×
Ad

ಒಂದೊಂದು ‘ಮದುವೆ ಮೀಲ್ಸ್’ನಲ್ಲೂ ತಿನ್ನೋರ ಹೆಸರು ಬರೆದಿದೆ..!

Update: 2025-11-22 10:31 IST

ಮದುವೆ ನಿಶ್ಚಿತಾರ್ಥ ನಡೆದ ಮೇಲೆ ಹುಡುಗಿಗೆ ಇನ್ನೊಬ್ಬನಲ್ಲಿ ಲವ್ ಆದರೆ ಹೇಗಿರುತ್ತದೆ? ಇಂಥ ಸಬ್ಜೆಕ್ಟ್‌ಗೆ ಕನ್ನಡದಲ್ಲಿ ‘ಮುಂಗಾರುಮಳೆ’ಯೇ ಒಂದು ಮೈಲಿಗಲ್ಲು. ಆದರೆ ಅಂಥದೊಂದು ಭಾವನಾತ್ಮಕ ಕಥೆಯಲ್ಲೂ ಯಾರೂ ಊಹಿಸಲಾಗದ ಒಂದು ತಿರುವು ಇಟ್ಟು ಅಚ್ಚರಿ ಮೂಡಿಸಿದ್ದಾರೆ ನವ ನಿರ್ದೇಶಕ ವಿನಾಯಕ.

ಆತನ ಹೆಸರು ಲಕ್ಕಿ. ಆದರೆ ಬಯಸಿದ ವೃತ್ತಿಯಲ್ಲಿ ಮಾತ್ರ ಲಕ್ಕೇ ಸಿಗದ ಯುವಕ. ಯಾಕೆಂದರೆ ಫೇಮಸ್ ಫೋಟೊಗ್ರಾಫರ್ ಆಗುವ ಕನಸು ಕನಸಾಗಿ ಮಾತ್ರ ಉಳಿದಿದೆ. ಇಂಥ ಸಂದರ್ಭದಲ್ಲಿ ಹಳ್ಳಿ ಕಡೆಯಿಂದ ಒಂದು ಪ್ರಿವೆಡ್ಡಿಂಗ್ ಫೋಟೊ ಶೂಟ್ ಆಫರ್ ಬರುತ್ತದೆ. ಒಳ್ಳೆಯ ಆಫರ್ ಎಂದು ಹೋದರೆ ಅಲ್ಲಿ ಅದೇ ಹುಡುಗಿ ಮದುವೆ ಆಫರ್ ಕೂಡ ನೀಡುತ್ತಾಳೆ. ಆದರೆ ನಾಯಕ ನಿರಾಕರಿಸುತ್ತಾನೆ. ಇದೇ ಸಂದರ್ಭದಲ್ಲಿ ಈತನ ಛಾಯಾಗ್ರಹಣದ ಎಲ್ಲ ಕಾರ್ಯಕ್ರಮಗಳಲ್ಲಿ ಮೇಕಪ್ ಮಾಡುವ ಹುಡುಗಿ ಕೂಡ ಮದುವೆಯಾಗುವಂತೆ ಒತ್ತಾಯಿಸುತ್ತಾಳೆ. ಇಬ್ಬರನ್ನೂ ನಿರಾಕರಿಸುವ ಹುಡುಗನ ಮುಂದಿನ ತೀರ್ಮಾನ ಏನು? ಈ ತೀರ್ಮಾನದ ಹಿಂದಿನ ಕಾರಣ ಏನು ಎನ್ನುವುದುನ್ನು ಕುತೂಹಲಕಾರಿಯಾಗಿ ತೆರೆದಿಡಲಾಗಿದೆ.

ಒಂದು ಸಣ್ಣ ಗ್ಯಾಪ್ ಬಳಿಕ ಬಂದಿರುವ ಲಿಖಿತ್ ಶೆಟ್ಟಿ ಲಕ್ಕಿಯಾಗಿ ಲಕ ಲಕ ಮಿಂಚಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಯುವಕನ ಬಾಳಲ್ಲಿ ಪ್ರೇಯಸಿಯ ಪ್ರೀತಿಗಿಂತ ಜೀವನ ಪ್ರೀತಿ, ಕೌಟುಂಬಿಕ ನೀತಿ ಎಷ್ಟು ಅನಿವಾರ್ಯ ಆಗುತ್ತದೆ ಎಂದು ತೋರಿಸಲಾಗಿದೆ. ಈ ಎಲ್ಲ ಖುಷಿ, ಕನಸು, ಹತಾಶೆಯನ್ನು ಲಿಖಿತ್ ತಮ್ಮ ಮುಖದಲ್ಲಿ ತೋರಿಸುವಲ್ಲಿ ಗೆದ್ದಿದ್ದಾರೆ.

ಈ ಚಿತ್ರದಲ್ಲಿ ಲಿಖಿತ್ ಜೊತೆ ಮೂರು ಮಂದಿ ಚೆಲುವೆಯರಿದ್ದಾರೆ.

ಒಂದು ನಿಶ್ಚಿತಾರ್ಥಗೊಂಡ ಹುಡುಗಿ, ಇನ್ನೊಂದು ಮೇಕಪ್ ಹುಡುಗಿ ಹಾಗೂ ಮೂರನೆಯದಾಗಿ ನಾಯಕನ ಮಾವನ ಮಗಳು. ಇವರಲ್ಲಿ ಮದುವೆ ನಿಶ್ಚಿತಗೊಂಡ ಹುಡುಗಿಯ ಪಾತ್ರವನ್ನು ಖುಷಿ ಅಭಿನಯಿಸಿದ್ದಾರೆ. ಖುಷಿ ನಟನೆಯಲ್ಲಿ ಈ ಹಿಂದಿನ ಗಡಿಗಳನ್ನು ಮೀರಿ ಭಾವ ಪ್ರದರ್ಶನ ಮಾಡಿದ್ದಾರೆ. ಇದೇನು ಖುಷಿ ಎಲ್ಲೆ ಮೀರಿದ್ದಾರಲ್ಲ ಎನ್ನುವ ಗೊಂದಲ ಮೂಡುವ ಹೊತ್ತಿಗೆ ಕಥೆಯಲ್ಲಿ ಅದಕ್ಕೊಂದು ಸ್ಪಷ್ಟ ಉತ್ತರವೂ ಸಿಗುತ್ತದೆ. ಲಕ್ಕಿ ಯಾವಾಗ ತನ್ನ ಪ್ರೀತಿಗೆ ಓಕೆ ಎನ್ನುವ ಹಾಲಕ್ಕಿಯಾಗುತ್ತಾನೆ ಎಂದು ಕಾಯುವ ಮೇಕ್‌ಅಪ್ ಕಲಾವಿದೆಯಾಗಿ ತೇಜಸ್ವಿನಿ ಶರ್ಮ ಕಾಣಿಸಿದ್ದಾರೆ.

ಲಕ್ಕಿಗೆ ಅದೃಷ್ಟ ಲಕ್ಷ್ಮಿ ಹರಸಲೆಂದು ಕಾಯುವ ಮಾವ ಪುಲಿಕೇಶಿಯಾಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ಮಾವನಿಗೆ ಕಾಡುವ ಪತ್ನಿಯಾಗಿ ಚಂದ್ರಕಲಾಮೋಹನ್ ನಟಿಸಿದ್ದಾರೆ. ಲಕ್ಕಿಯ ಛಾಯಾಗ್ರಹಣಕ್ಕೆ ಸಹಾಯಕನಾಗಿ ಮಿರಿಂಡ ಪಾತ್ರದ ಮೂಲಕ ವಿಜಯ್ ಚೆಂಡೂರ್ ನಗಿಸುತ್ತಾರೆ. ಖುಷಿಯ ಅಣ್ಣನಾಗಿ ಕಾಣಿಸಿರುವ ರಾಜೇಶ್ ನಟರಂಗ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸುಜಯ್ ಶಾಸ್ತ್ರಿ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ ಹೀಗೆ ಹೊಸಬರು ಹಳಬರೆನ್ನದೇ ಪ್ರತಿಯೊಬ್ಬ ಕಲಾವಿದರು ಕೂಡ ಹೊಸ ನಿರ್ದೇಶಕರ ಪಾತ್ರಗಳಿಗೆ ತೂಕ ನೀಡಿದ್ದಾರೆ.

ಗುರುಕಿರಣ್ ಸಂಗೀತದಲ್ಲಿ ಮೂಡಿರುವ ಹಾಡುಗಳಲ್ಲಿ ಮಾಧುರ್ಯವಿದೆ. ಕವಿರಾಜ್ ಜತೆಗಿನ ಕಾಂಬಿನೇಶನ್ ಇಲ್ಲಿಯೂ ಗಾನಪ್ರಿಯರ ಮನಗೆಲ್ಲುತ್ತದೆ. ಛಾಯಾಗ್ರಹಣಕ್ಕೆ ಪೂರಕವಾಗಿ

ಕವಿರಾಜ್ ಜತೆಗಿನ ಕಾಂಬಿನೇಶನ್ ಇಲ್ಲಿಯೂ ಗಾನಪ್ರಿಯರ ಮನಗೆಲ್ಲುತ್ತದೆ. ಛಾಯಾಗ್ರಹಣಕ್ಕೆ ಪೂರಕವಾಗಿ

ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಾಥ್ ನೀಡಿದ್ದು, ಪ್ರೇಮ ದೃಶ್ಯಗಳನ್ನು ಮನಮುಟ್ಟುವ ಮಟ್ಟಕ್ಕೆ ತಂದು ನಿಲ್ಲಿಸಿವೆ. ಸಂಭಾಷಣೆಕಾರ ಹರೀಶ್ ಗೌಡ ತಮ್ಮ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಮೂವರು ನಾಯಕಿಯರಿದ್ದರೂ, ಲವರ್ ಬಾಯ್ ಪಾತ್ರವಾಗಿದ್ದರೂ ಎಲ್ಲಿಯೂ ಕೌಟುಂಬಿಕ ವರ್ಗದ ಎಲ್ಲೆ ಮೀರಿಲ್ಲ ಎನ್ನುವುದು ಮೆಚ್ಚಬೇಕಾದ ಅಂಶ. ಕ್ಲೈಮಾಕ್ಸ್ ನ ನಾಟಕೀಯ ದೃಶ್ಯಗಳ ಹೊರತಾಗಿ ಇದು ಎಲ್ಲರಿಗೂ ಇಷ್ಟವಾಗಬಲ್ಲ ಚಿತ್ರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News