ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ‘ವಿಶ್ವಗುರು ಬಸವಣ್ಣ, ವಚನ ಸಾಹಿತ್ಯ’

Update: 2024-01-22 07:22 GMT

ಬೆಂಗಳೂರು, ಜ.21: ಜಾಗತಿಕವಾಗಿ ಮೂರನೇ ಸ್ಥಾನದಲ್ಲಿರುವ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಈ ಬಾರಿ ವಿಶ್ವಗುರು ಬಸವಣ್ಣ ಹಾಗೂ ವಚನ ಸಾಹಿತ್ಯಕ್ಕೆ ಪ್ರದರ್ಶನಕ್ಕೆ ಮೀಸಲಿಡಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಅಮೆರಿಕ ಹಾಗೂ ಇಂಗ್ಲೆಂಡ್‌ನ ಚಲ್ಸಿ ಪ್ರದರ್ಶನವು ಮೊದಲ ಎರಡು ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ನಮ್ಮ ಲಾಲ್‌ಬಾಗ್‌ನ ಪ್ರದರ್ಶನವಿದೆ. 

12ನೇ ಶತಮಾನದಲ್ಲಿ ಬಸವಣ್ಣ ಹುಟ್ಟುಹಾಕಿದ ಅನುಭವ ಮಂಟಪವನ್ನು ಬಿಂಬಿಸಲು ಅನುವಾಗುವಂತೆ ಬಸವಕಲ್ಯಾಣದಲ್ಲಿ 600ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಅನುಭವ ಮಂಟಪದ ಯಥಾವತ್ ಕಿರು ಪುಷ್ಪ ಪ್ರತಿರೂಪವು ಲಾಲ್‌ಬಾಗ್‌ನ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ತಲೆ ಎತ್ತಿದೆ. ಅನುಭವ ಮಂಟಪದ ಮೂಲ ಪ್ರತಿರೂಪದ ರಚನೆಯನ್ನು ಐರನ್ ಫ್ರೇಮ್ ವರ್ಕ್‌ನಿಂದ ರೂಪಿಸಿ, ಅದಕ್ಕೆ 750 ಕೆ.ಜಿ.ಗೂ ಹೆಚ್ಚು ವೈರ್ ಮೆಷ್ ಅಳವಡಿಸಲಾಗಿದೆ. ಅದಕ್ಕೆ 10 ಸಾವಿರಕ್ಕೂ ಅಧಿಕ ಫ್ಲೋರಲ್ ಫೋಮ್‌ಗಳನ್ನು ಬಳಸಿ ಅಂತಿಮ ರೂಪವನ್ನು ನೀಡಲಾಗಿದ್ದು, ಸ್ನೀಲು ಪ್ಲವರ್ಸ್ ಸಂಸ್ಥೆಯ ಸತ್ಯಪಾಲ್ ಅಗರ್‌ವಾಲ್‌ರ ಪರಿಕಲ್ಪನೆಯಲ್ಲಿ ಈ ಅನುಭವ ಮಂಟಪ ಮೂಡಿಬಂದಿದೆ.

 

ಅನುಭವ ಮಂಟಪದ ಪುಷ್ಪ ಪ್ರತಿರೂಪವು 34 ಅಡಿ ಅಗಲ ಮತ್ತು 30 ಅಡಿ ಎತ್ತರವಿದೆ. ಕಡುಗೆಂಪು, ಹಳದಿ ಮತ್ತು ಕಿತ್ತಳೆವರ್ಣದ 1.5 ಲಕ್ಷ ಗುಲಾಬಿ ಹೂಗಳು, ಹಳದಿ, ಪಿಂಕ್ ಮತ್ತು ಶ್ವೇತವರ್ಣದ 1.55 ಲಕ್ಷ ಆಕರ್ಷಕ ಸೇವಂತಿ ಹೂಗಳು ಹಾಗೂ 1.85 ಲಕ್ಷ ಗುಂಡುರಂಗು(ಗಾಂಫ್ರಿನಾ) ಹೂಗಳು ಸೇರಿ ಒಟ್ಟಾರೆ 4.8 ಲಕ್ಷ ಹೂ.ಗಳನ್ನು ಒಂದು ಬಾರಿಗೆ ಈ ಉದ್ದೇಶಕ್ಕೆ ಬಳಸಲಾಗಿದೆ. ಇವುಗಳ ಜೊತೆಗೆ ಆಕರ್ಷಕ ಎಲೆ ಜಾತಿಗಳಾದ ಪೋಡೋಕಾರ್ಪಸ್, ಸೈಫಸ್, ಸಾಂಗ್ ಆಫ್ ಇಂಡಿಯಾ ಇತ್ಯಾದಿಗಳ 2,500 ಬಂಚ್‌ಗಳನ್ನು ಬಳಸಿರುವುದು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. 

ಅನುಭವ ಮಂಟಪದ ಮೂಲ ರಚನೆಯನ್ನು ಕೈಗೊಳ್ಳಲು ದಿವಸಕ್ಕೆ 30 ಕೆಲಸಗಾರರಂತೆ, 15 ದಿನಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟು 300 ಕೆಲಸಗಾರರು ಈ ಕಾರ್ಯವನ್ನು ಸಾಕಾರಗೊಳಿಸಿದ್ದಾರೆ. ಮೂಲ ರಚನೆಯು ಸಿದ್ಧವಾದ ನಂತರ ಹೂ ಜೋಡಣಾ ಕಾರ್ಯವನ್ನು ದಿನಕ್ಕೆ 45 ಜನ ಪರಿಣಿತ ಕೆಲಸಗಾರರಂತೆ 5 ದಿವಸಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. 

ಅನುಭವ ಮಂಟಪದ ಅಧ್ಯಕ್ಷರನ್ನು ಪುಷ್ಪಮಾದರಿ ಕಲಾಕೃತಿಯ ನಾಲ್ಕೂ ಮೂಲೆಗಳಲ್ಲಿ ಇರಿಸಲಾಗಿದೆ. ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಶರಣರಾದ ಅಲ್ಲಮಪ್ರಭು, ಸಿದ್ಧರಾಮ ಮತ್ತು ಚೆನ್ನಬಸವಣ್ಣನವರ ಪ್ರತಿಮೆಗಳನ್ನು ಒಂದೊಂದು ಮೂಲೆಯಲ್ಲಿ ಪ್ರದರ್ಶನಕ್ಕಿಡಲಾಗುವುದು. ಇನ್ನೊಂದು ಮೂಲೆಯಲ್ಲಿ ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿಯ ಪ್ರತಿಮೆಯನ್ನು ಆಕರ್ಷಕ ಹೂಜೋಡಣೆಗಳ ನಡುವೆ ಪ್ರದರ್ಶಿಸಲಾಗಿದೆ. 

► ಐಕ್ಯ ಮಂಟಪದ ಪುಷ್ಪಮಾದರಿ: ಗಾಜಿನಮನೆಯ ಕೇಂದ್ರ ಭಾಗದಲ್ಲಿ ಪುಷ್ಪಗಳಿಂದ ಅರಳುವ ನೂತನ ಅನುಭವ ಮಂಟಪದ ಪುಷ್ಪಮಾದರಿಯ ಹಿಂಬದಿಯಲ್ಲಿ ಬಸವಣ್ಣನವರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ 5 ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. 2,200 ಚದರಡಿ ಪ್ರದೇಶದಲ್ಲಿ 5 ಕಲಾಕೃತಿಗಳು ವಿಶೇಷ ಹೂ-ಗಿಡ ಜೋಡಣೆಯ ನಡುವೆ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕೇಂದ್ರ ಭಾಗದಲ್ಲಿ, ಕೂಡಲ ಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪದ ಪುಷ್ಪ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ. 

ಐಕ್ಯ ಮಂಟಪದ ಮಾದರಿಯು 16 ಅಡಿ ಎತ್ತರವಿದೆ. ವಿವಿಧ ಬಣ್ಣದ ಗುಲಾಬಿ ಮತ್ತು ಸೇವಂತಿಗೆ ಹೂವುಗಳನ್ನು ಇದಕ್ಕಾಗಿ ಬಳಸಲಾಗಿದ್ದು, ಒಂದು ಬಾರಿಗೆ ಒಟ್ಟು 0.75 ಲಕ್ಷ ಗುಲಾಬಿ ಹಾಗೂ 1.0 ಲಕ್ಷ ಸೇವಂತಿಗೆ ಹೂವುಗಳಂತೆ ಎರಡು ಬಾರಿಗೆ ಒಟ್ಟಾರೆ 1.5 ಲಕ್ಷ ಗುಲಾಬಿ ಮತ್ತು 2.0 ಲಕ್ಷ ಸೇವಂತಿಗೆ ಹೂವುಗಳನ್ನು ಬಳಸಲಾಗುತ್ತಿದೆ. ಈ ಎರಡು ಹೂವುಗಳು ಸೇರಿ ಒಟ್ಟಾರೆ 3.5 ಲಕ್ಷ ಹೂವುಗಳನ್ನು ಈ ಪರಿಕಲ್ಪನೆಗೆ ಸ್ನೇಹಾ ಫ್ಲೋರಿಸ್ಟ್ ವತಿಯಿಂದ ಬಳಕೆ ಮಾಡಲಾಗಿದೆ. 

ಐಕ್ಯ ಮಂಟಪದ ನಾಲ್ಕು ಮೂಲೆಗಳಲ್ಲಿ ಬಸವಣ್ಣನ ಬದುಕಿನ ಪ್ರಮುಖ ಘಟ್ಟಗಳನ್ನು ಸೂಚಿಸುವ 3.5 ರಿಂದ 4 ಅಡಿ ಅಳತೆಯ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಥರ್ಮಕೋಲ್‌ನಿಂದ ತಯಾರಾದ ಕಿರು ಮಾದರಿಗಳನ್ನು ಬಳಕೆ ಮಾಡಲಾಗಿದೆ. ಇಂಗಳೇಶ್ವರದಲ್ಲಿರುವ ಬಸವಣ್ಣನ ತಾಯಿ ಮಾದಲಾಂಬಿಕೆಯ ತವರು ಮನೆ ಸ್ಮಾರಕದ ಕಿರು ಮಾದರಿಯನ್ನು, ಬಸವನಬಾಗೇ ವಾಡಿಯಲ್ಲಿರುವ ಬಸವಣ್ಣನ ಜನ್ಮಸ್ಥಳ ಸ್ಮಾರಕದ ಕಿರು ಮಾದರಿಯನ್ನು, ಬಸವಣ್ಣನ ಮೊದಲು ಅಧಿಕಾರ ನಿರ್ವಹಿಸಿದ ಮಂಗಳವಾಡೆಯನ್ನು ಸೂಚಿಸುವ ಐತಿಹಾಸಿಕ ಕೋಟೆಯ ಕಿರು ಮಾದರಿಯನ್ನು ಮತ್ತು ಬಸವಣ್ಣನ ಕಾರ್ಯಕ್ಷೇತ್ರವನ್ನು ಸೂಚಿಸುವ ಬಸವಕಲ್ಯಾಣದ ಪ್ರವೇಶದ್ವಾರದ ಮಾದರಿಯನ್ನು ನಿರ್ಮಿಸಲಾಗಿದೆ.

 

► ಇಷ್ಟಲಿಂಗ ಕಲಾಕೃತಿಯ ಅನಾವರಣ: ಗಾಜಿನಮನೆಯ ಕೇಂದ್ರಭಾಗದ ಎಡಬದಿಗೆ ಆಕರ್ಷಕ ವರ್ಟಿಕಲ್ ಗಾರ್ಡನ್ ರೂಪುಗೊಳ್ಳಲಿದ್ದು, ಅದರ ಮೇಲೆ ಬಸವಣ್ಣನವರ ಸೃಷ್ಟಿಯಾದ ಇಷ್ಟಲಿಂಗ ಪರಿಕಲ್ಪನೆಯ ಕಲಾಕೃತಿಯನ್ನು ಪ್ರದರ್ಶಿಸಲಾಗಿದೆ. 18 ಅಡಿ ಉದ್ದ, 3 ಅಡಿ ಎತ್ತರ ಹಾಗೂ 12 ಅಡಿ ಅಗಲವಿರುವ ವರ್ಟಿಕಲ್ ಗಾರ್ಡನ್ ಬೇಸ್‌ಗೆ 15ಕ್ಕೂ ಹೆಚ್ಚು ಬಗೆಯ 1.0 ಲಕ್ಷ ಗಿಡಗಳಿಂದ ಅರಳುವ ವರ್ಟಿಕಲ್ ಗಾರ್ಡನ್ ನಿರ್ಮಾಣವಾಗಲಿದ್ದು, ಅದರ ಮೇಲೆ ಕರಸ್ಥಲದಲ್ಲಿರುವ ಇಷ್ಟಲಿಂಗದ ಕಲಾಕೃತಿ ಇದೆ. ಈ ಉದ್ದೇಶಕ್ಕೆ ಆಕ್ಸಿಕಾರ್ಡಿಯಂ ಗ್ರೀನ್, ಹಳದಿ ಮತ್ತು ಬ್ರಾಂಜ್, ಫಿಲ್ಲೋಡೆಂಡ್ರಾನ್ ಗೋಲ್ಡ್, ಸಿಂಗೋನಿಯಂ ರೆಡ್, ವೇರಿಗೇಟೆಡ್, ಹಳದಿ ಮತ್ತು ಹಸಿರು, ಮನಿಪ್ಲಾಂಟ್, ಗ್ರೀನ್ ಮತ್ತು ವೇರಿಗೇಟೆಡ್, ಫೆಪರೋಮಿಯಾ, ಸೇವಂತಿಗೆ, ಆಂಥೋರಿಯಂ, ಪೆಂಟಾಸ್, ವಿಂಕಾ, ಇಕ್ಲೋರಾ ಹೀಗೆ ಹೂವು ಮತ್ತು ಎಲೆ ಜಾತಿಯ ಗಿಡಗಳನ್ನು ಬಳಸಲಾಗಿದೆ.

ಪ್ರದರ್ಶನದಲ್ಲಿ ರಾರಾಜಿಸುತ್ತಿರುವ ಬಸವಣ್ಣನ ಪ್ರತಿಮೆ

ಗಾಜಿನಮನೆಯ ಕೇಂದ್ರ ಭಾಗದಲ್ಲಿ ತಲೆ ಎತ್ತಿರುವ ಅನುಭವ ಮಂಟಪದ ಪುಷ್ಪ ಮಾದರಿಯ ಮುಂಬದಿಯಲ್ಲಿ 10 ಅಡಿ ಎತ್ತರದ ವಚನ ರಚನಾನಿರತ ಭಂಗಿಯಲ್ಲಿರುವ ಬಸವಣ್ಣನವರ ಪ್ರತಿಮೆಯು ಸರ್ವರನ್ನೂ ಆಕರ್ಷಿಸುತ್ತಿದೆ. 6 ಅಡಿ ಎತ್ತರದ ಪೀಠದ ಮೇಲೆ ಪ್ರತಿಮೆಯು ಅನಾವರಣಗೊಂಡಿದೆ. 

ನೀಡಿದ್ದಾರೆ.

60 ಪರಿಣಿತರಿಂದ ಕಾರ್ಯನಿರ್ವಹಣೆ

ಪ್ರದರ್ಶನದ ಅವಧಿಯಲ್ಲಿ 2ನೇ ಬಾರಿಯ ಹೂ ಜೋಡಣೆಗೆ 60 ಮಂದಿ ಪರಿಣಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಒಟ್ಟಾರೆ ಅನುಭವ 

ಮಂಟಪದ ಮೂಲ ರಚನೆ ಮತ್ತು ಹೂ ಜೋಡಣಾ ಕಾರ್ಯಕ್ಕೆ 685 ಮಾನವ ದಿನಗಳ ಸೇವೆಯನ್ನು ಬಳಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶರಣರ ಪ್ರತಿಮೆಗಳ ಪ್ರದರ್ಶನ

ಗಾಜಿನಮನೆಯ ಒಳಾಂಗಣದ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ(ಬಡಿಗೇರ ಬಸಪ್ಪ) ಮತ್ತು ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ಸೂಕ್ತ ಪೀಠದ ಮೇಲಿರಿಸಿ, ಪೀಠವನ್ನು ಹೂಗಳಿಂದ ಅಲಂಕರಿಸಿಸಲಾಗಿದೆ. ಬೆಂಗಳೂರಿನ ಬಸವ ಸಮಿತಿಯು 10 ಆಯ್ದ ಪ್ರತಿಮೆಗಳನ್ನು ಪ್ರದರ್ಶನಕ್ಕೆ ನೀಡಿ ಸಹಕರಿಸಿದ್ದು, ಇದೇ ರೀತಿ, ಕಲಾವಿದ ವೆಂಕಟಾಚಲಪತಿ ಅಕ್ಕಮಹಾದೇವಿಯ ಪ್ರತಿಮೆಯನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರಕಾಶ್ ಅವರಡ್ಡಿ

contributor

Similar News