×
Ad

‘ಸಂಚಾರ್ ಸಾಥಿ’ ಕುರಿತ ಪ್ರಶ್ನೆಗಳಿಗೆ ಉತ್ತರ ಎಲ್ಲಿದೆ?

Update: 2025-12-04 11:33 IST

ಯಾವ ಫೋನ್ ಅನ್ನು ಬಳಸಿಕೊಂಡು ವಾಟ್ಸ್ ಆ್ಯಪ್ ಮೂಲಕ ನಕಲಿ ಸುದ್ದಿ ಮತ್ತು ನಕಲಿ ಇತಿಹಾಸ ಹರಡಲಾಗುತ್ತಿದೆಯೋ, ಯಾವುದನ್ನು ಜನರಲ್ಲಿ ದ್ವೇಷ ತುಂಬುವುದಕ್ಕೆ ಬಳಸಲಾಯಿತೋ ಅದೇ ಫೋನ್‌ನಲ್ಲಿ ಸರಕಾರ ಈಗ ತನ್ನದೇ ಅಪ್ಲಿಕೇಷನ್ ಇನ್‌ಸ್ಟಾಲೇಷನ್ ಮಾಡಬೇಕೆಂದು ಹೇಳುತ್ತಿದೆ. ಆ ಮೂಲಕ ಸರಕಾರ ಜನರನ್ನು ನಿಯಂತ್ರಿಸಲು ಬಯಸುತ್ತಿದೆ.

2026ರ ಮಾರ್ಚ್ ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಕು ಎಂದು ಮೋದಿ ಸರಕಾರ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಸೂಚನೆ ನೀಡಿದೆ. ಆ ಅಪ್ಲಿಕೇಷನ್ ಅಳವಡಿಸದೆ ಯಾವುದೇ ಫೋನ್ ಅನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ.

ಈಗಾಗಲೇ ತಯಾರಿಸಲಾದ ಫೋನ್‌ಗಳಿಗೂ ಈ ಅಪ್ಲಿಕೇಶನ್ ಅಗತ್ಯವಾಗಿರುತ್ತದೆ. ಫೋನ್ ವಂಚನೆ ತಡೆಗಟ್ಟಲು ಇದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ.

ಇದರಲ್ಲಿ ಪ್ರತಿಯೊಂದು ಫೋನ್ ಅನ್ನೂ ಗುರುತಿಸಲಾಗುತ್ತದೆ. ನೋ ಯುವರ್ ಮೊಬೈಲ್ ಆಯ್ಕೆ ಇದ್ದು, ಈ ಸೇವೆಯನ್ನು ಎಸ್‌ಎಂಎಸ್ ಮೂಲಕ ಒದಗಿಸಲಾಗುತ್ತದೆ. ವಂಚನೆಯ ಕರೆಗಳನ್ನು ವರದಿ ಮಾಡಲು ಮತ್ತು ಬ್ಲಾಕ್ ಮಾಡಲು ಅವಕಾಶವಿರುತ್ತದೆ.

ಸಂಚಾರ್ ಸಾಥಿ ಅಪ್ಲಿಕೇಶನ್ ಫೋನ್ ಅನ್ನು ಟ್ರ್ಯಾಕ್ ಮಾಡುವುದರಿಂದ, ಫೋನ್ ಕಳೆದುಹೋದರೆ ಅಥವಾ ಕದ್ದಿದ್ದರೆ ಅದನ್ನು ಪತ್ತೆಹಚ್ಚಲು ನೆರವಾಗುತ್ತದೆ.

ಇದರರ್ಥ, ನೀವು ಎಲ್ಲಿಗೆ ಹೋಗುತ್ತಿದ್ದೀರಿ ಮತ್ತು ನೀವು ಯಾರನ್ನು ಭೇಟಿಯಾಗುತ್ತಿದ್ದೀರಿ ಎಂಬೆಲ್ಲ ಪ್ರತೀ ಕ್ಷಣದ ಮಾಹಿತಿಯನ್ನೂ ಅದು ಸಂಗ್ರಹಿಸುತ್ತದೆ.

ಅದನ್ನು ಏಕೆ ಕಡ್ಡಾಯಗೊಳಿಸಲಾಗುತ್ತಿದೆ? ಮತ್ತು ಆ ಆ್ಯಪ್ ಅನ್ನು ಏಕೆ ಮೊಬೈಲ್‌ನಿಂದ ಅಳಿಸಲಾಗುವುದಿಲ್ಲ?

ಸರಕಾರಿ ಮೊಬೈಲ್ ಆ್ಯಪ್ ಪ್ರತೀ 5 ನಿಮಿಷಗಳಿಗೊಮ್ಮೆ ನಾಗರಿಕರ ಫೋನ್ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸುವ ದಿನ ದೂರವಿಲ್ಲ ಎಂದು ಭಾವಿಸಬೇಕೇ? ಸಂಚಾರ್ ಸಾಥಿ ಭಾರತದ ಪೆಗಾಸಸ್ ಆಗಿರಬಹುದೇ, ಸೈಬರ್ ಭದ್ರತೆಯ ಹೆಸರಿನಲ್ಲಿ ಫೋನ್‌ಗಳಿಗೆ ಬಲವಂತವಾಗಿ ಅಳವಡಿಸಲಾಗುತ್ತಿದೆಯೇ?

ಸರಕಾರಿ ಆದೇಶ, ಅದನ್ನು ಕಡ್ಡಾಯ ಎಂದು ಹೇಳುತ್ತದೆ. ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ ಮತ್ತು ಅದನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಆದರೆ, ಈ ವಿಷಯ ವಿವಾದವಾಗಿ ಬದಲಾದ ಹಿನ್ನೆಲೆಯಲ್ಲಿ ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಮಹತ್ವದ ಮಾಹಿತಿ ನೀಡಿದ್ದಾರೆ.

ಬಳಕೆದಾರರು ಸಂಚಾರ್ ಸಾಥಿ ಆ್ಯಪ್ ನಿಮ್ಮ ಫೋನ್‌ನಲ್ಲಿ ಇಟ್ಟುಕೊಳ್ಳಲು ಬಯಸದಿದ್ದರೆ, ನೀವು ಅದನ್ನು ಡಿಲೀಟ್ ಮಾಡಬಹುದು, ಇದು ಆಪ್ಶನಲ್ ಎಂದು ಹೇಳಿದ್ದಾರೆ.

ಸರಕಾರದ ಆದೇಶ ಮಾತ್ರ ಇದು ಆಪ್ಶನಲ್ ಎಂದು ಹೇಳುವುದಿಲ್ಲ. ಅಂತಹ ಕಠಿಣ ಆದೇಶ ನೀಡುವ ಮೊದಲು ಸಂಬಂಧಿತ ಸಚಿವರಿಗೆ ಏನಾದರೂ ತಿಳಿದಿತ್ತೆ?

ಅದನ್ನು ನಿಷ್ಕ್ರಿಯಗೊಳಿಸಲು ಅಥವಾ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಆದೇಶ ಹೇಳುತ್ತದೆ. ಆದೇಶವನ್ನು ಹೊರಡಿಸಿದ ಅದೇ ಪಿಐಬಿ ಈಗ ಬಳಕೆದಾರರು ಯಾವುದೇ ಸಮಯದಲ್ಲಿ ಆ್ಯಪ್ ಅನ್ನು ಅಳಿಸಬಹುದು ಎಂದು ಸರಳವಾಗಿ ಹೇಳುತ್ತದೆ.

ಆದರೆ ನಿಜವಾಗಿಯೂ ಅಪ್ಲಿಕೇಶನ್ ಅನ್ನು ಅಳಿಸಲು ಸಾಧ್ಯವಿಲ್ಲವೆ? ಇಲ್ಲಿ ಜನರ ದಾರಿ ತಪ್ಪಿಸಲಾಗುತ್ತಿದೆಯೇ?

ಪಿಐಬಿ ಸೂಚನೆಯೇ ಆ್ಯಪ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಅಪ್ಲಿಕೇಶನ್ ಅನ್ನು ಏಕೆ ಕಡ್ಡಾಯಗೊಳಿಸಲಾಗಿದೆ ಎಂಬುದರ ಕುರಿತು ಏನನ್ನೂ ಹೇಳಲಾಗಿಲ್ಲ.

ಈ ಸರಕಾರಿ ಆದೇಶ ಆ್ಯಪಲ್, ಸ್ಯಾಮ್‌ಸಂಗ್, ವಿವೋ, ಒಪ್ಪೋ ಮತ್ತು ಶೌಮಿಯಂತಹ ಕಂಪೆನಿಗಳಿಗೆ ಅನ್ವಯಿಸಲಿದೆ. ಕಂಪೆನಿಗಳು 120 ದಿನಗಳಲ್ಲಿ ಇದರ ಬಗ್ಗೆ ವರದಿ ಸಲ್ಲಿಸಬೇಕು.

ಆ್ಯಪಲ್ ಈ ಆದೇಶವನ್ನು ವಿರೋಧಿಸುತ್ತದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಕಂಪೆನಿ ಆದೇಶವನ್ನು ಪಾಲಿಸದಿರುವ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ರಾಯ್ಟರ್ಸ್‌ಗೆ ತಿಳಿಸಿವೆ.

ಅದು ತನ್ನ ಐಒಎಸ್ ವ್ಯವಸ್ಥೆಗೆ ಹಲವಾರು ಭದ್ರತಾ ಸಮಸ್ಯೆಗಳನ್ನು ಸೃಷ್ಟಿಸಬಹುದಾದ್ದರಿಂದ ಜಗತ್ತಿನಲ್ಲಿ ಎಲ್ಲಿಯೂ ಅಂತಹ ನಿಯಮಗಳನ್ನು ಅನುಸರಿಸುವುದಿಲ್ಲ ಎನ್ನಲಾಗುತ್ತಿದೆ.

ಈ ಆ್ಯಪ್‌ನಲ್ಲಿ ಪ್ರತೀ ಐದು ನಿಮಿಷಗಳಿಗೊಮ್ಮೆ, ಪರದೆಯ ಮೇಲೆ ಪ್ರದರ್ಶಿಸಲಾದ ಯಾವುದೇ ಫೋಟೊವನ್ನು ತೆಗೆದುಕೊಳ್ಳಲಾಗುತ್ತದೆ.

ಪರದೆಯ ಮೇಲೆ ಕಾಣುವ ಪ್ರತಿಯೊಂದು ಪದ ಮತ್ತು ಪ್ರತಿಯೊಂದು ವಸ್ತುವನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ಎಲ್ಲಾ ಸ್ಕ್ರೀನ್‌ಶಾಟ್‌ಗಳನ್ನು ಬಳಕೆದಾರರು ತೆರೆಯಲಾಗದ ಫೋಲ್ಡರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಸರಕಾರ ಮಾತ್ರ ಅದನ್ನು ಪ್ರವೇಶಿಸಬಹುದು ಮತ್ತು ಪರಿಶೀಲಿಸಬಹುದು. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಕಟ್ಟುನಿಟ್ಟಿನ ಕಾವಲು ಇಡಬಹುದು. ಅಂದರೆ, ನಾವು ಉತ್ತರ ಕೊರಿಯಾ ಅಥವಾ ರಶ್ಯದಿಂದ ಕಲಿಯುತ್ತಿದ್ದೇವೆಯೇ? ನಾಗರಿಕರನ್ನು ಹೀಗೆ ನಿಯಂತ್ರಿಸುವ ಹಿಂದಿನ ಉದ್ದೇಶವೇನಿರಬಹುದು?

ಈ ಸೆಪ್ಟಂಬರ್‌ನಲ್ಲಿ, ರಶ್ಯ ಎಲ್ಲಾ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಮ್ಯಾಕ್ಸ್ ಮೆಸೆಂಜರ್ ಎಂಬ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಿತು. ಇದನ್ನು ವಾಟ್ಸ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಪ್ರಾರಂಭಿಸಲಾಯಿತು. ಆದರೆ, ಇದರ ಬಳಕೆ ಸರಕಾರ ಸಾಮಾನ್ಯ ಜನರ ಮೇಲೆ ಇನ್ನಷ್ಟು ಕಠಿಣ ಕಣ್ಗಾವಲು ಇಡುವ ಉದ್ದೇಶದ್ದಾಗಿತ್ತು ಎನ್ನಲಾಗಿದೆ.

ಸರಕಾರ ನಿಮ್ಮ ಪ್ರತೀ ಸಣ್ಣ ಸಂಭಾಷಣೆ ಮತ್ತು ಭೇಟಿಯ ಬಗ್ಗೆ ಕಣ್ಣಿಟ್ಟರೆ ಪರಿಣಾಮ ಏನಾಗಬಹುದು?

ಆಗ ಸರಳವಾದ ವಾಟ್ಸ್‌ಆ್ಯಪ್ ಫಾರ್ವರ್ಡ್ ಕೂಡ ಭದ್ರತಾ ಬೆದರಿಕೆಯಾಗಿ ಪರಿಣಮಿಸುತ್ತದೆ ಮತ್ತು ಜನರನ್ನು ಕ್ಷುಲ್ಲಕ ಕಾರಣಗಳಿಗಾಗಿ ಜೈಲಿಗೆ ಹಾಕಬಹುದು. ಭಯ ಎಷ್ಟು ತೀವ್ರವಾಗುತ್ತದೆಯೆಂದರೆ, ಅವರು ಮನೆಯಲ್ಲಿಯೂ ಸರಕಾರವನ್ನು ಪ್ರಶ್ನಿಸುವುದನ್ನು ನಿಲ್ಲಿಸುತ್ತಾರೆ. ನಿಮ್ಮ ಫೋನ್ ನಿಮ್ಮನ್ನು ಯಾವಾಗಲೂ ಡಿಜಿಟಲ್ ಅರೆಸ್ಟ್ ಸ್ಥಿತಿಯಲ್ಲಿಡುತ್ತದೆ.

ಇಂಟರ್ನೆಟ್ ಫ್ರೀಡಂ ಫೆಡರೇಶನ್ (ಐಎಫ್‌ಎಫ್) ಇಂಟರ್ನೆಟ್ ಜಗತ್ತಿನಲ್ಲಿ ಗೌಪ್ಯತೆ ಮತ್ತು ಬಳಕೆದಾರರ ಹಕ್ಕುಗಳ ಮೇಲೆ ಕೆಲಸ ಮಾಡುವ ಸಂಸ್ಥೆಯಾಗಿದೆ.

IMEI ವಂಚನೆ ತಡೆಗಟ್ಟುವ ಹೆಸರಿನಲ್ಲಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗುತ್ತಿದೆ ಎಂದು ಅದು ಹೇಳಿದೆ. ಆದರೆ, IMEI ಸಂಖ್ಯೆಗಳನ್ನು ಪರಿಶೀಲಿಸಲು ಸರಕಾರ ಈಗಾಗಲೇ ‘ನೋ ಯುವರ್ ಮೊಬೈಲ್’ ಅಂಥ ಎಸ್‌ಎಂಎಸ್ ಆಧರಿತ ಸೇವೆಗಳಿಗಾಗಿ ವೆಬ್ ಪೋರ್ಟಲ್ ಅನ್ನು ಹೊಂದಿದೆ. ಹಾಗಿರುವಾಗ ಶಾಶ್ವತ ಆ್ಯಪ್ ಏಕೆ ಬೇಕು ಎಂಬುದಕ್ಕೆ ಸರಕಾರ ತನ್ನ ಆದೇಶದಲ್ಲಿ ಉತ್ತರ ನೀಡಿಲ್ಲ.

ಸರಕಾರಿ ಮಾಹಿತಿಯ ಪ್ರಕಾರ, ಸಂಚಾರ್ ಸಾಥಿ ಅಪ್ಲಿಕೇಶನ್ ಮೂಲಕ ಈ ವರ್ಷ 7 ಲಕ್ಷ ಕಳೆದುಹೋದ ಫೋನ್‌ಗಳು ಪತ್ತೆಯಾಗಿವೆ. ತಮ್ಮ ಫೋನ್ ಅನ್ನು ಹುಡುಕಬೇಕಾದ ಯಾರಾದರೂ ಈ ಅಪ್ಲಿಕೇಶನ್ ಬಳಸಿ ಅದನ್ನು ಡೌನ್‌ಲೋಡ್ ಮಾಡಬಹುದು ಮತ್ತು ನಂತರ ಅದನ್ನು ಡಿಲೀಟ್ ಮಾಡಬಹುದು.

ಆದರೆ ಈ ಹಕ್ಕನ್ನು ಜನರಿಂದ ಏಕೆ ಕಸಿದುಕೊಳ್ಳಲಾಗುತ್ತಿದೆ?

ಅಂತಹ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳು ಸರಕಾರಕ್ಕೆ ಟ್ರ್ಯಾಕಿಂಗ್ ಸಾಧನಗಳಾಗಿ ಕೆಲಸ ಮಾಡಬಹುದು ಎಂದು ಗೌಪ್ಯತೆ ತಜ್ಞರು ಹೇಳುತ್ತಿದ್ದಾರೆ.

ಸೈಬರ್ ಭದ್ರತೆ ಹೆಸರಿನಲ್ಲಿ ಆದೇಶ ನೀಡಲಾಗಿದೆ.ಸೈಬರ್ ಭದ್ರತೆಗೆ ಬೆದರಿಕೆಯನ್ನುಂಟುಮಾಡುವ ಚಟುವಟಿಕೆಗಳನ್ನು ಅಪ್ಲಿಕೇಶನ್ ಗುರುತಿಸುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಯಾವ ರೀತಿಯ ಚಟುವಟಿಕೆಗಳನ್ನು ಒಳಗೊಂಡಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ.

ಈ ಆ್ಯಪ್ ಅನ್ನು ಹೇಗೆ ಬಳಸಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಸರ್ವರ್ ನವೀಕರಣದ ನೆಪದಲ್ಲಿ ಅದರ ಸ್ವರೂಪ ಬದಲಾಗುವ ಸಾಧ್ಯತೆಯಿದೆ.

ವಿರೋಧ ಪಕ್ಷದ ಸಂಸದರು ಸಂಚಾರ್ ಸಾಥಿ ಆ್ಯಪ್‌ಅನ್ನು ವಿರೋಧಿಸಿದ್ದಾರೆ.

ನಾಗರಿಕರು ಅದನ್ನು ವಿರೋಧಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅವರು ತಮ್ಮ ಗೌಪ್ಯತೆಯ ಹಕ್ಕಿನ ಬಗ್ಗೆ ಮಾತನಾಡಬೇಕು. ಯಾರಾದರೂ ತಮ್ಮ ಸಂದೇಶಗಳನ್ನು ಕುಟುಂಬ ಮತ್ತು ಸ್ನೇಹಿತರಿಗೆ ಖಾಸಗಿಯಾಗಿ ಇಡುವುದು ಹಕ್ಕು. ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆ ಸರಕಾರವನ್ನು ಏಕೆ ತಲುಪಬೇಕು? ವಂಚನೆ ನಡೆದರೆ, ಒಂದು ವ್ಯವಸ್ಥೆ ಇರಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಜನರಿಗೆ ಗೌಪ್ಯತೆಯ ಅರ್ಥ ಮತ್ತು ಅಪಾಯ ಎರಡನ್ನೂ ಹೇಳಬೇಕು. ಭಾರತೀಯ ಸಾರ್ವಜನಿಕರಿಗೆ ಅದರ ಅರ್ಥ ಅರ್ಥವಾಗುವುದಿಲ್ಲ. ಸರಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಅನೇಕ ಜನರು ಸಂತೋಷಪಡುತ್ತಾರೆ. ಫೋನ್ ಕಳೆದುಹೋದರೆ, ಅದನ್ನು ಕಂಡುಹಿಡಿಯಲಾಗುತ್ತದೆ ಮತ್ತು ಹಿಂದಿರುಗಿಸಲಾಗುತ್ತದೆ ಎಂದಷ್ಟೇ ಅವರು ಭಾವಿಸುತ್ತಾರೆ. ಆದರೆ ಈ ಹೆಸರಿನಲ್ಲಿ ಸರಕಾರಕ್ಕೆ ಹೋಗುವ ವೈಯಕ್ತಿಕ ಮಾಹಿತಿಯ ಬಗ್ಗೆ ಜನರಿಗೆ ತಿಳಿಸಬೇಕಾಗುತ್ತದೆ.

ಸರಕಾರ ಈ ಸಂಚಾರ್ ಸಾಥಿ ಆ್ಯಪ್ ಮೂಲಕ ನಿಮ್ಮ ಮೇಲೆ ಕಣ್ಣಿಡಲು ಬಯಸುತ್ತದೆಯೇ?

ಸಂಚಾರ್ ಸಾಥಿ ಆ್ಯಪ್ ಬಗ್ಗೆ ಇಂಟರ್ನೆಟ್ ಮತ್ತು ತಂತ್ರಜ್ಞಾನ ತಜ್ಞರು ಎತ್ತುತ್ತಿರುವ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

ನಮ್ಮ ಫೋನ್ ಅನ್ನು ಯಾರಾದರೂ ದಿನವಿಡೀ ನಮ್ಮನ್ನು ಟ್ರ್ಯಾಕ್ ಮಾಡಬೇಕೆಂದು ನಾವು ಬಯಸುತ್ತೇವೆಯೇ?

ಸಂಚಾರ್ ಸಾಥಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ತಕ್ಷಣ, ಅದು ಎಸ್‌ಎಂಎಸ್ ಓದಲು, ಕಾಲ್ ಹಿಸ್ಟರಿ ನೋಡಲು ಮತ್ತು ಕ್ಯಾಮರಾವನ್ನು ಪ್ರವೇಶಿಸಲು ಅನುಮತಿ ಕೇಳುತ್ತದೆ ಎಂದು ಹೇಳಲಾಗುತ್ತಿದೆ. ಸ್ಥಳವನ್ನು ಸಹ ಪತ್ತೆಹಚ್ಚಬಹುದು.

ಟಿಎಂಸಿ ಸಂಸದ ಸಾಕೇತ್ ಗೋಖಲೆ, ಈ ಆ್ಯಪ್ ಅನ್ನು ಯಾರು ರಚಿಸಿದ್ದಾರೆ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಮಾರಾಟಗಾರರು ಮತ್ತು ಡೆವಲಪರ್‌ಗಳು ಯಾರು ಎಂಬ ಪ್ರಶ್ನೆಯೆತ್ತಿದ್ದಾರೆ.

ಅದರ ಕುರಿತು ಯಾವುದೇ ಮಾಹಿತಿ ಒದಗಿಸಲಾಗಿಲ್ಲ.

ಅದರ ವಿವರಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ಯಾರಾದರೂ ಇದನ್ನು ರಚಿಸಿಲ್ಲ ಎಂಬುದಕ್ಕೆ ಏನು ಖಾತರಿ ಇದೆ?

ತಮ್ಮದೇ ನಾಗರಿಕರನ್ನು ಧರ್ಮದ ಆಧಾರದ ಮೇಲೆ ದ್ವೇಷಿಸಿ, ಅವರನ್ನು ಒಳನುಸುಳುವವರು ಎಂದು ಕರೆಯುವವರ ನಡುವೆ, ಈ ಆ್ಯಪ್ ಅಪಾಯ ಹೇಗೆಲ್ಲ ಇರಬಹುದು?

ಇಂಥ ದ್ವೇಷದ ರಾಜಕೀಯಕ್ಕೆ ಉತ್ತೇಜನ ನೀಡಿದ ಸರಕಾರ ಈಗ ನಿಮ್ಮ ಫೋನ್‌ನಲ್ಲಿ ಒಳನುಸುಳುವವರಂತೆ ಕುಳಿತುಕೊಳ್ಳಲು ಏಕೆ ಬಯಸುತ್ತದೆ?

ಸರಕಾರ ಉತ್ತರಿಸಬೇಕಿದೆ ಮತ್ತು ಜನರು ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್. ಕೇಶವ್

contributor

Similar News