×
Ad

ರಾಯಚೂರು ಕೇಂದ್ರದ ಫೋಟೊ, ಪಪ್ಪಿ, ಹೆಬ್ಬುಲಿ ಕಟ್ ಹೇಳುತ್ತಿರುವುದೇನು?

Update: 2025-10-28 12:07 IST

ನಿಜಕ್ಕೂ ಫೋಟೊ, ಪಪ್ಪಿ, ಹೆಬ್ಬುಲಿ ಕಟ್ ಮೂಲಕ ಉತ್ಸವ್ ಗೊನಾವರ, ಆಯುಶ್ ಮಲ್ಲಿ, ಭೀಮರಾವ್ ಪೈದೊಡ್ಡಿ ಕಲ್ಯಾಣ ಕರ್ನಾಟಕವೇ ಉಸಿರಾಡುವ ಸಿನೆಮಾಗಳನ್ನು ಮಾಡಿದ್ದಾರೆ. ಆ ಮೂಲಕ ಕನ್ನಡ ಸಿನೆಮಾಕ್ಕೆ ಒಂದು ಭಿನ್ನವಾದ ನರೇಟಿವ್ ಕೊಟ್ಟಿದ್ದಾರೆ. ಈ ಯುವಕರು ಕಥೆ ಹೇಳಲು ದುರುಗ್ಯಾ, ಪರಶ್ಯಾ, ವಿನ್ಯಾರಂತಹ ಮಕ್ಕಳ ಪಾತ್ರಗಳನ್ನು ಸೃಷ್ಟಿಸಿ ಲೋಕದ ಅರಿವಿನ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತೀ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಈ ಸಿನೆಮಾಗಳನ್ನು ನೋಡುವ ಮೂಲಕ ಇಂತಹ ಸಿನೆಮಾ ಮಾಡುವ ಯುವ ಜನರನ್ನು ಪ್ರೇರೇಪಿಸಬೇಕಿದೆ. ಈಗಲೂ ಕಾಲ ಮಿಂಚಿಲ್ಲ, ಈ ಮೂರು ಸಿನೆಮಾಗಳನ್ನು ಜೋಡಿಸಿ ಸಿನೆಮಾ ಯಾನವನ್ನು, ಸಿನೆಮಾ ಉತ್ಸವಗಳನ್ನು ಕೈಗೊಳ್ಳಬೇಕಿದೆ.

ಕನ್ನಡ ಸಿನೆಮಾ ಅಂದರೆ ಬೆಂಗಳೂರು, ಬೆಂಗಳೂರೆಂದರೆ ಕನ್ನಡ ಸಿನೆಮಾ ಇದೊಂದು ಅಘೋಷಿತ ವರ್ತಮಾನ. 1934ರ ಕನ್ನಡದ ಮೊದಲ ಟಾಕಿ ಸಿನೆಮಾ ‘ಸತಿ ಸುಲೋಚನ’ವನ್ನು ಗುರುತಾಗಿಟ್ಟುಕೊಂಡರೆ ಕನ್ನಡ ಸಿನೆಮಾ ಇತಿಹಾಸ ಶತಮಾನದತ್ತ ಸಾಗುತ್ತಿದೆ. ಆದರೂ ಕನ್ನಡ ಸಿನೆಮಾದ ‘ಬೆಂಗಳೂರು ಕಣ್ಣೋಟ’ ಪೂರ್ಣ ಬದಲಾಗಿಲ್ಲ. ಬೆಂಗಳೂರು ಕೇಂದ್ರದ ಸಿನೆಮಾ ಎಂದರೆ, ಎಲ್ಲವನ್ನೂ ಬೆಂಗಳೂರು ಕಣ್ಣಿಂದ ನೋಡುವುದು. ಬೆಂಗಳೂರಿಗರು ಪರಿಭಾವಿಸಿದ ಕರ್ನಾಟಕವನ್ನು ತೋರಿಸುವುದು. ಬೆಂಗ್ಳೂರ್ ಕನ್ನಡವೇ ಕರ್ನಾಟಕದ ಕನ್ನಡ ಎಂದು ಬಿಂಬಿಸುವುದು. ಬೆಂಗಳೂರಿಗರ ಸಿನೆಮಾಗಳಲ್ಲಿ ಊಟಕ್ಕೆ ಉಪ್ಪಿನಕಾಯಿಯಂತೆ ಕರ್ನಾಟಕದ ಬೇರೆ ಬೇರೆ ಪ್ರದೇಶಗಳನ್ನು ತೋರಿಸುವುದು.

ಕಳೆದ ಒಂದು ದಶಕದಲ್ಲಿ ಪ್ರಭಾವಿ ಬೆಂಗಳೂರು ಕೇಂದ್ರ ಚೂರು ಅಲುಗಾಡುತ್ತಿದೆ. ದಕ್ಷಿಣ ಕನ್ನಡದ ಮಂಗಳೂರು ಕೇಂದ್ರ ಮುನ್ನೆಲೆಗೆ ಬರುತ್ತಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಅವರುಗಳ ಪ್ರಯೋಗಗಳನ್ನು ಗಮನಿಸಬಹುದು. ಈಚಿನ ಕಾಂತಾರ ಚಾಪ್ಟರ್ ಒನ್, ಸು-ಫ್ರಂ-ಸೋ ಸಿನೆಮಾಗಳು ತಮ್ಮ ಮಂಗಳೂರು ಕೇಂದ್ರದ ಗುರುತನ್ನು ಗಟ್ಟಿಯಾಗಿ ಛಾಪಿಸುತ್ತಿವೆ. ತಮ್ಮದೇ ಭಾಷೆ, ತಮ್ಮದೇ ನಟನಟಿಯರು, ತಮ್ಮದೇ ತಂತ್ರಜ್ಞರು, ತಮ್ಮದೇ ರೀತಿಯ ಸಿನೆಮಾ ಎನ್ನುವುದು ಇದರ ರೀತಿ. ಈಚೆಗೆ ಅಷ್ಟು ಗಮನ ಸೆಳೆಯದ ಉತ್ತರ ಕರ್ನಾಟಕದ ಬೆಳಗಾಂ ಕೇಂದ್ರದ ಜಮಖಂಡಿ ಭಾಗದಿಂದ ಮೂವರು ಮಹಿಳೆಯರು ಸಿನೆಮಾ ಪ್ರಯೋಗ ಮಾಡಿದ್ದಾರೆ. ಸುಪ್ರಿಯ ನಿಪ್ಪಾಣಿ ನಿರ್ದೇಶಿಸಿರುವ, ನೀಲಗಂಗಾ ಚರಂತಿಮಠ ನಿರ್ಮಿಸಿದ, ಲೇಖಕಿ ಶಾರದ ಮುಳ್ಳೂರು ಪ್ರಧಾನ ಪಾತ್ರ ವಹಿಸಿದ, ರಂಗಕರ್ಮಿ ಮಹಾದೇವ ಹಡಪದ ನಟಿಸಿದ ‘ಚುರುಮುರಿಯಾ’ (2025) ಅಂತಹ ಸಿನೆಮಾ. ಕೊಪ್ಪಳ ಭಾಗದ ಕಥೆ ಹೇಳುವ ಮೂಲತಃ ಯರೆಹಂಚಿನಾಳದ ಜಯಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ ಯರೆಹಂಚಿನಾಳ’ ಅಂತಹ ಮತ್ತೊಂದು ಪ್ರಯೋಗ.

ಈ ನಡುವೆ ಹೈದರಾಬಾದ್ ಕರ್ನಾಟಕದ (ಕಲ್ಯಾಣ ಕರ್ನಾಟಕ) ರಾಯಚೂರು ಕೇಂದ್ರದಿಂದ ಗಮನಾರ್ಹ ಸಿನೆಮಾಗಳು ಬಂದಿವೆ. ಉತ್ಸವ್ ಗೊನಾವರ ನಿರ್ದೇಶನದ ‘ಫೋಟೊ’ (2024), ಆಯುಷ್ ಮಲ್ಲಿ ನಿರ್ದೇಶಿಸಿದ ‘ಪಪ್ಪಿ’ (2025) ಮತ್ತು ಭೀಮರಾವ ಪೈದೊಡ್ಡಿ ನಿರ್ದೇಶನದ ‘ಹೆಬ್ಬುಲಿ ಕಟ್’(2025) ಈ ಮೂರು ಸಿನೆಮಾಗಳು ರಾಯಚೂರು ಕೇಂದ್ರದ ಸಿನೆಮಾಗಳನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ಕನ್ನಡ ಸಿನೆಮಾದಲ್ಲಿ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎರಡನ್ನೂ ಕಲಸಿ ಒಟ್ಟಾರೆ ‘ಉತ್ತರ ಕರ್ನಾಟಕದವರು’ ಎಂದು ನೋಡುತ್ತಾರೆ. ಹಾಗೆ ನೋಡಿದರೆ ‘ಕಿತ್ತೂರು ಕರ್ನಾಟಕ’ ಎನ್ನುವ ‘ಮುಂಬೈ ಕರ್ನಾಟಕ’ ಮತ್ತು ‘ಕಲ್ಯಾಣ ಕರ್ನಾಟಕ’ ಎಂದು ಗುರುತಿಸುವ ‘ಹೈದರಾಬಾದ್ ಕರ್ನಾಟಕ’ಕ್ಕೂ ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಾಕಷ್ಟು ಫರಕಿದೆ. ರಾಯಚೂರು ಕೇಂದ್ರದ ಮೇಲಿನ ಮೂರೂ ಸಿನೆಮಾಗಳನ್ನು ನೋಡಿದರೆ ಈ ವ್ಯತ್ಯಾಸ ಕಣ್ಣಿಗೆ ರಾಚುವಂತಿದೆ.

ಹೈದರಾಬಾದ್ ಕರ್ನಾಟಕದ ಕಥೆಗಳು ಸಿನೆಮಾ ಆಗುತ್ತಿರುವುದು ಇದೇ ಮೊದಲೇನಲ್ಲ. ಕೊಟ್ಟೂರಿನ ಲೇಖಕ ಕುಂ.ವೀರಭದ್ರಪ್ಪ ಅವರ ಕಥೆಗಳು ಬಹಳ ಹಿಂದೆಯೇ ಸಿನೆಮಾಗಳಾಗಿವೆ. ‘ಮನಮೆಚ್ಚಿದ ಹುಡುಗಿ’(1987) ‘ಕೊಟ್ರೇಶಿ ಕನಸು’(1994) ‘ದೊರೆ’(1995) ‘ಕೂರ್ಮಾವತಾರ’(2011) ಈಚಿನ ‘ಕುಬುಸ’(2024) ಸಿನೆಮಾಗಳನ್ನು ಹೆಸರಿಸಬಹುದು. ಕಥೆಗಾರ ಅಮರೇಶ ನುಗಡೋಣಿ ಅವರ ಕಥೆ ಆಧಾರಿತ ‘ಕನಸೆಂಬೋ ಕುದುರೆಯೇರಿ’ (2010), ‘ನೀರು ತಂದವರು’ (2018) ಸಿನೆಮಾಗಳೂ ಹೈದರಾಬಾದ್ ಕರ್ನಾಟಕದ ಕಥೆ ಹೇಳುತ್ತಿವೆ. ಇವುಗಳಲ್ಲಿ ‘ಕುಬುಸ’ ಸಿನೆಮಾವನ್ನು ಹೊರತುಪಡಿಸಿದರೆ ಉಳಿದವು ಬೆಂಗಳೂರು ಕಣ್ಣೋಟದಲ್ಲಿ ರೂಪು ತಳೆದವು. ಆದರೆ ಫೋಟೊ, ಪಪ್ಪಿ ಮತ್ತು ಹೆಬ್ಬುಲಿ ಕಟ್ ಈ ನೆಲದ ಕಥೆಗಳನ್ನು ಈ ನೆಲದ ಕಣ್ಣೋಟದಲ್ಲಿಯೇ ಹೇಳಿದ ಸಿನೆಮಾಗಳು.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನವಾರದ ಉತ್ಸವ್, ಮೂಲತಃ ಲಿಂಗಸೂರು ತಾಲೂಕಿನ ಪೈದೊಡ್ಡಿ ಗ್ರಾಮದ, ನಂತರ ಮಾನವಿ ತಾಲೂಕಿನ ಬಾಗಲವಾಡದಲ್ಲಿ ನೆಲೆಸಿ ಬಾಲ್ಯ ಕಳೆದ ಭೀಮರಾವ್, ಸಿಂಧನೂರು ತಾಲೂಕಿನ ದಡೇಸೂಗೂರು ಗ್ರಾಮದ ಮಲ್ಲಿಕಾರ್ಜುನ (ಆಯುಷ್ ಮಲ್ಲಿ) ಈ ಮೂವರು ರಾಯಚೂರು ಜಿಲ್ಲೆಯ ಪ್ರತಿಭಾವಂತ ಯುವಕರು. ಈ ಮೂವರು ನಿರ್ದೇಶಕರ ಸಿನಿ ಪಯಣದ ಬಗ್ಗೆ ಮಾತನಾಡಿಸಿದಾಗ ಇವರು ಯಾಕೆ ತಮ್ಮದೇ ಊರಿನ ಪಾತ್ರಗಳ ಮೂಲಕ ತಮ್ಮದೇ ನೆಲದ ಕಥೆ ಹೇಳಿದರು ಎನ್ನುವುದು ಮನವರಿಕೆಯಾಯಿತು. ಆರಂಭಕ್ಕೆ ಒಬ್ಬರಿಗೊಬ್ಬರು ಅಷ್ಟಾಗಿ ಪರಿಚಯವೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಮಾಡಿದ ಈ ಸಿನೆಮಾಗಳು ತಮಗೇ ಗೊತ್ತಿಲ್ಲದಂತೆ ರಾಯಚೂರು ಕೇಂದ್ರದ ಸಿನೆಮಾಗಳನ್ನು ಉದ್ಘಾಟಿಸಿವೆ. ಈ ನಿಟ್ಟಿನಲ್ಲಿ ಈ ಮೂರು ಸಿನೆಮಾಗಳು ಕನ್ನಡ ಸಿನೆಮಾ ಚರಿತ್ರೆಯ ಬಹುಮುಖ್ಯ ಪಲ್ಲಟವನ್ನು ದಾಖಲಿಸುತ್ತಿವೆ.

ಕೊರೋನ ಸಂದರ್ಭದಲ್ಲಿ ಕೇಂದ್ರ ಸರಕಾರ ದಿಢೀರ್ ಘೋಷಿಸಿದ ಲಾಕ್‌ಡೌನ್‌ನಿಂದ ದೇಶದಾದ್ಯಂತ ಲಕ್ಷಾಂತರ ದುಡಿಯುವ ಜನರು ತಮ್ಮ ತಮ್ಮ ಊರುಗಳಿಗೆ ನಡೆದುಬಂದರು. ಹೀಗೆ ಲಾಕ್‌ಡೌನ್‌ನಿಂದ ನಡೆದು ಅಸುನೀಗಿದ ಕಲ್ಯಾಣ ಕರ್ನಾಟಕದ ಹೆಣ್ಣುಮಗಳ ಸಾವು ಕಾಡಿದ ಪರಿಣಾಮ ಉತ್ಸವ್ ‘ಫೋಟೊ’ ಸಿನೆಮಾ ನಿರ್ದೇಶಿಸಿದರು. ವಿಧಾನಸೌಧದ ಮುಂದೆ ಫೋಟೊ ತೆಗೆಸಿಕೊಳ್ಳುವ ಕನಸು ಕಾಣುವ ದುರುಗ್ಯಾ ಶಾಲೆಗೆ ರಜೆ ಬಿಟ್ಟಾಗ ಬೆಂಗಳೂರಿಗೆ ದುಡಿಯಲು ವಲಸೆ ಹೋದ ತಂದೆಯ ಬಳಿಗೆ ಬರುತ್ತಾನೆ. ಈ ಫೋಟೊ ಕನಸು ಈಡೇರುವ ಮುನ್ನ ಕೊರೋನ ಕಾರಣ ಲಾಕ್‌ಡೌನ್ ಘೋಷಣೆಯಾಗಿ ತಂದೆ, ಮಗ ತಮ್ಮೂರಿಗೆ ಮರಳುತ್ತಾರೆ. ಹೀಗೆ ದಾರಿಯಲ್ಲಿ ಬರಬರುತ್ತಾ ದುರುಗ್ಯಾ ಸಾವನ್ನಪ್ಪುವ ದಾರುಣತೆಯನ್ನು ಚಿತ್ರ ಮನಮುಟ್ಟುವಂತೆ ಕಟ್ಟಿಕೊಟ್ಟಿದೆ. ಸಿಂಧನೂರು ಭಾಗದ ಭಾಷೆ, ನುಡಿಗಟ್ಟು, ಬದುಕಿನ ಉಸಿರನ್ನು ಹಿಡಿಯಲಾಗಿದೆ. ಇಲ್ಲಿ ಬಿಸಿಲು, ಎರೆಹೊಲದ ಬಟ್ಟಂಬಯಲು, ಸುಯ್ಯನೆ ಬೀಸುವ ಗಾಳಿ ಎಲ್ಲವೂ ಪಾತ್ರಗಳಾಗಿವೆ.

ಇದೇ ಕೊರೋನ ಲಾಕ್‌ಡೌನ್‌ನ್ನು ವಸ್ತುವಾಗಿಸಿಕೊಂಡರೂ, ಸಿಂಧನೂರು ಭಾಗದ ಜನಬದುಕಿನ ವಲಸೆಯನ್ನು ಕೇಂದ್ರವಾಗಿಟ್ಟುಕೊಂಡ ‘ಪಪ್ಪಿ’ ಸಿನೆಮಾ ಮತ್ತೊಂದು ಭಿನ್ನ ನಿರೂಪಣೆ. ಸಿಂಧನೂರು ತಾಲೂಕಿನ ದಡೇಸೂಗೂರಿನ ದುರುಗಪ್ಪ-ರೇಣುಕಾ ದಂಪತಿ ಪುತ್ರ ಪರಶುರಾಮ (ಪರಶ್ಯಾ) ನೊಟ್ಟಿಗೆ ಬೆಂಗಳೂರಿಗೆ ದುಡಿಯಲು ಬರುತ್ತಾರೆ. ಕಳೆದುಹೋದ ನಾಯಿ ಹುಡುಕಿಕೊಟ್ಟವರಿಗೆ ಹತ್ತು ಸಾವಿರ ಎನ್ನುವ ಪೋಸ್ಟರ್ ಪರಶ್ಯಾ ಮತ್ತವನ ಗೆಳೆಯ ಆದಿ ನಾಯಿಯನ್ನು ಹುಡುಕುವಂತೆ ಮಾಡುತ್ತದೆ. ಸಿಕ್ಕ ನಾಯಿ ಪರಶ್ಯಾನ ಜತೆ ಉಳಿದು ಬಾಂಧವ್ಯ ಬೆಳೆಯುತ್ತದೆ. ನಾಯಿಯ ಯಜಮಾನ ಕೊರೋನ ಲಾಕ್‌ಡೌನ್ ಕಾರಣಕ್ಕೆ ಬರುವುದು ತಡವಾಗುತ್ತದೆ. ಇತ್ತ ಪರಶ್ಯಾನ ತಂದೆ ತಾಯಿಯೂ ಲಾಕ್‌ಡೌನ್‌ನಿಂದಾಗಿ ತನ್ನೂರಿನ ಜನರೊಟ್ಟಿಗೆ ಊರಿಗೆ ಮರಳುತ್ತಾರೆ. ಈ ಬಗೆಯ ಬಿಕ್ಕಟ್ಟನ್ನು ನಿರ್ದೇಶಕರು ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಈ ಮುಂಚೆ ಹೀರೋಗಳಿಗೆ ಕಥೆ ಹೇಳಲು ಹೋದಾಗ ಅವರದೇ ಕಥೆಯನ್ನು ಹೇಳಿ ಬದಲಾಯಿಸಿದ ಕಾರಣ ಕಥೆಯನ್ನೇ ಹೀರೋ ಮಾಡಬೇಕೆಂಬ ಹಟದಲ್ಲಿ ‘ಫೋಟೊ’ ಸಿನೆಮಾದ ಪ್ರಭಾವದಲ್ಲಿ ಬೇರೆಯದೇ ‘ಪಪ್ಪಿ’ ಕಥೆ ಹೇಳಿದರು. ಮುಖ್ಯವಾಗಿ ಬೆಂಗಳೂರು ನಗರದಲ್ಲಿಯೇ ಜೋಪಡಿಯಲ್ಲಿ ‘ಕಲ್ಯಾಣ ಕರ್ನಾಟಕ’ ನೆಲೆಗೊಂಡದ್ದನ್ನು ರೂಪಕವಾಗಿಸಿದ್ದಾರೆ. ನಗರದ ಬದುಕನ್ನು ‘ಪಪ್ಪಿ’ ಎಂಬ ನಾಯಿಯ ಮೂಲಕ ಕಟ್ಟಿಕೊಟ್ಟಿರುವುದು ವಿಶಿಷ್ಟವಾಗಿದೆ.

ಈಗಲೂ ಕಲ್ಯಾಣ ಕರ್ನಾಟಕದ ಗ್ರಾಮಗಳಲ್ಲಿ ಮೇಲ್ಜಾತಿಗಳ ಜಮೀನ್ದಾರಿಕೆಯ ದಬ್ಬಾಳಿಕೆ, ಅಸ್ಪಶ್ಯತೆ ಜೀವಂತವಾಗಿರುವುದನ್ನು ‘ಹೆಬ್ಬುಲಿ ಕಟ್’ ಚಿತ್ರ ಹೇಳುತ್ತಿದೆ. ಚಮ್ಮಾರನ ಮಗ ವಿನ್ಯಾನಿಗೆ ತನ್ನ ತರಗತಿಯ ಗೌಡರ ಮಗಳ ಬಗ್ಗೆ ಆಕರ್ಷಣೆ. ಅವಳ ಪುಸ್ತಕದಲ್ಲಿದ್ದ ಹೆಬ್ಬುಲಿ ಕಟ್ ಸಿನೆಮಾದ ಪೋಸ್ಟರಿನಿಂದಾಗಿ, ‘ಹೆಬ್ಬುಲಿ ಕಟ್’ ಮಾಡಿಸಿ ಅವಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಚಿಂದಿ ಆಯ್ದು ಐದುನೂರು ರೂ.ಗಳನ್ನು ಕಲೆಹಾಕುತ್ತಾನೆ. ತನ್ನೂರಿನ ಐಶಾರಾಮಿ ಮಾಡ್ರನ್ ಕಟಿಂಗ್ ಶಾಪಿನಲ್ಲಿ ಇನ್ನೇನು ಹೆಬ್ಬುಲಿ ಕಟ್ ಮಾಡಿಸಬೇಕು, ಅಸ್ಪಶ್ಯರಿಗೆ ಕಟಿಂಗ್ ಮಾಡುವುದಿಲ್ಲವೆಂಬ ನಿಷೇಧದಿಂದ ಗೌಡನ ಮಗನಿಂದ ಒದೆ ತಿಂದು ಊರ ಮುಂದೆ ಅಪರಾಧಿಯಂತೆ ಅವಮಾನಕ್ಕೀಡಾಗುತ್ತಾನೆ. ಜಾತೀಯತೆ, ಅಸ್ಪಶ್ಯತೆಯ ಆಚರಣೆ, ಬಾಲ್ಯದಲ್ಲಿ ಜಾತ್ಯತೀತವಾಗಿ ಚಿಗುರೊಡೆವ ಕನಸು, ಗ್ರಾಮೀಣ ಭಾಗದಲ್ಲಿನ ಬದುಕಿನ ವೈರುಧ್ಯ ಎಲ್ಲವನ್ನೂ ಸಿನೆಮಾ ಸಮರ್ಥವಾಗಿ ಕಟ್ಟಿಕೊಟ್ಟಿದೆ.

‘ಫೋಟೊ’ ಮತ್ತು ‘ಪಪ್ಪಿ’ ಎರಡೂ ಸಿನೆಮಾಗಳು ಬೆಂಗಳೂರು ಮತ್ತು ತಮ್ಮೂರಿನ ಪಯಣವನ್ನು ಕೇಂದ್ರವಾಗಿಸಿಕೊಂಡಿವೆ. ಎರಡೂ ಈ ಭಾಗದ ಜನರ ಕಡುಬಡತನ ದಟ್ಟ ದಾರಿದ್ರ್ಯ, ಹಸಿವು ಮತ್ತು ಇದಕ್ಕಾಗಿ ಕೈಗೊಳ್ಳುವ ವಲಸೆಯನ್ನು ತೋರಿಸುತ್ತಿವೆ. ಇದೇ ಹೊತ್ತಿಗೆ ಕಡು ಬಡತನದಲ್ಲಿಯೂ ಈ ಭಾಗದ ಜನರ ಸೌಹಾರ್ದದ ಬದುಕು, ಬದುಕಿನ ಜಿಗುಟುತನ, ಜೀವನ ಪ್ರೀತಿ ಎಲ್ಲವನ್ನೂ ಕಾಣಿಸಲು ಪ್ರಯತ್ನಿಸಿವೆ. ‘ಹೆಬ್ಬುಲಿಕಟ್’ ಈ ಭಾಗದಲ್ಲಿನ ಅಸ್ಪಶ್ಯತೆಯ ಅಮಾನವೀಯತೆಯ ಕ್ರೌರ್ಯವನ್ನು ತಣ್ಣಗೆ ಹೇಳಿದೆ. ಈ ಮೂರು ಸಿನೆಮಾಗಳ ನಿರ್ದೇಶಕರು ರಾಯಚೂರು ಜಿಲ್ಲೆಯವರೇ ಆಗಿರುವುದರಿಂದ ತಮ್ಮದೇ ನುಡಿಗಟ್ಟಿನಲ್ಲಿ ಕಥೆ ಹೇಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಇಂತಹದ್ದೇ ಮತ್ತಷ್ಟು ಕೆಲವು ಪ್ರಯೋಗಗಳನ್ನು ನೋಡಬಹುದು. ಹೂವಿನ ಹಡಗಲಿಯ ಅಡ್ಡ ರಮೇಶ್ (ರಘುರಾಮ ಚರಣ್) ನಿರ್ದೇಶಿಸಿದ ಕುಂ.ವಿ. ಅವರ ಕಥೆ ಆಧರಿಸಿದ ‘ಕುಬುಸ’ ಸಿನೆಮಾ ಹೊಸಪೇಟೆ ಮತ್ತು ಕೊಟ್ಟೂರು ಭಾಗದ ಕಥೆಯನ್ನು ಇಲ್ಲಿನ ಕಲಾವಿದರ ಮೂಲಕವೇ ಹೇಳಲು ಪ್ರಯತ್ನಿಸಿದೆ. ಹಾವೇರಿ ಜಿಲ್ಲೆ ಹಾನಗಲ್ಲಿನ ಯುವಕ ಪುನೀತ್ ಸಾಕ್ಯ ಶಿಶುನಾಳ ಶರೀಫ್ ಅವರ ಪದದ ಸಾಲಿನ ‘ಆಡು ಆನೆಯ ನುಂಗಿ’ ಕಿರುಚಿತ್ರದ ಮೂಲಕ ಕಲ್ಯಾಣ ಕರ್ನಾಟಕದ ವಲಸೆಯನ್ನು ರೂಪಕಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.

ಈ ಮೂವರೂ ನಿರ್ದೇಶಕರೂ ತಾವು, ತಮ್ಮ ಗೆಳೆಯರು, ಆಪ್ತರು ಸೇರಿಯೇ ಹಣ ಕೂಡಿಸಿ ಕಡಿಮೆ ಬಜೆಟ್‌ನಲ್ಲಿ ಸಿನೆಮಾ ನಿರ್ಮಿಸಿದ್ದಾರೆ. ಇದು ಇಲ್ಲಿನ ಬಡತನಕ್ಕೂ ಈ ಕಡಿಮೆ ಬಜೆಟ್‌ನ ಸಿನೆಮಾಗಳಿಗೂ ಹೊಂದಿಕೆಯಾಗುವಂತಿದೆ. ಉತ್ಸವ್ ಗೊನಾವರ್ ಗೆಳೆಯರೊಟ್ಟಿಗೆ ‘ಮಸಾರಿ ಟಾಕೀಸ್’ ಎನ್ನುವ ನಿರ್ಮಾಣದ ಪ್ರಯತ್ನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಮಂಗಳೂರು ಕೇಂದ್ರದ ಪ್ರಯೋಗಗಳು ಕಾಂತಾರ ಚಾಪ್ಟರ್ ಒನ್‌ದಂತಹ ಅದ್ದೂರಿ ಚಿತ್ರ ಮಾಡಿಯೂ ಗೆಲ್ಲುತ್ತಾರೆ, ಸು-ಫ್ರಂ-ಸೋದಂತಹ ಕಡಿಮೆ ಬಜೆಟ್‌ನ ಆದರೆ ಅದ್ದೂರಿ ಪ್ರಚಾರದ ಮೂಲಕವೂ ಗೆಲ್ಲುತ್ತಾರೆ. ಅಂದರೆ ಇವರು ಯಾರ ಬಗ್ಗೆ ಸಿನೆಮಾ ಮಾಡುತ್ತಿದ್ದಾರೋ ಆ ಜನರು ಮಲ್ಟಿಪ್ಲೆಕ್ಸಲ್ಲಿ ಸಿನೆಮಾ ನೋಡಿಸಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಾಯಚೂರು ಕೇಂದ್ರದ ಈ ಸಿನೆಮಾಗಳು ಯಾರ ಬಗ್ಗೆ ಸಿನೆಮಾ ಮಾಡಿದ್ದಾರೋ ಆ ಜನರು ಮಲ್ಟಿಪ್ಲೆಕ್ಸಲ್ಲಿ ಸಿನೆಮಾ ನೋಡಿಸಿ ಗೆಲ್ಲಿಸುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿಲ್ಲ, ತಮ್ಮದೆಂದು ಪ್ರಚಾರ ಮಾಡುವ ಅರಿವೂ ಇಲ್ಲ.

ನಿಜಕ್ಕೂ ಫೋಟೊ, ಪಪ್ಪಿ, ಹೆಬ್ಬುಲಿ ಕಟ್ ಮೂಲಕ ಉತ್ಸವ್ ಗೊನಾವರ, ಆಯುಶ್ ಮಲ್ಲಿ, ಭೀಮರಾವ್ ಪೈದೊಡ್ಡಿ ಕಲ್ಯಾಣ ಕರ್ನಾಟಕವೇ ಉಸಿರಾಡುವ ಸಿನೆಮಾಗಳನ್ನು ಮಾಡಿದ್ದಾರೆ. ಆ ಮೂಲಕ ಕನ್ನಡ ಸಿನೆಮಾಕ್ಕೆ ಒಂದು ಭಿನ್ನವಾದ ನರೇಟಿವ್ ಕೊಟ್ಟಿದ್ದಾರೆ. ಈ ಯುವಕರು ಕಥೆ ಹೇಳಲು ದುರುಗ್ಯಾ, ಪರಶ್ಯಾ, ವಿನ್ಯಾರಂತಹ ಮಕ್ಕಳ ಪಾತ್ರಗಳನ್ನು ಸೃಷ್ಟಿಸಿ ಲೋಕದ ಅರಿವಿನ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತೀ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಈ ಸಿನೆಮಾಗಳನ್ನು ನೋಡುವ ಮೂಲಕ ಇಂತಹ ಸಿನೆಮಾ ಮಾಡುವ ಯುವ ಜನರನ್ನು ಪ್ರೇರೇಪಿಸಬೇಕಿದೆ. ಈಗಲೂ ಕಾಲ ಮಿಂಚಿಲ್ಲ, ಈ ಮೂರು ಸಿನೆಮಾಗಳನ್ನು ಜೋಡಿಸಿ ಸಿನೆಮಾ ಯಾನವನ್ನು, ಸಿನೆಮಾ ಉತ್ಸವಗಳನ್ನು ಕೈಗೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News