×
Ad

ಭಾರತದ ಸಂಸತ್‌ನಲ್ಲಿ ವ್ಯರ್ಥವಾಗುವ ಸಮಯಕ್ಕೆ ಬೆಲೆ ತೆರಬೇಕಾದವರು ಯಾರು?

Update: 2026-01-21 10:20 IST

‘ದಿ ಕ್ವಿಂಟ್’ಗಾಗಿ ಹಿಮಾಂಶಿ ದಹಿಯಾ ಮಾಡಿರುವ ವರದಿ, ಕಳೆದೊಂದು ದಶಕದಲ್ಲಿ ಹೇಗೆ ಸಂಸತ್ ಕಲಾಪದ ಸಾವಿರಾರು ಗಂಟೆಗಳು ವ್ಯರ್ಥವಾಗಿವೆ? ಮತ್ತದಕ್ಕಾಗಿ ಸಾರ್ವಜನಿಕರ ಕೋಟಿಗಟ್ಟಲೆ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಹೇಳುತ್ತದೆ.

ಪ್ರತೀ ನಿಮಿಷಕ್ಕೆ 2.5 ಲಕ್ಷ ರೂ. ಖರ್ಚಾಗುತ್ತದೆ ಎಂಬ ಮಾನದಂಡವನ್ನು ಇಟ್ಟು ನೋಡಿದರೆ, 2014ರಿಂದ 2024ರ ನಡುವೆ ವ್ಯರ್ಥವಾದ ಸಂಸತ್ ಕಲಾಪದ ಸಮಯಕ್ಕೆ ಖರ್ಚಾಗಿರುವ ಅಂದಾಜು ಮೊತ್ತ 3,300 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ವರದಿ ಕಂಡುಕೊಂಡಿದೆ.

ಕಳೆದೊಂದು ದಶಕದಲ್ಲಿ, ಭಾರತದ ಸಂಸತ್ತಿನಲ್ಲಿ ಏನಾಗುತ್ತಿದೆ ಎಂದು ನೋಡಿದರೆ ಆತಂಕವಾಗುತ್ತದೆ.

ಅಧಿವೇಶನ ನಿಗದಿಯಾಗುವುದಷ್ಟೇ ನಿಜ. ಸಮಯವೆಲ್ಲ ಕದನಕ್ಕೆ ಅಣಿಯಾಗುವುದರಲ್ಲಿ, ಮುಂದೂಡಿಕೆಯಲ್ಲೇ ಕಳೆದುಹೋಗುತ್ತದೆ.ಚರ್ಚೆಗಳೇ ಇಲ್ಲದೆ, ಗದ್ದಲದ ನಡುವೆಯೇ ಅತಿ ಅವಸರವಾಗಿ ಕಾನೂನುಗಳನ್ನು ಅಂಗೀಕರಿಸಲಾಗುತ್ತದೆ.

ಆದರೆ, ಸತ್ಯವೆಂದರೆ, ಈ ವ್ಯರ್ಥವಾಗುವ ಪ್ರತೀ ನಿಮಿಷಕ್ಕೂ ಸಾರ್ವಜನಿಕರೇ ದೊಡ್ಡ ಬೆಲೆ ತೆರಬೇಕಾಗುತ್ತದೆ.

‘ದಿ ಕ್ವಿಂಟ್’ಗಾಗಿ ಹಿಮಾಂಶಿ ದಹಿಯಾ ಮಾಡಿರುವ ವರದಿ, ಕಳೆದೊಂದು ದಶಕದಲ್ಲಿ ಹೇಗೆ ಸಂಸತ್ ಕಲಾಪದ ಸಾವಿರಾರು ಗಂಟೆಗಳು ವ್ಯರ್ಥವಾಗಿವೆ? ಮತ್ತದಕ್ಕಾಗಿ ಸಾರ್ವಜನಿಕರ ಕೋಟಿಗಟ್ಟಲೆ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಹೇಳುತ್ತದೆ.

ಪ್ರತೀ ನಿಮಿಷಕ್ಕೆ 2.5 ಲಕ್ಷ ರೂ. ಖರ್ಚಾಗುತ್ತದೆ ಎಂಬ ಮಾನದಂಡವನ್ನು ಇಟ್ಟು ನೋಡಿದರೆ, 2014ರಿಂದ 2024ರ ನಡುವೆ ವ್ಯರ್ಥವಾದ ಸಂಸತ್ ಕಲಾಪದ ಸಮಯಕ್ಕೆ ಖರ್ಚಾಗಿರುವ ಅಂದಾಜು ಮೊತ್ತ 3,300 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ವರದಿ ಕಂಡುಕೊಂಡಿದೆ.

ಇಷ್ಟು ದೊಡ್ಡ ಮೊತ್ತದ ಹಣ ಚರ್ಚೆಗಾಗಿ ಖರ್ಚಾಗಲಿಲ್ಲ, ಕಾನೂನು ರಚನೆಗಾಗಿ ಖರ್ಚಾಗಲಿಲ್ಲ, ಆದರೆ ಬರೀ ಮುಂದೂಡಿಕೆಗಳಿಗೆ ಖರ್ಚಾಯಿತು.

ಸಂಸತ್ ಅಧಿವೇಶನ ಒಂದು ಕಾಲದಲ್ಲಿ ಹೇಗಿರುತ್ತಿತ್ತು?

1950 ಮತ್ತು 1960ರ ದಶಕಗಳಲ್ಲಿ ವರ್ಷಕ್ಕೆ 120 ದಿನಗಳಿಗೂ ಹೆಚ್ಚು ಕಾಲ ಸಂಸತ್ ಕಲಾಪ ನಡೆಯುತ್ತಿತ್ತು. ಸಂಸದರು ನೀತಿಗಳ ಬಗ್ಗೆ ಚರ್ಚಿಸುತ್ತಿದ್ದರು. ಪ್ರಶ್ನೋತ್ತರ ಅವಧಿಗೆ ಬಹಳ ಪ್ರಾಮುಖ್ಯತೆಯಿತ್ತು.

ಆದರೆ 2019-2024ರ 17ನೇ ಲೋಕಸಭೆಯ ಹೊತ್ತಲ್ಲಿ ಸಂಸತ್ತು ವರ್ಷಕ್ಕೆ ಸರಾಸರಿ 55 ದಿನಗಳ ಕಾಲ ಅಧಿವೇಶನ ನಡೆಸುತ್ತಿತ್ತು.

18ನೇ ಲೋಕಸಭೆಯ ಈ ಮೊದಲ ವರ್ಷಗಳಲ್ಲೂ ಅದೇ ಕಥೆ ಮುಂದುವರಿದಿದೆ.

2025ರ ಚಳಿಗಾಲದ ಅಧಿವೇಶನ ಡಿಸೆಂಬರ್ 1ರಿಂದ 19ರವರೆಗೆ ಕೇವಲ 15 ದಿನಗಳಿಗೆ ಮಾತ್ರ ಸೀಮಿತವಾಗಿತ್ತು.

ಮೋದಿ ನೇತೃತ್ವದ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ಒಟ್ಟು 35 ಅಧಿವೇಶನಗಳಲ್ಲಿ ಇದಕ್ಕಿಂತ ಕಡಿಮೆ ಅವಧಿಗೆ ನಡೆದ ಅಧಿವೇಶನಗಳೂ ಇವೆ.

ಸಂಸತ್ತು ವರ್ಷಕ್ಕೆ ಕನಿಷ್ಠ 120 ದಿನಗಳವರೆಗೆ ಸಭೆ ಸೇರಬೇಕೆಂದು ಹಲವಾರು ಸಮಿತಿಗಳು ಶಿಫಾರಸು ಮಾಡಿರುವುದಿದೆ.

ಕ್ವಿಂಟ್ ವರದಿ ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕೃತ ಡೇಟಾವನ್ನು ಆಧರಿಸಿದೆ. ಸಂಸತ್ತು ಎಷ್ಟು ಚರ್ಚಾ ಸಮಯವನ್ನು ನಿಗದಿಪಡಿಸುತ್ತದೆ ಮತ್ತು ಅಡಚಣೆಗಳಿಂದಾಗಿ ಎಷ್ಟು ಸಮಯ ಕಳೆದುಹೋಗುತ್ತದೆ ಎಂಬುದನ್ನು ಆ ಡೇಟಾ ದಾಖಲಿಸುತ್ತದೆ.

ಕಲಾಪದ ಹೊತ್ತಿನ ಅಡಚಣೆಗಳಿಂದ ಕಳೆದುಹೋದ ಪ್ರತೀ ನಿಮಿಷಕ್ಕೂ ಖರ್ಚಾಗುವ ಹಣ 2.5 ಲಕ್ಷ ಮತ್ತು ಇದು ತೆರಿಗೆದಾರರ ಹಣ. ಕಲಾಪಕ್ಕೆ ಅಡಚಣೆಯುಂಟಾಗಿ ಹಣ ವ್ಯರ್ಥವಾದರೆ ತೆರಿಗೆದಾರರ ದುಡ್ಡು ವ್ಯರ್ಥವಾದ ಹಾಗೆ.

ಸರಕಾರದ ಡೇಟಾದಲ್ಲಿ ಅಧಿಕೃತವಾಗಿ ದಾಖಲಿಸಲಾದ ಸಮಯವನ್ನಷ್ಟೆ ತೆಗೆದುಕೊಂಡು ನೋಡಿದರೂ ಹಾಗೆ ವ್ಯರ್ಥವಾಗಿರುವ ಸಮಯ, ದುಡ್ಡು ಸಣ್ಣ ಪ್ರಮಾಣದ್ದಲ್ಲ.

2018ರಲ್ಲಿ ಸುಮಾರು 494 ಕೋಟಿ ರೂ. ವ್ಯರ್ಥವಾಗಿದೆ.

2023ರಲ್ಲಿ ಸುಮಾರು 386 ಕೋಟಿ ರೂ. ವ್ಯರ್ಥವಾಗಿದೆ.

2025ರಲ್ಲಿ ಸುಮಾರು 298 ಕೋಟಿ ರೂ. ವ್ಯರ್ಥವಾಗಿದೆ.

2014ರಿಂದ 2024ರವರೆಗೆ ಆದ ಅಂದಾಜು ನಷ್ಟ 3,300 ಕೋಟಿ ರೂ.ಗಿಂತಲೂ ಹೆಚ್ಚು.

ಸಂಸತ್ ಕಲಾಪ ನಡೆದಾಗಲೂ, ಅದು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದೇ ಬಹಳ ಕಡಿಮೆ.

2014ರಿಂದ 2025 ರವರೆಗೆ ಸಂಸತ್ತಿನ ನಿಗದಿತ ಸಮಯದ ದೊಡ್ಡ ಭಾಗ ಅಡಚಣೆಗಳಿಂದಾಗಿ ಕಳೆದುಹೋಗಿದೆ ಎಂಬುದನ್ನು ಅಧಿಕೃತ ದಾಖಲೆಗಳೇ ತೋರಿಸುತ್ತವೆ ಎಂದು ವರದಿ ಹೇಳುತ್ತದೆ.

2018ರಲ್ಲಿ ಲೋಕಸಭೆಯಲ್ಲಿ ಚರ್ಚಾ ಸಮಯದ ಸುಮಾರು ಶೇ. 39ರಷ್ಟು ವ್ಯರ್ಥವಾಯಿತು.

ರಾಜ್ಯಸಭೆಯಲ್ಲಿ ಸುಮಾರು ಶೇ.53ರಷ್ಟು ಸಮಯ ವ್ಯರ್ಥವಾಯಿತು.

2023ರಲ್ಲಿ ಎರಡೂ ಸದನಗಳಲ್ಲಿ ನಿಗದಿತ ಸಮಯದ ಅರ್ಧಕ್ಕಿಂತ ಹೆಚ್ಚು ಸಮಯ ವ್ಯರ್ಥವಾಯಿತು.

2025ರ ಮುಂಗಾರು ಅಧಿವೇಶನದಲ್ಲಿ ಲೋಕಸಭೆ 120 ನಿಗದಿತ ಗಂಟೆಗಳಲ್ಲಿ 37 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿತು. ರಾಜ್ಯಸಭೆ ಸುಮಾರು 41 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು.

ಸಂಸತ್ ಅಧಿವೇಶನದ ಅವಧಿ ವ್ಯರ್ಥವಾಗುವ ಎರಡು ಬಗೆಗಳಿವೆ.

ಒಂದು, ಗದ್ದಲದಲ್ಲೇ ಕಳೆದುಹೋಗುವುದು ಮತ್ತು ಇನ್ನೊಂದು, ಯಾವ ಚರ್ಚೆಯೂ ಇಲ್ಲದೆ ಅವಸರದಲ್ಲಿ ಕಾನೂನುಗಳ ಅಂಗೀಕಾರವಾಗುವುದು.

2023ರಲ್ಲಿ ಸಂಸತ್ ಕಲಾಪವನ್ನು ನುಂಗಿಹಾಕಿದ್ದು ಮಣಿಪುರ ಬಿಕ್ಕಟ್ಟು. ಬಿಕ್ಕಟ್ಟನ್ನು ನಿಭಾಯಿಸದೇ ಇದ್ದುದಕ್ಕಾಗಿ ಸರಕಾರವನ್ನು ಹೊಣೆಗಾರರನ್ನಾಗಿ ಮಾಡಲು ಪ್ರಧಾನಿ ಹೇಳಿಕೆಗಾಗಿ ವಿಪಕ್ಷದ ಸಂಸದರು ಒತ್ತಾಯಿಸಿದರು. ಆದರೆ ಬಿಜೆಪಿ ಸಂಸದರು ಇತರ ರಾಜ್ಯಗಳ ಕುರಿತು ಚರ್ಚೆಗೆ ಒತ್ತಾಯಿಸುವ ಮೂಲಕ ಪ್ರತಿವಾದ ಎತ್ತಿದರು. ಎರಡೂ ಕಡೆಯವರ ನಡುವಿನ ಈ ಘರ್ಷಣೆಯಲ್ಲಿ ಕೋಲಾಹಲವೆದ್ದು, ಸಂಸತ್ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು.

ಸಂಸತ್ತು ಅಂತಿಮವಾಗಿ ಈ ವಿಷಯವನ್ನು ಚರ್ಚಿಸುವ ಹೊತ್ತಿಗೆ ಸಂಸತ್ತಿನ ವರ್ಷದ ಅರ್ಧದಷ್ಟು ಸಮಯ ಬರೀ ಅಡಚಣೆಗಳಲ್ಲೇ ಕಳೆದುಹೋಗಿತ್ತು. ಅಂದರೆ, ತೆರಿಗೆದಾರರ ಹಣವೆಲ್ಲ ಯಾವುದಕ್ಕೂ ಆಗದೆ ವ್ಯರ್ಥವಾಗಿತ್ತು.

ಸೆಪ್ಟಂಬರ್ 2020ರಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪ್ರತಿಪಕ್ಷಗಳ ಪ್ರತಿಭಟನೆಯ ಹೊರತಾಗಿಯೂ ರಾಜ್ಯಸಭೆಯಲ್ಲಿ ದಾಖಲೆಯ ಮತವಿಲ್ಲದೆ ಅಂಗೀಕರಿಸಲಾಯಿತು.

ವಿಪಕ್ಷದ ಸಂಸದರು ವಿಭಾಗೀಯ ಮತಕ್ಕೆ ಒತ್ತಾಯಿಸಿದಾಗ, ರಾಜ್ಯಸಭೆಯ ಉಪ ಸಭಾಪತಿಗಳು ಮಸೂದೆಗಳನ್ನು ಧ್ವನಿ ಮತದಿಂದ ಅಂಗೀಕರಿಸಲಾಗಿದೆ ಎಂದು ಘೋಷಿಸಿದರು. ಅದು ಆಕ್ರೋಶವನ್ನು ಹುಟ್ಟುಹಾಕಿತು. ಸಂಸದರು ಮೇಜುಗಳ ಮೇಲೆ ಹತ್ತಿ ಪ್ರತಿಭಟನೆಯಲ್ಲಿ ನಿಯಮ ಪುಸ್ತಕಗಳನ್ನು ಹರಿದು ಹಾಕಿದರು.

ಕೋಲಾಹಲದ ಹೊರತಾಗಿಯೂ, ಕೃಷಿ ಕಾನೂನುಗಳನ್ನು ಕನಿಷ್ಠ ಪರಿಶೀಲನೆ ಅಥವಾ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.ಕಡೆಗೆ ಅದನ್ನು ಹಿಂದಕ್ಕೆ ಪಡೆಯಲಾಯಿತು ಎಂಬುದು ಬೇರೆ.

ಆಗಸ್ಟ್ 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸಂಸತ್ತಿನಲ್ಲಿ ಕೆಲವೇ ಗಂಟೆಗಳಲ್ಲಿ ಅಂಗೀಕರಿಸಲಾಯಿತು.

ಚರ್ಚೆಗೆ ಕನಿಷ್ಠ ಸಮಯವಿತ್ತು. ಹೆಸರಿಗಷ್ಟೇ ಚರ್ಚೆ ನಡೆದಂತಿತ್ತು.ವಿರೋಧ ಪಕ್ಷದ ಸಂಸದರು ಹೆಚ್ಚಿನ ಚರ್ಚೆ ಮತ್ತು ಸಮಾಲೋಚನೆಗಾಗಿ ಒತ್ತಾಯಿಸುತ್ತಿದ್ದಂತೆ, ಸರಕಾರ ಅದನ್ನೆಲ್ಲ ದಾಟಿ ತನ್ನ ಬಹುಮತ ಬಳಸಿಕೊಂಡು ಕಾನೂನನ್ನು ಜಾರಿಗೆ ತಂದಿತು.

ಅಂತಹ ದೂರಗಾಮಿ ಸಾಂವಿಧಾನಿಕ ಬದಲಾವಣೆಯ ಅಂಗೀಕಾರ ಬಹಳ ಕಡಿಮೆ ಸಮಯದಲ್ಲಿ ಮುಗಿದಿತ್ತು. ಅದರ ವಿಷಯದಲ್ಲಿನ ಅಗತ್ಯ ಚರ್ಚೆಯನ್ನು ಬಿಟ್ಟುಬಿಡಲಾಗಿತ್ತು.

ಇತ್ತೀಚಿನ ಅಧಿವೇಶನಗಳಲ್ಲಿ ಸರಕಾರಗಳು ಸಂಸತ್ತು ಎಂದಿಗಿಂತಲೂ ಹೆಚ್ಚು ಉತ್ಪಾದಕವಾಗಿದೆ ಎಂದು ಹೇಳಿಕೊಳ್ಳುತ್ತವೆ. ಆದರೆ ಹಾಗೆ ಹೇಳಿಕೊಳ್ಳುವುದು ದಾರಿ ತಪ್ಪಿಸುವ ಆಟವಾಗಿರುವುದೇ ಹೆಚ್ಚು.

2018ರಲ್ಲಿ ಸಂಸತ್ತು ನಿಗದಿತ ಸಮಯದ ಕೇವಲ ಶೇ.61ರಷ್ಟು ಮಾತ್ರ ಕಲಾಪ ನಡೆಸಿದರೂ, ಏನೊ ಸಾಧಿಸಲಾಗಿದೆ ಎಂದು ಹೇಳಿಕೊಂಡದ್ದು ಜೋರಾಗಿಯೇ ಇತ್ತು.

2023ರ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ 141 ಸಂಸದರನ್ನು ಅಮಾನತುಗೊಳಿಸಿದ ನಂತರ ಸಂಸತ್ತು ಯಾವ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಿತು. ಮಸೂದೆಗಳು ಒಂದರ ಬೆನ್ನಲ್ಲಿ ಒಂದರಂತೆ ಅತಿ ಬೇಗನೆ ಅಂಗೀಕಾರಗೊಂಡವು. ಚರ್ಚೆ ಎಂಬುದು ಕಾಗದದ ಮೇಲೆ ಮಾತ್ರ ಉಳಿಯಿತು.

2025ರಲ್ಲಿ ಅಧಿಕೃತವಾಗಿ 100 ಪ್ರತಿಶತಕ್ಕಿಂತ ಹೆಚ್ಚಿನ ಉತ್ಪಾದಕತೆಯನ್ನು ದಾಖಲಿಸಿದರೂ, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನಿಗದಿತ ಗಂಟೆಗಳ ಮೂರನೇ ಎರಡರಷ್ಟು ವ್ಯರ್ಥವಾಗಿತ್ತು.

ಆದರೂ, ಮಸೂದೆಗಳನ್ನು ತರಾತುರಿಯಲ್ಲಿ ಹೆಚ್ಚುಕಡಿಮೆ ಚರ್ಚೆಯೇ ಇಲ್ಲದೆ ಅಂಗೀಕರಿಸಲಾಯಿತು.

ಕೇಂದ್ರ ಬಜೆಟ್‌ನ ಶೇ. 90ರಷ್ಟನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.

ಸಂಸತ್ ಮಾತ್ರವಲ್ಲ. ರಾಜ್ಯ ವಿಧಾನಸಭೆಗಳ ಕಥೆಯೂ ಇದೇ ಆಗಿದೆ.

2024ರಲ್ಲಿ ದೇಶಾದ್ಯಂತ ಸರಾಸರಿ 20 ದಿನಗಳ ಕಾಲ ರಾಜ್ಯ ವಿಧಾನಸಭೆ ಅಧಿವೇಶನಗಳು ನಡೆದಿವೆ. ಇದು ಅರ್ಥಪೂರ್ಣ ಶಾಸಕಾಂಗ ವ್ಯವಹಾರಕ್ಕೆ ಅಗತ್ಯವಾಗಿರುವುದಕ್ಕಿಂತ ಬಹಳ ಕಡಿಮೆ ಎಂದು ವರದಿ ಹೇಳುತ್ತದೆ.

2024ರ ಡೇಟಾ ಪ್ರಕಾರ, ಜಮ್ಮು-ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗಳು ಕ್ರಮವಾಗಿ 5, 6 ಮತ್ತು 16 ದಿನಗಳ ಅಧಿವೇಶನಗಳನ್ನು ನಡೆಸಿವೆ. ಒಡಿಶಾ, ಕೇರಳ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಗಳು 42, 38 ಮತ್ತು 36 ಕೆಲಸದ ದಿನಗಳ ಅಧಿವೇಶನದ ಮೂಲಕ ಗಮನ ಸೆಳೆದಿವೆ.

ಸಂಸತ್ತು ಈಚಿನ ವರ್ಷಗಳಲ್ಲಿ ಬಹುತೇಕ ನಿಷ್ಕ್ರಿಯವಾಗುತ್ತಿದೆ ಮತ್ತು ತೆರಿಗೆದಾರರ ಹಣ ವ್ಯರ್ಥವಾಗಿ ಖರ್ಚಾಗುತ್ತಿದೆ.

ಆಡಳಿತ ನಡೆಸುವವರು ಹೇಗೆ ಪ್ರಜಾಸತ್ತಾತ್ಮಕ ಮೌಲ್ಯವನ್ನು ಮರೆತಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎ.ಎನ್. ಯಾದವ್

contributor

Similar News