×
Ad

ವೀರೇಂದ್ರನಾಥ ಚಟ್ಟೋಪಾಧ್ಯಾಯ ಎಂಬ ಕ್ರಾಂತಿಯ ತುಡಿತ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!

Update: 2026-01-09 12:20 IST

ಭಾಗ - 21

ವೀರೇಂದ್ರನಾಥ ಚಟ್ಟೋಪಾಧ್ಯಾಯ, ನಿಜಾಮ್ ಸರಕಾರದ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಡಾ. ಅಘೋರನಾಥ ಚಟ್ಟೋಪಾಧ್ಯಾಯ ಅವರ ಮಗನಾಗಿ 1880ರಲ್ಲಿ ಜನಿಸಿದರು.ಸರೋಜಿನಿ ನಾಯ್ಡು ಮತ್ತು ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರ ಅಣ್ಣ. ಆಢ್ಯ ಮನೆತನವಾದರೂ ಇಡೀ ಮನೆ ರಾಷ್ಟ್ರೀಯ ಹೋರಾಟದ ತವಕದಲ್ಲಿತ್ತು.

ಅತ್ಯುತ್ತಮ ಸೆಕ್ಯುಲರ್ ಶಿಕ್ಷಣ ಪಡೆದಿದ್ದ ವೀರೇಂದ್ರನಾಥ್ (ಚಾಟೋ ಎಂದೇ ಜನಪ್ರಿಯ) ಬಹುಭಾಷಾ ಪಂಡಿತ. ಭಾರತದಲ್ಲಿದ್ದಾಗ ತೆಲುಗು, ತಮಿಳು, ಬೆಂಗಾಲಿ, ಉರ್ದು, ಪರ್ಶಿಯನ್, ಹಿಂದಿ, ಇಂಗ್ಲಿಷ್ ಕಲಿತರೆ, ವಿದೇಶದಲ್ಲಿ ಅಲೆಮಾರಿ ಕ್ರಾಂತಿಕಾರಿಯಾಗಿದ್ದಾಗ ಫ್ರೆಂಚ್, ಇಟಾಲಿಯನ್, ಜರ್ಮನ್, ಡಚ್, ರಶ್ಯನ್ ಮತ್ತು ಸ್ಕಾಂಡಿನೇವಿಯನ್ ದೇಶಗಳ ಭಾಷೆಯನ್ನೂ ಚಾಟೋ ಕಲಿತಿದ್ದರು! ಮದ್ರಾಸ್‌ನಲ್ಲಿ ಡಿಗ್ರಿ ಮುಗಿಸಿ, ಕಲ್ಕತ್ತಾದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದಾಗ ಚಾಟೋಗೆ ಅರೋಬಿಂದೋ ಕುಟುಂಬದ ಪರಿಚಯವಾಯಿತು.

1902ರಲ್ಲಿ ಚಾಟೋ ಆಕ್ಸ್‌ಫರ್ಡ್ ವಿವಿ ಸೇರಿ ಐ.ಸಿ.ಎಸ್. ಪರೀಕ್ಷೆಗೆ ತಯಾರಿ ನಡೆಸಿದ್ದರು. ಅದೇ ವೇಳೆಗೆ ಕಾನೂನು ಶಿಕ್ಷಣಕ್ಕೂ ಸೇರ್ಪಡೆಯಾದರು. ಅಲ್ಲಿದ್ದಾಗ ಇಂಡಿಯಾ ಹೌಸ್ ನ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬಂದ ಚಾಟೋ, ಸಾವರ್ಕರ್ ಜೊತೆ ಆತ್ಮೀಯರಾಗಿದ್ದರು (1906-07ರ ಅವಧಿ) ಸಾವರ್ಕರ್ ಪ್ರಭಾವದಿಂದ ಮದನ್ ಲಾಲ್ ಧಿಂಗ್ರಾ, ಕರ್ಜನ್ ವೈಲಿಯನ್ನು ಹತ್ಯೆ ಮಾಡಿದಾಗ ಚಾಟೋ ಸಾವರ್ಕರ್ ಪರವಾಗಿ ಲೇಖನ ಬರೆದು ವಕೀಲರ ಸಂಘದಿಂದ ಉಚ್ಚಾಟನೆಗೊಂಡರು! ಆ ಸಮಯದಲ್ಲಿ ಅತ್ಯುಗ್ರ ರಾಷ್ಟ್ರೀಯತೆಯ ಪತ್ರಿಕೆ ‘ತಲವಾರ್’ ನ್ನು ಸಂಪಾದಿಸಿ ಪ್ರಕಟಿಸಿದರು. ಆ ಪತ್ರಿಕೆ ಅಕಾಲಿಕವಾಗಿ ನಿಂತು ಹೋಯಿತು.

1907ರಲ್ಲಿ ಅವರು 2ನೇ ಅಂತರ್‌ರಾಷ್ಟ್ರೀಯ ಸಮ್ಮೇಳನವೆಂದೇ ಖ್ಯಾತಿ ಪಡೆದ ಎಡಪಂಥೀಯ ಜಾಗತಿಕ ಸಮಾವೇಶಕ್ಕೂ ಹಾಜರಾದರು. ರೋಸಾ ಲಕ್ಸೆಂಬರ್ಗ, ಲೆನಿನ್ ಸಹಿತ ಆ ಕಾಲದ ಎಲ್ಲಾ ಕ್ರಾಂತಿಕಾರಿ ನಾಯಕರೂ ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

1910ರಲ್ಲಿ ಇಂಗ್ಲೆಂಡ್-ಜಪಾನ್ ನಡುವೆ ರಾಜಕೀಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಭಾರತದ ಕ್ರಾಂತಿಗೆ ಜಪಾನ್ ಸಹಾಯ ಪಡೆಯಲು ಸಂಗಾತಿಗಳೊಂದಿಗೆ ಚರ್ಚಿಸಿದ ಚಾಟೋ ತನ್ನ ಬಂಧನದ ವಾರಂಟ್ ತಪ್ಪಿಸಿಕೊಳ್ಳಲು ಪ್ಯಾರಿಸ್‌ಗೆ ಹೋದರು. ಅಲ್ಲಿ ಫ್ರಾನ್ಸ್‌ನ ಕಾರ್ಮಿಕ ಸಂಘಟನೆ ಸೇರಿದರು. 1912ರಲ್ಲಿ ಚಾಟೋ ಐರಿಶ್ ಕೆಥೊಲಿಕ್ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾದರು. ಆದರೆ ನಾಸ್ತಿಕ ಹಂತಕ್ಕೆ ತಿರುಗಿದ್ದ ಚಾಟೋನಲ್ಲಿ ಹುಟ್ಟುವ ಮಗುವನ್ನು ಕ್ಯೆಥೊಲಿಕ್ ಆಗಿ ಬೆಳೆಸುತ್ತೇನೆ ಎಂದು ಆಕೆ ಹೇಳಿದ್ದಳು. ಪರಮ ಧಾರ್ಮಿಕ ಮಹೀಳೆ ಆಕೆ! ಚಾಟೋರನ್ನು ಬಿಟ್ಟು ಆಕೆ ಹೋದ ಮೇಲೆ ಅಧಿಕೃತ ವಿಚ್ಛೇದನಕ್ಕೆ ಚಾಟೋ ವರ್ಷಗಟ್ಟಲೆ ಒದ್ದಾಡಿದ್ದರಂತೆ.

ಆ ಬಳಿಕ ಬರ್ಲಿನ್‌ನಲ್ಲಿದ್ದಾಗ ಆಗ್ನೆಸ್ ಸ್ಮೆಡ್ಲಿ ಎಂಬ ಬರಹಗಾರ್ತಿಯ ಪರಿಚಯವಾಗಿ ಅವರೊಂದಿಗೆ ಸುದೀರ್ಘ ಕಾಲ ಚಾಟೋ ಜೀವನ ನಡೆಸಿದರು.

ಜರ್ಮನಿಯಲ್ಲಿ ಸರಕಾರಕ್ಕೆ ಸಂಶಯ ಬರಬಾರದೆಂದು ಚಾಟೋ ತೌಲನಿಕ ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿ ಸೇರಿದ್ದರು. ಅಲ್ಲಿ ಜರ್ಮನ್ ಫ್ರೆಂಡ್ಸ್ ಆಫ್ ಇಂಡಿಯಾ ಸ್ಥಾಪಿಸಿದ ಚಾಟೋ, ಬ್ರಿಟಿಷ್ ವಿರುದ್ಧದ ಹೋರಾಟಕ್ಕೆ ಜರ್ಮನಿಯ ಸಹಾಯದ ಒಪ್ಪಂದ ಕೂಡಾ ಮಾಡಿಕೊಂಡಿದ್ದರು.

ಸೆಪ್ಟಂಬರ್ 1914ರಲ್ಲಿ ಅಮೆರಿಕದ ಜರ್ಮನ್ ರಾಯಭಾರಿ, ಭಾರತಕ್ಕೆ ಶಸ್ತ್ರಾಸ್ತ್ರ ಸಾಗಿಸಲು ಬೇಕಾದ ಸ್ಟೀಮರ್ ಸಹಿತ ವ್ಯವಸ್ಥೆ ಮಾಡಿದ್ದರು. ಭಾರತದ ಪೂರ್ವ ತೀರದಲ್ಲಿ ಡೆಲಿವರಿ ಮಾಡುವ ಯೋಜನೆ ಅದು. ಇದರ ಭಾಗವಾಗಿ ಪಿಂಗ್ಳೆ, ಶರಭ್ ಭಾರತಕ್ಕೆ ಬಂದಿದ್ದು. ಈ ಕ್ರಾಂತಿಯ ಯೋಜನೆ ಬ್ರಿಟಿಷರಿಗೆ ತಿಳಿದು ಇದು ವಿಫಲವಾಯಿತು. ಈ ಯತ್ನ ವಿಫಲವಾದರೂ 1917ರಲ್ಲಿ ಸ್ಟಾಕ್ ಹೋಮ್‌ನಲ್ಲಿ ಭಾರತದ ಸ್ವಾತಂತ್ರ್ಯಕ್ಕೋಸ್ಕರ ಅಂತರ್‌ರಾಷ್ಟ್ರೀಯ ಸಮಿತಿಯನ್ನು ಚಾಟೋ ಮತ್ತೆ ಸ್ಥಾಪಿಸಿದ್ದರು. 1918ರಲ್ಲಿ ರಶ್ಯನ್ ಕ್ರಾಂತಿಕಾರಿಗಳನ್ನು ಸಂಪರ್ಕಿಸಿದ್ದರು. 1920ರ ವೇಳೆಗೆ ರಶ್ಯಕ್ಕೆ ತೆರಳಿದ್ದ ಲೆನಿನ್ ಅವರನ್ನೂ ಭೇಟಿಯಾದರು. ಸಾಮ್ರಾಜ್ಯವಾದದ ವಿರುದ್ಧದ ಸಂಘಟನೆಯನ್ನೂ ಕಟ್ಟಿದ ಚಾಟೋ ಮತ್ತೆ ಜರ್ಮನಿಯ ಕಮ್ಯುನಿಸ್ಟ್ ಪಕ್ಷ ಸೇರಿದ್ದರು.

1927ರಲ್ಲಿ ಈ ಸಂಘಟನೆಯ ಸಮಾವೇಶಕ್ಕೆ ನೆಹರೂ ಕೂಡಾ ಹಾಜರಾಗಿದ್ದರು.

ನೆಹರೂ ಕಾಂಗ್ರೆಸ್ ಅಧ್ಯಕ್ಷರಾದಾಗ, ಕಾಂಗ್ರೆಸನ್ನು ಒಡೆದು ತೀವ್ರಗಾಮಿ ಹಾದಿ ಹಿಡಿಯಿರಿ ಎಂದು ಚಾಟೋ ನೆಹರೂ ಅವರಲ್ಲಿ ವಿನಂತಿಸಿದ್ದರು.

30ರ ದಶಕದ ಆರಂಭದ ವರ್ಷಗಳಲ್ಲಿ ರಾಸ್ ಬಿಹಾರಿ ಬೋಸ್ ಮತ್ತು ಚಾಟೋ ಅಂತರ್‌ರಾಷ್ಟ್ರೀಯವಾಗಿ ಭಾರತದಲ್ಲಿ ಸಂಘಟನೆ ಹೋರಾಟಕ್ಕಾಗಿ ಎಷ್ಟು ನೆಟ್‌ವರ್ಕ್ ಮಾಡಿ ಯತ್ನಿಸಿದರೂ ಅದು ಫಲ ಕಾಣಲಿಲ್ಲ.

ಈ ಸಮಯದಲ್ಲಿ ಭಾರತಕ್ಕೆ ಮರಳಬೇಕೆಂಬ ತೀವ್ರ ಆಸೆ ಚಾಟೋ ಅವರಿಗಿತ್ತು. ಆದರೆ ಬಂದರೆ ಅವರ ದೇಹ ಚಟ್ಟದ ಮೇಲೆ ಇರುತ್ತಷ್ಟೆ ಎಂಬ ನಿರ್ಧಾರ ಬ್ರಿಟಿಷ್ ಸರಕಾರದ್ದಾಗಿತ್ತು.

ಈ ಅವಧಿಯಲ್ಲಿ ಅವರು ನೂರಾರು ಲೇಖನಗಳನ್ನು ಬರೆದರು. ರಶ್ಯದಲ್ಲೇ ಉಳಿದು ಕಮ್ಯುನಿಸ್ಟ್ ಪಕ್ಷದ ಸೈದ್ಧಾಂತಿಕ ಸ್ಪಷ್ಟತೆಯ ಬರಹಗಳನ್ನು ಬರೆದರು. ಹಿಟ್ಲರ್ ನ ಅಪಾಯದ ಬಗ್ಗೆ ಎಚ್ಚರಿಸಿದ್ದರು.

ಅವರ ಸಂಗಾತಿ ಆಗ್ನೆಸ್ ಬರೆಯುತ್ತಾರೆ, ‘‘ನಾನು ಕೊನೆಯ ಬಾರಿಗೆ ಅವರನ್ನು ನೋಡಿದ್ದು 1933ರಲ್ಲಿ. ಒಂದು ಜನಾಂಗದ ದುರಂತದ ರೂಪವಾಗಿ ಅವರು ಕಾಣಿಸಿದರು. ಅವರು ಇಂಗ್ಲೆಂಡ್, ಅಮೆರಿಕಗಳಲ್ಲಿ ಹುಟ್ಟಿದ್ದರೆ ಸರ್ವ ಶ್ರೇಷ್ಠ ನಾಯಕರ ಸಾಲಿನಲ್ಲಿ ಅವರನ್ನು ಗುರುತಿಸುತ್ತಿದ್ದರು. ಏಕಾಏಕಿ ಚಾಟೋ ವೃದ್ಧಾಪ್ಯದತ್ತ ಸಾಗುತ್ತಿದ್ದರು. ಅವರ ದೇಹ ಕ್ಷೀಣವಾಗಿತ್ತು. ಭಾರತಕ್ಕೆ ಮರಳುವ ಉತ್ಕಟ ತುಡಿತ ಅವರ ಮೈಮನ ತುಂಬಿತ್ತು.’’

15, ಜುಲೈ 1937ರಂದು ಚಾಟೋ ಅವರನ್ನು ಸ್ಟಾಲಿನ್ ಇತರ 200 ಮಂದಿ ಪ್ರಮುಖ ಕಮ್ಯುನಿಸ್ಟ್ ನಾಯಕ, ಬುದ್ಧಿಜೀವಿಗಳ ಸಹಿತ ಬಂಧಿಸಿದ. ತೀವ್ರ ಕೀಳರಿಮೆ, ಸಂಶಯದಿಂದ ಬಳಲುತ್ತಿದ್ದ ಸ್ಟಾಲಿನ್ ಪಕ್ಷದಲ್ಲಿ ತನಗೆ ಸವಾಲಾಗಬಹುದಾದ ಎಲ್ಲರನ್ನೂ ಹತ್ಯೆ ಮಾಡಿದ್ದ. ಸೆಪ್ಟಂಬರ್ 2, 1937ರಂದು ಫೈರಿಂಗ್ ಸ್ಕ್ವಾಡ್‌ನ ಗುಂಡಿಗೆ ಚಾಟೋ ಇತರ 184 ನಿಸ್ಪಹ ಕಮ್ಯುನಿಸ್ಟ್ ನಾಯಕರ ಜೊತೆ ಬಲಿಯಾದರು.

ಈ ಸುದ್ದಿ ಅವರ ಭಾವ, ಇನ್ನೊಬ್ಬ ಕ್ರಾಂತಿಕಾರಿ ಎ.ಸಿ.ಎನ್. ನಂಬಿಯಾರ್ ಮೂಲಕ ನೆಹರೂ ಅವರಿಗೆ ತಲುಪಿತು.

ಹೀಗೆ ಭಾರತದ ಬಲುದೊಡ್ಡ ಸೈದ್ಧಾಂತಿಕ ಕನಸುಗಾರನ ಜೀವ ನಷ್ಟವಾಯಿತು.

‘‘ಊಟಕ್ಕೂ ತತ್ವಾರವಾಗಿದ್ದ ದಿನಗಳನ್ನು ಚಾಟೋ ಕಳೆದಿದ್ದರು. ಆದರೆ ಹಾಸ್ಯಪ್ರಜ್ಞೆ ಮತ್ತು ಹಗುರಾದ ಮನಸ್ಸು ಸದಾ ಆತನಲ್ಲಿತ್ತು. ವಕೀಲಿಕೆ ಕಲಿಯುವಾಗ ಈತ ನನ್ನ ಸೀನಿಯರ್. ಬೌದ್ಧಿಕವಾಗಿ ನನ್ನನ್ನು ತಟ್ಟಿದ್ದು ಚಾಟೋ ಮತ್ತು ಎಂ.ಎನ್. ರಾಯ್ ಮಾತ್ರ’’ ಎಂದು ನೆಹರೂ ತಮ್ಮ ಆತ್ಮಚರಿತ್ರೆಯಲ್ಲಿ ಚಾಟೋ ಬಗ್ಗೆ ಬರೆಯುತ್ತಾರೆ.

ಅವಿರತವಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಿಡುಗಡೆಗೆ ಬೇಕಾದ ಸಹಾಯದ ನೆಟ್‌ವರ್ಕ್ ಸಂಘಟಿಸುತ್ತಾ, ಒಂದೊಂದು ವಿಫಲವಾದಾಗಲೂ ಎದೆಗುಂದದೇ ಮತ್ತೆ ಮತ್ತೆ ಸಂಘಟಿಸುತ್ತಾ, ತೀವ್ರ ನಿರಾಸೆ, ತವರಿನ ಹಂಬಲದ ಭಾವನಾತ್ಮಕ ಒತ್ತಡದಲ್ಲೇ ಚಾಟೋ ಕೃಶವಾದರು.

ಕೊನೆಗೆ ತಾನೇ ನಂಬಿದ್ದ ದೇಶದ ಸರ್ವಾಧಿಕಾರಿ ಕೈಲಿ ಹತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News