×
Ad

ಆಧುನಿಕತೆ ಹಾಗೂ ಪರಂಪರೆಯ ಸಮಾಗಮ ವಿಯೆಟ್ನಾಂ

Update: 2025-08-04 14:50 IST

ವಿಯೆಟ್ನಾಂ ದೇಶದ ಹೆಸರು ಕಿವಿಗೆ ಬಿದ್ದಾಕ್ಷಣ ಯುದ್ಧದ ನೆನಪಾಗುತ್ತದೆ. ಹೌದು. ಇಂದಿಗೆ ಸುಮಾರು ಐದು ದಶಕಗಳ ಹಿಂದೆ ಈ ಸುಂದರ ಪ್ರಕೃತಿ ರಮಣೀಯ ನಾಡು, ಜಗತ್ತು ಎಂದಿಗೂ ಮರೆಯಲಾಗದಂತಹ ಭೀಕರ ಸಂಘರ್ಷ, ರಕ್ತಪಾತದಿಂದ ನಲುಗಿಹೋಗಿತ್ತು. ಬಡತನದ ಬೇಗೆಯಿಂದ ನರಳುತ್ತಿದ್ದ ಅದೇ ವಿಯೆಟ್ನಾಂ ಅಚ್ಚರಿ ಮೂಡಿಸುವಷ್ಟು ಬದಲಾಗಿದೆ. ಪ್ರಗತಿಯೆಡೆಗೆ ನಾಗಾಲೋಟದಿಂದ ಸಾಗುತ್ತಿದೆ. ವಿಯೆಟ್ನಾಂ. ಆಗ್ನೇಯ ಏಶ್ಯಾದ ಈ ಪ್ರಕೃತಿರಮಣೀಯ ದೇಶ ಇಂದು ಪ್ರವಾಸಿಗರ ಸ್ವರ್ಗವಾಗಿದೆ. ಕೇವಲ ಐದು ದಶಕಗಳ ಹಿಂದೆ ಯುದ್ಧ, ಬಡತನದಿಂದ ಕಂಗೆಟಿದ್ದ ‘ಎಸ್’ ಆಕೃತಿಯ ದೇಶ ಜಗತ್ತಿನಾದ್ಯಂತ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಸಿರು ಕಾನನಗಳು, ಬೆಟ್ಟಗುಡ್ಡಗಳು, ರಮ್ಯವಾದ ನದಿ, ಸಾಗರಗಳಿಂದ ಆವೃತವಾದ ವಿಯೆಟ್ನಾಂ ಅಧುನಿಕತೆಯನ್ನು ಹೊದ್ದುಕೊಂಡಿದ್ದರೂ, ತನ್ನ ಸಂಸ್ಕೃತಿ, ಪರಂಪರೆಗಳನ್ನು ಇಂದಿಗೂ ಜತನವಾಗಿ ಕಾಯ್ದುಕೊಂಡಿದೆ,

ಏರ್ ವಿಯೆಟ್‌ಜೆಟ್ ವಿಮಾನದ ಮೂಲಕ ಬೆಂಗಳೂರಿನಿಂದ ಐದು ತಾಸು ಪ್ರಯಾಣಿಸಿ ಬೆಳ್ಳಂಬೆಳಗ್ಗೆ ವಿಯೆಟ್ನಾಂನ ಹೊ ಚಿ ಮಿನ್ ಸಿಟಿ ತಲುಪಿದಾಗ ನನಗೆ ಅಚ್ಚರಿಯೇ ಕಾದಿತ್ತು. ಅತ್ಯಾಧುನಿಕ ಗಗನಚುಂಬಿ ಕಟ್ಟಡಗಳು, ಭವ್ಯವಾದ ಸೌಧಗಳು, ಅಚ್ಚುಕಟ್ಟಾದ ವಿಶಾಲವಾದ ರಸ್ತೆಗಳು ಎದುರುಗೊಂಡವು. ಈ ಹಿಂದೆ ಸೈಗಾನ್ ಎಂದೇ ಕರೆಸಿಕೊಳ್ಳುತ್ತಿದ್ದ ಹೊಚಿ ಮಿನ್ ಸಿಟಿ ಇಂದು ವಿಶ್ವದ ಬೃಹತ್ ನಗರಗಳಲ್ಲೊಂದಾಗಿದ್ದರೂ, ಇತಿಹಾಸ, ಸಂಸ್ಕೃತಿ ಹಾಗೂ ಆಧುನಿಕತೆಗಳು ಇಲ್ಲಿ ಸಹಬಾಳ್ವೆ ನಡೆಸುತ್ತಿವೆ.

ಹನೋಯ್ ನಗರ ವಿಯೆಟ್ನಾಂನ ರಾಜಧಾನಿಯಾಗಿದ್ದರೂ, ಹೊಚಿ ಮಿನ್ ಸಿಟಿ ವಾಣಿಜ್ಯ ರಾಜಧಾನಿಯಾಗಿದೆ. ಸೈಗಾನ್ ನದಿ ತಟದಲ್ಲಿರುವ ಹೊಚಿಮಿನ್ ಸಿಟಿ ಅತಿ ಸುಂದರವಾದ ವಿವಿಧ ವಿನ್ಯಾಸಗಳ ಗಗನಚುಂಬಿ ಕಟ್ಟಡಗಳು ಚಿತ್ತಾಕರ್ಷಕವಾಗಿವೆ. ನಗರದಲ್ಲಿ ಎಲ್ಲಿ ನೋಡಿದರಲ್ಲಿ ದ್ವಿಚಕ್ರ ವಾಹನ ಸವಾರರು ಸಾಲುಸಾಲಾಗಿ ಶಿಸ್ತುಬದ್ಧವಾಗಿ ಸಂಚರಿಸುವುದು ಕಾಣಸಿಗುತ್ತದೆ.

ನಗರದೆಲ್ಲೆಡೆ ಶುಚಿರುಚಿಯಾದ ಖಾದ್ಯಗಳನ್ನು ಉಣಬಿಡಿಸುವ ರೆಸ್ಟಾರೆಂಟ್‌ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ರುಚಿಕರವಾದ ವಿಯೆಟ್ನಾಮಿ ಖಾದ್ಯಗಳನ್ನು ಸವಿಯಲು ಪ್ರವಾಸಿಗರಿಗೆ ಈ ನಗರ ಪ್ರಶಸ್ತವಾದ ಸ್ಥಳ. ಅಪ್ಪಟ ಭಾರತೀಯ ಶೈಲಿಯ ಖಾದ್ಯಗಳನ್ನು ನೀಡುವ ಹಲವಾರು ಅತ್ಯಾಧುನಿಕ ಹೊಟೇಲ್‌ಗಳೂ ಹೇರಳವಾಗಿವೆ. ವಿಯೆಟ್ನಾಂ ಸ್ಟ್ರೀಟ್ ಫುಡ್‌ಗಳಂತೂ ವಿಶ್ವದಾದ್ಯಂತ ಭಾರೀ ಫೇಮಸ್.

‘ನಿದ್ರಿಸದ ನಗರ’ ವೆಂದೇ ಖ್ಯಾತಿ ಪಡೆದಿರುವ ಹೊಚಿ ಮಿನ್ ಸಿಟಿ ರಾತ್ರಿಯಾಯಿತೆಂದರೆ ಹೊಸ ಸೊಬಗಿನೊಂದಿಗೆ ಮೈದಳೆಯುತ್ತದೆ. ಇಲ್ಲಿನ ಜಗತಪ್ರಸಿದ್ಧ ಸ್ಟ್ರೀಟ್‌ಫುಡ್‌ಗಳನ್ನು ಸವಿಯುವವರ ದಂಡೇ ಎಲ್ಲೆಡೆ ಕಾಣುತ್ತಿದೆ. ಮಕ್ಕಳು, ಮಹಿಳೆಯರು, ವೃದ್ಧರೆನ್ನದೆ ಎಲ್ಲರೂ ನಿರ್ಭಿಡೆಯಿಂದ ನಗರದೆಲ್ಲೆಡೆ ವಿಹರಿಸುತ್ತಿರುವುದನ್ನು ಕಾಣಬಹುದು. ರಾತ್ರಿ ಹೊತ್ತಿನಲ್ಲಿ ಜಗಮಗಿಸುವ ಹೊಚಿ ಮಿನ್ ಸಿಟಿಯ ವೈವಿಧ್ಯಮಯ ವಿನ್ಯಾಸಗಳ ಕಟ್ಟಡಗಳು ನೋಡುಗರ ಕಣ್ಣಿಗೆ ದೀಪಗಳ ಹಬ್ಬವೇ ಸರಿ.

ತೆರೆದ ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ಕೂತು ನಗರ ಪ್ರದಕ್ಷಿಣೆ ಕೈಗೊಳ್ಳಬಹುದು. ಅಲ್ಲದೆ ಸೋಲೋ ಪ್ರವಾಸಿಗರಿಗೆ ದ್ವಿಚಕ್ರವಾಹನದಲ್ಲಿ ಸಂಚರಿಸುವ ಪ್ಯಾಕೇಜ್ ಕೂಡಾ ಇದೆ.

ಹೊ ಚಿ ಮಿನ್ ಸಿಟಿಯನ್ನು ಮೊದಲ ಬಾರಿಗೆ ಸಂದರ್ಶಿಸುವವರು ಸೆಂಟ್ರಲ್ ಪೋಸ್ಟ್ ಆಫೀಸ್ ತಪ್ಪದೆ ನೋಡಬೇಕು. 18ನೇ ಶತಮಾನದ ಈ ಭವ್ಯ ಕಟ್ಟಡವನ್ನು ಫ್ರೆಂಚ್ ವಸಾಹತುಶಾಹಿ ಕಾಲದಲ್ಲಿ ನಿರ್ಮಿಸಲಾಗಿದೆ. ರೋಮನ್ ಶೈಲಿಯ ಕಮಾನುಗಳಿರುವ ಈ ಕಟ್ಟಡದಲ್ಲಿರುವ ಸಾಲು ಸಾಲು ಅಂಗಡಿಗಳಲ್ಲಿ ಪ್ರವಾಸಿಗರು ಅಪೂರ್ವವಾದ ಸ್ಮರಣಿಕೆಗಳನ್ನು ಖರೀದಿಸಬಹುದು. ತುಸು ಬಿಡುವಿದ್ದರೆ ಸರತಿ ಸಾಲಿನಲ್ಲಿ ನಿಂತು ಅಂಚೆಕಚೇರಿಯಿಂದ ನೆನಪಿಗಾಗಿ ಪೋಸ್ಟ್ ಕಾರ್ಡ್, ಅಂಚೆಚೀಟಿಗಳನ್ನು ಕೂಡಾ ಖರೀದಿಸಬಹುದಾಗಿದೆ. ಪಕ್ಕದಲ್ಲೇ ಇರುವ ನೋತ್ರೆ ಡೇಮ್ ಕೆಥೆಡ್ರಲ್ ಕೂಡಾ ಇದೆ. 1877ರಲ್ಲಿ ನಿರ್ಮಿತವಾದ ಕಾವಿ ಬಣ್ಣದ ಈ ಚರ್ಚ್‌ನಲ್ಲಿರುವ 29 ಮೆಟ್ರಿಕ್ ಟನ್ ಗಾತ್ರದ ಬೃಹತ್ ಗಂಟೆ ಇಲ್ಲಿನ ಪ್ರಮುಖ ಆಕರ್ಷಣೆ.

 ಬೆನ್ ಥಾನ್ ಮಾರ್ಕೆಟ್

ಹೊ ಚಿ ಮಿನ್ ಸಿಟಿಗೆ ಬಂದ ಪ್ರವಾಸಿಗರು ಬೆನ್ ಥಾನ್ ಮಾರ್ಕೆಟ್‌ಗೆ ತಪ್ಪದೇ ಭೇಟಿ ನೀಡಬೇಕು. ಈ ವಿಶಾಲವಾದ ಮಾರುಕಟ್ಟೆಯಲ್ಲಿ 1,500ಕ್ಕೂ ಅಧಿಕ ಅಂಗಡಿಗಳಿವೆ. ಉತ್ತಮ ಗುಣಮಟ್ಟದ ಉಡುಪುಗಳು, ಬ್ಯಾಗ್‌ಗಳು, ಸ್ಮರಣಿಕೆ, ಚಾಕ್‌ಲೆಟ್ಸ್, ಬಗೆಬಗೆಯ ಗೊಂಬೆಗಳು ಸಹಿತ ಎಲ್ಲಾ ಬಗೆಯ ಸಾಮಾಗ್ರಿಗಳು ಇಲ್ಲಿ ಲಭ್ಯ. ಇಲ್ಲಿನ ಬಹುತೇಕ ಅಂಗಡಿಗಳನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ವಿಯೆಟ್ನಾಂ ಜಗತ್ತ್ರಸಿದ್ಧ ತಾಜಾ ಕಾಫಿ ಪುಡಿ ಇಲ್ಲಿ ದೊರೆಯುತ್ತದೆ. ಕಾಫಿಬೀಜಗಳನ್ನು ಸ್ಥಳದಲ್ಲೇ ಪುಟ್ಟಯಂತ್ರದಲ್ಲಿ ಪುಡಿಗೈದು, ಪ್ಯಾಕೆಟ್‌ಗಳಲ್ಲಿ ಕಟ್ಟಿ ಕೊಡುತ್ತಾರೆ. ವಿಯೆಟ್ನಾಂ ಕರೆನ್ಸಿ ಡೊಂಗ್ ಭಾರತದ ರೂಪಾಯಿಗಿಂತ ಕಡಿಮೆ ಮೌಲ್ಯವನ್ನು ಹೊಂದಿದೆ. ಅಂದರೆ ಭಾರತದ 1 ಸಾವಿರ ರೂ. ಮೌಲ್ಯ ವಿಯೆಟ್ನಾಂನ ಸುಮಾರು 3 ಲಕ್ಷ ರೂ. ಡೊಂಗ್‌ಗೆ ಸಮ.

ಅಂದಹಾಗೆ ವಿಯೆಟ್ನಾಮಿಗರು ಅತಿಥ್ಯಕ್ಕೆ ಹೆಸರುವಾಸಿ. ನಾಗರಿಕರಾಗಲಿ ಅಥವಾ ವರ್ತಕರಾಗಿರಲಿ ಪ್ರವಾಸಿಗರನ್ನು ಅತ್ಯಂತ ಗೌರವಾದರಗಳಿಂದ ಕಾಣುತ್ತಾರೆ. ಸಜ್ಜನಿಕೆಯೊಂದಿಗೆ ವರ್ತಿಸುತ್ತಾರೆ.

 ವಿಯೆಟ್ನಾಂ ಯುದ್ಧ ಇತಿಹಾಕ ಸಾರುವ ಕ್ಹು ಚಿ ಟನೆಲ್‌ಗಳು

ಹೊಚಿ ಮಿನ್ ಸಿಟಿಯಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಕ್ಹು ಚಿ ಸುರಂಗಮಾರ್ಗಗಳು ವಿಯೆಟ್ನಾಂ ರೋಚಕ ಗೆರಿಲ್ಲಾ ಯುದ್ಧ ಇತಿಹಾಸಕ್ಕೆ ಸಾಕ್ಷಿಯಾಗಿದೆ. ದಕ್ಷಿಣ ವಿಯೆಟ್ನಾಂನಲ್ಲಿ ಅಮೆರಿಕದ ಸೇನೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವಿಯೆಟ್ನಾಂನ ಕಮ್ಯೂನಿಸ್ಟ್ ಕಾಂಗ್ ಗೆರಿಲ್ಲಾಗಳು, ಈ ಸುರಂಗ ಮಾರ್ಗಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ರಣತಂತ್ರಗಳನ್ನು ರೂಪಿಸುತ್ತಿದ್ದರು.

ನೆಲದಿಂದ 35 ಅಡಿ ಆಳದಲ್ಲಿ 250 ಕಿ.ಮೀ.ವರೆಗೂ ವಿಸ್ತೀರ್ಣವಿರುವ ಈ ಸುರಂಗಗಳು ವಿಯೆಟ್ನಾಂನ ಕಮ್ಯೂನಿಸ್ಟ್ ಕಾಂಗ್ ಗೆರಿಲ್ಲಾ ಯೋಧರು ಮತ್ತು ನಾಗರಿಕರ ಅಭೇದ್ಯ ಅಡಗುದಾಣವಾಗಿತ್ತು. ಕೂ ಚಿ ಸುರಂಗಮಾರ್ಗಗಳನ್ನು ಮೊದಲಿಗೆ ಫ್ರೆಂಚ್ ವಿಮಾನಗಳ ಬಾಂಬ್ ದಾಳಿಯಿಂದ ಪಾರಾಗಲು ನಿರ್ಮಿಸಲಾಗಿತ್ತು. ಆದರೆ ಆನಂತರ ಅಮೆರಿಕ ವಿರುದ್ಧದ ವಿಯೆಟ್ನಾಂ ಯುದ್ಧಕ್ಕೆ ಇದು ಪ್ರಮುಖ ನೆಲೆಯಾಗಿತ್ತು.

ಪ್ರವಾಸಿಗರು ಈ ತುಸು ದೂರದವರೆಗೆ ಈ ಕಡಿದಾದ ಸುರಂಗಮಾರ್ಗದಲ್ಲಿ ಇಳಿದು, ರೋಚಕ ಅನುಭವವನ್ನು ಪಡೆಯಬಹುದಾಗಿದೆ. ಗೆರಿಲ್ಲಾ ಯುದ್ಧತಂತ್ರವನ್ನು ಪರಿಚಯಿಸುವ ಹಲವು ಆಯುಧಗಳು, ಉಪಕರಣಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ವಿಯೆಟ್ನಾಂ ಹೋರಾಟಗಾರರ ದಾಳಿಗೆ ಬಲಿಯಾದ ಬೃಹತ್ ಯುದ್ಧ ಟ್ಯಾಂಕ್ ಕೂಡಾ ಇಲ್ಲಿದೆ. ಇಲ್ಲಿರುವ ಶೂಟಿಂಗ್ ರೇಂಜ್‌ನಲ್ಲಿ ಶುಲ್ಕ ಪಾವತಿಸಿ, ಎಕೆ47 ರೈಫಲ್‌ನಲ್ಲಿ ಗುರಿಗೆ ಗುಂಡುಹೊಡೆದು ತಮ್ಮ ಈಡುಗಾರಿಕೆ ಪರೀಕ್ಷಿಸಲೂ ಪ್ರವಾಸಿಗರಿಗೆ ಅವಕಾಶವಿದೆ.

 ಇಂಡಿಪೆಂಡೆನ್ಸ್ ಪ್ಯಾಲೇಸ್

ನೋತ್ರೆ ಡೇಮ್ ಕೆಥೆಡ್ರಲ್‌ನ ಪಕ್ಕದಲ್ಲೇ ಇರುವ ಇಂಡಿಪೆಂಡೆನ್ಸ್ ಪ್ಯಾಲೇಸ್ ಇನ್ನೊಂದು ಪ್ರಮುಖ ಐತಿಹಾಸಿಕ ತಾಣವಾಗಿದೆ. ಹಿಂದೆ ದಕ್ಷಿಣ ವಿಯೆಟ್ನಾಂನ ಅಧ್ಯಕ್ಷರ ನಿವಾಸವಾಗಿದ್ದ ಈ ಆರಮನೆಯು ವಿಯೆಟ್ನಾಂನ ಏಕೀಕರಣದ ಬಳಿಕ ಈಗ ಇಂಡಿಪೆಂಡೆನ್ಸ್ ಪ್ಯಾಲೇಸ್ ಎಂದು ಕರೆಯಲ್ಪಡುತ್ತಿದೆ. ವಿಯೆಟ್ನಾಂನ ಕಮ್ಯುನಿಸ್ಟ್ ಕಾಂಗೊ ಗೆರಿಲ್ಲಾಗಳು ಈ ಅರಮನೆಯನ್ನು ಯುದ್ಧ ಟ್ಯಾಂಕ್‌ಗಳೊಂದಿಗೆ ಸುತ್ತುವರಿದಾಗ ಆಗಿನ ಅಧ್ಯಕ್ಷ ಡೊವೊಂಗ್ ವಾನ್ ಮಿನ್ ಇಲ್ಲೇ ದಕ್ಷಿಣ ವಿಯೆಟ್ನಾ ಹಾಗೂ ಉತ್ತರ ವಿಯೆಟ್ನಾಂನ ಏಕೀಕರಣದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಅರಮನೆಯ ಕೊಠಡಿಗಳು 1960ರ ದಶಕದ ಅತ್ಯಾಕರ್ಷಕ ವಾಸ್ತುಶೈಲಿಯನ್ನು ಹೊಂದಿದೆ. ಆ ಕಾಲದ ದಕ್ಷಿಣ ವಿಯೆಟ್ನಾಂ ಭೂಪಟವಿರುವ ಯುದ್ಧ ಸಮಾಲೋಚನಾ ಕೊಠಡಿಯನ್ನು ಇಲ್ಲಿ ಕಾಣಬಹುದಾಗಿದೆ.

ಯುದ್ಧದ ಕರಾಳತೆಯನ್ನು ಅನಾವರಣಗೊಳಿಸುವ ವಾರ್ ಮ್ಯೂಸಿಯಂ

ಹೊಚಿ ಮಿನ್ ಸಿಟಿಯಲ್ಲಿರುವ ವಾರ್ ಮ್ಯೂಸಿಯಂ ವಿಯೆಟ್ನಾಂ ಯುದ್ಧದ ಭಯಾನಕತೆಯನ್ನು ಪರಿಚಯಿಸುತ್ತದೆ. ಮ್ಯೂಸಿಯಂನ ಎರಡನೇ ಮಹಡಿಯ ಮೇಲೇರಿದಾಗ ಜಗತ್ತು ಎಂದೂ ಮರೆಯದ ಭೀಭತ್ಸ ವಿಯೆಟ್ನಾಂ ಯುದ್ಧದ ಚಿತ್ರಣವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ದಕ್ಷಿಣ ವಿಯೆಟ್ನಾಂನಲ್ಲಿ ಅಮೆರಿಕನ್ ಸೇನೆ, ವಿಯೆಟ್ನಾಮಿ ಪ್ರಜೆಗಳ ಮೇಲೆ ಎಸಗಿದ ಪಾಶವೀ ಕೃತ್ಯಗಳು ಇಲ್ಲಿ ಪ್ರದರ್ಶಿಸಲಾಗುವ ಛಾಯಾಚಿತ್ರಗಳಲ್ಲಿ ಜೀವಂತವಾಗಿವೆ. ಛಾಯಾಗ್ರಹಕರು ಪ್ರಾಣದ ಹಂಗು ತೊರೆದು ತೆಗೆದಂತಹ ಈ ಛಾಯಾಚಿತ್ರಗಳು ನೋಡುಗರ ಮನಪಟಲದಲ್ಲಿ ಅಜರಾಮರವಾಗಿ ಉಳಿಯುತ್ತವೆ.

ಅಮೆರಿಕನ್ ಸೇನೆಯು ವಿಯೆಟ್ನಾಂ ಗೆರಿಲ್ಲಾಗಳ ಪ್ರಾಬಲ್ಯದ ಪ್ರದೇಶಗಳ ಮೇಲೆ ಪ್ರಯೋಗಿಸಿದ ಏಜೆಂಟ್ ಆರೆಂಜ್ ರಾಸಾಯ ನಿಕದಿಂದ ಸಾವನ್ನಪ್ಪಿದವರ ಶವಗಳು ರಾಶಿರಾಶಿಯಾಗಿ ಬಿದ್ದಿರುವ ಘೋರ ದೃಶ್ಯದ ಛಾಯಾಚಿತ್ರಗಳು ಇಲ್ಲಿವೆ. ಅಲ್ಲದೆ ಈ ವಿಷಕಾರಿ ರಾಸಾಯನಿಕದ ಬಾಧೆಯಿಂದಾಗಿ ಜೀವನಪರ್ಯಂತ ನರಳಿದವರ ಛಾಯಾಚಿತ್ರಗಳು ಮನಕಲಕುತ್ತವೆ. ಕಣ್ಣಾಲಿಗಳು ತೇವಗೊಳ್ಳುತ್ತವೆ. ಏಜೆಂಟ್ ಆರೆಂಜ್ ಪ್ರಯೋಗದಿಂದ ರಾಶಿಬಿದ್ದಿರುವ ಸಾಲು ಸಾಲು ಹೆಣಗಳ ಚಿತ್ರಗಳು ಬೆಚ್ಚಿ ಬೀಳಿಸುತ್ತವೆ. ಮ್ಯೂಸಿಯಂನ ಹೊರಾವರಣದಲ್ಲಿ ಅಮೆರಿಕ ಸೇನೆ ವಿಯೆಟ್ನಾಂ ಯುದ್ಧದಲ್ಲಿ ಬಳಸಿದ ಚಿನೂಕ್ ಹೆಲಿಕಾಪ್ಟರ್ ಹಾಗೂ ಎಂ48 ಟ್ಯಾಂಕ್‌ಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.

ವಿಯೆಟ್ನಾಂನ ಪ್ರವಾಸಿಗರಿಗೆ ಆ ದೇಶವು ಅಲ್ಲಿಂದ ನಿರ್ಗಮಿಸುವಾಗ ವಿಶಿಷ್ಟ ಅನುಭವಗಳ ಬುತ್ತಿಯನ್ನೇ ಕಟ್ಟಿಕೊಡುತ್ತದೆ. ಸ್ವಾಭಿಮಾನಿ, ಸ್ವಾತಂತ್ರ್ಯಪ್ರೇಮಿ ನಾಗರಿಕರು ಕಠಿಣ ಪರಿಶ್ರಮದಿಂದ ಒಂದು ದೇಶವನ್ನು ಅದರ ಮೂಲಭೂತ ಅಂತಸ್ಸತ್ವವನ್ನು ಉಳಿಸಿಕೊಂಡೇ ದೇಶವನ್ನು ಪ್ರಗತಿಪಥದೆಡೆಗೆ ಕೊಂಡೊಯ್ಯಬಲ್ಲರು ಎಂಬುದಕ್ಕೆ ವಿಯೆಟ್ನಾಂ ಉಜ್ವಲ ದೃಷ್ಟಾಂತವಾಗಿದೆ.

ಪ್ರಕೃತಿಯ ಅನರ್ಘ್ಯ ರತ್ನ ಮೆಕಾಂಗ್ ಡೆಲ್ಟಾ

ಜಗತ್ತಿನ ಅತಿ ದೊಡ್ಡ ನದಿಗಳಲ್ಲೊಂದಾದ ಮೆಕಾಂಗ್ ನದಿ ವಿಯೆಟ್ನಾಂನ ಜೀವನಾಡಿ. ಟಿಬೆಟ್‌ನಲ್ಲಿ ಜನಿಸಿ, ಆರು ರಾಷ್ಟ್ರಗಳನ್ನು ಹಾದು 4,909 ಕಿ.ಮೀ.ವರೆಗೆ ಹರಿದು ದಕ್ಷಿಣ ಚೀನಾ ಸಮುದ್ರವನ್ನು ಸೇರುತ್ತದೆ.

ದಕ್ಷಿಣ ವಿಯೆಟ್ನಾಂನ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಅಸ್ವಾದಿಸಲು ಮೆಕಾಂಗ್ ಡೆಲ್ಟಾ ಅತ್ಯಂತ ಪ್ರಶಸ್ತವಾದ ತಾಣ. ವಹೊ ಚಿ ಮಿನ್ ಸಿಟಿಯಿಂದ ಸುಮಾರು 173 ಕಿ.ಮೀ. ದೂರವಿರುವ ಈ ಹಚ್ಚಹಸಿರಿನ ಏಶ್ಯಾದ ಅಕ್ಕಿಯ ಕಣಜ.ಮೆಕಾಂಗ್ ಡೆಲ್ಟಾಗೆ ಸಾಗುವ ಪ್ರದೇಶದುದ್ದಕ್ಕೂ ಹಸಿರುಪೈರುಗಳಿಂದ ಕಂಗೊಳಿಸುವ ಭತ್ತದ ಗದ್ದೆಗಳು ಮನಸ್ಸಿಗೆ ಮುದನೀಡುತ್ತವೆ. ಥಾಯ್‌ಸನ್ ದ್ವೀಪ ಮೆಕಾಂಗ್ ನದಿಯ ಮುಕುಟಮಣಿ. ಪ್ರತಿ ನಿತ್ಯ ನೂರಾರು ಪ್ರವಾಸಿಗರನ್ನು ಹಾಗೂ ಸಂಶೋಧಕರನ್ನು ಈ ಸುಂದರ ದ್ವೀಪ ಬರಮಾಡಿಕೊಳ್ಳುತ್ತಿದೆ. 1200 ಕಿ.ಮೀ. ವಿಸ್ತೀರ್ಣದ ಈ ದ್ವೀಪವು 1990ರಿಂದೀಚೆಗೆ ಅತ್ಯಂತ ಜನಪ್ರಿಯ ಇಕೋ-ಟೂರಿಸಂ ಕೇಂದ್ರವಾಗಿಬಿಟ್ಟಿದೆ.

ಬೋಟ್ ಮೂಲಕ ಥಾಯ್‌ಸನ್ ದ್ವೀಪದೆಡೆಗೆ ಸಾಗುವಾಗ ಅಕ್ಕಪಕ್ಕ ದೋಣಿಗಳಲ್ಲಿ ಜನರು ಹಣ್ಣುಹಂಪಲು, ತರಕಾರಿಗಳನ್ನು ಸಾವಕಾಶವಾಗಿ ಕೊಂಡೊಯ್ಯುತ್ತಿರುವ ದೃಶ್ಯ ಕಣ್ಣಮುಂದೆ ಕಾಣುತ್ತದೆ. ಹಣ್ಣುಹಂಪಲುಗಳ ತೋಟಗಳಿಂದ ಆವೃತವಾದ ಈ ದ್ವೀಪದ ಜನಸಂಖ್ಯೆ ಸುಮಾರು ಆರುಸಾವಿರದಷ್ಟಿದೆಯಂತೆ. ಬೋಟ್‌ನಲ್ಲಿ ಸಾಗುವಾಗ ಅನತಿ ದೂರದಲ್ಲಿ ಮೈ ಥೋ ಎಂಬ ತೇಲುವ ಮೀನುಗಾರಿಕೆಯ ಗ್ರಾಮ ಕಾಣಸಿಗುತ್ತದೆ. ಥಾಯ್‌ಸನ್ ನದಿದಂಡೆಯನ್ನು ತಲುಪುತ್ತಿದ್ದಂತೆಯೇ ಜೇನುಕೃಷಿಯ ತೋಟ ಎದುರಾಗುತ್ತದೆ. ಇಲ್ಲಿ ಸಿಗುವ ವಿಶೇಷ ಹನಿ-ಟೀಯ ಸ್ವಾದವನ್ನು ಮರೆಯಲಾಗದು. ಇ-ರಿಕ್ಷಾದ ಮೂಲಕ ದ್ವೀಪಗ್ರಾಮದಲ್ಲಿ ಸಂಚರಿಸಲು ಅವಕಾಶವಿದೆ. ಸ್ಥಳೀಯ ಹವಞಯಾಸಿ ಜಾನಪದ ಗಾಯಕರ ಸಂಗೀತದ ರಸದೌತಣ ನೀಡತ್ತಾರೆ. ಡೊನ್ ಕ ಟಾಯ್ ಟು ಜಾನಪದ ಶೈಲಿಯ ಅಲ್ಲಿನ ತೋಟಗಳಲ್ಲೇ ಬೆಳೆದ ರುಚಿಕರವಾದ ಹಣ್ಣಿನ ತುಂಡುಗಳನ್ನು ಸವಿಯುತ್ತಾ ಕೇಳಬಹುದು. ವಿಯೆಟ್ನಾಂನ ಈ ಸುಮಧುರ ಜಾನಪದ ಹಾಡುಗಳು ಕಿವಿಗೆ ತಂಪೆರೆಯುತ್ತವೆ. ಸಮೀಪದಲ್ಲೇ ಇರುವ ತೆಂಗಿನಕಾಯಿ ಕಾರ್ಖಾನೆಗೂ ಭೇಟಿ ನೀಡಿ, ವೈವಿಧ್ಯಮಯ ಚಾಕಲೇಟ್‌ಗಳನ್ನು ಖರೀದಿಸಬಹುದು. ರುಚಿಕರವಾದ ತೆಂಗಿನಕಾಯಿ ಐಸ್‌ಕ್ರೀಂ ಕೂಡಾ ಇಲ್ಲಿದೆ.ಜೊತೆಗೆ ಮೊಸಳೆಯ ಚರ್ಮದಿಂದ ತಯಾರಿಸಲಾದ ಬೆಲ್ಟ್‌ಗಳು, ಬ್ಯಾಗ್‌ಗಳನ್ನು ಕೂಡಾ ಇಲ್ಲಿ ಮಾರಾಟ ಮಾಡಲಾಗುತ್ತದೆ.

ಮೆಕಾಂಗ್ ಡೆಲ್ಟಾದ ಹಿನ್ನೀರಿನ ದೋಣಿ ಯಾತ್ರೆಯಂತೂ ರೋಚಕ. ಇಕ್ಕೆಲಗಳಲ್ಲಿ ಬೆಳೆದು ನಿಂತ ತಾಳೆ ಗಿಡಳ ನಡುವೆ ಹರಿಯುವ ಹಿನ್ನೀರಿನಲ್ಲಿ ಮರದ ದೋಣಿಯಲ್ಲಿ ಪ್ರಯಾಣಿಸುವುದು ಅಹ್ಲಾದಕರ ಅನುಭವವನ್ನು ನೀಡುತ್ತದೆ.

ಮೆಕಾಂಗ್ ಡೆಲ್ಟಾದಲ್ಲಿರುವ ಸ್ನೇಕ್‌ವೈನ್ ವಿಶ್ವವಿಖ್ಯಾತಿ ಪಡೆದಿದೆ. ಭತ್ತದಿಂದ ತಯಾರಿಸುವ ವೈನ್‌ನಲ್ಲಿ ಹಾವು, ಚೇಳುಗಳನ್ನು ಮುಳುಗಿಸಿಡುತ್ತಾರೆ. ಅನೇಕರು ಸ್ನೇಕ್ ವೈನ್ ಕಂಡು ಹೌಹಾರಿದರೂ ಇದನ್ನು ಕೊಳ್ಳಲೆಂದೇ ಬರುವ ಪ್ರವಾಸಿಗರೂ ಇದ್ದಾರೆ.

ವಿಶಿಷ್ಟ ಉಪ್ಪು ಮಿಶ್ರಿತ ಕಾಫಿ

ವಿಯೆಟ್ನಾಂನ ಉಪ್ಪು ಮಿಶ್ರಿತ ಕಾಫಿ ಅತ್ಯಂತ ಜನಪ್ರಿಯ. ವಿಯೆಟ್ನಾಂ ಸಂದರ್ಶಿಸುವ ಪ್ರವಾಸಿಗರು ಈ ಕಾಫಿಯನ್ನು ತಪ್ಪದೆ ಸವಿಯುತ್ತಾರೆ. ಕಾಫಿ ಉಪ್ಪು ಹಾಗೂ ಸಕ್ಕರೆ ಮಿಶ್ರಿತ ಈ ಕಾಫಿಯನ್ನು ಬಿಸಿಯಾಗಿ ಅಥವಾಐಸ್‌ಹಾಕಿ ಸೇವಿಸುತ್ತಾರೆ.

ವೈವಿಧ್ಯಮಯ ಖಾದ್ಯಗಳ ನಾಡು

ವಿಯೆಟ್ನಾಂ ವೈವಿಧ್ಯಮ ಖಾದ್ಯಗಳ ಅಗರವಾಗಿದೆ. ಇಲ್ಲಿನ ವೈವಿಧ್ಯಮಯ ಭೌಗೋಳಿಕ ಸ್ವರೂಪ ಹಾಗೂ ಸಂಸ್ಕೃತಿಯು ಬಗೆಬಗೆಯ ರುಚಿಕರವಾದ ಖಾದ್ಯಗಳಿಗೆ ಜನ್ಮನೀಡಿದೆ. ಇಲ್ಲಿನ ಫೋ ನೂಡಲ್ ಸೂಪ್,ಸ್ಯಾಂಡ್‌ವಿಚ್ ಬಾನ್ಹ್ ಮಿ ಅತ್ಯಂತ ಸ್ವಾದಿಷ್ಟಕರವಾಗಿವೆ. ವಿಯೆಟ್ನಾಮಿಗರು ಸಸ್ಯಾಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಅನ್ನದ ಜೊತೆಗೆ ಹಸಿ ಅಥವಾ ಅರೆಬೇಯಿಸಿದ ತರಕಾರಿಗಳನ್ನು ಸೇವಿಸುತ್ತಾರೆ. ಮೀನು ಸೇರಿದಂತೆ ಮಾಂಸಹಾರಗಳಿಗೂ ಹೆಚ್ಚಾಗಿ ಖಾರ,ಮಸಾಲೆ ಸೇರಿಸುವುದಿಲ್ಲ. ಕೇವಲ ಸಾಸ್ ಅಥವಾ ಪೆಪ್ಪರ್‌ಹುಡಿ ಸಿಂಪಡಿಸಿ ಸೇವಿಸುತ್ತಾರೆ. ಅವರ ಆರೋಗ್ಯಕರ ಆಹಾರಶೈಲಿಯಿಂದಾಗಿಯೇ ಬೊಜ್ಜು ದೇಹದ ವಿಯೆಟ್ನಾಮಿಗರು ಕಾಣಸಿಗುವುದು ವಿರಳ. ಅಂದಹಾಗೆ ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ವಿಯೆಟ್ನಾಂ ಅತ್ಯಧಿಕ ತೆಳ್ಳನೆಯ (ಸ್ಲಿಮ್) ದೇಹದ ನಾಗರಿಕರಿರುವ ದೇಶವಾಗಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ. 2.1ರಷ್ಟು ಮಂದಿ ಮಾತ್ರವೇ ಬೊಜ್ಜುದೇಹಿಗಳಾಗಿದ್ದಾರೆ.‌

 ಕ್ರಿಸ್ಟ್ ದಿ ಕಿಂಗ್ ಪ್ರತಿಮೆ

ಹೊಚಿ ಮಿನ್ ಸಿಟಿಗೆ ಸಮೀಪದ ವಾಂಗ್‌ತಾವ್‌ನಲ್ಲಿರುವ ಕ್ರಿಸ್ಟ್ ದಿ ಕಿಂಗ್ ಪ್ರತಿಮೆ, ಬ್ರೆಝಿಲ್‌ನ ರಿಯೋ ಡಿ ಜನೈರೊದಲ್ಲಿರುವ ಕ್ರೈಸ್ತನ ಪ್ರತಿಮೆಯ ಪ್ರತಿರೂಪವಾಗಿದೆ. ಗಿನ್ನೆಸ್ ದಾಖಲೆಯ ಪ್ರಕಾರ 32 ಅಡಿ ಎತ್ತರದ ಈ ಪ್ರತಿಮೆಯು ಏಶ್ಯಾದಲ್ಲಿರುವ ಅತ್ಯಂತ ಎತ್ತರದ ಏಸು ಕ್ರಿಸ್ತನ ಪ್ರತಿಮೆಯಾಗಿದೆ. ಬೆಟ್ಟದ ಮೇಲಿರುವ ಈ ಪ್ರತಿಮೆಯ ತೋಳಿನವರೆಗೂ ಪ್ರವಾಸಿಗರು ಹತ್ತಿಳಿಯಬಹುದಾಗಿದೆ. ಇಲ್ಲಿ ನಿಂತು ತಇಡೀ ವಾಂಗ್ ತಾವ್ ಕರಾವಳಿ ನಗರದ ರಮಣೀಯ ನೋಟವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳೂಬಹುದಾಗಿದೆ.

ಹೊಚಿಮಿನ್ ಸಿಟಿಯ ಸೈಗಾನ್ ಅಪೇರಾ ಹೌಸ್‌ನಲ್ಲಿರುವ ಎ ಓ ಶೋ ಕೂಡಾ ಜಗತ್ಪ್ರಸಿದ್ಧವಾಗಿದೆ. ಬಿದಿರಿನ ಸರ್ಕಸ್, ಆಕ್ರೋಬ್ಯಾಟಿಕ್, ನೃತ್ಯ ಹಾಗೂ ದ್ರಶ್ಯ ಕಲೆಗಳ ಸಂಗವಾದ ಈ ಪ್ರದರ್ಶನವು ವಿಯೆಟ್ನಾಂನ ಗ್ರಾಮೀಣ ಜನಜೀವನವನ್ನು ಪರಿಚಯಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿ. ರಾಜೇಶ್ ನಾಯ್ಕ್

contributor

Similar News