ಕರ್ನಾಟಕ ಸಚಿವರ ಕಚೇರಿಗಳಲ್ಲಿ ಮಹಿಳೆಯರು ಮತ್ತು ಮುಸ್ಲಿಮರಿಗೆ ಪ್ರಾತಿನಿಧ್ಯ ಯಾಕಿಲ್ಲ?
ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಕರ್ನಾಟಕ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸಚಿವರ ಆಪ್ತ ಕಾರ್ಯದರ್ಶಿಗಳ, ವಿಶೇಷ ಕರ್ತವ್ಯಾಧಿಕಾರಿ, ವಿಶೇಷಾಧಿಕಾರಿ ಹಾಗೂ ಆಪ್ತ ಸಹಾಯಕರ ಹೆಸರು, ಹುದ್ದೆ, ದೂರವಾಣಿ ಸಂಖ್ಯೆ, ವಿಳಾಸ ಮುಂತಾದ ವಿವರಗಳನ್ನೊಳಗೊಂಡ ಒಂದು ಪಟ್ಟಿ ಹರಿದಾಡುತ್ತಿದೆ. ಇದರಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ದೊರೆತಿರುವಂತಹ ಬಹುತೇಕ ಶೂನ್ಯ ಪ್ರಾತಿನಿಧ್ಯವು ಸಾಮಾಜಿಕ ನ್ಯಾಯದ ಕಾಳಜಿಯಿರುವ ಪ್ರತಿಯೊಬ್ಬರ ಗಮನ ಸೆಳೆಯುತ್ತದೆ. ಏಕೆಂದರೆ ಆ ಪಟ್ಟಿಯ ಪ್ರಕಾರ, ಎಲ್ಲಾ ಸಚಿವಾಲಯಗಳನ್ನು ಒಟ್ಟುಗೂಡಿಸಿದ್ದಾರೆ, ಉನ್ನತ ಹುದ್ದೆಗಳಲ್ಲಿ ಸುಮಾರು 140 ಜನ ಸಿಬ್ಬಂದಿಯಿದ್ದಾರೆ. ಪ್ರಸ್ತುತ 140 ಸಿಬ್ಬಂದಿಯಲ್ಲಿ ಕೇವಲ ಇಬ್ಬರು ಮಾತ್ರ ಮಹಿಳೆಯರು. ಅಂದರೆ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ. 1.4 ರಷ್ಟು ಮಾತ್ರ. ಅವರಲ್ಲಿ ಒಬ್ಬರು ಮುಖ್ಯಮಂತ್ರಿಗಳ ಕಚೇರಿಯಲ್ಲಿದ್ದರೆ ಇನ್ನೊಬ್ಬರು ಗೃಹ ಸಚಿವಾಲಯದಲ್ಲಿದ್ದಾರೆ. ಇನ್ನೂ ವಿಶೇಷವೆಂದರೆ ಸಾಕ್ಷಾತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ, ವಿಶೇಷಾಧಿಕಾರಿ ಹಾಗೂ ಆಪ್ತ ಸಹಾಯಕರಲ್ಲಿ ಒಬ್ಬರೂ ಕೂಡ ಮಹಿಳೆಯರಿಲ್ಲ. ಈ ಇಲಾಖೆಗಳೆಲ್ಲಾ ಮಹಿಳೆಯರಿಗೆ ಶೇ. 50 ರಷ್ಟು ಪ್ರಾತಿನಿಧ್ಯ ನೀಡಿದ್ದರೆ, ಇಡೀ ದೇಶಕ್ಕೆ ಮಾದರಿಯಾಗುವ ಅವಕಾಶವಿತ್ತು. ಹಾಗೆಯೇ ಆಮೂಲಕ ಸದರಿ ಇಲಾಖೆಯ ಸಚಿವೆಗೆ ಮಹಿಳಾ ಸಮುದಾಯದಿಂದ ಇನ್ನೂ ಹೆಚ್ಚಿನ ವಿಶ್ವಾಸ ಗಳಿಸಲು ಸಾಧ್ಯವಿತ್ತು.
ಇದು ಮಹಿಳಾ ಪ್ರಾತಿನಿಧ್ಯದ ಅವಸ್ಥೆಯಾದರೆ, ಮುಸ್ಲಿಮ್ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಅವಸ್ಥೆ ಕೂಡಾ ಕಳವಳಕಾರಿಯಾಗಿದೆ. ಒಟ್ಟು 140 ಸಿಬ್ಬಂದಿಯಲ್ಲಿ ಕೇವಲ 8 ಮಂದಿ ಸಿಬ್ಬಂದಿ ಮಾತ್ರ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಅಂದರೆ ಮುಸ್ಲಿಮ್ ಪ್ರಾತಿನಿಧ್ಯ ಕೇವಲ ಶೇ. 5.7 ಕ್ಕೆ ಸೀಮಿತವಾಗಿದೆ. ಇದರಲ್ಲೂ ವಿಶೇಷವೆಂದರೆ ಪ್ರಸ್ತುತ 8 ಮಂದಿ ಸಿಬ್ಬಂದಿಯ ಪೈಕಿ 4 ಮಂದಿ ಝಮೀರ್ ಅಹ್ಮದ್ ಅವರ ಇಲಾಖೆಯಲ್ಲಿದ್ದಾರೆ. ಉಳಿದಂತೆ ಸಿದ್ದರಾಮಯ್ಯ, ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ಡಾ. ಎಂ.ಸಿ. ಸುಧಾಕರ್ ಅವರ ಇಲಾಖೆಗಳಲ್ಲಿ ಕ್ರಮವಾಗಿ ಒಬ್ಬೊಬ್ಬ ಮುಸ್ಲಿಮ್ ಸಿಬ್ಬಂದಿ ಇದ್ದಾರೆ. ಮೂವತ್ತಕ್ಕೂ ಹೆಚ್ಚು ಸಚಿವರು ತಮ್ಮ ಆಪ್ತ ಸಿಬ್ಬಂದಿಯ ಪೈಕಿ ಒಬ್ಬರೇ ಒಬ್ಬ ಮಹಿಳಾ ಸಿಬ್ಬಂದಿಗಾಗಲಿ, ಒಬ್ಬನೇ ಒಬ್ಬ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಿಬ್ಬಂದಿಗಾಗಲಿ ಅವಕಾಶ ನೀಡಿಲ್ಲ.
ಮತ್ತೊಂದು ಗಮನಾರ್ಹ ಅಂಶವೇನೆಂದರೆ, ತಮ್ಮನ್ನು ರಾಜ್ಯದ ಭಾವಿ ಮುಖ್ಯಮಂತ್ರಿಗಳೆಂದು ಬಿಂಬಿಸಿಕೊಳ್ಳುತ್ತಿರುವ ಡಾ. ಜಿ. ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಪ್ತ ಸಿಬ್ಬಂದಿಯಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬ ಸಿಬ್ಬಂದಿ ಕೂಡಾ ಇಲ್ಲ.
ಕೆಲವರಿಗೆ ಇದು ಸಾಮಾನ್ಯ ಸಂಗತಿಯೆಂಬಂತೆ ಕಾಣಿಸಬಹುದು ಆದರೆ ಆಪ್ತ ಸಿಬ್ಬಂದಿ, ಸಚಿವರ ಹಾಗೂ ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಮಾತ್ರವಲ್ಲದೆ ಸಚಿವರ ಕಚೇರಿಗಳಲ್ಲಿ ವಿವಿಧ ವರ್ಗ ಮತ್ತು ವಿವಿಧ ಸಮುದಾಯಗಳಿಗೆ ಸೇರಿದ ಸಿಬ್ಬಂದಿಯ ಉಪಸ್ಥಿತಿ ಅಥವಾ ಅನುಪಸ್ಥಿತಿಯು ಆ ಕಚೇರಿಗಳ ದಿನನಿತ್ಯದ ಕೆಲಸ ಕಾರ್ಯಗಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇಂತಹ ಹುದ್ದೆಗಳಲ್ಲಿ ಸರಿಯಾದ ಪ್ರಾತಿನಿಧ್ಯವಿರದಿದ್ದರೆ, ರಾಜ್ಯದ ಶಾಸನ ರೂಪಿಸುವ ಕೇಂದ್ರಗಳಲ್ಲಿ, ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಆಶಯಗಳಿಗೆ ತೀವ್ರ ಹಿನ್ನಡೆಯಾಗಿತ್ತದೆ. ಮಹಿಳೆಯರು ಹಾಗೂ ಮುಸ್ಲಿಮ್ ಅಲ್ಪಸಂಖ್ಯಾತರು ರಾಜ್ಯದ ಜನಸಂಖ್ಯೆಯ ಒಂದು ಗಣ್ಯ ಭಾಗವಾಗಿದ್ದಾರೆ, ಆದರೆ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಅವರ ಅನುಪಸ್ಥಿತಿಯು ಅಸಮಾನತೆಯನ್ನು ಎತ್ತಿತೋರಿಸುವ ಜೊತೆ ಆ ವರ್ಗಗಳನ್ನು ಅವರ ನ್ಯಾಯಬದ್ಧ ಹಕ್ಕುಗಳಿಂದ ವಂಚಿತವಾಗಿಡುವುದಕ್ಕೂ ಕಾರಣವಾಗುತ್ತದೆ.
ಪ್ರಸ್ತುತ ಹುದ್ದೆಗಳಲ್ಲಿ ವಿವಿಧ ವರ್ಗಗಳಿಗೆ ನ್ಯಾಯೋಚಿತ ಪ್ರಾತಿನಿಧ್ಯಕ್ಕೆ ತುಂಬಾ ಮಹತ್ವವಿದೆ. ಏಕೆಂದರೆ ಇದು ವಿವಿಧ ನೇಮಕಾತಿಗಳಲ್ಲಿ, ರಾಜಕೀಯ ಪ್ರೋತ್ಸಾಹದ ವಿಚಾರಗಳಲ್ಲಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ನಿರ್ದಿಷ್ಟ ಸಮುದಾಯಗಳು ಬಹುಕಾಲದಿಂದ ಎದುರಿಸುತ್ತಿರುವ ತುಂಬಾ ಆಳವಾಗಿ ಬೇರೂರಿರುವ ಪಕ್ಷಪಾತ, ಪೂರ್ವಾಗ್ರಹ ಮತ್ತು ಅವಿಶ್ವಾಸವನ್ನು ಸೂಚಿಸುತ್ತದೆ. ಎಲ್ಲಾ ಕಡೆ ಎಲ್ಲ ವರ್ಗಗಳಿಗೆ ನ್ಯಾಯೋಚಿತ ಪ್ರಾತಿನಿಧ್ಯವನ್ನು ಖಚಿತ ಪಡಿಸುವುದು ಕೇವಲ ಔಪಚಾರಿಕ ಅಗತ್ಯವಲ್ಲ. ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವವನ್ನು ಖಾತರಿಪಡಿಸಿ, ಸಮಾಜದ ಎಲ್ಲಾ ವರ್ಗಗಳಲ್ಲಿ ವಿಶ್ವಾಸವನ್ನು ಬೆಳೆಸಿ, ಆಡಳಿತದಲ್ಲಿ ದುರ್ಬಲ ಹಾಗೂ ಶೋಷಿತ ವರ್ಗಗಳಿಗೆ ಧ್ವನಿ ಒದಗಿಸುವುದಕ್ಕೂ ಇದು ಅನಿವಾರ್ಯವಾಗಿದೆ. ರಾಜ್ಯ ಸರಕಾರವು ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿಯೊಬ್ಬರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲಗೊಳಿಸಿ ಇಡೀ ರಾಜ್ಯದ ಸರ್ವತೋಮುಖ ಪ್ರಗತಿಗಾಗಿ ಪಣತೊಟ್ಟಿರುವ ಈ ವಿಶೇಷ ಸಂದರ್ಭದಲ್ಲಿ ಎಲ್ಲಾ ಹಂತಗಳಲ್ಲಿ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದು ಕೇವಲ ರಾಜ್ಯದ ಪ್ರಗತಿಯ ಉದ್ದೇಶದಿಂದ ಮಾತ್ರವಲ್ಲದೆ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಉದ್ದೇಶದಿಂದಲೂ ಅತ್ಯಂತ ಅವಶ್ಯಕವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಪದೇಪದೇ ಸಾಮಾಜಿಕ ನ್ಯಾಯ ಹಾಗೂ ಎಲ್ಲರನ್ನು ಒಳಗೊಂಡ ರಾಜ್ಯ/ದೇಶವನ್ನು ಕಟ್ಟುವ ಮಾತನಾಡುತ್ತಿದೆ. ಆದರೆ ಅವರದೇ ಪಕ್ಷದ ಸರಕಾರ ಮತ್ತು ಅವರದೇ ಮಂತ್ರಿಗಳು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಒಂದು ದೊಡ್ಡ ದುರಂತ. ರಾಹುಲ್ ಗಾಂಧಿಯವರು ಹೋದಲ್ಲೆಲ್ಲಾ ‘‘ಜಿಸ್ಕಿ ಜಿತ್ನಿ ಸಂಖ್ಯಾ ಉಸ್ಕಿ ಉತ್ನಿ ಭಾಗಿದಾರಿ’’ (ಯಾರ ಜನಸಂಖ್ಯೆ ಎಷ್ಟೋ ಅವರಿಗೆ ಅಷ್ಟು ಪ್ರಾತಿನಿಧ್ಯ) ಎಂದು ಘೋಷಿಸುವ ಮೂಲಕ ದೇಶದ ದುರ್ಬಲ ಹಾಗೂ ಶೋಷಿತ ಸಮುದಾಯಕ್ಕೆ ಸೇರಿದ ಜನರಲ್ಲಿ ಉತ್ತಮ ಭವಿಷ್ಯದ ಕನಸುಗಳನ್ನು ಬಿತ್ತುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರದೇ ಪಕ್ಷದ ಮಂತ್ರಿಗಳು ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುತ್ತಿರುವುದು ತಮ್ಮ ನಾಯಕನಿಗೆ ಹಾಗೂ ಪಕ್ಷದ ನಿಲುವಿಗೆ ಮಾಡುತ್ತಿರುವ ದ್ರೋಹವಾಗಿದೆ.
ಇಲ್ಲಿ ಪ್ರಸ್ತಾಪಿಸಿರುವ ಪ್ರಾತಿನಿಧ್ಯವು ಕೇವಲ ಸದರಿ ಪಟ್ಟಿಯ ಆಧಾರದಲ್ಲಿ ಹಾಗೂ ಮೇಲ್ನೋಟಕ್ಕೆ ಸುಲಭವಾಗಿ ಕಾಣುವ ಹೆಸರುಗಳ ಆಧಾರದಲ್ಲಿ ಗುರುತಿಸಬಹುದಾದ ಸಮುದಾಯ ಹಾಗೂ ವರ್ಗಕ್ಕೆ ಸಂಬಂಧಿಸಿದ್ದಾಗಿದೆ. ಒಂದುವೇಳೆ ಎಲ್ಲಾ ಸಚಿವರ ಇಡೀ 140 ಜನ ಆಪ್ತ ಸಿಬ್ಬಂದಿಯ ಜಾತಿಯ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಂಡು ಪರಿಶೀಲಿಸಿದಲ್ಲಿ ಜಾತಿವಾರು ಪ್ರಾತಿನಿಧ್ಯದ ಕುರಿತು ಇನ್ನೂ ಸ್ಪಷ್ಟವಾದ ಮಾಹಿತಿ ಮತ್ತು ಸಂಪೂರ್ಣ ಚಿತ್ರಣ ದೊರೆಯಬಹುದು. ಈ ಮೇಲೆ ಮಾಡಲಾದ ವಿಶ್ಲೇಷಣೆಯು ಕೇವಲ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ಒಂದು ಪಟ್ಟಿಯನ್ನು ಆಧರಿಸಿದ್ದು, ಸ್ವತಃ ರಾಜ್ಯ ಸರಕಾರವು ಈ ಕುರಿತು ಒಂದು ಅಧಿಕೃತ ಸಮೀಕ್ಷೆ ನಡೆಸಿದರೆ ಸತ್ಯಾಂಶವು ಬಹಿರಂಗವಾಗಬಹುದು. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಪ್ರಾಮಾಣಿಕರಾಗಿದ್ದರೆ, ತಮ್ಮ ಮಂತ್ರಿ ಮಂಡಲದ ಎಲ್ಲ ಮಂತ್ರಿಗಳಿಗೆ ನೋಟಿಸ್ ಜಾರಿಗೊಳಿಸಿ, ನಿಮ್ಮ ಸಚಿವಾಲಯದಲ್ಲಿ ಯಾರಿಗೆ ಎಷ್ಟು ಪ್ರಾತಿನಿಧ್ಯ ನೀಡಿದ್ದೀರಿ ಎಂಬುದನ್ನು ಒಂದು ವಾರದೊಳಗೆ ವಿವರವಾಗಿ ತಿಳಿಸಬೇಕು ಎಂದು ಆದೇಶಿಸಬಹುದು.
ಸ್ವತಃ ತಮ್ಮ ಕಚೇರಿಗಳಲ್ಲಿ ನ್ಯಾಯ ಪಾಲಿಸದವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಎಷ್ಟೊಂದು ಹಾಸ್ಯಾಸ್ಪದ!