×
Ad

ಈ ನಿರಪರಾಧಿಗಳ ಕಳೆದುಹೋದ ಬದುಕನ್ನು ಮರಳಿ ತಂದು ಕೊಡುವವರು ಯಾರು?

ಯಾವುದೇ ಪುರಾವೆಗಳಿಲ್ಲದಿದ್ದರೂ ಪೊಲೀಸರು 12 ಮಂದಿ ಮುಸ್ಲಿಮರನ್ನು ಜೈಲಿಗೆ ಹಾಕಿದ ನಂತರ, ಪ್ರಕರಣ ದಾಖಲಿಸಲು 44,500 ಪುಟಗಳ ದಾಖಲೆಗಳನ್ನು ಸಂಗ್ರಹಿಸುತ್ತಾರೆ ಮತ್ತು ಅವರಲ್ಲಿ ಒಬ್ಬರ ತಪ್ಪನ್ನು ಸಾಬೀತುಪಡಿಸಲು ಕೂಡ ಒಂದೇ ಒಂದು ಉಪಯುಕ್ತ ಪುರಾವೆಯೂ ಕಂಡುಬಂದಿಲ್ಲ. 2006ರ ಬಾಂಬ್ ಸ್ಫೋಟಗಳಲ್ಲಿ ಅವರಲ್ಲಿ ಯಾರಿಗಾದರೂ ಯಾವುದೇ ಪಾತ್ರವಿದೆ ಎಂದು ತೃಪ್ತಿಪಡಿಸುವ ಒಂದೇ ಒಂದು ಪುರಾವೆ ಕಂಡಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಭಯೋತ್ಪಾದನಾ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿ 18 ವರ್ಷ ಅಥವಾ 19 ವರ್ಷಗಳ ಕಾಲ ಜೈಲಿಗೆ ಹಾಕುವುದು ಅಷ್ಟು ಸುಲಭವೇ?

Update: 2025-07-23 11:48 IST

ಮುಂಬೈ ರೈಲು ಸ್ಫೋಟ ಪ್ರಕರಣದ ಎಲ್ಲ 12 ಆರೋಪಿಗಳನ್ನು ಗಲ್ಲು ಮತ್ತು ಜೀವಾವಧಿ ಶಿಕ್ಷೆಯಿಂದ ಖುಲಾಸೆಗೊಳಿಸಲಾಗಿದೆ. ಜಾಮೀನು ಇಲ್ಲದೆ ಸುಮಾರು 19 ವರ್ಷಗಳ ಕಾಲ ಜೈಲಿನಲ್ಲಿದ್ದ ನಂತರ ಅವರು ಖುಲಾಸೆಯಾಗಿದ್ದಾರೆ. ಆದರೆ ಅವರ ಪಾಲಿಗೆ ಈಗ ನಿಜವಾಗಿಯೂ ಸಂತೋಷ ಉಳಿದಿದೆಯೆ? ಖುಲಾಸೆಯಾದ ಸಂತೋಷವಿದ್ದರೂ, ಅದನ್ನು ನಿಜವಾಗಿಯೂ ನ್ಯಾಯದ ವಿಜಯವೆನ್ನಬಹುದೆ? ನ್ಯಾಯಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ನಂಬುವ ನ್ಯಾಯಾಧೀಶರ ಮುಂದೆ ಈ ಪ್ರಕರಣ ಬಂದಿಲ್ಲದಿದ್ದರೆ ಏನಾಗಬಹುದಿತ್ತು?

2015 ರಲ್ಲಿ ಈ 12 ಜನರಲ್ಲಿ ಐವರಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಕೂಡ ಒಂದು ನ್ಯಾಯಾಲಯವಾಗಿತ್ತು.

ಭಯೋತ್ಪಾದಕ ಪ್ರಕರಣಗಳ ವಿಚಾರಣೆಗಾಗಿ ಪ್ರತ್ಯೇಕವಾಗಿ ವಿಶೇಷ ನ್ಯಾಯಾಲಯ ರಚಿಸಲಾಯಿತು. ಇದನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಥವಾ ಎಂಸಿಒಸಿಎ ನ್ಯಾಯಾಲಯ ಎಂದು ಕರೆಯಲಾಗುತ್ತದೆ. ಎಂಸಿಒಸಿಎ ಕೋರ್ಟ್‌ನಲ್ಲಿ ವಿಚಾರಣೆ 8 ವರ್ಷಗಳ ಕಾಲ ನಡೆಯಿತು.

ಈ 12 ಜನರ ಬಂಧನವಾದಾಗ, ಅವರ ಹೆಸರಿನ ಕಾರಣಕ್ಕಾಗಿಯೇ ಅನೇಕರು ಇವರೇ ಅಪರಾಧ ಮಾಡಿದವರೆಂದು ನಂಬಿದ್ದಿರಬಹುದು.ಆದರೆ, ಎಲ್ಲಾ ಭಯೋತ್ಪಾದಕರು ಮುಸ್ಲಿಮರೇ ಏಕೆ ಎಂದು ಪ್ರಶ್ನಿಸುವವರು, ಭಯೋತ್ಪಾದನೆ ಆರೋಪದಲ್ಲಿ ಯಾವಾಗಲೂ ಮುಸ್ಲಿಮರೇ ಏಕೆ ಸಿಲುಕುತ್ತಾರೆ ಎಂದು ಕೇಳುವುದಿಲ್ಲ ಯಾಕೆ? ಭಯೋತ್ಪಾದಕ ಪ್ರಕರಣಗಳಲ್ಲಿ ಮುಸ್ಲಿಮರನ್ನು ಮಾತ್ರ ಏಕೆ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಯಾರಾದರೂ ಪ್ರಶ್ನಿಸಿದ್ದಿಲ್ಲ.

ಜುಲೈ 11, 2006ರಂದು ಮುಂಬೈನ ಲೋಕಲ್ ರೈಲಿನಲ್ಲಿ ಏಳು ಸ್ಫೋಟಗಳು ನಡೆದವು. 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 800ಕ್ಕೂ ಹೆಚ್ಚು ಜನರು ಗಾಯಗೊಂಡರು. ಅವರಿಗೆ ನ್ಯಾಯ ಸಿಗಲಿಲ್ಲ. ಆದರೆ ನ್ಯಾಯದ ಹೆಸರಿನಲ್ಲಿ ಯಾರದೋ ಕತ್ತು ಹಿಸುಕಲಾಯಿತು.

ಈ 12 ಜನರೂ ಮುಸ್ಲಿಮರಾಗಿದ್ದುದರಿಂದ ಹೀಗೆ ಮಾಡಲಾಯಿತೆ?

ಇವರು ಕಮಾಲ್ ಅಹ್ಮದ್ ಮುಹಮ್ಮದ್ ವಕೀಲ್ ಅನ್ಸಾರಿ, ಮುಹಮ್ಮದ್ ಫೈಸಲ್ ಅತಾವುರ‌್ರಹಮಾನ್ ಶೇಕ್, ಇಹ್ತೆಶಾಮ್ ಕುತ್ಬುದ್ದೀನ್ ಸಿದ್ದೀಕಿ, ನವೀದ್ ಹುಸೇನ್ ಖಾನ್ ರಶೀದ್, ಆಸಿಫ್ ಖಾನ್ ಬಶೀರ್ ಖಾನ್, ತನ್ವೀರ್ ಅಹ್ಮದ್ ಮುಹಮ್ಮದ್ ಇಬ್ರಾಹೀಂ ಅನ್ಸಾರಿ, ಮುಹಮ್ಮದ್ ಮಾಜಿದ್ ಮುಹಮ್ಮದ್ ಶಫಿ, ಶೇಕ್ ಮುಹಮ್ಮದ್ ಅಲಿ ಆಲಮ್, ಮುಹಮ್ಮದ್ ಸಾಜಿದ್, ಮುಜಮ್ಮಿಲ್ ಅತವುರ‌್ರಹಮಾನ್ ಶೇಕ್, ಸುಹೈಲ್ ಮಹಮೂದ್ ಶೇಕ್, ಝಮೀರ್ ಅಹ್ಮದ್ ಲತೀಫುರ‌್ರಹಮಾನ್ ಶೇಕ್.

ಈಗ ಅವರೆಲ್ಲರನ್ನೂ ಖುಲಾಸೆಗೊಳಿಸಲಾಗಿದೆ.

ಬಾಂಬೆ ಹೈಕೋರ್ಟ್‌ನಲ್ಲಿ, ನ್ಯಾಯಮೂರ್ತಿ ಅನಿಲ್ ಎಸ್. ಕಿಲೋರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ಎಂಸಿಒಸಿಎ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಕಳೆದ ವರ್ಷ ಜುಲೈನಿಂದ ಜನವರಿ ಅಂತ್ಯದವರೆಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು ಮತ್ತು ಈಗ 5 ತಿಂಗಳ ನಂತರ ತೀರ್ಪು ಬಂದಿದೆ.

ಬಾಂಬೆ ಹೈಕೋರ್ಟ್‌ನ ಈ ಪೀಠ ಪ್ರಕರಣವನ್ನು ಎಷ್ಟು ಗಂಭೀರವಾಗಿ ವಿಚಾರಣೆ ನಡೆಸಿರಬಹುದಲ್ಲವೆ?

6 ತಿಂಗಳ ಅವಧಿಯಲ್ಲಿ ಪೀಠ 75 ಬಾರಿ ವಿಚಾರಣೆ ನಡೆಸಿತ್ತೆಂಬುದನ್ನು ಗಮನಿಸಬೇಕು. ತೀರ್ಪು 670 ಪುಟಗಳಿಗಿಂತ ದೀರ್ಘವಾಗಿದೆ. ಈ ಪ್ರಕರಣದಲ್ಲಿ 250 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. ಪ್ರತಿವಾದಿಗಳು 92 ಸಾಕ್ಷಿಗಳನ್ನು ಹಾಜರುಪಡಿಸಿದರು. 169 ಸಂಪುಟಗಳಲ್ಲಿ ಈ ಪ್ರಕರಣಗಳ ದಾಖಲೆಗಳಿವೆ.

ಎಂಸಿಒಸಿಎ ನ್ಯಾಯಾಲಯ 8 ವರ್ಷಗಳ ಕಾಲ ವಿಚಾರಣೆ ನಡೆಸಿ, ಗಲ್ಲುಶಿಕ್ಷೆ ವಿಧಿಸಿತ್ತು.

ಬಾಂಬೆ ಹೈಕೋರ್ಟ್‌ನ ಈ ನಿರ್ಧಾರ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಬಹಳ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ 12 ಜನರು ಸುಮಾರು 19 ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು.

44,500 ಪುಟಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಆದರೆ, ಈ 12 ಜನರ ಅಪರಾಧವನ್ನು ಸಾಬೀತುಪಡಿಸುವ ಒಂದೇ ಒಂದು ಪುರಾವೆಯೂ ಕಂಡುಬಂದಿಲ್ಲ. ಪೊಲೀಸರು ನಿರಪರಾಧಿಗಳನ್ನು ಜೈಲಿಗೆ ಹಾಕಿದ ನಂತರ 44,500 ಪುಟಗಳ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದರೆ?

ಯಾವುದೇ ಪುರಾವೆಗಳಿಲ್ಲದಿದ್ದರೂ ಪೊಲೀಸರು 12 ಮಂದಿ ಮುಸ್ಲಿಮರನ್ನು ಜೈಲಿಗೆ ಹಾಕಿದ ನಂತರ, ಪ್ರಕರಣ ದಾಖಲಿಸಲು 44,500 ಪುಟಗಳ ದಾಖಲೆಗಳನ್ನು ಸಂಗ್ರಹಿಸುತ್ತಾರೆ ಮತ್ತು ಅವರಲ್ಲಿ ಒಬ್ಬರ ತಪ್ಪನ್ನು ಸಾಬೀತುಪಡಿಸಲು ಕೂಡ ಒಂದೇ ಒಂದು ಉಪಯುಕ್ತ ಪುರಾವೆಯೂ ಕಂಡುಬಂದಿಲ್ಲ.

2006ರ ಬಾಂಬ್ ಸ್ಫೋಟಗಳಲ್ಲಿ ಅವರಲ್ಲಿ ಯಾರಿಗಾದರೂ ಯಾವುದೇ ಪಾತ್ರವಿದೆ ಎಂದು ತೃಪ್ತಿಪಡಿಸುವ ಒಂದೇ ಒಂದು ಪುರಾವೆ ಕಂಡಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಭಯೋತ್ಪಾದನಾ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿ 18 ವರ್ಷ ಅಥವಾ 19 ವರ್ಷಗಳ ಕಾಲ ಜೈಲಿಗೆ ಹಾಕುವುದು ಅಷ್ಟು ಸುಲಭವೇ?

ಈ ಪ್ರಕರಣದಲ್ಲಿ ಹೋರಾಡಿದ ವಕೀಲರನ್ನು ನೆನೆಯಲೇಬೇಕು. ಅವರಿಗೆ ಇದು ಸುಲಭವಲ್ಲ. ಅವರಲ್ಲಿ ಅನೇಕರು ಇದೇ ರೀತಿಯ ಪ್ರಕರಣಗಳಲ್ಲಿ ಹೋರಾಡುತ್ತಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಸಹ ಹೋರಾಡುವುದನ್ನು ಮುಂದುವರಿಸುತ್ತಾರೆ.

ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್, ನಿತ್ಯಾ ರಾಮಕೃಷ್ಣನ್, ಎಸ್. ನಾಗಮುತ್ತು, ಯುಗಮೋಹಿತ್ ಚೌಧರಿ, ಪಯೋಶಿ ರಾಯ್, ಗೌರವ್ ಭವನಾನಿ, ಆದಿತ್ಯ ಮೆಹ್ತಾ, ಹಸನ್ ನಿಝಾಮಿ, ಸ್ತುತಿ ರಾಯ್ ಹಾಗೂ ಇಶ್ರತ್ ಅಲಿ ಖಾನ್- ಇವರು ಆ ವಕೀಲರು.

ಭಯೋತ್ಪಾದನಾ ಪ್ರಕರಣಗಳ ವಿಷಯದಲ್ಲಿ ಸಾರ್ವಜನಿಕವಾಗಿ ಒಂದು ವಾತಾವರಣ ಸೃಷ್ಟಿಸಲಾಗುತ್ತದೆ. ಜನರು ಕೋಮು ಸಂಬಂಧಿ ಮಾತುಕತೆಗಳ ಮೂಲಕ ಉದ್ವಿಗ್ನಗೊಳ್ಳುವಂತೆ ಮಾಡಲಾಗುತ್ತದೆ. ವಕೀಲರು ಹಿಂದೆ ಸರಿಯುತ್ತಾರೆ. ಯಾರೂ ಅವರ ಪ್ರಕರಣದಲ್ಲಿ ಹೋರಾಡುವುದಿಲ್ಲ.

ಅಪರಾಧ ಸಾಬೀತಾಗುವ ಮೊದಲೇ ಅವರನ್ನು ಭಯೋತ್ಪಾದಕರು ಎಂದು ಘೋಷಿಸಲಾಗುತ್ತದೆ. ಅಂತಹ ವಾತಾವರಣ ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ವಕೀಲರು ಸಹ ಮುಂದೆ ಬರದ ರೀತಿಯಲ್ಲಿ ಅದನ್ನೆಲ್ಲ ಮಾಡಲಾಗುತ್ತದೆ. ಮಡಿಲ ಮೀಡಿಯಾವಂತೂ ತನ್ನ ಸ್ಟುಡಿಯೋದಲ್ಲೇ ಅವರನ್ನು ಭಯೋತ್ಪಾದಕರು ಅಥವಾ ದೇಶದ್ರೋಹಿಗಳು ಎಂದು ಸಾಬೀತುಪಡಿಸಿಬಿಡುತ್ತದೆ. ಆ ವಾತಾವರಣದ ವಿರುದ್ಧ ಹೋರಾಡುತ್ತಾ, ಯುಗಮೋಹಿತ್ ಚೌಧರಿ ಮತ್ತು ನಿತ್ಯಾ ರಾಮಕೃಷ್ಣನ್ ಅವರಂತಹ ವಕೀಲರು ಅಸಹಾಯಕರ ಧ್ವನಿಯಾಗಲು ಮುಂದೆ ಬರುತ್ತಾರೆ.

ಎಸ್. ಮುರಳೀಧರ್ ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯಾಗಿದ್ದರು. ದಿಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು. ಆಗಲೂ ಅವರು ನ್ಯಾಯಕ್ಕೆ ಹೆಸರುವಾಸಿಯಾಗಿದ್ದರು ಮತ್ತು ನಿವೃತ್ತಿಯ ನಂತರವೂ ಅವರು ನ್ಯಾಯಕ್ಕಾಗಿ ಕಠಿಣ ಹೋರಾಟವನ್ನು ಆರಿಸಿಕೊಂಡಿದ್ದಾರೆ.

ಅಕ್ಟೋಬರ್ 1, 2006ರ ವರದಿಯೊಂದರ ಪ್ರಕಾರ, ಬಂಧಿತ 15 ಜನರಲ್ಲಿ 12 ಜನರ ನೇರ ಪಾತ್ರವನ್ನು ಖಚಿತಪಡಿಸಿರುವುದಾಗಿ ಆಗಿನ ಮುಂಬೈ ಪೊಲೀಸ್ ಆಯುಕ್ತ ಎ.ಎನ್. ರಾಯ್ ಹೇಳಿದ್ದರು. ಇಂಥ ಹುದ್ದೆಯಲ್ಲಿ ಕುಳಿತ ಜನರು ಎಷ್ಟು ಚಾಣಾಕ್ಷತನದಿಂದ ಸುಳ್ಳು ಹೇಳಿ ಒಬ್ಬರ ಜೀವವನ್ನೇ ಪಣಕ್ಕಿಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.

ಫೈಸಲ್ ಶೇಕ್, ಇಹ್ತೆಶಾಮ್ ಸಿದ್ದೀಕಿ ಮತ್ತು ಕಮಾಲ್ ಅನ್ಸಾರಿ ಬಂಧನವಾಗಿರುವುದು ಅತಿದೊಡ್ಡ ವಿಷಯ ಎಂದು ಎ.ಎನ್. ರಾಯ್ ಹೇಳಿದ್ದರು. ‘‘ಅವರನ್ನು ಹಿಡಿಯುವುದೇ ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ಅವರಿಗೆ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುವ ರೀತಿಯಲ್ಲಿ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು’’ ಎಂದು ಆ ಅಧಿಕಾರಿ ಹೇಳಿದ್ದರು.

ಸಿಮಿ, ಲಷ್ಕರೆ ತಯ್ಯಿಬಾದಿಂದ ಐಎಸ್‌ಐವರೆಗೆ ಎಲ್ಲ ಹೆಸರುಗಳನ್ನೂ ತೆಗೆದುಕೊಳ್ಳಲಾಗಿತ್ತು. ಅವರು ಪಾಕಿಸ್ತಾನದ ಬಹಾವಲ್ಪುರದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಹೇಳಲಾಗಿತ್ತು.

ಏಳು ಸ್ಫೋಟಗಳ ಪರಿಣಾಮದಿಂದಾಗಿ ಇಡೀ ದೇಶ ಭಯಭೀತವಾಗಿತ್ತು. ಪೊಲೀಸರು ಹೇಳಿದ ಎಲ್ಲವನ್ನೂ ಜನರು ನಂಬಲು ಪ್ರಾರಂಭಿಸಿದ್ದರು. ಆದರೆ ಎಲ್ಲೋ ಯಾರನ್ನೋ ಬಂಧಿಸಿ ಒಂದೇ ಒಂದು ಪುರಾವೆಯನ್ನು ಪ್ರಸ್ತುತಪಡಿಸಲು ಸಾಧ್ಯವಾಗದ ಇವರೆಂಥ ಪೊಲೀಸರು ಎಂಬ ಪ್ರಶ್ನೆ ಇವತ್ತು ಎದ್ದಿದೆ.

ಮುಂಬೈ ಬಾಂಬ್ ಸ್ಫೋಟದ ಆರೋಪದ ಮೇಲೆ 19 ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿದ್ದ 12 ಜನರಲ್ಲಿ ಕೆಲವರು ಇಂಜಿನಿಯರ್‌ಗಳು, ವೈದ್ಯರಾಗಿದ್ದರು. ಕೆಲವರು ಅಂಗಡಿಗಳನ್ನು ಹೊಂದಿದ್ದರು. ಅವರನ್ನು 18-19 ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. ಅವರ ಹೆಸರುಗಳ ಕಾರಣದಿಂದ ಅವರೆಲ್ಲರ ಜೀವನ ಸಂಪೂರ್ಣ ನಾಶವಾಯಿತು.

ಜನರ ಕೋಪವನ್ನು ಕೆರಳಿಸಲಾಯಿತು. ನಕಲಿ ಕಥೆಗಳ ಮೇಲೆ ಚಲನಚಿತ್ರಗಳನ್ನು ನಿರ್ಮಿಸಲಾಯಿತು. ಒಂದಿಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ವಿಚಾರಣೆ ಮುಗಿಯುವ ಮುನ್ನವೇ ಇವರೇ ಭಯೋತ್ಪಾದಕರು ಎಂದು ಜನರ ನಡುವೆ ತೀರ್ಪು ನೀಡಲಾಯಿತು. ಸಮಾಜದ ಕೊಳಕು ಮನಸ್ಥಿತಿಯ ಜನರು ಈಗಲೂ ಈ 12 ಜನರ ಹೆಸರುಗಳ ಬಗ್ಗೆ ವದಂತಿಗಳನ್ನು ಹರಡುತ್ತಿರಬಹುದು.

ಈ ಪ್ರಕರಣ ನಮ್ಮ ವ್ಯವಸ್ಥೆ ಅದೆಷ್ಟು ಕೊಳೆತುಹೋಗಿದೆ ಎಂಬುದನ್ನು ಹೇಳುತ್ತಿದೆ. ಅದು ಕೋಮುವಾದಕ್ಕೆ ತಿರುಗಿದೆ. ಯಾರನ್ನಾದರೂ ಯಾವುದೇ ಪ್ರಕರಣದಲ್ಲಿ ಸಿಲುಕಿಸಿ ವರ್ಷಗಟ್ಟಲೆ ಜೈಲಿನಲ್ಲಿಡುತ್ತದೆ.

ದಿಲ್ಲಿ ಗಲಭೆ ಆರೋಪದ ಮೇಲೆ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಶಿಫಾವುರ‌್ರಹಮಾನ್, ಮೀರಾನ್ ಹೈದರ್, ಖಾಲಿದ್ ಸೈಫಿ ಅವರನ್ನೆಲ್ಲ ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಏಕೆ ಇರಿಸಲಾಗಿದೆ ಎಂಬುದು ಇದರಿಂದ ಅರ್ಥವಾಗುತ್ತದೆ.

ಮುಂಬೈ ಬಾಂಬ್ ಸ್ಫೋಟ ಪ್ರಕರಣ ಕುರಿತ ಈ ತೀರ್ಪಿನಿಂದ ನಾವು ಏನನ್ನೂ ಕಲಿಯುತ್ತಿಲ್ಲ. ಇಂದಿಗೂ ಜನರು ವಿಚಾರಣೆಯಿಲ್ಲದೆ ಐದು, ಆರು ವರ್ಷಗಳ ಕಾಲ ಜೈಲಿನಲ್ಲಿದ್ದಾರೆ. ಈ ಎಲ್ಲಾ ಜನರು ಎಂದಾದರೂ ತಮ್ಮ ಜೀವವನ್ನು ಮರಳಿ ಪಡೆಯುತ್ತಾರೆಯೇ?

ಗಲಭೆಯಲ್ಲಿ ಮಡಿದವರಿಗೆ, ಮುಂಬೈ ಸ್ಫೋಟದಲ್ಲಿ ಮಡಿದವರಿಗೆ, ಒಬ್ಬ ಅಮಾಯಕ ವ್ಯಕ್ತಿಯನ್ನು ಹಿಡಿದು ಗಲ್ಲಿಗೇರಿಸಲಾಯಿತು ಎಂಬುದರಿಂದ ನ್ಯಾಯ ಸಿಗುತ್ತದೆಯೇ? ಇದು ಅವರ ನ್ಯಾಯವೇ?

ಅಂತಹ ಪ್ರಕರಣಗಳಲ್ಲಿ ಆರೋಪಿಗಳ ಜೊತೆಗೆ, ಅವರ ಮನೆಯ ಮಹಿಳೆಯರು, ಮಕ್ಕಳು ಮತ್ತು ಸಂಬಂಧಿಕರು ಸಹ ಶಿಕ್ಷೆಯನ್ನು ಅನುಭವಿಸುತ್ತಾರೆ. ಅಪಾರ ಅವಮಾನವನ್ನು ಎದುರಿಸುತ್ತಾರೆ. ಒಮ್ಮೆ ಅವರಿಗೆ ಕಳಂಕ ಅಂಟಿಸಿದ ನಂತರ ಸಮಾಜ ಅವರನ್ನು ತುಂಬಾ ಕ್ರೂರವಾಗಿ ನಡೆಸಿಕೊಳ್ಳುತ್ತದೆ.

ಈಗ ಈ ಪ್ರಕರಣದ ತನಿಖೆಯ ಸಮಯದಲ್ಲಿ ಮಾಡಲಾದ ಸಾವಿರಾರು ಪುಟಗಳ ಕಟ್ಟುಕಥೆಗಳು ಏನಾಗುತ್ತವೆ? ಮಹಾರಾಷ್ಟ್ರ ಎಟಿಎಸ್ ಮತ್ತೆ ತನಿಖೆ ನಡೆಸುತ್ತದೆಯೇ? ಅಥವಾ ತನಿಖೆಯ ಹೆಸರಿನಲ್ಲಿ ಒಂದು ಕಥೆಯನ್ನು ಕಟ್ಟಲಾಗಿತ್ತು ಎಂಬ ಸತ್ಯವನ್ನು ಅದು ಒಪ್ಪಿಕೊಳ್ಳುತ್ತದೆಯೇ?

ತನಿಖೆ ಇರಲೇ ಇಲ್ಲ. ಪೊಲೀಸರು ಏನನ್ನಾದರೂ ಸಾಬೀತುಪಡಿಸಬೇಕಾ ಗಿತ್ತು ಅಥವಾ ಈಗ ಅದನ್ನು ಮಾಡಬೇಕು. ಸಾಬೀತುಪಡಿಸಲು ಸಾಧ್ಯವಾಗದಿದ್ದಾಗ, ಅದು ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು.

ಇಷ್ಟೆಲ್ಲ ಆದ ಮೇಲಾದರೂ ಏನಾದರೂ ಬದಲಾಗುತ್ತದೆಯೆ? ಖಂಡಿತ ಇಲ್ಲ. ತನಿಖಾ ಸಂಸ್ಥೆ ಬದಲಾಗುವುದಿಲ್ಲ ಅಥವಾ ಭಯೋತ್ಪಾದನೆ ಹೆಸರಿನಲ್ಲಿ ರಾಜಕೀಯ ಮಾಡುವವರು ಬುದ್ಧಿ ಕಲಿಯುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿನಯ್ ಕೆ.

contributor

Similar News