×
Ad

ನಿಂತ ನೀರಿನಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ವಿಜಯಪುರ ನಗರದ ಬಡಾವಣೆಗಳು

Update: 2025-11-22 12:43 IST

ವಿಜಯಪುರ, ನ.21: ಮಳೆ ನಿಂತು ಎರಡು ತಿಂಗಳುಗಳೇ ಆಗಿದ್ದರೂ ನಗರದ ಹಲವು ಈ ಬಡಾವಣೆಯ ಜಾಗದಲ್ಲಿ ಸಂಗ್ರಹಗೊಂಡಿರುವ ನೀರಿನಿಂದಾಗಿ ಸಾಂಕ್ರಾಮಿಕ ರೋಗ ಭೀತಿ, ಇನ್ನೊಂದು ಕಡೆ ಮನೆಯೊಳಗೆ ನುಗ್ಗುತ್ತಿರುವ ನೀರು ಹೀಗೆ ಸಮಸ್ಯೆಗಳ ಸರಮಾಲೆಯಿಂದ ಜೀವನ ನಡೆಸುವಂತಾಗಿದೆ ಸ್ಥಳೀಯ ನಿವಾಸಿಗಳ ಆರೋಪವಾಗಿದೆ.

ನಗರದ ಐತಿಹಾಸಿಕ ಇಬ್ರಾಹಿಂ ರೋಝಾ ಹಿಂಭಾಗದಲ್ಲಿರುವ ಬಾಗವಾನ ಕಾಲನಿ, ಮುಝಾವರ ಮಲ್ಲಾ ಸೇರಿದಂತೆ ನಗರದ ಅನೇಕ ಬಡಾವಣೆಗಳು ಇಂದಿಗೂ ನಡುಗಡ್ಡೆಯಾಗಿ ಉಳಿದಿವೆ. ಇಲ್ಲಿನ ಮನೆಯ ಮುಂದೆ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದ್ದರೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಮಸ್ಯೆಯ ಪರಿಹಾರಕ್ಕೆ ಕ್ರಮವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ.

ಮಳೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ವೀಕ್ಷಣೆ ಮಾಡಿ, ಇಲ್ಲಿ ನಿಂತಿರುವ ನೀರು ಹರಿದು ಹೋಗಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿ ಅಧಿಕಾರಿಗಳಿಗೂ ಸೂಚನೆ ನೀಡಿದ್ದರೂ ಅವರ ಮಾತಿಗೂ ಅಧಿಕಾರಿಗಳೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಇಬ್ರಾಹಿಂ ರೋಝಾದ ಹಿಂದೆ ನೀರು ಹೋಗಲು ಕಾಲುವೆ ಮಾಡಿದರೂ ಸರಿಯಾಗಿ ನೀರು ಹೋಗುತ್ತಿಲ್ಲ. ಇದು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಎಲ್ಲೂ ಸಹ ನೀರು ಹರಿದು ಹೋಗುವ ಅವಕಾಶವೇ ಇಲ್ಲ, ಹೀಗಾಗಿ ಅಲ್ಲಿರುವ ಬಡವರು ನೀರಿನಲ್ಲಿಯೇ ನಡೆದು ಮನೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕೆಲ ಮನೆಗಳು ರಾಜ ಕಾಲುವೆ ಮೇಲೆ ಮನೆ ಕಟ್ಟಿದ್ದಾರೆಂಬ ಆರೋಪ ಇದೆ. ಇದನ್ನು ಪ್ರಶ್ನಿಸಿ, ಕೆಲವರು ಕೋರ್ಟ್‌ಗೆ ಹೋಗಿದ್ದಾರೆ.

ನೀರು ಸಂಪೂರ್ಣವಾಗಿ ಪಾಚಿಗಟ್ಟಿ ಒಂದು ತರಹ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣಗೊಂಡಿದೆ. ನಿಂತ ನೀರಿನಲ್ಲಿ ಸೊಳ್ಳೆ, ನೊಣಗಳ ಹಾವಳಿಯಿಂದ ಕೆಲವರು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗಿದ್ದಾರೆ, ಇದನ್ನು ನೋಡಿ ಅನೇಕರು ಜಾಗ ಖಾಲಿ ಮಾಡಿದ್ದಾರೆ, ಆದರೆ ಅಲ್ಲಿರುವ ಅನೇಕ ಬಡ ಕೂಲಿಕಾರ್ಮಿಕರು, ಪೌರಕಾರ್ಮಿಕರು ಬೇರೆಡೆ ಹೋಗಲು ಸಾಧ್ಯವಿಲ್ಲದೇ ಅನಿವಾರ್ಯವಾಗಿ ಬದುಕುವಂತಾಗಿದೆ ಎಂದು ಸ್ಥಳಿಯ ನಿವಾಸಿಗಳ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ವಿಷಾಕಾರಿ ಜೀವಿಗಳಾದ ಹಾವು, ಚೇಳು ಸೇರಿದಂತೆ ಮತ್ತಿತರ ಪ್ರಾಣಿಗಳು ಹಾವಳಿ ಹೆಚ್ಚಾಗಿದೆ. ಕಲುಷಿತ ನೀರಿನಿಂದ ಹಾವುಗಳ ಸಂಖ್ಯೆ ಹೆಚ್ಚಾಗಿ ಹಲವಾರು ಬಾರಿ ಈ ಬಡಾವಣೆಯ ಮನೆಯಲ್ಲಿ ಹಾವುಗಳು ಕಂಡುಬಂದಿರುವ ಉದಾಹರಣೆಗಳು ಇವೆ. ಆದ್ದರಿಂದ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಡಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಮನೆಯ ಮುಂದೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನೀರು ದುರ್ವಾಸನೆಯಿಂದ ಕೂಡಿರುವುದರಿಂದ ನಾವು ಊಟ ಮಾಡಲು ಕಷ್ಟವಾಗಿದೆ. ನಮ್ಮ ಮಕ್ಕಳು ಅನಾರೋಗ್ಯದಿಂದ ಆಸ್ಪತ್ರೆ ಸೇರುವಂತಾಗಿದೆ. ಬೇರೆ ಕಡೆ ಹೋಗಿ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಹೋಗೋಣವೆಂದರೆ ಬಾಡಿಗೆ ಹೆಚ್ಚು ಇರುವದರಿಂದ ನಮಗೆ ಅದು ಅಸಾಧ್ಯವಾಗಿದೆ. ಇಂತಹ ಮನೆಯಲ್ಲಿ ಇರುವುದು ಅನಿವಾರ್ಯ ಆಗಿದ್ದು, ನಮ್ಮ ಸಮಸ್ಯೆಯ ಪರಿಹಾರಕ್ಕೆ ಕ್ರಮವಹಿಸಿ.

-ಅಬ್ಬಾಸ್, ಸ್ಥಳೀಯ ನಿವಾಸಿ

ಮಳೆ ನೀರು, ಚರಂಡಿಯ ಕಲುಷಿತ ನೀರು ಮುಂದೆ ಹರಿಯದೇ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಗಾಡ ನಿದ್ರೆಗೆ ಜಾರಿದ್ದಾರೆ. ಅಲ್ಲದೇ ಈ ಭಾಗದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಸಂಬಂಧಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡದೇ ಹೋದರೆ ಹೋರಾಟ ಮಾಡುತ್ತೇವೆ.

-ಯುಸೂಫ್ ಜಮಾದಾರ, ರಾಜ್ಯಾಧ್ಯಕ್ಷ, ಅಖಿಲ ಭಾರತೀಯ ಜಮ್ ಜಮ್ ಅಸೋಶಿಯೇಷನ್, ವಿಜಯಪುರ

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರು ಇಲ್ಲಿನ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇವರ ಮಾತಿಗೆ ಪಾಲಿಕೆ ಆಯುಕ್ತರು ಯಾವುದೇ ಕ್ರಮವಹಿಸಿಲ್ಲ. ಐತಿಹಾಸಿಕ ಸ್ಮಾರಕದಲ್ಲಿ ನೀರು ನಿಂತಿದೆ. ಇದರಿಂದಾಗಿ ಸ್ಮಾರಕಕ್ಕೆ ಹಾನಿ ಉಂಟಾಗುತ್ತಿದೆ.

-ಅಬ್ದಲ್ ರಝಾಕ್ ಹೋರ್ತಿ, ಮಾಜಿ ಪಾಲಿಕೆ ಸದಸ್ಯರು, ವಿಜಯಪುರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News