂಬಂಧಿ ಉಪಜಾತಿ ಎಂದು ವಿವರಣೆಯಲ್ಲಿ ಹೇಳಿದೆ. ಪುನಃ 1931ರ ಜನಗಣತಿ ಹೈದರಾಬಾದ್ ರಾಜ್ಯ 44 ಆದಿ ಹಿಂದೂ ಜಾತಿಗಳನ್ನು ಪರಿಶಿಷ್ಟ ಜಾತಿಗಳಾಗಿ (24.73 ಲಕ್ಷ ಜನರನ್ನು) ಘೋಷಿಸಲು ಸಂವಿಧಾನ ಸಭೆಗೆ ಸಲ್ಲಿಸಿತ್ತು. ಈ ಸಭೆ ಜರಡಿಯಾಡಿ ಅದರೊಳಗೆ ಅಸ್ಪಶ್ಯ ಮೂಲದ ಪರಿಪೂರ್ಣ ನಿಮ್ನ ವರ್ಗಗಳು ಮತ್ತು ಸಾಪೇಕ್ಷ ನಿಮ್ನ ವರ್ಗಗಳೆಂದು ವಿಂಗಡಿಸಿ ಸುಧಾರಿಸಿದ್ದ ನಿಮ್ನ ವರ್ಗಗಳನ್ನು ಪರಿಶಿಷ್ಟರನ್ನಾಗಿ ಮಾಡಲಿಲ್ಲ.
ಇಂದಿಗೂ ಬಹುತೇಕ ಲಿಂಗಾಯತ ಮಠಗಳಿಗೆ ಜಂಗಮರೇ ವಿರಕ್ತರು, ಪೀಠಾಧಿಪತಿಗಳು. ಗುರುಸ್ಥಳಗಳ ಹರಗುರು-ಚರಮೂರ್ತಿಗಳನ್ನು ಧಾರೆ ಎರೆಯುವವರೇ ಜಂಗಮ ಮನೆತನಗಳಾಗಿವೆ. ಅದರಲ್ಲೂ ಬಿಜಾಪುರ ಅದರ ತಾಯಿನಾಡಾಗಿದೆ. ಪಂಚಾಚಾರ್ಯ ಶೈವ ಸಂಸ್ಕೃತಿ ಮಠಗಳು ಬಸವಪ್ರಣೀತ ಮಠಗಳಿಗೆ ಅಷ್ಟೊಂದು ಮನ್ನಣೆ ನೀಡುವುದಿಲ್ಲ. ಅವುಗಳನ್ನು ಶಿಷ್ಯ ಮಠಗಳೆಂದು ಸಾರುತ್ತವೆ.
ಭಾಷಾವಾರು ರಾಜ್ಯ/ಪ್ರಾಂತಗಳ ರಚನೆ ವೇಳೆ (1956) ಮೈಸೂರು ರಾಜ್ಯದೊಳಗೆ ಮುಂಬೈ-ಹೈದರಾಬಾದ್ ಕರ್ನಾಟಕ, ಮದ್ರಾಸ್ ಮತ್ತು ಕೊಡಗು ಪ್ರದೇಶಗಳು ವಿಲೀನವಾದಾಗ ಅಲ್ಲಿದ್ದ ಜಾತಿ ಮತ್ತು ಪಂಗಡಗಳ ಸಾಮಾಜಿಕ ಚಲನೆ ಮಾನದಂಡದಡಿ ಮಾಲ ಜಂಗಮ ಮತ್ತು ಬೇಡ (ಬುಡ್ಗ) ಜಂಗಮರು ಅಸ್ಪಶ್ಯ ನಿಮ್ನ ವರ್ಗಗಳಾಗಿ ಬಾಂಬೆಯ ಮರಾಠವಾಡ, ಮೈಸೂರಿನ ಗುಲ್ಬರ್ಗಾ ಮತ್ತು ತೆಲಂಗಾಣ ಜಿಲ್ಲೆಗಳಲ್ಲಿ ಪ್ರಾದೇಶಿಕ ನಿಬಂಧನೆಯಡಿ ಪರಿಶಿಷ್ಟ ಜಾತಿಯವರಾಗಿದ್ದಾರೆ. ಕೇಂದ್ರ ಸರಕಾರ ಅನುಚ್ಛೇದ 340 ಅಡಿ ಅತಿ ಹಿಂದುಳಿದ ವರ್ಗಗಳ ಮೊದಲ ಪಟ್ಟಿಯಲ್ಲಿ ಸಂಯುಕ್ತ ಪದ ರೂಪದಲ್ಲಿ ಲಿಂಗಾಯತ ಶೈಕ್ಷಣಿಕ ಮೀಸಲಾತಿಗಾಗಿ ದಕ್ಷಿಣ ಭಾರತದಲ್ಲಿ ಸೇರಿಸಿತ್ತು. ಸಂವಿಧಾನದಲ್ಲಿ ಅನುಚ್ಛೇದ 340, 341 ಮತ್ತು 342 ಸಾಮಾಜಿಕ ವ್ಯಾಪ್ತಿಗಳು (Social Scopes) ಜಾತಿಯಿಂದ ಜಾತಿಗೆ ಪಂಗಡದಿಂದ ಪಂಗಡಕ್ಕೆ ವಿಭಿನ್ನವಾಗಿ ಸಮರ್ಥಿಸಿ ವ್ಯಾಖ್ಯಾನಿಸುತ್ತವೆ.
ಮೈಸೂರು ರಾಜ್ಯದ ನಾಗನಗೌಡರ್ ಆಯೋಗದ ಸದಸ್ಯರಾಗಿದ್ದ ಎಂ.ಎಸ್. ಪಾಟೀಲ್ ಆರಾಧ್ಯ ಮತ್ತು ಜಂಗಮರು ಲಿಂಗಾಯತರಲ್ಲೇ ಶೈಕ್ಷಣಿಕವಾಗಿ ಮುಂದುವರಿದವರೆಂದು ವಾದಿಸಿ ಜಂಗಮರಿಗೆ ಮೀಸಲಾತಿ ಬೇಡವೆಂದಿದ್ದರು. ಅಲ್ಲಿಂದ ಇಲ್ಲಿಯ ತನಕವೂ ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿರುವ ವೀರಶೈವ ಜಂಗಮರನ್ನು ಸಂವಿಧಾನದ ಯಾವ ಆದೇಶಾನುಸಾರ ಪರಿಶಿಷ್ಟರನ್ನಾಗಿಸಿದೆ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಜೆ.ಬಿ. ಮಲ್ಲಾರಾಧ್ಯರು ಮೈಸೂರು ಜನಗಣತಿ ಆಯುಕ್ತರಾಗಿದ್ದವರು (1951). ಅವರಿಗೆ ತನ್ನ ಕುಲ ಪರಿಶಿಷ್ಟ ಜಾತಿ ಎಂಬ ಖಾತರಿಯಿದ್ದಿದ್ದರೆ ಮಾಜಿ ಮಂತ್ರಿ ಭೀಮಣ್ಣ ಖಂಡ್ರೆ ಜೊತೆ ಸಾಥ್ ನೀಡದೆ ಹಾವನೂರು ಆಯೋಗ ಸ್ವಾಗತಿಸುತ್ತಿದ್ದರು. ಮಹಾರಾಷ್ಟ್ರ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವೀರಶೈವ ಜಂಗಮರು ಹಿಂದುಳಿದ ವರ್ಗದವರು. ಈ ಬಗ್ಗೆ ಅಂದಿನ ಅನಂತರಾಮನ್ ಮತ್ತು ಇತರ ಆಯೋಗಗಳು ಅಭಿಮತಿಸಿವೆ. ಬೇಡ (ಬುಡ್ಗ) ಜಂಗಮ ಪದ ಸಂಯುಕ್ತಾಕ್ಷರ ಜಾತಿ ಪದವಾಗಿದೆ (Compound word). 1965ರಲ್ಲಿ ರಚಿಸಲಾಗಿದ್ದ ಲೋಕುರ್‌ಸಮಿತಿ ಇವೆರಡೂ ಪದಗಳು ಪರಸ್ಪರ ಸಮನಾರ್ಥಕ ಮತ್ತು ಪೂರಕ ಪದವೆಂದು ಹೇಳಿದೆ (Appendix-VII, Andra Pradesh p-62, Mysore,p-76 and Maharashtra p-73). ಆದರೆ ಕರ್ನಾಟಕ ಸರಕಾರ ತನ್ನ ಬಹುತೇಕ ಆಡಳಿತಾತ್ಮಕ ವ್ಯವಹಾರಗಳಲ್ಲಿ ಕಾನೂನುಬಾಹಿರವಾಗಿ ಬೇಡ ಜಂಗಮ, ಬುಡ್ಗ ಜಂಗಮ ಎಂದು ಛೇದಗೊಳಿಸಲು ಸಂಸತ್ತಿನ ಅನುಮೋದನೆ ಇಲ್ಲದಿದ್ದರೂ ಸಂವಿಧಾನಕ್ಕೆ ಅಪಚಾರ ಮಾಡುತ್ತಾ ಬಂದಿದೆ.
ಬೈರಾಗಿಗಳು ಸಹ ಬೇಡ (ಬುಡ್ಗ) ಜಂಗಮರೆನ್ನುವ ವಾದದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಬೋಪಣ್ಣ ಮತ್ತು ನಾಗಪ್ರಸನ್ನ ಅವರು ಮುಳಬಾಗಿಲು ಮಾಜಿ ಶಾಸಕರ ಸುಳ್ಳು ಜಾತಿ ಪ್ರಕರಣದ ತೀರ್ಪುಗಳಲ್ಲಿ ಬೇಡ (ಬುಡ್ಗ) ಜಂಗಮ ಜಾತಿಯ ಸಂಯುಕ್ತಾಕ್ಷರವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆೆ. ವೀರಶೈವರ ಜಂಗಮರ ನಕಲಿ ಬೇಡ ಜಂಗಮರ ಸಂಘ ಮೊದಲು ನಾಂದೇಡ್‌ನಲ್ಲಿ ಆರಂಭವಾಗಿ ಅದರ ಸಾಮಾಜಿಕ ವಿಷ ಕಳೆ ದಕ್ಷಿಣ ಭಾರತಾದ್ಯಂತ ಹರಡಿ ಸಂವಿಧಾನದ ಆಶಯಗಳಿಗೆ ಸವಾಲಾಗಿದೆ. ಅದೀಗ ವೀರಶೈವ ಮಹಾ ಸಭಾದ ಗೋಡೆ ಬರಹದಂತಾಗಿದೆ ಎಂದು ಹೊಲೆಯ-ಮಾದಿಗರ ಆರೋಪಗಳಾಗಿವೆ.
ಬಿ.ಎನ್. ಲೋಕುರ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಲಹಾ ಸಮಿತಿ (1965) ಸಹ ಬೇಡ (ಬುಡ್ಗ) ಜಂಗಮ ಪದಗಳು ಪರಸ್ಪರ ಸಮನಾರ್ಥಕವಾದವೆಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಬುಡ್ಗ ಅಂದರೆ Leather mouth pot ಎಂದರ್ಥ; ಕನ್ನಡದಲ್ಲಿ ಗುಮ್ಚಿ ಪದ ಪರ್ಯಾಯವಾಗಿ ಸಮೀಕರಣವಾಗುತ್ತದೆ (ಡಾ.ಅಂಬಳಿಕೆ ಹಿರಿಯಣ್ಣ ಅಧ್ಯಯನ). ಜಂಗಮ ಸಂಸ್ಕೃತ ಪದ, ಅದರರ್ಥ ಸಂಚಾರಿ, ಪರಿವಾಜ್ರಕ ಇಂತಹ ಬುಡ್ಗ ಸಂಗೀತ (Dinki ಎಂದು ಮಾಲ ಜಂಗಮ ಕುಲ ಶಾಸ್ತ್ರ (1961) ಅಧ್ಯಯನ ಹೇಳಿದೆ) ಸಾಧನ ಬಳಸಿ ಸಂಚಾರಿ ಭಿಕ್ಷಾಟನೆ ಮಾಡುವ ಅಸ್ಪಶ್ಯರನ್ನು ಬೇಡ ಜಂಗಮ ಅಥವಾ ಬುಡ್ಗ ಜಂಗಮರೆನ್ನುತ್ತಾರೆ. ಆಂಧ್ರ ಪ್ರದೇಶದ ನ್ಯಾ. ರಾಮಚಂದ್ರ ರಾಜು ಪರಿಶಿಷ್ಟ ಜಾತಿ ವರ್ಗೀಕರಣ ಆಯೋಗ ಬೇಡ (ಬುಡ್ಗ) ಜಂಗಮರನ್ನು ಈ ಹಿಂದೆ ಮಾದಿಗ ಉಪ ಜಾತಿ; ಮಾಲ ಜಂಗಮರು ಮಾಲ (ಛಲವಾದಿ) ಉಪ ಜಾತಿ ಎಂದು ವರ್ಗೀಕರಿಸಿದೆ. ಅಂದ ಮೇಲೆ ಇವೆರಡೂ ಉಪ ಜಾತಿಗಳು ಸಾಮಾಜಿಕವಾಗಿ ವೀರಶೈವ ಜಂಗಮರ ಆಂತರಿಕ ಕುಲಗಳೆನ್ನುವ ಸಾಮಾಜಿಕ ವಾದಗಳೆಲ್ಲವೂ ಕಪಟತನದವು ಮತ್ತು ಮೀಸಲಾತಿ ಕಬಳಿಕೆಗೆ ಅಸಾಂವಿಧಾನಿಕವಾಗಿ ಕಟ್ಟಿರುವ ಸಾಮಾಜಿಕ ಸುಳ್ಳಿನ ಬುತ್ತಿ ಅನ್ನಬಹುದು. ಭಾರತದಲ್ಲಿ ಜಾತಿಯ ನಾಮವಾಚಕ ಜೊತೆ ಜಂಗಮ ಪದ ಸೇರಿಸಿಕೊಂಡಿರುವ ಸಾವಿರಾರು ಉಪ ಜಾತಿಗಳಿವೆ. 1891 ಜನಗಣತಿಯಿಂದಲೂ ಜಂಗಮರು ಪುರೋಹಿತರು ಮತ್ತು ದವಳ ಸೇವಕರೆಂಬ ಉಲ್ಲೇಖದೊಂದಿಗೆ ಸಸ್ಯಾಹಾರಿಗಳಾಗಿದ್ದಾರೆ. ಮದ್ಯಪಾನ ಸೇವಿಸದವರು ಮತ್ತು ಮಲಿನ ವೃತ್ತಿ ಕಾರ್ಯನಿರ್ವಾಹಕರಲ್ಲ ಎಂದು ಸಾರಿವೆ ಹಾಗೂ ಬ್ರಾಹ್ಮಣರ ಧಾರ್ಮಿಕ ಮೇಲರಿಮೆಗಳನ್ನು ಒಪ್ಪದವರೆಂದು ಉಲ್ಲೇಖಿಸಿವೆ. ಅಂದಮೇಲೆ ಈ ಸಮುದಾಯ ಹೇಗೆ ಕಾಡಿನ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ತಿನ್ನುವ ಸಮುದಾಯವಾಗುತ್ತದೆ?
ರಾಜ್ಯದ ಮೊದಲ ಸುಳ್ಳು ಜಾತಿ ಪತ್ರದ ಮೇಲೆ (ಕೆ.ಇ.ಬಿ. ಅಭಿಯಂತರ ಸಿದ್ದಪ್ಪ ದಾವೆ-1980) ನ್ಯಾಯಮೂರ್ತಿ ಕಾಳಮರಿಗೌಡರ ತೀರ್ಪಿನಲ್ಲಿ ಜಂಗಮರ ಸಾಮಾಜಿಕ ಹಿನ್ನೆಲೆಗಳನ್ನು ನೈಜವಾಗಿ ಸ್ಪಷ್ಟಪಡಿಸಿದ್ದಾರೆೆ. ಆ ಪ್ರಕಾರ ಜಂಗಮರು ಅಸ್ಪಶ್ಯರಲ್ಲ. ಆದರೆ ಕೆ.ಎಸ್. ಸಿಂಗ್ ಸಂಪಾದಿಸಿರುವ ಕುಲಶಾಸ್ತ್ರ ಅಧ್ಯನದಲ್ಲಿ ಬೇಡ (ಬುಡ್ಗ) ಜಂಗಮರ ಬಗ್ಗೆ ಅನವಶ್ಯಕವಾಗಿ ದುರುದ್ದೇಶದಿಂದ ಜಂಗಮರ ಸಾಮಾಜಿಕತೆಗಳನ್ನು ತಿರುಚಿದಂತೆ ತುರುಕಲಾಗಿದೆ. ಈ ಬಗ್ಗೆ ಪ್ರೊ. ರವಿವರ್ಮ ಕುಮಾರ್ ಕರ್ನಾಟಕ ಹೈಕೋರ್ಟಿನ ಕಟಕಟೆಯಲ್ಲಿ ಬೆವರಿಳಿಸಿದ ಘಟನೆ ಅವಿಸ್ಮರಣೀಯ. ವೀರಶೈವ ಜಂಗಮರು ಶೈವ ಧಾರ್ಮಿಕ ಸಂಹಿತೆ ಪಾಲನೆಗೋಸ್ಕರ ಮೈಲಿಗೆಯಿಲ್ಲದ ಲಿಂಗಾಯತರಿಂದ ಮೂರು ಬಗೆಯ ಕಾರುಣ್ಯ ಭಿಕ್ಷೆಯನ್ನು ಸ್ವೀಕರಿಸುತ್ತಾರೆ. ಅದರೊಳಗೆ ಹೆಣ್ಣು-ಗಂಡು ಜೋಳಿಗೆಯವೆಂಬ ಒಳಗುಂಪುಗಳಿವೆ. ವಿರಕ್ತರಾದವರು ಮತ ಪ್ರಚಾರಕರು. ಪಟ್ಟಾಧಿಕಾರಿ, ಹರ-ಚರ ಮೂರ್ತಿಗಳಾಗಿ ಮಠಗಳನ್ನು ನಿರ್ವಹಿಸುವರು. ಸಾಮಾನ್ಯ ಜಂಗಮರು ಗೃಹಸ್ಥರು ಮತ್ತು ಮಲಿನರಹಿತ ಕಾಯಕಸ್ಥರು, ಗಣಾಚಾರಿ ಸುದ್ಧಿವಾಹಕ ಮತ್ತು ಕೆಳಸ್ತರದ ಕೆಲಸ ನಿರ್ವಾಹಕ ಮತ್ತು ಮಠಪತಿಗಳು ಶವಸಂಸ್ಕಾರ ನಿರ್ವಹಿಸುವವರು. ಇವರೆಲ್ಲರೂ ಸಮಾನವಾಗಿ ಪಂಚಪೀಠ ಧಾರ್ಮಿಕ ಸಂಸ್ಕೃತಿಗಳನ್ನು ಗೌರವಿಸುತ್ತಾರೆ. ಪ್ರತೀ ಪೀಠ ಸ್ವಗೋತ್ರ, ಸೂತ್ರ, ದಂಡ, ಕಮಂಡಲ, ಬೀಜ ಮಂತ್ರ, ಪ್ರವರ, ಶಾಖಾ, ಬಣ್ಣ ಮತ್ತು ಪ್ರಾದೇಶಿಕ ವ್ಯಾಪ್ತಿ ಹೊಂದಿವೆ.
ಸಾಮಾನ್ಯವಾಗಿ ಜಂಗಮರು ತಮ್ಮ ಹೆಣ್ಣನ್ನು ಇತರ ಲಿಂಗಾಯತರಿಗೆ ಧಾರೆ ಎರೆಯುವುದಿಲ್ಲ; ಹಾಗೆಯೇ ಅವರೂ ಸಹ ಗುರು ವರ್ಗವೆಂದು ಸ್ವೀಕರಿಸುವುದಿಲ್ಲ. ಆದರೆ, ವಿಶೇಷ ಸಂದರ್ಭಗಳಲ್ಲಿ ಮೊದಲ ಒಳ ಸುತ್ತಿನ ಪಂಚಮಶಾಲಿ ಸಮಾನಾಂತರ ಲಿಂಗಾಯತರ ಹೆಣ್ಣನ್ನು ಜಂಗಮರು ಸ್ವೀಕರಿಸುತ್ತಾರೆ. ಚಿನ್ನಪ್ಪ ರೆಡ್ಡಿ ಆಯೋಗ ಗುರುತಿಸಿರುವಂತೆ ವೀರಶೈವ ಜಂಗಮರು ಅಂದು 8.15 ಲಕ್ಷವಿದ್ದವರನ್ನು ಜೀವನೋಪಾಯಗಳಿಗೆ ಭಿಕ್ಷಾಟನೆ ಮಾಡುವ ನತದೃಷ್ಟ ಸಮುದಾಯವೆಂದರೆ, ಜಾಗತಿಕವಾಗಿ ಭಾರತ ಬಹುದೊಡ್ಡ ಭಿಕ್ಷುಕ ರಾಷ್ಟ್ರವಾಗಬೇಕಾಗುತ್ತದೆ. 2011 ಜನಗಣತಿ ಪ್ರಕಾರ ರಾಷ್ಟ್ರದಲ್ಲಿ 4,13,670 ಭಿಕ್ಷುಕರಿದ್ದರೆ, ರಾಜ್ಯದಲ್ಲಿ 12,270 ಜನ ಭಿಕ್ಷುಕರಿದ್ದಾರೆಂದು ಹೇಳಿದೆ. ಅಂದಮೇಲೆ ಜಂಗಮರೆಲ್ಲರೂ ಭಿಕ್ಷುಕರಾಗಲು ಸಾಧ್ಯವಿಲ್ಲ. ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಭಿಕ್ಷುಕರ ತಲೆ ಎಣಿಕೆ ಸಮೀಕ್ಷೆ ಆಗಿದೆ. ಅದರಲ್ಲಿ ಶೇ. 28ರಷ್ಟು ಪರಿಶಿಷ್ಟ ಜಾತಿಯವರು ಭಿಕ್ಷುಕರಾಗಿದ್ದರೆ, ಮುಸ್ಲಿಮರು ಶೇ. 26ರಷ್ಟಿದ್ದಾರೆಂದು ಸಮೀಕ್ಷೆ ಸಾದರಪಡಿಸಿದೆ. ಈ ಸಮೀಕ್ಷೆಯಲ್ಲಿಯೂ ಜಂಗಮರು ಮೂಲತಃ ನಿರ್ಗತಿಕ ಭಿಕ್ಷಾಟನೆ ಮಾಡುವ ಸಮುದಾಯವಾಗಿದ್ದರೆ ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗಬೇಕಿತ್ತು. ಆದರೆ ಬೆರಳೆಣಿಕೆಯಷ್ಟು ಮಂದಿ ಧಾರ್ಮಿಕ ಭಿಕ್ಷಾಟನೆಯಲ್ಲಿ ಕಾಣಿಸಿಕೊಂಡಿದ್ದಾರೆ(ಐಸೆಕ್, 2023). ಈ ಸಮೀಕ್ಷೆಯಲ್ಲಿ ಲಿಂಗಾಯತ ಉಪಜಾತಿಗಳ 66 ಮಂದಿ, ಜಂಗಮರು 10 ಜನರು ಧಾರ್ಮಿಕ ಭಿಕ್ಷುಕರು ಕಾಣಿಸಿದ್ದಾರೆ. ಶೇ. 28ರಷ್ಟಿರುವ ಪರಿಶಿಷ್ಟ ಜಾತಿಗಳಲ್ಲಿ ಹೊಲೆಯ ಮತ್ತು ಮಾದಿಗರೇ ಆತ್ಯಧಿಕ ಭಿಕ್ಷುಕರಿದ್ದಾರೆ. ಒಂದುವೇಳೆ, ನಕಲಿ ಬೇಡ ಜಂಗಮರ ಪ್ರತಿಪಾದನೆಗಳಂತೆ ದುಃಸ್ಥರ ಜೀವನೋಪಾಯದ ಭಿಕ್ಷಾಟನೆಯೇ ಲಿಂಗಾಯತ/ವೀರಶೈವ ಜಂಗಮರ ಬದುಕಾಗಿದ್ದರೆ 3,180 ಜನರಲ್ಲಿ ಶೇ. 35ಕ್ಕಿಂತ ಅಧಿಕವಾಗಿ ಜಂಗಮರು ದಾಖಲಾಗುತ್ತಿದ್ದರು.
ಪರಿಶಿಷ್ಟ ಜಾತಿಗಳಾಗಬೇಕಿದ್ದರೆ 1931 ಜನಗಣತಿ ವಿಧಿಸಿರುವ ಹೊರ ಜಾತಿ (Exterior castes/ Out Castes) ಸಾಮಾಜಿಕ ಗುಣಲಕ್ಷಣಗಳನ್ನು ಹೊಂದಿರಬೇಕು. ಪರಿಶಿಷ್ಟ ಪಂಗಡಗಳಾಗಬೇಕಾದರೆ 5 ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಹೊಂದಿರಬೇಕು, ಹಿಂದುಳಿದವರಾಗಬೇಕಾದರೆ ಇವುಗಳಿಗೆ ಭಿನ್ನವಾದ 4 ಸಮಾಜೋಆರ್ಥಿಕ ಸೂತ್ರಗಳಿಗೆ ಸರಿಹೊಂದಬೇಕು. ಆದುದರಿಂದ, 1952ರಲ್ಲಿ ನೆಹರೂ ಸರಕಾರ ಇತರ ಹಿಂದುಳಿದ ಜಾತಿಗಳಿಗೆ ಶೈಕ್ಷಣಿಕ ಸವಲತ್ತು ನೀಡಲು ಸಿದ್ಧಪಡಿಸಿದ ಮೊದಲ ಪಟ್ಟಿಯಲ್ಲಿ ಹೈದರಾಬಾದ್, ಮೈಸೂರು, ಬಾಂಬೆ ಮತ್ತು ಇತರ ಪ್ರದೇಶಗಳ ಜಂಗಮರನ್ನು ಒಳಗೊಂಡಂತೆ ಲಿಂಗಾಯತರು ಸ್ಥಾನಗಳಿಸಿದ್ದರು. ಆಗ, ಜಂಗಮರು ಪರಿಶಿಷ್ಟ ಜಾತಿ ಜನರಾಗಿದ್ದರೆ ಈ ಸೌಲಭ್ಯಪಡೆಯಲು ಅವಕಾಶವಿರುತ್ತಿರಲಿಲ್ಲ.
ಮೈಸೂರು ಪ್ರಾಂತದಲ್ಲಿದ್ದ ಆರಾಧ್ಯರು ಮತ್ತು ಗುರುಸ್ಥಳ ಜಂಗಮರು ಹಿಂದಿನಿಂದಲೂ ಅಸ್ಪಶ್ಯರಲ್ಲ. ಇವರಲ್ಲಿ ಲಿಂಗ ಮತ್ತು ಜನಿವಾರ ಧರಿಸುವ ಪದ್ಧತಿಯಿದೆ; ಆದರೆ ಉತ್ತರ ಭಾಗದ ಜಂಗಮರು ಅತಿ ಹೆಚ್ಚಾಗಿ ಲಿಂಗ ಮಾತ್ರ ಧರಿಸುತ್ತಾರೆ. ಸಾಮಾನ್ಯವಾಗಿ ವೀರಶೈವ ಜಂಗಮರು ವ್ಯಕ್ತಿ ನಾಮವಾಚಕ ಮುಂದೆ ಬ್ರಾಹ್ಮಣರಂತೆ ರಾವ್, ಅಯ್ಯ, ಅಪ್ಪ, ಅಣ್ಣ, ಆಚಾರ್ಯ, ಶರ್ಮ, ಹಿರೇಮಠ, ಮಠಪತಿ, ಇಲ್ಲವೆ ಸ್ಥಾನಿಕ ಮಠಗಳ ಹೆಸರನ್ನು ಯಥೇಚ್ಛವಾಗಿ ಕುಟುಂಬದ ಶೀರ್ಷಿಕೆಯನ್ನಾಗಿ ಬಳಸುತ್ತಾರೆ.
1961 ಜನಗಣತಿ ದ್ಯಾಮಪುರ ಗ್ರಾಮ ಸಾಕ್ಷ್ಯ ಅಧ್ಯಯನದಲ್ಲಿ ವೀರಶೈವ ಜಂಗಮರ ಜೀವನೋಪಾಯ ಗಳನ್ನು ಹೀಗೆ ಉಲ್ಲೇಖಿಸಿದೆ: The traditional occupation of the Jangams is priesthood. But many among the Jangams are cultivators of either owned land or lands taken on lease. Some of the Jangams have also late started working as P.W.D contractors, teachers. Ayurvedic medical practitioners, etc. They always educate their children and many of them are well-versed in Shaivite literature. They are hard working and god-fearing. - The Jangams assume honoring Ayya and Swamy. Though inter dining is permitted among all the divisions, inter-marriages is not (ಯಲಬುರ್ಗಾ ತಾ. ರಾಯಚೂರು) ರಾಜ್ಯಾದ್ಯಂತ ನಡೆದಿರುವ ಅಂದಿನ ಬಹುತೇಕ ಅಧ್ಯಯನಗಳಲ್ಲಿ ಅಥವಾ ಗುಲ್ಬರ್ಗಾ ಪ್ರಾಂತ ಜಿಲ್ಲೆಗಳಲ್ಲಿ ಜಂಗಮರನ್ನು ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಎಂದು ಸಾರಿಲ್ಲ. ಜಂಗಮರ ಮನೆತನದ ಹೆಣ್ಣು ಮಕ್ಕಳು ದೇವದಾಸಿ ಪದ್ಧತಿಗೆ ಈಡಾಗಿರುವ ಸಾಕ್ಷ್ಯಗಳಿಲ್ಲ.
ಪ್ರಾದೇಶಿಕ ನಿಬಂಧನೆ ಸಡಿಲವಾದ ತರುವಾಯ (1976-77) ವೀರಶೈವ ಜಂಗಮರು ತಮ್ಮ ಪೂರ್ವಜರ ಸಾಮಾಜಿಕ ಮತ್ತು ಧಾರ್ಮಿಕ ನಿಲುವುಗಳಿಗೆ ವಿರುದ್ಧವಾಗಿ ಪ್ರಚೋದಿತರಾಗಿ ಜಿದ್ದಾಜಿದ್ದಿಗೆ ಬಿದ್ದು ತಾವು ಮಾಡುತ್ತಿರುವ ಸಾಮಾಜಿಕ ಅಪರಾಧಗಳನ್ನು ಕಾನೂನುಬದ್ಧವಾಗಿಸಲು ತರಾವರಿ ಕಸರತ್ತುಗಳನ್ನು ಪ್ರದರ್ಶನ ಮಾಡಿ, ಸ್ಥಾವರ ಲಿಂಗ ಪೂಜಿಸುವ ಪಂಚಾಚಾರ್ಯ ಶೈವ ಸಂಸ್ಕೃತಿಗೆ ಬಹಿರಂಗವಾಗಿ ಬೆಂಕಿಯಿಡುತ್ತಿದ್ದಾರೆ. ಇಂತಹವರ ಮೂರ್ಖ ನಡೆಯಿಂದ ಪ್ರಾಮಾಣಿಕರಿಗೆ ಸಾಮಾಜಿಕ ಅಪಮಾನ ಗಳಾಗುತ್ತಿವೆ. ವೀರಶೈವ ಜಂಗಮರ ಹಾವಳಿ ಹೆಚ್ಚಾಗಲು ಮೂಲ ಕಾರಣ ಜನರನ್ನಾಳುವ ಸರಕಾರಗಳ ಕಣ್ಣು ಕುರುಡಾಗಿ, ಕಿವಿ ಕಿವುಡಾಗಿರುವುದು. ಹಾಗಾಗಿ ಸಂವಿಧಾನದ ಆಶಯ ಮಣ್ಣಾಗಿದೆ. ಘನ ನ್ಯಾಯಾಲಯಗಳು ಸುಳ್ಳು ಜಾತಿ ಪತ್ರಗಳನ್ನು ಸದೆಬಡಿಯಲು ಸಕಾಲದಲ್ಲಿ ನ್ಯಾಯೋಚಿತ ಮಾರ್ಗದಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತಹ ತೀರ್ಪುಗಳನ್ನು ನೀಡದಿರುವ ಕೊರತೆಗಳೂ ಮತ್ತೊಂದು ಕಾರಣ. ಮೇಲ್ವರ್ಗದ ಜನಪ್ರತಿನಿಧಿಗಳ ಮುಕ್ತ ಬೆಂಬಲ ಬೇರೆ ಇದೆ. ಅನೇಕ ಮಠಮಾನ್ಯಗಳ ರಾಜಾಶ್ರಯವಿದೆ. ಅದರಲ್ಲೂ ಸುಳ್ಳು ಜಾತಿ ಪತ್ರ ಪಡೆದಿರುವವರಿಗೆ ಮಾನವೀಯತೆಯ ಕೃಪಾಕಟಾಕ್ಷದಡಿ ವಿನಾಯಿತಿ ಬೇರೆ ಸಿಗುತ್ತಿದೆ.
ಮತ್ತೊಂದು ಕಡೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕಂದಾಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳು ಸಾಂವಿಧಾನಿಕ ಕಾನೂನುಗಳನ್ನು ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫವಾಗಿ 44 ವರ್ಷಗಳಿಂದ ತವಡುಕುಟ್ಟುವ ಕಾರ್ಯಗಳಲ್ಲಿ ಮಗ್ನವಾಗಿವೆ. ಇವುಗಳ ಮಧ್ಯೆ ವೀರಶೈವ ಜಂಗಮರು ಸ್ವಜನಪಕ್ಷಪಾತದ ಮೂಲಕ ಸುಳ್ಳು ಜಾತಿ ಪತ್ರ ಪಡೆದಿರುವವರು ಹುಟ್ಟಿನ ಸತ್ಯಮುಚ್ಚಿಟ್ಟು, ಸುಳ್ಳನ್ನು ಸತ್ಯವೆಂದು ವಾದಿಸಿ ಜನರನ್ನು ಮರುಳುಮಾಡುತ್ತಿದ್ದಾರೆ. ದಲಿತ ಸಂಘಟನೆಗಳ ವಿಘಟತೆಯನ್ನು ಬಂಡವಾಳ ಮಾಡಿಕೊಂಡು ಅಂಬೇಡ್ಕರ್ ಭಾವಚಿತ್ರ ಕೂಡಾ ಹೈಜಾಕ್ ಮಾಡಿದ್ದಾರೆೆ. ಶಾಲಾ-ಕಾಲೇಜುಗಳ ಪ್ರವೇಶಾತಿಗಳಲ್ಲಿ ಸದ್ದುಗದ್ದಲವಿಲ್ಲದೆ ಬೇಡ ಜಂಗಮ ಪದ ದಾಖಲೀಕರಿಸುತ್ತಿದ್ದಾರೆ. ಈ ಹಿಂದೆ ಸರಕಾರ ಹಿಂದುಳಿದ ವರ್ಗಗಳ ಪ್ರವರ್ಗ-III(ಬಿ) ಅಡಿಯಲ್ಲಿರುವ ‘ಲಿಂಗಾಯತ-ವೀರಶೈವ’ ಸಂಯುಕ್ತ ಪದದೊಳಗೆ ಬರುವ ಉಪ ಜಾತಿಗಳನ್ನು ಪ್ರಕಟಿಸಿತ್ತು. ನಕಲಿ ಬೇಡ ಜಂಗಮರ ಪ್ರಭಾವಕ್ಕೆ ಅಂಜಿ ಸರಕಾರ ಅದನ್ನು ರಾತ್ರೋರಾತ್ರಿ ವಾಪಸ್ ಪಡೆದಿದೆ. ಅತ್ತ ಹಿಂದುಳಿದ ವರ್ಗಗಳ ಆಯೋಗ ತನ್ನ ಶಾಸನಬದ್ಧ ಆಧಿಕಾರದಡಿ ಈ ಸಮಸ್ಯೆಗೆ ಶಾಶ್ವತ ವಿದಾಯ ಹೇಳಲು ಇದುವರೆಗೂ ಪ್ರಯತ್ನಿಸದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ.
ಕೇಂದ್ರ ಸರಕಾರ ಶಾಸನ ಅನುಷ್ಠಾನ ನೇರ ಹೊಣೆಗಾರಿಕೆ ಹೊಂದಿಲ್ಲ. ಅದು ನೀಡಿರುವ ಅನೇಕ ಆದೇಶಗಳನ್ನು ರಾಜ್ಯ ಸರಕಾರಗಳು ಮುಕ್ತ ಮನಸ್ಸಿನಿಂದ ಜಾರಿಗೊಳಿಸದೆ ಜಾಣ ಕಿವುಡು ಪ್ರದರ್ಶನ ಮಾಡುತ್ತಿವೆ. ಅದರಲ್ಲೂ ಕರ್ನಾಟಕ ರಾಷ್ಟ್ರದಲ್ಲೇ ಸುಳ್ಳು ಜಾತಿ ಪತ್ರಗಳ ಕಣಜ ಎಂಬ ಕುಖ್ಯಾತಿಗೆ ಸಿಲುಕಿದೆ. ಇನ್ನು ವಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಬೇಡ (ಬುಡ್ಗ) ಜಂಗಮ, ಲಿಂಗದೇರ್ (ಡೋಹಾರ್ ಕಕ್ಕಯ್ಯ ಜಾತಿ) ಹಾಗೂ ಮಾಲ ಜಂಗಮ ಪದಗಳು ಹಾದಿ-ಬೀದಿಯ ಬಿಕರಿ ವಸ್ತುಗಳಂತಾಗಿವೆ. ಮತ್ತೊಂದು ಕಡೆ ಪ್ರವರ್ಗ-I (ಎ) ದಲ್ಲಿರುವ ಬೈರಾಗಿ, ಹಗಲುವೇಷದವರು, ಬಾಳಸಂತೋಷಿ ಮತ್ತು ಇತರರು ಸಹ ಬೇಡ (ಬುಡ್ಗ) ಜಂಗಮರಾಗಿದ್ದಾರೆ. ಒಟ್ಟಾರೆ, ದಿನಕಳೆದಂತೆಲ್ಲ ನಕಲಿ ಬೇಡ ಜಂಗಮರು ಶಾಸನಬದ್ಧರಾದರೆ ಒಳ ಮೀಸಲಾತಿ ಕೂಗನ್ನು ಶಾಶ್ವತವಾಗಿ ಸಮಾಧಿ ಮಾಡಿ; ಅದರ ಕತ್ತಲಲ್ಲಿ ನಗರ/ಗ್ರಾಮಗಳಲ್ಲಿ 101 ಜಾತಿಗಳ ಪೈಕಿ ಯಾರೊಬ್ಬರೂ ಕನಿಷ್ಠ ಗ್ರಾಮ ಪಂಚಾಯತ್‌ಗೆ ಪ್ರವೇಶಿಸದಂತೆ ಪರಿಶಿಷ್ಟ ಜಾತಿ ಮೀಸಲಾತಿ ಸುತ್ತಲೂ ಲಂಗಾರು ಹಾಕಿ ಜಯಗಳಿಸಿ ಬಿಡುತ್ತಾರೆ.